CONNECT WITH US  

ಕ್ಲಾಸ್‌ ಎಕ್ಸಾಂ ಅಲ್ಲ, ಲೈಫ್ ಎಕ್ಸಾಂ ಗೆಲ್ಬೇಕು!

ಮೂರು ಗಂಟೆ ಅವಧಿಯ ಕ್ಲಾಸ್‌ ಎಕ್ಸಾಂನಲ್ಲಿ ಫೇಲ್‌ ಆದ್ರೂ ಪರ್ವಾಗಿಲ್ಲ, ಬದುಕಲ್ಲಿ ದಿನಕ್ಕೊಂದರಂತೆ ಎದುರಾಗುವ ಪರೀಕ್ಷೆಗಳಲ್ಲಿ ಗೆಲ್ಲುತ್ತಾ ಹೋಗಬೇಕು...

"ಪಿಯೂಸಿ ಪರೀಕ್ಷೆಯ ಟೆನ್ಶನ್‌ ಮುಗೀತು. ಮುಂದಿನ ವಾರದಿಂದ ಎಸ್ಸೆಸ್ಸೆಲ್ಸಿದು ಶುರುವಾಗುತ್ತೆ. ಯಾವುದೇ ಎಡವಟ್ಟು, ಕಾಂಟ್ರವರ್ಸಿ ಆಗದಿದ್ರೆ ಸಾಕು. ಮುಖ್ಯವಾಗಿ, ಒಳ್ಳೆಯ ರಿಸಲ್ಟ್ ಬರಬೇಕು. ಆಗ ಮಾತ್ರ ಮುಂದಿನ ವರ್ಷವೂ ಜಾಸ್ತಿ ಜನ ಸೀಟ್‌ ಕೇಳಿಕೊಂಡು ಬರ್ತಾರೆ. ಪರೀಕ್ಷೆಗಳು ಮುಗಿಯುವವರೆಗೂ ಕ್ಲಾಸ್‌ರೂಂಗಳಲ್ಲಿರುವ ಲೈಟ್‌ ಮತ್ತು ಫ್ಯಾನ್‌ಗಳು ಕೆಟ್ಟುಹೋಗದಂತೆ, ಡೆಸ್ಕ್ಗಳು ಅಲುಗಾಡದಂತೆ ಎಚ್ಚರವಹಿಸಬೇಕು. ಇಷ್ಟಾದ್ರೆ, ಬೇರೆ ಶಾಲೆಯಿಂದ ಇಲ್ಲಿಗೆ ಪರೀಕ್ಷೆ ಬರೆಯಲು ಬಂದಿರ್ತಾರಲ್ಲ; ಅವರಿಗೂ ಈ ವಿದ್ಯಾಸಂಸ್ಥೆಯ ಬಗ್ಗೆ ಸದಭಿಪ್ರಾಯ ಬರುತ್ತೆ. ಆಮೇಲೆ ಖಂಡಿತ ಅವರು ಈ ಬಗ್ಗೆ ನಾಲ್ಕು ಮಂದಿಗೆ ಹೇಳ್ಕೊತಾರೆ. ಈ ಥರದ ಮೌತ್‌ ಪಬ್ಲಿಸಿಟಿಯಿಂದ ಶಿಕ್ಷಣ ಸಂಸ್ಥೆಗಳಿಗೆ ತುಂಬಾ ಲಾಭವಿದೆ...'

ಛೇಂಬರ್‌ನಲ್ಲಿ ಕುಳಿತು ಪ್ರಿನ್ಸಿಪಾಲರು ಹೀಗೆಲ್ಲ ಯೋಚಿಸುತ್ತಿದ್ದರು. ಹೈಸ್ಕೂಲು-ಕಾಲೇಜು, ಎರಡನ್ನೂ ಹೊಂದಿದ್ದ ಒಂದು ದೊಡ್ಡ ವಿದ್ಯಾಸಂಸ್ಥೆಯಲ್ಲಿ ಅವರು ಪ್ರಾಚಾರ್ಯರಷ್ಟೇ ಅಲ್ಲ, ಆಡಳಿತ ಮಂಡಳಿಯ ನಿರ್ದೇಶಕರೂ ಆಗಿದ್ದರು. ಹಾಗಾಗಿ, ಪ್ರತಿವರ್ಷವೂ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ, ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುವ "ಕೆಲಸವನ್ನು' ಅವರು ಮಾಡಲೇಬೇಕಿತ್ತು. ಅವರು ಇನ್ನೇನನ್ನೋ ಯೋಚಿಸುವ ಮೊದಲೇ ಬಾಗಿಲಲ್ಲಿ ಕಾಣಿಸಿಕೊಂಡ ಅಟೆಂಡರ್‌- "ಸರ್‌, ಯಾರೋ ಪೇರೆಂಟ್ಸ್‌ ಬಂದಿದ್ದಾರೆ' ಎಂದ. ಅವನ ಮಾತು ಮುಗಿಯುವ ಮೊದಲೇ ಶ್ರೀನಿವಾಸ ಶೆಟ್ಟರು ಒಳಬಂದರು. ಅಟೆಂಡರ್‌ ಅಲ್ಲಿಂದ ನಿರ್ಗಮಿಸುತ್ತಿದ್ದಂತೆಯೇ ಪ್ರಿನ್ಸಿಪಾಲರು- "ಹೇಳಿ ಸರ್‌, ಹೇಗಿದೀರಿ? ಎಲ್ಲಾ ಎಕ್ಸಾಂನ ಚೆನ್ನಾಗಿ ಬರ್ದಿದೀನಿ ಅಂದ ನಿಮ್ಮ ಮಗ...' ಅಂದರು.

ಪ್ರಿನ್ಸಿಪಾಲರ ಮಾತು ಕೇಳಿಸಲೇ ಇಲ್ಲ ಎಂಬಂತೆ, ಶೆಟ್ಟರು ಎಡಗೈಲಿ ಹಣೆ ಒತ್ತಿಕೊಳ್ಳುತ್ತಾ ಹೇಳಿದರು: "ಮಗನನ್ನು ಮೆಡಿಕಲ್‌ ಓದಿಸಬೇಕೂಂತ ಆಸೆ. ಅದಕ್ಕಾಗಿ 10 ವರ್ಷದ ಹಿಂದೇನೇ ದುಡ್ಡು ಕೂಡಿಟ್ಟೆ. ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿಂದ ಸ್ಟಡಿ ಮೆಟೀರಿಯಲ್ಸ್‌ ತರಿಸಿಕೊಟ್ಟೆ. ಟ್ಯೂಶನ್‌ಗೆ ಕಳಿಸೆª. ಇಷ್ಟೆಲ್ಲಾ ಅನುಕೂಲ  ಮಾಡಿಕೊಟ್ಟಾಗ ಸುಮ್ಮನೇ ಇದ್ದವನು, ಈಗ- ಸಿಇಟಿಗೇ ಹೋಗಲ್ಲ ಅಂತಿದಾನೆ. ನಾನೂ ಮೂರು ದಿನದಿಂದ ಬುದ್ಧಿ ಹೇಳ್ತಾ ಇದೀನಿ. ಅವನು ಒಪ್ತಾನೇ ಇಲ್ಲ. ಅವನ ಬಗ್ಗೆ ನೂರಲ್ಲ, ಸಾವಿರ ಕನಸು ಕಟ್ಕೊಂಡಿದ್ದೆ. ಎಲ್ಲವೂ ಕಣ್ಮುಂದೆಯೇ ನುಚ್ಚುನೂರಾಗಿ ಹೋಯ್ತು. ನಾಳೆ ಕಳಿಸಿಕೊಡ್ತೀನಿ. ನೀವಾದ್ರೂ ಬುದ್ಧಿ ಹೇಳಿ...'

ಮಕ್ಕಳಿಗೆ ಯಾವುದು ಇಷ್ಟವೋ ಅದನ್ನು ಓದಲಿ ಬಿಡಿ ಸಾರ್‌ ಎನ್ನಲು ಯೋಚಿಸಿದ ಪ್ರಿನ್ಸಿಪಾಲರು, ದಿಢೀರನೆ ಮನಸ್ಸು ಬದಲಿಸಿ- "ನಾಳೆ ಕಳಿಸಿ. ನಾನೊಮ್ಮೆ ಮಾತಾಡ್ತೇನೆ' ಅಂದರು. ಶೆಟ್ಟರನ್ನು ಸಾಗಹಾಕುವುದೇ ಆ ಕ್ಷಣಕ್ಕೆ ಅವರಿಗೆ ಮುಖ್ಯವಾಗಿತ್ತು.

ಎರಡು ದಿನಗಳ ನಂತರ ಮತ್ತೂಂದು ತಲೆನೋವಿನ ಪ್ರಸಂಗಕ್ಕೆ ಪ್ರಿನ್ಸಿಪಾಲರು ಸಾಕ್ಷಿಯಾದರು. ಎಸ್ಸೆಸ್ಸೆಲ್ಸಿಯ ಹಾಲ್‌ಟಿಕೆಟ್‌ ಪಡೆಯಲು ವಿದ್ಯಾರ್ಥಿಯೂ, ಬ್ಯಾಲೆನ್ಸ್‌ ಉಳಿದಿದ್ದ ಫೀ ಕಟ್ಟಲು ತಂದೆಯೂ ಬಂದಿದ್ದರು. ಫೀ ಕಟ್ಟಿದ ನಂತರ ನೇರವಾಗಿ ಪ್ರಿನ್ಸಿಪಾಲರ ಎದುರು ನಿಂತ ಆ ತಂದೆ - "ನನ್ನ ಮಗನನ್ನು ಪಿಯುಸಿಗೂ ಇಲ್ಲೇ ಸೇರಿಸಬೇಕು ಅಂತಿದೀನಿ. ಎಲೆಕ್ಟ್ರಾನಿಕ್ಸು , ಇಲ್ಲಾಂದ್ರೆ ಕಂಪ್ಯೂಟರ್‌ ಸೈನ್ಸ್‌ಗೆ ಸೀಟ್‌ ಬೇಕು ಸಾರ್‌. ಈಗ್ಲೆà ರಿಕ್ವೆಸ್ಟ್‌ ಮಾಡಿದೀನಿ. ಇಲ್ಲ ಅನ್ಬೇಡಿ' ಎಂದು ಕೈಮುಗಿದರು.

"ನೋಡಿ ಇವ್ರೇ, ನಿಮ್ಮ ಮಗನಿಗೆ ಸೈನ್ಸ್‌ ಹೊಂದುವುದಿಲ್ಲ. ಮ್ಯಾಥ್ಸ್ನಲ್ಲಿ ಅವನು ತುಂಬಾ ವೀಕ್‌ ಇದಾನೆ. ಈ ಬಗ್ಗೆ ಪೇರೆಂಟ್ಸ್‌ ಮೀಟಿಂಗ್‌ನಲ್ಲೇ ತಿಳಿಸಿದ್ದೆ. ಹಾಗಿದ್ರೂ ಏನೂ ಇಂಪ್ರೂವ್‌ ಆಗಲಿಲ್ಲ. ಅವನಿಗೆ ಸೈನ್ಸ್‌ನಲ್ಲಿ ಸೀಟ್‌ ಸಿಗುವುದು ಕಷ್ಟ...'

ಪ್ರಿನ್ಸಿಪಾಲರ ಮಾತನ್ನು ಅಷ್ಟಕ್ಕೇ ತಡೆದ ಆ ತಂದೆ- "ಮಕ್ಳು ಓದಲಿಲ್ಲ ಅಂದ್ರೆ ಹೊಡೆದಾದ್ರೂ ಕಲಿಸ್ಬೇಕಿತ್ತು. ನಾವೇನು ಫೀಸ್‌ ಕೊಡಲ್ವ? ಎಲ್ಕೇಜಿಯಿಂದ ಇಲ್ಲೇ ಓದಿಸಿದ್ದಕ್ಕೆ ನಮ್ಗೆ ಇಂಥಾ ಮರ್ಯಾದೇನಾ?' ಎಂದೆಲ್ಲಾ ಹೇಳುತ್ತಾ ಎದ್ದು ಹೋಗಿಯೇಬಿಟ್ಟರು.

ಮಕ್ಕಳ ಕುರಿತು ಪೋಷಕರಿಗೆ ಇರುವ ನಿರೀಕ್ಷೆ, ಬುದ್ಧಿವಂತಿಕೆ ಅಳೆಯಲು ಅಂಕಗಳೇ ಮುಖ್ಯ, ಸೈನ್ಸ್‌ ವಿಭಾಗವೇ ಶ್ರೇಷ್ಠ ಎಂಬ ಅವರ ತಪ್ಪು ತಿಳಿವಳಿಕೆಗಾಗಿ ಪ್ರಿನ್ಸಿಪಾಲರು ಮರುಗಿದರು. ನೀವೆಲ್ಲ ತಪ್ಪು ತಿಳಿದಿದ್ದೀರ. ಪರಮ ಪೆದ್ದ ಕೂಡ ಮುಂದೊಮ್ಮೆ ಹೆಸರು-ದುಡ್ಡು ಎರಡನ್ನೂ ಮಾಡಬಹುದು ಎಂದು ಪೋಷಕರು/ ಮಕ್ಕಳು -ಇಬ್ಬರಿಗೂ ಹೇಳಬೇಕು ಅನ್ನಿಸಿತು.

ಮರುದಿನವೇ ನೋಟಿಸ್‌ ಬೋರ್ಡ್‌ನಲ್ಲಿ, ದಪ್ಪಕ್ಷರಗಳಿಂದ ಕೂಡಿದ್ದ ಪತ್ರವೊಂದು ಕಾಣಿಸಿಕೊಂಡಿತು. ಅದರಲ್ಲಿ ಪ್ರಾಚಾರ್ಯರು ಹೀಗೆ ಬರೆದಿದ್ದರು: "ಆತ್ಮೀಯ ವಿದ್ಯಾರ್ಥಿಗಳೇ/ ಪೋಷಕರೇ, ನಿಮಗೇ ಗೊತ್ತಿರುವಂತೆ ಪರೀಕ್ಷೆಗಳು ನಡೆದಿವೆ, ನಡೆಯುತ್ತಾ ಇವೆ. ಒಂದೊಂದು ಪರೀಕ್ಷೆ ಮುಗಿದಾಗಲೂ ನಿಮ್ಮೆಲ್ಲರ ಟೆನ್ಶನ್‌ ಹೆಚ್ಚುತ್ತಲೇ ಇದೆ. ಹೆಚ್ಚಿನವರ ಆಯ್ಕೆಗಳು ಎರಡೇ: ಸೈನ್ಸು/ ಕಾಮರ್ಸು!! ಅವೆರಡು ಬಿಟ್ರೆ ಬೇರೆ ಯಾವುದಕ್ಕೂ ಸ್ಕೋಪ್‌ ಇಲ್ಲ. ಅಕಸ್ಮಾತ್‌ ಕಡಿಮೆ  ಮಾರ್ಕ್ಸ್ ಬಂದುಬಿಟ್ರೆ? ಅದೇ ಕಾರಣದಿಂದ ಎಲ್ಲೂ ಸೀಟ್‌ ಸಿಗದೇ ಹೋದ್ರೆ... ಅಥವಾ ಮುಂದೆ ಡಿಗ್ರೀಲಿ ಏನಾದ್ರೂ ಎಡವಟ್ಟಾಗಿ ಫೇಲ್‌ ಆಗಿಬಿಟ್ರೆ ಗತಿಯೇನು? ಹೀಗೆಲ್ಲಾ ಯೋಚನೆ ಮಾಡಿರಿ¤àರ ಅಲ್ವ? ಒಂದ್‌ ವಿಷ್ಯ ನೆನಪಿರ್ಲಿ: ಈ ಜಗತ್ತಿನಲ್ಲಿ ಯಾರೂ ಪೆದ್ದರಲ್ಲ. ಎಲ್ಲ ಸಂದರ್ಭದಲ್ಲೂ ಡಿಗ್ರಿಯೋ, ಮಾಕೊÕàì ಮಾನದಂಡ ಆಗೋದಿಲ್ಲ.

ಪ್ರತಿಯೊಬ್ಬನಿಗೂ ಒಂದು ಅಪರೂಪದ ಪ್ರತಿಭೆ ಇರ್ತದೆ. ಹಾಗೆಯೇ ಪ್ರತಿಯೊಬ್ಬನಿಗೂ ಒಂದೊಂದು ಮಿತಿಯೂ ಇರುತ್ತೆ. ಸಂಗೀತದಲ್ಲಿ ತುಂಬಾ ಶ್ರದ್ಧೆ ಇದ್ದವನಿಗೆ ಕೂಡುವ-ಕಳೆಯುವ ಲೆಕ್ಕವೇ ಬಾರದಿರಬಹುದು. ಬಿಜಿನೆಸ್‌ಮನ್‌ ಆಗಬೇಕು ಎಂದು ಕನಸು ಕಾಣುವವನಿಗೆ ಚರಿತ್ರೆ ಮತ್ತು ಇಂಗ್ಲಿಷ್‌ ಕಬ್ಬಿಣದ ಕಡಲೆ ಅನ್ನಿಸಬಹುದು. ಕ್ರಿಕೆಟ್‌ ಈಸ್‌ ಲೈಫ್ ಅಂದುಕೊಂಡವನಿಗೆ ಪರೀಕ್ಷೆಗಳು ದುಃಸ್ವಪ್ನದಂತೆ ಕಾಡಬಹುದು. ಭರತನಾಟ್ಯದಲ್ಲಿ ಫ‌ಸ್ಟ್‌ ರ್‍ಯಾಂಕ್‌ ಬಂದ ಹುಡುಗಿ ಪಿಯುಸಿಯಲ್ಲಿ ಜಸ್ಟ್‌ ಪಾಸ್‌ ಆಗಿರಬಹುದು... ಇದಕ್ಕೆಲ್ಲ ತಲೆ ಕೆಡಿಸ್ಕೋಬೇಡಿ. ರ್‍ಯಾಂಕ್‌ ಬಂದ್ರೆ ಮಾತ್ರ; ಡಾಕ್ಟರ್‌, ಇಂಜಿನಿಯರ್‌, ಬ್ಯಾಂಕ್‌ ಆಫೀಸರ್‌ಗೆ ಮಾತ್ರ ಬದುಕಲ್ಲಿ ನೆಮ್ಮದಿ ಸಿಗುತ್ತೆ ಎಂಬ ನಂಬಿಕೆಗಳನ್ನು ಮನಸ್ಸಿಂದ ತೆಗೆದುಹಾಕಿ. ಕ್ಲಾಸ್‌ರೂಂನಲ್ಲಿ ನಡೆಯೋ ಮೂರು ತಾಸಿನ ಪರೀಕ್ಷೇಲಿ ಫೇಲ್‌ ಆದ್ರೂ ಚಿಂತೆಯಿಲ್ಲ; ದಿನವೂ ಎದುರಾಗುವ ಲೈಫ್ ಎಕ್ಸಾಂನಲ್ಲಿ ಪಾಸ್‌ ಆಗಬೇಕು ಎಂಬಂಥ ಮೈಂಡ್‌ಸೆಟ್‌ ಬೆಳೆಸಿಕೊಳ್ಳಿ...'

ಹೀಗೆಲ್ಲ ವೇದಾಂತದ ಮಾತಾಡೋದು ಸುಲಭ. ಆದರೆ, ಪರೀಕ್ಷೇಲಿ ಫೇಲ್‌ ಆದ್ರೂ ದೊಡ್ಡ ಸಾಧನೆ ಮಾಡೋದು ತುಂಬಾ ಕಷ್ಟ ಎಂದು ಗೊಣಗುವವರಿಗೆ ಕೊರತೆಯಿಲ್ಲ. ಅಂಥವರ ಸಮಾಧಾನಕ್ಕೆಂದೇ ಒಂದು ಸತ್ಯಕತೆಯನ್ನೇ ಉದಾಹರಣೆಯಾಗಿ ನೀಡಲಾಗಿದೆ.ಅದು ಹೀಗೆ:

ಅಮೆರಿಕದ ಮಿಚಿಗನ್‌ನಲ್ಲಿ ಸ್ಯಾಮ್ಯುಯಲ್‌-ನ್ಯಾನ್ಸಿ ಎಂಬ ದಂಪತಿಯಿದ್ದರು. ನ್ಯಾನ್ಸಿ, ಕೆಲಕಾಲ ಟೀಚರ್‌ ಆಗಿ ಕೆಲಸ ಮಾಡಿದ್ದಳು. ಈ ದಂಪತಿಗೆ ಏಳು ಮಕ್ಕಳು. ಕಡೆಯ ಮಗ ವಿಪರೀತ ತುಂಟನಿದ್ದ. ಯಾವುದೇ ವಸ್ತುವನ್ನು ಕಂಡರೂ- ಇದೇನು? ಇದ್ಯಾಕೆ ಹೀಗಿದೆ? ಇದೆಲ್ಲಿಂದ ಬಂತು? ಇದರಿಂದ ಏನುಪಯೋಗ... ಎಂದೆಲ್ಲಾ ನಿಮಿಷಕ್ಕೊಂದು ಪ್ರಶ್ನೆ ಕೇಳುತ್ತಿದ್ದ. ಎಲ್ಲ ತಾಯಂದಿರಂತೆ, ನ್ಯಾನ್ಸಿಗೂ ಕಡೆಯ ಮಗನ ಮೇಲೆ ಅತೀ ಅನ್ನುವಷ್ಟು ಪ್ರೀತಿಯಿತ್ತು.

ಏಳು ವರ್ಷ ವಯಸ್ಸಿನ ಆ ತುಂಟ ಮಗ, ಅವತ್ತೂಂದು ದಿನ ಶಾಲೆಯಿಂದ ಮರಳಿದವನೇ ಸೀಲ್‌ ಮಾಡಲಾಗಿದ್ದ ಲಕೋಟೆಯೊಂದನ್ನು ಅಮ್ಮನಿಗೆ ಕೊಟ್ಟು ಹೇಳಿದ: "ಮಮ್ಮಿ ಮಮ್ಮಿ, ಇದನ್ನು ನಮ್ಮ ಕ್ಲಾಸ್‌ ಟೀಚರ್‌ ಕೊಟ್ರಾ. ನೀನೊಬ್ಳೆà ಓದಬೇಕಂತೆ. ಹಾಗಂತ ಹೇಳಿಯೇ ಕೊಟ್ರಾ'.

ಟೀಚರ್‌ ಏನು ಬರೆದಿರಬಹುದು ಎಂಬ ಕುತೂಹಲವನ್ನು ಜೊತೆಗಿಟ್ಟುಕೊಂಡೇ ಪತ್ರ ತೆಗೆದಳು ನ್ಯಾನ್ಸಿ. ಅದನ್ನು ಓದಿ ಮುಗಿಸುತ್ತಿದ್ದಂತೆ ಆಕೆಯ ಕಣ್ಣಿಂದ ದಳದಳನೆ ನೀರಿಳಿದವು. "ಮಮ್ಮಿ ಮಮ್ಮಿ, ಯಾಕ್‌ ಅಳ್ತಿದೀಯ? ಏನಾಯ್ತು ಮಮ್ಮಿ?' - ಈ ತುಂಟ ಮಗ ಪ್ರಶ್ನೆ ಕೇಳಿದ. ಛಕ್ಕನೆ ಕಣ್ಣೀರು ಒರೆಸಿಕೊಂಡು ಆ ಪತ್ರವನ್ನೇ ನೋಡುತ್ತಾ ಆಕೆ ಓದತೊಡಗಿದಳು: "ನ್ಯಾನ್ಸಿ ಮೇಡಂ, ನಿಮ್ಮ ಮಗ ಬಹಳ ತುಂಟ. ವಿಪರೀತ ಪ್ರತಿಭಾವಂತ. ಅವನಷ್ಟು ಬುದ್ಧಿವಂತರು ಈ ಜಗತ್ತಿನಲ್ಲೇ ಇಲ್ಲ. ಅವನ ಟ್ಯಾಲೆಂಟ್‌ಗೆ ತಕ್ಕನಾಗಿ ಪಾಠ ಹೇಳುವ ಶಕ್ತಿ ಇಲ್ಲಿ ಯಾರಿಗೂ ಇಲ್ಲ. ಹಾಗಾಗಿ ಅವನನ್ನು ನಾಳೆಯಿಂದ ಶಾಲೆಗೆ ಕಳಿಸೋದು ಬೇಡ. ಮನೆಯಲ್ಲೇ ಉಳಿಸಿಕೊಂಡು ನೀವೇ ಪಾಠ ಹೇಳಿಕೊಡಿ...'

ಮರುದಿನದಿಂದ ಅಮ್ಮ ಶಿಕ್ಷಕಿಯಾದಳು. ಮಗ ವಿದ್ಯಾರ್ಥಿಯಾದ. ಮನೆಯೇ ಪಾಠಶಾಲೆಯಾಯಿತು. ಆನಂತರದಲ್ಲಿ ಈತ ಖಾಸಗಿಯಾಗಿ ಪರೀಕ್ಷೆಗೆ ಕೂತ. ಪ್ರತಿಯೊಂದನ್ನೂ ಪ್ರಶ್ನಿಸುತ್ತ, ಸುತ್ತಲಿನ ಪ್ರಪಂಚ ಮತ್ತು ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಈ ತುಂಟ, ಡಿಗ್ರಿಯವರೆಗೂ ಸೆಕೆಂಡ್‌ ಕ್ಲಾಸ್‌ ವಿದ್ಯಾರ್ಥಿಯಾಗಿಯೇ ನಡೆದುಬಂದ. ಆನಂತರದಲ್ಲಿ ಯಾರೂ ನಂಬಲಾಗದಂಥ ಘಟನೆಗಳು ನಡೆದುಹೋದವು. ಈ ತುಂಟ ಹುಡುಗ ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿ ಬದಲಾದ!

ಹೀಗಿದ್ದಾಗಲೇ, ವಯಸ್ಸಾಗಿದ್ದ ಕಾರಣದಿಂದ ಅವನ ತಾಯಿ ತೀರಿಹೋದಳು. ಕ್ರಿಯಾಕರ್ಮಗಳ ನಂತರ, ಅಮ್ಮನ ಮಧುರ ನೆನಪಿಗೆ ಉಳಿದಿದ್ದ ವಸ್ತುಗಳನ್ನೆಲ್ಲ ಆತ ಹುಡುಕುತ್ತಿದ್ದಾಗಲೇ, ತುಂಬಾ ಹಳೆಯದಾದ, ಬಣ್ಣಮಾಸಿದ್ದ ಕವರ್‌ ಒಂದು ಕಾಣಿಸಿತು. ಯೆಸ್‌, ಈ ಪತ್ರ ಓದುತ್ತ ಓದುತ್ತಲೇ ಅಮ್ಮ ಕಣ್ಣೀರು ಹಾಕಿದ್ದಳು. ಓದಿ ಮುಗಿಸಿದ ತಕ್ಷಣ ನನ್ನನ್ನು ಬಾಚಿ ತಬ್ಬಿಕೊಂಡಿದ್ದಳು. ಅಂಥದೊಂದು ಭಾವುಕ ಕ್ಷಣ ಸೃಷ್ಟಿಯಾಗುವಂತೆ ಮಾಡಿದ ಮಾತುಗಳು ಈ ಪತ್ರದಲ್ಲಿದ್ದವು ಅಂದುಕೊಂಡ. ಅದನ್ನೆಲ್ಲ ಮತ್ತೆ ಓದಬೇಕೆನ್ನಿಸಿ ಪತ್ರ ಬಿಡಿಸಿದ. ಅದರಲ್ಲಿ ಹೀಗೆ ಬರೆದಿತ್ತು: "ನ್ಯಾನ್ಸಿ ಅವರೇ, ನಿಮ್ಮ ಮಗ ಶತದಡ್ಡ. ಅರೆಹುಚ್ಚ. ಅವನ ತಲೇಲಿ ಬುದ್ಧಿ ಇದೆ ಅನಿಸೋದಿಲ್ಲ. ಹುಚ್ಚುಚ್ಚಾಗಿ ಮಾತಾಡ್ತಾನೆ. ನಿಮಿಷಕ್ಕೊಂದು ಪ್ರಶ್ನೆ ಕೇಳ್ತಾನೆ. ಇಂಥವನನ್ನು ಸ್ಕೂಲ್‌ಗೆ ಕಳಿಸಿ ಯಾಕ್ರೀ ನಮ್ಮ ಪ್ರಾಣ ತಿಂತೀರ? ನಾಳೆಯಿಂದ ಅವನನ್ನು ಸ್ಕೂಲ್‌ಗೆ ಕಳಿಸಬೇಡಿ. ಕಳಿಸಲೇಬೇಡಿ. ಅವನನ್ನು ಮನೇಲೇ ಉಳಿಸಿಕೊಳ್ಳಿ...!'

ದಶಕಗಳ ಹಿಂದೆ, ಪತ್ರ ನೋಡುತ್ತಲೇ ಅಮ್ಮ ಕಣ್ತುಂಬಿಕೊಂಡದ್ದು ಏಕೆಂದು ಆ ವಿಜ್ಞಾನಿಗೆ ಈಗ ಅರ್ಥವಾಗಿತ್ತು. ಆ ಪತ್ರ ಓದಿದಾಗ ಅವಳಿಗೆ ಆಗಿರಬಹುದಾದ ದುಃಖ, ಅವಮಾನ, ಅವಳು ಅದನ್ನೆಲ್ಲ ಮೆಟ್ಟಿನಿಂತ ರೀತಿ, ತನ್ನನ್ನು ಪದವೀಧರನನ್ನಾಗಿ ಮಾಡಿದ ಬಗೆ... ಎಲ್ಲವನ್ನೂ ನೆನಪಿಸಿಕೊಂಡು ಸಮಾಧಾನವಾಗುವಷ್ಟು ದುಃಖೀಸಿದ. ನಂತರ ಅಮ್ಮನ ಫೋಟೋದ ಕೆಳಗೆ ಹೀಗೆ ಬರೆದ: ಶಿಕ್ಷಕರಿಂದ ಶತದಡ್ಡ, ಅರೆಹುಚ್ಚ ಅನ್ನಿಸಿಕೊಂಡಿದ್ದವನನ್ನು "ಥಾಮಸ್‌ ಆಲ್ವ ಎಡಿಸನ್‌' ಎಂಬ ಶ್ರೇಷ್ಠ ವಿಜ್ಞಾನಿಯನ್ನಾಗಿ ರೂಪಿಸಿದ ಮಹಾಮಾತೆ ಈಕೆ. ಮತ್ತು, ಇವಳು ನನ್ನ ಅಮ್ಮ!
***
ಅರ್ಥವಾಯ್ತು ಅಲ್ವ? ಬಾಲ್ಯದಲ್ಲಿ ಶತದಡ್ಡ ಅನ್ನಿಸಿಕೊಂಡು ಸೋಲುಗಳೊಂದಿಗೇ ಬದುಕಿದ್ದ ಎಡಿಸನ್‌, ಮುಂದೆ ಬಲ್ಬ್ ಕಂಡುಹಿಡಿದ. ರೆಕಾರ್ಡಿಂಗ್‌ ಫೋನ್‌ ಕಂಡುಹಿಡಿದ. ಮೋಷನ್‌ ಕ್ಯಾಮರಾದ ಅನ್ವೇಷಕನಾದ. ಯಾರಿಗೆ ಗೊತ್ತು? ನಮ್ಮ-ನಿಮ್ಮ ಮಧ್ಯೆಯೂ ಎಡಿಸನ್‌ನಂಥ ಬುದ್ಧಿವಂತರು ಇರಬಹುದು! ಹಾಗಾಗಿ, ಕ್ಲಾಸ್‌ ಎಕ್ಸಾಂ ಎಂದಾಕ್ಷಣ ಹೆದರುವವರಿಗೆ ಧೈರ್ಯ ಹೇಳ್ಳೋಣ. ಕ್ಲಾಸ್‌ ಎಕ್ಸಾಮಿನಲ್ಲಿ ಫೇಲ್‌ ಆದರೂ ಲೈಫ್ ಎಕ್ಸಾಮಿನಲ್ಲಿ ಎಲ್ಲರೂ ಪಾಸ್‌ ಆಗಲಿ ಎಂದು ಹಾರೈಸೋಣ...

- ಎ.ಆರ್‌. ಮಣಿಕಾಂತ್‌

Trending videos

Back to Top