CONNECT WITH US  

ನೆರೆ ಹಾನಿ ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ಶಿವಮೊಗ್ಗ: ಜಿಲ್ಲೆಯ ಹಲವು ಕಡೆ ಮಳೆಯಿಂದ ನೆರೆ ಪರಿಸ್ಥಿತಿ ಉಂಟಾಗಿದ್ದು, ಮಳೆಯಿಂದ ಹಾನಿ, ಅವಘಡಗಳು ಉಂಟಾದ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಯಿಂದ ಉಂಟಾಗಿರುವ ನಷ್ಟ, ಕೈಗೊಂಡಿರುವ ಕ್ರಮಗಳ ಕುರಿತು ಅವರು ಪರಿಶೀಲನೆ ನಡೆಸಿದರು. ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಲಭ್ಯರಿದ್ದು, ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿರಬೇಕು.

ಮಳೆಯಿಂದ ಅಥವಾ ನೆರೆಯಿಂದಾಗಿ ಹಾನಿಗೀಡಾದ ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಬೇಕು. ಜನರನ್ನು ತೆರವುಗೊಳಿಸುವ ಅಗತ್ಯವಿದ್ದರೆ ತಕ್ಷಣ ತೆರವುಗೊಳಿಸಿ ಗಂಜಿಕೇಂದ್ರದಲ್ಲಿ ವ್ಯವಸ್ಥೆ ಮಾಡಬೇಕು. ಶಾಲೆಗಳಿಗೆ ರಜೆ ನೀಡುವ ಅಗತ್ಯವಿದ್ದರೆ ಸ್ಥಳೀಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕು. ಇಡೀ ತಾಲೂಕಿಗೆ ರಜೆ ನೀಡುವ ಅಗತ್ಯವಿಲ್ಲದಿದ್ದರೆ, ಹೋಬಳಿವಾರು ರಜೆ ಸಹ ನೀಡಬಹುದಾಗಿದೆ ಎಂದರು.

ಪ್ರಾಣ ಹಾನಿ ಪ್ರಕರಣಗಳಲ್ಲಿ ತಕ್ಷಣ ಪರಿಹಾರವನ್ನು ಒದಗಿಸಲಾಗುತ್ತಿದೆ. ಇದೇ ರೀತಿ ಮನೆ ಹಾನಿ ಪ್ರಕರಣಗಳಲ್ಲಿ 24ಗಂಟೆ ಒಳಗಾಗಿ ಪರಿಹಾರವನ್ನು ಒದಗಿಸಿ ಪುನರ್ವಸತಿಗೆ ವ್ಯವಸ್ಥೆ ಮಾಡಬೇಕು. ಪರಿಹಾರ ವಿತರಣೆಗೆ ವಿಳಂಬ ಮಾಡುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಸಮಗ್ರ ವರದಿ ಸಲ್ಲಿಸಿ: ಅತಿವೃಷ್ಟಿ ಹಾಗೂ ನೆರೆ ಪರಿಸ್ಥಿತಿಯಿಂದ ಉಂಟಾಗಿರುವ ಹಾನಿ ಕುರಿತು ಸಮಗ್ರ ಮಾಹಿತಿಯನ್ನು 24 ಗಂಟೆಯೊಳಗಾಗಿ ಸಲ್ಲಿಸಬೇಕು. ರಸ್ತೆ, ಸೇತುವೆ, ಚರಂಡಿ, ಮನೆಗಳಿಗೆ ಹಾಗೂ ಬೆಳೆಹಾನಿ ಪ್ರಕರಣಗಳಲ್ಲಿ ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಬೇಕು. ಗಾಳಿ ಮಳೆಯಿಂದ ವಿದ್ಯುತ್‌ ತಂತಿಗಳು ಬಿದ್ದ ಪ್ರಕರಣಗಳು ಗಮನಕ್ಕೆ ಬಂದ ತಕ್ಷಣ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬೇಕು ಎಂದು ಅವರು ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.

Trending videos

Back to Top