CONNECT WITH US  

ಸಾಮಾಜಿಕ ಜಾಲತಾಣಗಳಲ್ಲಿಸುಳ್ಳು ಸುದ್ದಿ ಹರಡಿದರೆ ಕ್ರಮ

ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಮೂಲಕ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಡಿಜಿಪಿ ಕಮಲ್‌ ಪಂತ್‌ ಎಚ್ಚರಿಸಿದ್ದಾರೆ. 

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ಇಲಾಖೆ
ಗಂಭೀರವಾಗಿ ಪರಿಗಣಿಸುತ್ತಿದೆ. ಜಾಲತಾಣಗಳಲ್ಲಿ ವದಂತಿ ಹಬ್ಬಿಸಿದ ಆರೋಪದ ಮೇಲೆ ಇತ್ತೀಚೆಗೆ ಬೆಳಗಾವಿ
ಹಾಗೂ ಬೀದರಿನಲ್ಲಿ ಹಲವರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದ್ದು, ಸಾಮಾಜಿಕ ಅಶಾಂತಿಗೆ ಕಾರಣರಾಗುವವರ ವಿರುದ್ಧ ಜಾಮೀನು ರಹಿತ ಬಂಧನ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕ
ಸೆಲ್‌ ತೆರೆ ಯಲಾಗಿದ್ದು, ತಪ್ಪು ಮೆಸೇಜ್‌ಫಾರ್ವರ್ಡ್‌ ಮಾಡುವವರನ್ನು ಮಾತ್ರವಲ್ಲದೆ, ಅದನ್ನು ಕ್ರಿಯೇಟ್‌ ಮಾಡಿದವರನ್ನೂ ಸಹ ಪತ್ತೆ ಹಚ್ಚಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

 ಗಾಂಜಾದಂತಹ ಮಾದಕ ಪದಾರ್ಥಗಳ ಉತ್ಪಾದನೆ, ಸರಬರಾಜು ಹಾಗೂ ಮಾರಾಟದ ಮೇಲೆ ನಿಗಾ ವಹಿಸಲಾಗಿದೆ. ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳ ಬಳಕೆ ತಡೆಯಲು ವಿಶೇಷ ಗಮನ ಹರಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಹಾಗೂ ಶಿಕ್ಷಣ ಇಲಾಖೆಯ ಸಹಕಾರ ಅಗತ್ಯವಾಗಿದ್ದು ಪೊಲೀಸ್‌ ಇಲಾಖೆಯೊಂದಿಗೆ ಕೈಜೋಡಿಸುವಂತೆ ಪಂತ್‌ ಮನವಿ ಮಾಡಿದರು.

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ವಲಸಿಗರ ಕುರಿತು ಪ್ರತಿ ತಿಂಗಳು ವರದಿ ಸಲ್ಲಿಸಲಾಗುತ್ತಿದೆ. ರಾಜ್ಯದಲ್ಲಿ ಮತೀಯ ಗಲಭೆಗಳ ಪ್ರಮಾಣ ಕಡಿಮೆಯಾಗಿದೆ. ಮತೀಯ ಧ್ರುವೀಕರಣವನ್ನು ತಡೆದು ಸೌಹಾರ್ದತೆಯನ್ನು ಮೂಡಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮುತ್ತುರಾಜ್‌ ಇದ್ದರು.

ಮೊಹಲ್ಲಾ ಸಭೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ಗಣೇಶೋತ್ಸವವನ್ನು ಶಾಂತಿಯಿಂದ ಆಚರಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ 22 ಮೊಹಲ್ಲಾ ಸಮಿತಿ ಸಭೆಗಳನ್ನು ನಡೆಸಲಾಗಿದ್ದು, ಎಲ್ಲಾ ಮೊಹಲ್ಲಾಗಳಲ್ಲಿ ಸಭೆ ನಡೆಸಲಾಗುವುದು. ಗಣಪತಿ ಪ್ರತಿಷ್ಠಾಪನೆ ಮಾಡುವ ಮೊದಲು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು. ಜಿಲ್ಲೆಯಲ್ಲಿ ಕೆಲವು ಸಮಾಜಘಾತುಕರನ್ನು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

Trending videos

Back to Top