CONNECT WITH US  

ಸಜ್ಜನ ರಾಜಕಾರಣಿ, ಸ್ವತ್ಛ ಆಡಳಿತಗಾರ 

ರಾಜ್ಯದ ಸಜ್ಜನ ರಾಜಕಾರಣದ ಕೊಂಡಿಯೊಂದು ಕಳಚಿ ಹೋಗಿದೆ. ತಮ್ಮ ಸರಳ ನಡೆ-ನುಡಿಯ ಮೂಲಕ  ಜನಮನಗೆದ್ದಿದ್ದ ಮಾಜಿ ಸಚಿವ ಬಿ.ಎ ಮೊಹಿಯುದ್ದೀನ್‌ ಇನ್ನಿಲ್ಲ. ಈ ಮುತ್ಸದ್ದಿಯನ್ನು ಅವರ ಬಹುಕಾಲದ ಒಡನಾಡಿಗಳು ಸ್ಮರಿಸಿರುವುದು ಹೀಗೆ..

ಬಿ.ಎ.ಮೊಹಿಯುದ್ದೀನ್‌ ರಾಜ್ಯ ಕಂಡ ಸ್ವತ್ಛ ಆಡಳಿತಗಾರ. ಕಡುಬಡವರಿಗೂ ಉನ್ನತ ಶಿಕ್ಷಣ ದೊರೆಯಬೇಕು ಎಂಬ ನಿಟ್ಟಿನಲ್ಲಿ ಬಹುದೊಡ್ಡ ಕೆಲಸ ಮಾಡಿದ ವ್ಯಕ್ತಿ. ಸರಳತೆ, ಸಜ್ಜನಿಕೆಗೆ ಮಾದರಿ.  ಭ್ರಷ್ಟಾಚಾರದ ಸೋಂಕು ಲವಲೇಶವೂ ಅಂಟಿಸಿಕೊಳ್ಳದ ಬಹಳ ಎತ್ತರದ ವ್ಯಕ್ತಿತ್ವ. 
ಕರಾವಳಿ ಭಾಗದ ಬ್ಯಾರಿ ಸಮುದಾಯ ಸೇರಿ ಎಲ್ಲ ವರ್ಗದ ಬಡ ವರ್ಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂದು ಬದ್ಧತೆಯೊಂದಿಗೆ ಕೆಲಸ ಮಾಡಿದ. ಬ್ಯಾರಿ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಕಾರಣೀಕರ್ತ ಮೊಹಿಯುದ್ದೀನ್‌. ಒಂದು ರೀತಿಯಲ್ಲಿ "ಬ್ಯಾರಿ ಆಫ್ ದ ಸೆಂಚುರಿ'. ಬ್ಯಾರಿ ಅಕಾಡೆಮಿ ಸ್ಥಾಪನೆಗೂ ಶ್ರಮಿಸಿದ್ದ. 

ವೊನ್ನೆ ರಾತ್ರಿ 9.30ಕ್ಕೆ ಮೊಹಿಯುದ್ದೀನೆY  ಕರೆ ಮಾಡಿದ್ದೆ. ನಾನು ಏ ಬ್ಯಾರಿ ಎಂದೇ ಕರೆಯುತ್ತಿದ್ದೆ. ಅಷ್ಟು ಸಲುಗೆ ನಮ್ಮ ನಡುವೆ ಇತ್ತು. ಏ, ನಾಣಯ್ಯ ಅಂದ. ಆಸ್ಪತ್ರೆಯಲ್ಲಿ ಇದ್ದೀಯಂತೆ ಅಂದೆ. ಹೌದು ಕಣಯ್ನಾ ನಾಳೆ ಡಿಸಾcರ್ಜ್‌ ಆಗುತ್ತೇನೆ ಅಂತ ಹೇಳಿದ್ದ. ಆಯ್ತು ಜಯಪ್ರಕಾಶ್‌ ಹೆಗ್ಡೆಗೂ ಕಾಲಿಗೆ ಫ್ರಾಕ್ಚರ್‌ ಆಗಿದೆ. ವಾಕರ್‌ನಲ್ಲಿ ಬರಬೇಕು ಅಂತಿದ್ದ. ನಾನು, ರಮೇಶ್‌ಕುಮಾರ್‌ ಎಲ್ಲರೂ ಒಟ್ಟಿಗೆ ಸೇರುವಾ ಅಂದೆ. ಆಯ್ತು ಮನೆಗೆ ಬನ್ನಿ ಮಾತಾಡೋಣ ಅಂದಿದ್ದ. ಆ ಮೇಲೆ ತಕ್ಷಣವೇ, "ನೋಡಪ್ಪಾ, 20ನೇ ತಾರೀಖು ನನ್ನ  "ನನ್ನೊಳಗಿನವ ನಾನು' ಪುಸ್ತಕ ಬಿಡುಗಡೆ ಇದೆ. 19ಕ್ಕೆ ಬರಬೇಕು' ಎಂದು ಹೇಳಿದ್ದ. ಆಯ್ತು ಎಂದಿದ್ದೆ. ಆದರೆ, ಬೆಳಗ್ಗೆ ನಮ್ಮಿಂದ ದೂರವಾದ. ದೈಹಿಕವಾಗಿ ಮೊಹಿಯುದ್ದೀನ್‌ ಇಲ್ಲದಿರಬಹುದು. ಆದರೆ, ಆತನ ಒಡನಾಟ, ಚಿಂತನೆ, ನಮ್ಮೊಳಗೆ ಸದಾ ಜೀವಂತ.

ಮೊಹಿಯುದ್ದೀನ್‌ ನನಗಿಂತ ಮುಂಚೆಯೇ ರಾಜಕಾರಣಕ್ಕೆ ಬಂದ. 1968 ರಲ್ಲಿ ಡಿ.ಬಿ. ಚಂದ್ರೇಗೌಡರು ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ. 1978ರಲ್ಲಿ ನಾನು, ರಮೇಶ್‌ಕುಮಾರ್‌, ನಾಣಯ್ಯ, ಮೊಹಿಯುದ್ದೀನ್‌ ಒಟ್ಟಿಗೆ ವಿಧಾನಸಭೆ ಪ್ರವೇಶ ಮಾಡಿದವರು. ದೇವರಾಜ ಅರಸು ನಮಗೆಲ್ಲಾ ನಾಯಕರು. ಕಾಂಗ್ರೆಸ್‌ ಇಬ್ಭಾಗವಾದಾಗ ನಾನು ಅರಸು ಜತೆ ನಿಂತೆ. ರಮೇಶ್‌ಕುಮಾರ್‌, ಮೊಹಿಯುದ್ದೀನ್‌ ಕಾಂಗ್ರೆಸ್‌ನಲ್ಲೇ ಉಳಿದರು. ಆದರೂ ನಮ್ಮ ನಡುವಿನ ಸಂಬಂಧಕ್ಕೆ ಧಕ್ಕೆಯಾಗಲಿಲ್ಲ. ಗುಂಡೂರಾವ್‌ ಅವರು ನನ್ನನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವನಾಗಿ ಮಾಡುತ್ತೇನೆ, ಬಂದು ಬಿಡು ಎಂದರು. ಆದರೆ ನಾನು ಹೋಗಲಿಲ್ಲ.

1983 ರಲ್ಲಿ ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಕ್ರಾಂತಿರಂಗ ಹಾಗೂ ಜನತಾಪಕ್ಷದ  ಸರ್ಕಾರ ರಾಮಕೃಷ್ಣ  ಹೆಗಡೆ ಅವರ ನೇತೃತ್ವದಲ್ಲಿ ಬಂದಿತು. ಮತ್ತೆ ನಾವೆಲ್ಲೂ ಒಂದಾಗಿದ್ದು 1994ರಲ್ಲಿ. ಜನತಾ ಪರಿವಾರ ವಿಲೀನವಾಗಿ ಜನತಾದಳ ಉದಯ ವಾಯಿತು. ನಮ್ಮ ಜತೆ ಬಿ.ಎಲ್‌.ಶಂಕರ್‌, ಜಯ ಪ್ರಕಾಶ್‌ ಹೆಗ್ಡೆ ಸಹ ಇದ್ದರು. ಒಂದೇ ಚಿಂತನೆ ಇದ್ದವರೆಲ್ಲಾ ಜತೆಗೂಡಿದೆವು. ರಾಜ್ಯ ರಾಜಕಾರಣದಲ್ಲಿ ಅದೊಂದು ಹೊಸ ಅಧ್ಯಾಯ. 1994 ರಲ್ಲಿ ರಮೇಶ್‌ಕುಮಾರ್‌ ಸ್ಪೀಕರ್‌, ನಾನು ವಿಧಾನಪರಿಷತ್‌ನಲ್ಲಿ ಸಭಾನಾಯಕ, ಮೊಹಿಯುದ್ದೀನ್‌ ಸರ್ಕಾರದ ಮುಖ್ಯ ಸಚೇತಕ. 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದಾಗ ಇಲ್ಲಿ ಸಿಎಂ ಯಾರಾಗಬೇಕು ಎಂಬ ಜಿಜ್ಞಾಸೆಯುಂಟಾಗಿ ಕೊನೆಗೆ ಸಾಕಷ್ಟು ಬೆಳವಣಿಗೆಗಳ ನಂತರ ಜೆ.ಎಚ್‌.ಪಟೇಲ್‌ ಆದರು. ನಾನು ವಾರ್ತಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವನಾದೆ, ಮೊಹಿಯುದ್ದೀನ್‌ಗೆ ಉನ್ನತ ಶಿಕ್ಷಣ, ಸಣ್ಣ ಕೈಗಾರಿಕೆ ಸಚಿವ ಸ್ಥಾನ ಸಿಕ್ಕಿತು. 

ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದು ವಾಪಸ್‌ ಬಂದರು. ಅಷ್ಟರಲ್ಲಿ ಇಲ್ಲಿ ಸಣ್ಣ ಪ್ರಮಾಣದ ಗುಂಪುಗಾರಿಕೆ ಇತ್ತು. ತದನಂತರ ದೊಡ್ಡ ಸ್ವರೂಪ ಪಡೆಯಿತು. ಆಗಲೂ ದೇವೇಗೌಡರ ಜತೆ ಸಿದ್ದರಾಮಯ್ಯ ಹಾಗೂ ಹತ್ತು ಶಾಸಕರು ಗಟ್ಟಿಯಾಗಿ ನಿಂತರು. ಜಾರ್ಜ್‌ ಫೆರ್ನಾಂಡಿಸ್‌, ಲೋಕಶಕ್ತಿ ಕಟ್ಟಿದ್ದ ರಾಮಕೃಷ್ಣ ಹೆಗಡೆ ಅವರು ಪಟೇಲರನ್ನು ಒಪ್ಪಿಸಿ ಎನ್‌ಡಿಎ ಮೈತ್ರಿಕೂಟ ಸೇರಲು ತೀರ್ಮಾನಿಸಿದ್ದರು. ಆದರೆ, ನಾವು ಸಾಕಷ್ಟು ಪ್ರಯತ್ನಪಟ್ಟರೂ ಅದನ್ನು ತಡೆಯಲು ಆಗಲಿಲ್ಲ. ನಾವೆಲ್ಲ ರಾಜೀನಾಮೆ ಕೊಟ್ಟೆವು.  ಜನತಾಪರಿವಾರ ಒಟ್ಟಾಗಿರಬೇಕು ಎಂಬುದು ನಮ್ಮ ಆಶಯ. ಅದಕ್ಕೆ ವಿರುದ್ಧವಾಗಿ ನೀವು ಹೋಗುತ್ತಿದ್ದೀರಿ ನಾವು ಬರುವುದಿಲ್ಲ ಎಂದೆವು. ಆಯ್ತು, ನೀವು ಅಲ್ಲೇ ಇರಿ ಮುಂದೆ ಏನಾಗುತ್ತೋ ನೋಡೋಣ ಎಂದು ಪಟೇಲರು ಸುಮ್ಮನಾದರು. ತದ ನಂತರ ಜೆಡಿಎಸ್‌, ಜೆಡಿಯು ಎಂದಾಯಿತು. ಆಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತು.  ರಮೇಶ್‌ಕುಮಾರ್‌, ಬಿ.ಎಲ್‌.ಶಂಕರ್‌, ಮೊಹಿಯುದ್ದೀನ್‌ ಕಾಂಗ್ರೆಸ್‌ಗೆ ಹೋದರು. ಎಸ್‌.ಎಂ.ಕೃಷ್ಣ ನನ್ನನ್ನು ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಿದರು. ಆದರೆ, ನಾನು ಕೆಲಕಾಲ ತಟಸ್ಥವಾಗಿದ್ದೆ. 2008ರಲ್ಲಿ ದೇವೇಗೌಡರೇ ಕರೆದು ವಿಧಾನಪರಿಷತ್‌ ಸದಸ್ಯನನ್ನಾಗಿ ಮಾಡಿದರು. ನಾನು ಅವರಿಗೆ ಆ ವಿಚಾರದಲ್ಲಿ ಋಣಿ. ನಾನು ಯಾವಾಗಲೂ ಹೇಳುತ್ತಿದ್ದೆ, ನಾನು ಫ್ರೀ ಕೋಟಾದಡಿ ಬಂದವನು, ಪೇಮೆಂಟ್‌ ಕೋಟಾ ಅಲ್ಲ ಎಂದು.   ನಂತರ ನಡೆದ ರಾಜಕೀಯ ವಿದ್ಯಮಾನಗಳೆಲ್ಲಾ ಗೊತ್ತಿರುವುದೇ. 

ನಾನು, ಮೊಹಿಯುದ್ದೀನ್‌, ರಮೇಶ್‌ಕುಮಾರ್‌, ಜಯಪ್ರಕಾಶ್‌ ಹೆಗ್ಡೆ, ಬಿ.ಎಲ್‌.ಶಂಕರ್‌ ಒಂದೇ ಸೈದ್ಧಾಂತಿಕ ನಿಲುವು ಹೊಂದಿದ್ದವರು. ಬಿಜೆಪಿ, ಆರ್‌ಎಸ್‌ಎಸ್‌, ಭಜರಂಗದಳ ವಿರೋಧಿಸಿಕೊಂಡೇ ಬಂದವರು. ಆದರೆ, ಅನಿವಾರ್ಯ ಕಾರಣಕ್ಕೆ ಜಯಪ್ರಕಾಶ್‌ ಹೆಗ್ಡೆ ಬಿಜೆಪಿ ಸೇರುವಂತಾಯಿತು. ಆದರೆ, ನಾವು ಐದೂ ಜನ ಯಾವುದೇ ಪಕ್ಷದಲ್ಲಿದ್ದರೂ ರಾಜಕಾರಣ ಬಿಟ್ಟು ವೈಯಕ್ತಿಕವಾಗಿ ತುಂಬಾ ಆತ್ಮೀಯತೆ ಹಾಗೂ ಒಡನಾಟ ಇಟ್ಟುಕೊಂಡಿದ್ದೆವು.

ನಾವು ಐದೂ ಮಂದಿ ಎಂದೂ ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೆ ಹೋದವರಲ್ಲ. ಬಂದಾಗ ಸ್ವೀಕರಿಸಿದ್ದೇವೆ, ಬೇರೊಬ್ಬರು ಬೊಟ್ಟು ಮಾಡುವಂತೆ ನಡೆದುಕೊಂಡಿಲ್ಲ. ಮರ್ಯಾದೆಯಿಂದ ಕೆಲಸ ಮಾಡಿ ಅಧಿಕಾರ ಮುಗಿದ ನಂತರ ಘನತೆಯಿಂದ ಬಂದಿದ್ದೇವೆ. ನಮಗೆ ರಾಜಕಾರಣ ವೃತ್ತಿಯಲ್ಲ. ಆದರೆ, ರಾಜಕಾರಣ ವೃತ್ತಿಯಾಗಿಸಿಕೊಂಡವರ ಜತೆ ಇದ್ದರೂ ನಮ್ಮತನ ಕಾಯ್ದುಕೊಂಡಿ ದ್ದೇವೆ.  ಐವರಲ್ಲಿ ಒಬ್ಬ ನಮ್ಮಿಂದ ಇಂದು ದೂರವಾಗಿ ದ್ದಾನೆ. ಆದರೆ, ಆತನ ಸರ ಳತೆ, ಒಳ್ಳೆಯತನ, ಸ್ವತ್ಛ ಮನಸ್ಸು ಇಂದಿನ ಪ್ರತಿಯೊಬ್ಬ ರಾಜಕಾರಣಿಗೂ ಆದರ್ಶ. 

- ಎಂ.ಸಿ.ನಾಣಯ್ಯ, ಮಾಜಿ ಸಚಿವರು
**
ಬಿ.ಎ. ಮೊಹಿಯುದ್ದೀನ್‌, ಸ್ಪೀಕರ್‌ ರಮೇಶ ಕುಮಾರ್‌, ಬಿ.ಎಲ್‌. ಶಂಕರ್‌, ರಘುಪತಿ, ಎಂ.ಸಿ. ನಾಣಯ್ಯ ನಾನು ಒಟ್ಟೊಟ್ಟಿಗೆ ಕೆಲಸ ಮಾಡಿದವರು. ಎಚ್‌.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಜನತಾದಳ ಸಂಪುಟದಲ್ಲಿ ನಾನು ಸಚಿವನಾಗಿದ್ದೆ. ಆಗ ಮೊಹಿಯುದ್ದೀನ್‌ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಅನಂತರ ಜೆ.ಎಚ್‌. ಪಟೇಲ್‌ ಸರಕಾರದಲ್ಲಿ ನಾನೂ ಸಚಿವನಾಗಿದ್ದೆ, ಮೊಹಿಯುದ್ದೀನ್‌ ಅವರೂ ಸಚಿವರಾಗಿದ್ದರು. ಮೊದಲು ಸಣ್ಣ ಕೈಗಾರಿಕಾ ಇಲಾಖೆ, ಬಳಿಕ ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಚಿವರಾಗಿದ್ದರು. ಅವರಿಗೆ ಕೆಲಸ ಮಾಡುವಲ್ಲಿ ಬದ್ಧತೆ ಇತ್ತು. ಸಣ್ಣ ಕೈಗಾರಿಕಾ ಸಚಿವರಾಗಿದ್ದಾಗ ಸಣ್ಣ ಕೈಗಾರಿಕೆಗಳಿಗೆ ಕರ್ನಾಟಕ ರಾಜ್ಯ ಹಣಕಾಸು ನಿಗಮದ ಮೂಲಕ ಸಾಲ ಕೊಡುವಾಗ ಸಬ್ಸಿಡಿಯನ್ನು ಕೊಡುವಲ್ಲಿ ಬಹಳ ಮುತುವರ್ಜಿ ವಹಿಸಿದ್ದರು. ಉನ್ನತ ಶಿಕ್ಷಣ ಸಚಿವರಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದರು.

ಮೊಹಿಯುದ್ದೀನ್‌ ಅವರು ದೇವರಾಜ ಅರಸು ಅವಧಿಯಲ್ಲಿ ರಾಜಕೀಯಕ್ಕೆ ಬಂದಿದ್ದರು. ಆಗ ರಮೇಶ್‌ ಕುಮಾರ್‌, ಸುಬ್ಬಯ್ಯ ಶೆಟ್ಟಿಯವರು ಅದೇ ವೇಳೆ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದರು. ನಾನು ಆ ಬಳಿಕ ಜನತಾದಳಕ್ಕೆ ಸೇರಿದ್ದೆ. ರಮೇಶ ಕುಮಾರ್‌ ಜತೆ ಮೊಹಿಯುದ್ದೀನ್‌ ಅವರು ಜನತಾದಳ ಬಿಟ್ಟು ಕಾಂಗ್ರೆಸ್‌ಗೆ ಸೇರಿದರು. ನಾನು, ನಾಣಯ್ಯನವರು ಜನತಾ ದಳದಲ್ಲಿಯೇ ಇದ್ದೆವು. ನಾನು ಆ ಬಳಿಕ ಕಾಂಗ್ರೆಸ್‌ ಸೇರಿದರೆ, ನಾಣಯ್ಯ ಮತ್ತೆ ಕಾಂಗ್ರೆಸ್‌ ಸೇರಿದರು.

ನಾವು ಏನೇ ತೀರ್ಮಾನ ತೆಗೆದುಕೊಂಡರೂ ಒಟ್ಟೊಟ್ಟಿಗೆ ಕುಳಿತು ಚರ್ಚೆ ನಡೆಸುತ್ತಿದ್ದೆವು. ಹಿಂದೊಮ್ಮೆ ಮೊಹಿಯುದ್ದೀನರಿಗೆ ವಿಧಾನ ಪರಿಷತ್‌ ಸಭಾಪತಿ ಹುದ್ದೆ ಸಿಗುವುದಿತ್ತು. ಅವರೇ ಬೇಡವೆಂದರು. ಆಗ ಬಿ.ಎಲ್‌. ಶಂಕರ್‌ ಸಭಾಪತಿಯಾದರು. ನಾನು ಬಿಜೆಪಿ ಸೇರುವಾಗಲೂ ಮೊಹಿಯುದ್ದೀನ್‌ ಸೇರಿದಂತೆ ಈ ಎಲ್ಲ ಸ್ನೇಹಿತರ ಜತೆ ಚರ್ಚೆ ನಡೆಸಿದ್ದೆ. ನಮ್ಮ ಸಂಬಂಧ ರಾಜಕೀಯಕ್ಕೆ ಅತೀತವಾದುದು, ಅದು ಕೇವಲ ಸ್ನೇಹತನ.

ಜು. 7ರಂದು ಮೊಹಿಯುದ್ದೀನ್‌ ಅವರು ಬರೆದ ಪುಸ್ತಕದ ಕುರಿತು ದೂರವಾಣಿ ಕರೆ ಮಾಡಿದ್ದೆ. ಅಂದು ಬಜಪೆ ವಿಮಾನ ನಿಲ್ದಾಣದಿಂದ ಉಡುಪಿಗೆ ಬರುವವರೆಗೆ ದೂರವಾಣಿಯಲ್ಲಿ ಮಾತನಾಡಿದ್ದೆ. ಅವರು ಮಂಗಳೂರು ಯೇಯಪೊಯ ಆಸ್ಪತ್ರೆಯಲ್ಲಿದ್ದಾಗ, ಇನ್ನೊಮ್ಮೆ ಮನೆಗೆ ಹೋಗಿ ಮಾತನಾಡಿದ್ದೆ. ಜು. 9ರಂದು ಬೆಂಗಳೂರಿಗೆ ಬರುತ್ತೇನೆ ಎಂದೂ ಹೇಳಿದ್ದೆ. ಅಂದು ಬ್ರಹ್ಮಾವರದಲ್ಲಿ ಒಂದು ಶ್ರದ್ಧಾಂಜಲಿ ಸಭೆ ಇತ್ತು. ಅದರಲ್ಲಿ ಪಾಲ್ಗೊಂಡು ಮನೆಗೆ ಹೋದಾಗ ಬಿದ್ದು ಕಾಲಿಗೆ ಗಾಯವಾಯಿತು. ಹೀಗಾಗಿ ಬೆಂಗಳೂರಿಗೆ ಹೋಗಲಾಗಲಿಲ್ಲ.

ನಿನ್ನೆಯಷ್ಟೇ ನಾಣಯ್ಯ ದೂರವಾಣಿ ಕರೆ ಮಾಡಿ ಮೊಹಿಯುದ್ದೀನ್‌, ರಮೇಶ್‌ ಕುಮಾರ್‌ ನಾವೆಲ್ಲ ಸೇರೋಣ ಎಂದಿದ್ದರು. ಮೊಹಿಯುದ್ದೀನ್‌ರಿಗೆ ಹುಷಾರಿಲ್ಲ, ನನ್ನ ಕಾಲಿಗೆ ನೋವಾಗಿದೆ ಹೇಗೆ ಸೇರಲು ಸಾಧ್ಯ ಎಂದು ಹೇಳಿದೆ. ಇಂದು ಮೊಹಿಯುದ್ದೀನರಿಗೆ ಅನಾರೋಗ್ಯ ತೀವ್ರವಾಗಿ ನಿಧನ ಹೊಂದಿದಾಗ ನಾನು ಅವರನ್ನು ಬೆಂಗಳೂರು ಸಂಜಯನಗರದ ಅಪಾರ್ಟ್‌ಮೆಂಟ್‌ಗೆ ಹೋಗಿ ಅಂತಿಮ ನಮನ ಸಲ್ಲಿಸಿ ಬಂದೆ.
ಅವರೊಬ್ಬ ಮುತ್ಸದ್ದಿ. ನಮಗೂ ಅವರಿಗೂ ವಯಸ್ಸಿನಲ್ಲಿ ಬಹಳಷ್ಟು ಅಂತರ ವಿದ್ದರೂ ಸ್ನೇಹಿತರಾಗಿದ್ದೆವು. ಮೊಹಿಯುದ್ದೀನ್‌ರಿಗೆ ಆದ ನೋವುಗಳನ್ನೆಲ್ಲ ಪುಸ್ತಕದಲ್ಲಿ ಅವರು ದಾಖಲಿಸಿದ್ದಾರೆ. ಮೊಹಿಯುದ್ದೀನ್‌ರಂತಹ ವ್ಯಕ್ತಿಗೂ ಹೀಗಾಯಿತಲ್ಲ ಎಂಬ ಬೇಸರವಿದೆ.

- ಕೆ. ಜಯಪ್ರಕಾಶ್‌ ಹೆಗ್ಡೆ, ಮಾಜಿ ಸಚಿವರು
**
"ನಾನು ಕಂಡಂತೆ ಬಿ.ಎ. ಮೊಹಿಯುದ್ದೀನ್‌ ಒಬ್ಬ ಅಪರೂಪದ ವ್ಯಕ್ತಿ. ಅಸೂಯೆ ಮನೋಭಾವವೇ ಅವರಲ್ಲಿ ಇರಲಿಲ್ಲ. ಎಲ್ಲರನ್ನೂ ಬಹಳ ಪ್ರಿತಿ-ವಾತ್ಸಲ್ಯದಿಂದಲೇ ಕಾಣುತ್ತಿದ್ದರು. ಯಾವುದೇ ರೀತಿಯ ಸಣ್ಣತನ ಅಥವಾ ಅಧಿಕಾರ-ಶ್ರೀಮಂತಿಕೆಯ ದರ್ಪವನ್ನು ಪ್ರದರ್ಶಿಸಿದ ವ್ಯಕ್ತಿಯಲ್ಲ. ಹೀಗಾಗಿ ಮೊಹಿಯುದ್ದೀನ್‌ ಅವರು ಒಬ್ಬ ವ್ಯಕ್ತಿಯಾಗಿ, ರಾಜಕೀಯ ನಾಯಕರಾಗಿ ಅಥವಾ ಮಂತ್ರಿಯಾಗಿ ಅಧಿಕಾರದಲ್ಲಿ ಇದ್ದರೂ ಎಲ್ಲಿಯೂ ಯಾವುದೇ ರೀತಿಯ ಕಳಂಕಗಳನ್ನು ಅಂಟಿಸಿಕೊಂಡವರಲ್ಲ.

ನನಗೆ ಮತ್ತು ಬಿ.ಎ. ಮೊಹಿಯುದ್ದೀನ್‌ ಅವರಿಗೆ ಸುಮಾರು 46 ವರ್ಷಗಳ ಸುದೀರ್ಘ‌ ಒಡನಾಟವಿತ್ತು. ವಯಸ್ಸಿನಲ್ಲಿ ನಾನು ಅವರಿಂದ ಸುಮಾರು 13-14 ವರ್ಷಕ್ಕೆ ಚಿಕ್ಕವನು. ಆದರೆ ಚಿಕ್ಕವರು-ದೊಡ್ಡವರು ಎನ್ನದೆ ಎಲ್ಲರನ್ನೂ ಬಹಳ ಪ್ರೀತಿ-ಗೌರವದಿಂದಲೇ ನಡೆಸಿಕೊಳ್ಳುತ್ತಿದ್ದರು. ತಪ್ಪುಗಳನ್ನು ಮಾಡಿದಾಗ ನನಗೂ ಬಹಳಷ್ಟು ಸಲ ಬುದ್ಧಿಮಾತು ಹೇಳಿ ತಿದ್ದಿಕೊಳ್ಳುವಂತೆ ನೇರವಾಗಿ ಹೇಳುತ್ತಿದ್ದರು. ನಾನು ನೋಡಿರುವಂತೆ, ಅದರಲ್ಲಿಯೂ ರಾಜಕಾರಣದಲ್ಲಿ ಮೊಹಿಯುದ್ದೀನ್‌ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಯಾವುದೇ ವಿಚಾರದ ಬಗ್ಗೆಯೂ ನೇರವಾಗಿ ಮತ್ತು ನಿಷ್ಠುರವಾಗಿಯೇ ಹೇಳುತ್ತಿದ್ದರು.

ಇನ್ನು, ಒಬ್ಬ ವ್ಯಕ್ತಿಯಾಗಿ ಅವರು ಬದುಕನ್ನು ತುಂಬಾ ಪ್ರೀತಿಸುತ್ತಿದ್ದರು. ಎಲ್ಲರ ಸಂಕಷ್ಟಗಳಿಗೂ ಸ್ಪಂದಿಸಬೇಕೆಂಬ ಕಾಳಜಿ ಅವರಲ್ಲಿ ಸದಾ ಇರುತ್ತಿತ್ತು. ಸಾರ್ವಜನಿಕ ಬದುಕಿನಲ್ಲಿ ಇದ್ದರೂ ವೈಯಕ್ತಿಕವಾಗಿ ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಕೂಡ ಅಷ್ಟೇ ಶಿಸ್ತು-ಕ್ರಮಬದ್ಧವಾಗಿ ನಿಭಾಯಿಸುತ್ತಿದ್ದರು. ಸಮಾಜಿಕವಾಗಿ ಯಾವುದೇ ಜಾತಿ-ಧರ್ಮಕ್ಕೆ ಸೀಮತರಾಗಿರಲಿಲ್ಲ. ವ್ಯಕ್ತಿಯಾಗಿ ಒಂದು ಧರ್ಮದಲ್ಲಿ ಅವರು ಹುಟ್ಟಿರಬಹುದು. ಆದರೆ ಜಾತಿ-ಧರ್ಮಗಳನ್ನು ಮೀರಿ ನಿಂತು ಒಬ್ಬ ಅಪ್ಪಟ ಜಾತ್ಯತೀತವಾದಿಯಾಗಿ ಬದುಕಿದವರು. ರಾಜಕಾರಣದ ಹೊರತಾಗಿ ಕೃಷಿಯಲ್ಲಿಯೂ ಬಹಳಷ್ಟು ಅಧ್ಯಯನ ಮಾಡುತ್ತಿದ್ದರು. ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣಗಳನ್ನು ಮಾಡಬೇಕಾದರೂ ಬಹಳಷ್ಟು ತಯಾರಿ-ಅಧ್ಯಯನ ಮಾಡಿಕೊಂಡು ಬರುತ್ತಿದ್ದರು. ಹೀಗಾಗಿ ಭಾಷೆಯ ಮೇಲೂ ಬಹಳ ನಿಯಂತ್ರಣವಿಟ್ಟುಕೊಂಡು ಮಾತನಾಡುತ್ತಿದ್ದರು.

ನಾನು ಹತ್ತಿರದಿಂದ ನೋಡಿರುವಂತೆ ದ್ವೇಷ ರಾಜಕಾರಣದ ಬಗ್ಗೆ ಮೊಹಿಯುದ್ದೀನ್‌ಗೆ ಗೊತ್ತೇ ಇರಲಿಲ್ಲ. 1996ರಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿ ವಿವಾದವು ಇಡೀ ದೇಶದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿ ಮಾಡಿತ್ತು.  ಅದರಲ್ಲಿಯೂ ಕರಾವಳಿ ಭಾಗದಲ್ಲಿ ಬಿಗುವಿನ ವಾತಾವರಣವಾಗಿರಬೇಕಾದರೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಬಿ.ಎ. ಮೊಹಿಯುದ್ದೀನ್‌ ಅವರು ಉಸ್ತುವಾರಿ ಸಚಿವರಾಗಿದ್ದರು. ಆದರೆ ಅತ್ಯಂತ ಕ್ಲಿಷ್ಟಕರವಾದ ಸವಾಲಿನ ಸನ್ನಿವೇಶದಲ್ಲಿ ಒಬ್ಬ ಉಸ್ತುವಾರಿ ಸಚಿವರಾಗಿ ಅವರು ಜಿಲ್ಲೆಯಲ್ಲಿ ನಡೆದುಕೊಂಡ ರೀತಿ ಹಾಗೂ ಆ ಸಂದರ್ಭದಲ್ಲಿನ ಅವರ ಕಾರ್ಯ ವೈಖರಿಯನ್ನು ಆಗ ಬಿಜೆಪಿಯ ಮುಖಂಡರು ಕೂಡ ಶ್ಲಾಘಿಸಿದ್ದರು. ಬಹುಶಃ ಒಬ್ಬ ಜನಪ್ರತಿನಿಧಿಯಾಗಿ ಅವರು ಎಷ್ಟೊಂದು ನಿಷ್ಪಕ್ಷವಾಗಿ ನಡೆದುಕೊಳ್ಳುತ್ತಿದ್ದರು ಎನ್ನುವುದನ್ನು ನಾವು ಇದರಿಂದ ಊಹಿಸಬಹುದು.

ಅವರ ಜತೆಗೆ ಮಾತನಾಡಬೇಕಾದರೆ ನಮಗೆಲ್ಲ ತುಂಬಾ ಭಯವಾಗುತ್ತಿತ್ತು. ಏಕೆಂದರೆ ಗೊತ್ತಿದ್ದೂ ತಪ್ಪು ಮಾಡಿದವರನ್ನು ಅವರು ಎಂದಿಗೂ ಕ್ಷಮಿಸುತ್ತಿರಲಿಲ್ಲ. ಒಂದುವೇಳೆ ತಪ್ಪು ಮಾಡಿದರೆ ಅಥವಾ ತಾವು ಹೇಳಿದಂತೆ ಕೇಳದೆ ಹೋದರೆ ಅಂಥವರನ್ನು ಅವರು ಹತ್ತಿರಕ್ಕೂ ಸೇರಿಸಿಕೊ ಳ್ಳುತ್ತಿರಲಿಲ್ಲ. ಅಷ್ಟೊಂದು ನೇರ ನಡೆ-ನುಡಿಯ ಸ್ವಭಾವದವರಾಗಿದ್ದರು. ಇನ್ನೊಂದೆಡೆ ಅಷ್ಟೇ ದೊಡ್ಡ ಸ್ನೇಹಮಯಿ ಕೂಡ ಆಗಿದ್ದರು. ಈಗಿನ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಏನೆಲ್ಲ ಕಸರತ್ತು - ಲಾಬಿ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಮೊಹಿಯುದ್ದೀನ್‌ ಮಾತ್ರ ತಮಗೆ ಮಂತ್ರಿ ಸ್ಥಾನ ಕೊಡಿ ಅಥವಾ ಶಾಸಕರನ್ನಾಗಿ ಮಾಡಿ ಎಂದು ಎಲ್ಲಿಯೂ; ಯಾರ ಬಳಿಯೂ ಅವಕಾಶಗಳನ್ನು ಕೇಳಿಕೊಂಡು ಹೋಗುತ್ತಿರಲಿಲ್ಲ. ಅಧಿಕಾರದ ಬಗ್ಗೆ ಸ್ವಲ್ಲವೂ ವ್ಯಾಮೋಹವಿರಲಿಲ್ಲ. ಇಂಥ ಒಬ್ಬ ಮೌಲ್ಯಾಧಾರಿತ ರಾಜಕಾರಣಿಯನ್ನು ನಾಡು ಕಳೆದುಕೊಂಡಿರುವುದು ನನಗಂತೂ ತುಂಬಾ ದುಃಖವುಂಟು ಮಾಡಿದೆ. ಆ ಮೂಲಕ ಕರಾವಳಿಯಲ್ಲಿಯೂ ಸಜ್ಜನ ರಾಜಕಾರಣದ ಕೊಂಡಿಯೊಂದು ಕಳಚಿ ಹೋಗಿರುವುದು ನೋವುಂಟು ಮಾಡಿದೆ.

- ಕೆ.ಆರ್‌. ರಮೇಶ್‌ ಕುಮಾರ್‌, ರಾಜ್ಯ ವಿಧಾನಸಭಾಧ್ಯಕ್ಷರು


Trending videos

Back to Top