CONNECT WITH US  

ಶಿಕ್ಷಣದಿಂದ ಮಹಿಳೆಯರಿಗೆ ಆತ್ಮಸ್ಥೈರ್ಯ: ನಾಗರತ್ನ

ಸೊರಬ: ಶಿಕ್ಷಣದಿಂದ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ಶಿಕ್ಷಣವು ಮಹಿಳೆಯರಿಗೆ ಆತ್ಮಸ್ಥೈರ್ಯ ನೀಡುತ್ತದೆ. ಶಿಕ್ಷಣ ಮತ್ತು ಉದ್ಯೋಗ ಮಹಿಳಾ ಸಬಲೀಕರಣಕ್ಕೆ ಸಹಕಾರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂರಕ್ಷಣಾಧಿಕಾರಿ ನಾಗರತ್ನ ನಾಯಕ್‌ ಅಭಿಪ್ರಾಯಪಟ್ಟರು.

ಸರ್ವೋದಯ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‌ ಮತ್ತು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಉಳವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪರಿಚಿತರಿಂದಾಗುವ ಕಿರುಕುಳದ ಭೀತಿಯಿಂದ ಪಾರಾಗಬೇಕು. ಅದಕ್ಕಾಗಿ ಸದಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಚಂಚಲ ಮನಸ್ಸನ್ನು ನಿಯಂತ್ರಣ ದಲ್ಲಿಟ್ಟುಕೊಂಡು ಸಾಧನೆಗೈಯ್ಯಬೇಕು ಎಂದರು. 

ಸರ್ವೋದಯ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಪ್ರಶಾಂತ ಎಚ್‌. ಎಂ. ಮಾತನಾಡಿ, ಭ್ರೂಣ ಹತ್ಯೆ, ಬಾಲ್ಯ ವಿವಾಹ, ವರದಕ್ಷಿಣೆ ಪಡೆಯುವಿಕೆ, ಮಹಿಳೆ ಮತ್ತು ಮಕ್ಕಳ ಕಳ್ಳಸಾಗಣೆ, ಮಹಿಳೆಯರ ಮೇಲಿನ ದೌರ್ಜನ್ಯ ಇವೆಲ್ಲವೂ ಕಾನೂನಿನ ಅಡಿಯಲ್ಲಿ ಅಪರಾಧಗಳಾಗುತ್ತವೆ ಎಂದರು.

ಸಾಂತ್ವನ ಮಹಿಳಾ ಸಹಾಯವಾಣಿಯ ಸಮಾಜಸೇವಾ ಕಾರ್ಯಕರ್ತೆ ಮಧುರಾ ಆರ್‌. ಸಾಂತ್ವನ ಯೋಜನೆಯ ಬಗ್ಗೆ ವಿವರಿಸಿದರು. ಅಧ್ಯಕ್ಷತೆಯನ್ನು ಉಳವಿ ಸಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಬಿಉಲ್ಲಾಖಾನ್‌ ವಹಿಸಿದ್ದರು.
ಸಾಂತ್ವನ ಮಹಿಳಾ ಸಹಾಯವಾಣಿಯ ಸಮಾಜಸೇವಾ ಕಾರ್ಯಕರ್ತೆ ಅಜಂತಾ ಎಂ.ಬಿ. ಇದ್ದರು. ಶಿಕ್ಷಕಿ ಗೀತಾ ನಾಯಕ್‌ ಸ್ವಾಗತಿಸಿದರು. ವೀಣಾ ನಾಯಕ್‌ ನಿರೂಪಿಸಿದರು.

Trending videos

Back to Top