CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಥಾಮಸ್‌ ಮನ್ರೋ ಜತೆ ಇಂಗ್ಲಿಷ್‌ನಲ್ಲಿ ಮಾತನಾಡಿದ ರಾಯರು

ಥಾಮಸ್‌ ಮನ್ರೋ ಕೆನರಾ, ಬಳ್ಳಾರಿಯ ಪ್ರಥಮ ಜಿಲ್ಲಾಧಿಕಾರಿ

ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೋತ್ಸವ ಆ. 8ರಿಂದ 10ರವರೆಗೆ ನಡೆಯುತ್ತಿದೆ. ಅವರ ಸಮಾಧಿಯಾದ ಬಳಿಕ ಅವರೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡಿದ ಸರ್‌ ಥಾಮಸ್‌ ಮನ್ರೋ ಕರ್ನಾಟಕದ ಕರಾವಳಿ, ಬಳ್ಳಾರಿಯಲ್ಲಿ ಪ್ರಥಮ ಜಿಲ್ಲಾಧಿಕಾರಿಯಾಗಿದ್ದರು. 

ಶ್ರೀರಾಘವೇಂದ್ರಸ್ವಾಮಿಗಳ ಜೀವಿತ ಅವಧಿ 1595ರಿಂದ 1671. ಕಾಸರಗೋಡು, ದ.ಕ., ಉಡುಪಿ, ಉ.ಕ. ಜಿಲ್ಲೆಗಳನ್ನು ಒಳಗೊಂಡ ಕೆನರಾ ಜಿಲ್ಲೆ ಮತ್ತು ಅನಂತಪುರ, ಕಡಪ, ಕರ್ನೂಲಿನ ಬಹುಭಾಗವನ್ನು ಒಳಗೊಂಡ ಬಳ್ಳಾರಿ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಸರ್‌ ಥಾಮಸ್‌ ಮನ್ರೋ ಅವಧಿ 1761ರಿಂದ 1827. ರಾಘವೇಂದ್ರಸ್ವಾಮಿಗಳು ಸಮಾಧಿ ಪ್ರವೇಶ ಮಾಡಿ 90 ವರ್ಷಗಳ ಬಳಿಕ ಜನಿಸಿದ ಮನ್ರೋ 1800 ರಿಂದ 1807ರವರೆಗೆ ಬಳ್ಳಾರಿ ಜಿಲ್ಲಾಧಿಕಾರಿಯಾಗಿರುವಾಗ ರಾಘವೇಂದ್ರಸ್ವಾಮಿಗಳ ಜತೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು ಎಂದರೆ ಹಲವರು ಇದು ಅಜ್ಜಿ ಕಥೆ ಎನ್ನಬಹುದು. ರಾಘವೇಂದ್ರಸ್ವಾಮಿಗಳಿಗೆ ಇಂಗ್ಲಿಷ್‌ ಬರುತ್ತಿತ್ತೆ? ಮಹಾತ್ಮರಿಗೆ ಭಾಷೆ ಅನುವುದು ವಿಷಯವೇ ಅಲ್ಲ ಎಂದುತ್ತರಿಸಿದರೂ ಇಹಲೋಕ ತ್ಯಜಿಸಿದವರು ಜೀವಂತವಿರುವವರ ಜತೆ ಮಾತನಾಡುವುದಾದರೂ ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತವೆ. ಇದಕ್ಕೆ ಖಚಿತ ಉತ್ತರವಿಲ್ಲದಿದ್ದರೂ ಘಟನೆ ನಡೆದದ್ದಕ್ಕೆ ಮನ್ರೋ ಬರೆಸಿದ ಗಜೆಟಿಯರ್‌ ಸಾಕ್ಷಿಯಾಗಿ ನಿಂತಿದೆ. 

ಮನ್ರೋ ಭೂಕಂದಾಯ ಕಾಯಿದೆ ರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸಿದವನು. ರೈತವಾರಿ ವ್ಯವಸ್ಥೆಯನ್ನು ಜಾರಿಗೊಳಿಸುವಾಗ ಮನ್ರೋ ಎಲ್ಲ ಜಮೀನುಗಳನ್ನು ಸರ್ವೆ ಮಾಡಿಸಿ ಭೂಕಂದಾಯ ನಿಗದಿಪಡಿಸುತ್ತಿದ್ದ. ಮಂತ್ರಾಲಯ ಮಠದ ಜಮೀನಿನ ವಿಷಯ ಬರುವಾಗ ಗೊಂದಲವಾಗಿತ್ತು. ಭೂಮಾಲಕರಿಲ್ಲದ ಸ್ಥಳ ಈಸ್ಟ್‌ ಇಂಡಿಯ ಕಂಪೆನಿ ಸುಪರ್ದಿಗೆ ಹೋಗಬೇಕಿತ್ತು. ಇದರ ಬಗ್ಗೆ ಖಚಿತ ನಿಲುವು ತಳೆಯಲು ಮನ್ರೋ ಸ್ವತಃ ಮಂತ್ರಾಲಯ ಮಠಕ್ಕೆ ಬಂದ. ಆಗ ಮಂತ್ರಾಲಯ ಸ್ವಾಮಿಗಳು ಮನ್ರೋ ಜತೆ ಇಂಗ್ಲಿಷ್‌ನಲ್ಲಿ ಮಾತನಾಡಿದರು. ಮನ್ರೋ ಟಿಪ್ಪಣಿ ಮಾಡಿಕೊಂಡು ಹೋಗಿ ಮಠದ ಪರವಾಗಿ ಶಿಫಾರಸು ಮಾಡಿದ ಎಂಬುದು ಲಭ್ಯ ಮಾಹಿತಿ. ಗಜೆಟಿಯರ್‌ ಮಾಹಿತಿ ಪ್ರಕಾರ ಬೂಟ್ಸ್‌, ಹ್ಯಾಟ್‌ ತೆಗೆದಿಟ್ಟು ಮನ್ರೋ ಮಠದ ಒಳಗೆ ಹೋದ ಎಂದಿದೆ. ಇಲ್ಲಿ ಇನ್ನೊಂದು ಕುತೂಹಲದ ಘಟನೆ ನಡೆದಿದೆ. ರಾಘವೇಂದ್ರಸ್ವಾಮಿಗಳು ಮಂತ್ರಾಕ್ಷತೆ ಕೊಟ್ಟರು, ಅದನ್ನು ಮನ್ರೋ ತನ್ನ ನಿವಾಸಕ್ಕೆ ಹೋಗಿ ಅಡುಗೆ ಸಾಮಗ್ರಿಗಳ ಧಾನ್ಯದ ಪಾತ್ರೆಗೆ ಹಾಕಿದ ಎಂದು ಉಲ್ಲೇಖವಿದೆ. ಇನ್ನು ಕೆಲವು ದಾಖಲೆಗಳ ಪ್ರಕಾರ ಮನ್ರೋ ಮಠದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಂದಿದ್ದ ಎಂದಿದೆ. ವಿಷಯ ಏನೇ ಇದ್ದರೂ ಇಲ್ಲಿ ಆತ ಸಮಾಧಿಸ್ಥ ಸ್ವಾಮೀಜಿಯವರೊಂದಿಗೆ ಮಾತನಾಡಿದ್ದು ಮಾತ್ರ ಕುತೂಹಲದ ವಿಷಯ. ಮನ್ರೋ ಆದೇಶದಂತೆ ಮದ್ರಾಸ್‌ ಸರಕಾರದ ಗಜೆಟ್‌ನ ಚಾಪ್ಟರ್‌ 11, 213ನೆಯ ಪುಟದಲ್ಲಿ ಇದು ದಾಖಲಾಗಿದೆ. ಇದು ಚೆನ್ನೈಯ ರಾಜ್ಯ ಸರಕಾರದ ಪತ್ರಾಗಾರದಲ್ಲಿ ಇದೆ. 

                       ಗಜೆಟ್‌ ದಾಖಲೆ

ಬಂಗಾರದ ತೋರಣ ಕಂಡ 
ಕೇವಲ ಮಂತ್ರಾಲಯದಲ್ಲಿ ಮಾತ್ರವಲ್ಲ. ಈತನ ಕತೆ ತಿರುಪತಿಯಲ್ಲಿಯೂ ಹೆಣೆದುಕೊಂಡಿದೆ. ಈತ ನೈವೇದ್ಯಕ್ಕೆ ಕೊಟ್ಟ ಪಾತ್ರೆಯನ್ನು "ಮನ್ರೋ ಗಂಗಳಂ' ಎಂದು ಕರೆಯುತ್ತಾರೆ. 1827ರಲ್ಲಿ ಗವರ್ನರ್‌ ಹುದ್ದೆಯಿಂದ ಕೆಳಗಿಳಿದ ಬಳಿಕ ಮನ್ರೋ ಆಂಧ್ರಪ್ರದೇಶದ ಕಡಪ ಸಮೀಪದ ಗಂಡಿ ಆಂಜನೇಯ  ದೇವಸ್ಥಾನದ ಬಳಿ ಬರುತ್ತಾನೆ. ಅಲ್ಲಿ ಯಾರಿಗೂ ಕಾಣದ ಬಂಗಾರದ ಹೂವುಗಳ ಸರ ಕಾಣುತ್ತಿದೆ ಎಂದು ಉದ್ಗರಿಸುತ್ತಾನೆ. ಆಗೊಬ್ಬ ಹಳ್ಳಿ ರೈತ "ಈತ ಶ್ರೇಷ್ಠ ವ್ಯಕ್ತಿ. ಆದರೆ ಕೆಲವೇ ದಿನಗಳಲ್ಲಿ ಇವನಿಗೆ ಕೊನೆಗಾಲ ಬರುತ್ತದೆ' ಎಂದು ಹೇಳಿದನಂತೆ. ಮತ್ತೆ ಕೆಲವೇ ದಿನ ಮನ್ರೋ ಇದ್ದದ್ದು. "ಬಂಗಾರದ ತೋರಣ' ಕಂಡ ಉಲ್ಲೇಖ ಮದ್ರಾಸ್‌ ಗಜೆಟಿಯರ್‌ ಕಡಪ ಜಿಲ್ಲೆ ವಾಲ್ಯೂಮ್‌ 1- ಚಾಪ್ಟರ್‌ 1, ಪುಟ 3 ಮತ್ತು ಚಾಪ್ಟರ್‌ 15ರ ಪುಟ 217ರಲ್ಲಿದೆ. ಈ ದೇವಸ್ಥಾನದ ಆವರಣದಲ್ಲಿ ಇಂದಿಗೂ ಹಿಂದೂ ದೇವತೆಗಳ ಭಾವಚಿತ್ರದ ಜತೆಗೆ ಮನ್ರೋ ಚಿತ್ರವೂ ಇದೆ. ಬಂಗಾರದ ತೋರಣಕ್ಕೂ ರಾಮಾಯಣದಲ್ಲಿ ರಾಮ ಇಲ್ಲಿಗೆ ವನವಾಸದ ಅವಧಿಯಲ್ಲಿ ಬಂದಿದ್ದನೆಂಬುದಕ್ಕೂ ಸಂಬಂಧವಿರುವ ಕಥೆಗಳಿವೆ. 1827 ಜುಲೈ 4ರಂದು ಮನ್ರೋ ಗುತ್ತಿ ಎಂಬಲ್ಲಿಗೆ ಬಂದಾಗ ಕಾಲರಾ ಹಾವಳಿ ಇತ್ತು. ರೋಗ ಉಲ್ಬಣಿಸಿ ಜು. 6ರಂದು ಪತ್ತಿಕೊಂಡದಲ್ಲಿ ಮನ್ರೋ ನಿಧನ ಹೊಂದಿದ. ಗುತ್ತಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಿ ಬಳಿಕ ಮದ್ರಾಸ್‌ಗೆ ಸ್ಥಳಾಂತರಿಸಲಾಯಿತು. ಪತ್ತಿಕೊಂಡದಲ್ಲಿ ನಿರ್ಮಿಸಲಾದ ಮನ್ರೋ ಛತ್ರದಲ್ಲೀಗ ಶಾಲೆ ನಡೆಯುತ್ತಿದೆ. ಈತನ ಕಂಚಿನ ವಿಗ್ರಹವನ್ನು 1839 ಅಕ್ಟೋಬರ್‌ 23ರಂದು ಚೆನ್ನೈ ಕಿನಾರೆಯಲ್ಲಿ ಸ್ಥಾಪಿಸಲಾಯಿತು. 

ಕ್ರೈಸ್ತರಿಗೆ ಜೀವದಾನ
ದಕ್ಷಿಣ ಭಾರತದ ಜನಪ್ರಿಯ ಬ್ರಿಟಿಷ್‌ ಅಧಿಕಾರಿ ಎಂಬ ಹೆಗ್ಗಳಿಕೆ ಮನ್ರೋಗೆ ಇದೆ. ಸ್ಕಾಟ್ಲಂಡ್‌ನ‌ಲ್ಲಿ ಜನಿಸಿದ ಈತ 1789 ರಲ್ಲಿ ಸೈನಿಕನಾಗಿ ಬಂದು ಬ್ರಿಟಿಷ್‌- ಟಿಪ್ಪು ಸುಲ್ತಾನ್‌ ಸಮರದಲ್ಲಿ ಯುದ್ಧ ಮಾಡಿದ. ಟಿಪ್ಪು ಕಾಲದ ಅನಂತರ ಕೆನರಾಕ್ಕೆ 1799ರಲ್ಲಿ ಸೆಟ್ಲ ಮೆಂಟ್‌ ಅಧಿಕಾರಿಯಾಗಿ (ಜಿಲ್ಲಾ ಕಲೆಕ್ಟರ್‌) ಬಂದು ಒಂದೇ ವರ್ಷ ಕೆಲಸ ಮಾಡಿದ್ದು. ಆತ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯಾದ ಅನಂತರವೇ ಟಿಪ್ಪು ಸುಲ್ತಾನ್‌ ಕಪಿಮುಷ್ಟಿಯಲ್ಲಿದ್ದ ಕ್ರೈಸ್ತರು ಉಸಿರಾಡುವಂತಾಯಿತು, ಅವರವರ ಭೂಮಿಗೆ ಮರಳುವಂತಾಗಿ ಉಪಕೃತರಾದರು ಎಂದು ಕ್ರೈಸ್ತರ ಇತಿಹಾಸ ಹೇಳುತ್ತಿದೆ. ಮನ್ರೋ ನಿರ್ಮಿಸಿದ ಬಾವಿಯಾದ ಕಾರಣ ಬಸ್ರೂರಿನಲ್ಲಿ ಮನ್ರೋ ಬಾವಿ ಎಂಬ ಶಾಸನ ಇಂದಿಗೂ ಇದೆ. 

ಮನ್ರೋ ಮನ್ರೋಲಪ್ಪನಾದ
ಮಂಗಳೂರಿನ ಬಳಿಕ ಬಳ್ಳಾರಿ ಜಿಲ್ಲಾಧಿಕಾರಿಯಾಗಿ ವರ್ಗವಾದ ಮನ್ರೋ ಅಲ್ಲಿ ಮನೆಮಾತಾದ. ರೈತವಾರಿ ವ್ಯವಸ್ಥೆಯನ್ನು ಜಾರಿಗೊಳಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಭೂಹಿಡುವಳಿದಾರರ ಹೆಸರಿನಲ್ಲಿ ಭೂಮಿಯನ್ನು ದಾಖಲಿಸಿ ಕಂದಾಯವನ್ನು ನಿಗದಿ ಮಾಡಿದ ಮನ್ರೋ ಜನಪರವಾಗಿದ್ದ. ಈತ ಎಷ್ಟು ಜನಪರವಾಗಿದ್ದ ಎನ್ನುವುದಕ್ಕೆ ಗುಂತಕಲ್‌, ಅನಂತಪುರ, ಗುತ್ತಿ ಮೊದಲಾದೆಡೆ ಹಳ್ಳಿಗರು ಜನಿಸಿದ ಮಕ್ಕಳಿಗೆ "ಮನ್ರೋಲಪ್ಪ' ಎಂಬ ಹೆಸರಿಡುತ್ತಿದ್ದರು, ಜನರ ಬಾಯಲ್ಲಿ ಮನ್ರೋನನ್ನು ಹೊಗಳುವ ಲಾವಣಿಗಳು ಹರಿದಾಡಿದವು ಎಂಬುದೇ ಸಾಕ್ಷಿ. 1807ರಲ್ಲಿ ಇಂಗ್ಲೆಂಡ್‌ಗೆ ಮರಳಿದ ಈತ ಅಲ್ಲಿ ಮಂಡಿಸಿದ ಕಂದಾಯ ಇಲಾಖೆ ವರದಿಗಳು ಈಸ್ಟ್‌ ಇಂಡಿಯ ಕಂಪೆನಿ ನಿರ್ದೇಶಕರಿಗೆ ತೃಪ್ತಿಕೊಟ್ಟಿತು. ಅನಂತರ 1814ರಲ್ಲಿ ಮದ್ರಾಸ್‌ ಗವರ್ನರ್‌ ಆದಾಗ ಜಿಲ್ಲಾಡಳಿತ ವ್ಯವಸ್ಥೆಗೆ ಹೊಸ ರೂಪ ಕೊಟ್ಟ, ಭೂಮಿಯ ಸರ್ವೆ ಮಾಡಿಸಿದ. ಇದರ ಪ್ರಭಾವ ಕರಾವಳಿ ಮತ್ತು ಬಳ್ಳಾರಿ ಪ್ರಾಂತದಲ್ಲಿ ಈಗಲೂ ಇದೆ. 

ರೈತವಾರಿ ಪದ್ಧತಿ, ಯುಪಿಎಸ್ಸಿ ಪರೀಕ್ಷೆ
ರೈತವಾರಿ ಪದ್ಧತಿಯನ್ನು 1820ರಲ್ಲಿ ಥಾಮಸ್‌ ಮನ್ರೋ ಜಾರಿಗೆ ತಂದ. ಇದು ಮದ್ರಾಸ್‌, ಮುಂಬೈ, ಅಸ್ಸಾಂ ಭಾಗ, ಕೊಡಗಿನಲ್ಲಿ ಜಾರಿಗೆ ಬಂತು. ಇದರ ಪ್ರಕಾರ ಹಿಡುವಳಿದಾರರಿಗೆ ಭೂಮಿಯ ಹಕ್ಕನ್ನು ಕೊಡಲಾಯಿತು. ಈ ದೃಷ್ಟಿಯಿಂದ ಇದೊಂದು ಜನಪರ ಕಾರ್ಯಕ್ರಮವಾಗಿತ್ತು. ಮಂಗಳೂರಿಗೆ ಬರುವ ಮುನ್ನವೇ ಇಂದಿನ ಸೇಲಂ ಪ್ರದೇಶದ ಬಾರಾಮಹಲ್‌ ಪ್ರದೇಶದಲ್ಲಿ ಜಿಲ್ಲಾಧಿಕಾರಿಗೆ ಸಹಾಯಕನಾಗಿದ್ದ ಮನ್ರೋ ಅಲ್ಲಿಯೂ ರೈತವಾರಿ ಪದ್ಧತಿಯನ್ನು ಜಾರಿಗೆ ತರಲು ಪ್ರಯತ್ನಿಸಿದ್ದ. ಇದರ ಸುಧಾರಿತ ಸ್ವರೂಪವನ್ನೇ ಬಳ್ಳಾರಿಯಲ್ಲಿ ಜಾರಿಗೆ ತಂದದ್ದು. 1820ರಲ್ಲಿ ಮದ್ರಾಸ್‌ ಗವರ್ನರ್‌ ಆದ ಬಳಿಕ ಸ್ಥಳೀಯ ಜನರಿಗೆ ಹೆಚ್ಚು ಆಡಳಿತದ ಜವಾಬ್ದಾರಿಗಳನ್ನು ಕೊಟ್ಟು ಹಿಂದಿನವರ ಆಡಳಿತವನ್ನು ಬದಲಿಸಿದ. ಜಿಲ್ಲಾಡಳಿತ ಎನ್ನುವ ಈಗಿನ ಪರಿಕಲ್ಪನೆಯ ಹಿಂದೆ ಮನ್ರೋ ಚಿಂತನೆ ಇದೆ. ಇಂದಿಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಐಎಎಸ್‌ ಪರೀಕ್ಷೆ ಇದಿರಿಸುವವರು ಮನ್ರೋವಿನ ಭೂಕಂದಾಯ ಕಾಯಿದೆಯನ್ನು ಓದಲೇಬೇಕು. 

ಭೇಷ್‌ ಎನ್ನುತ್ತಿದ್ದ ಚಕ್ರವರ್ತಿ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಚಕ್ರವರ್ತಿ ರಾಜಗೋಪಾಲಾ ಚಾರಿಯವರ ಬಳಿ ಯಾರಾದರೂ ಯುವ ನಾಗರಿಕ ಸೇವಕರು ಭೇಟಿಯಾಗಲು ಬಂದರೆ "ನೀವು ಥಾಮಸ್‌ ಮನ್ರೋ ಬಗ್ಗೆ ತಿಳಿಯಿರಿ. ಆತ ಆದರ್ಶ ಆಡಳಿತಗಾರ' ಎನ್ನುತ್ತಿದ್ದರು. ಇಂತಹ ಒಬ್ಬ ವಿದೇಶೀ ಮೂಲದ ವ್ಯಕ್ತಿ ಕೆನರಾ ಮತ್ತು ಬಳ್ಳಾರಿ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿ ಎಂಬ ಇತಿಹಾಸವನ್ನು ತಿದ್ದುಪಡಿ ಮಾಡುವಂತಿಲ್ಲ. 

ಬಂಗಾಲದಲ್ಲಿ ಜಮೀನ್ದಾರಿ ಪದ್ಧತಿ ಜಾರಿಯಲ್ಲಿತ್ತು. ಕರ್ನಾಟಕದ ಕರಾವಳಿ ಭಾಗ ಮತ್ತು ಬಳ್ಳಾರಿ ಭಾಗ ನೇರವಾಗಿ ಮದ್ರಾಸ್‌ ಪ್ರಾಂತ್ಯದ ಆಡಳಿತದಲ್ಲಿದ್ದ ಕಾರಣ ಥಾಮಸ್‌ ಮನ್ರೋ ಜಾರಿಗೆ ತಂದ ಸಣ್ಣ ಹಿಡುವಳಿದಾರರಿಗೆ ಜಾಗದ ಹಕ್ಕು ಕೊಟ್ಟ ರೈತವಾರಿ ಪದ್ಧತಿ ಇಲ್ಲಿಗೂ ಅನ್ವಯವಾಗುವಂತೆ ಆಯಿತು. ಭಾರತೀಯರ ಸಹಕಾರವಿಲ್ಲದೆ ಆಡಳಿತ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಪಾದಿಸಿದ ಕೆಲವೇ ಕೆಲವು ಬ್ರಿಟಿಷ್‌ ಅಧಿಕಾರಿಗಳಲ್ಲಿ ಮನ್ರೋ ಕೂಡ ಒಬ್ಬನಾಗಿದ್ದ.  
ಡಾ| ಸುರೇಂದ್ರ ರಾವ್‌, ಇತಿಹಾಸ ತಜ್ಞರು.

ಮಟಪಾಡಿ ಕುಮಾರಸ್ವಾಮಿ

Back to Top