CONNECT WITH US  

ವಾಸ್ತವ ಜಗತ್ತಿನಲ್ಲಿ ವರ್ಚುವಲ್‌ ತಂತ್ರಜ್ಞಾನ !

ಮುಂದೊಂದು ದಿನ ಈ ವರ್ಚುವಲ್‌ ರಿಯಾಲಿಟಿ ಎಂಬುದು ನಮ್ಮ ಅಸ್ತಿತ್ವವನ್ನೇ ಬದಲಿಸಲಿವೆ. ಒಂದು ವೇಳೆ ವರ್ಚುವಲ್‌ ರಿಯಾಲಿಟಿ ವ್ಯಾಪಕವಾಗಿ ಬಳಕೆಗೆ ಬಂದರೆ ವ್ಯಕ್ತಿ ವಾಸ್ತವವಲ್ಲದ ಜೀವನದಲ್ಲೇ ಬದುಕಲು ಬಯಸಬಹುದು. ಹೆಡ್‌ಸೆಟ್ಟನ್ನು ತೆಗೆದು ಕೆಳಗಿಡಲು ವ್ಯಕ್ತಿ ಬಯಸದೇ ಇರಬಹುದು!

ಆ ಮನುಷ್ಯ ಸ್ಮಾರ್ಟ್‌ಫೋನ್‌ ಕೈಯಲ್ಲಿ ಹಿಡ್ಕೊಂಡ್ರೆ ತಾನು ಎಲ್ಲಿದೀನಿ ಅನ್ನೋದನ್ನೇ ಮರೀತಾನೆ... ಮೊಬೈಲ್‌ ಸಿಕ್ರೆ ಅವನನ್ನ ಮಾತಾಡ್ಸಕ್ಕೂ ಆಗಲ್ಲ... ಇವೆಲ್ಲಾ ತೀರಾ ಸಾಮಾನ್ಯ ಕಂಪ್ಲೇಂಟು ಗಳು. ನಾಲ್ಕೈದು ವರ್ಷಗಳ ಹಿಂದೆ ಚಾಲ್ತಿಯಲ್ಲಿದ್ದ ಈ ಬೈಗುಳಗಳು ಈಗ ಅಷ್ಟೇನೂ ಕೇಳಿಸ್ತಿಲ್ಲ. ಹೀಗೆ ಬೈತಿದ್ದವರು 40 ವರ್ಷದ ಆಸುಪಾಸಿನಲ್ಲಿರುವ ತಂದೆ ತಾಯಿಗಳು. ಆಗ, ಮೊಬೈಲ್‌ನಲ್ಲಿ ಕಾಲ್‌ ಮಾಡೋದಕ್ಕಷ್ಟೇ ಬಳಸುತ್ತಿದ್ದ ಅವರಿಗೆ ಇಡೀ ದಿನ ಅದಕ್ಕೆ ತಗುಲಿಕೊಳ್ಳುವಂಥ ಮೋಹದ ಬಗ್ಗೆ ಭಯಂಕರ ಕುತೂಹಲವಿತ್ತು. ಸ್ಮಾರ್ಟ್‌ಫೋನ್‌ನಲ್ಲಿ ಕಾಲ್‌ ಮಾಡೋದಕ್ಕಿಂತಲೂ ಇನ್ನೂ ಏನೇನೋ ಮಾಡಬಹುದು ಅನ್ನೋದು ಗೊತ್ತಾಗ್ತಿದ್ದ ಹಾಗೆ ಅವರೂ ನಿಧಾನವಾಗಿ ಅದನ್ನೊಂದು ಸಹಜ ಪ್ರಕ್ರಿಯೆ ಎಂದು ಕೊಳ್ಳುತ್ತಿ ದ್ದಾರೆ. ಹೀಗೆ ಒಂದು ತಲೆಮಾರನ್ನೇ ಆವರಿಸಿಕೊಂಡು, ಮುಂದಿನ ತಲೆಮಾರಿನ ಅವಿಭಾಜ್ಯ ಅಂಗವಾಗಿ, ಹಿಂದಿನ ತಲೆಮಾರಿಗೂ ಒಂಚೂರು ಟಚ್‌ ಆದ ಸ್ಮಾರ್ಟ್‌ಫೋನ್‌ ಅದೆಷ್ಟು ವ್ಯಾಪಿಸಿದೆಯೆಂದರೆ, ಅದರಿಂದಾಚೆಗೆ ಇನ್ನೇನಿದೆ ಎಂಬ ಕುತೂ ಹಲ ಹೊಸ ತಲೆಮಾರಿಗೆ ಶುರುವಾಗಿದೆ.

ಹಾಗಾದರೆ ಸ್ಮಾರ್ಟ್‌ಫೋನ್‌ ನಂತರ ಮುಂದೇನು? ಈ ಪ್ರಶ್ನೆ ಬಹುತೇಕ ಪ್ರತಿಯೊಬ್ಬರನ್ನೂ ಕಾಡಿದೆ. ನಮ್ಮನ್ನು ಆವರಿಸಿಕೊಂಡಿ ರುವ ಈ ಸ್ಮಾರ್ಟ್‌ಫೋನ್‌ ಮೋಹ ಇನ್ನು ಕೆಲವೇ ವರ್ಷಗಳಲ್ಲಿ ಕಳಚಿ ಹೋದರೆ ಅಚ್ಚರಿಯೇ ಇಲ್ಲ. ಸದ್ಯ ನಮ್ಮ ಕಣ್ಣೆದುರಿರುವ ವರ್ಚುವಲ್‌ ರಿಯಾಲಿಟಿಯ ಅದ್ಭುತ ತಂತ್ರಜ್ಞಾನ ಭವಿಷ್ಯದಲ್ಲಿ ತಂತ್ರಜ್ಞಾನ ಸಾಗುವ ದಾರಿಯನ್ನು ನಿಗದಿಗೊಳಿಸಬಹುದು.

ಸದ್ಯ ಹಲವು ಕಂಪನಿಗಳು ವರ್ಚುವಲ್‌ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ಬಿಡುಗಡೆ ಮಾಡಿವೆ. ನೂರಾರು ಸ್ಟಾರ್ಟಪ್‌ಗ್ಳು ವಿಆರ್‌ ಕ್ಷೇತ್ರದಲ್ಲಿ ಹೆಜ್ಜೆ ಇಡುತ್ತಿವೆ. ಸದ್ಯ ಹೆಡ್‌ಸೆಟ್‌ಗಳು ಬರಿ ವೀಡಿಯೋಗಳನ್ನು ನೋಡುವುದಕ್ಕಷ್ಟೇ ಸೀಮಿತವಾಗಿವೆ. ನಿಜ ವಾದ ದೃಶ್ಯದಲ್ಲಿ ಕಾಣಿಸುವಂತೆಯೇ 3ಡಿ ಹಾಗೂ ಇತರ ರೀತಿಯ ದೃಶ್ಯಗಳನ್ನು ಈ ವಿಆರ್‌ ತಂತ್ರಜ್ಞಾನ ಬಳಸಿ ನೋಡ ಬಹುದು. ಆದರೆ ಇದು ವರ್ಚುವಲ್‌ ರಿಯಾಲಿಟಿ ಎಂಬ ಸಮುದ್ರಕ್ಕೆ ಸೇರಲಿರುವ ಒಂದು ಸಣ್ಣ ತೊರೆಯಷ್ಟೇ.

ಆಟಿಸಂ ಬಗ್ಗೆ ಜನರಿಗೆ ಅರಿವು ಮೂಡಿಸಲು ವರ್ಚುವಲ್‌ ರಿಯಾಲಿಟಿ ಪ್ರಾಜೆಕ್ಟ್ಅನ್ನು ಅಮೆರಿಕದ ಒಂದು ಸಂಸ್ಥೆ ಮಾಡಿದ್ದರೆ, ಇ-ಲರ್ನಿಂಗ್‌ಗಾಗಿ ವಿಆರ್‌ಅನ್ನು ಹಲವು ಸಂಸ್ಥೆಗಳು ಹಲವು ರೀತಿಯಲ್ಲಿ ಬಳಸಿಕೊಂಡಿವೆ. ಸದ್ಯಕ್ಕಂತೂ ತೀರಾ ಸೀಮಿತ ವಲಯ ದಲ್ಲಿ ವರ್ಚುವಲ್‌ ರಿಯಾಲಿಟಿ ಪ್ರಾಡಕ್ಟ್ಗಳಿವೆ. ಮೈಕ್ರೋಸಾಫ್ಟ್ ಇನ್ನೊಂಚೂರು ಮುಂದೆ ಹೋಗಿ ಮಿಕ್ಸೆಡ್‌ ರಿಯಾಲಿಟಿ ತಂತ್ರ ಜ್ಞಾನವನ್ನು ಬಳಸಿಕೊಂಡು ಪರ್ಸನಲ್‌ ಕಂಪ್ಯೂಟರ್‌ ರೂಪಿಸಿದೆ. ಇದರಲ್ಲಿ ನಿಮ್ಮ ಮನೆಯ ಗೋಡೆಯೇ ಮಾನಿಟರ್‌! ಇದಕ್ಕೆ ಮೈಕ್ರೋಸಾಫ್ಟ್ ಹಾಲೋಲೆನ್ಸ್‌ ಎಂದು ಹೆಸರಿಟ್ಟಿದೆ. ವೀಡಿಯೋ ನೊಡಬೇಕೆಂದರೆ ಅಥವಾ ಒಂದು ಅಪ್ಲಿಕೇಶನ್‌ಅನ್ನು ಓಪನ್‌ ಮಾಡಬೇಕೆಂದರೆ ಮೈಕ್ರೋಸಾಫ್ಟ್ನ ಹೆಡ್‌ಸೆಟ್‌ ಹಾಕಿಕೊಂಡು ನಿಮ್ಮ ಮನೆಯ ಗೋಡೆ ಆಯ್ಕೆ ಮಾಡಿಕೊಂಡರೆ ಸಾಕು. ಸುಮ್ಮನೆ ಕೈಯಾಡಿಸಿ ಒಂದು ವೀಡಿಯೋ ತೆರೆಯಬಹುದು. ಈ ಹಾಲೋಲೆನ್ಸ್‌ ಸಂಪೂರ್ಣ ಕಂಪ್ಯೂಟರ್‌ ರೀತಿಯಲ್ಲೇ ಕೆಲಸ ಮಾಡುತ್ತದೆ. ಆದರೆ ಇದು ಸಂಪೂರ್ಣ ವರ್ಚುವಲ್‌.

ವಿಆರ್‌ ಕ್ಷೇತ್ರಕ್ಕೆ ಕಾಲಿಡಲು ಬಹುತೇಕ ತಂತ್ರಜ್ಞಾನ ಕಂಪನಿಗಳು ಹಾತೊರೆಯುತ್ತಿವೆ. ಎಚ್‌ಟಿಸಿ, ಫೇಸ್‌ಬುಕ್‌, ಸೋನಿ ಸೇರಿದಂತೆ ಹಲವು ಸಂಸ್ಥೆಗಳು ತಮ್ಮದೇ ಪ್ರಾಡಕ್ಟ್ ಡಿಸೈನ್‌ ಮಾಡುತ್ತಿವೆ. ಯಾವ ಹೊಸ ತಂತ್ರಜ್ಞಾನ ಅನಾವರಣಗೊಂಡರೂ ಅದು ಜನಪ್ರಿಯತೆ ಪಡೆಯುವುದು ಅದು ನಮಗೆ ಎಷ್ಟು ಮನರಂಜನೆ ಕೊಡುತ್ತದೆ ಎಂಬುದನ್ನು ಆಧರಿಸಿಯೇ. ಹೀಗಾಗಿ ಈಗಾಗಲೇ ವರ್ಚುವಲ್‌ ರಿಯಾಲಿಟಿ ವೀಡಿಯೋಗಳನ್ನು ತಯಾರಿಸಲಾಗು ತ್ತಿದೆ. ಇವು ಪ್ರಸ್ತುತ ನಾವು ಸಿನಿಮಾ ಥಿಯೇಟರಿನಲ್ಲಿ ನೋಡುವ 3ಡಿ ಸಿನಿಮಾಗಳಿಗಿಂತಲೂ ಒಂದು ಹೆಜ್ಜೆ ಮುಂದಿರುತ್ತವೆ. ನಾವೇ ಹಿಮಾಲಯ ಹತ್ತಿದಂತಹ, ಕಾರು ಚೇಸ್‌ ಸೀನ್‌ನಲ್ಲಿ ನಾವೇ ಕಾರು ಓಡಿಸಿದಂತಹ ಅನುಭವವನ್ನು ಇವು ಕೊಡುತ್ತವೆ. ಹೀಗಾಗಿ ಸಿನಿಮಾ ನೋಡುವ ನಮ್ಮ ಸಂಪೂರ್ಣ ಅನುಭವವನ್ನೇ ಇವು ಬದಲಿಸಲಿವೆ.

ಮನರಂಜನೆಯಾಚೆಗೆ ವರ್ಚುವಲ್‌ ರಿಯಾಲಿಟಿ ಆವರಿಸಿ ಕೊಳ್ಳಲು ವ್ಯಾಪಕ ಅವಕಾಶವಿರುವುದು ಶಿಕ್ಷಣ, ಸೇವಾ ವಲಯ ಹಾಗೂ ಗೇಮಿಂಗ್‌. ಈಗಾಗಲೇ ಗೇಮಿಂಗ್‌ನಲ್ಲಿ ವರ್ಚುವಲ್‌ ರಿಯಾಲಿಟಿ ಕಾಲಿಟ್ಟಿದೆ. ಟೆಂಪಲ್‌ ರನ್‌ನಲ್ಲಿ ಓಡಿ ಓಡಿ ಕಾಯಿನ್‌ಗಳನ್ನು ಹೆಕ್ಕಿಕೊಳ್ಳುವ ವ್ಯಕ್ತಿ ಕೇವಲ ಚಿತ್ರವಾಗಿರಬೇಕಿಲ್ಲ. ವಿಆರ್‌ ನಲ್ಲಿ ಆ ವ್ಯಕ್ತಿ ಆಟವಾಡುತ್ತಿರುವ ಮನುಷ್ಯನೇ ಆಗಿರುತ್ತಾನೆ. ಈ ಕ್ಷೇತ್ರದಲ್ಲಿ ಇನ್ನೂ ಹೊಸ ಹೊಸ ಆವಿಷ್ಕಾರವಂತೂ ಆಗುತ್ತಲೇ ಇದೆ. ಶಿಕ್ಷಣ ಕ್ಷೇತ್ರದಲ್ಲಿ ವರ್ಚುವಲ್‌ ರಿಯಾಲಿಟಿ ಬಳಕೆ ವ್ಯಾಪಕವಾಗಿ ಆಗಬೇಕಿದೆ. ಈಗಾಗಲೇ ಕೆಲವು ಇ-ಲರ್ನಿಂಗ್‌ ಕೋರ್ಸ್‌ಗಳು, ಮಟೀರಿಯಲ್‌ಗ‌ಳನ್ನು ಕೆಲವು ಕಂಪನಿಗಳು ತಯಾರಿಸಿವೆ. ಆದರೆ ಅದಿನ್ನೂ ವಿದ್ಯಾರ್ಥಿಗಳವರೆಗೆ ತಲುಪಿಲ್ಲ. ಆಟಿಸಂ ಬಗ್ಗೆ ಅರಿವು ಮೂಡಿಸುವ ವೀಡಿಯೋವನ್ನು ತಯಾರಿಸಿದ್ದು ಒಂದು ಉದಾಹರಣೆಯಷ್ಟೇ. ಪಠ್ಯಗಳನ್ನು ವಿಆರ್‌ ಮೂಲಕ ಕಲಿಸಿದರೆ ಮಕ್ಕಳು ಶೀಘ್ರ ಕಲಿಯುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ವೈದ್ಯಕೀಯ ಕ್ಷೇತ್ರದಲ್ಲಿ ಈಗಾಗಲೇ ಒಂದು ಪ್ರಯೋಗ ನಡೆದಿದೆ. ಲಂಡನ್‌ನ ರಾಯಲ್‌ ಆಸ್ಪತ್ರೆಯಲ್ಲಿ ವಿಆರ್‌ ಟೆಕ್ನಾಲಜಿ ಬಳಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಂಪೂರ್ಣ ಶಸ್ತ್ರಚಿಕಿತ್ಸೆಯ 360 ಡಿಗ್ರಿ ವೀಡಿಯೋವನ್ನು ಲೈವ್‌ ಮಾಡಿ, ಅದನ್ನು ವರ್ಚುವಲ್‌ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ವೀಕ್ಷಿಸುವ ಅವಕಾಶವನ್ನು ವಿಶ್ವದ ವಿವಿಧೆಡೆಯ ಸರ್ಜನ್‌ಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ವಿಶ್ವದ ಯಾವುದೋ ಮೂಲೆಯಲ್ಲಿ ವಾಸ್ತವವಾಗಿ ತನ್ನ ಕಚೇರಿಯಲ್ಲಿ ಕುಳಿತಿರುವ ಸರ್ಜನ್‌, ವರ್ಚುವಲ್‌ ರಿಯಾಲಿಟಿ ಹೆಡ್‌ಸೆಟ್‌ ಹಾಕಿಕೊಂಡು ಆಪರೇಶನ್‌ ಥಿಯೇಟರ್‌ನಲ್ಲಿ ಸರ್ಜರಿ ನಡೆಸುತ್ತಿ ರುವ ವೈದ್ಯರ ಪಕ್ಕವೇ ನಿಂತಂತಹ ಅನುಭವ ಪಡೆಯುತ್ತಿದ್ದರು.

ಅಕ್ಯೂಟ್‌ ಆರ್ಟ್‌ ಎಂಬ ವಿಆರ್‌ ಆರ್ಟ್‌ ಪ್ಲಾಟ್‌ಫಾರಂ ರೂಪಿಸಲಾಗಿದ್ದು, ಇಲ್ಲಿ ಕಲಾ ಜಗತ್ತಿನಲ್ಲಿ ಹೇಗೆ ವಿಆರ್‌ ಬಳಸಿಕೊಳ್ಳ ಬಹುದು ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಅಷ್ಟೇ ಅಲ್ಲ, ಗೂಗಲ್‌ನ ಟಿಲ್ಟ್ ಬ್ರಶ್‌ ಎಂಬ ವಿಆರ್‌ಆರ್ಟ್‌ ಪ್ಲಾಟ್‌ಫಾರಂ ಕೂಡ ಕಲಾ ಜಗತ್ತಿಗೆ ಹೊಸ ರೂಪ ನೀಡುತ್ತಿದೆ. ವರ್ಚುವಲ್‌ ರಿಯಾಲಿಟಿಗೆ ಸೂಕ್ತವಾಗಿ ಡ್ರಾಯಿಂಗ್‌ ಮಾಡುವ ಬಗ್ಗೆ ಇಲ್ಲಿ ಸಂಶೋಧನೆ ನಡೆಯುತ್ತಿದೆ. ಸೋನಿಯ ಒಕುಲಸ್‌ ಸ್ಟೂಡಿಯೋ ನಿರ್ಮಿಸಿದ ಡಿಯರ್‌ ಆಂಜೆಲಿಕಾ ಎಂಬ ವೀಡಿಯೋ ಸರಣಿ, ಕಥೆ ಹೇಳುವ ವಿಧಾನದಲ್ಲಿ ಅದ್ಭುತ ಬದಲಾವಣೆಯ ಸಂಕೇತ ನೀಡಿದೆ. ಇನ್ನು ಪತ್ರಿಕೋದ್ಯಮದಲ್ಲಂತೂ ವರ್ಚುವಲ್‌ ರಿಯಾಲಿಟಿಯೇ ಭವಿಷ್ಯ ಎಂಬಂತಾಗಿದೆ. 2014ರಲ್ಲೇ ನಾನಿ ಡೆ ಲಾ ಪೆನಾ ಪ್ರಾಜೆಕ್ಟ್ ಸಿರಿಯಾ ಅಡಿಯಲ್ಲಿ ಸಿರಿಯಾದ ನಿರಾಶ್ರಿತರ ಕ್ಯಾಂಪ್‌ನಲ್ಲಿ ನಿಂತು ವರ್ಚುವಲ್‌ ರಿಯಾಲಿಟಿ ವೀಡಿಯೋ ಮಾಡಿದ್ದರು. ಇನ್ನೊಂದೆಡೆ ಬಿಬಿಸಿ ಕೂಡ ಈ ನೂತನ ತಂತ್ರಜ್ಞಾನ ವನ್ನು ಈಗಾಗಲೇ ಹಲವು ವಿಧಗಳಲ್ಲಿ ಅಳವಡಿಸಿಕೊಳ್ಳುತ್ತಿದೆ. ಇದರ ಸ್ವಲ್ಪ ಕೆಳ ಆವೃತ್ತಿಯನ್ನು ಅಂದರೆ 360 ಡಿಗ್ರಿ ವೀಡಿಯೋ ಗಳನ್ನು ನ್ಯೂಯಾರ್ಕ್‌ ಟೈಮ್ಸ್‌, ಎಬಿಸಿ ಸೇರಿದಂತೆ ಹಲವು ವಿದೇಶಿ ಮಾಧ್ಯಮ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ.

ಕ್ಯಾಲಿಫೋರ್ನಿಯಾದ ಒಂದು ಸ್ಟಾರ್ಟಪ್‌ ವೈಡ್‌ರನ್‌ ವಿಶಿಷ್ಟ ಕಲ್ಪನೆಯ ವರ್ಚುವಲ್‌ ರಿಯಾಲಿಟಿಯನ್ನು ಕಂಡುಕೊಂಡಿದೆ. ನಿಮ್ಮದೇ ಸೈಕಲ್‌ಗೆ ಅವರ ಡಿವೈಸ್‌ ಕನೆಕ್ಟ್ ಮಾಡಿಕೊಂಡು ನೀವು ವಿಶ್ವದ ಯಾವ ಮೂಲೆಯನ್ನು ಬೇಕಾದರೂ ಕುಳಿತಲ್ಲೇ ಸುತ್ತಬ ಹುದು! ಬೆಂಗಳೂರಿನ ಎಂ.ಜಿ ರೋಡ್‌ನಿಂದ ಹಿಮಾಲಯದ ತನಕ ಸುತ್ತಬಹುದು. ಸಮತಟ್ಟಾದ ರಸ್ತೆಯಲ್ಲಿ ಸುಲಭವಾಗಿ ಸೈಕಲ್‌ ಓಡಿಸಿದರೆ, ಪರ್ವತದಲ್ಲಿ ಸೈಕಲ್‌ ಓಡಿಸುವಾಗ ಗಟ್ಟಿಯಾಗಿ ಪೆಡಲ್‌ ತುಳಿಯಬೇಕಾಗುತ್ತದೆ!

ರನ್‌ಟಾಸ್ಟಿಕ್‌ ಎಂಬ ಇನ್ನೊಂದು ಸ್ಟಾರ್ಟಪ್‌ ವಿಶಿಷ್ಟ ಜಿಮ್‌ ಅನುಭವವನ್ನು ವಿಆರ್‌ ಮೂಲಕ ಕಟ್ಟಿಕೊಡುತ್ತಿದೆ. ಈ ವಿಆರ್‌ ಹೆಡ್‌ಸೆಟ್‌ ಹಾಕಿಕೊಂಡು ನೀವು ವಕೌìಟ್‌ ಮಾಡುವಾಗ ಎಕ್ಸ್‌ ಪರ್ಟ್‌ ಬಂದು ನಿಮಗೆ ಗೈಡ್‌ ಮಾಡುತ್ತಾನೆ. ನೀವು ತಪ್ಪಾಗಿ ವಕೌìಟ್‌ ಮಾಡಿದರೆ ವಿಆರ್‌ ಹೆಡ್‌ಸೆಟ್‌ ಎಚ್ಚರಿಸುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್‌ ಮ್ಯಾಪ್‌ನಲ್ಲಿ ಹಂಪಿ ಯನ್ನೋ ಅಥವಾ ಜೋಗ ಜಲಪಾತವನ್ನೋ ನೋಡುವ ಅನು ಭವಕ್ಕೂ ಸ್ಮಾರ್ಟ್‌ಫೋನ್‌ನಂತಹ ಸಾಧನವನ್ನು ಬಳಸಿಕೊಂಡು ನಿಂತಲ್ಲೇ ಲೈವ್‌ ಆಗಿ ಜೋಗವನ್ನು ನೋಡುವ ಅನುಭವ ಹೇಗಿ ದ್ದೀತು? ಮುಂದೊಂದು ದಿನ, ವರ್ಚುವಲ್‌ ರಿಯಾಲಿಟಿಯಲ್ಲಿ ಇದು ಸಾಧ್ಯವಿದೆ. ಈಗ ಹೇಗೆ ನಮ್ಮ ಪ್ರತಿಯೊಂದೂ ವಹಿವಾಟು ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಆಗಿದೆಯೋ, ಹಾಗೆಯೇ ಮುಂದೊಂದು ದಿನ ವರ್ಚುವಲ್‌ ರಿಯಾಲಿಟಿಗೆ ಕನೆಕ್ಟ್ ಆಗುತ್ತವೆ. ಈಗ ಇ-ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಒಂದು ಪ್ರಾಡಕ್ಟ್ ಮಾರಬೇಕೆಂದರೆ ಅದರ ಚಿತ್ರವನ್ನು ಹಾಕುತ್ತಾರೆ. ಮುಂದೊಂದು ದಿನ ವರ್ಚುವಲ್‌ ರಿಯಾಲಿಟಿ ವೀಡಿಯೋವನ್ನೇ ಹಾಕಬಹುದು. ಒಂದು ಪಾತ್ರೆ ತೊಳೆಯುವ ಸೋಪ್‌ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ವರ್ಚುವಲ್‌ ಆಗಿ ಪಾತ್ರೆ ತೊಳೆದು ಅನುಭವಿಸಿ, ಸಮಾಧಾನವಾದರೆ ಖರೀದಿ ಮಾಡಬಹುದು! ಇಂಥ ಸಾವಿರ ಕ್ಷೇತ್ರಗಳು ಹುಸಿ ವಾಸ್ತವವನ್ನು ಕಟ್ಟಿಕೊಡಬಹುದು.
ಇದಕ್ಕೆ ನಮ್ಮ ನಂಬಿಕೆಯ ಕಲ್ಪನೆಯೇ ಮೂಲ. ಸಾಮಾನ್ಯವಾಗಿ ನಾವು ಯಾವುದನ್ನೂ ನೋಡದೇ ನಂಬುವುದಿಲ್ಲ.

ನಮಗೆ ಆ ಅನುಭವ ಬೇಕು. ಇದನ್ನು ವರ್ಚುವಲ್‌ ರಿಯಾಲಿಟಿ ಕಟ್ಟಿ ಕೊಡುತ್ತದೆ. ಹೀಗಾಗಿ ನಮ್ಮನ್ನು ಈ ಹೊಸ ತಂತ್ರಜ್ಞಾನ ಶೀಘ್ರದಲ್ಲೇ ಆವರಿಸಿಕೊಳ್ಳುವ ದಿನ ದೂರವಿಲ್ಲ. ಇದಕ್ಕೆ ಪೂರಕವಾಗಿ, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ಸ್ಪೀಚ್‌ ಟು ಟೆಕ್ಸ್ಟ್ ಸೌಲಭ್ಯ ಗಳೆಲ್ಲವೂ ಸುಧಾರಣೆಯಾಗುತ್ತಿವೆ.

ಮುಂದೊಂದು ದಿನ ಈ ವರ್ಚುವಲ್‌ ರಿಯಾಲಿಟಿ ಎಂಬುದು ನಮ್ಮ ಅಸ್ತಿತ್ವವನ್ನೇ ಬದಲಿಸಲಿವೆ. ಈ ಬಗ್ಗೆ ಇತ್ತೀಚೆಗಷ್ಟೇ ಒಂದು ಸರ್ವೆ ನಡೆಸಲಾಗಿತ್ತು. ಒಂದು ವೇಳೆ ವರ್ಚುವಲ್‌ ರಿಯಾಲಿಟಿ ವ್ಯಾಪಕವಾಗಿ ಬಳಕೆಗೆ ಬಂದರೆ ವ್ಯಕ್ತಿ ವಾಸ್ತವವಲ್ಲದ ಜೀವನದಲ್ಲೇ ಬದುಕಲು ಬಯಸಬಹುದು. ಹೆಡ್‌ಸೆಟ್ಟನ್ನು ತೆಗೆದು ಕೆಳಗಿಡಲು ವ್ಯಕ್ತಿ ಬಯಸದೇ ಇರಬಹುದು! ಇದು ಒಂದೆಡೆ ಆಘಾತಕಾರಿಯೂ, ನಿಜವೂ ಆದೀತು. ಸದ್ಯಕ್ಕೆ ಸ್ಮಾರ್ಟ್‌ಫೋನ್‌ನಲ್ಲೇ ಕಳೆದುಹೋಗುತ್ತಿರುವ ಮನುಷ್ಯ, ಇನ್ನೂ ಬಣ್ಣ ಬಣ್ಣದ ಅನೂಹ್ಯ ಜಗತ್ತಿನಲ್ಲಿ ಕಳೆದು ಹೋಗುವುದಕ್ಕೆ ಕಾಯುತ್ತಿದ್ದಾ
ನೇನೋ ಅನಿಸದೇ ಇರದು.

- ಕೃಷ್ಣ ಭಟ್‌

Trending videos

Back to Top