CONNECT WITH US  

ಇಲೆಕ್ಟ್ರಿಕ್‌ ಕಾರಿನಲ್ಲಿ ಒಂದು ಸುತ್ತು

ತಂತ್ರಜ್ಞಾನದ ಸವಾಲುಗಳನ್ನು ಮೀರಲು ಹವಣಿಸುವ ತವಕದಲ್ಲಿ ಎಲ್ಲರೂ ಮರೆಯುತ್ತಿರುವುದು ಈ ವಾಹನಗಳನ್ನು ಓಡಿಸಲು ಬಳಸುವ ವಿದ್ಯುತ್‌ ನಿಜವಾಗಿಯೂ ಪರಿಸರಕ್ಕೆ ಪೂರಕವೇ ಅನ್ನುವುದು. 

ವಾಯು ಮಾಲಿನ್ಯದ ಚರ್ಚೆ ಬಿರುಸಾಗುತ್ತಿರುವ ಈ ಕಾಲದಲ್ಲಿ ಇಲೆಕ್ಟ್ರಿಕ್‌ ಗಾಡಿಗಳೇ ಪರಿಹಾರ ಅನ್ನುವಂತಹ ಮಾತುಗಳು ಹಲವು ಕಡೆ ಕೇಳಿಬರುತ್ತಿವೆ. ಬೆಂಗಳೂರಿನಂತಹ ದಟ್ಟಣೆಯ ಊರಿನಲ್ಲಿ ಅಲ್ಲಲ್ಲಿ ರೇವಾದಂತಹ ಪುಟಾಣಿ ಇಲೆಕ್ಟ್ರಿಕ್‌ ಕಾರುಗಳು ಕಂಡುಬಂದರೂ ಅವುಗಳ ಬಳಕೆ ಇನ್ನೂ ತುಂಬಾ ಕಡಿಮೆ ಇದೆ. ಇಲೆಕ್ಟ್ರಿಕ್‌ ಗಾಡಿಗಳು ದುಬಾರಿಯಾಗಿರುವುದು, ಅವುಗಳ ಓಟದ ಇತಿ-ಮಿತಿ ಮತ್ತು ಗಾಡಿಯನ್ನು ಚಾರ್ಜ್‌ ಮಾಡಲು ವಿದ್ಯುತ್‌ ಪೂರೈಕೆಯ ಕೊರತೆ ಮುಂತಾದವುಗಳು ಅವುಗಳ ಬಳಕೆಗೆ ಅಡೆತಡೆಯಾಗಿವೆ.

ಕಳೆದ ಒಂದೆರಡು ವರ್ಷಗಳಲ್ಲಿ ವಿಶ್ವದೆಲ್ಲೆಡೆ ವಾಯು ಮಾಲಿನ್ಯದ ಸಮಸ್ಯೆಗೆ ಮುಂದಿಡುತ್ತಿರುವ ಪರಿಹಾರ ವೆಂದರೆ ಇಲೆಕ್ಟ್ರಿಕ್‌ ಗಾಡಿಗಳ ಬಳಕೆ ಹಾಗೂ ಅದಕ್ಕೆ ತಕ್ಕ ವ್ಯವಸ್ಥೆಯ ಕಟ್ಟಣೆ. ವಾಯುಮಾಲಿನ್ಯದ ತೊಂದರೆಯೇನೋ ನಿಜ ಆದರೆ ಅದಕ್ಕೆ ಇಲೆಕ್ಟ್ರಿಕ್‌ ಗಾಡಿಗಳು ನಿಜವಾಗಿ ಪರಿಹಾರವೇ? ಹೌದು, ಇವುಗಳೇ ಪರಿಹಾರವೆಂದಾದರೆ ಇರುವ ಸವಾಲುಗಳೇನು? ಅಲ್ಲ ಅಂತಾದರೆ ಮುಂದಿನ ದಾರಿಗಳೇನು? ವಾಯುಮಾಲಿನ್ಯ ಇವತ್ತಿನ ಮಟ್ಟಕ್ಕೆ, ಭೂಮಿಯ ಎಲ್ಲಾ ಜೀವಸಂಕುಲಕ್ಕೇ ಮಾರಕವಾದ, ಮನುಷ್ಯನ ಕೊಡುಗೆ ಎಂದರೆ ತಪ್ಪಾಗಲಾರದು. 2015ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೊರತಂದ ವರದಿಯಂತೆ ಪ್ರತಿ ವರುಷ ಸುಮಾರು 70 ಲಕ್ಷ ಮಂದಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗಿ ಜಗತ್ತಿನೆಲ್ಲೆಡೆ ಸಾವನ್ನಪ್ಪುತ್ತಿದ್ದಾರೆ. ಪ್ರತಿ 8 ಸಾವುಗಳಲ್ಲಿ 1 ಸಾವು ವಾಯುಮಾಲಿನ್ಯ ದಿಂದಾನೇ ಆಗುತ್ತಿದೆ ಅನ್ನುತ್ತದೆ ವರದಿ. ವಾಯುಮಾಲಿನ್ಯ ಹೆಚ್ಚಾಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಕಾಡಿಗೆ ಬೆಂಕಿ, ಜ್ವಾಲಾಮುಖೀಗಳಂತಹ ನೈಸರ್ಗಿಕ ಕಾರಣಗಳನ್ನು ಹೊರತು ಪಡಿಸಿದರೆ ಮನುಷ್ಯರ ಕೊಡುಗೆಗಳೇ ಹೆಚ್ಚು. ವಾಯುಮಾಲಿನ್ಯದಲ್ಲಿ ವಾಹನಗಳ ಪಾಲು ಸರಿ ಸುಮಾರು 20-30% ನಷ್ಟಿದೆ. ಹೀಗಾಗಿ ವಾಯುಮಾಲಿನ್ಯದ ಮಾತು ಬಂದಾಗಲೆಲ್ಲಾ ವಾಹನಗಳು ಉಗುಳುವ ಕೆಡುಗಾಳಿಯ ಬಗ್ಗೆ ಮಾತಾಡುವುದು ಸಾಮಾನ್ಯವಾಗಿದೆ.

ವಾಯು ಮಾಲಿನ್ಯದ ಒಟ್ಟಾರೆ ಚಿತ್ರಣ ನೋಡಬಯ ಸಿದರೆ ನಮಗೆ ಕಾಣಸಿಗುವ ಎಷ್ಟೋ ಸಂಗತಿಗಳು ಹೊಸ ದೆ ನಿಸಬಹುದು. ಗಾಳಿಯಲ್ಲಿನ N2 (ನೈಟ್ರೋಜನ್‌), O2 (ಆಕ್ಸಿಜನ್‌) ವಾಹನಗಳ ಇಂಜಿನ್‌ಗಳಲ್ಲಿ ಡಿಸೆಲ್‌ ಮತ್ತು ಪೆಟ್ರೋಲ್‌ನಂತಹ ಉರು ವಲಿನೊಂದಿಗೆ ಬೆರೆತು ಕೆಡುಗಾಳಿಯಾದ NOx (ನೈಟ್ರೋಜನ್‌ ಆಕ್ಸೆçಡ್‌) ಮತ್ತು ಇO (ಕಾರ್ಬನ್‌ ಮೋನಾಕ್ಸೆçಡ್‌)ಗೆ ಮಾರ್ಪಡು ತ್ತವೆ. ಅಷ್ಟೇ ಅಲ್ಲದೇ ಮಸಿಯಂತಹ ಕೆಡುಕು ತುಣುಕು ಗಳು ವಾಹನಗಳ ಹೊಗೆಯಿಂದ ಹೊರಬೀಳುತ್ತವೆ. ವಾಹನ ಉಗುಳುವ ಕೆಡುಗಾಳಿ ಉಸಿರಾಟದ, ಗುಂಡಿ ಗೆಯ, ಮಿದುಳಿನ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ವಾಹನಗಳು ಉಗುಳುವ ಕೆಡುಗಾಳಿಯನ್ನು ಹತೋಟಿಯಲ್ಲಿಡುವುದು ಇಲ್ಲವೇ ಕೆಡುಗಾಳಿಯನ್ನು ಉಗುಳದೇ ಇರುವ ಇಲೆಕ್ಟ್ರಿಕ್‌ ಗಾಡಿಗಳ ಕಡೆಗೆ ಗಮನಹರಿಯುವುದು ಸಾಮಾನ್ಯವಾಗಿದೆ.

ಓಡಾಟಕ್ಕೆ ವಿದ್ಯುತ್‌ ಶಕ್ತಿಯನ್ನು ಬಳಸುವುದು ತುಂಬಾ ಹೊಸದೇನಲ್ಲ. ವಿದ್ಯುತ್‌ನಿಂದ ನಡೆಯುವ ರೈಲುಗಾಡಿಗಳ ಬಳಕೆ ಲಂಡನ್‌ನಂತಹ ಊರುಗಳಲ್ಲಿ 1940ರಷ್ಟು ಹಿಂದೆಯೇ ನಡೆದಿದೆ. ಆದರೆ ವಿದ್ಯುತ್‌ ಶಕ್ತಿಯನ್ನು ರೈಲು ಗಾಡಿಗೆ ಅಳವಡಿಸಿದಂತೆ ರಸ್ತೆಯಲ್ಲಿ ಸಾಗುವ ವಾಹನ ಗಳಿಗೆ ಅಳವಡಿಸುವುದು ಸುಲಭವಲ್ಲ. ಹೆಚ್ಚು ದೂರದ ವೆರೆಗೆ ಸಾಗಲು ಮತ್ತು ಅಗತ್ಯಕ್ಕೆ ತಕ್ಕಂತೆ ಹೆಚ್ಚು ಶಕ್ತಿಯನ್ನು ಹೊರಗೆಡಹಲು ಅನುವಾಗುವಂತೆ ವಿದ್ಯುತ್‌ ಶಕ್ತಿಯನ್ನು ವಾಹನಗಳಲ್ಲಿ ಅಳವಡಿಸುವುದು ಹೇಗೆ ಅನ್ನುವುದು ಎದುರಾಗುವ ದೊಡ್ಡ ಸವಾಲು. ಇದಕ್ಕಾಗಿ ದೊಡ್ಡ ಬ್ಯಾಟರಿಗಳನ್ನು ವಾಹನಗಳಲ್ಲಿ ಬಳಸುವುದೇ? ಬ್ಯಾಟರಿ ತಂತ್ರಜ್ಞಾನವನ್ನು ಮೇರುಮಟ್ಟಕ್ಕೆ ಕೊಂಡುಯ್ಯುವ ಕೆಲಸಕ್ಕೆ ಒತ್ತುಕೊಡುವುದೇ? ಬ್ಯಾಟರಿ ಬಳಸಿದರೂ ಅವುಗಳನ್ನು ಚಾರ್ಜ್‌ ಮಾಡುವುದು ಹೇಗೆ? ಎನ್ನುವಂತಹ ಪ್ರಶ್ನೆಗಳು ಎದುರಾಗುತ್ತವೆ. ಗಾಡಿಗಳ ಕಟ್ಟಣೆಯನ್ನು ಹೆಚ್ಚು ಬದಲಿಸದೇ ಬರಿಯ ಚಳಕವನ್ನು ಬದಲಿಸಿ, ಅದರಿಂದ ವಾಯುಮಾಲಿನ್ಯದ ಇಳಿಕೆಗೆ ಎಷ್ಟು ಸಾಧ್ಯವೋ ಅಷ್ಟು ಒತ್ತು ಕೊಡುವ ನಿಟ್ಟಿನಲ್ಲಿ ಇಂದು ಕೆಲಸಗಳು ಬಿರುಸುಗೊಂಡಿವೆ. ಈ ನಿಟ್ಟಿನಲ್ಲಿ ಹೈಬ್ರಿಡ್‌ ಕಾರುಗಳು ಒಂದು ಉದಾಹರಣೆ. ಇವುಗಳಲ್ಲಿ ಸಾಮಾನ್ಯ ಇಂಜಿನ್‌ ಜತೆಗೆ ಬ್ರೆಕ್‌ ಒತ್ತಿದಾಗ ಹಾಳಾಗುತ್ತಿದ್ದ ಶಕ್ತಿಯನ್ನು ಮರುಬಳಕೆ ಮಾಡುವ ಏರ್ಪಾಟನ್ನು ಅಳವಡಿಸಲಾಗಿರುತ್ತದೆ. 

ಇಂಜಿನ್‌ ತೆಗೆದು ಅದರ ಜಾಗದಲ್ಲಿ ಮೋಟರ್‌ ಕೂರಿಸಿ, ಅವಶ್ಯಕತೆಗೆ ತಕ್ಕಂತೆ ಗಿಯರ್‌ ಬಾಕ್ಸ್‌ ಅನ್ನು ಬದಲಿಸಿದರೆ ಎಲ್ಲಾ ಗಾಡಿಗಳೂ ಇಲೆಕ್ಟ್ರಿಕ್‌ ಗಾಡಿಗಳಾಗಿ ಮಾರ್ಪಾಡಾಗುತ್ತವೆ. ಆದರೆ ಸಮಸ್ಯೆ ಇರುವುದು ವಿದ್ಯುತ್‌ ಪೂರೈಕೆಯದು. ಇತ್ತೀಚಿನ ದಿನಗಳಲ್ಲಿ ಬ್ಯಾಟ ರಿಯ ಚಳಕಗಳು ಮುಂದುವರೆದಿರುವುದರಿಂದ ಹೆಚ್ಚು ಹೆಚ್ಚು ಪ್ರಾಯೋಗಿಕ ಗಾಡಿಗಳು ಹೊರಬರಲಾರಂಭಿಸಿವೆ. ಅಂತೆಯೇ, ವಾಯು ಮಾಲಿನ್ಯದ ಕೆಡುಕುಗಳನ್ನು ಮನಗಂಡಿರುವ ಮುಂದುವರಿದ ದೇಶದ ಸರಕಾರಗಳು ವಿದ್ಯುತ್‌ ಪೂರೈಕೆಯ ವ್ಯವಸ್ಥೆಗಳನ್ನು ಬೆಳೆಸಲು ಮುಂದಾಗುತ್ತಿವೆ. ಅದರಂತೆ ವಾಹನಗಳ ಉತ್ಪಾದಕರೂ ಹೊಸ ಹೊಸ ಚಳಕಗಳನ್ನು ಬಳಸಿಕೊಂಡು ವಿದ್ಯುತ್‌ ಕಾರುಗಳನ್ನು ಹೊರತರಲು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ ಎನ್ನಬ ಹುದಾದ ಅಮೆರಿಕದ ಟೆಸ್ಲಾ ಕಂಪನಿ ಹೊರತಂದಿರುವ ಇಲೆಕ್ಟ್ರಿಕ್‌ ಕಾರು ಈಗಿರುವ ಡಿಸೇಲ್‌, ಪೆಟ್ರೋಲ್‌ ಕಾರುಗಳಿಗೆ ಸಾಟಿಯೆನ್ನುವಂತಿದೆ. ಈ ಕಾರು ಗಂಟೆಗೆ 210 ಕಿಲೋ ಮೀಟರ್‌ ವೇಗದಲ್ಲಿ ಸಾಗಬಲ್ಲದು. ವೇಗದಲ್ಲಿ ಸಾಟಿಯಾಗಿದ್ದರೂ ಅವುಗಳು ಸಾಗುವ ದೂರ ಇಲೆಕ್ಟ್ರಿಕ್‌ ಗಾಡಿಗಳ ಬಳಕೆಗೆ ಒಂದು ತೊಡಕಾಗಿಯೇ ಕಾಣುತ್ತದೆ. ಒಮ್ಮೆ ಗಾಡಿಯ ಬ್ಯಾಟರಿಯನ್ನು ಚಾರ್ಜ್‌ ಮಾಡಿದರೆ, ಹೆಚ್ಚೆಂದರೆ 200 ಕಿಲೋಮೀಟರ್‌ ಅಷ್ಟೇ ಸಾಗಲು ಇಂದಿನ ಮುಂದುವರೆದ ಇಲೆಕ್ಟ್ರಿಕ್‌ ಗಾಡಿಗಳಿಗೆ ಸಾಧ್ಯ. ಮರುಬಳಸುವಂತಾಗಲು ಬ್ಯಾಟರಿಯನ್ನು ಇಡಿಯಾಗಿ ಚಾರ್ಜ್‌ ಮಾಡಲು ಗಂಟೆಗಟ್ಟಲೆ ಬೇಕು. ಪೆಟ್ರೋಲ್‌ ಬಂಕ್‌ಗಳಂತೆ ಬ್ಯಾಟರಿಗಳನ್ನು ನಿಮಿಷಗಳಲ್ಲಿ ಬದಲಿಸುವ ವ್ಯವಸ್ಥೆ ಬಂದರೆ ಮಾತ್ರ ಇಲೆಕ್ಟ್ರಿಕ್‌ ಗಾಡಿಗಳ ಬಳಕೆಗೆ ಸಮುದಾಯಗಳು ಮುಂದೆ ಬರಬಹುದು. ಇಲೆಕ್ಟ್ರಿಕ್‌ ಕಾರುಗಳು ಇಂದಿಗೆ ತುಂಬಾ ದುಬಾರಿಯಾ ಗಿದ್ದರೂ ತಂತ್ರಜ್ಞಾನ ಬೆಳೆದಂತೆ ಕೈಗೆಟೆಕುವ ಬೆಲೆಯಲ್ಲಿ ದೊರೆಯಲಿವೆ ಅನ್ನುವುದು ಬಲ್ಲವರ ಅಂಬೋಣ. ಉದಾಹರಣೆಗೆ ಚೀನಾದ ಕಿಯಾ ಅನ್ನುವ ಕಂಪನಿ ಟೆಸ್ಲಾ ಕಂಪನಿ ಮಾಡುತ್ತಿರುವ ಅರ್ಧ ಬೆಲೆಗೆ ತಾನು ಇಲೆಕ್ಟ್ರಿಕ್‌ ಕಾರುಗಳನ್ನು, ಅಷ್ಟೇ ಗುಣಮಟ್ಟದಲ್ಲಿ ಮಾಡಬಲ್ಲೆ ಎನ್ನುವ ಮಾತನಾಡುತ್ತಿದೆ.

ಇಲೆಕ್ಟ್ರಿಕ್‌ ಗಾಡಿಗಳ ಬಳಕೆಗೆ ಅದರ ಮುಂದಿರುವ ತಂತ್ರಜ್ಞಾನದ ಸವಾಲುಗಳನ್ನು ಮೀರಲು ಹವಣಿಸುವ ತವಕದಲ್ಲಿ ಎಲ್ಲರೂ ಮರೆಯುತ್ತಿರುವುದೇನೆಂದರೆ ಈ ವಾಹನಗಳನ್ನು ಓಡಿಸಲು ಬಳಸುವ ವಿದ್ಯುತ್‌ ನಿಜ ವಾಗಿಯೂ ಪರಿಸರಕ್ಕೆ ಪೂರಕವೇ ಅನ್ನುವುದು. ವಿದ್ಯುತ್‌ ಬಳಸಿ ಈಗಿರುವ ವಾಹನಗಳು ಉಗುಳುವ ಕೆಡುಗಾಳಿಯಿಂದ ಪಾರೇನೋ ಆಗಬಹುದು ಆದರೆ ವಿದ್ಯುತ್‌ ಉತ್ಪಾದನೆಗೆ ಬಳಸುವ ಕಲ್ಲಿದ್ದಲು, ಪೆಟ್ರೊ ಲಿಯಂ, ಅಣುಶಕ್ತಿ ಮುಂತಾದ ಸೆಲೆಗಳು ಉಂಟು ಮಾಡುವ ಪರಿಸರದ ಹಾನಿಯನ್ನು ಮರೆಯಬಾರದು. ಇಂದು ಸರಿಸುಮಾರು 60% ವಿದ್ಯುತ್‌ ತಯಾರಾಗು ವುದು ಕಲ್ಲಿದ್ದಲ ಬಳಕೆಯಿಂದ ಎನ್ನುವುದನ್ನು ಗಮನಿಸ ಬೇಕು. ಕಲ್ಲಿದ್ದಲು ಉಗುಳುವ ಕೆಡುಗಾಳಿ, ವಾಹನಗಳು ಉಗುಳುವ ಕೆಡುಗಾಳಿಗೆ ಸಮ. ಹಾಗಾಗಿ ಸೂರ್ಯನ ಬೆಳಕು, ಗಾಳಿ, ಕಡಲ ತೆರೆಗಳು ಮುಂತಾದ ಚೊಕ್ಕವಾದ ಸೆಲೆಗಳಿಂದ ವಿದ್ಯುತ್‌ ಪಡೆಯುವವರಿಗೆ ಇಲೆಕ್ಟ್ರಿಕ್‌ ಕಾರುಗಳನ್ನು ಬಳಕೆಗೆ ತಂದರೂ ಉಪಯೋಗವಿಲ್ಲ. ಇಲೆಕ್ಟ್ರಿಕ್‌ ಕಾರುಗಳು ದೊಡ್ಡ ಊರುಗಳನ್ನು ಕೆಡುಗಾಳಿಯಿಂದ ದೂರವಿಟ್ಟರೆ ವಿದ್ಯುತ್‌ ಉತ್ಪಾದಿಸುವ ಚಿಕ್ಕ ಊರುಗಳನ್ನು ಮತ್ತದೇ ವಾಯುಮಾಲಿನ್ಯಕ್ಕೆ ಈಡಾಗಿಸಿದರೆ ಪ್ರಯೋಜನವೇನು, ಅಲ್ಲವೇ? 

(ತಿಳಿಗನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಮಾತುಕತೆಯನ್ನು ಬೆಂಗಳೂರಿನ ಮುನ್ನೋಟ ಮಳಿಗೆ ಏರ್ಪಡಿಸುತ್ತಿದೆ. ಈ ಬಾರಿಯ ಮಾತುಕತೆಯ ಆಯ್ದ ಬರಹವಿದು)

- ಕಾರ್ತಿಕ್‌ ಪ್ರಭಾಕರ್‌

Trending videos

Back to Top