CONNECT WITH US  

ಹಸಿರು ಬರಕ್ಕೂ ಪರಿಹಾರ ನೀಡಲು ಒತ್ತಾಯ

ಸಾಗರ: ಮಲೆನಾಡು ಪ್ರದೇಶದಲ್ಲಿ ಈ ಬಾರಿ ಅತ್ಯಧಿಕ ಮಳೆಯಾಗಿದೆ. ನೆರೆಯಲ್ಲಿ ಮುಳುಗಿದ ಭತ್ತದ ಸಸಿಗಳು ಹೊಡೆ ಒಡೆಯದೆ ಹಸಿರು ಹಸಿರಾಗಿಯೇ ಇರುವ ಸಾಧ್ಯತೆ ಇದೆ. ಹೊಲ ಹಸಿರಾಗಿದ್ದರೂ ರೈತರಿಗೆ ಬೆಳೆ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ವಿಶೇಷ ಪ್ರಸಂಗವೆಂದು ಪರಿಗಣಿಸಿ, ಈ ರೀತಿಯ ಹಸಿರು ಬರಕ್ಕೂ ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿ ಮೂಲಕ ರೈತರಿಗೆ ವಿಶೇಷ ಪರಿಹಾರ ಕೊಡುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್‌ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲಾ ಭಾಗದವರು ಆರ್ಥಿಕ ಬೆಳೆಗಳನ್ನು ಬೆಳೆಯಲಾರಂಭಿಸಿದ್ದು ಕೇವಲ ಮಳೆ ನೀರಿನಾಶ್ರಯದ ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದ ರೈತರು ಭತ್ತ ಬೆಳೆಯುತ್ತಾರೆ. ಇದನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಪ್ರಸ್ತುತ ಭತ್ತದ ಬೆಳೆ ರೈತರಿಗೆ ಲಾಭದಾಯಕವಾಗಿಲ್ಲ. ಆದರೂ ಭತ್ತದ ಕೃಷಿ ಕೈ ಬಿಟ್ಟಿಲ್ಲ. ಇದನ್ನು ಪರಿಗಣಿಸಿ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡಿ ರೈತರು ನಿರಂತರ ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಉತ್ತೇಜಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಈಗಾಗಲೇ ಮಲೆನಾಡು ಭಾಗದಲ್ಲಿ ಶೇ. 80ರಷ್ಟು ಅಡಕೆ ಕೊಳೆರೋಗದಿಂದ ನಾಶವಾಗಿದೆ. ಅದಕ್ಕೆ ಪೂರಕವಾದ ವರದಿ ಅಧಿಕಾರಿಗಳಿಂದ ಸರ್ಕಾರಕ್ಕೆ ಹೋಗಿಲ್ಲ. ಇಳುವರಿ, ಬೆಲೆ ಕುಸಿತದಿಂದ ಬೆಳೆಗಾರ ಜೀವನ ಭದ್ರತೆ ಕಂಪಿಸಿದೆ. ಇಂತಹ ರೈತರ ಆದಾಯದ ಲೆಕ್ಕದಲ್ಲಿ ಆದ ನಷ್ಟವನ್ನು ಸರ್ಕಾರ ಹೊಂದಾಣಿಕೆ ಪರಿಹಾರದ ಮೂಲಕ ಭರಿಸಿಕೊಡುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದರು. 

ಸರ್ಕಾರ ನೀಡುವ ಸಾಲಮನ್ನಾ ಭಿಕ್ಷೆಯಲ್ಲ. ಅದು ಸರ್ಕಾರದ ಕರ್ತವ್ಯ. ಇಲ್ಲಿ ಋಣ ಮುಕ್ತರಾಗುವುದು ರೈತರಲ್ಲ, ಸರ್ಕಾರ. ರೈತ ಸಾಲ ಮರುಪಾವತಿ ಮಾಡಲಾಗದೆ ಇರುವುದಕ್ಕೆ ಇಂದಿನ ಸರ್ಕಾರಗಳ ಆರ್ಥಿಕ ನೀತಿಯೇ ಕಾರಣ ಎಂದು ಸ್ವಾಮಿನಾಥನ್‌ ವರದಿ ಹೇಳಿದೆ. ಡಾ| ಗೋರಕ್‌ ಸಿಂಗ್‌ ಆಯೋಗ ರಚಿಸಿ ಪಡೆದಿರುವ ವರದಿಯ ಶಿಫಾರಸುಗಳನ್ನು ಒಪ್ಪಿ ಕೇವಲ ಬೆಳೆ ಸಾಲವಲ್ಲದೆ ರೈತನ ಭೂ ಅಭಿವೃದ್ಧಿ ಸಾಲವನ್ನೂ ಕೂಡ ಸರ್ಕಾರ ಮನ್ನಾ ಮಾಡಬೇಕಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ 15 ದಿನಗಳ ಸಮಯ ಕೇಳಿದಾಗಲೂ ನಾವು ನಂಬಿದ್ದೆವು. ಅವರು ಅಪಸ್ವರಗಳನ್ನು ಎತ್ತಬಾರದು. ಸರ್ಕಾರದ ಪಾಲುದಾರ ಕಾಂಗ್ರೆಸ್‌ ಕೂಡ ಸಾಲಮನ್ನಾಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಇಂತಹ ವೇಳೆ ಕುಮಾರಸ್ವಾಮಿ ಸಂಪೂರ್ಣ ಸಾಲಮನ್ನಾ ಮಾಡಲಾಗದಿದ್ದರೆ ಅದಕ್ಕಿರುವ ಆತಂಕಗಳನ್ನು ಬಹಿರಂಗಪಡಿಸಬೇಕು ಎಂದರು.

ಸ್ವರಾಜ್‌ ಇಂಡಿಯಾದ ಅಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ತಾಳಗುಪ್ಪ ಹೋಬಳಿಯ ಸೈದೂರು ಭಾಗದಲ್ಲಿ ಎರಡು ಬಾರಿ ನೆರೆ ಬಂದಿದೆ. ಒಟ್ಟು ಮೂರು ಸಾವಿರ ಎಕರೆ ಹಾನಿಗೊಳಗಾಗಿದೆ. ಈ ಭಾಗದ ಜನರು ಮತ್ತೂಮ್ಮೆ ಆರ್ಥಿಕವಾಗಿ ದೃಢಗೊಳ್ಳಲು ಇನ್ನೂ ಐದು ವರ್ಷ ಬೇಕಾಗುತ್ತದೆ. ಸರ್ಕಾರ ವರದಾ ನದಿಯ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು. 

ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಜಯಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಕೆ.ಬಿ. ಸೇನಾಪತಿ ಗೌಡ, ಎನ್‌.ಡಿ. ವಸಂತಕುಮಾರ್‌, ಸೊರಬ ತಾಲೂಕು ರೈತ ಸಂಘ ಅಧ್ಯಕ್ಷ ಹಾಲಪ್ಪ ಗೌಡ, ಭದ್ರಾವತಿ ಹಿರಿಯಣ್ಣ, ಶಿವಮೊಗ್ಗದ ಸಣ್ಣರಂಗಪ್ಪ, ಮಹಾಬಲೇಶ್ವರ ಕಲ್ಸೆ, ಮಂಜುನಾಥ್‌ ಇನ್ನಿತರರು ಇದ್ದರು. 

ಕೊಡಗಿನ ಮಡಿಕೇರಿ ಭಾಗದಲ್ಲಿ ಅತಿವೃಷ್ಟಿಯಿಂದ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕೈಗೊಳ್ಳಬೇಕಾಗಿತ್ತು. ಪ್ರಸ್ತುತ ಸನ್ನಿವೇಶ ಗಮನಿಸಿದರೆ ಸರ್ಕಾರ ಇದೆಯೋ ಇಲ್ಲವೋ ಎನಿಸುತ್ತಿದೆ. ಇಡೀ ಸಚಿವ ಸಂಪುಟ, ಇಲಾಖೆಗಳ ಪ್ರಮುಖ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಬೇಕು. ಸರ್ಕಾರ ಕೂಡಲೇ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಯೋಜನೆಗಳನ್ನು ಈ ಭಾಗದಲ್ಲಿ
ಜಾರಿಗೆ ತರಬೇಕು. ಕಾವೇರಿಯ ಮೂಲ ಕೊಡಗು. ಬೆಂಗಳೂರಿನ ಜನತೆ ಕುಡಿಯುತ್ತಿರುವ ನೀರು ಕಾವೇರಿ ನದಿಯದ್ದು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜನತೆ ಸಂದರ್ಭದಲ್ಲಿ ಕೊಡಗಿನ ಸಂತ್ರಸ್ತ ಜನರ ನೋವಿಗೆ ಉದಾರವಾಗಿ ಸ್ಪಂದಿಸಬೇಕು. ಆರ್ಥಿಕ, ವೈದ್ಯಕೀಯ ಸಹಾಯ ಹಸ್ತ ಚಾಚಬೇಕು.
 ಕೆ.ಟಿ. ಗಂಗಾಧರ್‌, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷಾ


Trending videos

Back to Top