CONNECT WITH US  

ಶರಾವತಿ ಹಿನ್ನೀರಿನ ದ್ವೀಪದಲ್ಲಿಸಿಲುಕಿದ್ದ ಜಾನುವಾರು ರಕ್ಷಣೆ

ಸಾಗರ: ತಿಂಗಳುಗಳ ಹಿಂದೆ ಸುರಿದ ಮಳೆಗೆ ಶರಾವತಿ ಹಿನ್ನೀರಿನಲ್ಲಿ ಅಕ್ಷರಶಃ ದ್ವೀಪವಾಗಿದ್ದ ತುಮರಿ ಗ್ರಾಪಂ
ವ್ಯಾಪ್ತಿಯ ನಾಟದ ಗುಡ್ಡದಲ್ಲಿ ಸಿಲುಕಿದ್ದ ಜಾನುವಾರುಗಳನ್ನು ಅಲ್ಲಿನ ಯುವಕರು ಸಾಹಸ ಮಾಡಿ ಬುಧವಾರ ಪಾರು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತುಮರಿ ಭಾಗದ ನಾಟದ ಗುಡ್ಡಕ್ಕೆ ಇರುವ ಕಾಲುದಾರಿಯಲ್ಲಿ ಸುಮಾರು ಒಂದೂವರೆ ತಿಂಗಳ ಹಿಂದೆ ಹಸಿರು ಮೇವನ್ನು ಅರಸಿ 16 ಜಾನುವಾರುಗಳು ಹೋಗಿವೆ. ಸ್ಥಳೀಯ ಹಳ್ಳಿಕಾರು ಜಾನುವಾರುಗಳಿಗೆ ಅಲ್ಲಿನ ಹುಲ್ಲು, ಗಿಡಗಳ ಲೋಕದಲ್ಲಿ ಸ್ವರ್ಗವೇ ಲಭಿಸಿದಂತಾಗಿದೆ. ಹಾಗಾಗಿ ಅವು ಮನೆಗೆ ಮರಳುವುದನ್ನು ಮರೆತು ಮೇಯುವ ಕಾಯಕದಲ್ಲಿ ತೊಡಗಿವೆ. ಅದೇ ವೇಳೆ ಬಿರುಸು ಪಡೆದ ಮಳೆ ಸತತ 15 ದಿನಗಳ ಕಾಲ ಬಿಟ್ಟೂಬಿಡದೆ ಸುರಿದಿದೆ. ಎರಡೇ ದಿನದಲ್ಲಿ 10 ಅಡಿಗೂ ಹೆಚ್ಚು ನೀರು ಲಿಂಗನಮಕ್ಕಿ ಅಣೆಕಟ್ಟಿಗೆ ಹರಿದುಬಂದಿದೆ. 

ಇಡೀ ಗುಡ್ಡವನ್ನು ನೆರೆ ಆವರಿಸಿದೆ. ಈ ಕಾರಣದಿಂದ ನಾಟದ ಗುಡ್ಡದ ಕಾಲುದಾರಿ ಮಾಯವಾಗಿ ಕಣ್ಣು ಹಾಯಿಸಿದಷ್ಟೂ ನೀರೇ ಕಾಣಿಸಲಾರಂಭಿಸಿದೆ. ಆಗ ಗೋವುಗಳಿಗೆ ಮನೆಗೆ ಮರಳುವ ಎಲ್ಲ ಸಾಧ್ಯತೆಗಳು ಕೊನೆಯಾಗಿದೆ.

ಸುತ್ತ ನೀರು ನಿಂತ ಪರಿಸ್ಥಿತಿಯಲ್ಲಿ ಈ ನಾಟದ ಗುಡ್ಡವನ್ನು ತಲುಪಲು ಸಿಗಂದೂರು ದಡದಿಂದ ಮೂರು ಮೈಲು ನೀರಿನಲ್ಲಿ ಹೋಗಬೇಕಾಗುತ್ತದೆ ಎಂದು ದ್ವೀಪವಿರುವ ಸ್ಥಳದ ಬಗ್ಗೆ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ತಿಳಿಸುತ್ತಾರೆ. 

ಕಳೆದ ನಾಲ್ಕು ದಿನಗಳಿಂದ ಮಳೆ ತುಸು ಕಡಿಮೆಯಾದ ಸಂದರ್ಭದಲ್ಲಿ ಅರಬಳ್ಳಿ ಶ್ರೀಧರ್‌ ಅವರಿಗೆ ನಾಟದ ಗುಡ್ಡದ
ಅಂಚಿನಲ್ಲಿ ಕೆಲವು ದನಗಳು ಕಾಣಿಸಿದೆ. ಈಗಾಗಲೇ ಮನೆಯ ದನಕರುಗಳು ಕೊಟ್ಟಿಗೆಗೆ ಬಾರದೆ ಹುಡುಕಾಟದಲ್ಲಿದ್ದವರಿಗೆ ಅವರು ಈ ಮಾಹಿತಿ ನೀಡಿದ್ದಾರೆ. ಸ್ವತಃ ಉಕ್ಕಡ ನಡೆಸುವ ಶ್ರೀಧರ್‌ ಜೊತೆ ಸಂತೋಷಕುಮಾರ್‌ ಶೆಟ್ಟಿ, ವಂದಗದ್ದೆ ಕೃಷ್ಣಮೂರ್ತಿ, ಹರ್ಷ, ಗಣೇಶ್‌ ಪೂಜಾರಿ ತುಮರಿ, ಅಕ್ಷಯ ಹಲಸಿನಕೇರಿ, ಯಶವಂತ್‌ ಕಳಸವಳ್ಳಿ ಒಳಗೊಂಡ ಏಳು ಯುವಕರು ಮೂರು ಮೈಲು ದೂರವನ್ನು ಉಕ್ಕಡದಲ್ಲಿಯೇ ಚಲಿಸಿ ನಾಟದ ಗುಡ್ಡ ತಲುಪಿದ್ದಾರೆ.

ಗುಡ್ಡದಲ್ಲಿ ಬಹುತೇಕ ಮೇವು ಖಾಲಿಯಾಗಿತ್ತು. ಮರಗಳಲ್ಲೂ ಕೂಡ ಜಾನುವಾರುಗಳು ತಮಗೆಟುಕುವಷ್ಟು ಎತ್ತರದ ಎಲೆ, ಸೊಪ್ಪು ಸದೆಯನ್ನು ಮೇದು ತಮ್ಮ ಜೀವ ಉಳಿಸಿಕೊಳ್ಳಲು ಹೋರಾಡಿವೆ.

ಆದರೂ ಆರು ಜಾನುವಾರುಗಳು ಮಳೆಯ ರಭಸ, ಇರಚಲು ಗಾಳಿ, ಹಸಿವನ್ನು ತಾಳದೆ ಸಾವನ್ನಪ್ಪಿರುವುದಲ್ಲದೆ
ಅಲ್ಲಿ ನೋಡಲು ಕೇವಲ ಅವುಗಳ ಅಸ್ಥಿಪಂಜರಗಳು ಮಾತ್ರ ಕಂಡಿತು. ಉಳಿದ 10 ಸಾಕು ದನಗಳಲ್ಲಿಯೂ ಬಹುತೇಕ
ನಿಶ್ಯಕ್ತ ಸ್ಥಿತಿಯಲ್ಲಿದ್ದವು ಎಂದು ಸಂತೋಷ್‌ ಕುಮಾರ್‌ ಪತ್ರಿಕೆಗೆ ತಿಳಿಸಿದರು. 

ಜಾನುವಾರುಗಳನ್ನು ನೀರಿನಲ್ಲಿ ಈಜಿಸಿ ಕರೆತರುವುದು ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಸಿಗಂದೂರು ಲಾಂಚ್‌ನ್ನು
ನಾಟಗುಡ್ಡಕ್ಕೆ ತರಲಾಗಿದೆ. ಪ್ರಯಾಸಪಟ್ಟು ದನಗಳನ್ನು ಲಾಂಚ್‌ನಲ್ಲಿ ತುಂಬಿ ಸಿಗಂದೂರು ದಡಕ್ಕೆ ತಂದು ಅಲ್ಲಿಂದ ಮರಳಿ ಮನೆಗೆ ತಲುಪಿಸಲಾಗಿದೆ. ಪುಣ್ಯಕೋಟಿಯ ರಕ್ಷಣೆಯಲ್ಲಿ ಲಾಂಚ್‌ನ ದಾಮೋದರ, ಸ್ಯಾಮ್‌, ನಿಸಾರ್‌, ಮರಿಯಪ್ಪ, ಗೇಟ್‌ ಸಿಬ್ಬಂದಿ ಸುರೇಂದ್ರ ಮತ್ತು ರಾಜು ಕೂಡ ಕೈಜೋಡಿಸಿದರು.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಜಿ.ಟಿ.ಸತ್ಯನಾರಾಯಣ್‌ ಕರೂರು, ಈ ನೆಲದ ಕರುಣೆಯ ಕೈಗಳು ಪುಣ್ಯಕೋಟಿಯನ್ನು ರಕ್ಷಿಸಿ ಸಾರ್ಥಕತೆ ಪಡೆದಿವೆ. ಉಕ್ಕಡದಲ್ಲಿ ಮೂರು ಕಿಮೀ ದೂರವನ್ನು ತುಂಬಿದ ಲಿಂಗನಮಕ್ಕಿಯಲ್ಲಿ ಬಿರು ಮಳೆಯಲ್ಲೂ ಸಂಚರಿಸುವುದು, ಅಂತಹ ದುರ್ಗಮ ಸ್ಥಳಕ್ಕೆ ಲಾಂಚ್‌ ಒಯ್ಯುವುದು ಮತ್ತು ಶಕ್ತಿಯನ್ನು ವ್ಯಯ ಮಾಡಿ ಜಾನುವಾರುಗಳನ್ನು ರಕ್ಷಿಸುವುದು ಸುಲಭದ್ದಲ್ಲ. ಇಂತಹ ಅನುಕರಣೀಯ ಕೆಲಸ ಮಾಡಿದ ಯುವಕರಿಗೆ ತುಮರಿ ಗ್ರಾಪಂ ಅಭಿನಂದಿಸುತ್ತದೆ ಎಂದು ತಿಳಿಸಿದರು.

ಮಾ.ವೆಂ.ಸ. ಪ್ರಸಾದ್‌


Trending videos

Back to Top