CONNECT WITH US  

ಬಾನದಾರಿಯಲ್ಲಿ ಚಂದ್ರನ ಹೈ ಡ್ರಾಮಾ

ಸೂಪರ್‌ಮೂನ್‌ ಮಾನಸಿಕ ಸ್ಥಿತಿ ಮೇಲೆ ಅಡ್ಡ ಪರಿಣಾಮ ಉಂಟುಮಾಡುವುದಿಲ್ಲ

ಜನವರಿ 31, 2018ರ ಸಂಜೆ 6.21ಕ್ಕೆ ಭೂಗೋಳದ ಅರ್ಧ ಭಾಗಕ್ಕೂ ಹೆಚ್ಚಿನ ಪ್ರದೇಶಗಳ ಜನ ಸಮೂಹ ಹಾಗೂ ಪರಿಸರ ವಿಶಿಷ್ಟ ಹಾಗೂ ಅಪರೂಪದ ಘಟನೆಗೆ ಸಾಕ್ಷಿಯಾಗಲಿದೆ. ಭೂ ವಿಜ್ಞಾನಿಗಳ ಸ್ವರ್ಗ ಎಂದೇ ಕರೆಯಲ್ಪಡುವ ಚಂದ್ರ ಈ ಘಟನೆಯ ಕೇಂದ್ರಬಿಂದು. ಭಾರತೀಯರ ಪಾಲಿಗೆ ತಿಂಗಳಿನ ಎರಡನೆಯ ಹುಣ್ಣಿಮೆಯನ್ನುಂಟು ಮಾಡುವುದರ ಜೊತೆಗೆ ಪೂರ್ಣ ಗ್ರಹಣ ಗ್ರಸ್ತನಾಗಿ ಕೆಂಬಣ್ಣದೊಂದಿಗೆ ಮಿಂಚಲಿರುವ ಚಂದ್ರ ವಿಜ್ಞಾನಿಗಳ, ವಿದ್ಯಾರ್ಥಿಗಳ ಆಸಕ್ತಿ ಕೆರಳಿಸಿದ್ದಾನೆ. ಪುರೋಹಿತರಿಗೆ, ಜ್ಯೋತಿಷಿ ಗಳಿಗೆ, ಭವಿಷ್ಯ ನುಡಿಯುವವರಿಗೆ ವಿಪರೀತ ಕೆಲಸ ನೀಡಿದ್ದಾನೆ. ಅಂದು ಸಂಜೆ ಸೂರ್ಯಾಸ್ತದ ಸಮಯದಲ್ಲಿ ಮನೆಯ ಎತ್ತರಕ್ಕೇ ಕಾಣಸಿಗುವ ಚಂದ್ರ ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತ ಶೇ. 14ರಷ್ಟು ದೊಡ್ಡದಾಗಿಯೂ, ಶೇ.30ರಷ್ಟು ಹೆಚ್ಚು ಪ್ರಕಾಶ ಮಾನವಾಗಿಯೂ ಕಾಣುತ್ತಾನೆ! ಅಲ್ಲದೆ ಇಂತಹ ಅತ್ಯಪರೂಪದ ಘಟನೆ ಭಾರತೀಯರ ಪಾಲಿಗೆ ದೊರೆತದ್ದು 36 ವರ್ಷಗಳ ಹಿಂದೆ. ಅಮೆರಿಕಾದವರು ಇದನ್ನು ವೀಕ್ಷಿಸಿದ್ದು ಬರೋಬ್ಬರಿ 150 ವರ್ಷಗಳ ಹಿಂದೆ! ಅಪರೂಪಕ್ಕೆ ಕರ್ನಾಟಕದ ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರಹಣವನ್ನು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ವೀಕ್ಷಿಸುವಂತೆ ಸೂಚಿಸಬೇಕು ಎಂದು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. 

ಸೂಪರ್‌ ಬ್ಲೂ ಬ್ಲಿಡ್‌ ಮೂನ್‌
ಹುಣ್ಣಿಮೆಯ ಚಂದ್ರ ಭೂಮಿಯ ಸಮೀಪ ಇದ್ದು ಎಂದಿಗಿಂತ ದೊಡ್ಡದಾಗಿ ಪ್ರಖರವಾಗಿ ಕಾಣುವುದಕ್ಕೆ ಸೂಪರ್‌ಮೂನ್‌ ಎನ್ನುತ್ತಾರೆ. ತಿಂಗಳೊಂದರಲ್ಲಿ ಬರುವ ಎರಡನೆಯ ಹುಣ್ಣಿಮೆಗೆ ಬ್ಲೂ ಮೂನ್‌ ಎನ್ನುತ್ತಾರೆ. ಅಗ ಖಗ್ರಾಸ ಅಂದರೆ ಪೂರ್ಣ ಗ್ರಹಣ ಗ್ರಸ್ತ ಚಂದ್ರ ತಾಮ್ರವರ್ಣದಲ್ಲಿ ಗೋಚರಿಸುವುದರಿಂದ ಬ್ಲಿಡ್‌ ಮೂನ್‌ ಎಂದು ಹೆಸರುಬಂದಿದೆ. ಈ ಮೂರು ಒಟ್ಟಿಗೆ ಘಟಿಸಿದರೆ ಅದನ್ನು ಸೂಪರ್‌ ಬ್ಲೂ ಬ್ಲಿಡ್‌ ಮೂನ್‌ ಎನ್ನುತ್ತೇವೆ. ಅತ್ಯಂತ ಅಪರೂಪಕ್ಕೆ ಘಟಿಸುವ ಇಂಥ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ವಿಶ್ವದ ಕೋಟ್ಯಂತರ ಜನ ಟೆಲಿಸ್ಕೋಪ್‌ಗ್ಳನ್ನು ಹಿಡಿದು ಸನ್ನದ್ಧರಾಗುತ್ತಿದ್ದಾರೆ. ದೆಹಲಿಯ ಇಂಡಿಯಾ ಗೇಟ್‌, ಚೆನ್ನೆçನ ಎಲಿಯಟ್‌ ಬೀಚ್‌, ಬೆಂಗಳೂರಿನ ನೆಹರೂ ತಾರಾಲಯಗಳು ಆಕಾಶ ಕುತೂಹಲಿಗಳಿಂದ ತುಂಬಿಹೋಗಲಿವೆ. ನಾರ್ತ್‌ ಅಮೆರಿಕ, ಅಲಾಸ್ಕ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ಮಧ್ಯ ಹಾಗೂ ಪೂರ್ವ ಏಶಿಯಾ ಮತ್ತು ಹವಾಯ್‌ ಭಾಗದ ಜನ ಈ ನೆರಳು ಬೆಳಕಿನಾಟಕದ ಪ್ರತಿಕ್ಷಣವನ್ನು ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಗ್ರಹಣ ಕಾಲದಲ್ಲಿ ಚಂದ್ರನ ಮೇಲಿನ ಉಷ್ಣಾಂಶ ಗಣನೀಯವಾಗಿ ಕಡಿಮೆಯಾಗುತ್ತದೆ, ಅದರೆ ಅದು ಹೇಗೆ ಎಂದರಿಯಲು ಕೊಲರ್ಯಾಡೊ ವಿವಿಯ ವಿಜ್ಞಾನಿಗಳು ಚಂದ್ರನ ಮೇಲಿನ ಶಿಲೆಗಳ ಕುರಿತು ಅಭ್ಯಸಿಸಲು ಸಿದ್ಧತೆ ನಡೆಸಿದ್ದಾರೆ. 

ತ್ರಿವಳಿ ಘಟನೆ ಏಕೆ-ಹೇಗೆ?
ಚಂದ್ರ ಭೂಮಿಯ ನೈಸರ್ಗಿಕ ಉಪಗ್ರಹ. ಸೌರಮಂಡಲದ ಅವಿಭಾಜ್ಯ ಅಂಗವಾಗಿ ಸೂರ್ಯ, ಭೂಮಿ ಹಾಗೂ ತನ್ನ ಸುತ್ತಲೂ ಸುತ್ತುತ್ತಾ ತಿಂಗಳಿಗೊಮ್ಮೆ ಭೂಮಿಯ ಜನರಿಗೆ ಹುಣ್ಣಿಮೆಯ ಬೆಳಕನ್ನು ಹಂಚುತ್ತಾ ಸಾಗುತ್ತಾನೆ. ವರ್ಷವೊಂದರಲ್ಲಿ 13 ಹುಣ್ಣಿಮೆ ಗಳು, 3-4 ಸೂಪರ್‌ಮೂನ್‌ಗಳು ಮತ್ತು 3-4 ಬ್ಲೂ ಮೂನ್‌ಗಳು ಇರುತ್ತವೆ. ಆದರೆ ಸೂಪರ್‌ ಬ್ಲೂ ಬ್ಲಿಡ್‌ಮೂನ್‌ ಸಂಭವಿಸು ವುದು ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಮಾತ್ರ. ಅಲ್ಲದೆ ಚಂದ್ರ ಭೂಮಿಗೆ ಅತೀ ಸಮೀಪ ಬಿಂದುವಿನಲ್ಲಿರಲೇಬೇಕು. ಈ ರೀತಿ ಚಂದ್ರ ಭೂಮಿಗೆ ಅತೀ ಸಮೀಪ ಬಿಂದುವಿನಲ್ಲಿರುವುದು 18 ವರ್ಷ, 11 ದಿನ ಮತ್ತು 8 ಗಂಟೆಗಳಿಗೊಮ್ಮೆ ಮಾತ್ರ. ಆ ಸಮಯದಲ್ಲಿ ಚಂದ್ರನ ಬಹುಭಾಗ ಭೂಮಿಯ ದಟ್ಟ ನೆರಳಿನಡಿ ಬಂದರೆ ಖಗ್ರಾಸ ಗ್ರಹಣ ಸಂಭವಿಸುತ್ತದೆ. ಈ ಆವರ್ತ ಅವಧಿಯನ್ನು ಖಗೋಳ ಭಾಷೆಯಲ್ಲಿ ಸಾರೋಸ್‌ ಎಂದು ಕರೆಯುತ್ತಾರೆ. ಚಂದ್ರನಿಂದ ಭೂಮಿ ಗಿರುವ ಸರಾಸರಿ ದೂರ 3,82,900 ಕಿ.ಮೀ.ಗಳು. ಭೂಮಿಯ ಸುತ್ತ ಚಂದ್ರನ ತಿರುಗುವ ಕಕ್ಷೆ ಪೂರ್ಣ ವೃತ್ತಾಕಾರದಲ್ಲಿಲ್ಲವಾದ್ದರಿಂದ ಜನವರಿ 31 ರಂದು ಚಂದ್ರ ಭೂಮಿಯಿಂದ 3,56,565 ಕಿ.ಮಿ.ನಷ್ಟು ದೂರದಲ್ಲಿದ್ದು ಸರಾಸರಿ ದೂರಕ್ಕಿಂತ 26,335 ಕಿ.ಮೀ. ಹತ್ತಿರವಿರುತ್ತಾನೆ.

ಚಾಂದ್ರಮಾನ ಕ್ಯಾಲೆಂಡರ್‌ನ ಪ್ರಕಾರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಗೆ ಇರುವ ಅಂತರ 29.5 ದಿನಗಳು ಮಾತ್ರ. ಅದರೆ ವಿಶ್ವಾದ್ಯಂತ ಬಳಸಲ್ಪಟುವ ಗ್ರೆಗೇರಿಯನ್‌ ಕ್ಯಾಲೆಂಡರ್‌ ಪ್ರಕಾರ ಈ ಅವಧಿ 28 ರಿಂದ 31 ದಿನಗಳು. ಹಾಗೆಂದೇ ತಿಂಗ ಳೊಂದರಲ್ಲಿ ಎರಡು ಹುಣ್ಣಿಮೆಗಳು ಬರಲು ಸಾಧ್ಯ. ಎರಡನೆಯ ಹುಣ್ಣಿಮೆಯನ್ನೇ ನಾವು ಬ್ಲೂಮೂನ್‌ ಎನ್ನುತ್ತೇವೆ. ಹಾಗಾದರೆ ಪ್ರತೀ ಬ್ಲೂ ಮೂನ್‌ನಂದು ಗ್ರಹಣ ಸಂಭವಿಸುತ್ತದೆಯೆ? ಎಂಬ ಪ್ರಶ್ನೆ ಏಳುತ್ತದೆ. ಇಲ್ಲ. ಹಾಗಾಗದಿರಲು ಕಾರಣವಿದೆ. ಭೂಮಿಯ ಸೌರಕಕ್ಷೆ ಮತ್ತು ಚಂದ್ರ ಭೂಮಿಯ ಸುತ್ತ ಸುತ್ತಲು ಬಳಸುವ ಕಕ್ಷೆಗಳ ನಡುವೆ 5 ಡಿಗ್ರಿಗಳ ವ್ಯತ್ಯಾಸವಿದೆ. ಪ್ರತೀ ಹುಣ್ಣಿಮೆ
ಯಂದು ಭೂಮಿ ಸೂರ್ಯ ಮತ್ತು ಚಂದ್ರರ ನಡುವೆ ಬರುತ್ತದೆ ಯಾದರೂ ಕಕ್ಷೆಗಳ ಏರಿಳಿತದಿಂದಾಗಿ ಭೂಮಿಯ ನೆರಳು 
ಚಂದ್ರನ ಮೇಲೆ ಬೀಳುವುದಿಲ್ಲ ಮತ್ತು ಗ್ರಹಣ ಸಂಭವಿಸುವುದಿಲ್ಲ. ಚಂದ್ರ ಭೂಮಿಯ ನೆರಳಿನ ಮೇಲೆ ಅಥವಾ ಕೆಳಗೆ ಇರುವುದರಿಂದ ಚಂದ್ರನ ಮೇಲೆ ತಲುಪುವ ಸೂರ್ಯನ ಬೆಳಕಿಗೆ ಭೂಮಿ ಅಡ್ಡಬರುವುದಿಲ್ಲ. ಅದ್ದರಿಂದ ಆಗ ಗ್ರಹಣ ಸಂಭವಿ ಸುವುದಿಲ್ಲ. ವರ್ಷವೊಂದರಲ್ಲಿ 13 ಹುಣ್ಣಿಮೆಗಳು ಬಂದರೂ ಚಂದ್ರಗ್ರಹಣಗಳ ಸಂಖ್ಯೆ 3ಕ್ಕಿಂತ ಹೆಚ್ಚಿರುವುದಿಲ್ಲ.

ಚಂದ್ರನ ವಿಶೇಷ ಬಣ್ಣಕ್ಕೆ ಕಾರಣ
ಸಾಮಾನ್ಯವಾಗಿ ಗ್ರಹಣ ಸಂಭವಿಸಿದಾಗ ಗ್ರಹಣಗ್ರಸ್ತ ಆಕಾಶ ಕಾಯ ಕಪ್ಪಾಗಿ ಕಾಣಿಸುತ್ತದೆ. ಇಲ್ಲಿ ಹಾಗಾಗದೆ ಗ್ರಹಣಗ್ರಸ್ತ ಚಂದ್ರ ಕೆಂಪಾದ ತಾಮ್ರವರ್ಣಧಾರಿಯಾಗಿ ಕಂಗೊಳಿಸುತ್ತದೆ. ಇದಕ್ಕೆ ಕಾರಣ ಭೂಮಿಯ ವಾತಾವರಣ. ಚಂದ್ರಗ್ರಹಣದ ಸಮಯದಲ್ಲಿ ಭೂಮಿಯ ಘನಭಾಗ ಸೂರ್ಯನ ಬೆಳಕನ್ನು ತಡೆಹಿಡಿ ಯುತ್ತದಾದರೂ ಭೂಮಿಯ ಮೇಲಿನ ಪಾರದರ್ಶಕ ವಾತಾ ವರಣ ಸ್ವಲ್ಪ ಮಟ್ಟಿನ ಸೂರ್ಯನ ಬೆಳಕನ್ನು ಹಾಯಲುಬಿಡುತ್ತದೆ. ಆಗ ಸೂರ್ಯನ ಬೆಳಕಿನಲ್ಲಿರುವ ನೀಲಿಯ ಬಣ್ಣ ಚದುರಿ ಹೋಗಿ ಹೆಚ್ಚು ಚದುರುವಿಕೆ ಇರದ ಕೆಂಪು ಬಣ್ಣದ ಬೆಳಕು ಚಂದ್ರನ ಮೇಲೆ ಬಿದ್ದು ಚಂದ್ರ ದಟ್ಟವಾದ ತಾಮ್ರದ ಕೆಂಬಣ್ಣದಿಂದ ಹೊಳೆಯುತ್ತಾನೆ. ಆ ಕಡು ತಾಮ್ರ ವರ್ಣದ ಚಂದ್ರನನ್ನು ಬ್ಲಿಡ್‌ ಮೂನ್‌ ಎಂದು ಕರೆಯಲಾಗುತ್ತದೆ.

ಗ್ರಹಣ ವಿಶೇಷಗಳು
1    ಈ ಗ್ರಹಣ ಎಷ್ಟು ವಿಶೇಷವೆಂದರೆ 2,380 ಹುಣ್ಣಿಮೆಗಳಲ್ಲಿ ಕೇವಲ ಒಂದು ಬಾರಿ ಸೂಪರ್‌ ಬ್ಲೂ ಬ್ಲಿಡ್‌ ಮೂನ್‌ ಸಂಭವಿಸುತ್ತದೆ.
2    ಜಗತ್ತಿನ ನಿರ್ದಿಷ್ಟ ಭಾಗದಲ್ಲಿ ಈ ವಿದ್ಯಮಾನ ಗೋಚರಿಸುವುದು 265 ವರ್ಷಗಳಿಗೊಮ್ಮೆ. 
3    ಭಾರತದ ಯಾವುದೇ ಭಾಗದಲ್ಲಿ ಎಲ್ಲೆಲ್ಲಿ ಚಂದ್ರೋದಯವಾಗುತ್ತದೋ ಅಲ್ಲೆಲ್ಲ ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು.
4    ಗ್ರಹಣ ಚಂದ್ರೋದಯದ ಸಮಯದಲ್ಲಿ ಪೂರ್ವ ದಿಗಂತದಲ್ಲಿ ಗೋಚರಿಸುತ್ತದೆ.
5    ಗ್ರಹಣದ ಅವಧಿ 3 ಗಂಟೆ 11 ನಿಮಿಷಗಳು. ಗ್ರಹಣ ಸಾಯಂಕಾಲಕ್ಕೂ ಮುನ್ನ ಪ್ರಾರಂಭವಾಗಿರುತ್ತದೆ. ನಮಗೆ ಗೋಚರಿಸುವ ಚಂದ್ರ ಗ್ರಹಣಗ್ರಸ್ತನಾಗಿಯೇ   6.15ಕ್ಕೆ ಗೋಚರಿಸುತ್ತಾನೆ. 6.21ಕ್ಕೆ ಖಗ್ರಾಸ ಚಂದ್ರಗ್ರಹಣ ಕಂಡುಬರುತ್ತದೆ. ರಾತ್ರಿ 8.30ರ ಹೊತ್ತಿಗೆ ಗ್ರಹಣ ಪೂರ್ಣಗೊಳ್ಳುತ್ತದೆ.
6    ಗ್ರಹಣದ ಪ್ರಾರಂಭದಲ್ಲಿ ಚಂದ್ರ ಭೂಮಿಯ ಕ್ಷಿತಿಜರೇಖೆಯಿಂದ ಕೆಳಗಿರುವುದರಿಂದ ಗ್ರಹಣದ ಪ್ರಾರಂಭದ ಹಂತ ನವåಗೆ ಗೋಚರಿಸುವುದಿಲ್ಲ.
7    ಚಂದ್ರ ಭೂಮಿಯ ಸಮೀಪ ಬಿಂದುವಿನ ಬಳಿ ಜನವರಿ 30ರ ಮಧ್ಯಾಹ್ನ 3.26ಕ್ಕೆ ಬಂದಿರುತ್ತದೆಯಾದರೂ ಹುಣ್ಣಿಮೆ ಘಟಿಸುವುದು ಅದಾದ 27 ಗಂಟೆ 30 ನಿಮಿಷಗಳ ನಂತರ. ಭೂಮಿಯ ಸಮೀಪ ಬರುವ ಚಂದ್ರನ ಈ ಕ್ರಿಯೆಯನ್ನು ಪೆರಿಗೀ ಎನ್ನುತ್ತಾರೆ.
8    2018ರಲ್ಲಿ 13 ಹುಣ್ಣಿಮೆಗಳು ಮತ್ತು 3-4 ಲೂನಾರ್‌ ಪೆರಿಗೀಗಳು ಸಂಭವಿಸುತ್ತವೆ.
9    ಆಫ್ರಿಕಾ, ಯುರೋಪ್‌ ಮತ್ತು ದಕ್ಷಿಣ ಅಮೆರಿಕಾದ ಭಾಗಗಳಲ್ಲಿ ಇದು ಗೋಚರಿಸುವುದಿಲ್ಲ.
10 ಹಿಂದಿನ ಸೂಪರ್‌ ಮೂನ್‌ಗಳು: ಜನವರಿ 26, 1948, ಡಿಸೆಂಬರ್‌ 1, 1982 

ಮುಂದಿನ ಸೂಪರ್‌ ಮೂನ್‌: ನವೆಂಬರ್‌ 25, 2034. 
ಶತಮಾನದ ಸೂಪರ್‌ ಮೂನ್‌ : ಡಿಸೆಂಬರ್‌ 6, 2052.

ಗ್ರಹಣ ಗಹನ
1    ಚಂದ್ರ ದೊಡ್ಡದಾಗಿಯೂ ಪ್ರಖರವಾಗಿಯೂ ಕಾಣುತ್ತಾನೆ ಎನ್ನುವುದನ್ನು ಅನೇಕ ವಿಜ್ಞಾನಿಗಳು ಅಲ್ಲಗಳೆಯುತ್ತಾರೆ. ಕಾರಣವಿಷ್ಟೆ ಸಂಜೆಯ ವೇಳೆ ಚಂದ್ರ ಭೂಮಿಯ ಕ್ಷಿತಿಜ ರೇಖೆಯ ಮೇಲೆ ಬರುವುದರಿಂದ ಮನೆಯ ಮರಗಳ ಬಳಿ ಕೆಳ ಹಂತದಲ್ಲಿ ಕಾಣವುದರಿಂದ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತಿದೆ ಎನ್ನಿಸುತ್ತದೇ ಹೊರತು ವಾಸ್ತವದಲ್ಲಿ ಹಾಗಿರುವುದಿಲ್ಲ.

2    ಸಾಗರದ ಅಲೆಗಳಲ್ಲಿ ಭಾರೀ ಏರಿಳಿತ ಕಂಡುಬರುತ್ತದೆ ಎಂಬುದು ಆಧಾರವಿಲ್ಲದ ಮಾತು. ಪ್ರತೀ ಹುಣ್ಣಿಮೆಯಂದು ಸಾಗರದಲ್ಲಿ ಏಳುವ ಅಲೆಗಳಂತೆಯೇ ಅಂದೂ ಅಲೆಗಳಿರುತ್ತವೆ. ಅತೀ ಹೆಚ್ಚೆಂದರೆ ಅಲೆಗಳ ಎತ್ತರದಲ್ಲಿ 1 ಇಂಚು ಏರಿಕೆ ಕಂಡುಬರಬಹುದು. ಅದೇ ನಮ್ಮ ಭಾಗ್ಯ ಎನ್ನುತ್ತಾರೆ ವಿಜ್ಞಾನಿಗಳು.

3    ವರ್ಷಕ್ಕೆ ಒಂದು ಬಾರಿ ಸೂಪರ್‌ಮೂನ್‌ ಸಂಭವಿಸುತ್ತದೆ. ಇದನ್ನು ಭೂಮಿಯ ಉತ್ತರ ಹಾಗೂ ದಕ್ಷಿಣ ಗೋಳಗಳೆರಡರಿಂದಲೂ ವೀಕ್ಷಿಸಬಹುದು.

4    ಸೂಪರ್‌ಮೂನ್‌ ಮನುಷ್ಯ ಅಥವ ಪ್ರಾಣಿಯ ಮಾನಸಿಕ ಸ್ಥಿತಿಯ ಮೇಲೆ ಯಾವ ಅಡ್ಡ ಉದ್ದ ಪರಿಣಾಮಗಳನ್ನುಂಟು ಮಾಡುವುದಿಲ್ಲ. ಭೂಮಿಯ ಆಂತರಿಕ ಶಕ್ತಿಯ ಮೇಲೂ ಯಾವ ಪರಿಣಾಮ ಇರುವುದಿಲ್ಲ.

5    ಮುಂಬರುವ ದಿನಗಳ ಸೂಪರ್‌ಮೂನ್‌ ಈಗ ಗೋಚರಿಸುವುದಕ್ಕಿಂತ ಚಿಕ್ಕದಾಗಿರುತ್ತದೆ. ಚಂದ್ರ ನಿಧಾನವಾಗಿ ಭೂಕಕ್ಷೆಯಿಂದ ದೂರ ಹೋಗುತ್ತಿರುವುದೇ ಇದಕ್ಕೆ ಕಾರಣ. ಪ್ರತಿ ವರ್ಷ ಚಂದ್ರ 3.8 ಸೆ.ಮೀ. ದೂರ ಸರಿಯುತ್ತಿದೆ ಎಂಬ ಮಾಹಿತಿ ಇದೆ. ಸೌರಮಂಡಲ ಅವಿರ್ಭವಿಸಿದಾಗ ಚಂದ್ರ ಭೂಮಿಯಿಂದ 22,530 ಕಿ.ಮೀ. ದೂರವಿತ್ತು ಆದರೆ ಈಗ ಇರುವ ಅತಿ ಹೆಚ್ಚಿನ ದೂರ 384402 ಕಿ.ಮೀ.ಗಳು. ಏನೇ ಇರಲಿ ಹೊಸವರ್ಷದ ಮೊದಲ ತಿಂಗಳ ಕೊನೆಯ ದಿನ ಅಪರೂಪದ ವಿಶಿಷ್ಟ ಖಗೋಳ ವಿದ್ಯಮಾನವೊಂದನ್ನು ಜಗತ್ತಿಗೆ ತೆರೆದಿಡಲಿದೆ. ಬಿಡುವು ಮಾಡಿಕೊಂಡು, ಯಾವುದೇ ಭಯವಿಲ್ಲದೆ ಎತ್ತರದ ಪ್ರದೇಶಗಳಲ್ಲಿ ನಿಂತು ಅತ್ಯಾಕರ್ಷಕ ಕ್ಷಣವೊಂದನ್ನು ನಿಮ್ಮ ಸ್ಮತಿತಪಟಲದಲ್ಲಿ ದಾಖಲಿಸಿಕೊಂಡು ಚಂದ್ರನ ಚಮತ್ಕಾರಕ್ಕೆ ಕಂಗ್ರಾಟ್ಸ್‌ ಹೇಳಿ ಆನಂದಿಸಿರಿ.

ಭಾರತದಲ್ಲಿ ಮುಂದಿನ ಬ್ಲೂ ಮೂನ್‌ ಸಂಭವಿಸುವ ದಿನಾಂಕ 31 ಮಾರ್ಚ್‌ 2018. ಫೆಬ್ರವರಿ ತಿಂಗಳಿನಲ್ಲಿ ಭಾರತಕ್ಕೆ ಹುಣ್ಣಿಮೆಯೇ ಇರುವುದಿಲ್ಲ.

ಗುರುರಾಜ್‌ ದಾವಣಗೆರೆ

Trending videos

Back to Top