CONNECT WITH US  

ಕುಳಗೇರಿ, ಮರಹಳ್ಳಿ ದುಸ್ಥಿತಿ ಕೇಳ್ಳೋರ್ಯಾರು?

ತೀರ್ಥಹಳ್ಳಿ: ತಾಲೂಕಿನ ನೆರಟೂರು ಗ್ರಾಪಂ ವ್ಯಾಪ್ತಿಯ ಕುಳಗೇರಿ, ಮರಹಳ್ಳಿಯ ಗ್ರಾಮಸ್ಥರ ರಸ್ತೆಯ ದುಸ್ಥಿತಿ ಹಾಗೂ ಮೂಲ ಸೌಕರ್ಯದ ಅವ್ಯವಸ್ಥೆಯ ಬಗ್ಗೆ ಆ ಭಾಗದ ಗ್ರಾಮಸ್ಥರು ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಾಲೂಕಿನ ಆರಗ ಗೇಟ್‌ ಸಮೀಪದಿಂದ ಕುಳಗೇರಿ, ಮರಹಳ್ಳಿ, ಜಯಪುರ ಸಂಪರ್ಕ ರಸ್ತೆಯಲ್ಲಿ ವಾಹನಗಳಾಗಲಿ, ಜನ, ಜಾನುವಾರುಗಳಾಗಲಿ ಓಡಾಡದ ದುಸ್ಥಿತಿ ತಲುಪಿದೆ. ಅಲ್ಲಿನ ಕುಳಗೇರಿ ಸೇತುವೆಯ ಮೇಲ್ಭಾಗದ ತಡೆಗೋಡೆ ಕುಸಿದು ಕೆಳಗೆ ಬಿದ್ದಿದೆ. ಆದರೆ ಇದನ್ನು ಗಮನಿಸಬೇಕಾದ ಗ್ರಾಪಂನವರಾಗಲೀ, ತಾಪಂನವರಾಗಲಿ ಹಾಗೂ ಜಿಪಂನವರಾಗಲಿ ಎಲ್ಲರೂ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕುಳಗೇರಿ ಹಾಗೂ ಮರಹಳ್ಳಿ ಊರಿನಲ್ಲಿ 25 ಮನೆಗಳಿದ್ದು, 80ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ದಿನನಿತ್ಯ ಶಾಲಾ ಕಾಲೇಜಿಗೆ ಹೋಗುವ ಮಕ್ಕಳು, ಪಟ್ಟಣಕ್ಕೆ ಬರುವ ರೈತರು, ಕೃಷಿ ಕಾರ್ಮಿಕರು ದುಸ್ಥಿತಿ ತಲುಪಿರುವ ಈ ರಸ್ತೆಯಲ್ಲಿ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ಮಳೆಗಾಲದಲ್ಲಿ
ಓಡಾಡುವ ಪರಿಸ್ಥಿತಿ ಬಂದೊದಗಿದೆ. ಸೇತುವೆಯ ಒಂದು ಭಾಗ ಕುಸಿದಿದ್ದು, ಇತ್ತೀಚೆಗೆ ಸುರಿದ ಭಾರೀ ಮಳೆಯಲ್ಲಿ ಅನಾಹುತ ಸಂಭವಿಸಿದ್ದರೆ ಭಾರೀ ಅವಘಡ ಸೃಷ್ಟಿಯಾಗಬೇಕಾಗಿತ್ತು. ಇಷ್ಟಾದರೂ ಈ ಊರಿನ ಸಮಸ್ಯೆಯ ಬಗ್ಗೆ ಸಂಬಂಧಪಟ್ಟವರು ಗಮನಹರಿಸದೇ ಇರುವುದು ನಿಜಕ್ಕೂ ಶೋಚನೀಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

ಚುನಾವಣಾ ಸಂದರ್ಭದಲ್ಲಿ ಊರಿನ ಸಮಸ್ಯೆಗಳ ಬಗ್ಗೆ ಆಶ್ವಾಸನೆ ನೀಡಿ ಹೋಗುವ ಎಲ್ಲಾ ಪಕ್ಷದ ರಾಜಕರಣಿಗಳಿಗೆ ಕನಿಷ್ಟ ಕಾಳಜಿ ಇಲ್ಲದಂತಾಗಿದೆ. ಈ ಸಮಸ್ಯೆಯ ಬಗ್ಗೆ ಹಿಂದೆ ಜಿಪಂಗೆ ಮನವಿ ಸಲ್ಲಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ. ದಿನಾ ಸಾಯುವವರಿಗೆ ಅಳ್ಳೋರ್ಯಾರು ಎಂಬುವಂತಹ ಸ್ಥಿತಿ ನಮ್ಮದಾಗಿದೆ ಎಂದು ಗ್ರಾಮಸ್ಥರಾದ ರಾಜೇಶ್‌ ಕುಳಗೇರಿ ಹೇಳುತ್ತಾರೆ. ಇನ್ನಾದರೂ ಸಂಬಂಧ ಪಟ್ಟವರು ಗಮನಹರಿಸುವರೇ ಎಂಬುದು ಗ್ರಾಮಸ್ಥರು ಕಾದು ಕುಳಿತಿದ್ದಾರೆ.

Trending videos

Back to Top