CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನೇಗಿಲಯೋಗಿಯ ಆತ್ಮಹತ್ಯೆಗೆ ಕೊನೆ ಎಂದು? 

ಬರಗಾಲದಿಂದ ಸುಮಾರು 32,000 ಕೋಟಿ ರೂ. ನಷ್ಟವಾಗಿದೆ ಎಂದು ವರದಿಗಳು ಹೇಳುತ್ತಿವೆ. ಸರಕಾರ ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಸಫ‌ಲತೆಯನ್ನು ಎಷ್ಟೋ ಹಳ್ಳಿಗಳಲ್ಲಿ ಇನ್ನೂ ಕಾಣಬೇಕಾಗಿದೆ.

ನಮ್ಮ ರಾಜ್ಯದಲ್ಲಿ ನೇಗಿಲ ಯೋಗಿಗಳು ನೇಣಿಗೆ ಬಲಿಯಾಗುವ ಸಂಖ್ಯೆ ಹೆಚ್ಚುತ್ತಿದೆ. ಮುದ್ರಣ ಮಾಧ್ಯಮದಲ್ಲಿ "ನೇಗಿಲ ಯೋಗಿಯ ಆತ್ಮಹತ್ಯೆ' ಎನ್ನುವ ಹೊಸ ಶೀರ್ಷಿಕೆ ಆರಂಭಿಸುವಷ್ಟು ಇಂಥ ಘಟನೆಗಳು ನಡೆಯುತ್ತಿವೆ. 
2016ರಲ್ಲಿ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ 1002ರನ್ನು ಮೀರಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. 2016ರಲ್ಲಿ ರೈತರ ಆತ್ಮಹತ್ಯೆ ಶೇ.40ರಷ್ಟು ಹೆಚ್ಚಾಗಿದೆ ಎಂದು ಹೊಸದಿಲ್ಲಿಯ National Crime Record Bureau ವರದಿ ಮಾಡಿದೆ. ಕರ್ನಾಟಕದಲ್ಲಿ ಪ್ರತಿ ತಿಂಗಳು ಸುಮಾರು 25 ರೈತರು ನೇಣಿಗೆ ಶರಣಾಗುತ್ತಾರೆಂದು ವರದಿಗಳು ಹೇಳುತ್ತಿವೆ. ರೈತರ ಆತ್ಮಹತ್ಯೆ ಪ್ರಕರಣಗಳು ದಶಕದಲ್ಲಿಯೇ ಅತ್ಯಧಿಕವಾಗಿದ್ದು, 2016ರಲ್ಲಿ 15 ದಿನಗಳಲ್ಲಿ 50 ಇಂಥ ಪ್ರಕರಣಗಳು ವರದಿಯಾಗಿದ್ದವು. ರೈತರ ಆತ್ಮಹತ್ಯೆ ವಿಷಯದಲ್ಲಿ ಪ್ರತಿ ರಾಜ್ಯವೂ ದಾಖಲೆ ಮುರಿಯುತ್ತಿದೆ. 

2015ರವರೆಗಿನ ಲಭ್ಯ ಇರುವ ಅಂಕಿಸಂಖ್ಯೆಗಳ ಪ್ರಕಾರ ಮಹಾರಾಷ್ಟ್ರ ರಾಜ್ಯ 4291 ಆತ್ಮಹತ್ಯೆಯ ಮೂಲಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕ 1569, ತೆಲಂಗಾಣ 1400, ಮಧ್ಯಪ್ರದೇಶ 1290, ಛತ್ತೀಸ್‌ಗಢ 954, ಆಂಧ್ರ 916 ಮತ್ತು ತಮಿಳುನಾಡಿನಲ್ಲಿ 506 ರೈತರು ಜೀವ ತೆತ್ತಿದ್ದಾರೆ. ಕೃಷಿ ಪ್ರಧಾನವಾದ ದೇಶದಲ್ಲಿ, ಮಾತೆತ್ತಿದರೆ ತಾವು ರೈತರ ಪರ ಎಂದು ಭಾಷಣ ಬಿಗಿಯುವ ರಾಜಕಾರಣಿಗಳಿಂದ ತುಂಬಿದ ದೇಶದಲ್ಲಿ, ರೈತರ ಹೆಸರಿನಲ್ಲಿ ಅಧಿಕಾರದ ಪ್ರಮಾಣ ವಚನ ಸ್ವೀಕರಿಸುವವರ ನಾಡಿನಲ್ಲಿ ಇದು ರೈತನ ಪಾಡು. ನಮ್ಮ ದೇಶದಲ್ಲಿ ಸುಮಾರು 162 ಮಿಲಿಯನ್‌ ಹೆಕ್ಟೇರ್‌ ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ಈ ಕೃಷಿ ಚಟುವಟಿಕೆ ಸದಾ ನಿಸರ್ಗದ ಕೃಪೆಯಲ್ಲಿ ಇರುತ್ತದೆ. ರೈತ ಒಂದು ವರ್ಷ ನೆರೆ ಹಾವಳಿಯಲ್ಲಿ ಕೊಚ್ಚಿ ಹೋದರೆ ಇನ್ನು ಮೂರು ವರ್ಷ ಬರಗಾಲದಲ್ಲಿ ಬೇಯುತ್ತಾನೆ. ಹಾಗೆಯೇ ಬೆಳೆ ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಇರುವುದಿಲ್ಲ ಮತ್ತು ಬೆಲೆ ಬಂದಾಗ ರೈತನ ಬಳಿ ಬೆಳೆಯೇ ಇರುವುದಿಲ್ಲ. ಬಹುತೇಕ ರೈತರಿಗೆ ಮೇಟಿ ವಿದ್ಯೆಯನ್ನು ಬಿಟ್ಟು ಬೇರೆ ಉದ್ಯೋಗ ಬಾರದು. ಈ ಸಂದಿಗ್ಧದಲ್ಲಿ ದೇಶಕ್ಕೆ ಅನ್ನ ನೀಡುವ ರೈತರಿಗೆ ಸರಕಾರದ ಸಹಾಯ ಅಗತ್ಯವಾಗಿರುತ್ತದೆ. 

ರೈತರ ಸಮಸ್ಯೆ ಇರುವುದು, ಅವರು ಕೃಷಿಗಾಗಿ ಮಾಡಿದ ಸಾಲದಲ್ಲಿ ಮತ್ತು ಅದನ್ನು ಮರುಪಾವತಿ ಮಾಡುವಂತೆ ಅವರನ್ನು ಒತ್ತಾಯಿಸುವುದರಲ್ಲಿ. ಯಾವುದೇ ನೈಸರ್ಗಿಕ ವಿಪತ್ತುಗಳಿಲ್ಲದೆ, ಕಾಲಕಾಲಕ್ಕೆ ಮಳೆಯಾಗಿ ಬೆಳೆ ಸರಿಯಾಗಿ ಬಂದು, ಅದಕ್ಕೆ ಸರಿಯಾದ ಬೆಲೆಯೂ ಲಭಿಸಿದರೆ ಸಾಲ ತೀರಿಸುವವರಲ್ಲಿ ರೈತರು ಯಾವಾಗಲೂ ಮುಂದೆ ಹಾಗೂ ಅವರಲ್ಲಿ, ಆ ನೈತಿಕ ಬದ್ಧತೆ ಇದೆ. ಬೆಳೆ ಚೆನ್ನಾಗಿ ಬಂದಲ್ಲಿ ಮೊತ್ತಮೊದಲಾಗಿ ಸಾಲ ತೀರಿಸಬೇಕೆಂಬ ಉದ್ದೇಶವೂ ಅವರಲ್ಲಿದೆ. ಬರಗಾಲ, ಬೆಳೆ ವೈಫ‌ಲ್ಯ, ಬ್ಯಾಂಕ್‌ ಸಾಲ, ನೀರಾವರಿ ವೈಫ‌ಲ್ಯ ಇತ್ಯಾದಿಗಳಿಂದ ಅನ್ನದಾತನ ಬದುಕು ಹೈರಾಣಾದಾಗ ಆತನಿಗೆ ಸಾಲ ಮನ್ನಾದಂಥ ಆರ್ಥಿಕ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ. ಆದರೆ, ಇಂದು ಕರ್ನಾಟಕ ಸರ್ಕಾರ ರೈತ ಪೂರ್ಣ ಸಾಲ ಮರುಪಾವತಿ ಮಾಡಿದರೆ ಬಡ್ಡಿ ಮನ್ನಾ ಮಾಡುವುದಾಗಿ ಹೇಳುತ್ತಿದೆ. ಸಾಲ ಮರುಪಾವತಿ ಮಾಡುವ ಶಕ್ತಿ ಇದ್ದರೆ, ರೈತ ಜುಜುಬಿ ಬಡ್ಡಿ ಮನ್ನಾಗೆ ಬಾಯಿ ಬಿಡುವನೇ ಎನ್ನುವ ಸಾಮಾನ್ಯ ತಿಳುವಳಿಕೆ ಸರಕಾರಕ್ಕೆ ಇಲ್ಲದಿರುವುದು ವಿಷಾದನೀಯ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು, ಅಧಿಕಾರದ ಗದ್ದುಗೆ ಏರಿ ವಾರದಲ್ಲೇ 2.25 ಕೋಟಿ ರೈತರ 36,359 ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಪ್ರತಿಯೊಬ್ಬ ರೈತನ ಗರಿಷ್ಟ 1 ಲಕ್ಷ ರೂ. ಸಾಲ ಮನ್ನಾ ಆಗಿದ್ದು, ಇದು ಉತ್ತರಪ್ರದೇಶ ರಾಜ್ಯದ ಒಟ್ಟು ಉತ್ಪನ್ನದ ಶೇ.2.65 ಎಂದು ಹೇಳಲಾಗುತ್ತಿದೆ. ಉತ್ತರಪ್ರದೇಶ ರಾಜ್ಯದಲ್ಲಿ ಇದು ಸಾಧ್ಯವಾದರೆ, ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ? ಸದ್ಯದಲ್ಲಿ ಪಂಜಾಬ್‌ ಮತ್ತು ಮಹಾರಾಷ್ಟ್ರಗಳು ಕೂಡ ಈ ಹಾದಿಯಲ್ಲಿ ನಡೆಯುವ ಸಾಧ್ಯತೆ ಇದೆ. ಕೇಂದ್ರ ಸರಕಾರ ಅರ್ಧ ಸಾಲ ಮನ್ನಾ ಮಾಡಲಿ; 

ಆ ರಾಜ್ಯ ಮೊದಲು ಮುಂದೆ ಬರಲಿ, ಈ ರಾಜ್ಯ ಮೊದಲು ಕೊಡಲಿ ಎನ್ನುವ ಬೂಟಾಟಿಕೆ ಏಕೆ? ಕನಿಷ್ಟ ಅರ್ಧ 
ಸಾಲವನ್ನಾದರೂ ಕೂಡಲೇ ಮನ್ನಾ ಮಾಡಿ, ಚೆಂಡನ್ನು ಕೇಂದ್ರ ಸರಕಾರದ ಅಂಗಳಕ್ಕೆ ನೂಕಲಿ. ಈ ದೇಶದಲ್ಲಿ ಉದ್ಯಮಿಗಳ, ಉಳ್ಳವರ ಮತ್ತು ಪ್ರಭಾವಿಗಳ ಸಾಲ ಮನ್ನಾ ಮಾಡುವಾಗ ತೋರಿಸುವ ಧಾರಾಳತನ, ಬಡ ಬೋರೇಗೌಡನ ಮತ್ತು ಅನ್ನದಾತನ ಸಾಲ ಮನ್ನಾ ಮಾಡುವಾಗ ಕಾಣುವುದಿಲ್ಲ. ವಿತ್ತೀಯ ಕೊರತೆ, ಹಣದುಬ್ಬರ ಮತ್ತು ಖಾಲಿ ಖಜಾನೆ ಬಗೆಗೆ ಕೊರೆಯುತ್ತಾರೆ. ಗದ್ದುಗೆ ಏರುವವರೆಗೆ ರೈತನ ಬಗೆಗೆ ಕಾಳಜಿ ಮತ್ತು ಅನುಕಂಪ ತೋರಿಸುವವರು, ಒಮ್ಮೆ ಏರಿದ ಅನಂತರ ತಮ್ಮ ರಾಗ ಮತ್ತು ತಾಳವನ್ನು ಬದಲಿಸುತ್ತಾರೆ. 

ವಿಚಿತ್ರವೆಂದರೆ ಸಾಲ ಮನ್ನಾ ವಿಚಾರದಲ್ಲಿ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಊರ್ಜಿತ್‌ ಪಟೇಲ್‌, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಚೇರ್‌ಮನ್‌ ಅರುಂಧತಿ ಭಟ್ಟಾಚಾರ್ಯ ಮತ್ತು ನಬಾರ್ಡ್‌ ಬ್ಯಾಂಕ್‌ ಮುಖ್ಯಸ್ಥರು ಭಿನ್ನ ರಾಗ ಹಾಡಿದ್ದಾರೆ. ಇದೊಂದು ಬ್ಯಾಡ್‌ ಐಡಿಯಾ, ಹಣದುಬ್ಬರವನ್ನು ಹೆಚ್ಚಿಸುತ್ತದೆ, ಸಾಲ ಮರುಪಾವತಿ ಸಂಸ್ಕೃತಿ ಹಳಿ ತಪ್ಪುತ್ತದೆ ಮತ್ತು ಆರ್ಥಿಕ ಶಿಸ್ತು ಕೆಡುತ್ತದೆ ಮುಂತಾಗಿ ಎಚ್ಚರಿಸಿದ್ದಾರೆ. ದೇಶದ ಆರ್ಥಿಕ ಆರೋಗ್ಯ ಮತ್ತು ಸಾಲಮರುಪಾವತಿ ಶಿಸ್ತಿನ ಮೇಲೆ ಇರುವ ಇವರ ಕಾಳಜಿ ಮೆಚ್ಚಬೇಕಾದ್ದೇ; ಆದರೆ, ಕಾರ್ಪೊರೇಟ್‌ ವಲಯದಲ್ಲಿನ ಸುಮಾರು 2.50 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಬೇಕಾದರೆ, ಈ ಕಾಳಜಿ ಏಕೆ ವ್ಯಕ್ತವಾಗಿಲ್ಲ ಎನ್ನುವುದು ವಿಶೇಷ. ಆರ್ಥಿಕ ಸಂಕಷ್ಟದಲ್ಲಿರುವ ರೈತನಿಗೆ ಸಾಲ ಮನ್ನಾದ ಭಾಗ್ಯ ಏಕಿಲ್ಲ? ರೈತನ ಗತಿ ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಂತಾಗಿದೆ. 

ಬರಗಾಲದಿಂದ ಸುಮಾರು 32,000 ಕೋಟಿ ರೂ. ನಷ್ಟವಾಗಿದೆ ಎಂದು ವರದಿಗಳು ಹೇಳುತ್ತಿವೆ. ಮುದ್ರಣ ಮಾಧ್ಯಮಗಳು ಇದರ ಬಗೆಗೆ ತಿಂಗಳುಗಳಿಂದ ಪುಟಗಟ್ಟಲೆ ಬರೆಯುತ್ತಿವೆ. ಸರಕಾರ ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಸಫ‌ಲತೆಯನ್ನು ಎಷ್ಟೋ ಹಳ್ಳಿಗಳಲ್ಲಿ ಇನ್ನೂ ಕಾಣಬೇಕಾಗಿದೆ. ಆತ್ಮಹತ್ಯೆಗಳು ಮುಂದುವರಿಯುತ್ತಲೇ ಇವೆ. ನೀರು ಮತ್ತು ಮೇವಿನ ಕೊರತೆಯಿಂದ ಜಾನುವಾರುಗಳು ಸಾಯುತ್ತಲೇ ಇವೆ. ಪ್ರಧಾನಮಂತ್ರಿಗಳ ಫ‌ಸಲು ವಿಮಾ ಯೋಜನೆ ಭಾರೀ ಪ್ರಚಾರದ ಹೊರತಾಗಿಯೂ ವಾಸ್ತವದಲ್ಲಿ ಶೇ.20ಕ್ಕಿಂತ ಕಡಿಮೆ ಪ್ರದೇಶಗಳಿಗೆ ಮಾತ್ರ ತಲುಪಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಪಕ್ಷ ಭೇದ ಮರೆತು ಕಾರ್ಯ ನಿರ್ವಹಿಸಬೇಕಾದ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು, ಇಲ್ಲಿಯೂ ಬರಗಾಲದ ಹೆಸರಿನಲ್ಲಿ ರಾಜಕೀಯ ಮಾಡುವುದು ವಿಷಾದನೀಯ. ರಾಜ್ಯಾದ್ಯಂತ ಪ್ರವಾಸ ಮಾಡಿ ಬರಗಾಲದ ಸಮೀಕ್ಷೆ ಮಾಡುತ್ತಾರೋ ಅಥವಾ ಈ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಬರುತ್ತಿರುವ ಚುನಾವಣೆಗೆ ಅಗೋಚರ ಪ್ರಚಾರ ಮಾಡುತ್ತಾರೋ ತಿಳಿಯದು. ಅವರು ಸಮೀಕ್ಷೆ ಮುಗಿಸಿ ವರದಿ ಕೊಡುವ ಹೊತ್ತಿಗೆ ಮುಂಗಾರು ಆರಂಭವಾಗಿ ಬರಗಾಲದ ಪರಿಣಾಮ ನಶಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಅನ್ನದಾತ ಸುಖೀಯಾಗಿದ್ದರೆ, ದೇಶ ಸಮೃದ್ಧಿಯಾಗುತ್ತದೆ. ಕೃಷಿ ಪ್ರಧಾನವಾದ ದೇಶದಲ್ಲಿ ಈ "ಬೆನ್ನೆಲುಬನ್ನು' ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಿಸರ್ಗದ ಮುನಿಸಿನಂತೆ ರೈತನ ಮುನಿಸೂ ಗಂಭೀರವಾಗಿದ್ದು, ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾಗಿದೆ. 

ಎ.ಬಿ. ಶೆಟ್ಟಿ, ಬೆಂಗಳೂರು

Back to Top