CONNECT WITH US  

"ಈ ಶತಮಾನವನ್ನು ಆಳುವುದು ಮೊಬೈಲ್‌ ಇಂಟರ್ನೆಟ್‌'

ದೇಶದ ನಂ.1 ಶ್ರೀಮಂತ ಮುಕೇಶ್‌ ಅಂಬಾನಿ ಮಾಧ್ಯಮಗಳ ಮುಂದೆ ಬರುವುದು ಬಹಳ ಕಡಿಮೆ. ಈಗ ರಿಲಯನ್ಸ್‌ ಜಿಯೋ ಕಂಪೆನಿಯನ್ನು ಹುಟ್ಟುಹಾಕುವುದರೊಂದಿಗೆ ಅವರು ಬಹಳ ಸುದ್ದಿಯಲ್ಲಿದ್ದಾರೆ. ಉಚಿತವಾಗಿ ಇಂಟರ್ನೆಟ್‌ ಹಾಗೂ ಕರೆ ಸೌಲಭ್ಯ ನೀಡುತ್ತಿರುವ ಜಿಯೋ ಬಗ್ಗೆ ಜನರಿಗೆ ಬಹಳ ಕುತೂಹಲವಿದೆ. ಇದರ ಹಿಂದಿನ ಕತೆಯನ್ನು ಎನ್‌ಡಿಟೀವಿಯ ಆಫ್ ದಿ ಕಫ್ನಲ್ಲಿ ಮುಕೇಶ್‌ ಹಂಚಿಕೊಂಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

- ರಿಲಯನ್ಸ್‌ ಜಿಯೋ ಎಂಬ ಹೊಸ ಕಂಪನಿ ಆರಂಭಿಸಿ ಟೆಲಿಕಾಂ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದೀರಿ. ಇತರ ಟೆಲಿಕಾಂ ಕಂಪನಿಗಳು ನಿಮ್ಮ ಮೇಲೆ ಕೆಂಗಣ್ಣು ಬೀರುತ್ತಿವೆ. ಜನರಿಗೆ ಜಿಯೋ ಬಗ್ಗೆ ಕುತೂಹಲ ಬಂದಿದೆ. ಈ ಕಂಪನಿ ಆರಂಭಿಸಿದ್ದರ ಬಗ್ಗೆ ಹೇಳಿ.
    ನಾನು ತಂತ್ರಜ್ಞಾನವನ್ನು ನಂಬುವವ. ತಂತ್ರಜ್ಞಾನವನ್ನು ಚೆನ್ನಾಗಿ ಬಳಸಿಕೊಂಡರೆ ಜಗತ್ತು ಬಹಳ ಮುಂದುವರಿಯಬಹುದು. ಭಾರತೀಯರು ಪುರಾತನ ಕಾಲದಲ್ಲಿ ನಾಗರಿಕತೆಗಳನ್ನೇ ಮುನ್ನಡೆಸಿದವರು. ಆದರೆ ಕಳೆದ 200 ವರ್ಷಗಳಲ್ಲಿ ನಾವು ಸಾಕಷ್ಟು ಮುಂದುವರೆದಿಲ್ಲ. ಬಹಳ ಕಾಲ ಬ್ರಿಟಿಷರ ಆಳ್ವಿಕೆಯಲ್ಲಿದ್ದಿದ್ದೇ ಇದಕ್ಕೆ ಕಾರಣ ಎಂದು ನೆಪ ಹೇಳಬಹುದು. ಆದರೆ, ಭಾರತ ಸೂಪರ್‌ ಪವರ್‌ ಆಗಬೇಕು ಎಂದು ಹೇಳುತ್ತಿದ್ದ ನನ್ನ ತಂದೆಯವರ ಗರಡಿಯಲ್ಲಿ ಬೆಳೆದವನು ನಾನು. ಯಾಕೆ ನಾವು ಕೊರಿಯನ್ನರನ್ನು ಅಥವಾ ತೈವಾನಿಗಳನ್ನು ಮೀರಿ ಬೆಳೆಯಲು ಸಾಧ್ಯವಿಲ್ಲ? ಈಗ ಜಗತ್ತು 4ನೇ ಔದ್ಯೋಗಿಕ ಕ್ರಾಂತಿಯನ್ನು ನೋಡುತ್ತಿದೆ. ಈ ಶತಮಾನವನ್ನು ಮೊಬೈಲ್‌ ಇಂಟರ್ನೆಟ್‌ ತಂತ್ರಜ್ಞಾನ ಆಳಲಿದೆ ಎಂಬುದು ನಮಗೆಲ್ಲ ನಿಚ್ಚಳವಾಗಿದೆ. ಆದರೆ, ನಮ್ಮ ದೇಶ ಮೊಬೈಲ್‌ ಇಂಟರ್ನೆಟ್‌ ಲಭ್ಯತೆಯಲ್ಲಿ ಜಗತ್ತಿನ 230 ದೇಶಗಳ ಪೈಕಿ 155ನೇ ಸ್ಥಾನದಲ್ಲಿದೆ. ಇದನ್ನು ಬದಲಿಸಿ ಭಾರತೀಯರಿಗೆ ಸುಲಭವಾಗಿ ಮೊಬೈಲ್‌ ಇಂಟರ್ನೆಟ್‌ ಸಿಗುವಂತೆ ಮಾಡಬೇಕು ಎಂದು 5 ವರ್ಷದಿಂದ ಯೋಚಿಸುತ್ತಿದ್ದೆ. ಅದನ್ನೀಗ ಕಾರ್ಯರೂಪಕ್ಕೆ ತಂದಿದ್ದೇನೆ. ಪ್ರತಿಯೊಬ್ಬ ಭಾರತೀಯನಿಗೂ ಅತ್ಯುತ್ತಮ ಗುಣಮಟ್ಟದ, ಅತ್ಯಲ್ಪ ಬೆಲೆಯ ಇಂಟರ್ನೆಟ್‌ ಸಿಗಬೇಕು. ನಮ್ಮ ದೇಶ ಅಭಿವೃದ್ಧಿಯಾಗಲು ಇದು ಅತ್ಯಗತ್ಯ. ನನಗೆ ಡಿಜಿಟಲ್‌ ಲೈಫ್ನಲ್ಲಿ ಬಹಳ ನಂಬಿಕೆ. ಈ ಡಿಜಿಟಲ್‌ ಲೈಫ್ಗೆ ಹೈಸ್ಪೀಡ್‌ ಮೊಬೈಲ್‌ ಇಂಟರ್ನೆಟ್‌ ಆಮ್ಲಜನಕವಿದ್ದಂತೆ. ಜಿಯೋ ಹುಟ್ಟಿದ್ದು ಈ ಆಮ್ಲಜನಕವನ್ನು ಪೂರೈಸಲು.

- ನೀವೇನೂ ಸರ್ಕಾರವಲ್ಲ. ಎಲ್ಲರಿಗೂ ಇಂಟರ್ನೆಟ್‌ ಸಿಗುವಂತೆ ಮಾಡುವುದು ನಿಮ್ಮ ಕರ್ತವ್ಯವೂ ಅಲ್ಲ. ಆದರೂ 1.5 ಲಕ್ಷ ಕೋಟಿ ರೂ. ಹೂಡಿಕೆ ಮಾಡಿ ಜನರಿಗೆ ಪುಕ್ಕಟೆ ಅಥವಾ ಬಹಳ ಸೋವಿ ದರದಲ್ಲಿ ಇಂಟರ್ನೆಟ್‌ ನೀಡುತ್ತಿದ್ದೀರಿ. ಲಾಭ ಹೇಗೆ ಗಳಿಸುತ್ತೀರಿ? ಇದೇನು ಜೂಜಾಟವೇ? ತುಂಬಾ ರಿಸ್ಕ್ ತೆಗೆದುಕೊಂಡಿದ್ದೀರಲ್ಲವೇ?
    ಮೊದಲನೆಯದಾಗಿ ಇದು ಜೂಜಾಟವಲ್ಲ. ಬಹಳ ಚೆನ್ನಾಗಿ ಯೋಚಿಸಿ, ಅಷ್ಟೇ ಚೆನ್ನಾಗಿ ಜಾರಿಗೊಳಿಸಿದ ಯೋಜನೆಯಿದು. ಯಾವತ್ತಿನಿಂದಲೂ ರಿಲಯನ್ಸ್‌ ಇಂತಹ "ಅಸಾಧ್ಯ' ಕೆಲಸವನ್ನೇ ಮಾಡುತ್ತ ಬಂದಿದೆ. ಎರಡನೆಯದಾಗಿ, ನಾವು ಜಿಯೋದಲ್ಲಿ ಹೂಡಿಕೆ ಮಾಡಿರುವುದು 1.5 ಲಕ್ಷ ಕೋಟಿ ರೂ. ಅಲ್ಲ, 2.5 ಲಕ್ಷ ಕೋಟಿ ರೂ.! ನಾವು ರಿಲಯನ್ಸ್‌ನಿಂದ ಏನನ್ನೇ ಮಾಡುವುದಿದ್ದರೂ ಅದು ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನ ನೀಡುತ್ತದೆಯೇ ಎಂಬುದನ್ನು ಯೋಚಿಸಿಯೇ ಮಾಡುತ್ತೇವೆ. ಹಣ ಮಾಡುವುದೊಂದೇ ಉದ್ದೇಶವಲ್ಲ. ಹಾಗಂತ ರಿಲಯನ್ಸ್‌ ಜಿಯೋ ಲಾಭ ಗಳಿಸುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ಖಂಡಿತ ಲಾಭ ಗಳಿಸುತ್ತದೆ. ಮುಂದಿನ ಕೆಲ ತ್ತೈಮಾಸಿಕ ಫ‌ಲಿತಾಂಶಗಳವರೆಗೆ ಕಾಯಿರಿ. ನಾವು ಈ ಹಿಂದೆ ಮಾಡಿರುವಂತೆಯೇ ಎಲ್ಲಾ ಹಣಕಾಸು ವಿಶ್ಲೇಷಕರ ಲೆಕ್ಕಾಚಾರವನ್ನೂ ಸುಳ್ಳು ಮಾಡುತ್ತೇವೆ. ನಾವು ಹಾಕಿಕೊಂಡಿರುವ ಗುರಿಗಳನ್ನೂ ಮೀರಿ ಈ ಕಂಪನಿ ಬೆಳೆಯಲಿದೆ. 

- ನಿಮ್ಮದು ಮೂಲತಃ ಪೆಟ್ರೋಲಿಯಂ ಕಂಪನಿ. ಅದರಿಂದ ನಿಧಾನವಾಗಿ ದೂರವಾಗುತ್ತಿದ್ದೀರಾ?
    ಇಲ್ಲ. ನಮ್ಮ ದೇಶದಲ್ಲಿ ಸೃಷ್ಟಿಯಾಗುತ್ತಿರುವ ವಾಣಿಜ್ಯಾವಕಾಶಗಳನ್ನು ಬಳಸಿಕೊಳ್ಳುತ್ತಿದ್ದೇವಷ್ಟೆ. ಯಾವುದೇ ದೇಶ 500 ಡಾಲರ್‌ ತಲಾದಾಯದಿಂದ 2000 ಡಾಲರ್‌ ತಲಾದಾಯಕ್ಕೆ ಬೆಳೆಯುತ್ತಿದೆ ಎಂದಾದರೆ ಆ ದೇಶದಲ್ಲಿ ಉದ್ದಿಮೆಗಳು ಚೆನ್ನಾಗಿ ಬೆಳೆಯುತ್ತವೆ. ನಮ್ಮ ದೇಶವೀಗ 2000 ಡಾಲರ್‌ ತಲಾದಾಯದಿಂದ 5000 ಡಾಲರ್‌ ತಲಾದಾಯಕ್ಕೆ ಬೆಳೆಯುತ್ತಿದೆ. ಇದು ಭಾರೀ ಬೆಳವಣಿಗೆ. ಈ ಹಂತದಲ್ಲಿ ಗ್ರಾಹಕ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳು ಶರವೇಗದಲ್ಲಿ ಬೆಳೆಯುತ್ತವೆ. ಅದಕ್ಕೆ ತಂತ್ರಜ್ಞಾನ, ತಂತ್ರಗಾರಿಕೆ ಹಾಗೂ ಸಾಮರ್ಥ್ಯವನ್ನೂ ಬೆರೆಸಿದರೆ ಇನ್ನೂ ಹೆಚ್ಚು ಬೆಳೆಯಲು ಸಾಧ್ಯವಿದೆ. ನಾನು ಯಾವತ್ತೂ ಭವಿಷ್ಯದ ಬಿಸಿನೆಸ್‌ ಹಾಗೂ ಪ್ರತಿಭೆಯಲ್ಲಿ ಹೂಡಿಕೆ ಮಾಡುತ್ತೇನೆ. ಆರಂಭದಲ್ಲಿ ನಮ್ಮದು ಬಟ್ಟೆ ಉದ್ದಿಮೆಯಾಗಿತ್ತು. ನಂತರ ಪಾಲಿಸ್ಟರ್‌ಗೆ ಹೋದೆವು, ಆಮೇಲೆ ಪ್ಲಾಸ್ಟಿಕ್‌ಗೆ, ನಂತರ ರಿಫೈನರಿಗೆ... ಹೀಗೆ ಪ್ರತಿ 4-5 ವರ್ಷಕ್ಕೊಮ್ಮೆ ವಿಭಿನ್ನ ಅವಕಾಶಗಳು ಸೃಷ್ಟಿಯಾಗುತ್ತ ಹೋಗುತ್ತವೆ. ನಾವು ಅದನ್ನು ಬಳಸಿಕೊಳ್ಳುತ್ತೇವೆ.

- ನೀವು ದೇಶದ ನಂ.1 ಶ್ರೀಮಂತ. ಆದರೂ ಬಹಳ ವಿನಯವಂತ. ಸಂದರ್ಶನ ನೀಡುವುದು, ಹೊರಗೆ ಕಾಣಿಸಿಕೊಳ್ಳುವುದು ಅಪರೂಪ. ಈ ಸ್ವಭಾವವನ್ನು ನಿಮ್ಮ ಮುಂದಿನ ತಲೆಮಾರಿಗೆ ಹೇಗೆ ವರ್ಗಾಯಿಸುತ್ತೀರಿ?
    ನಾನು 14, 15, 16 ವರ್ಷದವನಾಗಿದ್ದಾಗ ಅಪ್ಪ ನನ್ನನ್ನು ತಮ್ಮ ಬಿಸಿನೆಸ್‌ನಲ್ಲಿ ಪಾಲುದಾರನಂತೆ ನೋಡುತ್ತಿದ್ದರು. ನಿನಗೆ ನಾನೇನೂ ತರಬೇತಿ ನೀಡುತ್ತಿಲ್ಲ, ನೀನಿಲ್ಲಿ ಪಾಲುದಾರ ಮತ್ತು ತಗೋ ಇದು ನಿನ್ನ ಜವಾಬ್ದಾರಿ ಎಂದು ಕೆಲಸ ಒಪ್ಪಿಸುತ್ತಿದ್ದರು. ನಾನೂ ನನ್ನ ಮುಂದಿನ ತಲೆಮಾರಿಗೆ ಅದನ್ನೇ ಮಾಡುತ್ತಿದ್ದೇನೆ. ನನ್ನ ಮುಂದಿನ ತಲೆಮಾರು ಅಂದರೆ ನನ್ನ ಮಕ್ಕಳಷ್ಟೇ ಅಲ್ಲ, ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ 30 ವರ್ಷದ ಆಸುಪಾಸಿನ ಎಲ್ಲರೂ ಹೌದು. ಅವರಿಗೆ ಪಾಲುದಾರಿಕೆಯ ಜವಾಬ್ದಾರಿ ಕೊಟ್ಟರೆ ಪ್ರತಿಯೊಬ್ಬರೂ ಅದ್ಭುತಗಳನ್ನು ಸಾಧಿಸಬಲ್ಲರು. ನನ್ನ ಮಕ್ಕಳು ಹಾಗೂ ಜಿಯೋದಲ್ಲಿರುವ 30ರ ಆಸುಪಾಸಿನ ಯುವಕರು ಯಾವಾಗಲೂ ನನ್ನನ್ನು ಮೀರಿಸುತ್ತಿರುತ್ತಾರೆ. ಇತ್ತೀಚೆಗೆ ನನಗೆ ಅವರಿಂದ ಸೋಲುವುದು ಅಭ್ಯಾಸವಾಗಿದೆ. ನನ್ನ ಮಕ್ಕಳು ನನ್ನ ಮೇಲೆ ಬಾಸ್‌ಗಿರಿ ಮಾಡುತ್ತಾರೆ! ಇದೊಂದು ಹೊಸ ಬದುಕು. ಚೆನ್ನಾಗಿದೆ. ನನ್ನ ಮಗಳು ಇಶಾ 2010ರಲ್ಲಿ ಯಾಲೆಯಿಂದ ಬಂದ ಮೇಲೆ ನಮ್ಮ ಮನೆಯಲ್ಲಿ ಇಂಟರ್ನೆಟ್‌ ಚೆನ್ನಾಗಿಲ್ಲ ಎಂದು ಗೊಣಗುತ್ತಿದ್ದಳು. ಇನ್ನೊಂದೆಡೆ ನನ್ನ ಮಗ ಆಕಾಶ್‌ "ಅಪ್ಪಾ, ನಿನಗಿದು ಗೊತ್ತಾಗೋದಿಲ್ಲ' ಎಂದು ಬಹಳ ವಿಷಯಗಳಲ್ಲಿ ಹೇಳುತ್ತಿದ್ದ. ಅದು ನಿಜ ಕೂಡ. ಈಗಿನ ಜಗತ್ತು 30 ವರ್ಷದವರಿಗೇ ಚೆನ್ನಾಗಿ ಅರ್ಥವಾಗುತ್ತದೆ. ಹಾಗಾಗಿ ಅವರನ್ನೇ ಮುಂದೆ ಬಿಟ್ಟಿದ್ದೇನೆ. ಜಿಯೋ ಸೃಷ್ಟಿಯಾಗುವಲ್ಲಿ ಅವರ ಪಾತ್ರ ದೊಡ್ಡದು.

- ಜಿಯೋ ಕಾಲ್‌ಗ‌ಳಿಗೆ ಬೇರೆ ಟೆಲಿಕಾಂ ಕಂಪನಿಗಳು ಸರಿಯಾಗಿ ಸಂಪರ್ಕ ನೀಡುತ್ತಿಲ್ಲ ಎಂದು ಆರೋಪಿಸಿದ್ದೀರಿ. ಇದು ಹೀಗೇ ಮುಂದುವರಿದರೆ ಜಿಯೋ ಬಳಕೆದಾರರ ಕತೆಯೇನು?
    ದೂರಸಂಪರ್ಕ ಕಂಪನಿಗಳ ಪ್ರೌಢತೆಯ ಬಗ್ಗೆ ನನಗೆ ನಂಬಿಕೆಯಿದೆ. ನಮ್ಮ ಆಡಳಿತ ವ್ಯವಸ್ಥೆಗೂ ಇಂತಹದ್ದೊಂದು ಪ್ರೌಢತೆಯಿದೆ. ಈ ಸಮಸ್ಯೆಗಳೆಲ್ಲ ತನ್ನಿಂತಾನೇ ಸರಿಯಾಗುವಂತೆ ವ್ಯವಸ್ಥೆಯೇ ನೋಡಿಕೊಳ್ಳುತ್ತದೆ. ನಾವೆಲ್ಲ ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡಬೇಕು. ಅದರ ಲಾಭ ಗ್ರಾಹಕರಿಗೆ ಸಿಗಬೇಕು. ಗ್ರಾಹಕರಿಗೆ ಯಾವತ್ತೂ ತೊಂದರೆಯಾಗಬಾರದು. ಮುಂದಿನ ಕೆಲ ವಾರಗಳಲ್ಲಿ ಇದು ಸರಿಯಾಗದಿದ್ದರೆ ಆಗ ನೋಡಿಕೊಂಡರಾಯಿತು.

- ಸರ್ಕಾರ "ಡಿಜಿಟಲ್‌ ಇಂಡಿಯಾ' ಎನ್ನುತ್ತಿದೆ. ನೀವು ಡಿಜಿಟಲ್‌ ಇಂಡಿಯಾ ಸಾಕಾರಗೊಳಿಸಲು ಹೊರಟಿದ್ದೀರಿ. ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
    ಮೋದಿಯವರನ್ನು ಪ್ರಧಾನಿಯನ್ನಾಗಿ ಪಡೆಯಲು ನಮ್ಮ ದೇಶ ನಿಜಕ್ಕೂ ಅದೃಷ್ಟ ಮಾಡಿದೆ. ಡಿಜಿಟಲ್‌ ಇಂಡಿಯಾದ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆಯಿದೆ. ಜಗತ್ತೇ ಇಂದು ಡಿಜಿಟೈಸೇಶನ್‌ನ ಸ್ಪರ್ಧೆಯಲ್ಲಿದೆ. ಈ ಸ್ಪರ್ಧೆಯಲ್ಲಿ ಬಹಳ ದೇಶಗಳಿವೆ. ಮೊದಲ ಬಾರಿಗೆ ನಮ್ಮ ದೇಶವೂ ಈ ಸ್ಪಧೆರ್ಯಲ್ಲಿ ಸೇರಿಕೊಂಡು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಇದು ಖುಷಿಯ ವಿಚಾರ. ಇದಕ್ಕೆ ಪೂರ್ವಭಾವಿಯಾಗಿ ನಂದನ್‌ ನಿಲೇಕಣಿ 2009ರಲ್ಲಿ ಮಾಡಿದ ಕೆಲಸ ನಿಜಕ್ಕೂ ಅದ್ಭುತವಾದುದು. ಮುಂದೆ ಮಕ್ಕಳು ಇತಿಹಾಸ ಓದುವಾಗ "ನಂದನ್‌ ನಿಲೇಕಣಿ ಅಂತ ಒಬ್ಬರಿದ್ದರು, ಅವರು ಭಾರತವನ್ನು ಆರ್ಥಿಕ ಸೇರ್ಪಡೆಯ ಹಾಗೂ ಡಿಜಿಟಲ್‌ ನಕಾಶೆಯ ಮೇಲೆ ಗುರುತಿಸುವಂತೆ ಮಾಡಿದರು' ಎಂದು ಓದಲಿದ್ದಾರೆ.

- ಮುಕೇಶ್‌ ಅಂಬಾನಿ, ರಿಲಯನ್ಸ್‌ ಗ್ರೂಪ್‌ ಮುಖ್ಯಸ್ಥ

Trending videos

Back to Top