CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸ್ಟಾರ್ಟಪ್‌ ಕೊಡುಗೆ ಈ ಕರಾವಳಿಗೆ

ಕೇಂದ್ರದ ಪ್ರಭಾವಿ ಸಚಿವರಲ್ಲಿ ನಿರ್ಮಲಾ ಸೀತಾರಾಮನ್‌ ಒಬ್ಬರು. ಬಿಜೆಪಿಯಲ್ಲಿ ರಾಷ್ಟ್ರೀಯ ವಕ್ತಾರೆಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಅವರಿಗೆ ಇದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದವರು. ನಿರ್ಮಲಾ ಅವರು ಸಿಂಡಿಕೇಟ್‌ ಬ್ಯಾಂಕ್‌ ಮಣಿಪಾಲದ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಲಕ್ಷ್ಮೀನಾರಾಯಣನ್‌ ಅವರ ಸಮೀಪದ ಬಂಧು. ಶುಕ್ರವಾರ ಹಲವು ಕಾರ್ಯಕ್ರಮಗಳಿಗೆ ಉಡುಪಿಗೆ ಆಗಮಿಸಿದ ಅವರು 'ಉದಯವಾಣಿ'ಗೆ ನೀಡಿದ ಸಂದರ್ಶನದ ಭಾಗ ಇಂತಿದೆ...

ಹೈನುಗಾರಿಕೆ ಅಭಿವೃದ್ಧಿಗೆ ಸಹಕಾರಿಯಾಗುವ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ?
ಕೃಷಿ ಸಚಿವಾಲಯದ ಅಧೀನದಲ್ಲಿ ಮೀನುಗಾರಿಕೆ ಇಲಾಖೆ ಬರುವುದರಿಂದ ಕೃಷಿ ಕ್ಷೇತ್ರಕ್ಕೆ ಇರುವ ಸವಲತ್ತುಗಳನ್ನು ಮೀನುಗಾರಿಕೆಗೂ ಕೊಡಿಸಲು ಪ್ರಯತ್ನಿಸುತ್ತೇವೆ. ಕುಮಟ ತದಡಿಯಲ್ಲಿ ಮೀನು ಸಂಸ್ಕರಣ ಘಟಕಕ್ಕೆ 5 ಕೋ.ರೂ. ಅನುದಾನ ಮಂಜೂರು ಮಾಡಿದ್ದು 2 ಕೋ.ರೂ. ಬಿಡುಗಡೆಯಾಗಿದೆ. ಇದೇ ರೀತಿ ಮಲ್ಪೆಯಲ್ಲಿಯೂ ಮಾಡುವುದಾದರೆ ಸಹಕಾರ ನೀಡಲಾಗುವುದು. ಮಂಜುಗಡ್ಡೆ ಉತ್ಪನ್ನಗಳು ಮತ್ತು ರೋಪ್‌, ಬಲೆ ಇತ್ಯಾದಿ ಉಪಕರಣಗಳಿಗೆ ಜಿಎಸ್‌ಟಿ ತೆರಿಗೆ ವಿನಾಯಿತಿ ಕೊಡಲು ಮನವಿ ಬಂದಿದ್ದು ಇದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಮೀನುಗಾರ ಮಹಿಳೆಯರಿಗೆ ಅನುಕೂಲವಾಗುವ ಮತ್ತು ತನ್ನ ಇಲಾಖೆ ವ್ಯಾಪ್ತಿಗೆ ಬರುವ ಯಾವುದೇ ಸವಲತ್ತುಗಳಿಗೆ ಸಂಬಂಧಿಸಿ ದಿಲ್ಲಿಗೆ ಬಂದರೆ ಅದಕ್ಕೆ ಅನುಕೂಲ ಮಾಡಿಕೊಡುತ್ತೇನೆ.

ಸ್ಟಾರ್ಟ್‌ಅಪ್‌ ಯೋಜನೆಗೆ ಮಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಇದರ ಕುರಿತಂತೆ ಹೆಚ್ಚಿನ ಪ್ರಗತಿ ಆದಂತಿಲ್ಲ...
ಇದು ಸರಕಾರದ ಯೋಜನೆಯಲ್ಲ. ನನ್ನ ಕಲ್ಪನೆಯ ಯೋಜನೆ. ನಾನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಕಾರಣ ಇಲ್ಲಿಗೇನಾದರೂ ಕೊಡುಗೆ ಸಲ್ಲಿಸಬೇಕೆಂಬ ಇರಾದೆಯಿಂದ ಇದನ್ನು ಆರಂಭಿಸಿದೆ. ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ತಲಾ ಹತ್ತು ಖಾಸಗಿ ಮತ್ತು ಸರಕಾರಿ ಶಾಲೆಗಳನ್ನು ಗುರುತಿಸಿ ಅಲ್ಲಿ ಟಿಂಕರಿಂಗ್‌ ಪ್ರಯೋಗಾಲಯವನ್ನು ಪ್ರಥಮ ಹಂತದಲ್ಲಿ ಆರಂಭಿಸಲಾಗುವುದು. ಆ ಶಾಲೆಗಳ ಅಕ್ಕಪಕ್ಕದ ಶಾಲಾ ವಿದ್ಯಾರ್ಥಿಗಳೂ ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದರ ಎರಡನೆಯ ಹಂತದಲ್ಲಿ ಐದು ಕಾಲೇಜುಗಳಲ್ಲಿ ಇದರ ಮುಂದುವರಿದ ಕೆಲಸ ನಡೆಯಬೇಕು. ಮೂರನೆಯ ಹಂತದಲ್ಲಿ ಇನ್ನೋವೇಶನ್‌ ಹಬ್‌ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಸುರತ್ಕಲ್‌ ಎನ್‌ಐಟಿಕೆ, ನಿಟ್ಟೆ ವಿ.ವಿ.ಯನ್ನು ಗುರುತಿಸಿದ್ದೆವು. ಇನ್ನೋವೇಶನ್‌ ಕೇಂದ್ರಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ, ಚೆನ್ನೈ ಐಐಟಿ ಸಂಯೋಜಿಸಬೇಕು. ಎರಡೂ ಸಂಸ್ಥೆಗಳವರು ಅವರು ಇಲ್ಲಿಗೆ, ಇವರು ಅಲ್ಲಿಗೆ ಭೇಟಿ ನೀಡಿ ವಿಚಾರ ವಿನಿಮಯ ಮಾಡಿಕೊಳ್ಳಬೇಕು. ಇದರ ಪೂರ್ವಭಾವಿ ಕೆಲಸ ಆರಂಭಗೊಂಡಿದೆ. ನಾನು ಇದನ್ನು ನಡೆಸುತ್ತಿದ್ದೇನೆ. ಇದರಲ್ಲಿ ಆರೋಗ್ಯ, ವಿಜ್ಞಾನ, ವಿದ್ಯುತ್‌ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಹೊಸ ಹೊಸ ಶೋಧನೆಗಳು ವಿದ್ಯಾರ್ಥಿಗಳಿಂದ ನಡೆಯುವಂತಿರಬೇಕು ಎನ್ನುವುದು ನನ್ನ ಆಶಯ. 

ಕರ್ನಾಟಕ ರಾಜ್ಯ ಮಳೆ ಇಲ್ಲದೆ ಬರಪೀಡಿತವಾಗಿರುವಾಗ ರೈತರಿಗೆ ಕೇಂದ್ರ ಸರಕಾರ ಯಾವ ರೀತಿಯಲ್ಲಿ ನೆರವಾಗುತ್ತದೆ? ಸಾಲ ಮನ್ನಾ ಮಾಡುತ್ತೀರಾ?
ಮೊನ್ನೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ರೈತರ ಸಾಲಗಳಿಗೆ ಸಬ್ಸಿಡಿ ನೀಡಲು ನಿರ್ಧಾರ ತಳೆಯಲಾಗಿದೆ. ಉದಾಹರಣೆಗೆ, ಶೇ.10 ಬಡ್ಡಿದರವಿದ್ದರೆ ಕೇಂದ್ರ ಸರಕಾರ ಶೇ.3 ಬಡ್ಡಿದರವನ್ನು ಸಬ್ಸಿಡಿಯಾಗಿ ನೀಡುತ್ತದೆ. ಸಾಲ ಮನ್ನಾ ಮಾಡುವ ನಿರ್ಧಾರವನ್ನು ರಾಜ್ಯ ಸರಕಾರಗಳೇ ತಳೆಯಬೇಕು, ಕೇಂದ್ರ ಸರಕಾರ ನೀಡಲು ಆಗುವುದಿಲ್ಲ.

ಅಡಿಕೆ, ತೆಂಗು ಬೆಂಬಲ ಬೆಲೆ ಕೊಡುತ್ತೀರೆಂದು ಹಿಂದೆ ಹೇಳಿದ್ದೀರಿ. ಅದು ಫ‌ಲಪ್ರದವಾಗಲಿಲ್ಲವಲ್ಲ?
ನಾನು ಬೆಂಬಲ ಬೆಲೆ ಎಂದು ಹೇಳಿರಲಿಲ್ಲ. ಅಡಿಕೆಗೆ ಸಂಬಂಧಿಸಿ ಅದು ಮಾರ್ಕೆಟ್‌ ಇಂಟರ್‌ವೆನ್‌ಶನ್‌ ಸ್ಕೀಮ್‌. ಇದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಕಾರದಿಂದ ಚಾಲ್ತಿಗೆ ಬರಬೇಕಿತ್ತು. ಅಡಿಕೆ ಸಂಸ್ಕರಣೆಯಾದ ಬಳಿಕ ಮಾರಾಟ ಮಾಡುವಾಗ ದರ ಕಡಿಮೆಯಾದರೆ ಅದರ ಅಂತರವನ್ನು ಭರಿಸಿಕೊಡುವ ಯೋಜನೆ. ಆದರೆ ರಾಜ್ಯ ಸರಕಾರದ ಸಹಕಾರ ಸರಿಯಾಗಿ ಸಿಗದೆ ಜಾರಿಗೊಳ್ಳಲಿಲ್ಲ. ಇದರ ಬಗ್ಗೆ ಅಡಿಕೆ ಬೆಳೆಗಾರರು ಮತ್ತೆ ನಮ್ಮನ್ನು ಸಂಪರ್ಕಿಸಿದಾಗ ಆಮದು ಮಾಡುವ ಅಡಿಕೆಗೆ ಭಾರೀ ಆಮದು ಸುಂಕವನ್ನು ಹೇರಿದೆವು. ಇಷ್ಟು ಸುಂಕವನ್ನು ಭರಿಸಿಕೊಂಡು ಆಮದು ಮಾಡುವುದು ಲಾಭಕರವಲ್ಲ. ಶ್ರೀಲಂಕಾಕ್ಕೆ ಭೇಟಿ ನೀಡಿದಾಗ ಅಲ್ಲಿನ ವಾಣಿಜ್ಯ ಸಚಿವರಲ್ಲಿ ಗುಣಮಟ್ಟದ್ದಲ್ಲದ ಉತ್ಪನ್ನವನ್ನು ಭಾರತಕ್ಕೆ ಕಳುಹಿಸಬೇಡಿ ಎಂದೂ ತಿಳಿಸಿದ್ದೆ. ತೆಂಗಿನ ಬೆಳೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಕೇರಳ, ತಮಿಳುನಾಡಿನವರು ತಿಳಿಸಿದ್ದರು. ಕರಾವಳಿಯಲ್ಲಿ ತೆಂಗಿನ ಬೆಳೆಗೆ ರೋಗ ಬಂದಿರುವುದಕ್ಕೆ ಪರಿಹಾರ ನೀಡಲು ಯಾವುದೇ ನಿಯೋಗ ಬರಲಿಲ್ಲ.

500 ರೂ. ಮುಖಬೆಲೆಯ ನೋಟುಗಳ ಮತ್ತೆ ನಿಷೇಧದ ಸುದ್ದಿ ಇದೆಯಲ್ಲ?
ಹಳೆಯ ನೋಟು ನಿಷೇಧದ ಬಳಿಕ ಹೊಸ ಕರೆನ್ಸಿ ನೋಟುಗಳನ್ನು ತರಲಾಗಿದೆ. ಕರೆನ್ಸಿ ನೋಟುಗಳ ಬದಲು ನಗದುರಹಿತ ವ್ಯಾಪಾರಕ್ಕೆ ಉತ್ತೇಜನ ಕೊಡಲಾಗುತ್ತಿದೆ. ಮತ್ತೆ ನಿಷೇಧ ಮಾಡುವ ಕುರಿತು ಚರ್ಚೆ ನಡೆದಿಲ್ಲ.

ಕಡಲಕೊರೆತ ಸಮಸ್ಯೆ ಕರಾವಳಿಯಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕೇಂದ್ರ ಸರಕಾರದ ಕ್ರಮಗಳೇನು?
ಭಾರತದ ಪಶ್ಚಿಮ ಮತ್ತು ಪೂರ್ವ ತೀರಗಳ ಮಹಾರಾಷ್ಟ್ರ, ಗೋವ, ಕರ್ನಾಟಕ, ಒಡಿಶಾ, ಪಶ್ಚಿಮಬಂಗಾಳ ಮೊದಲಾದ ರಾಜ್ಯಗಳಲ್ಲಿ ಕಡಲಕೊರೆತ ಸಮಸ್ಯೆಗಳಿವೆ. ಇದಕ್ಕೆ ಕೇಂದ್ರ ಸರಕಾರ ಉಪಗ್ರಹ ಆಧಾರಿತ ಇಮೇಜಿಂಗ್‌ ತಂತ್ರಜ್ಞಾನವನ್ನು ಅಳವಡಿಸಲು ಚಿಂತನೆ ನಡೆಸುತ್ತಿದೆ. ಇದರ ಬಗ್ಗೆ ಪೂರ್ವ ತಯಾರಿ ಕೆಲಸಗಳು ನಡೆಯುತ್ತಿವೆ. ಉಪಗ್ರಹ ಆಧಾರದಲ್ಲಿ ಮುಂಚಿತವಾಗಿ ತಿಳಿದು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ. 

ಮಂಗಳೂರಿನ ಎಸ್‌ಇಝಡ್‌ ಎರಡನೆಯ ಹಂತದ ಕೆಲಸ ಆಮೆಗತಿಯಲ್ಲಿದೆಯಲ್ಲ?
ಇದರ ಬಗ್ಗೆ ರಾಜ್ಯ ಸರಕಾರದೊಂದಿಗೆ ಮಾತನಾಡುತ್ತೇವೆ. 

ಮಂಗಳೂರಿನ ಸ್ಮಾರ್ಟ್‌ ಸಿಟಿ ಯೋಜನೆ ಅರ್ಧದಲ್ಲಿ ನಿಂತಂತಿದೆಯಲ್ಲ?
ಇದು ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ನಗರಾಭಿವೃದ್ಧಿ ಸಚಿವಾಲಯದ ಅಧೀನ ಬರುತ್ತದೆ. ನನಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. 

ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ 12 ವರ್ಷಗಳ ಹಿಂದೆ ಕೇಂದ್ರ ಸರಕಾರ ಅರ್ಧಾಂಶ ಅನುದಾನವನ್ನು ನೀಡಿತ್ತು. ಈ ಬಾರಿ ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ಪತ್ರವನ್ನು ಬರೆದಿದ್ದಾರಂತೆ...
ಈ ಕುರಿತು ಪ್ರಧಾನಿಯವರ ಬಳಿ ಮಾತನಾಡಿ ಹೆಚ್ಚಿನ ಅನುದಾನ ಕೊಡಿಸಲು ಯತ್ನಿಸುತ್ತೇನೆ.

ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವೆ
ಸಂದರ್ಶನ : ಮಟಪಾಡಿ ಕುಮಾರಸ್ವಾಮಿ

Back to Top