CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪಾಸ್‌ಪೋರ್ಟ್‌ಗಿಂತ ಬೇಗ ರೇಷನ್‌ ಕಾರ್ಡ್‌ ಮನೆಗೆ

4 ವರ್ಷಗಳಲ್ಲಿ ಎರಡು ಖಾತೆ ನಿಭಾಯಿಸಿದ್ದೀರಿ. ಮೊದಲಿಗೆ ಹೊಣೆಗಾರಿಕೆ ವಹಿಸಿಕೊಂಡ ಆರೋಗ್ಯ ಇಲಾಖೆಯಲ್ಲಿ ನಿಮ್ಮ ಸಾಧನೆ ಏನು?
     ಆರೋಗ್ಯ ಸಚಿವನಾಗಿ ಕಾರ್ಯನಿರ್ವಹಿಸಿದ ಮೂರು ವರ್ಷದ ಅವಧಿಯಲ್ಲಿ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರಗಳ ಸ್ಥಾಪನೆ, 108 ಆ್ಯಂಬುಲೆನ್ಸ್‌ಗಳ ಸಂಖ್ಯೆ ಮತ್ತು ಸಾಮರ್ಥಯ ಹೆಚ್ಚಳ, ಬಿಪಿಎಲ್‌ ಕುಟುಂಬಗಳಿಗೆ ಆರೋಗ್ಯಶ್ರೀ, ಎಪಿಎಲ್‌ ಕುಟುಂಬಗಳಿಗೆ ರಾಜೀವ್‌ ಆರೋಗ್ಯ ಭಾಗ್ಯ,, ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಅವುಗಳಲ್ಲಿ ಪ್ರಮುಖ.

ಆರೋಗ್ಯ ಸಚಿವರಾಗಿದ್ದಾಗ ನಿಮ್ಮ ಪ್ರಕಾರ ಜನಮೆಚ್ಚಿದ ಮಾದರಿ ಯೋಜನೆ ಯಾವುದು?
     ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಮತ್ತು ಮಾಹಿತಿ ನೀಡುವ "ಹೆಲ್ತ್‌ ಕಿಯೋಸ್ಕ್'.ಹಾಗೂ "ಹೆಲ್ತ್‌ ಬೂತ್‌' ಯೋಜನೆ. ನಮ್ಮ ರಾಜ್ಯದ ಮಾದರಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅನುಸರಿಸಿದ್ದು, ಹೆಲ್ತ್‌ ಕಿಯೋಸ್ಕ್ ಮಾದರಿಯಲ್ಲೇ ಅವರು ದೆಹಲಿಯಲ್ಲಿ "ಮೊಹಲ್ಲಾ ಕ್ಲಿನಿಕ್‌' ಆರಂಭಿಸಿದ್ದಾರೆ.

ಔಷಧ ಖರೀದಿ ವಿವಾದ ಸ್ವರೂಪ ಪಡೆಯಿತಲ್ಲ?
     ಔಷಧ ಖರೀದಿಯಲ್ಲಿ ವಿವಾದ, ಹಗರಣ ಎಂಥದ್ದೂ ಇಲ್ಲ. ಪೂರ್ಣ ಪ್ರಮಾಣದ ಮಾಹಿತಿ ಪಡೆಯದೆ ಮಾಡಿದ ಆರೋಪ ವದು. ಔಷಧ ಖರೀದಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು "ಇ- ಪ್ರಕ್ಯೂರ್‌ವೆುಂಟ್‌' ವ್ಯವಸ್ಥೆ ಜಾರಿಗೆ ತಂದಿದ್ದೇ ನನ್ನ ಅವಧಿಯಲ್ಲಿ. ನಮ್ಮ ರಾಜ್ಯದ ಕಾರ್ಯಕ್ರಮ ಮೆಚ್ಚಿ ಕೇಂದ್ರ ಸರ್ಕಾರದ ಪ್ರಶಸ್ತಿ ಸಿಕ್ಕಿರುವುದೇ ನಮ್ಮ ಪಾರದರ್ಶಕತೆಗೆ ಸಾಕ್ಷಿ.

ಗುಟ್ಕಾ ನಿಷೇಧವೂ ವಿರೋಧಕ್ಕೆ ಕಾರಣವಾಯ್ತಲ್ಲಾ?
     ಗುಟ್ಕಾ ನಿಷೇಧ ನನ್ನ ಪಾಲಿಗೆ ತುಂಬಾ ಸವಾಲು ಮತ್ತು ಅಪಾಯ ಗಳನ್ನು ಮೈಮೇಲೆ ಎಳೆದುಕೊಳ್ಳುವ ಕೆಲಸವಾಗಿತ್ತು. ಆದರೆ, ಗುಟ್ಕಾ ನಿಷೇಧ ಪ್ರಸ್ತಾವನೆ ಸಚಿವ ಸಂಪುಟದ ಮುಂದೆ ತಂದಿದ್ದರೆ, ಅದು ಸುಲಭವಾಗಿ ಕಾರ್ಯಗತ ಆಗುತ್ತಿರಲಿಲ್ಲ. ಹೀಗಾಗಿ, ಕಡತವನ್ನು ನೇರವಾಗಿ ಮುಖ್ಯಮಂತ್ರಿಗೆ ಕಳಿಸಿ, ಅವರಿಂದ ಅನುಮೋದನೆ ಪಡೆದುಕೊಂಡು ಸಚಿವ ಸಂಪುಟದ ಮುಂದೆ ತಂದಿದ್ದೆ. ಸಚಿವರು, ಶಾಸಕರಿಂದ ಭಾರೀ ವಿರೋಧ ವ್ಯಕ್ತವಾಯಿತು.

ವೈದ್ಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರ ಹಲವಾರು ಬಾರಿ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿತಲ್ಲಾ?
      ನಿಜ. ಆದರೆ, ಅದಕ್ಕೆ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಕಾರಣ. ಕಳೆದ 10 ವರ್ಷ ಅಧಿಕಾರದಲ್ಲಿದ್ದ ಪಕ್ಷಗಳು ಆಸ್ಪತ್ರೆಗಳ ಹಾಸಿಗೆ ಸಾಮರ್ಥಯವನ್ನು ಹೆಚ್ಚಿಸಿವೆಯೇ ಹೊರತು ಅದಕ್ಕೆ ತಕ್ಕಂತೆ ವೈದ್ಯರನ್ನು ನೇಮಕಾತಿ ಮಾಡಿಕೊಂಡಿಲ್ಲ. ಮೇಲಾಗಿ ಪ್ರತಿ ವರ್ಷ ಶೇ.5ರಷ್ಟು ವೈದ್ಯರು ನಿವೃತ್ತಿ ಆಗುತ್ತಾರೆ. ಹಾಗಾಗಿ ಇಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿವೆ. ಪ್ರತಿ ವರ್ಷ ನೇಮಕಾತಿ ನಡೆದಿದ್ದರೆ, ವೈದ್ಯರ ಕೊರತೆ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ.ಆದರೆ, ನಮ್ಮ ಸರ್ಕಾರ ಬಂದ ನಂತರ ವೈದ್ಯರ ಹುದ್ದೆಗಳ ಭರ್ತಿಗೆ ಪ್ರಥಮ ಆದ್ಯತೆ ನೀಡಿದೆ.

ರಾಜ್ಯ ಹಸಿವು ಮುಕ್ತ ಆಗುವುದು ಯಾವಾಗ?
      ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವುದು ಸರ್ಕಾರದ ಗುರಿ. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಇಲ್ಲಿವರೆಗೆ ರಾಜ್ಯದ 1 ಕೋಟಿಗೂ ಹೆಚ್ಚು ಬಡ ಕುಟುಂಬಗಳ 4.5 ಕೋಟಿ ಜನರನ್ನು ಅನ್ನಭಾಗ್ಯ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಮುಂದಿನ ತಿಂಗಳಿಂದ ತೊಗರಿ ಬೇಳೆ ಸಹ ನೀಡಲಾಗುವುದು. ಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಜನರಿಗೆ 2 ಕೆ.ಜಿ. ಗೋಧಿಮತ್ತು 5 ಕೆ.ಜಿ ಅಕ್ಕಿ ವಿತರಿಸಲಾಗುವುದು.ಯೋಜನೆ ಜಾರಿಗೆ ಬಂದಾಗಿನಿಂದ ರಾಜ್ಯದಲ್ಲಿ ಜನರ ವಲಸೆ, ಗುಳೆ ಹೋಗುವುದು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಪಡಿತರ ಕಾರ್ಡ್‌ ವಿತರಣೆ ಗೊಂದಲವುಂಟಾಗಿ ನಿರಂತರ ಸಮಸ್ಯೆಯಾಗಿದೆಯಲ್ಲಾ? 
      ಕಳೆದ 20 ವರ್ಷಗಳಿಂದ ರಾಜ್ಯದಲ್ಲಿ ಪಡಿತರ ಚೀಟಿಯದ್ದು ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ. ಒಂದೊಂದು ಸರ್ಕಾರ ಒಂದೊಂದು ರೀತಿ ನಿಯಮ ಮಾಡಿತ್ತು. ನಕಲಿ ಕಾರ್ಡ್‌ ಗಳಿಗೆ ಕಡಿವಾಣ ಹಾಕಿ, ಅರ್ಹರಿಗೆ ಕಾರ್ಡ್‌ ಕೊಡುವ ನಿಟ್ಟಿನಲ್ಲಿ ಸಮರ್ಪಕ ಮತ್ತು ದೂರಗಾಮಿ ಪ್ರಯತ್ನಗಳು ನಡೆದಿಲ್ಲ. ಹೀಗಾಗಿ, ಗೊಂದಲ ಉಂಟಾಗಿತ್ತು. ಆದರೆ,ಈಗ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಆನ್‌ಲೈನ್‌ ಅರ್ಜಿ, ಸ್ವಯಂಘೋಷಣಾ ಪ್ರಮಾಣಪತ್ರ, ಆಧಾರ್‌ ಜೋಡಣೆ, ಕೂಪನ್‌ ವ್ಯವಸ್ಥೆ ಸೇರಿ ಹಲವು ಸುಧಾರಣಾ ಕ್ರಮ ಜಾರಿಗೆ ತರಲಾಗಿದೆ. ಪಡಿತರ ಚೀಟಿ ಪಡೆಯಲು ಇದ್ದ ಮಾನದಂಡ 14 ರಿಂದ ನಾಲ್ಕಕ್ಕೆ ಇಳಿಸಲಾಗಿದೆ.

ಪಡಿತರ ಕೂಪನ್‌ ಪದ್ಧತಿಗೂ ಅಪಸ್ವರ ಕೇಳಿ ಬಂದಿತ್ತಲ್ಲಾ?
      ಪಡಿತರ ಕೂಪನ್‌ ವ್ಯವಸ್ಥೆ ಬಹಳ ಉಪಯುಕ್ತ ಹೆಜ್ಜೆ ಆಗಿತ್ತು. ಆರಂಭದಲ್ಲಿ ಸ್ವಲ್ಪ ಕಷ್ಟ ಅನಿಸಿದ್ದರೂ, ಭವಿಷ್ಯದಲ್ಲಿ ಅದೊಂದು ಪರಿಣಾಮಕಾರಿ ಕ್ರಮ ಆಗುತ್ತಿತ್ತು. ಶೇ.90ರಷ್ಟು ಆಧಾರ್‌ ಜೋಡಣೆ ಕಾರ್ಯ ಮುಗಿದಿತ್ತು. ಉಳಿ‌ದ ಶೇ.10ರಷ್ಟು ಕಾರ್ಡ್‌ ಗಳಿಗೆ ಆಧಾರ್‌ ಜೋಡಣೆ ಆಗಿದ್ದರೆ ಇಡೀ ಪಡಿತರ ವ್ಯವಸ್ಥೆಗೆಕಾಯಕಲ್ಪ ಸಿಕ್ಕುತ್ತಿತ್ತು. ಆದರೆ ಕಾರಣಾಂತರಗಳಿಂದ ಸ್ವಲ್ಪ ಸಮಸ್ಯೆಯಾಯಿತಷ್ಟೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪ್ರಮಾಣ ಹೆಚ್ಚಿಸಿ ಬೇರೆ ಆಹಾರ ಪದಾರ್ಥಗಳ ವಿತರಣೆಗೆ ಕತ್ತರಿ ಹಾಕಲಾಗಿದೆ ಎಂಬಆರೋಪ ಇದೆಯಲ್ಲ ?
      ಅಕ್ಕಿಯ ಪ್ರಮಾಣ ಹೆಚ್ಚಿಸಿದ್ದರಿಂದ ಸಕ್ಕರೆ, ಬೇಳೆ, ಎಣ್ಣೆ ಮತ್ತು ಉಪ್ಪು ಕೊಡುವುದು ನಿಲ್ಲಿಸಲಾಗಿದೆ ಅನ್ನುವುದು ತಪ್ಪು. ಸಕ್ಕರೆಗೆ ಕೇಂದ್ರ ಸರ್ಕಾರ ಸಬ್ಸಿಡಿ ಸ್ಥಗಿತಗೊಳಿಸಿದ್ದರಿಂದ ಸಕ್ಕರೆ ನೀಡಲಾಗುತ್ತಿಲ್ಲ. ಅಗತ್ಯ ಪ್ರಮಾಣದಲ್ಲಿ ತೋಗರಿ ಬೇಳೆ ಸಿಗದೇ ಇದ್ದ ಕಾರಣಕ್ಕೆ ಕಳೆದ 4 ತಿಂಗಳಿಂದ ಬೇಳೆ ಕೊಡಲು ಸಾಧ್ಯವಾಗಿರಲಿಲ್ಲ. ಈಗ ನಾಫೆಡ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇನ್ನು ತೊಗರಿ ಬೇಳೆ ಸಮಸ್ಯೆ ಇರಲ್ಲ. ಉಪ್ಪು ಮತ್ತು ತಾಳೆ ಎಣ್ಣೆಗೆ ಬೇಡಿಕೆ ಇರಲಿಲ್ಲ, ಆದ್ದರಿಂದ ಅದನ್ನು ನಿಲ್ಲಿಸಲಾಗಿದೆ. 

ಆರೋಗ್ಯ ಮತ್ತು ಆಹಾರ ಇಲಾಖೆಯಲ್ಲಿ ಅಧಿಕಾರಿಗಳಿಂದ ನಿರೀಕ್ಷಿತ ಸಹಕಾರ ಸಿಕ್ಕಿದೆಯಾ?
      ಎರಡೂ ಇಲಾಖೆಗಳು ಬಡಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕಾದ ಇಲಾಖೆಗಳು. ಜನರ ಆದ್ಯತೆಗೆ ತಕ್ಕಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅಧಿಕಾರಿಗಳ ಸಹಕಾರ ಮುಖ್ಯ. 4 ವರ್ಷಗಳ ಅವಧಿಯಲ್ಲಿ ಹಲವು ಅಧಿಕಾರಿಗಳನ್ನು ನೋಡಿದ್ದೇನೆ. ಇಲಾಖೆಯ ವಿಚಾರದಲ್ಲಿ ಯಾವತ್ತೂ, ಯಾವ ಅಧಿಕಾರಿಯೊಂದಿಗೂ ಸಂಘರ್ಷದ ಹಾದಿ ತುಳಿದಿಲ್ಲ. ಸೌಹಾರ್ದಯುತವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. 

ನಿಮ್ಮ ಅಧಿಕಾರಾವಧಿಯಲ್ಲಿ ಸಾರ್ಥಕತೆ ತಂದ ಕಾರ್ಯಕ್ರಮಗಳು ಯಾವುವು?
      ಗುಟ್ಕಾ ನಿಷೇಧ ಮಾಡಿ ಸಮಾಜಕ್ಕೆ ಒಂದು ಕೆಲಸ ಮಾಡಿದೆ ಎಂಬ ಸಾರ್ಥಕತೆ ನನ್ನಲ್ಲಿದೆ. ನೆಲಮಂಗಲ ಸಮೀಪ ನಡೆದ ಅಪಘಾತ ಪ್ರಕರಣದ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಹರೀಶ್‌ ಸಾಂತ್ವನ ಯೋಜನೆ ಜಾರಿಗೆ ತಂದಿದ್ದು ಸಮಾಧಾನ ತಂದುಕೊಟ್ಟಿತು. ಪಾಸ್‌ಪೋರ್ಟ್‌ಗಿಂತ ಶೀಘ್ರವಾಗಿ ಪಡಿತರ ಕಾರ್ಡ್‌ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಗೆ ಮುಂದಾಗಿರುವುದು ತೃಪ್ತಿ ತಂದಿದೆ.

ಮಗಳನ್ನು ರಾಜಕೀಯಕ್ಕೆ ತರುವ ಉದ್ದೇಶವಿಲ್ಲ
        ನಮ್ಮದು ರಾಜಕೀಯ ಹಿನ್ನೆಲೆಯ ಕುಟುಂಬವಾದರೂ ನನ್ನ ತಂದೆ ನಂತರ ಐವರು ಸಹೋದರರ ಪೈಕಿ ನಾನೊಬ್ಬನೇ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ನನಗೆ ಒಬ್ಬ ಮಗಳಿದ್ದು ಆಕೆಯನ್ನು ರಾಜಕೀಯಕ್ಕೆ ಕರೆತರುವ ಉದ್ದೇಶವಿಲ್ಲ. ಎಲ್ಲವೂ ದೇವರ ಇಚ್ಛೆ.
- ಯು.ಟಿ.ಖಾದರ್‌ 
ಆಹಾರ, ನಾಗರಿಕ ಪೂರೈಕೆ ಸಚಿವ

ಸಂದರ್ಶನ: ರಫೀಕ್‌ ಅಹಮದ್‌

ಇಂದು ಹೆಚ್ಚು ಓದಿದ್ದು

Back to Top