CONNECT WITH US  

ಗುಜರಾತಲ್ಲಿ 150 ಸೀಟು ಗೆಲ್ಲುತ್ತೇವೆ!

ಗುಜರಾತ್‌ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಬಿಜೆಪಿ-ಕಾಂಗ್ರೆಸ್‌ ನಡುವಿನ ಪೈಪೋಟಿ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು "ದಿ ಸಂಡೆ ಎಕ್ಸ್‌ಪ್ರೆಸ್‌' ಸಂದರ್ಶಿಸಿದೆ. ಈ ಬಾರಿ ಬಿಜೆಪಿ 150 ಸ್ಥಾನ ಪಡೆಯುವುದು ಖಚಿತ ಎಂಬ ಭರವಸೆಯಲ್ಲಿದ್ದಾರೆ ಅಮಿತ್‌ ಶಾ. ಸಂದರ್ಶನದ ಆಯ್ದ ಭಾಗ ಇಲ್ಲಿದೆ...

- 2012ರ ಗುಜರಾತ್‌ ವಿಧಾನಸಭಾ ಚುನಾವಣೆಗೆ ಮತ್ತು ಈಗಿನದ್ದಕ್ಕೆ ವ್ಯತ್ಯಾಸವೇನಿದೆ? 
ಬಹಳ ವ್ಯತ್ಯಾಸವಿದೆ. 2012ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ, ಕೇಂದ್ರದಲ್ಲಿದ್ದದ್ದು ಯುಪಿಎ ಸರ್ಕಾರ. ಬಿಜೆಪಿಯ ಅಭಿವೃದ್ಧಿ ರಾಜಕೀಯಕ್ಕೆ ಕೇಂದ್ರವು ತೀವ್ರ ಪ್ರತಿರೋಧ ಒಡ್ಡುತ್ತಿತ್ತು. ಈಗ ಗುಜರಾತ್‌ನಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿವೆ. ಹೀಗಾಗಿ ಕೇಂದ್ರದ ಎಲ್ಲಾ ರೀತಿಯ ನೆರವು ಪಡೆದು ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ. ಮೋದಿ ಮೊದಲು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು, ಈಗ ದೇಶದ ಪ್ರಧಾನಿ. ಇಲ್ಲೇನಾಗುತ್ತಿದೆ ಎನ್ನುವುದಕ್ಕೆ ಅವರು ಗಮನ ಕೊಡುತ್ತಿರುತ್ತಾರೆ. ಇದರಿಂದ ಗುಜರಾತ್‌ಗೆ ಒಳಿತಾಗಿದೆ.   

- ಪಾಟೀದಾರ್‌ ವಿಷಯ ಮತ್ತು ಹಾರ್ದಿಕ್‌ ಪಟೇಲ್‌ ಪಾತ್ರದ ಬಗ್ಗೆ ಏನಂತೀರಿ? 
ಈ ಪ್ರತಿಭಟನೆ ನಿಸ್ಸಂಶಯವಾಗಿಯೂ ಒಂದು ಭ್ರಮೆಯನ್ನು ಸೃಷ್ಟಿಸಲು ಸಫ‌ಲವಾಗಿದೆ.. ಆದರೆ ಯಾವಾಗ ಮೀಸಲಾತಿಯ ಚರ್ಚೆ ಪ್ರಗತಿಕಂಡು ಒಂದು ಫಾರ್ಮುಲಾ ಬಂದಿತೋ (ಸಾಂವಿಧಾನಿಕವಾಗಿ ಅಸಾಧ್ಯವಾದ ಫಾರ್ಮುಲಾ) ಆಗಿನಿಂದ ಪಾಟೀದಾರ್‌ ಸಮುದಾಯದಲ್ಲಿ ಬಹಳ ಬದಲಾವಣೆಯಾಗಿದೆ. ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್‌ನ ಭರವಸೆ ಈಡೇರುವಂಥದ್ದಲ್ಲ ಎನ್ನುವುದು ಅವರಿಗೆ ಸ್ಪಷ್ಟವಾಗಿದೆ. 

- ಹಾರ್ದಿಕ್‌ ಬಗ್ಗೆ ಏನಂತೀರಿ? 
ಆ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. 

- ನೀವು ಪ್ರಗತಿಯ ಬಗ್ಗೆ ಮಾತನಾಡುತ್ತಿದ್ದೀರಿ, ಆದರೆ ಚುನಾವಣೆಯ ಮುಖ್ಯ ಚರ್ಚೆ ಜೈನ್‌-ಜನಿವಾರ ಎಂದು ಬದಲಾಗಿಬಿಟ್ಟಿದೆಯಲ್ಲ?
ಈ ಚರ್ಚೆಯನ್ನು ನಡೆಸುತ್ತಿರುವುದು ಮಾಧ್ಯಮಗಳು. ಸಾರ್ವಜನಿಕರಲ್ಲ.
 
- ರಾಹುಲ್‌ ಗಾಂಧಿ ತಮ್ಮನ್ನು ಹಿಂದೂಯೇತರರು ಎಂದು ಸೋಮನಾಥ್‌ ಮಂದಿರದಲ್ಲಿ ಕರೆದುಕೊಂಡರು ಎನ್ನುವ ಸಂಗತಿಯನ್ನು ನಿಮ್ಮ ನಾಯಕರೇ ಹೈಲೈಟ್‌ ಮಾಡುತ್ತಿದ್ದಾರಲ್ಲ? 
ನಮ್ಮ ನಾಯಕರು ಈ ವಿಷಯವಾಗಿ ಅಷ್ಟಾಗಿ ಮಾತನಾಡಿಲ್ಲ. ಬಿಜೆಪಿ ವಿರುದ್ಧ ಅವರು(ಕಾಂಗ್ರೆಸ್‌) ಆರೋಪ ಮಾಡಿದಾಗ ಮಾತ್ರ ನಾವು ಪ್ರಶ್ನಿಸಬೇಕಾಯಿತು. ಇದರಲ್ಲಿ ಬಿಜೆಪಿಯ ಪಾತ್ರವೇನೂ ಇಲ್ಲ. ಕಾಂಗ್ರೆಸ್‌ ವಕ್ತಾರ ರಂದೀಪ್‌ ಸುಜೇìವಾಲ ಬಿಜೆಪಿಯ ವಿರುದ್ಧ ಆರೋಪಿಸುತ್ತಿದ್ದಾರೆ. ನಾವು ಕೇಳಿದ್ದೇನು? ರಾಹುಲ್‌ ಅವರ ಹೆಸರನ್ನು ಹಿಂದೂಯೇತರರು ಎಂದು ನಮೂದಿಸಿದವರ್ಯಾರು ಎಂದಷ್ಟೆ? ಹಾಗೆ ಬರೆದ ವ್ಯಕ್ತಿ ತಮ್ಮ ಪಕ್ಷದವನೋ ಅಲ್ಲವೋ ಎನ್ನುವುದನ್ನು ಕಾಂಗ್ರೆಸ್‌ ಸ್ಪಷ್ಟಪಡಿಸಬೇಕು. 

- ನಿಮ್ಮ ಧರ್ಮವ್ಯಾವುದು? ನೀವು ಜೈನರೋ ಅಥವಾ ಹಿಂದೂಗಳ್ಳೋ? 
ನಾನು ಹುಟ್ಟಿನಿಂದ ಹಿಂದು. ವೈಷ್ಣವ. 

- ಗುಜರಾತ್‌ ಅಭಿವೃದ್ಧಿ ಮಾದರಿ ಬಗ್ಗೆ ಮಾತನಾಡುತ್ತಿದ್ದವರು ಈಗ ಈ ವಿಷಯಕ್ಕೆ ಬರುವಂತಾಯಿತಲ್ಲ?
ಇದು ನಿಮ್ಮ(ಮಾಧ್ಯಮಗಳ) ಬುದ್ಧಿ. ಇದರ ಬಗ್ಗೆ ಜನರು ತಲೆಕೆಡಿಸಿಕೊಂಡಿಲ್ಲ. ನಿಮಗೆ ಇವೆಲ್ಲ ಹೆಡ್‌ಲೈನ್‌ಗಳಾಗುತ್ತವೆ. ಈಗ ನಾನು ಹೇಳುತ್ತಿರುವುದನ್ನೂ ಪ್ರಿಂಟ್‌ ಮಾಡಿ.

- 2014ರ ಲೋಕಸಭಾ ಚುನಾವಣೆಯಲ್ಲಿ ನೀವು ಉತ್ತರಪ್ರದೇಶದಲ್ಲಿ ಹೆಚ್ಚು ಶ್ರಮ ಹಾಕಬೇಕಾಯಿತು. ಏಕೆಂದರೆ ಆಗ ಪಕ್ಷಕ್ಕೆ ಪುನರುಜ್ಜೀವನದ ಅಗತ್ಯವಿತ್ತು. ಆದರೆ ಅದೇಕೆ ಅಮಿತ್‌ ಶಾ ಮತ್ತು ಮೋದಿಯವರು ಈಗ ಗುಜರಾತ್‌ನಲ್ಲಿ ಇಷ್ಟೊಂದು ಶ್ರಮಪಡುತ್ತಿದ್ದಾರೆ?
ನೀವು ಇದನ್ನು ನೋಡುವ ದೃಷ್ಟಿಕೋನವೇ ಭಿನ್ನವಾಗಿದೆ. ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಚುನಾವಣೆಗಳನ್ನು ನಮ್ಮ ಸಿದ್ಧಾಂತ ಮತ್ತು ಸೇವೆಯ (ಸರ್ಕಾರ) ವಿಸ್ತರಣೆಗೆ ಅವಕಾಶ ಎಂದು ನೋಡುತ್ತಾರೆ. ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಬಿಜೆಪಿ ನಾಯಕರು ಬಯಸುತ್ತಾರೆ. ಇದನ್ನೇ ನೀವು ಭಯ ಎಂದು ಬಿಂಬಿಸುವುದು ತಪ್ಪು. 

- ಹಾಗಿದ್ದರೆ ಪಾಟಿದಾರ್‌ ಸಮುದಾಯದ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಬಿಜೆಪಿ ನಾಯಕರಿಗೆ ರ್ಯಾಲಿ ನಡೆಸಲು ಏಕೆ ಸಾಧ್ಯವಾಗುತ್ತಿಲ್ಲ? 
ಬೇಕಿದ್ದರೆ, ನಾವು ಪಟ್ಟಿ ಕೊಡುತ್ತೇವೆ ಓದಿ ನೋಡಿ. ನಾವು ಎಲ್ಲೆಡೆಯೂ ಸಾರ್ವಜನಿಕ ಸಭೆಗಳನ್ನು ಆಯೋಜಿಸುತ್ತಿದ್ದೇವೆ. ಇವೆಲ್ಲ ಬರೀ ವದಂತಿಯಷ್ಟೆ. 

- ಹೊಸ ತಲೆಮಾರಿನ ಮೂವರು ನಾಯಕರು(ಹಾರ್ದಿಕ್‌, ಅಲ್ಪೇಶ್‌ ಮತ್ತು ಜಿಗ್ನೇಶ್‌) ಭಾರೀ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿದ್ದಾರೆ. ಹಾಗಿದ್ದರೆ ಕಳೆದ 22 ವರ್ಷಗಳಲ್ಲಿ ನಿಮ್ಮ ಪಕ್ಷ ಯುವಜನರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ವಿಫ‌ಲವಾಯಿತೇ?
ಈ ಜನರನ್ನೇನು ನೀವು ನೋಡುತ್ತಿದ್ದೀರಲ್ಲ, ಇವರೆಲ್ಲ ಕಾಂಗ್ರೆಸ್‌ನ ಸಾರ್ವಜನಿಕ ಸಭೆಗಳಿಗೆ ಬಂದವರು. ಕಾಂಗ್ರೆಸ್‌ ಬ್ಯಾನರ್‌ಗಳು ಅಲ್ಲಿ ಕಾಣಿಸುವುದಿಲ್ಲ ಅಷ್ಟೆ. ಹಾರ್ದಿಕ್‌ ರ್ಯಾಲಿಗಳಲ್ಲಿ ಮುಸಲ್ಮಾನರು ಬರುತ್ತಿದ್ದಾರೆಂದರೆ ಅದು ಕಾಂಗ್ರೆಸ್‌ ಸಾರ್ವಜನಿಕ ಸಭೆ ಎಂದರ್ಥ. 

- ಉತ್ತರ ಪ್ರದೇಶ ಚುನಾವಣಾ ಫ‌ಲಿತಾಂಶ ನೋಟ್‌ಬಂದಿಯೆಡೆಗಿನ ಜನಾಭಿಪ್ರಾಯವಾಗಿತ್ತು. ಮತ್ತು...
ಉತ್ತರಪ್ರದೇಶ ಡಿಮಾನಿಟೈಸೇಷನ್‌ಗೆ ರೆಫ‌ರೆಂಡಮ್‌ ಎಂದು ನಾನು ಎಂದೂ ಹೇಳಿಲ್ಲ. ವಿರೋಧ ಪಕ್ಷಗಳು ಹೀಗೆ ಮಾಡಲು ಪ್ರಯತ್ನಿಸಿದವು. ಈ ಕಾರಣಕ್ಕಾಗಿಯೇ ಮಾಧ್ಯಮಗಳೂ ಹಾಗೆ ಬಿಂಬಿಸಿದವು. ಈಗ ನೀವು ಜಿಎಸ್‌ಟಿಯನ್ನು ಈ ಚುನಾವಣೆಗೆ ಜನಾಭಿಪ್ರಾಯವೇ ಎಂದು ಕೇಳುತ್ತೀರಿ. ನಾವು ಹಾಗೆ ಹೇಳಿಯೇ ಇಲ್ಲ. ಒಂದು ವೇಳೆ ವಿರೋಧ ಪಕ್ಷವು ಇದನ್ನೂ ಹಾಗೆಯೇ ಬಿಂಬಿಸಲು ಪ್ರಯತ್ನಿಸುತ್ತದೆ ಎಂದಾದರೆ, ನಮ್ಮ ತಕರಾರೇನೂ ಇಲ್ಲ. 

- ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಗೆಲ್ಲಲು ಸಾಧ್ಯವಾಗದಿದ್ದರೆ?
ಆಗದಿದ್ದರೆ ಹೋಗದಿದ್ದರೆ ಎಂದು ನಾನು ಮಾತನಾಡುವುದಿಲ್ಲ. ನಾನು 150 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ ಮೇಲೆ ಆಯಿತು. ಅಷ್ಟು ಸ್ಥಾನ ಗೆದ್ದೇ ತೀರುತ್ತೇವೆ. ಫ‌ಲಿತಾಂಶ ಪ್ರಕಟವಾದ ದಿನ ನಾವು ಮಾತನಾಡುತ್ತೇವೆ. 

- 2002-2012ರ ನಡುವೆ ಬಿಜೆಪಿಯ ಸೀಟ್‌ಗಳಲ್ಲಿ ಕುಸಿತ ಕಂಡು ಬಂದಿದೆಯಲ್ಲ- 127ರಿಂದ 115ಕ್ಕೆ?
127ರಿಂದ 115ಕ್ಕೆ ಇಳಿದರೆ ಅದನ್ನು ಕುಸಿತ ಅಂತ ಕರೆಯೋದಿಲ್ಲ. ಇದು ಭಾರೀ ಕುಸಿತವಲ್ಲ. ಹೇಳಿದೆನಲ್ಲ, ಈ ಬಾರಿ 150 ಸ್ಥಾನ ಗೆಲ್ಲುತ್ತೇವೆ. ನೀವು ಈ ಪ್ರಶ್ನೆಯನ್ನು ನನಗೆ ಕೇಳುತ್ತಿದ್ದೀರಿ. ಅದೇಕೆ ಅಮೇಠಿಯಲ್ಲಿ ಹೀನಾಯ ಸೋಲನುಭವಿಸಿದ್ದಕ್ಕಾಗಿ(ಕಾಂಗ್ರೆಸ್‌) ರಾಹುಲ್‌ ಗಾಂಧಿಯನ್ನು ಪ್ರಶ್ನಿಸುತ್ತಿಲ್ಲ? ಅವರೇನಾದರೂ ಗುಜರಾತ್‌ನಲ್ಲಿ ಓಡಾಡಿದಂತೆ ಅಮೇಠಿಯಲ್ಲಿ ಓಡಾಡಿದ್ದರೆ ಕಡೇಪಕ್ಷ ಅಲ್ಲಿನ ಸ್ಥಳೀಯ ಸಂಸ್ಥೆಯನ್ನಾದರೂ ಉಳಿಸಿಕೊಳ್ಳಬಹುದಿತ್ತು.

- ಅದೇಕೆ ಬಿಜೆಪಿ ರಾಹುಲ್‌ ಗಾಂಧಿ ಬಗ್ಗೆ ಇಷ್ಟೊಂದು ಹೆದರಿಕೆ? 
ರಾಹುಲ್‌ ಬಗ್ಗೆ ಒಂದಿಷ್ಟೂ ಹೆದರಿಲ್ಲ. 

- ಹಾಗಿದ್ದರೆ ಪ್ರತಿಯೊಂದು ದಾಳಿಯೂ ರಾಹುಲ್‌ರನ್ನೇ ಗುರಿಯಾಗಿಸಿದೆಯಲ್ಲ? ಯಾರೂ ಕೂಡ ಭರತ್‌ ಸೋಲಂಕಿ, ಅರ್ಜುನ್‌ ಮೊಧ್ವಾಡಿಯಾ ವಿರುದ್ಧ ಮಾತನಾಡುತ್ತಿಲ್ಲ...
ಕಾಂಗ್ರೆಸ್‌ ಯಾರನ್ನೂ ಅಭ್ಯರ್ಥಿಯನ್ನಾಗಿಸಿಲ್ಲವಲ್ಲ? ಹಾಗಿದ್ದರೆ ನಾವು ಯಾರ ಮೇಲೆ ಅಟ್ಯಾಕ್‌ ಮಾಡಬೇಕು ನೀವೇ ಹೇಳಿ? ಗುಜರಾತ್‌ನಲ್ಲಿ ಕಾಂಗ್ರೆಸ್‌ ನಾಯಕರ್ಯಾರು ಹೇಳಿ? 

- ಹಾಗಿದ್ದರೆ ಬಿಜೆಪಿಯ ಮುಖವ್ಯಾರು?
ನಾವು ವಿಜಯ್‌ಭಾಯ್‌(ವಿಜಯ್‌ ರೂಪಾನಿ) ಮತ್ತು ನಿತಿನ್‌ ಭಾಯ್‌(ನಿತಿನ್‌ ಪಟೇಲ್‌) ನೇತೃತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. 

- ಹಾಗಿದ್ದರೆ ಬಿಜೆಪಿ ಒಂದು ವೇಳೆ ಸೋತರೆ, ಅದರ ಹೊಣೆಯನ್ನು ಇವರಿಬ್ಬರ ತಲೆಗೇ ಕಟ್ಟಲಾಗುತ್ತದಾ?
ನಾವು ಸೋಲುತ್ತೇವೆ ಎನ್ನುವ ನಿಮ್ಮ ಕಲ್ಪನೆಯಿದೆಯಲ್ಲ, ಇದು ಎಂದಿಗೂ ನಿಜವಾಗದು. 150 ಸೀಟು ನಮ್ಮದಾಗುತ್ತದೆ. 

- ಕಾಂಗ್ರೆಸ್‌ ಪಕ್ಷ ನಿಮ್ಮ ಮಗನ ವಿರುದ್ಧ ಆರೋಪ ಮಾಡುತ್ತಿದೆ(ಅವರ ಆರ್ಥಿಕ ವಹಿವಾಟಿನ ಕುರಿತ ವರದಿಗಳನ್ನಾಧರಿಸಿ). ನಿಮ್ಮ ಪ್ರತಿಕ್ರಿಯೆಯೇನು?
ಇದರಲ್ಲಿ ಉತ್ತರಿಸುವಂಥದ್ದೇನೂ ಇಲ್ಲ. ನನ್ನ ಮಗನ ವಿರುದ್ಧ ಆರೋಪ ಮಾಡಲಾಯಿತು. ಅವನು ಕೋರ್ಟ್‌ ಮೆಟ್ಟಿಲೇರಿದ್ದಾನೆ. ಆ 80 ಕೋಟಿ ರೂಪಾಯಿ ಏನಿದೆ, ಅದು ಟರ್ನ್ಓವರ್‌ ಹೊರತು, ಲಾಭವಲ್ಲ. 80 ಕೋಟಿ ಗಳಿಸಿದ್ದಾರೆ ಎನ್ನಲಾಗುತ್ತಿದೆಯಲ್ಲ, 80 ಕೋಟಿ ಗಳಿಸಿಲ್ಲ, 1.5 ಕೋಟಿ ರೂಪಾಯಿ ನಷ್ಟವಾಗಿದೆ. ಜನರಿಗೆ ಟರ್ನ್ಓವರ್‌ ಮತ್ತು ಪ್ರಾಫಿಟ್‌ ನಡುವೆ ವ್ಯತ್ಯಾಸವೇ ಗೊತ್ತಿಲ್ಲವೆಂದರೆ ಅವರಿಗೆ ಉತ್ತರಿಸುವ ಅಗತ್ಯವಾದರೂ ಏನಿದೆ?

- ಸೊಹ್ರಾಬುದ್ದೀನ್‌ ಶೇಖ್‌ ಎನೌRಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ಸಾವಿನ ಬಗ್ಗೆ ವರದಿಗಳು ಪ್ರಕಟವಾಗಿವೆ..
ಅದಕ್ಕೆ ವಿರುದ್ಧವಾದ ವರದಿಗಳೂ ಬಂದಿವೆ. ಅದನ್ನು ಪ್ರತಿಕ್ರಿಯೆಯಾಗಿ ಪ್ರಕಟಿಸಿ.

- ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

Back to Top