CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಎರಡು ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಜಿಮ್‌ ನಿರ್ಮಾಣ

ಯುವ ಸಬಲೀಕರಣ, ಕ್ರೀಡಾ ಇಲಾಖೆ ಸಾಧನೆಗಳೇನು?
      ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಖನ್ನತೆ ಅಥವಾ ದುಶ್ಚಟಕ್ಕೆ ಒಳಗಾದ ಯುವಕರಿಗೆ ಯುವ ಸ್ಪಂದನಾ ಕಾರ್ಯಕ್ರಮದ ಮೂಲಕ ನಿಮ್ಹಾನ್ಸ್‌ನಲ್ಲಿ ಕೌನ್ಸೆಲಿಂಗ್‌ ನೀಡುತ್ತಿದೆ. ರಾಜ್ಯದಲ್ಲಿ 32 ಕ್ರೀಡಾ ವಸತಿ ನಿಲಯವಿದ್ದು, ಉತ್ತಮ ನಿರ್ವಹಣೆಯಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಅಂದರೆ 16 ಸಿಂಥೆಟಿಕ್‌ ಟ್ರ್ಯಾಕ್‌ ರಾಜ್ಯದಲ್ಲಿದೆ. ಈಜು ಹಾಗೂ ಪರ್ವತಾರೋಹಣದಲ್ಲಿ ರಾಜ್ಯದ ಪಟುಗಳು ಕಳೆದ ಅನೇಕ ವರ್ಷದಿಂದ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದಾರೆ. ಆದರೆ, ಕ್ರೀಡಾ ಬಜೆಟ್‌ ಕೇವಲ 145 ಕೋಟಿ ರೂ. ಇತ್ತು. ನಾನು ಸಚಿವನಾದ ನಂತರ ಮುಖ್ಯಮಂತ್ರಿ ಜತೆ ಚರ್ಚಿಸಿ ಅದರ ಪ್ರಮಾಣ 285 ಕೋಟಿ ರೂ.ಗೆ ಏರಿಸಲಾಗಿದೆ. ಈಗಾಗಲೇ 22 ಕ್ರೀಡಾಂಗಣಗಳನ್ನು ಅಭಿವೃದ್ಧಪಡಿಸಿದ್ದೇವೆ. ಇನ್ನೂ 26 ಜಿಲ್ಲಾ ಹಾಗೂ ತಾಲೂಕು ಕ್ರೀಡಾಂಗಣ ಸದ್ಯವೇ ಸಿದ್ಧವಾಗಲಿವೆ. ರಾಜ್ಯಾದ್ಯಂತ 10 ಕ್ರೀಡಾ ಅಕಾಡೆಮಿಗಳನ್ನು ಸ್ಥಾಪನೆ ಮಾಡಲಿದ್ದೇವೆ.

ಕ್ರೀಡಾ ತರಬೇತಿದಾರರಿಗೆ ವೇತನ ತಾರತಮ್ಯ ಮಾಡಲಾಗುತ್ತಿದೆ ಎಂಬ ಮಾತಿದೆಯಲ್ಲಾ ?
      ಕ್ರೀಡಾ ತರಬೇತುದಾರರ ವೇತನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸದ್ಯ 90 ತರಬೇತುದಾರರಿದ್ದು, ಹೊಸದಾಗಿ 100 ತರಬೇತುದಾರರ ನೇಮಕ ಮಾಡಲಿದ್ದೇವೆ. ಹಾಗೆಯೇ ಅಕಾಡೆಮಿಯಿಂದ ಪರಿಣಿತ ತರಬೇತುದಾರರನ್ನು ಪಡೆದು ಅವರಿಗೆ ಉತ್ತಮ ಸಂಬಳ ಹಾಗೂ ಸೌಲಭ್ಯ ಒದಗಿಸಲಿದ್ದೇವೆ. ತಲಾ ಎರಡು ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಜಿಮ್‌ ನಿರ್ಮಾಣ ಮಾಡಲಿದ್ದೇವೆ.

ಇಲಾಖೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದೀರಾ?
      ಕ್ರೀಡಾ ವಿಜ್ಞಾನ ಕೇಂದ್ರವನ್ನು ಬೆಂಗ ಳೂರು ಮತ್ತು ಉಡುಪಿಯಲ್ಲಿ ಆರಂಭಿಧಿಸಲು ಮುಂದಾಗಿದ್ದೇವೆ. ಮಾನಸಿಕ ಹಾಗೂ ವೈಜ್ಞಾನಿಕ ವಾಗಿ ಕ್ರೀಡಾಪಟುಗಳನ್ನು  ಕ್ರೀಡೆಗೆ ಸಜ್ಜುಗೊಳಿಸುವುದು. ಕ್ರೀಡಾ ಪಟುಗಳಲ್ಲಿ ಭಯ, ಹಿಂಜರಿಕೆ ಆಗದಂತೆ ಆತ್ಮಸ್ಥೈರ್ಯ ಹೆಚ್ಚಿಸಲು ಬೇಕಾದ ಚಿಕಿತ್ಸೆ ಅಥವಾ ಕೌನ್ಸೆಲಿಂಗ್‌ ನೀಡಲು ಇದು ಸಹಕಾರಿ. 

ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗೆ ಪ್ರೋತ್ಸಾಹ ಹೇಗಿದೆ?
      ಯುವ ಚೈತನ್ಯ ಕಾರ್ಯಕ್ರಮದ ಮೂಲಕ ಗ್ರಾಮೀಣ ಮಟ್ಟದಲ್ಲಿ ಕ್ರೀಡಾ ಸಾಮಗ್ರಿ ವಿತರಣೆ ಮಾಡುತ್ತಿದ್ದೇವೆ. 40 ಸಾವಿರ ರೂ.ಗಳ ಕ್ರೀಡಾ ಕಿಟ್‌ಅನ್ನು 5 ಸಾವಿರ ಗ್ರಾಮೀಣ ಯುವಕ ತಂಡಕ್ಕೆ ನೀಡಲಿದ್ದೇವೆ. ಇದಕ್ಕಾಗಿ 20 ಕೋಟಿ ರೂ. ಮಂಜೂರಾಗಿದೆ. 

ಕ್ರೀಡಾಂಗಣಗಳಿಗೆ ಕಾಯಕಲ್ಪವಿದೆಯೇ?
      ಬೆಂಗಳೂರಿನ ಕಂಠೀರವ ಕ್ರೀಡಾಂಗಣ, ಕೋರಮಂಗಲ ಕ್ರೀಡಾಂಗಣ ಹಾಗೂ ಹಾಕಿ ಕ್ರೀಡಾಂಗಣ ಅಭಿವೃದ್ಧಿಗೆ ಅಗತ್ಯ ಅನುದಾನ ಮೀಸಲಿಟ್ಟಿದ್ದೇವೆ. ಸಾವಿರ ಕ್ರೀಡಾಪಟುಗಳನ್ನು ಗುರುತಿಸಿ ಕೇಂದ್ರ, ರಾಜ್ಯ, ಖಾಸಗಿ ಸಂಸ್ಥೆಗಳ ಮೂಲಕ ದತ್ತು ಸ್ವೀಕಾರ ಕಾರ್ಯಕ್ರಮ ಮಾಡಲಿದ್ದೇವೆ. ದತ್ತು ಪಡೆದ ಕ್ರೀಡಾಪಟುಗಳ ಎಲ್ಲಾ ವೆಚ್ಚ ಅವರ ಮೂಲಕವೇ ಬರಿಸುವಂತೆ ಮಾಡಲಿದ್ದೇವೆ. ಹಾಗೆಯೇ ಒಲಂಪಿಕ್‌, ಏಷಿಯನ್‌ ಕ್ರೀಡಾಕೂಟ ಹಾಗೂ ಕಾಮನ್‌ ವೆಲ್ತ್‌ ಕ್ರೀಡೆಯಲ್ಲಿ ಗೆದ್ದವರಿಗೆ ಸರ್ಕಾರದಿಂದಲೇ ನೇರವಾಗಿ  ಎ ಅಥವಾ ಬಿ ದರ್ಜೆಯ ನೌಕರಿ ನೀಡಲಾಗುವುದು.

ಕ್ರೀಡಾ ನೀತಿ ಅನುಷ್ಠಾನ ವಿಳಂಬ ಯಾಕೆ? 
      ಕ್ರೀಡಾನೀತಿ ಅಂತಿಮ ಹಂತದಲ್ಲಿದ್ದು, ಕ್ಯಾಬಿನೆಟ್‌ಗೆ ಬರಲಿದೆ. ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್ ಹಾಗೂ ಅರಣ್ಯ, ಅಗ್ನಿಶಾಮಕ ಹಾಗೂ ಪೊಲೀಸ್‌ ಮೊದಲಾದ ಶಕ್ತಿ ಮತ್ತು ಯುಕ್ತಿಯ ಮೂಲಕ ಕೆಲಸ ಮಾಡಬೇಕಾದ ಇಲಾಖೆಯಲ್ಲಿ ಕ್ರೀಡಾ ಕೋಟ ಹೆಚ್ಚಿಸಲು ಕ್ರಮ ಈ ನೀತಿಯಲ್ಲಿದೆ.

ಕ್ರೀಡಾಂಗಣದ ಉಸ್ತುವಾರಿಗೆ ಹೊಸ ರೂಪ ನೀಡುವಿರಾ?
      ಕ್ರೀಡಾಂಗಣ ಉಸ್ತುವಾರಿ ಸಮಿತಿಯಿಂದ ಜಿಲ್ಲಾಧಿಕಾರಿಯವರನ್ನು ತೆಗೆಸಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ರಾಜ್ಯದ 14 ಈಜುಕೊಳಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇನ್ನೂ 10 ಸದ್ಯವೇ ಅಭಿವೃದ್ಧಿಯಾಗಲಿದೆ. ಎಲ್ಲಾ ಈಜುಕೊಳದ ನಿರ್ವಹಣೆ ಸರ್ಕಾರವೇ ಮಾಡಲಿದೆ.  

ಕ್ರೀಡೆಗೆ ಉತ್ತೇಜನ ನೀಡಲು ಇಲಾಖೆಯ ಪರಿಣಾಮಕಾರಿ ಕಾರ್ಯಕ್ರಮಗಳೇನು?
       ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಕ್ಯಾಶ್‌ ಅವಾರ್ಡ್‌ ನೀಡುತ್ತಿದ್ದೇವೆ. ಅವರ ಸಾಧನೆಯ ಆಧಾರದಲ್ಲಿ 2 ಲಕ್ಷ ಮೂರು, 5 ಲಕ್ಷ ರೂ. ತನಕವೂ ನೀಡುತ್ತಿದ್ದೇವೆ. 2012 ರಿಂದ  ಈ ಹಣ ನೀಡಿಲ್ಲ. ಈಗ ಹಣಕಾಸು ಇಲಾಖೆಗೆ ಪ್ರಸ್ತಾವನೆ ಹೋಗಿದೆ. ಸದ್ಯವೇ ಸುಮಾರು 7ರಿಂದ 8 ಕೋಟಿ ರೂ.ವಿತರಣೆಯಾಗಲಿದೆ.

ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಖಾಸಗಿ ಸಂಸ್ಥೆಗಳಿಗೆ ಸರ್ಕಾರದಿಂದ ಸಿಗುತ್ತಿರುವ ಅನುಕೂಲವೇನು? 
      ಕ್ರೀಡಾ ಇಲಾಖೆಗೆ ಪ್ರೋತ್ಸಾಹ ನೀಡುವ ಖಾಸಗಿ ಸಂಘ ಸಂಸ್ಥೆಗಧಿಳಿಗೆ 10 ಸಂಘ ಸಂಸ್ಥೆಗೆ ವಾರ್ಷಿಕವಾಗಿ ತಲಾ 5 ಲಕ್ಷ ರೂ.  ನಗದು ಬಹುಮಾನ ನೀಡುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಕ್ರೀಡಾ ಪೋಷಕ ಪ್ರಶಸ್ತಿ ಎಂದು ನಾಮಕರಣ ಮಾಡಿದ್ದೇವೆ.

ಮೀನುಗಾರಿಕೆ  ಇಲಾಖೆಯ ಸಾಧನೆ ಏನು?
      ಮೀನುಗಾರಿಕಾ ಇಲಾಖೆಯಲ್ಲಿ ಡೀಸೆಲ್‌ ಸಬ್ಸಿಡಿ 100 ಕೋಟಿ ಯಿಂದ 145 ಕೋಟಿ ರೂ. ಹೆಚ್ಚಿಸಿ, ಮೀನುಗಾರರ ಖಾತೆಗೆ ನೇರವಾಗಿ ಜಮಾ ಮಾಡುತ್ತಿದ್ದೇವೆ. ಕರಾವಳಿ ಮೀನುಗಾರ ಮಹಿಳೆಯರಿಗೆ ಶೇ.2ಷ್ಟು ಬಡ್ಡಿದರದಲ್ಲಿ ಸಾಲ ನೀಡಿ, ಅದರ ಸಬ್ಸಿಡಿ ಹಣ 7 ಕೋಟಿಯನ್ನು ರಾಜ್ಯ ಸರ್ಕಾರ ತುಂಬಿ ಕೊಟ್ಟಿದೆ. ಸಮುದ್ರದಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದವರ ಕುಟುಂಬಕ್ಕೆ ನೀಡುವ ಪರಿಹಾರದ ಪ್ರಮಾಣವನ್ನು 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದ್ದೇವೆ.

ಒಳನಾಡು ಮೀನುಗಾರಿಕೆ ಬಗ್ಗೆ  ಹೆಚ್ಚು ಗಮನ ನೀಡುತ್ತಿಲ್ಲ ಎಂಬ  ದೂರಿದೆಯಲ್ಲಾ?
      ಒಳನಾಡು ಮೀನುಗಾರಿಕಾ ನೀತಿ ರಚನೆ ಮಾಡುತ್ತಿದ್ದೇವೆ, ಈ ಮೂಲಕ ಒಳನಾಡು ಮೀನು ಇಳುವರಿಯನ್ನು ಕನಿಷ್ಠ 10ಪಟ್ಟು ಹೆಚ್ಚಿಸಲು ಬೇಕಾದ ರೀತಿ- ನೀತಿ ಸಿದ್ಧವಾಗುತ್ತಿದೆ.

ವಿವಿಧ ರಾಜ್ಯಗಳ ಮೀನುಗಾರಿಕೆ ಇಲಾಖೆ ಸಚಿವರ ಶೃಂಗ ಸಭೆ ನಡೆಯುವ ಪ್ರಸ್ತಾಪ ಏನಾಯ್ತು?
      ವಿವಿಧ ರಾಜ್ಯದ ಮೀನುಗಾರಿಕಾ ಮಂತ್ರಿಗಳ ಸಮಾವೇಶ ಕರೆಯಬೇಕೆಂದಿದ್ದೆ. ಆದರೆ, ಇಲ್ಲಿ ಕಾಂಗ್ರೆಸ್‌ ಸರ್ಕಾರ ಇದೇ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಕೇಂದ್ರ ಕೃಷಿ ಮಂತ್ರಿ ಒಪ್ಪಿ, ಸಿಎಂ ಅವರಿಗೆ ಪತ್ರ ಬರೆದಿದ್ದರು. ಆದರೆ, ಆ ನಂತರ ಆ ಬಗ್ಗೆ ಮುಂದಿನ ಪ್ರಕ್ರಿಯೆಗೆ ಒಪ್ಪಿಗೆ ದೊರೆತಿಲ್ಲ. ಮೀನುಗಾರಿಕ ಮಂತ್ರಿಗಳ ಶೃಂಗ ಸಭೆ ನಡೆಸಿ ಮೀನುಗಾರಿಕೆಗೆ ಉತ್ತೇಜನ ಕೊಡಲು ಬಯಸಿದ್ದೆ. 

ಬಂದರುಗಳ ಅಭಿವೃದ್ಧಿ ಹೇಗೆ ನಡೆದಿದೆ?
      ದೊಡ್ಡ ಬಂದರುಗಳ ಅಭಿವೃದ್ಧಿಗೆ ಹಿಂದೆ ಕೇಂದ್ರ ಸರ್ಕಾರದ ಶೇ.75 ಹಾಗೂ ಶೇ.25ರಷ್ಟು ಅನುದಾನ ಇತ್ತು ಈಗ ಅದನ್ನು 50:50 ಮಾಡಿದ್ದು, ಮಾತ್ರವಲ್ಲದೇ ಗಾಯದ ಮೇಲೆ ಬರೆ ಎಳೆಯುವಂತೆ ಕೇಂದ್ರ ಸರ್ಕಾರ ಒಂದು ಯೋಜನೆಗೆ ಕೇಂದ್ರದಿಂದ ಗರಿಷ್ಠ 25 ಕೋಟಿ ರೂ. ಮಾತ್ರ ನೀಡಲಾಗುವುದು ಎಂದು ಹೇಳುತ್ತಿದೆ. ಇದರಿಂದಾಗಿ ದೊಡ್ಡ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗದು. ಹೀಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಸಹಕಾರ ಇಲ್ಲದೆ ವಿಶ್ವಬ್ಯಾಂಕ್‌ನ ಎರವಲಿನಿಂದ ಮೂರು ಜಿಲ್ಲೆಗಳ ಬೃಹತ್‌ ಬಂದರು ಅಭಿವೃದ್ಧಿಗೆ ಮುಂದಾಗಿದ್ದೇವೆ.

ಚರ್ಚೆ ಮಾಡಿಲ್ಲ 
      ಮಗಳು ಈಗ ಕಾನೂನು ಓದುತ್ತಿದ್ದಾಳೆ, ಮುಂದೆ ರಾಜಕೀಯಕ್ಕೆ ಬರ್ತಾಳ್ಳೋ ಇಲ್ಲವೋ ಗೊತ್ತಿಲ್ಲ. ಅವಳು ರಾಜಕೀಯಕ್ಕೆ ಬರಬೇಕು ಎಂಬ ಬಗ್ಗೆ ಕುಟುಂಬದಲ್ಲಿ ನಾವು ಚರ್ಚೆಯೇ ಮಾಡಿಲ್ಲ. 
- ಪ್ರಮೋದ್‌ಮಧ್ವರಾಜ್‌
ಕ್ರೀಡಾ, ಮೀನುಗಾರಿಕಾ ಸಚಿವ

ಸಂದರ್ಶನ: ರಾಜು ಖಾರ್ವಿ ಕೊಡೇರಿ

Back to Top