CONNECT WITH US  

ಅಡಕೆ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಯತ್ನ: ದೇವಪ್ಪ

ಸಾಗರ: ಲಾಗಾಯ್ತಿನಿಂದಲೂ ಅಡಕೆ ಬೆಳೆಗಾರರ ಹಿತಾಸಕ್ತಿಗಳಿಗೆ ಮಾರಕವಾಗುವ ಬೆಳವಣಿಗೆಗಳು ಸರ್ಕಾರದ ಮಟ್ಟದಲ್ಲಿ ನಡೆಯುತ್ತಲೇ ಇರುವುದನ್ನು ಮನಗಂಡು, ಇದನ್ನು ಪರಿಣಾಮಕಾರಿಯಾಗಿ ಎದುರಿಸುವ ಸಂಘಟಿತ ಪ್ರಯತ್ನದಲ್ಲಿ ತೋಟಗಾರ್ ಸಂಸ್ಥೆ ಸದಾ ಕೈಜೋಡಿಸುತ್ತಿದೆ ಎಂದು ನಗರದ ತೋಟಗಾರ್ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಕೆ.ಸಿ. ದೇವಪ್ಪ ಆವಿನಹಳ್ಳಿ ತಿಳಿಸಿದರು.

ನಗರದ ಭದ್ರಕಾಳಿ ಸಭಾಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಂಸ್ಥೆಯ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ಕ್‌ ಒಪ್ಪಂದದ ನಿಯಮಗಳ ಅಡಿಯಲ್ಲಿ ಕಾನೂನುಬಾಹಿರವಾಗಿ ಶ್ರೀಲಂಕಾದಲ್ಲಿ ಉತ್ಪಾದನೆ ಆಗುವ ಅಡಕೆಗಿಂತ ಹೆಚ್ಚಿನ ಅಡಕೆ ಆಮದಾಗುವುದನ್ನು ತಡೆಯಬೇಕಾಗಿದೆ. ಅಡಕೆ ಕ್ಯಾನ್ಸರ್‌ಕಾರಕ ಎಂಬ ಸುಪ್ರೀಂಕೋರ್ಟ್‌ನ ದಾವೆಯನ್ನು ಎದುರಿಸಬೇಕಾಗಿದೆ. ಇಂತಹ ಹಲವು ಕೆಲಸಗಳ ಜೊತೆಗೆ ಅಡಕೆ ವ್ಯವಹಾರ ನಡೆಸುವ ಅಡಕೆ ಸಹಕಾರ ಸಂಘಗಳ ನಡುವೆ ಸಮನ್ವಯ ಸಾ ಧಿಸುವ ಕೆಲಸವನ್ನು ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾಮಂಡಳದ ಮೂಲಕ ತೋಟಗಾರ್ ಮಾಡಲಿದೆ ಎಂದರು.

ಸಂಸ್ಥೆ ಸಾರ್ವಜನಿಕ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಗರದ ಉದ್ದೇಶಿತ ರೋಟರಿ ಬ್ಲಿಡ್‌ಬ್ಯಾಂಕ್‌ಗೆ 1,06,000 ರೂ.ಗಳ ವಿಶೇಷ ದೇಣಿಗೆ ನೀಡಿದೆ. ಕೊಡಗು, ಕೇರಳಗಳ ಪ್ರಾಕೃತಿಕ ವಿಕೋಪಕ್ಕೂ ಸ್ಪಂದಿಸಿ ನಿರ್ದೇಶಕರು, ಸಿಬ್ಬಂದಿಗಳ ಸಹಯೋಗದಲ್ಲಿ ತಲಾ 10 ಸಹಸ್ರ ರೂ.ಗಳ ಸಹಾಯ ಒದಗಿಸಿದೆ. ಬರಲಿರುವ ದಿನಗಳಲ್ಲಿ ಸಿಪ್ಪೆಗೋಟನ್ನು ಸುಲಿಯುವ ಯಂತ್ರ ಸ್ಥಾಪನೆಯ ಮೂಲಕ ಬೆಳೆಗಾರರಿಗೆ ಸೇವೆ ಕೊಡಲು ಉದ್ದೇಶಿಸಲಾಗಿದೆ ಎಂದು ಪ್ರಕಟಿಸಿದರು.
 
ಸಂಘದ ಕಾರ್ಯಕಾರಿ ಮಂಡಳಿಯ ಕೆ.ಆರ್‌. ಗಣಪತಿ ಭಟ್‌, ಟಿ.ಆರ್‌. ಕೃಷ್ಣಮೂರ್ತಿ, ಕೆ.ಎಂ. ಸುಬ್ರಮಣ್ಯ, ಎಂ.ಜಿ. ಪ್ರಕಾಶ, ಎಂ. ಸುಬ್ರಾಯ, ವಿಶಾಲಾಕ್ಷಿ ಎಸ್‌. ರಾವ್‌, ಕೆ.ಎಂ. ಸಾವಿತ್ರಿ ಮತ್ತಿತರರು ಇದ್ದರು. ಸದಸ್ಯ ವರ್ಗದ ತಿರುಮಲ ಮಾವಿನಕುಳಿ, ನರಹರಿ ಭಟ್‌ ಚೀನೀತೋಟ, ಬಸವರಾಜಪ್ಪ ಗೌಡ ಕೆರೋಡಿ, ಸತ್ಯನಾರಾಯಣ ಭಟ್‌ ಸಾಲೇಕೊಪ್ಪ, ಎ.ಡಿ. ರಾಮಚಂದ್ರ ಭಟ್‌ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ತ್ರಿಪದ ಪ್ರಾರ್ಥಿಸಿದರು. ಉಪಾಧ್ಯಕ್ಷ ಹು.ಭಾ. ಅಶೋಕ ಸ್ವಾಗತಿಸಿದರು. ವ್ಯವಸ್ಥಾಪಕ ವಿ.ಸಿ. ಪ್ರಕಾಶ್‌ ನಿರ್ವಹಿಸಿದರು.

Trending videos

Back to Top