CONNECT WITH US  

ಬಿಸಿ ಕಳೆದುಕೊಂಡಿತೇ ಇಂದಿರಾ ಕ್ಯಾಂಟೀನ್‌?

ರಾಜ್ಯಾದ್ಯಂತ ಅನುಷ್ಠಾನ ವಿಳಂಬ, ಬಡವರ ಕ್ಯಾಂಟೀನ್‌ಗೆ ಇಚ್ಛಾಶಕ್ತಿ ಕೊರತೆಯಾಗದಿರಲಿ

ರಾಜ್ಯದ ಜನತೆಗೆ ರಿಯಾಯಿತಿ ದರದಲ್ಲಿ ತಿಂಡಿ-ಊಟ ಪೂರೈಸುವ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಇಂದಿರಾ ಕ್ಯಾಂಟೀನ್‌ ಯೋಜನೆ ಅನುಷ್ಠಾನ ಬೆಂಗಳೂರು ಹೊರತುಪಡಿಸಿ ಎಲ್ಲೆಡೆ ಆಮೆಗತಿಯಲ್ಲಿ ಸಾಗಿದೆ. ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ   ರಾಜ್ಯಾದ್ಯಂತ ಒಟ್ಟು 247 ಕ್ಯಾಂಟೀನ್‌ಗಳನ್ನು ನಿರ್ಮಿಸಲು ಆದೇಶ ಹೊರಡಿಸಿದ್ದ ಸರ್ಕಾರ, ಯೋಜನೆ ಜಾರಿಗಾಗಿ 211 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿತ್ತು. ಚುನಾವಣೆ ಮುನ್ನ ಬಡವರ ಹಸಿವಿನ ಮೇಲೆ ಇದ್ದ ರಾಜಕಾರಣಿಗಳ ಆಸಕ್ತಿ ಈಗ ಕುಂದಿದೆ. ಈ ಹಿನ್ನೆಲೆಯಲ್ಲಿ ಉದಯವಾಣಿ ರಾಜ್ಯ ಮಟ್ಟದಲ್ಲಿ ನಡೆಸಿದ ಸಿಂಹಾವಲೋಕನ ಇಲ್ಲಿದೆ. 

ಉದ್ಘಾಟನೆ ಭಾಗ್ಯವಿಲ್ಲ
ರಾಯಚೂರು ನಗರದ ಎಪಿಎಂಸಿಯಲ್ಲಿ ಕಟ್ಟಡ ಕೆಲಸ ಮುಗಿದು ಸೇವೆಗೆ ಸಿದ್ಧವಿದ್ದರೂ ಉದ್ಘಾಟನೆ ಕಂಡಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾಕೇಂದ್ರ, ಯಲಬುರ್ಗಾ ಹಾಗೂ ಗಂಗಾವತಿಯಲ್ಲಿ ಕ್ಯಾಂಟೀನ್‌ ನಿರ್ಮಾಣ ಪೂರ್ಣಗೊಂಡಿದ್ದರೂ ಜನರ ಸೇವೆ ಆರಂಭಿಸಿಲ್ಲ. ದಕ್ಷಿಣ ಕನ್ನಡದಲ್ಲಿ ಮಂಗಳೂರು ನಗರದ ಪಂಪ್‌ವೆಲ್‌ನಲ್ಲಿ ಇಂದಿರಾ ಕ್ಯಾಂಟೀನ್‌ ಕಾಮಗಾರಿ ಪೂರ್ಣಗೊಂಡಿ ದ್ದರೂ, ಬಿಡುಗಡೆ ಭಾಗ್ಯ ದೊರೆತಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 9 ಕ್ಯಾಂಟೀನ್‌ಗಳು ಅಂತಿಮ ರೂಪ ಪಡೆದಿದ್ದರೂ ಲೋಕಾರ್ಪಣೆಯಾಗಿಲ್ಲ.

ಕಾಮಗಾರಿ ವಿಳಂಬ
ಚುನಾವಣೆಗೆ ಮುನ್ನ ಇದ್ದ ತರಾತುರಿ ಈಗಿಲ್ಲ. ಯಾದಗಿರಿಯ ಗಂಜ್‌ ಏರಿಯಾದಲ್ಲಿ ನಿರ್ಮಾಣವಾಗುತ್ತಿದ್ದ ಕ್ಯಾಂಟೀನ್‌ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತವಾಗಿತ್ತು. ಶಹಾಪುರದಲ್ಲಿ ನೆಪ ಮಾತ್ರಕ್ಕೆ ಸ್ಥಳ ಗುರುತಿಸಲಾಗಿದೆ. ರಾಯಚೂರಿನ ಸಿಂಧನೂರು, ಮಾನ್ವಿಯಲ್ಲಿ ಕಟ್ಟಡ ಕಾಮಗಾರಿ ಮುಗಿದಿದ್ದು, ಉಳಿದ ಸಾಮಗ್ರಿ ಬಂದಿಲ್ಲ. ಕೊಪ್ಪಳದಲ್ಲೂ ಕಾಮಗಾರಿ ವಿಳಂಬ ಕಂಡುಬಂದಿದೆ. ವಿಜಯಪುರ ಜಿಲ್ಲೆಯಲ್ಲಿ ಕಾಮಗಾರಿ ವಿಳಂಬಗೊಂಡಿದ್ದು, 4 ಕಟ್ಟಡಗಳು ಅಂತಿಮ ಹಂತದಲ್ಲಿವೆ. ಮಂಡ್ಯದ ನಾಲ್ಕು ತಾಲೂಕುಗಳಲ್ಲಿ ಕಾಮಗಾರಿ ಅಪೂರ್ಣವಾಗಿದೆ.

ಅಕ್ರಮದ ವಾಸನೆ
ರಾತ್ರಿ ಊಟದಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿ ಬೀದರ್‌ ಜಿಲ್ಲಾ ಧಿಕಾರಿ ನಗರದ ಕ್ಯಾಂಟೀನ್‌ಗಳ ಮೇಲೆ ದಾಳಿ ನಡೆಸಿ ಅಕ್ರಮ ಕುರಿತು ಮಾಹಿತಿ ಕಲೆ ಹಾಕಿದ್ದರು. ನಂತರ ರಾತ್ರಿ ಊಟದ ವಿತರಣೆಯಲ್ಲಿ ಬದಲಾವಣೆ ಮಾಡಿದ್ದು, 500 ಪ್ಲೇಟ್‌ಗಳ ಬದಲಿಗೆ 200 ಪ್ಲೇಟ್‌ಗೆ ಇಳಿಸಲಾಗಿದೆ. ಅಲ್ಲದೇ ಭಾಲ್ಕಿ ಕ್ಯಾಂಟೀನ್‌ನಲ್ಲಿ ಕೂಡ ರಾತ್ರಿ ಊಟದಲ್ಲಿ 500 ಪ್ಲೇಟ್‌ಗಳ ಬದಲಿಗೆ 300ರಿಂದ 400 ಪ್ಲೇಟ್‌ಗೆ ಇಳಿಸಲಾಗಿದೆ. ಕಲಬುರಗಿಯಲ್ಲೂ ರಾತ್ರಿ ಊಟದ ಲೆಕ್ಕಾಚಾರದ ಕುರಿತು ಇದೇ ರೀತಿಯ ಸಂಶಯ ವ್ಯಕ್ತವಾಗಿದೆ. ಮಂಡ್ಯ ನಗರದಲ್ಲಿ ಆರಂಭದಲ್ಲಿ ಆಹಾರವನ್ನು ಅಕ್ರಮವಾಗಿ ಹೊಟೇಲ್‌ಗ‌ಳಿಗೆ ಸಾಗಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಇದು ಕೂಡಾ ಸರ್ಕಾರಕ್ಕಿರುವ ಇನ್ನೊಂದು ಸವಾಲಾಗಿದೆ. ಆಹಾರದ ಗುಣಮಟ್ಟ, ಶುಚಿತ್ವ ಹಾಗೂ ಅಕ್ರಮಗಳ ಮೇಲೆ ಕಣ್ಗಾವಲು ಇಡುವ ಹೊಣೆ ಸರ್ಕಾರದ್ದಾಗಿದೆ.

ಅನುದಾನ ಬಂದಿಲ್ಲ 
ಕ್ಯಾಂಟೀನ್‌ ಆರಂಭಗೊಂಡು ತಿಂಗಳುಗಳೇ ಕಳೆದರೂ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ರಾಯಚೂರು, ಕಲಬುರಗಿ ಜಿಲ್ಲೆಗಳ ಕ್ಯಾಂಟೀನ್‌ ಉಸ್ತುವಾರಿ ಸಂಸ್ಥೆಗಳು ದೂರಿವೆ. ಕಳೆದ ಆರು ತಿಂಗಳಿ ನಿಂದ ಜಿಲ್ಲಾಡಳಿತ ಹಣ ಬಿಡುಗಡೆ ಮಾಡಿಲ್ಲ ಎಂದು ಮೈಸೂರಿನ ಗುತ್ತಿಗೆದಾರರು ಆರೋಪಿಸಿದ್ದಾರೆ. ಭವಿಷ್ಯದಲ್ಲಿ ಕ್ಯಾಂಟೀನ್‌ಗಳ ಆಹಾರ ಗುಣಮಟ್ಟ ಹಾಗೂ ಕ್ಯಾಂಟೀನ್‌ಗಳ ಯಶಸ್ಸಿನ ಮೇಲೆ ಪ್ರಭಾವ ಬೀರುವ ಅಂಶ ಇದಾಗಿದ್ದು, ಕ್ಯಾಂಟೀನ್‌ ಗುತ್ತಿಗೆದಾರರಿಗೆ ಸಮರ್ಪಕವಾಗಿ ಹಣ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಆಯಾ ಜಿಲ್ಲಾಡಳಿತಗಳು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಬೆಂಗಳೂರಿನಲ್ಲೇ ಆರಂಭ; ಉತ್ತಮ ಸ್ಪಂದನೆ
ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಎಲ್ಲ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸುವ ಯೋಜನೆ ಯನ್ನು ಸರ್ಕಾರ ಘೋಷಿಸಿತ್ತು. ಅದರಂತೆ ಪಾಲಿಕೆಯ 174 ವಾರ್ಡ್‌ ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗಿದ್ದು, ಉಳಿದ ಕಡೆಗಳಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಆಹಾರ ಪೂರೈಕೆ ಮಾಡಲಾಗುತ್ತಿದೆ.   2017-18ನೇ ಸಾಲಿನ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ಸರ್ಕಾರ 100 ಕೋಟಿ ರೂ. ಮೀಸಲಿರಿಸಿ ಪಾಲಿಕೆಗೆ ಬಿಡುಗಡೆಗೊಳಿಸಿದೆ.  174 ವಾರ್ಡ್‌ಗಳಲ್ಲಿ ನಿರ್ಮಿಸಿರುವ ಕ್ಯಾಂಟೀನ್‌ಗಳಿಗೆ ಸಾರ್ವಜನಿಕರಿಂದ ಬೆಳಗ್ಗೆ ಹಾಗೂ ಮಧ್ಯಾಹ್ನ ಆಹಾರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ರಾತ್ರಿ ಊಟಕ್ಕೆ ಹೆಚ್ಚಿನ ಬೇಡಿಕೆಯಿಲ್ಲ. 

"ಸಂಚಾರಿ' ಕ್ಯಾಂಟೀನ್‌: ಸ‌ಂಚಾರಿ ಕ್ಯಾಂಟೀನ್‌ಗಳಿಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆದರೆ, ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು ಬಸ್‌ ನಿಲ್ದಾಣ, ರಸ್ತೆಬದಿ, ಮಾರುಕಟ್ಟೆ ಸೇರಿದಂತೆ ಜನರು ಹೆಚ್ಚು ಸಂಚರಿಸುವ ಕಡೆಗಳಲ್ಲಿ ನಿಲ್ಲುವುದರಿಂದ ಜನರಿಗೆ ಸೇವೆ ದೊರೆಯುತ್ತಿದೆ.  ಮೊಬೈಲ್‌ ಕ್ಯಾಂಟೀನ್‌ಗಳಿಗೆ ಜನವರಿಯಲ್ಲಿಯೇ ಚಾಲನೆ ಸಿಕ್ಕಿದ್ದು, ಸುಮಾರು 18 ವಾರ್ಡ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 10 ವಾರ್ಡ್‌ ಗಳಲ್ಲಿ ಸಂಚಾರಿ ಕ್ಯಾಂಟೀನ್‌ ನಿಲ್ಲಬೇಕಾದ ಜಾಗ ಗುರುತಿಸುವಲ್ಲಿ ಪಾಲಿಕೆಯ ಅಧಿಕಾರಿಗಳು ವಿಫ‌ಲವಾಗಿದ್ದಾರೆ. 

ಸ್ಥಳವೇ ಸಿಕ್ಕಿಲ್ಲ, ಸಿಕ್ಕರೂ ಮುಂದೆ ಹೋಗಿಲ್ಲ
ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಭೂಮಿಯೇ ಸಿಕ್ಕಿಲ್ಲ. ಸ್ಥಳಕ್ಕೆ ಕೆಲವು ತಾಂತ್ರಿಕ ತೊಂದರೆ ಎದುರಾಗಿದ್ದರಿಂದ ಇನ್ನೂ ಹುಡುಕಾಟ ನಡೆಸಿದ್ದೇವೆ ಎಂದು ಅಧಿ ಕಾರಿಗಳೇ ಹೇಳುತ್ತಿದ್ದಾರೆ.  ಹೊಸದಾಗಿ ರಚನೆಗೊಂಡ ರಾಯಚೂರಿನ ಮಸ್ಕಿ, ಸಿರವಾರ ತಾಲೂಕಿಗೂ ಕ್ಯಾಂಟೀನ್‌ ನೀಡುವುದಾಗಿ ಸರ್ಕಾರ ತಿಳಿಸಿತ್ತಾದರೂ, ಇದೀಗ ಆ ನಿರ್ಧಾರ ಕೈಬಿಟ್ಟಿದೆ. ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಸ್ಥಳ ಗುರುತಿಸುವ ಕೆಲಸವಷ್ಟೇ ಆಗಿದೆ. ಬೆಳಗಾವಿ ನಗರದ ಆರು ಕ್ಯಾಂಟೀನ್‌ಗಳಿಗೆ ಒಂದು ಮಾಸ್ಟರ್‌ ಕಿಚನ್‌(ಅಡುಗೆ ಮನೆ) ಮಂಜೂರಾಗಿದ್ದರೂ ಜಾಗದ ಸಮಸ್ಯೆಯಿಂದಾಗಿ ಇನ್ನೂ ಆರಂಭಗೊಂಡಿಲ್ಲ. ಬೆಳಗಾವಿಯ ತಾಲೂಕುಗಳಲ್ಲಿ ಕಟ್ಟಡಕ್ಕೆ ಸ್ಥಳಾವಕಾಶದ ಕೊರತೆಯಾಗಿದೆ. ಧಾರವಾಡ ನಗರದಲ್ಲಿ 2 ಕ್ಯಾಂಟೀನ್‌ ನಿರ್ಮಾಣಕ್ಕಾಗಿ ಕಲಾಭವನ ಆವರಣದಲ್ಲಿ ವಿರೋಧ ಹಾಗೂ ಶಿವಾಜಿ ವೃತ್ತದಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನಲೆಯಲ್ಲಿ ಬೇರೆ ಸ್ಥಳದ ಹುಡುಗಾಟದಲ್ಲಿದೆ ಅಧಿಕಾರಿಗಳ ತಂಡ. ಉತ್ತರ ಕನ್ನಡದ ಜಿಲ್ಲೆಯಲ್ಲಿ ಈಗ ಜಾಗ ಸಿಕ್ಕಿದೆ. ಆದರೆ ಕ್ಯಾಂಟೀನ್‌ ರೂಪುಗೊಂಡಿಲ್ಲ. ಶಿರಸಿ, ಸಿದ್ದಾಪುರ, ಕಾರವಾರದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಭೂಮಿ ಗುರುತಿಸಿ ನಡೆಸುವವರಿಗೆ ಹಸ್ತಾಂತರಿಸಲು ವಿಳಂಬವಾಗಿದೆ. ಮುಂಡಗೋಡದಲ್ಲಿ ಸ್ಥಳದ ಸಮಸ್ಯೆ ಎದುರಾಗಿದೆ. ಕಾರವಾರದಲ್ಲಿ ಸ್ಥಳೀಯ ಹಿತಾಸಕ್ತಿಯಿಂದಾಗಿ ಮೂರು ಬಾರಿ ಸ್ಥಳ ಬದಲಾವಣೆಯಾಗಿದೆ. ಬಾಗಲಕೋಟೆಯಲ್ಲಿ ಸ್ಥಳ ಗುರುತಿಸಿ ಟೆಂಡರ್‌ ಕರೆಯಲಾಗಿದ್ದರೂ, ಕಾಮಗಾರಿ ಆರಂಭವಾಗಿಲ್ಲ. ತುಮಕೂರಿನ ಪಾವಗಡ, ತುರುವೇಕರೆ, ಗುಬ್ಬಿಯಲ್ಲಿ ನಿರ್ಮಾಣ ಸಿದ್ದತೆಗಳು ನಡೆಯುತ್ತಿರುವಾಗ ಚುನಾವಣೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿವೆ.

ರಾತ್ರಿ ಊಟದ ಬೇಡಿಕೆ ಕಡಿಮೆ
ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಹಾಗೂ ರ್ಯಾಲಿಗಳಲ್ಲಿ ಭಾಗವಹಿಸುವವರು ಕ್ಯಾಂಟೀನ್‌ಗಳ ಮೊರೆ ಹೋಗುತ್ತಿದ್ದುದರಿಂದ ಮೂರು ಹೊತ್ತು ಆಹಾರ ಕೊರತೆ ಎದುರಾಗು ತ್ತಿತ್ತು. ಆ ಬಳಿಕ ಮೊದಲಿನಂತೆ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟಕ್ಕೆ ಬೇಡಿಕೆ ಮುಂದುವರಿದಿದ್ದು, ರಾತ್ರಿ ಸಮಯದಲ್ಲಿ ಹೆಚ್ಚಿನ ಜನರು ಬರುವುದಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಇದೇ ಸ್ಥಿತಿಯಿದೆ. 

ಊಟ, ತಿಂಡಿಗೆ ಮಿತಿಯಿದೆ
ಪ್ರತಿಯೊಂದು ಕ್ಯಾಂಟೀನ್‌ನಲ್ಲಿ 150 ಗ್ರಾಂ ತಿಂಡಿ ಹಾಗೂ 300 ಗ್ರಾಂ ಊಟ ನೀಡಲಾಗುತ್ತಿದೆ. ಪ್ರತಿ ಹೊತ್ತಿಗೆ 500 ತಟ್ಟೆಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಕೆಲವು ತಾಲೂಕು ಕೇಂದ್ರಗಳಲ್ಲಿ 400, 300 ತಟ್ಟೆಗಳ ಮಿತಿಯನ್ನೂ ಹೇರಲಾಗಿದೆ. 5 ರೂ.ಗೆ ತಿಂಡಿ ಹಾಗೂ 10 ರೂ.ಗೆ ಊಟ ನೀಡಲಾಗುತ್ತಿದೆ. ರಜಾದಿನಗಳು ಹಾಗೂ ರವಿವಾರ ಕೂಡಾ ಈ ಕ್ಯಾಂಟೀನ್‌ ತೆರೆದಿರುತ್ತವೆ.

ಸ್ಥಳೀಯ ಆಹಾರಕ್ಕಾಗಿ ಬೇಡಿಕೆ
ಇಂದಿರಾ ಕ್ಯಾಂಟೀನ್‌ ಆರಂಭದ ಸಂದರ್ಭದಲ್ಲಿ ಆಯಾಯ ಭಾಗದ ಸಾಂಪ್ರದಾಯಿಕ ಆಹಾರವನ್ನೇ ನೀಡುವುದಾಗಿ ಸರ್ಕಾರ ಹೇಳಿತ್ತು. ಉತ್ತರ ಕರ್ನಾಟಕ‌ದಲ್ಲಿ ರೊಟ್ಟಿ, ಚಪಾತಿ ಊಟ, ಹಳೇ ಮೈಸೂರು ಭಾಗದಲ್ಲಿ ಮುದ್ದೆ ಊಟ ನೀಡಬೇಕಿತ್ತು. ಬೆಳಗಿನ ಉಪಹಾರಕ್ಕೆ ಇಡ್ಲಿ, ಪುಳಿಯೊಗರೆ, ಖಾರಬಾತ್‌, ಪೊಂಗಲ್‌, ರವಾ ಕಿಚಡಿ, ಚಿತ್ರಾನ್ನ,  ವಾಂಗಿಬಾತ್‌, ಕೇಸರಿಬಾತ್‌ ವಿತರಿಸಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ತರಕಾರಿ ಸಾಂಬಾರ್‌, ಅನ್ನ, ಮೊಸರನ್ನ, ಬಿಸಿ ಬೇಳೆಬಾತ್‌, ಚಿತ್ರಾನ್ನ ನೀಡಲಾಗುತ್ತಿದೆ. ಬೆಳಗ್ಗೆ ವಿವಿಧ ತಿನಿಸು ದೊರೆತರೂ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅನ್ನದ ಐಟಂಗಳು ಮಾತ್ರ ಇರುವುದು ಹಳೇ ಮೈಸೂರು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗೆ ನಿರಾಸೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಸ್ಥಳೀಯ ಕುಚ್ಚಲಕ್ಕಿ ಅನ್ನ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ವೈವಿಧ್ಯಮಯ ಆಹಾರ ಲಭ್ಯವಿದೆ. ಮಾ.1 ರಿಂದ ಹೊಸ ಮೆನು ಪ್ರಕಾರ ಪಾಯಸ, ಆಲೂ ಪಲಾವ್‌, ಆಲೂ ಕುರ್ಮ, ತಡ್ಕ ಇಡ್ಲಿ, ಮೊಸರು ಸಲಾಡ್‌, ಬಟಾಣಿ ಪಲಾವ್‌, ಪಾಲಾಕ್‌ ಇಡ್ಲಿ, ಸಾಬುದಾನ್‌ ಕೀರು, ವೆಜ್‌ ಪಲಾವ್‌, ಜೀರಾ ಆಲೂ ಪಲಾವ್‌, ಆಲೂ ಬಟಾಣಿ ಕರ್ರಿ ಸೇರಿದಂತೆ ಹಲವಾರು ಹೊಸ ಬಗೆಯ ತಿಂಡಿ-ಊಟಗಳನ್ನು ಮೆನುವಿನಲ್ಲಿದೆ. ಇದರಿಂದ ಜನಾಕರ್ಷಣೆಯೂ ಹೆಚ್ಚಿದೆ. 

ಸ್ವಚ್ಛತೆ ಕೊರತೆ
ತುಮಕೂರಿನ ತಿಪಟೂರು ಮತ್ತು ಚಿಕ್ಕನಾಯಕನ ಹಳ್ಳಿಯಲ್ಲಿ ಸರಿಯಾದ ಕಟ್ಟಡ ಮತ್ತು ಸ್ವತ್ಛತೆ ಇಲ್ಲ. ತಿಪಟೂರನಲ್ಲಿ ಮಳೆ ಬಂದರೆ ಜನ ಹೋಗಿ ಕ್ಯಾಂಟೀನ್‌ ನಲ್ಲಿ ತಿಂಡಿ ತಿನ್ನಲು ಸಾಧ್ಯವಾಗುವುದಿಲ್ಲ ಎನ್ನುವಂತಿದೆ. ರಾಜ್ಯದ ಇತರೆಡೆಗಳಲ್ಲೂ ಇದೇ ಸಮಸ್ಯೆ ತಲೆ ದೋರುವ ಅಪಾಯವಿದೆ. ಆರಂಭದಲ್ಲೇ ಸ್ವಚ್ಛತೆಗೆ ಆದ್ಯತೆ ಅಗತ್ಯ.

ಯೋಜನೆ ಇದ್ದಿದ್ದೆಷ್ಟು?   ಆರಂಭ ಆಗಿದ್ದೆಷ್ಟು?
ಬೆಂಗಳೂರು ನಗರ 
198          174
(+28 ಸಂಚಾರಿ ಕೂಡಾ ಇದೆ)
ಮೈಸೂರು
17            11
ಮಂಡ್ಯ
07            03
ತುಮಕೂರು
12        09
ಉಡುಪಿ
04          02
ಬೀದರ್‌
07       04
ಕಲಬುರಗಿ
07        07
ದಕ್ಷಿಣ ಕನ್ನಡ
10      05
ರಾಯಚೂರು
07      02
ಕೊಪ್ಪಳ
05      00
ಬೆಳಗಾವಿ
15     01
ಧಾರವಾಡ
15      00
ಉತ್ತರ ಕನ್ನಡ
12     01
ವಿಜಯಪುರ
08      00
ಬಾಗಲಕೋಟೆ
08      00

Trending videos

Back to Top