CONNECT WITH US  

ಕರುನಾಡ ಕರ್ಮಜೀವಿ ಜಾರ್ಜ್‌ ಫೆರ್ನಾಂಡಿಸ್‌ 

ಕರಾವಳಿಯ ಹೆಮ್ಮೆಯ ಪುತ್ರ ಜಾರ್ಜ್‌ ಫೆರ್ನಾಂಡಿಸರಿಗೆ ಜೂನ್‌ 3ರಂದು 88 ತುಂಬುತ್ತದೆ. ಶಿಕ್ಷಕ ಜಾನ್‌ ಜೋಸ್‌ ಫೆರ್ನಾಂಡಿಸ್‌ ಮತ್ತು ಆಲಿಸ್‌ ಮಾರ್ಥಾ ಪಿಂಟೊ ದಂಪತಿಯ ಹಿರಿಯ ಪುತ್ರನಾಗಿ 1930ರಲ್ಲಿ ಮಂಗಳೂರಿನ ಬಿಜೈ, ಕಾಪಿಕಾಡಿನಲ್ಲಿ ಜನನ. ಲಾರೆನ್ಸ್‌, ಮೈಕಲ್‌, ಪಾವ್‌É, ಅಲೋಸಿಯಸ್‌ ಮತ್ತು ರಿಚರ್ಡ್‌ ತಮ್ಮಂದಿರು. ಸ್ಥಳೀಯ ಚರ್ಚ್‌ಶಾಲೆ ಮತ್ತು ಸಂತ ಅಲೊಶಿಯಸ್‌ ಪ್ರೌಢ ಶಾಲೆಗಳಲ್ಲಿ ಶಿಕ್ಷಣ. ಕೆಥೊಲಿಕ್‌ ಧಾರ್ಮಿಕ ಪರಂಪರೆಯ ಕುಟುಂಬ. ಈ ವಾತಾವರಣದಲ್ಲಿ ಹಿರಿಮಗ ಜಾರ್ಜ್‌ಗೆ ಕ್ರೈಸ್ತ ಧರ್ಮಗುರುವಾಗುವ ಅಭಿಲಾಷೆ. ಇದಕ್ಕಾಗಿ 1946ರಲ್ಲಿ ಬೆಂಗಳೂರಿನ ಸೆಮಿನರಿಗೆ ಸೇರ್ಪಡೆ. ಜನಸೇವೆ ತುಡಿತವಿದ್ದರೂ ಧರ್ಮಗುರು ಪಟ್ಟ ತನಗೆ ಹೇಳಿಸಿದ್ದಲ್ಲ ಎನ್ನುವ ಮನವರಿಕೆ ಆಗುವುದರೊಂದಿಗೆ ಎರಡೂವರೆ ವರ್ಷದೊಳಗೆ ಸೆಮಿನರಿಯಿಂದ ವಾಪಸ್‌. ಮಂಗಳೂರಿನಲ್ಲಿ ಕಾರ್ಮಿಕರಿಗಾಗಿ ಹೋರಾಟ. "ಕೊಂಕಿ¡ ಯುವಕ್‌' ಎನ್ನುವ ಕೊಂಕಣಿ ಮಾಸಪತ್ರಿಕೆಯ ಪ್ರಕಾಶನ. 

ಬೊಂಬಯಿಯಲ್ಲಿ ಜಾರ್ಜ್‌: ಉದ್ಯೋಗ ಹುಡುಕಿ ಇಪ್ಪತ್ತರ ಹರೆಯದಲ್ಲಿ ಆಗಿನ ಬೊಂಬಯಿ (ಈಗಿನ ಮುಂಬಯಿ)ಗೆ ಪ್ರಯಾಣ. ಅಲ್ಲಿ ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಪ್ರೂಫ್‌ ರೀಡರ್‌. ಕೆಲವೇ ತಿಂಗಳುಗಳಲ್ಲಿ ಅದಕ್ಕೂ ತಿಲಾಂಜಲಿ. ಖ್ಯಾತ ಕಾರ್ಮಿಕ ನಾಯಕ ಪಿ. (ಪ್ಲಾಸಿದ್‌) ಡಿಮೆಲ್ಲೊ ಅವರ‌ ಶಿಷ್ಯರಾಗಿ ಕಾರ್ಮಿಕ ಕ್ಷೇತ್ರದಲ್ಲಿ ದುಡಿಮೆ. ಬಳಿಕ 17 ವರ್ಷಗಳಲ್ಲಿ ಬೊಂಬಯಿಯ ಖ್ಯಾತ ಕಾರ್ಮಿಕ ನಾಯಕನ ಪಟ್ಟ. ಇಂಡಿಯನ್‌ ಲೈಫ್‌ ಅಶ್ಯೂರೆನ್ಸ್‌ ಕಂಪೆನಿ ಸ್ಟಾಫ್‌ ಯೂನಿಯನ್‌, ಮೋಟಾರ್‌ ಲಾರಿ ಡ್ರೈವರ್ ಆ್ಯಂಡ್‌ ಕ್ಲೀನರ್ ಅಸೋಸಿಯೇಶನ್‌, ಮುನ್ಸಿಪಲ್‌ ಮಜ್ದೂರ್‌ ಯೂನಿಯನ್‌, ಬಾಂಬೆ ಟ್ಯಾಕ್ಸಿಮನ್‌ ಯೂನಿಯನ್‌, ಬೆಸ್ಟ್‌ (ಬಿಇಎಸ್‌ಟಿ) ವರ್ಕರ್ ಯೂನಿಯನ್‌, ಬಾಂಬೆ ಲೇಬರ್‌ ಯೂನಿಯನ್‌ ಮೊದಲಾದ ಹತ್ತು ಹಲವು ಕಾರ್ಮಿಕ ಸಂಘಟನೆಗಳ ನೇತಾರ.

"ಬೊಂಬಯಿ ಬಂದ್‌'ಗಳ ಯಶಸ್ವಿ ಸಂಘಟಕ. 1961ರಿಂದ ಎರಡು ಅವಧಿಗೆ ಬೊಂಬಯಿ ಮಹಾನಗರಪಾಲಿಕಾ ಸದಸ್ಯ. 1967ರಲ್ಲಿ ಜರಗಿದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ರೈಲ್ವೇ ಸಚಿವರಾಗಿದ್ದ ಕಾಂಗ್ರೆಸ್‌ನ ಎಸ್‌. ಕೆ. ಪಾಟೀಲರ ವಿರುದ್ಧ ಜಯದೊಂದಿಗೆ "ಜಯಂಟ್‌ ಕಿಲ್ಲರ್‌ ಆಫ್‌ ಬಾಂಬೆ' ಎನ್ನುವ ಖ್ಯಾತಿ. 1974 ಮೇ ತಿಂಗಳಲ್ಲಿ ಭಾರತದ ಚಾರಿತ್ರಿಕ ರೈಲ್ವೇ ಮುಷ್ಕರ. 1975ರಲ್ಲಿ ತುರ್ತು ಪರಿಸ್ಥಿತಿ ವೇಳೆ ಬರೋಡಾ ಡೈನಾಮೈಟ್‌ ಪ್ರಕರಣದ ಆರೋಪಿ. ವೇಷ ಪಲ್ಲಟಿಸಿ ಭೂಗತ. 1976ರಲ್ಲಿ ಬಂಧನ, ಜೈಲುವಾಸ. 

ದಾಖಲೆ ಮತಗಳ ಜಯ: 1977ರ ಲೋಕಸಭಾ ಚುನಾವಣೆಯಲ್ಲಿ ಜೈಲಿನಲ್ಲಿದ್ದೇ ಬಿಹಾರದ ಮುಝಾಫರ್‌ಪುರ್‌ ಕ್ಷೇತ್ರದಲ್ಲಿ ಚಲಾವಣೆಗೊಂಡ 5,12,978 ಮತಗಳಲ್ಲಿ 3,96,687ಮತ ಪಡೆದು 3,34,217ಮತಗಳ ಪ್ರಚಂಡ ಬಹುಮತದೊಂದಿಗೆ ಜಯ. ಈ ಸಂದರ್ಭದಲ್ಲಿ ಸಂಕೋಲೆ ತೊಡಿಸಿದ ಕೈಯನ್ನು ಎತ್ತಿಹಿಡಿದ ಜಾರ್ಜರ ಭಾವಚಿತ್ರ ಈಗಲೂ ಹಲವರ ಮನದಾಳದಲ್ಲಿದೆ. ಆ ಬಳಿಕ ಮೊರಾರ್ಜಿ ದೇಸಾಯಿ ಕೇಂದ್ರ ಸ‌ಂಪುಟದಲ್ಲಿ ಅಲ್ಪಕಾಲ ಸಂಪರ್ಕ, ಬಳಿಕ ಕೈಗಾರಿಕಾ ಮಂತ್ರಿ. 1989 ರಿಂದ ವಿ.ಪಿ.ಸಿಂಗ್‌ ಸರಕಾರದಲ್ಲಿ ಕೇಂದ್ರ ರೈಲ್ವೇಮಂತ್ರಿ. 

ಕೊಂಕಣ ರೈಲ್ವೇಯ ರೂವಾರಿ: ಜಾರ್ಜರು ಬಹುಶಃ ಕೊಂಕಣ ರೈಲ್ವೇ ಕಾರ್ಪೊರೇಶನನ್ನು ಸ್ಥಾಪಿಸಿ, ಮುಂಬಯಿ (ರೋಹಾ) - ಮಂಗಳೂರು (ತೋಕೂರು) ನಡುವಿನ ದುರ್ಗಮ ಹಾದಿಯ (ಒಟ್ಟು 741ಕಿ.ಮೀ.) ಕೆಲಸವನ್ನು ನಾಲ್ಕು ಕಡೆಗಳಿಂದ ಏಕಕಾಲದಲ್ಲಿ ಆರಂಭಿಸದೆ ಇರುತ್ತಿದ್ದರೆ ಕೊಂಕಣ ರೈಲ್ವೆಯ ಪ್ರಗತಿ ಇಂದು ಈ ಪರಿ ಇರುತ್ತಿತ್ತೇ ಇಂದು ಈ ಮಾರ್ಗದಲ್ಲಿ ದೇಶದಾದ್ಯಂತ ಸಂಪರ್ಕಿಸಲು ಸಾಧ್ಯವಾಗುವ ಹಲವಾರು ರೈಲು ಬಂಡಿಗಳು ಓಡಾಡುತ್ತಿದ್ದವೇ ಎಂಬುದು ಯೋಚನೆಗೂ ನಿಲುಕದ ವಿಚಾರ. 1990 ಫೆಬ್ರವರಿ 26ರಂದು ಉಡುಪಿಯ ಇಂದ್ರಾಳಿಯಲ್ಲಿ ಮಂಗಳೂರು - ಉಡುಪಿ ನಡುವಿನ ಕೊಂಕಣ ರೈಲ್ವೇ ಕಾಮಗಾರಿಗೆ ಗುದ್ದಲಿ ಪೂಜೆ ನಡೆದ ಸಂದರ್ಭ ತಾವು ರೈಲ್ವೇಯಲ್ಲಿ ಇದ್ದರೂ, ಇಲ್ಲದಿದ್ದರೂ 5 ವರ್ಷಗಳಲ್ಲಿ ಕರಾವಳಿಯ ಪ್ರಯಾಣಿಕರು ಕೊಂಕಣ ರೈಲ್ವೇಯಲ್ಲಿ ಮುಂಬಯಿಗೆ ತೆರಳಬಲ್ಲರು ಎನ್ನುವ ಆಶ್ವಾಸನೆ ನೀಡಿದ್ದರು. ಕೊಂಕಣ ರೈಲ್ವೆಯ ಕೆಲಸ ಯಾವುದೇ ಅಡೆತಡೆ ಇಲ್ಲದ ರೀತಿ ನಡೆಯುವಂತೆ ಅವರು ಎಲ್ಲಾ ವ್ಯವಸ್ಥೆ ಕೈಗೊಂಡಿದ್ದರು. ಕೆಲವೊಂದು ಕಾನೂನು ಕಟ್ಟಳೆಗಳು ಮತ್ತು ನಿರ್ಮಾಣದಲ್ಲಿ ಅನಿವಾರ್ಯ ಅಡಚಣೆಗಳು ಎದುರಾದ ಕಾರಣ ಸ್ವಲ್ಪ ವಿಳಂಬವಾಗಿ 26 ಜನವರಿ 1998ರಂದು ಈ ಮಾರ್ಗ ಸಂಪೂರ್ಣಗೊಂಡು ಪ್ರಯಾಣಕ್ಕೆ ತೆರೆಯಲ್ಪಟ್ಟಿತು. ತಾವು ಹುಟ್ಟಿ ಬೆಳೆದ ಮಂಗಳೂರಿನ ಮತ್ತು ಕರಾವಳಿಯ ಋಣವನ್ನು ಅವರು ಕೊಂಕಣ ರೈಲ್ವೆಯ ಮೂಲಕ ತೀರಿಸಿದರು. 

ಸಿಯಾಚಿನ್‌ನ ಭೇಟಿ: ಅಟಲ್‌ ಬಿಹಾರಿ ವಾಜಪೇಯಿ ಸರಕಾರದಲ್ಲಿ ಜಾರ್ಜ್‌ ರಕ್ಷಣಾ ಮಂತ್ರಿ. ರಾಜಸ್ಥಾನದ ಪೋಖರಣ್‌ ಮರುಭೂಮಿಯಲ್ಲಿ ಪರಮಾಣು ಪರೀಕ್ಷೆ ನಡೆಯಿತು. ಉಷ್ಣತೆ ಮೈನಸ್‌ 40ರಷ್ಟು ಇರುವ ಸಿಯಾಚಿನ್‌ ಪ್ರದೇಶಕ್ಕೆ ಎರಡು ಬಾರಿ ಖುದ್ದು ಭೇಟಿ ನೀಡಿ ಅಲ್ಲಿಯ ಸೈನಿಕರ ಜೀವನ ಸ್ಥಿತಿಗತಿಯನ್ನು ಕಣ್ಣಾರೆ ಕಂಡಿದ್ದಾರೆ. ಎನ್‌ಡಿಎ ಸಂಚಾಲಕರಾಗಿಯೂ ಗಮನಾರ್ಹ ಸೇವೆ ನೀಡಿದ್ದಾರೆ. 

ಅಗ್ರಗಣ್ಯ ನಾಯಕ: ಭಾರತ ಕಂಡ ಅಗ್ರಮಾನ್ಯ ಕಾರ್ಮಿಕ ನಾಯಕರಲ್ಲಿ, ರಾಜಕೀಯ ಮುಂದಾಳುಗಳಲ್ಲಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಿದವರಲ್ಲಿ ಜಾರ್ಜರು ಓರ್ವರು. 9 ಬಾರಿ ಲೋಕಸಭೆ ಮತ್ತು ಒಂದು ಬಾರಿ ರಾಜ್ಯಸಭೆ ಪ್ರತಿನಿಧಿಸಿದ್ದಾರೆ (ಬಿಹಾರದಿಂದಲೇ ಅಧಿಕ). ಅವರಿಂದ ಲಕ್ಷಾಂತರ ಕಾರ್ಮಿಕರು ತಮ್ಮ ಜೀವನದ ಉನ್ನತಿ ಸಾಧಿಸಿದ್ದಾರೆ. ಕಾರ್ಮಿಕರ ಉನ್ನತಿಗೆ ಮುಂಬಯಿಯಲ್ಲಿ ಬಾಂಬೆ ಲೇಬರ್‌ ಕೋ-ಆಪರೇಟಿವ್‌ ಬ್ಯಾಂಕ್‌ ಎನ್ನುವ ಸಹಕಾರಿ ಬ್ಯಾಂಕನ್ನೂ ಅವರು ಸ್ಥಾಪಿಸಿದ್ದರು. ಅದು ಬಳಿಕ ನ್ಯೂ ಇಂಡಿಯಾ ಕೋ-ಆಪರೇಟಿವ್‌ ಬ್ಯಾಂಕ್‌ ಎಂದಾಯಿತು. ದೇಶದಾದ್ಯಂತ ಜಾರ್ಜರಿಂದ ಉಪಕೃತವಾದ ಹಲವಾರು ಸಂಘ - ಸಂಸ್ಥೆಗಳಿವೆ.

ಮಂಗಳೂರಿನಲ್ಲಿದ್ದಾಗಲೇ ಸಮಾಜವಾದಿ ಪಕ್ಷದಲ್ಲಿದ್ದ ಅವರು ಬಳಿಕ ಸಂಯುಕ್ತ ಸಮಾಜವಾದಿ, ಜನತಾ ಪಕ್ಷ, ಜನತಾ ದಳ, ಸಮತಾ, ಜನತಾದಳ (ಸಂಯುಕ್ತ) ಪಕ್ಷಗಳಲ್ಲಿಯೂ ಇದ್ದರು. ಕೇಂದ್ರ ಸರಕಾರದಲ್ಲಿ ವಿವಿಧ ಅವಧಿಗಳಲ್ಲಿ ಸಂಪರ್ಕ, ಕೈಗಾರಿಕಾ, ರೈಲ್ವೇ ಮತ್ತು ರಕ್ಷಣಾ ಸಚಿವರಾಗಿದ್ದು ಹಲವಾರು ಜನಪರ ಯೋಜನೆಗಳನ್ನು ಸಾಕಾರಗೊಳಿಸಿದವರು. 

ಮಾತು-ಬರಹಗಳಲ್ಲಿ ಧೀಮಂತ: ಕೊಂಕಣಿ ಜಾರ್ಜರ ಮಾತೃಭಾಷೆಯಾಗಿದ್ದರೂ, ತುಳು, ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ ಮತ್ತಿತರ ಭಾಷೆಗಳಲ್ಲಿ ಅವರು ನಿರರ್ಗಳವಾಗಿ ಮಾತಾಡಬಲ್ಲವರು. ಲ್ಯಾಟಿನನ್ನೂ ಒಳಗೊಂಡು ಒಟ್ಟು ಹತ್ತು ಭಾಷೆಗಳಲ್ಲಿ ಅವರು ಸಂವಹನ ಸಾಧಿಸಬಲ್ಲವರಾಗಿದ್ದರು. ಅವರ ಮಾತುಗಳನ್ನು ಕೇಳಲು ಜನ ಮುಗಿಬೀಳುತ್ತಿದ್ದರು. ಅವರ ಭಾಷಣಗಳಲ್ಲಿ ಜನರನ್ನು ಹಿಡಿದಿಡುವಂತಹ ಶಕ್ತಿಯಿತ್ತು. ಕನ್ನಡ, ಕೊಂಕಣಿಯನ್ನೂ ಒಳಗೊಂಡು ವಿವಿಧ ಭಾಷೆಗಳಲ್ಲಿ ಪುಸ್ತಕಗಳನ್ನು ಖರೀದಿಸಿ ಓದುತ್ತಿದ್ದರು. ಉತ್ತಮ ಬರಹಗಾರರೂ ಆಗಿರುವ ಜಾರ್ಜರು ಹಲವು ನಿಯತಕಾಲಿಕಗಳ ಸಂಪಾದಕ / ಪ್ರಕಾಶಕರೂ ಆಗಿದ್ದರು. ಅವುಗಳಲ್ಲಿ ಮಂಗಳೂರಿನಲ್ಲಿರುವಾಗ ಪ್ರಕಾಶಿಸಿದ "ಕೊಂಕಿ¡ ಯುವಕ್‌' ಮಾಸಿಕ (ಕೊಂಕಣಿ - 1949), "ಪ್ರತಿಪಕ್‌Ò' (ಹಿಂದಿ - 1980) ಮತ್ತು "ದಿ ಅದರ್‌ ಸೈಡ್‌' (ಇಂಗ್ಲಿಷ್‌ - 1982) ಕೂಡಾ ಸೇರಿವೆ. ಬಹಳ ದೊಡ್ಡ ಸಂಖ್ಯೆಯಲ್ಲಿ ಅವರ ಲೇಖನಗಳು ವಿವಿಧ ಭಾಷೆಗಳ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

ಜಾರ್ಜರ ಧೋರಣೆಗಳಲ್ಲಿ ಕಾÇಕಾಲಕ್ಕೆ ಬದಲಾವಣೆ ಗಳಾಗಿದ್ದರೂ ಅವು ದೇಶಕ್ಕಾಗಿ. ಅವರ ಮೇಲೆ ಅಪಾದನೆಗಳು ಬಂದಿದ್ದರೂ ತನಿಖೆ ಬಳಿಕ ಅವರು ಶುದ್ಧ ಹಸ್ತರು. ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಅವರು ಯಾವುದೇ ದುಶ್ಚಟ ರಹಿತರು. ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸುವವರು. ಉಡುಗೆ-ತೊಡುಗೆ, ಊಟೋಪಚಾರ, ಜೀವನ ಎಲ್ಲದರಲ್ಲಿಯೂ ಬಹಳ ಸಾದಾಸೀದಾ ಮನುಷ್ಯ ಮನುಷ್ಯ ಅವರಷ್ಟು ಸರಳವಾಗಿ ಬದುಕಿದ ರಾಜ ಕಾರಣಿಗಳು ಬಹಳ ಅಪರೂಪ. 

ಬದುಕಿರುವಾಗಲೇ ಗುರುತಿಸಲ್ಪಡಲಿ: ಪ್ರಸ್ತುತ ಅಲ್ಜೀಮರ್ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದಿರುವ ಜಾರ್ಜರನ್ನು ಕೇಂದ್ರ ಸರಕಾರ ಗೋವಾದಲ್ಲಿ ಕನಿಷ್ಟ "ಜಾರ್ಜ್‌ ಫೆರ್ನಾಂಡಿಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟನೆಲ್‌ ಟೆಕ್ನೋಲೊಜಿ' ಸ್ಥಾಪನೆಯ ಮೂಲಕ ಗೌರವಿಸಿದೆ. ಕೇಂದ್ರದ ಅತ್ಯುನ್ನತ ಪ್ರಶಸ್ತಿಯೊಂದಕ್ಕೂ ಅವರನ್ನು ಪರಿಗಣಿಸಬೇಕು. ಈ ಹೆಮ್ಮೆಯ ಪುತ್ರನನ್ನು ಗೌರವಿಸುವಲ್ಲಿ ಕರ್ನಾಟಕ ಸರಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯೂ ಹಿಂದೆ ಉಳಿಯಬಾರದು. ಮಂಗಳೂರಿನ ನೆಲದಲ್ಲಿ ಹುಟ್ಟಿ, ಬೆಳೆದು, ಶಿಕ್ಷಣ ಪಡೆದು, ನಡೆದಾಡಿದ ಹಾಗೂ ಕರಾವಳಿಯ ಕೀರ್ತಿಯನ್ನು ಭಾರತದಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪ್ರಚುರಪಡಿಸಿದವರು ಜಾರ್ಜರು. ಜಾತಿ, ಮತ, ರಾಜಕೀಯ ಅಭಿಪ್ರಾಯ ಭೇದ ಮರೆತು ಜಾರ್ಜರ ಜೀವಿತ ಕಾಲದಲ್ಲೇ ಅವರ ಸಾಧನೆಗಳನ್ನು ಗುರುತಿಸುವಂತಾಗಬೇಕು. ಮಂಗಳೂರಿನ ದೊಡ್ಡ ಯೋಜನೆಯೊಂದಕ್ಕೆ ಅಥವಾ ಪ್ರಮುಖ ರಸ್ತೆಯೊಂದಕ್ಕೆ ಜಾರ್ಜರ ಹೆಸರು ನೀಡಲು ಸಂಬಂಧ ಪಟ್ಟವರು ನಿರ್ಧಾರ ಕೈಗೊಳ್ಳಲಿ.

- ಎಚ್‌. ಆರ್‌. ಆಳ್ವ

Trending videos

Back to Top