CONNECT WITH US  

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ

ಶಿವಮೊಗ್ಗ: ನಗರದ ಅಭಿವೃದ್ಧಿ ಹಾಗೂ ಜನತೆಯ ಕನಸು ನನಸು ಮಾಡುವ ದಿಕ್ಕಿನಲ್ಲಿ ಪಾಲಿಕೆ ಚುನಾವಣೆ ಮಹತ್ವ ಪಡೆದಿದೆ. ಜನರ ಅಪೇಕ್ಷೆಗೆ ತಕ್ಕಂತೆ ನಗರವನ್ನು ಅಭಿವೃದ್ಧಿಪಡಿಸುತ್ತೇವೆ. ಇದಕ್ಕೆ ಪಾಲಿಕೆ ಚುನಾವಣೆಯಲ್ಲಿ 35 ವಾರ್ಡ್‌ಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಮನವಿ ಮಾಡಿದರು.

ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಪಾಲಿಕೆ ಚುನಾವಣೆ ಸಂಬಂಧ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಈಗಾಗಲೇ ಆಶ್ರಯ ಯೋಜನೆ ಅಡಿ ಅರ್ಜಿ ಸಲ್ಲಿಸಿದ್ದ ಅರ್ಹರಿಗೆ ಮನೆ ಮಂಜೂರಾಗಿದೆ. ಪಾಲಿಕೆ ಚುನಾವಣೆ ಪೂರ್ಣಗೊಂಡ ನಂತರ 4980 ಮನೆ ನಿರ್ಮಾಣ ಕಾರ್ಯ ಶುರುವಾಗಲಿದೆ. ಅರ್ಜಿ ಸಲ್ಲಿಸಲು ಆಗದವರಿಗೆ ಮತ್ತೆ 15 ದಿನಗಳ ಅವಕಾಶ ಮಾಡಿಕೊಡಲಾಗುವುದು. ಬಡವರೆಲ್ಲರಿಗೂ ಸೂರು ಒದಗಿಸಲಾಗುವುದು ಎಂದರು.

ಯುಜಿಡಿ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಅಪೇಕ್ಷೆ ಜನರಲ್ಲಿತ್ತು. ಈಗಾಗಲೇ 18 ಭಾಗದಲ್ಲಿ ಕಾಮಗಾರಿ
ಪೂರ್ಣಗೊಂಡಿದೆ. ಉಳಿದ ಭಾಗದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ನಗರದ ವಿವಿಧ ಭಾಗಗಳಲ್ಲಿ ರಸ್ತೆಗಳು ಸಾಕಷ್ಟು ಹಾಳಾಗಿವೆ. ರಾಜ್ಯ, ಕೇಂದ್ರ ಹಾಗೂ ಸ್ಮಾರ್ಟಸಿಟಿ ಅನುದಾನ ಬಳಕೆ ಮಾಡಿಕೊಂಡು ಡಾಂಬರೀಕರಣ ಕಾಮಗಾರಿ ಮಾಡಲಾಗುವುದು ಎಂದರು.

 ನಗರದ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ದಿನದ 24 ಗಂಟೆ ನೀರು ಪೂರೈಕೆಗೆ ವ್ಯವಸ್ಥೆ
ಮಾಡಲಾಗುವುದು. ಉದ್ಯಾನವನ ಅಭಿವೃದ್ಧಿಪಡಿಸಲಾಗುವುದು. ನಗರದ ಕಾರಾಗೃಹ ಸ್ಥಳಾಂತರಗೊಂಡಿದೆ. ಈಗಿರುವ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆಗೆ ಮೀಸಲಿಡಬೇಕು ಎಂದು ಗೃಹ, ನಗರಾಭಿವೃದ್ಧಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ
ನಡೆಸಲಾಗಿದೆ.

ಫ್ರೀಡಂ ಪಾರ್ಕ್‌ ಮಾದರಿಯಲ್ಲಿ ಜಾಗ ಅಭಿವೃದ್ಧಿಪಡಿಸಲಾಗುವುದು. ವಿಜಯದಶಮಿ ಹಬ್ಬವನ್ನು ಅದೇ ಜಾಗದಲ್ಲಿ ಆಚರಣೆ ಮಾಡಲಾಗುವುದು ಎಂದರು.  ಸ್ಮಾರ್ಟ್‌ಸಿಟಿ ಯೋಜನೆಗೆ 228 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ನಿರೀಕ್ಷಿತ
ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಮುಂದಿನ 5 ವರ್ಷದಲ್ಲಿ ಒಂದು ಸಾವಿರ ಕೋಟಿ ಅನುದಾನವನ್ನು ಸದ್ವಿನಿಯೋಗ ಮಾಡಿ
ನಗರವನ್ನು ಅಭಿವೃದ್ಧಿಪಡಿಸಲಾಗುವುದು. ಇದರ ಜತೆಗೆ ಅಮೃತ್‌ ಯೋಜನೆ ಅನುದಾನವನ್ನು ಬಳಕೆ ಮಾಡಿಕೊಂಡು ಮಾದರಿ ನಗರವನ್ನಾಗಿಸಲು ದಿಕ್ಕಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದರು.

ಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ಆರ್‌.ಕೆ. ಸಿದ್ದರಾಮಣ್ಣ, ಸೂಡಾ ಮಾಜಿ ಅಧ್ಯಕ್ಷ ಎಸ್‌.ಎನ್‌. ಚನ್ನಬಸಪ್ಪ, ಎಸ್‌. ದತ್ತಾತ್ರಿ, ಎಸ್‌. ಜ್ಞಾನೇಶ್ವರ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ಅರುಣ್‌, ಮಾಜಿ ನಗರಸಭೆ ಅಧ್ಯಕ್ಷ ಎನ್‌.ಜೆ. ರಾಜಶೇಖರ್‌, ನಗರಾಧ್ಯಕ್ಷ ನಾಗರಾಜ್‌, ಮಾಧ್ಯಮ್‌ ಪ್ರಮುಖ್‌ ರತ್ನಾಕರ್‌ ಶೆಣೈ ಇತರರಿದ್ದರು.


Trending videos

Back to Top