CONNECT WITH US  

ಜೋಳದ ಬಗೆಬಗೆ ತಿನಿಸುಗಳು

ಜೋಳ ತಿಂದವನು ಜಟ್ಟಿಯಾಗುತ್ತಾನೆ ಎಂಬುದು ಹಿರಿಯರ ಮಾತು. ಜೋಳ ಅಂದಾಕ್ಷಣ ಎಲ್ಲರಿಗೂ ನೆನಪಾಗುವುದು ಜೋಳದ ರೊಟ್ಟಿ, ಬದನೆಕಾಯಿ ಪಲ್ಯ! ಜೋಳದಿಂದ, ರೊಟ್ಟಿಯನ್ನು ಮಾತ್ರವಲ್ಲ, ಬೋಂಡ, ಶೇವು ಸೇರಿದಂತೆ ಹಲವು ಬಗೆಯ ತಿನಿಸುಗಳನ್ನು ತಯಾರಿಸಬಹುದು. 

1.ಜೋಳದ ಹಿಟ್ಟಿನ ಬೋಂಡ
ಬೇಕಾಗುವ ಸಾಮಗ್ರಿಗಳು:
ಜೋಳದ ಹಿಟ್ಟು ಒಂದು ಕಪ್‌, ಅಕ್ಕಿ ಹಿಟ್ಟು 1/4 ಕಪ್‌, ಈರುಳ್ಳಿ 2, ಶುಂಠಿ ಒಂದು ಚೂರು, ಕೆಂಪು ಮೆಣಸಿನಪುಡಿ 1 ಚಮಚ, ಓಂಕಾಳು 1/2 ಚಮಚ, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ, ಮೊಸರು 1/2 ಕಪ್‌, ಕರಿಯಲು ಎಣ್ಣೆ. 

ಮಾಡುವ ವಿಧಾನ:
ಜೋಳದ ಹಿಟ್ಟಿಗೆ ಅಕ್ಕಿಹಿಟ್ಟು, ಹೆಚ್ಚಿದ ಈರುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಮೆಣಸಿನಪುಡಿ, ಓಂಕಾಳು, ಉಪ್ಪು, ಮೊಸರು, ಬೇಕಿದ್ದರೆ ನೀರು ಸೇರಿಸಿ ಚೆನ್ನಾಗಿ ಕಲಸಿ. ಅರ್ಧ ಗಂಟೆ ಬಿಟ್ಟು ಕಾದ ಎಣ್ಣೆಯಲ್ಲಿ ಕರಿಯಿರಿ.

2. ಜೋಳದ ಹಿಟ್ಟಿನ ಶೇವು
ಬೇಕಾಗುವ ಸಾಮಗ್ರಿಗಳು:
ಜೋಳದ ಹಿಟ್ಟು 1 ಕಿಲೋ, ನೀರು ಮುಕ್ಕಾಲು ಲೀಟರ್‌, ಓಂಕಾಳು 2 ಚಮಚ, ಕೆಂಪು ಮೆಣಸಿನ ಪುಡಿ ಖಾರಕ್ಕೆ ತಕ್ಕಷ್ಟು, ಜೀರಿಗೆ 1 ಚಮಚ, ಉಪ್ಪು ರುಚಿಗೆ, ಕರಿಯಲು ಎಣ್ಣೆ.

ಮಾಡುವ ವಿಧಾನ:
ಮೊದಲು ನೀರನ್ನು ದಪ್ಪ ತಳವಿರುವ ಪಾತ್ರೆಗೆ ಹಾಕಿ ಕುದಿಯಲು ಬಿಡಿ. ಓಂಕಾಳು, ಜೀರಿಗೆಯನ್ನು ನುಣ್ಣಗೆ ರುಬ್ಬಿ ರಸವನ್ನು ತೆಗೆದು ಕುದಿಯುತ್ತಿರುವ ಪಾತ್ರೆಗೆ ಹಾಕಿ, ಇದಕ್ಕೆ ಉಪ್ಪು ಖಾರವನ್ನು ಸೇರಿಸಿ. ನಂತರ ಜರಡಿ ಹಿಡಿದ ಜೋಳದ ಹಿಟ್ಟನ್ನು ಹಾಕಿ ಮಿಕ್ಸ್‌ ಮಾಡಿ ಕೆಳಗಿಳಿಸಿ. ಇದು ಬಿಸಿ ಆರಿದ ಮೇಲೆ ಚಪಾತಿ ಹಿಟ್ಟಿನ ಹದಕ್ಕೆ ಮಾಡಿಕೊಂಡು ಶೇವಿನ ಒರಳಿಗೆ ಹಾಕಿ, ಕಾದ ಎಣ್ಣೆಯಲ್ಲಿ ಕರಿಯಿರಿ.

3. ಜೋಳದ ಹಿಟ್ಟಿನ ಎಣ್ಣೆರೊಟ್ಟಿ;
ಬೇಕಾಗುವ ಸಾಮಗ್ರಿಗಳು:
ಜೋಳದ ಹಿಟ್ಟು 2 ಕಪ್‌, ಅಕ್ಕಿ ಹಿಟ್ಟು 1 ಕಪ್‌, ಈರುಳ್ಳಿ 2, ಮೂಲಂಗಿ 2, ಕರಿಬೇವು- ಕೊತ್ತಂಬರಿ ಸೊಪ್ಪು ಸ್ವಲ್ಪ, ಹಸಿಮೆಣಸಿನಕಾಯಿ 1 ಚಮಚ ಅಥವಾ ಕೆಂಪು ಮೆಣಸಿನ ಪುಡಿ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಲಿಂಬೆಹುಳಿ, ಬೆಲ್ಲ ಒಂದೊಂದು ಚಮಚ.

ಮಾಡುವ ವಿಧಾನ:
ಮೂಲಂಗಿಯನ್ನು ಸ್ವತ್ಛಗೊಳಿಸಿ ತುರಿದುಕೊಳ್ಳಿ. ನಂತರ ದಪ್ಪತಳವಿರುವ ಪಾತ್ರೆಗೆ ತುರಿದ ಮೂಲಂಗಿ, ಹೆಚ್ಚಿದ ಈರುಳ್ಳಿ, ಹಸಿಮೆಣಸು ಅಥವಾ ಕೆಂಪುಮೆಣಸಿನಪುಡಿ, ಕೊತ್ತಂಬರಿಸೊಪ್ಪು, ಕರಿಬೇವು, ಉಪ್ಪು, ಹುಳಿ ಸೇರಿಸಿ ಅರ್ಧ ಕಪ್‌ ನೀರು ಸೇರಿಸಿ ಒಂದು ಕುದಿ ಬರಿಸಿ, ಜೋಳದ ಹಿಟ್ಟು, ಅಕ್ಕಿ ಹಿಟ್ಟು ಸೇರಿಸಿ ಕೆಳಗಿಳಿಸಿ. ತಣ್ಣಗಾದ ಮೇಲೆ ಹಿಟ್ಟನ್ನು ಹದ ಮಾಡಿಕೊಂಡು ಉಂಡೆ ಕಟ್ಟಿ ಬಾಳೆ ಎಲೆಯ ಮೇಲೆ ಎಣ್ಣೆ ಸವರಿ ರೊಟ್ಟಿಯಂತೆ ಮಾಡಿ. ಕಾದ ತವಾದ ಮೇಲೆ ಎರಡೂ ಕಡೆ ಎಣ್ಣೆ ಹಾಕಿ ಬೇಯಿಸಿಕೊಳ್ಳಿ. ಕಾಯಿ ಚಟ್ನಿಯೊಂದಿಗೆ ಸವಿಯಿರಿ. 

ಚಿತ್ರ-ಬರಹ: ಅರ್ಚನಾ ಬೊಮ್ನಳ್ಳಿ, ಶಿರಸಿ

Trending videos

Back to Top