CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಮ್ಮ ನಗರಗಳು ನಡೆಯುವ ಕಾಲ ಮುಗಿದಿದೆ!

ನಲವತ್ತು ವರ್ಷದ ಹಿಂದೆ ನಮ್ಮ ನಗರಗಳು ನಡೆಯುತ್ತಿದ್ದವು. ಮೂವತ್ತು ವರ್ಷದ ಹಿಂದೆ ಅವು ನಿಧಾನವಾಗಿ ತೆವಳಲು ಆರಂಭಿಸಿದವು. ಈಗ ಅಕ್ಷರಶಃ ನಡೆದಂತೆ ತೋರುವ ಸ್ಥಿತಿಯಲ್ಲಿವೆ. ಇನ್ನು ಐದಾರು ವರ್ಷಗಳಲ್ಲಿ ನಮ್ಮ ನಗರಗಳು ನಿಲ್ಲುತ್ತವೆ!

ಜಿಎಸ್‌ಟಿಯಿಂದ ವಾಹನಗಳ ಬೆಲೆ ಒಂದಿಷ್ಟು ಇಳಿದಿದೆ. ಇದು ನಗರಗಳಲ್ಲಿರುವ ಮೇಲ್ಮಧ್ಯಮ ವರ್ಗಕ್ಕೆ ಖುಷಿಯನ್ನು ನೀಡಬಹುದು. ಅದರ ಪರಿಣಾಮವೆಂದರೆ ಇನ್ನು ಸ್ವಲ್ಪ ದಿನದಲ್ಲಿ ಒಂದಿಷ್ಟು ಸಾವಿರ ವಾಹನಗಳು ರಸ್ತೆಗಿಳಿಯುತ್ತವೆ. ಅಂದರೆ ನಮ್ಮ ರಸ್ತೆಯ ಚಲನಶೀಲ ಸಾಮರ್ಥ್ಯವನ್ನು ಮತ್ತಷ್ಟು ನಿಧಾನಗೊಳಿಸಲಾಗುತ್ತದೆ. 

ಅಂದ ಹಾಗೆ ನಮ್ಮ ನಗರಗಳ ರಸ್ತೆಗಳು ಜೀವಂತವಾಗಿವೆಯೆಂದು ನಾವಂದುಕೊಂಡಿದ್ದೇವೆ. ಆದರೆ ವಾಸ್ತವ ಹಾಗಲ್ಲ. ಬಹುತೇಕ ರಸ್ತೆಗಳು ನಡೆಯುತ್ತಿಲ್ಲ; ಬದಲಾಗಿ ನಿಂತಿವೆ. ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ನಗರಗಳೇ ನಿಂತು ಬಿಡುತ್ತವೆ, ಚಲಿಸುವುದಿಲ್ಲ. ಅಂತಹ ಸ್ಥಿತಿ ನಿರ್ಮಾಣವಾಗುತ್ತಿರುವುದು ಎರಡು ಕಡೆಯಿಂದ. ಮೊದಲನೆಯದಾಗಿ, ಆಳುವವರಿಗೆ ನಗರಗಳಿಗೆ ಏನು ಬೇಕೆಂಬುದು ತಿಳಿಯದಿರುವುದು; ಎರಡನೆಯದಾಗಿ ನಾಗರಿಕರಾದ ನಮಗೆ ಎಲ್ಲದಕ್ಕೂ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವ ಮನೋಭಾವ. ಇವೆರಡರಿಂದಲೂ ಸುಸ್ಥಿರ ಸಮಾಜದ ಅಥವಾ ದೇಶದ ಕಲ್ಪನೆಗೆ ದೊಡ್ಡ ಅಪಚಾರವಾಗುತ್ತಿರುವುದು ಸುಳ್ಳಲ್ಲ. ಆದ ಕಾರಣವೇ ನಮ್ಮ ನಗರಗಳೆಲ್ಲ ಚಲನಶೀಲತೆ ಕಳೆದುಕೊಳ್ಳುತ್ತಿರುವುದು. ಇಂದು ನೀವು ಯಾವುದೇ ನಗರವನ್ನು ಹುಡುಕಿಕೊಂಡು ಹೋಗಬೇಕಿಲ್ಲ. ನಿಮ್ಮ ಊರೇ ಎಂದರೆ ಹಿಂದೆ ಹಳ್ಳಿಯೆಂದುಕೊಂಡಿದ್ದು ಇಂದಿನ ಪಟ್ಟಣ. ಅಲ್ಲಿ ಕಾಣುತ್ತಿರುವುದು ನಮ್ಮ ಮಹಾನಗರಗಳಲ್ಲಿನ ಅವ್ಯವಸ್ಥೆಯನ್ನೇ. ಯಾಕೆ ಈ ಪದವನ್ನು ಪ್ರಯೋಗಿಸುತ್ತಿದ್ದೇನೆ ಎಂದರೆ, ಅದಕ್ಕೆ ಸ್ಪಷ್ಟ ಕಾರಣವಿದೆ. ಸಾಮಾನ್ಯವಾಗಿ ನಗರವೆಂದರೆ ಜಾಗತಿಕವಾಗಿಯೂ ಗುರುತಿಸುವುದು ಅದರ ಅವ್ಯವಸ್ಥೆಗಳಿಂದಲೇ. ನೆಗೆಟಿವ್‌ (ನೇತ್ಯಾತ್ಮಕ) ನೆಲೆಯಿಂದಲೇ ಸದಾ ನೆನಪಿನಲ್ಲಿಟ್ಟುಕೊಳ್ಳುವ ಪದ್ಧತಿ ಎಲ್ಲೆಡೆಯೂ ಇದೆ. ನಮ್ಮ ನಗರ ಬೆಳೆದುಕೊಂಡಿರುವ ಪರಿ ಅದು. ಯದ್ವಾತದ್ವಾ, ಗೊತ್ತುಗುರಿಯಿಲ್ಲದೇ, ಹೇಗೆಂದರೆ ಹಾಗೆ ಬೆಳೆಯುವುದು ಸ್ವಾತಂತ್ರ್ಯದ ಲಕ್ಷಣವಲ್ಲ; ಬದಲಾಗಿ ಅವ್ಯವಸ್ಥೆಯ ಗುಣ ಲಕ್ಷಣವೆಂಬುದನ್ನು ಹೇಳಬೇಕಿಲ್ಲ.   

ಬಜಪೆಯಿಂದ ಹಿಡಿದು ಕಲಬುರ್ಗಿಯ ಯಾವುದೇ ಒಂದು ಹಳ್ಳಿಗೆ ಹೋದರೂ, ಗ್ರಾಮ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಹಾಗೂ ಜಿಲ್ಲಾ ಪಂಚಾಯತಿಗಳು ಮಹಾನಗರಪಾಲಿಕೆ, ನಗರಸಭೆ ಮಾಡುತ್ತಿರುವ ಕೆಲಸವನ್ನೇ ಮಾಡುತ್ತಿವೆ. ಅಂದರೆ, ತಮ್ಮ ಊರಿನಲ್ಲಿ ಹೆಚ್ಚುತ್ತಿರುವ ವಾಹನಗಳಿಂದ ಉಂಟಾಗುತ್ತಿರುವ ಸಮಸ್ಯೆಗೆ ಪರಿಹಾರ ಹುಡುಕುವುದು ಹೇಗೆ ಎನ್ನುವುದು ಮೊದಲ ಚಿಂತೆ. ಎರಡನೆಯದು ತ್ಯಾಜ್ಯ ವಿಲೇವಾರಿಗೆ ಏನು ಮಾಡಬೇಕು ಎಂಬುದು. ನಗರೀಕರಣದ ಎರಡು ಮೂಲ ಸಮಸ್ಯೆಗಳಿವು. 

ಏನಾಗುತ್ತಿದೆ ನಮ್ಮ ಹಳ್ಳಿ, ನಗರಗಳಿಗೆ?: ಇಂಥದೊಂದು ಪ್ರಶ್ನೆಯನ್ನು ಕೇಳಿಕೊಳ್ಳುತ್ತಲೇ ನಾಗರಿಕರಾದ ನಾವು ಮತ್ತು ನಮ್ಮನ್ನಾಳುವ ಸರಕಾರಗಳು ಅಥವಾ ಆಡಳಿತ ವ್ಯವಸ್ಥೆ ನಾವು ಬಂದ ಹಾದಿಯನ್ನೇ ತಿರುಗಿ ನೋಡಬೇಕಿದೆ. ಆಗ ನಾವು ಮಾಡಿದ ತಪ್ಪುಗಳು ಅರಿವಾಗುತ್ತವೆ. ಚಿಕ್ಕಂದಿನಲ್ಲಿ ದೈಹಿಕ ಶಿಕ್ಷಣ ಪೀರಿಯೆಡ್‌ (ಪಿಟಿ) ನಲ್ಲಿ, ನಮ್ಮನ್ನೆಲ್ಲ ಐದು ಸಾಲಾಗಿ ನಿಲ್ಲಿಸುತ್ತಿದ್ದರು. ಪ್ರತಿ ಸಾಲಿನಲ್ಲೂ ಮೂರ್‍ನಾಲ್ಕು ಜನ ಸಾಲಿಗೆ ಸ್ವಲ್ಪ ಅಡ್ಡವಾಗಿಯೇ ಇರುತ್ತಿದ್ದರು. ಆಗ ಮೇಸ್ಟ್ರೆ ಮುಂದಿನ ವ್ಯಾಯಾಮ/ಕಸರತ್ತಿಗೆ ಹೋಗುವ ಮುನ್ನ ಮಾಡುತ್ತಿದ್ದ ಮೊದಲ ಕೆಲಸವೆಂದರೆ, ಅಂಚುಪಟ್ಟಿಯನ್ನು (ಸ್ಕೇಲ್‌) ಹಿಡಿದು ಸಾಲನ್ನು ನೇರವಾಗಿಸುವುದು. ಅದಾದ ಮೇಲೆ ಉಳಿದದ್ದು. ಆಗ ಇಡೀ ಸಾಲಿನ ತುದಿಯ ಬಳಿಯೂ ಹೋಗಿ, ಅಂಕುಡೊಂಕಾಗಿ ನಿಂತವರನ್ನು ನೇರಗೊಳಿಸಿಕೊಂಡು ಬರುತ್ತಿದ್ದರು. ಅಂಥದೊಂದು ಪ್ರಕ್ರಿಯೆ ನಾವೂ ಆರಂಭಿಸಬೇಕಾಗಿದೆ.

ಸುಸ್ಥಿರತೆ ಎಂದರೆ ಏನರ್ಥ?: ಇಡೀ ಜಗತ್ತಿನ ಚಿಂತನೆ ನಡೆದಿರುವುದು ಸುಸ್ಥಿರ ಬದುಕಿನತ್ತ. ಇದು ಯಾವುದೋ ಒಂದು ವಿಭಾಗ ಅಥವಾ ವಲಯದಲ್ಲಲ್ಲ. ಕೇವಲ ಆಹಾರಕ್ಕೆ ಸಂಬಂಧಿಸಿದಂತೆ ಸುಸ್ಥಿರದ ಜಪ ಮಾಡುತ್ತಿಲ್ಲ. ಇಡೀ ಬದುಕೇ ಸುಸ್ಥಿರತೆಯತ್ತ ಮುಖ ಮಾಡಬೇಕೆಂಬ ಆದರ್ಶವನ್ನು ಸಾಧ್ಯವಾಗಿಸಲು ಹೊರಟ ಹೊತ್ತಿದು. ಹಾಗಾಗಿಯೇ ಎಲ್ಲ ರಾಷ್ಟ್ರಗಳೂ (ಅಭಿವೃದ್ಧಿ ಹೊಂದಿದವು) ಸುಸ್ಥಿರ ಪರಿಸರ, ಸುಸ್ಥಿರ ಕೃಷಿ, ಸುಸ್ಥಿರ ಸಾರಿಗೆ-ಹೀಗೆ ಎಲ್ಲವನ್ನೂ ಸುಧಾರಣೆ (ರಿಫೈನ್‌) ಮಾಡುವತ್ತ ಹೊರಟಿವೆ. ಇದೇ ದೃಷ್ಟಿಯಲ್ಲಿ ನಾವು ನಮ್ಮ ನಗರ ವ್ಯವಸ್ಥೆಯನ್ನೂ ಸುಸ್ಥಿರದತ್ತ ಕರೆದೊಯ್ಯಲು ಇದು ಸಕಾಲ. 

ನಾವು ಎಡವಿದ್ದು ಅಥವಾ ಎಡವುತ್ತಿರುವುದು ಎಲ್ಲಿ?: ಅಭಿವೃದ್ಧಿಯ ಮತ್ತು ಮೂಲ ಸೌಲಭ್ಯಗಳ ಒದಗಿಸುವಿಕೆಯ ಪರಿಕಲ್ಪನೆಯಲ್ಲೇ ದೋಷವಿರುವುದು ಸ್ಪಷ್ಟ. ಬೆಂಗಳೂರಿನಲ್ಲಿ ವಾಹನಗಳ ಸಂತೆ ನೋಡಿದರೆ ಅರಿವಾಗಬಹುದು. 1976ರಲ್ಲಿ ಒಟ್ಟೂ ಬೆಂಗಳೂರಿನ ಜನಸಂಖ್ಯೆ ಸುಮಾರು 16 ಲಕ್ಷವಿತ್ತು. ಅದಕ್ಕೆ ಪೂರಕವಾಗಿ ಇದ್ದ ವಾಹನಗಳ ಸಂಖ್ಯೆ ಸುಮಾರು ಒಂದು ಲಕ್ಷ. ಇದು ಅನಂತರದ ಮೂವತ್ತು ವರ್ಷಗಳಲ್ಲಿ ಅಂದರೆ 1996ರವರೆಗೂ ವಾಹನಗಳ ಸಂಖ್ಯೆ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೂ ಈ ಅವಧಿಯಲ್ಲಿ ಇದ್ದ ವಾಹನಗಳ ಸಂಖ್ಯೆ 9.50 ಲಕ್ಷ. ಆದರೆ, 1996ರಿಂದ 2006 ಹಾಗೂ ಅಲ್ಲಿಂದ 2016ಕ್ಕೆ ಆಗಿರುವ ಏರಿಕೆ ಕಂಡರೆ ಬೆಚ್ಚಿ ಬೀಳುವುದು ಖಚಿತ. 1996ರಿಂದ 2016ಕ್ಕೆ ವಾಹನ ಸಂಖ್ಯೆ 67 ಲಕ್ಷದ ಹತ್ತಿರ ಬಂದು ನಿಂತಿದೆ. ಈ ಪೈಕಿ ಸುಮಾರು 46 ಲಕ್ಷ ದ್ವಿಚಕ್ರವಾಹನಗಳಿದ್ದರೆ, 13 ಲಕ್ಷ ಕಾರುಗಳಿವೆ. 1.71 ಲಕ್ಷ ಆಟೋಗಳಿದ್ದರೆ, ಉಳಿದವು ಇತರ ವಾಹನಗಳು.

ಈ 40 ವರ್ಷಗಳಲ್ಲಿ ವಾಹನಗಳ ಸಂಖ್ಯೆಗೆ ಯಾವುದೇ ಮಿತಿ ಹಾಕಲಿಲ್ಲ. ಒಬ್ಬೊಬ್ಬರ ಮನೆಯಲ್ಲಿ ಇರುವ ಎಲ್ಲ ಸದಸ್ಯರಿಗೂ ಒಂದೊಂದು ದ್ವಿಚಕ್ರ ವಾಹನ, ಒಟ್ಟೂ ಕುಟುಂಬಕ್ಕೆ ಒಂದು ಅಥವಾ ಎರಡು ಕಾರುಗಳಿವೆ. ಮೂವತ್ತು-ನಲವತ್ತರ ನಿವೇಶನದಲ್ಲಿ ವಾಹನಗಳ ನಿಲುಗಡೆಗೆ ಇಟ್ಟ ಜಾಗ ಸಾಕಾಗದೇ ಅವುಗಳೆಲ್ಲವೂ ರಸ್ತೆಯಲ್ಲಿ ನಿತ್ಯವೂ ನಿಲುಗಡೆಯಾಗುತ್ತಿವೆ. ಯಾವುದೇ ವಸತಿ ಬಡಾವಣೆಗೆ ಹೋದರೆ, ನಿಮಗೆ ವಾಹನಗಳ ನಿಲುಗಡೆ ಕಂಡುಬರುವುದು ರಸ್ತೆಯಲ್ಲೇ ಹೊರತು ಮನೆಯ ಗೇಟಿನ ಒಳಭಾಗದಲ್ಲಲ್ಲ. ಇಂಥದ್ದರ ಬಗ್ಗೆ ಆಳುವವರು ತಲೆ ಕೆಡಿಸಿಕೊಳ್ಳಲಿಲ್ಲ. ಇವತ್ತು ಎಂಥ ಸ್ಥಿತಿ ಬಂದಿದೆಯೆಂದರೆ, ಇನ್ನು ಐದು ವರ್ಷಗಳಲ್ಲಿ ಬೆಂಗಳೂರಿನ ರಸ್ತೆ ತುಂಬಾ ವಾಹನಗಳೇ ತುಂಬಿಕೊಂಡಿರುತ್ತವೆ; ಮತ್ತೇನೂ ಅಲ್ಲ. ಆಗ ನಿತ್ಯವೂ ಟ್ರಾಫಿಕ್‌ ಜಾಮ್‌ನಲ್ಲೇ ಕಾಲ ಕಳೆಯಬೇಕು. ಒಂದು ಇಂಚು ಕ್ರಮಿಸುವುದಕ್ಕೂ ಗಂಟೆಗಟ್ಟಲೆ ಹಿಡಿಯುತ್ತದೆ. ನಡೆದು ಹೋಗುವ ಎಂದರೆ, ಫ‌ುಟ್‌ಪಾತ್‌ ಇಲ್ಲ, ವಾಹನಗಳ ಸಂದಿಗಳಲ್ಲಿ ಓಡುವುದೇ ಕಷ್ಟ. ಒಂದು ಬಗೆಯಲ್ಲಿ ನಾವೇ ನಿರ್ಮಿಸಿದ ಸುಂದರ ಪಂಜರದಲ್ಲಿ ಬಂಧಿಯಾಗಿಬಿಟ್ಟಿರುತ್ತೇವೆ. ಯಾಕೆಂದರೆ, 2005ರಲ್ಲಿ ಬೆಂಗಳೂರಿನ ರಸ್ತೆಯಲ್ಲಿ ಗಂಟೆಗೆ 35 ಕಿ.ಮೀ. ವೇಗದಲ್ಲಿ ಹೋಗಬಹುದಿತ್ತಂತೆ. ಅದೀಗ 25 ಕಿ.ಮೀ.ಗೆ ಇಳಿದಿದೆ. ಮುಂದೆ ಹತ್ತು ಕಿ.ಮೀ. ವೇಗಕ್ಕೆ ಕುಸಿದರೆ, ನಡೆದು ಹೋಗುವುದಕ್ಕೂ ವಾಹನದಲ್ಲಿ ಹೋಗುವುದಕ್ಕೂ ಯಾವುದೇ ವ್ಯತ್ಯಾಸವಿರದು. ಇದರೊಂದಿಗೆ ಹೆಚ್ಚಿರುವ ವಾಹನಗಳ ಸಂಖ್ಯೆ, ಅವುಗಳಿಂದಾಗುತ್ತಿರುವ ಟ್ರಾಫಿಕ್‌ ಜಾಮ್‌, ಇಂಧನ ಅಪವ್ಯಯ, ಪರಿಸರ ಮಾಲಿನ್ಯ-ಇವುಗಳೆಲ್ಲವನ್ನೂ ಬೇರೆಯೇ ಚರ್ಚಿಸಬೇಕು. 

ಇದಕ್ಕೆ ಬಹಳ ಚೊಕ್ಕವಾಗಿ ತೋರುವ ಉಪಮೆಯೆಂದರೆ ಪುರಿಯ ಜಗನ್ನಾಥನ ರಥಯಾತ್ರೆ. ಈ ರಥಯಾತ್ರೆಯ ವೈಭವವನ್ನು ಇಲ್ಲಿ ಯಾವುದೇ ಅವ್ಯವಸ್ಥೆಗೆ ಹೋಲಿಸುತ್ತಿಲ್ಲ. ಆದರೆ, ಕೇವಲ ನಮ್ಮ ನಗರ ಹೇಗೆ ನಿಂತುಕೊಳ್ಳಬಹುದು ಅಥವಾ ಮುಂದಿನ ಐದು ವರ್ಷಗಳಲ್ಲಿ ರಸ್ತೆಗಳ ತುಂಬೆಲ್ಲ ವಾಹನಗಳು ತುಂಬಿಕೊಂಡರೆ ಒಟ್ಟೂ ಚಿತ್ರಣ ಹೇಗಿರಬಹುದೆಂಬುದಕ್ಕೆ ಹೋಲಿಸುತ್ತಿದ್ದೇನೆ ಅಷ್ಟೇ.
ಜಗನ್ನಾಥನ ಜನಪ್ರಿಯ ರಥಯಾತ್ರೆಗೆ ಸೇರುವ ಜನಸಂಖ್ಯೆ ಸುಮಾರು 15 ಲಕ್ಷ. ರಥಯಾತ್ರೆಯ ದಿನ ಆ ದೊಡ್ಡ ರಥ ಬೀದಿಯಲ್ಲಿ  ರಥೋತ್ಸವ ಶುರುವಾಗುವಾಗ ಇಡೀ ರಸ್ತೆ ತುಂಬಾ ಜನರೇ ತುಂಬಿಕೊಳ್ಳುತ್ತಾರೆ. ಪುರಿ ಜಗನ್ನಾಥ ದೇವಸ್ಥಾನದಿಂದ ಗುಂಡೀಚಾ ದೇವಸ್ಥಾನಕ್ಕೆ ಎರಡು ಕಿ.ಮೀ. ದೂರವಿದೆ. ರಥೋತ್ಸವ ಆರಂಭವಾಗುವ ಹೊತ್ತಿಗೆ ಈ ತುದಿ (ಜಗನ್ನಾಥನ ದೇವಸ್ಥಾನ)ಯಿಂದ ಆ ತುದಿವರೆಗೂ ಜನ ತುಂಬಿ ಬಿಡುತ್ತಾರೆ. ಕಾಲಿಡಲೂ ಜಾಗವಿರದು. ಅದರ ಮಧ್ಯೆ ಮೂರು ಬಲವಾದ ರಥಗಳು ಜಾಗ ಮಾಡಿಕೊಂಡು ಹೋಗಬೇಕು. ಅಷ್ಟಕ್ಕೂ ಆ ರಥಬೀದಿಯೇನೂ ಚಿಕ್ಕದಿಲ್ಲ; ನಮ್ಮ ಹೆದ್ದಾರಿಗಳ ಮೂರು-ನಾಲ್ಕರಷ್ಟು ದೊಡ್ಡದು.  2025ರ ವೇಳೆಗೆ ನಮ್ಮ ಬೆಂಗಳೂರಿನಲ್ಲೂ ಇದೇ ಪರಿಸ್ಥಿತಿ ಬರಬಹುದೇನೋ? ದಿಲ್ಲಿಯಲ್ಲಿ ಈಗಾಗಲೇ ಇಂಥ ಸ್ಥಿತಿ ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿದೆ. ಇದರೊಂದಿಗೆ ತಲೆದೋರುತ್ತಿರುವ ವಾಹನ ಪಾರ್ಕಿಂಗ್‌ ಸಮಸ್ಯೆ ಘನಘೋರವಾದುದು.  ವಿಚಿತ್ರವೆಂದರೆ, ಇಂಥದೊಂದು ಗಂಭೀರ ವಿಷಯಕ್ಕೆ ನಮ್ಮನ್ನಾಳುವವರು ಹೇಳುವ ಸರಳ ಉತ್ತರವಿದೆ. "ಬೆಳವಣಿಗೆ ಅಥವಾ ಅಭಿವೃದ್ಧಿಯನ್ನು ತಡೆಯಲಾಗದು. ಸೂಕ್ತ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಆ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ'. ವಿಪಕ್ಷಗಳೂ ಅದೇ ಧಾಟಿಯಲ್ಲಿ ಟೀಕಿಸುತ್ತವೆಯೇ ಹೊರತು ಮತ್ತೂಂದು ಪಾರ್ಶ್ವದಲ್ಲಿ ಇರಬಹುದಾದ ಪರಿಹಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.  ನಾವಿನ್ನೂ, ನಗರ ಬೆಳೆದಷ್ಟೂ ಮೂಲ ಸೌಕರ್ಯ ಕಲ್ಪಿಸುವ ಕನಸಿನಲ್ಲಿದ್ದೇವೆ. ಇದು ಸಾಧ್ಯವೇ ಎಂದು ಜಗತ್ತಿನಾದ್ಯಂತ ಉದಾಹರಣೆಗಳನ್ನು ಹುಡುಕಿದರೆ, ಎಲ್ಲೂ ಸಾಧ್ಯ ಎಂಬ ಉತ್ತರ ಸಿಕ್ಕಿಲ್ಲ. ಮುಂದುವರಿದ ರಾಷ್ಟ್ರಗಳೂ ಈಗ ನಗರ ಬೆಳವಣಿಗೆಯನ್ನು ನಿಯಂತ್ರಿಸುವತ್ತ ಹೊರಟಿವೆ. ನಾವೀಗ ಏನು ಮಾಡಬೇಕು ಎಂಬುದೇ ಸದ್ಯದ ತುರ್ತು ಸಂಗತಿ.

ಅರವಿಂದ ನಾವಡ

Back to Top