CONNECT WITH US  

"ಸರಕಾರ ಹೇಳಿದ್ದರೆ ಇನ್ನೊಂದು ಅವಧಿಗೆ ಗವರ್ನರ್‌ ಆಗುತ್ತಿದ್ದೆ'

"ಸೆಲೆಬ್ರಿಟಿ ಗವರ್ನರ್‌' ಎಂದೇ ಜನಪ್ರಿಯರಾದ ರಘುರಾಂ ರಾಜನ್‌ ಆರ್‌ಬಿಐನಿಂದ ನಿರ್ಗಮಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ 2ನೇ ಅವಧಿಗೆ ಆಯ್ಕೆಯಾಗದ ಅತ್ಯಂತ ಯಶಸ್ವಿ ಗವರ್ನರ್‌ ಎಂಬ ಖ್ಯಾತಿ ಇವರದು. ತಮ್ಮ 3 ವರ್ಷಗಳ ಅನುಭವ, ಆ ಅವಧಿಯಲ್ಲಿನ ಯಶಸ್ಸು ಹಾಗೂ ಸೋಲುಗಳು, ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಅವರು ಇಂಡಿಯಾ ಟುಡೇ ಟೀವಿ ಜೊತೆ ವಿಸ್ತೃತವಾಗಿ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

3 ವರ್ಷ ಆರ್‌ಬಿಐ ಗವರ್ನರ್‌ ಹುದ್ದೆಯ ಜವಾಬ್ದಾರಿ ನಿಭಾಯಿಸಿದ ಬಗ್ಗೆ ನಿಮಗೆ ಏನನ್ನಿಸುತ್ತದೆ?
         ಬಹಳ ತೃಪ್ತಿ ನೀಡಿದ ಕೆಲಸವಿದು. ಸಾಕಷ್ಟು ಕಲಿತಿದ್ದೇನೆ. ಭಾರತದ ಆರ್ಥಿಕತೆಯನ್ನು ಇನ್ನಷ್ಟು ಮೇಲೆತ್ತಲು ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ. ಸುಸ್ಥಿರ ಅಭಿವೃದ್ಧಿಗೆ ನನ್ನ ಪ್ರಯತ್ನಗಳು ಪೂರಕವಾಗಿವೆ ಮತ್ತು ಮುಂದಿನ ದಿನಗಳಲ್ಲಿ ಇದರ
ಪರಿಣಾಮ ಎಲ್ಲರಿಗೂ ಗೋಚರಿಸುತ್ತದೆ ಎಂಬ ವಿಶ್ವಾಸವಿದೆ. ಹಿಂದಿರುಗಿ ನೋಡಿದರೆ ನನ್ನ ಅವಧಿಯ ಬಗ್ಗೆ ಖುಷಿಯೆನ್ನಿಸುತ್ತದೆ. ದೇಶ ಆರ್ಥಿಕವಾಗಿ ಹೇಗೆ ಮುಂದುವರಿಯಬೇಕು ಎಂಬುದಕ್ಕೆ ನಾವೊಂದು ವೇದಿಕೆ ಸಿದ್ಧಪಡಿಸಿದ್ದೇವೆ. 

ನೀವು ತೆಗೆದುಕೊಂಡ ನಿರ್ಧಾರಗಳಲ್ಲಿ ನಿಮಗೆ ಬಹಳ ಹೆಮ್ಮೆಯೆನ್ನಿಸುವ ನಿರ್ಧಾರ ಯಾವುದು?
         ಮೊದಲನೆಯದಾಗಿ ನಾವು ಹಣದುಬ್ಬರ ನಿಯಂತ್ರಿಸಿದ ರೀತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ಎರಡನೆಯದಾಗಿ, ಹಣಕಾಸು ನೀತಿ ರೂಪಿಸಲು ಸಮಿತಿಯೊಂದನ್ನು ರಚಿಸಲು ನಿರ್ಧರಿಸಿದೆವು. ಕೆಲ ದಿನಗಳಲ್ಲೇ ಅದು ರಚನೆಯಾಗಲಿದೆ. ಮೂರನೆಯದಾಗಿ, ಸಾಲ ವಸೂಲಾತಿಗೆ ಬ್ಯಾಂಕುಗಳು ಕಠಿಣ ಕ್ರಮ ಕೈಗೊಳ್ಳುವಂತೆ ಮಾಡಿದೆವು. ಇದು ದೇಶದ ಆರ್ಥಿಕತೆಯನ್ನು ಆರೋಗ್ಯವಾಗಿಡಲು ಬಹಳ ಮುಖ್ಯ. ನಾಲ್ಕನೆಯದಾಗಿ, ಒಂದು ಬ್ಯಾಂಕ್‌ ಖಾತೆಯಿಂದ ಇನ್ನೊಂದು ಬ್ಯಾಂಕ್‌ ಖಾತೆಗೆ ಹಣ ಪಾವತಿ ಮಾಡುವ ವಿಧಾನವನ್ನು ಸುಲಭಗೊಳಿಸಿದೆವು. ನಗದುರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಮಹತ್ವದ್ದು. ಇವೆಲ್ಲವೂ ವೈಯಕ್ತಿಕವಾಗಿ ನನಗೆ ಹಾಗೂ ಸಾಂಸ್ಥಿಕವಾಗಿ ಆರ್‌ಬಿಐಗೆ ಗೌರವ ತಂದುಕೊಟ್ಟ ನಿರ್ಧಾರಗಳು. 

ನಿಮಗೆ ತೃಪ್ತಿ ನೀಡದಿರುವ ಅಥವಾ ನಿಮ್ಮಿಂದ ಮಾಡಲು ಆಗದೇ ಹೋದ ಕೆಲಸಗಳು ಇವೆಯಾ?
         ಖಂಡಿತ ಇದೆ. ಮಾರುಕಟ್ಟೆಯಲ್ಲಿ ಹಣದ ಹರಿವನ್ನು ನಾವಂದುಕೊಂಡಷ್ಟು ಹೆಚ್ಚಿಸಲು ಆಗಲಿಲ್ಲ. ಸ್ವಲ್ಪ ಮೊದಲೇ ಈ ಬಗ್ಗೆ ಗಮನ ಹರಿಸಿದ್ದರೆ ಇದು ಸಾಧ್ಯವಿತ್ತು. 

ಕೈಗೆತ್ತಿಕೊಂಡ ಕೆಲಸ ಪೂರ್ಣಗೊಳಿಸದೆ ನಿಮ್ಮ ಉತ್ತರಾಧಿಕಾರಿಗೆ ಬಿಟ್ಟುಹೋಗುತ್ತಿರುವುದು ಯಾವುದಾದರೂ ಇದೆಯಾ?
         ಬಹುಶಃ ನಾನು ಮಾಡಿದ ಕೆಲಸಗಳೆಲ್ಲವೂ ದೇಶದ ಆರ್ಥಿಕತೆಯ ಬೆಳವಣಿಗೆಗೆ ವೇದಿಕೆಯೊಂದನ್ನು ನಿರ್ಮಿಸುವ ನಿಟ್ಟಿನಲ್ಲಿವೆ. ಮುಂದೆ ಬರುವವರು ಅದರ ಮೇಲೆ ಕಟ್ಟಡಗಳನ್ನು ಕಟ್ಟಬೇಕಿದೆ. ಇದು ಯಾವತ್ತೂ ಮುಗಿಯದ ಕೆಲಸ. ಆರ್ಥಿಕತೆಯ ಅಭಿವೃದ್ಧಿಯೆಂಬುದು ನಿರಂತರ ಪ್ರಕ್ರಿಯೆ. ಹಾಗೆಯೇ, ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಸ್ವತ್ಛಗೊಳಿಸುವ ಕೆಲಸ ನನ್ನ ಅವಧಿಯಲ್ಲಿ ಆರಂಭಗೊಂಡಿದೆಯಷ್ಟೆ, ಇನ್ನೂ ಪೂರ್ಣಗೊಂಡಿಲ್ಲ. 

ಇತ್ತೀಚಿನ ವರ್ಷಗಳಲ್ಲಿ ಒಂದೇ ಅವಧಿಗೆ ಆರ್‌ಬಿಐನಿಂದ ಹೊರಹೋಗುತ್ತಿರುವ ಮೊದಲ ಗವರ್ನರ್‌ ನೀವು. ಇನ್ನೊಂದು ಅವಧಿಗೆ ಸರ್ಕಾರ ಮುಂದುವರಿಸಿದ್ದರೆ ಚೆನ್ನಾಗಿತ್ತು ಅನ್ನಿಸಿದೆಯಾ?
          ನಾನು ಈ ಜವಾಬ್ದಾರಿ ಒಪ್ಪಿಕೊಳ್ಳುವಾಗಲೇ ಇದು 3 ವರ್ಷದ ಕೆಲಸ ಎಂಬುದನ್ನು ಗಮನದಲ್ಲಿಟ್ಟುಕೊಂಡಿದ್ದೆ. ನಾನು ಶಿಕ್ಷಣ ಕ್ಷೇತ್ರದಿಂದ ಬಂದವನು ಮತ್ತು ಅಲ್ಲಿಗೇ ಮರಳಿ ಹೋಗುತ್ತಿರುವವನು. ಶಿಕ್ಷಣ ಕ್ಷೇತ್ರದಲ್ಲಿರುವವರು ಬಹಳ ಕಾಲ ಅಲ್ಲಿಂದ ದೂರವಿರುವುದು ಒಳ್ಳೆಯದಲ್ಲ. ಹಾಗಂತ ಮೂರೇ ವರ್ಷಕ್ಕೆ ವಾಪಸ್‌ ಹೋಗಲೇಬೇಕು ಎಂದು ಮೊದಲೇ ನಿರ್ಧಾರ ಮಾಡಿಕೊಂಡೇನೂ ಬಂದಿರಲಿಲ್ಲ. ನನ್ನ ಅವಧಿಯಲ್ಲಿ ಮಾಡಿ ಮುಗಿಸಲು ಸಾಧ್ಯವಾಗದೇ ಇರುವ ಒಂದಷ್ಟು ಕೆಲಸಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಬಹುಶಃ ಸರ್ಕಾರ ಹಾಗೂ ನನ್ನ ಮಧ್ಯೆ ಸಹಮತ ಸಾಧ್ಯವಾಗಿದ್ದಿದ್ದರೆ ಇನ್ನೊಂದು ಅವಧಿಗೆ ಮುಂದುವರಿಯುವ ಸಾಧ್ಯತೆಯೂ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ.

ಅಂದರೆ ಬೇಸರದಿಂದ ಹೊರಹೋಗುತ್ತಿದ್ದೀರಾ?
        ಎಲ್ಲವೂ ಒಂದಲ್ಲಾ ಒಂದು ಹಂತದಲ್ಲಿ ಕೊನೆಗೊಳ್ಳಬೇಕು. ಪ್ರತಿಯೊಬ್ಬರೂ ಮುನ್ನಡೆಯುತ್ತ ಹೋಗಬೇಕು. ನನ್ನ ಮುಂದೆ ಸಾಕಷ್ಟು ಕೆಲಸಗಳಿವೆ.

ಬಡ್ಡಿ ದರವನ್ನು ನಿರೀಕ್ಷಿತ ಮಟ್ಟದಲ್ಲಿ ಇಳಿಸಲಿಲ್ಲ ಎಂದು ಸರ್ಕಾರದೊಳಗಿನ ಕೆಲವರು, ಕೆಲ ಅರ್ಥಶಾಸ್ತ್ರಜ್ಞರು ಹಾಗೂ ಉದ್ಯಮಿಗಳು ನಿಮ್ಮನ್ನು ಟೀಕಿಸಿದರು. ಒಟ್ಟಾರೆ ನಿಮ್ಮ ಅವಧಿಯಲ್ಲಿ ಶೇ.1.5ರಷ್ಟು ಬಡ್ಡಿ ದರ ಕಡಿತೊಳಿಸಿದ್ದೀರಿ. ಇನ್ನಷ್ಟು ಕಡಿತ ಮಾಡಲು ಸಾಧ್ಯವಿತ್ತೇ?
             ಇಲ್ಲ. ಎಷ್ಟು ಕಡಿತ ಮಾಡಲು ಸಾಧ್ಯವಿತ್ತೋ ಅಷ್ಟು ಮಾಡಿದ್ದೇವೆ. ಹಣದುಬ್ಬರ ನಿಯಂತ್ರಿಸುವಲ್ಲಿ ಆರ್‌ಬಿಐನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಹಣದುಬ್ಬರ ಇಳಿಯಿತು ಎಂದಾಕ್ಷಣ ಹೊರಗಿನ ಒತ್ತಡಗಳಿಗೆ ಮಣಿದು ಬಡ್ಡಿ ದರ ಕಡಿತಗೊಳಿಸುವುದು ಜಾಣ ನಡೆಯಲ್ಲ. ಹಣದುಬ್ಬರವನ್ನು ಆ ಹಂತದಲ್ಲೇ ಉಳಿಸಿಕೊಳ್ಳಲು, ಅಂದರೆ ಮತ್ತೆ ಮೇಲೆ ಏರದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಆರ್‌ಬಿಐನ ಮೇಲಿರುತ್ತದೆ. ಬಡ್ಡಿ ದರ ಕಡಿತಗೊಳಿಸಲು ಕೇವಲ ಹಣದುಬ್ಬರವೊಂದೇ ಕಾರಣವಾಗುವುದಿಲ್ಲ. ಇನ್ನೂ ಸಾಕಷ್ಟು ಅಂಶಗಳು ತೆರೆಯ ಮರೆಯಲ್ಲಿ ಕೆಲಸ ಮಾಡುತ್ತಿರುತ್ತವೆ. ಬಡ್ಡಿ ದರ ಇಳಿಕೆ ಮಾಡುವಾಗ ಪಿಂಚಣಿ ಹಣದಲ್ಲಿ ಬದುಕುತ್ತಿರುವವರ ಕಳವಳವನ್ನೂ ಗಮನಿಸಬೇಕಾಗುತ್ತದೆ. ಇವುಗಳ ನಡುವೆ ಸಮತೋಲನ ಸಾಧಿಸಬೇಕಲ್ಲವೇ?

ನಿಮ್ಮನ್ನು ಸುಬ್ರಮಣಿಯನ್‌ ಸ್ವಾಮಿ ಅಥವಾ ನಿರ್ಮಲಾ ಸೀತಾರಾಮನ್‌ ಮುಂತಾದವರು ಟೀಕಿಸಿದಾಗ ಸರ್ಕಾರದಿಂದ ಯಾರೊಬ್ಬರೂ ನಿಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ. ಸರ್ಕಾರ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ ಅನ್ನಿಸಿದೆಯಾ? 
        ನಾನು ಇಂಥವುಗಳ ಬಗ್ಗೆ ಯೋಚಿಸಲು ಹೋಗುವುದಿಲ್ಲ. ಆರ್‌ಬಿಐ ಗವರ್ನರ್‌ ಆಗಿ ಸರ್ಕಾರದ ಜೊತೆ ಕೈಜೋಡಿಸಿ ಕೆಲಸ ಮಾಡುವುದು ನನ್ನ ಕರ್ತವ್ಯ. ಅದನ್ನು ನಾನು ಮಾಡಿದ್ದೇನೆ. ಸರ್ಕಾರದಿಂದಲೂ ಸಾಕಷ್ಟು ಪ್ರೋತ್ಸಾಹ ಸಿಕ್ಕಿದೆ. ಹೊರಗಿನಿಂದ ಬರುವ ಟೀಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನಮ್ಮ ಕೆಲಸ ನಾವು ಮಾಡುತ್ತ ಮುನ್ನಡೆಯಬೇಕು. ಇಷ್ಟು ದೊಡ್ಡ ದೇಶದಲ್ಲಿ ಟೀಕೆಗಳ ಪ್ರಮಾಣವೂ ದೊಡ್ಡದೇ ಇರುತ್ತದೆ. ನನ್ನ ಕೆಲಸಕ್ಕೆ ಹೊರತಾದ ಟೀಕೆಗಳಿಗೆಲ್ಲ ಪ್ರತಿಕ್ರಿಯಿಸುತ್ತ ಹೋದರೆ ನಾನೇ ಅವುಗಳಿಗೆ ಮಹತ್ವ ನೀಡಿದಂತಾಗುತ್ತದೆ. ನಾನು ಮುಂದೆ ನೋಡುವವನು; ಹಿಂದೆ ನೋಡುವವನಲ್ಲ.

ಆರ್‌ಬಿಐ ಗವರ್ನರ್‌ ಹುದ್ದೆ 3 ವರ್ಷದ್ದು. ಇದು ಇನ್ನೂ ದೀರ್ಘ‌ ಅವಧಿಯದ್ದಾದರೆ ಒಳ್ಳೆಯದೇ?
       ಸೂಕ್ತ ವ್ಯಕ್ತಿಯನ್ನು ಈ ಹುದ್ದೆಗೆ ಆಯ್ಕೆ ಮಾಡಿದರೆ ಇನ್ನೂ ಕೊಂಚ ಹೆಚ್ಚಿನ ಅವಧಿಯನ್ನು ಆತನಿಗೆ ನೀಡುವುದು ಒಳ್ಳೆಯದು. ಇದರಿಂದ ದೇಶಕ್ಕೆ ಲಾಭವಿದೆ. ಅದು ಎಷ್ಟು ವರ್ಷವಾಗಿರಬೇಕು ಎಂಬ ಬಗ್ಗೆ ನನಗೆ ಖಚಿತತೆಯಿಲ್ಲ. ಅಮೆರಿಕದಲ್ಲಿ 4 ವರ್ಷವಿದೆ. ಕೆಲ ದೇಶಗಳಲ್ಲಿ 8 ವರ್ಷವಿದೆ. 

ಹಣಕಾಸು ಸಚಿವಾಲಯ ಹಾಗೂ ಆರ್‌ಬಿಐ ಗವರ್ನರ್‌ ನಡುವಿನ ಸಂಬಂಧ ನಮ್ಮ ದೇಶದಲ್ಲಿ ಹೇಗಿದೆ? ಇದು ಸುಧಾರಣೆಯಾಗಬೇಕಾದರೆ ಹೇಗೆ ಆಗಬೇಕು?
        ವಿತ್ತ ಮಂತ್ರಿ ಹಾಗೂ ಆರ್‌ಬಿಐ ಗವರ್ನರ್‌ ಎರಡು ವಿಭಿನ್ನ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ. ಇಬ್ಬರ ವ್ಯಾಪ್ತಿಗಳು ಹಾಗೂ ಗುರಿಯಲ್ಲಿ ವ್ಯತ್ಯಾಸವಿರುತ್ತದೆ. ಹಾಗಾಗಿ ನೂರಕ್ಕೆ ನೂರು ಸಹಮತ ಬಹುಶಃ ಸಾಧ್ಯವಿಲ್ಲ. ಇಲ್ಲಿ ಪರಸ್ಪರ ಗೌರವ ಮುಖ್ಯ. ಇಬ್ಬರ ನಡುವೆ ಅಭಿಪ್ರಾಯ ಭೇದಗಳು ಇರಬಹುದು. ಆಗ ಇಬ್ಬರೂ ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸಿ, ಅಂತಿಮವಾಗಿ ದೇಶದ ಹಿತಕ್ಕೆ ಪೂರಕವಾಗುವ ರೀತಿಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಬೇಕಾಗುತ್ತದೆ. ಇಷ್ಟಕ್ಕೂ ಆರ್‌ಬಿಐ ಒಂದು ಸ್ವತಂತ್ರ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಆರ್‌ಬಿಐಗೆ ಯಾವ ನಿರ್ಧಾರವನ್ನು ಕೈಗೊಳ್ಳಲು ಸ್ವಾತಂತ್ರ್ಯವಿದೆಯೋ ಆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ಆರ್‌ಬಿಐಗೇ ಬಿಡಬೇಕಾಗುತ್ತದೆ. ಉದಾಹರಣೆಗೆ, ಹಣದುಬ್ಬರವನ್ನು ಇಂತಿಷ್ಟು ಇಳಿಸಬೇಕು ಎಂದು ಆರ್‌ಬಿಐಗೆ ಗುರಿ ನೀಡಿ, ಅದನ್ನು ಆರ್‌ಬಿಐ ಮಾಡುತ್ತಿರುವಾಗ ಬಡ್ಡಿ ದರ ಇಳಿಸಲು ಒತ್ತಡ ಹಾಕಬಾರದು. ಸರ್ಕಾರ ಗುರಿ ನೀಡಬೇಕು ಮತ್ತು ಅದನ್ನು ಈಡೇರಿಸಲು ಆರ್‌ಬಿಐಗೆ ಸ್ವಾತಂತ್ರ್ಯ ನೀಡಬೇಕು.

ಹೊಸ ಗವರ್ನರ್‌ ಊರ್ಜಿತ್‌ ಪಟೇಲ್‌ ಬಗ್ಗೆ ನಿಮ್ಮ ಅಭಿಪ್ರಾಯ?
       ಆರ್‌ಬಿಐನಲ್ಲಿ ಹೇಗೆ ಕೆಲಸ ಮಾಡಬೇಕು ಹಾಗೂ ಸರ್ಕಾರದ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಊರ್ಜಿತ್‌ಗೆ ಬಹಳ ಚೆನ್ನಾಗಿ ಗೊತ್ತು. ಅವರಿಗೆ ನನ್ನ ಕಡೆಯಿಂದ ಸಲಹೆಗಳೇನೂ ಇಲ್ಲ. ಅವರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ.

ಅಗತ್ಯಬಿದ್ದಾಗ ವಾಪಸ್‌ ಬರುತ್ತೇನೆ ಎಂದಿದ್ದೀರಿ. ಯಾವ ರೀತಿಯ ಅಗತ್ಯಗಳು ನಿಮ್ಮನ್ನು ವಾಪಸ್‌ ಕರೆಸಬಲ್ಲವು?
       ಸದ್ಯಕ್ಕೆ ಇಲ್ಲಿಂದ ಶಿಕ್ಷಣ ಕ್ಷೇತ್ರಕ್ಕೆ ಮರಳಿ ಒಂದಷ್ಟು ಕಾಲ ಸಾರ್ವಜನಿಕ ಭಾಷಣಗಳಿಂದ ದೂರವಿರುತ್ತೇನೆ. ಭಾರತ ಅದ್ಭುತ ದೇಶ. ಇಲ್ಲಿ ಕೆಲಸ ಮಾಡಲು ಯಾವತ್ತಿದ್ದರೂ ನಾನು ಸಿದ್ಧ.

ರಘುರಾಂ ರಾಜನ್‌
ನಿರ್ಗಮಿತ ಆರ್‌ಬಿಐ ಗವರ್ನರ್‌


Trending videos

Back to Top