CONNECT WITH US  

ಅಂತರಂಗದ ಅರಿವು -ಬಹಿರಂಗದ ಕ್ರಿಯೆ

ನಂಬಿಕೆ, ವಿಶ್ವಾಸಗಳು ಮರೆಯಾದಾಗ ನಮ್ಮ ಕಿವಿಗಳು ಹಿತ್ತಾಳೆ ಕಿವಿಗಳಾಗಿಬಿಡುತ್ತವೆ. ನೆನಪುಗಳಿಗೆ ಅಕಾಲಿಕ ಮರಣ ಪ್ರಾಪ್ತಿಯಾಗುತ್ತದೆ ಮತ್ತು ನಾವು ಮರೆಗುಳಿಗಳಾಗಿ ಬಿಡುತ್ತೇವೆ. ಬದುಕಲ್ಲಿ ಸೋಲುವವರು ನಂಬಿಕೆ ಕಳಕೊಳ್ಳುವವರು ಮಾತ್ರ. ಹಾಗಾಗಿ ನಂಬಿಕೆ ಬದುಕಲ್ಲಿ ಬಲು ಮುಖ್ಯ. ಅನ್ಯರ ಮಾತು ಸಹ್ಯವಾಗುವುದು, ಸತ್ಯ ಸುಳ್ಳಾಗುವುದು, ಸುಳ್ಳು ಸತ್ಯವಾಗುವುದು, ಪ್ರೀತ್ಸೋರು ದೂರವಾಗೋದು, ದ್ವೇಷಿಸುವವರು ಹತ್ತಿರ ವಾಗುವುದೆಲ್ಲಾ ಕಿವಿ ಹಿತ್ತಾಳೆಯಾದಾಗ ಮತ್ತು ನಮ್ಮವರನ್ನು ನಾವು ನಂಬದೇ ಇದ್ದಾಗ. ನಂಬಿ ಕೆಟ್ಟವರಿದ್ದಾರೆಯೇ! ನಂಬಿಕೆಯೇ ಬದುಕಿನ ಮೂಲ ದ್ರವ್ಯ. ಅದರ ಮೇಲೆಯೇ ನಾವು ಬದುಕನ್ನು ಕಟ್ಟಿಕೊಳ್ಳುತ್ತೇವೆ ಮತ್ತು ಕಟ್ಟಿಕೊಳ್ಳಬೇಕು ಕೂಡ. ನಮ್ಮೊಳಗಿನ ಹಾಗೂ ಹೊರಗಿನ ಬಂಧಗಳನ್ನು ಗಟ್ಟಿಗೊಳಿಸುವುದು ಕೂಡ ಇದೇ ನಂಬಿಕೆ. ಹಾಗಾಗಿ ನನ್ನ ಮಾತನ್ನು ನಂಬಿ. ಅನೂಹ್ಯ ಬದುಕಿನೊಳಗಣ ನಮ್ಮ ಜೀವಯಾತ್ರೆ ಸರಾಗವಾಗಿ ಸಾಗಬೇಕು. ಹಾಗೆ ಯಾತ್ರಿಸುವಾಗ ಅದೆಷ್ಟೋ ಅಡೆತಡೆಗಳು ನಾವು ನಮ್ಮ ನಂಬಿಕೆಯನ್ನು ಕಳಕೊಳ್ಳುವಂತೆ ಮಾಡುತ್ತದೆ. ಆದರೆ ಅವುಗಳನ್ನೆಲ್ಲಾ ಮೀರಿ ನಡೆಯುವ ವಿವೇಕವು  ನಮ್ಮೊಳಗೆ ಚಿಗುರಬೇಕು. ಹಾಗಾದಾಗಲೇ ಬದುಕನ್ನು ಅಚ್ಚರಿಯಿಂದ, ಬೆರಗು ಕಣ್ಣುಗಳಿಂದ ನೋಡಲು, ಬದುಕಿನ ಲಾಲಿತ್ಯ ಕೇಳಲು, ಮೆತ್ತಗೆ ಪಿಸುಗುಟ್ಟಲು, ಬೆಚ್ಚಗಿನ ಅಪ್ಪುಗೆ ಪಡೆಯಲು ಸಾಧ್ಯವಾದೀತು.

ಈ ನಿಟ್ಟಿನಲ್ಲಿ ನಾವು ಅನುಸರಿಸುವ ಕ್ರಮಗಳು, ಕ್ರಮಿಸುವ ದಾರಿಗಳು ಹಲವು. ಎಲ್ಲವೂ ನಂಬಿಕೆಗೆ ಸಂಬಂಧಪಟ್ಟವುಗಳೇ. ಆಯ್ಕೆ ನಮ್ಮದಾಗಿರುತ್ತದೆ. ಆಯ್ಕೆಯ ಸುಖ- ದುಃಖವೂ ನಮ್ಮದೇ ಆಗಿರುತ್ತದೆ. ಈ ಪ್ರಕ್ರಿಯೆಯ ಜಂಜಡದಲ್ಲಿ ನಾವು ಏನನ್ನು ಕಳೆದುಕೊಂಡಿರುತ್ತೇವೆ ಎನ್ನುವುದು ನಮಗೆ ತಿಳಿದಿರುವುದಿಲ್ಲ. ತಿಳಿಯುವ ಗೋಜಿಗೂ ನಾವು ಹೋಗುವುದಿಲ್ಲ. ನಮ್ಮ ಆದ್ಯತೆಗಳೇ ಬೇರೆಯ¨ªಾಗಿರುತ್ತವೆ. ಹಾಗಾಗಿ ಕಳೆದುಕೊಂಡಿರುವುದರ ಬಗ್ಗೆ ತಿಳಿಯುವ ಆಸಕ್ತಿ ನಮಗಿರುವುದಿಲ್ಲ. ಕ್ಷಣಿಕ ಸುಖ ಸಂಪಾದನೆ ಎಂಬ ಮಾಯಾಮೃಗದ ಹಿಂದೆ ಬೀಳುವ ನಾವು ಕಳೆದುಕೊಂಡಿರುವುದರ ಹಿಂದೆ ಬೀಳುತ್ತೇವೆಯೇ? ಆದರೆ ಮುಂದೊಂದು ದಿನ ಇಳಿಸಂಜೆಯ ಬಿಸಿಲಿಗೆ ಮುಖವೊಡ್ಡಿ ಕುಳಿತಾಗ ಅವುಗಳೆಲ್ಲವೂ ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆ ಹೊತ್ತಲ್ಲಿ ನಾವು ಹಿಂದಿರುಗಲಾಗದಷ್ಟು ದೂರ ಬಂದಿರುತ್ತೇವೆ. ಆಗ ಮೈ ಬೆವರಿ, ನಾಲಗೆ ಒಣಗುವ ಸಮಯ ನಮ್ಮದಾಗಿರುತ್ತದೆ. ಆದರೆ ಏನು ಮಾಡೋಣ? ನಾವು ಕ್ರಮಿಸಿ ಬಂದ ಹಾದಿ ಬಹಳ ಉದ್ದವಾಗಿರುತ್ತದೆ. ಹಾಗಾಗಿ ಬೆವರಿಸಿಕೊಳ್ಳುವುದು ಮತ್ತು ಒಣಗಿಸಿಕೊಳ್ಳುವುದು ಒಂದೇ ಉಳಿದ ಹಾದಿಯಾಗಿರುತ್ತದೆ. ಅದರಾಚೆಗಿನ ಗಮ್ಯವನ್ನು ನಾವು ತಲುಪಬೇಕಿದ್ದರೆ ನಮ್ಮ ಹಮ್ಮು-ಬಿಮ್ಮುಗಳನ್ನು ತುಸು ಬದಿಗೆ ಸರಿಸಿ, ಮೊಗದಲೊಂದಿಷ್ಟು ಮಂದಹಾಸವನ್ನು ಬೀರಬೇಕಾಗುತ್ತದೆ. ಕೇಳಲು ಹಿತವೆನಿಸುವ ಈ ಮಾತು ಅನುಸರಿಸಲು ಬಹಳಷ್ಟು ಮಂದಿಗೆ ಸುಲಭವಲ್ಲ. ಒಳಗಿರುವ ದೆವ್ವಗಳು ಸುಮ್ಮನಿರಬೇಕಲ್ಲ. ಹೋದರೆ ಹೋಗಲಿ, ಯಾರಿಂದ ಯಾರಿಗೂ ಎನೂ ಆಗಬೇಕಿಲ್ಲವೆಂದು ತನ್ನೊಳಗೆ ತಾನು ತರ್ಕಿಸಿಕೊಂಡು ದೊಡ್ಡ ದುರಂತವೊಂದಕ್ಕೆ ಮುನ್ನುಡಿಯಾಗಿಬಿಡುತ್ತೇವೆ. ದ್ವಂದ್ವಗಳು ಹೊರಳಾಡುತ್ತಲೆ ಇರುತ್ತವೆ. ನಂಬಿಕೆಯ ಸೌಧ ಕುಸಿಯುವುದು ಇದೇ ಸಮಯದಲ್ಲಿ. ಮತ್ತೆ ಆ ಸೌಧವನ್ನು ಕಟ್ಟಲು ಒದ್ದಾಡುತ್ತೇವೆ. ಕಳೆದುಕೊಂಡಿದ್ದ ಕೊಂಡಿಯನ್ನು ಮತ್ತೆ ಜೋಡಿಸಲು ಪುನಃ ಹೊರಳಾಡುತ್ತಲೇ ಇರುತ್ತೇವೆ. ಆ ಘಟ್ಟದಲ್ಲಿ ನಮಗೆ ಆಡಲು ನಾಲಗೆ ತೊದಲುವುದು ಸಹಜ. ಕಣ್ಣಿಗೆ ಕಣ್ಣು ತಾಕಿಸುವುದು ಇನ್ನೂ ಕಷ್ಟ. ಆದರೂ ಬಂಧದ ಹಸಿರು ಹುಲ್ಲುಗಾವಲಿನಲ್ಲಿ ಮೇಯಲು ಹಾತೊರೆಯುತ್ತಿರುತ್ತದೆ ಮನಸ್ಸು. ಹಸಿರಾದರೆ ಆಗಲಿ ಎಂಬ ನಿರೀಕ್ಷೆಯಲ್ಲಿ ಮತ್ತೆ ಬಂಧದ ಎದುರು ಶಿರ ಬಾಗುತ್ತೇವೆ. ಸ್ವತಃ ತನ್ನ ಹಮ್ಮಿನಿಂದಲೇ ನಮ್ಮಿಂದ ದೂರವಾದ ಬಂಧವನ್ನು ನಾವೇ ಹುಡುಕಿಕೊಂಡು ಹೋಗುತ್ತೇವೆ, ಇರುವ ಒಂದೇ ಒಂದು ಬದುಕನ್ನು ಚಂದಗಾಣಿಸಲು. ಅದರರ್ಥ ಅದು ಅವರಿಗೆ ಹೆದರಿಯೋ, ಬೆದರಿಯೋ ಅಲ್ಲ. ಬದಲಾಗಿ ಬಂಧಗಳು ಉಸಿರುಗಟ್ಟಿ ಸಾಯದಿರಲಿ ಎಂಬ ವಾಂಛೆಯಿಂದ. ಕ್ಷಮೆ ಕೇಳಿದಾಕ್ಷಣ ನಮ್ಮದೇ ತಪ್ಪಿತ್ತು ಅಂತಲ್ಲ; ಅಹಂಕಾರಕ್ಕಿಂತ ಸಂಬಂಧಗಳಿಗೆ ಹೆಚ್ಚು ಮಹತ್ವ ಎಂಬುದನ್ನು ಅರಿತು ವರ್ತಿಸುವ ರೀತಿಯದು. ಆ ವಿವೇಚನೆಯ ಅರಿವು ನಮ್ಮಲ್ಲಿ ಮೂಡಬೇಕು. ಅಹಂ ಬದಿಸರಿಸಿ: ಅಷ್ಟಕ್ಕೂ ಯಾರು ಯಾರನ್ನು ಹೆದರಿಸಲು ಸಾಧ್ಯ ಹೇಳಿ? ನಮ್ಮನ್ನು ಹೆದರಿಸುವುದೇ ಇದ್ದರೆ ಅದು ನಾವು ಆಡಿದ ಮಾತುಗಳಿಗೆ, ಮಾಡಿದ ಕ್ರಿಯೆಗಳಿಗೆ, ನೀಡಿದ ನೋವುಗಳಿಗೆ ಮಾತ್ರ ಸಾಧ್ಯ. ನಮ್ಮನ್ನು ಕಾಡಲು, ಕೊರೆಯಲು, ತಿವಿಯಲು ಮತ್ತು ಚುಚ್ಚಲು ನಮ್ಮ ಆತ್ಮಸಾಕ್ಷಿಗೆ ಮಾತ್ರ ಸಾಧ್ಯ. ಅಂತಹ ಆತ್ಮಸಾಕ್ಷಿ ನಮ್ಮೆಲ್ಲರದಾಗಲಿ ಎನ್ನುವ ಎಲ್ಲರ ಹಾರೈಕೆ ಎಲ್ಲರ ಮೇಲೂ ಇರಲಿ. ಚಕ್ರ ನಿಲ್ಲುವುದಿಲ್ಲ. ಇತರರಿಗೆ ಇಂದು ನಾವು ಮಾಡಿದ್ದು, ನಾಳೆ ನಮಗೆ ಸಿಗಲಿರುವ ಕಟ್ಟಿಟ್ಟ ಬುತ್ತಿ. ಒಳ್ಳೆಯ ಮತ್ತು ಕೆಟ್ಟ ಕರ್ಮವೀರರು ಬೇತಾಳರಂತೆ ನಮ್ಮ ಬೆನ್ನ ಹಿಂದೆಯೇ ಬಿದ್ದಿರುತ್ತಾರೆ ಎನ್ನುವ ಅರಿವು ನಮ್ಮಲ್ಲಿರಬೇಕು. ಆದ್ದರಿಂದ ಹೇಳಿಕೊಳ್ಳಲು ಕಷ್ಟವಾದರೆ ಪ್ರೀತಿಪಾತ್ರರನ್ನು ಒಮ್ಮೆ ತಬ್ಬಿಕೊಂಡುಬಿಡಿ. ಸ್ಪರ್ಶಕ್ಕೆ ಎÇÉಾ ನೋವುಗಳನ್ನೂ ವಾಸಿ ಮಾಡುವ ಅದ್ಭುತ ಮಾಯಾವಿ ಶಕ್ತಿಯಿದೆ. ಯಾವತ್ತೂ ನಾವಿರಬೇಕು ಇನ್ನೊಬ್ಬರ ಭಾವ ಮತ್ತು ಪರಿಸರದಲ್ಲಿ. ದರ್ಪ, ದುರಭಿಮಾನ, ಅಹಂ ಇವುಗಳೇ ಸಮಸ್ಯೆಯ ಮೂಲ ನಿವಾಸಿಗಳು. ಅವುಗಳನ್ನು ತುಸು ಬದಿಗೆ ಸರಿಸಿದರೂ ಸಾಕು ಸುಖದ ತಂಗಾಳಿ ತಪ್ಪದೆ ಬೀಸುತ್ತದೆ. ಹಾಗೆ ಪ್ರೀತಿ ಪಾತ್ರರ ಮೇಲೆ ಬೀಸೋಣ ತಂಗಾಳಿಯನ್ನು. ಅಚ್ಚರಿ ಬೇಡ. ತಿರುಗಿ ಆ ಪ್ರೀತಿಯ ತಂಗಾಳಿ ನಮ್ಮತ್ತಲೇ ಬೀಸಲಿದೆ. ಅದು ಪ್ರಕೃತಿ ನಿಯಮ.  

ಚಾಣಕ್ಯನ ಸುಭಾಷಿತವೊಂದು ಹೀಗಿದೆ: ತೀರಾ ನೇರವಾಗಿರಬೇಡ, ಒಮ್ಮೆ ಕಾಡಿಗೆ ಹೋಗಿ ನೋಡು. ಅಲ್ಲಿ ನೇರವಾಗಿರುವ ಮರಗಳನ್ನು ಕಡಿದು ಹಾಕಿರುತ್ತಾರೆ. ವಕ್ರವಾಗಿರುವ ಮರಗಳನ್ನು ಹಾಗೇ ಬಿಟ್ಟಿರುತ್ತಾರೆ. ನಮ್ಮ ಒಳ್ಳೆಯತನವೇ ನಮಗೆಷ್ಟೋ ಸಲ ನೋವನ್ನು ಕೊಟ್ಟಿರುತ್ತದೆ. ಹಾಗಾದರೆ ಒಳ್ಳೆಯವರಾಗುವುದು ತಪ್ಪೇ? ತಪ್ಪಲ್ಲ. ಆದರೆ, ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವಷ್ಟು ಒಳ್ಳೆಯತನ ಕೆಲಸಕ್ಕೆ ಬರುವುದಿಲ್ಲ. ಕೆಲವೊಮ್ಮೆ ನಾವು ತೀರಾ ಒಳ್ಳೆಯವರಾಗಿರುವುದೂ ದುಬಾರಿಯಾಗಿ ಪರಿಣಮಿಸಬಹುದು. 

ಡಿಟ್ಯಾಚ್‌ಮೆಂಟ್‌ ಇರಬೇಕು: ನಮ್ಮ ಪ್ರೀತಿಯ ವಸ್ತು ದೂರವಾದರೆ ವ್ಯಥೆ ಪಡದೆ, ಒಮ್ಮೆ ತಿರುಗಿ ನೋಡಿಕೊಳ್ಳಿ, ಅಲ್ಲಿ ಯಾವುದು ತಾನೇ ಶಾಶ್ವಾತವಾಗಿತ್ತು? ಶಾಶ್ವತವಲ್ಲದಕ್ಕೆ ತಲೆ ಕೆಡಿಸಿಕೊಂಡು ಸುಂದರ ಬದುಕನ್ನು ಕಳಕೊಳ್ಳುವುದರಲ್ಲಿ ಅರ್ಥವಿಲ್ಲ. ಬದುಕಲ್ಲಿ ಸನ್ಯಾಸಿಗಳಷ್ಟು ಅಲ್ಲದಿದ್ದರೂ ತಕ್ಕಮಟ್ಟಿಗೆ ಡಿಟ್ಯಾಚ್‌ಮೆಂಟ್‌ ಬೆಳೆಸಿಕೊಳ್ಳಬೇಕು. ಅಂತಹ ಮನಸ್ಥಿತಿಗೆ ನಾವು ಬಂದರೆ ಸದಾಕಾಲ ಖುಷಿಯಾಗಿರಬಹುದು. ಬದುಕೊಂದು ಸ್ಪರ್ಧೆಯಲ್ಲ. ಅದು ನಮ್ಮ ಖುಷಿಗಾಗಿ ಬದುಕುವ ವಿಧಾನ-ರೀತಿ ಅಷ್ಟೆ. ಹಾಗಂತ ಖುಷಿ ಅಂದರೇನು ಎಂದು ಪ್ರಶ್ನಿಸಿಕೊಳ್ಳದಿರುವುದೇ ಖುಷಿ ಕಣ್ರೀ. ನಮ್ಮ ಹಲವು ಭಾವಗಳ ಜಗತ್ತು, ರೂಪಗಳ ಜಗತ್ತು, ರಾಗ-ದ್ವೇಷಗಳ ಜಗತ್ತು, ಹಿಂಜರಿಕೆಯ ಲೋಕ, ಕೀಳರಿಮೆಯ ನೆಲ. ಹೀಗೆ ಪಟ್ಟಿ ಅಸಂಖ್ಯ. ಈ ಎಲ್ಲವುಗಳ ಡೌಲಿನ ಪ್ರಪಂಚದಲ್ಲಿ ನಾವಿದ್ದೇವೆ. ಹೊರ ಮತ್ತು ಒಳ ಜಗತ್ತಿನ ಘರ್ಷಣೆ ಇಂದು ನಿನ್ನೆಯದಲ್ಲ. ಅದು ಬದುಕಲ್ಲಿ ತಪ್ಪಿದ್ದೂ ಅಲ್ಲ. ಅಂತರಂಗದ ಅರಿವು ಬಹಿರಂಗದ ಕ್ರಿಯೆ ಆಗಬೇಕು. ಅಷ್ಟಕ್ಕೇ ಬದುಕು ಧನ್ಯ.

ಸಂತೋಷ್‌ ಅನಂತಪುರ


Trending videos

Back to Top