CONNECT WITH US  

ದತ್ತಾಂಶ ರಕ್ಷಣೆಗೆ ಸೂಕ್ತ ಕಾನೂನು ಅಗತ್ಯ

ನೆಟ್‌ ನ್ಯೂಟ್ರಾಲಿಟಿಯಂತೆ ಖಾಸಗಿತನದ ರಕ್ಷಣೆ ಅಗತ್ಯ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ, ಅದನ್ನು ಹಕ್ಕು ಎಂದು ಪರಿಗಣಿಸಿ ರಕ್ಷಿಸುವಲ್ಲಿ ಕಾನೂನು ಹಾಗೂ ಸಾರ್ವಜನಿಕ ಸಂಸ್ಥೆಗಳ ಪಾತ್ರ ಕುರಿತು ವಿವಾದವಿದೆ. ಎಲ್ಲರೂ ತಾವು ಖಾಸಗಿತನದ ರಕ್ಷಣೆ ಪರ ಎನ್ನುತ್ತಾರೆ. ಅದನ್ನು ಶಾಸನದ ಮೂಲಕ ಖಾತ್ರಿಗೊಳಿಸುವುದು ಹೇಗೆಂದು ಹೇಳುವುದಿಲ್ಲ.

ಮಾಹಿತಿ ಹಕ್ಕು ರಕ್ಷಣೆಗೆ ಸಂಬಂಧಿಸಿದಂತೆ ದೇಶದಲ್ಲಿ ಸಾಕಷ್ಟು ಕೆಲಸ ಆಗಿದೆ. ಆದರೆ, ಜನರ ಖಾಸಗಿತನದ ಹಕ್ಕು ಹಾಗೂ ಡೇಟಾ(ದತ್ತಾಂಶ) ರಕ್ಷಣೆಗೆ ಸಂಬಂಧಿಸಿದಂತೆ ಹೆಚ್ಚೇನೂ ಕೆಲಸ ನಡೆದಿಲ್ಲ. ನ್ಯಾ.ಪುಟ್ಟಸ್ವಾಮಿ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ನ್ಯಾ. ದೀಪಕ್‌ ಮಿಶ್ರಾ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳಿದ್ದ ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠ‌ "ಖಾಸಗಿತನ ಮೂಲಭೂತ ಹಕ್ಕು' ಎಂದು ತೀರ್ಪು ನೀಡಿದ ಬಳಿಕ ಇದಕ್ಕೆ ಸಂಬಂಧಿಸಿದ ಕಾನೂನಿನ ಶಾಸನಾತ್ಮಕ ಚೌಕಟ್ಟು ಹೇಗಿರಬೇಕು ಎನ್ನುವ ಬಗೆಗೆ ನಿರ್ದಿಷ್ಟ ಚರ್ಚೆ ಆರಂಭವಾಗಿದೆ. ಇದಕ್ಕೆ ಕಾರಣವಾಗಿರುವುದು ನಿವೃತ್ತ ನ್ಯಾ. ಬಿ ಎನ್‌ ಶ್ರೀಕೃಷ್ಣ ನೇತೃತ್ವದ ತಜ್ಞರ ಸಮಿತಿ.
ಕಳೆದ ಆಗಸ್ಟ್‌ನಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ ನೇಮಿಸಿದ ಈ ಸಮಿತಿಗೆ ನೀಡಿದ ಚೌಕಟ್ಟೆಂದರೆ, ಡಿಜಿಟಲ್‌ ಆರ್ಥಿಕತೆಯ ಬೆಳವಣಿಗೆಯನ್ನು ಖಾತ್ರಿಪಡಿಸಿಕೊಂಡೇ ಜನರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವುದು ಹೇಗೆ ಎನ್ನುವ ಕುರಿತು ಶಿಫಾರಸು ನೀಡುವುದು ಹಾಗೂ ಕರಡು ಪ್ರಸ್ತಾವ ಸಲ್ಲಿಕೆ. ಖಾಸಗಿತನಕ್ಕೆ ಸಂಬಂಧಿಸಿದ ಕಾನೂನುಗಳನ್ನು ರೂಪಿಸಲು ನಡೆದ ಹಿಂದಿನ ಪ್ರಯತ್ನಗಳ ಬಗ್ಗೆ, ಖಾಸಗಿತನ ಮತ್ತು ದತ್ತಾಂಶ ರಕ್ಷಣೆಯ ಪ್ರಸ್ತುತ ಸ್ಥಿತಿ ಮತ್ತು ವೈಯಕ್ತಿಕ ಹಕ್ಕುಗಳಿಗೆ ಧಕ್ಕೆ ಬಾರದಂತೆ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುವುದು ಶಿಫಾರಸು ಸಮಿತಿಯ ಉದ್ದೇಶ. 

ದತ್ತಾಂಶ ಮಾತ್ರವಷ್ಟೇ ಅಲ್ಲ
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ ಹೊರಡಿಸಿದ್ದ ಪ್ರಕಟಣೆಯಲ್ಲಿ "ಖಾಸಗಿತನ' ಎನ್ನುವ ಪದ ಇರಲಿಲ್ಲ ಹಾಗೂ "ದತ್ತಾಂಶ' ಕುರಿತು "ನಿಯಮಿತ'ವಾದ, ತಾಂತ್ರಿಕ ದೃಷ್ಟಿ ಕೋನ ಮಾತ್ರವಷ್ಟೇ ಇತ್ತು. 2016-17ರಲ್ಲಿ ಆಧಾರ್‌ ಕುರಿತ ಪ್ರಕರಣ ದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ "ಖಾಸಗಿತನ ಎನ್ನುವುದು ಮೂಲಭೂತ ಹಕ್ಕಲ್ಲ' ಎನ್ನುವ ಸರ್ಕಾರದ ನಿಲುವಿಗೆ ಅನುಗುಣವಾಗಿತ್ತು. ಆದರೆ, ನ್ಯಾ. ಪುಟ್ಟಸ್ವಾಮಿ ವರ್ಸಸ್‌ ಭಾರತ ಸರ್ಕಾರ ಪ್ರಕರಣದ ತೀರ್ಪು, ಖಾಸಗಿತನ ಕುರಿತ ಹೊಸ ಕಾನೂನಿಗೆ ದಾರಿ ಮಾಡಿ ಕೊಡಲಿಲ್ಲ. 2015ರಿಂದ ಇಬ್ಬರು ಅಟಾರ್ನಿ ಜನರಲ್‌ಗ‌ಳು ಸೇರಿದಂತೆ ನಾನಾ ಸರ್ಕಾರಿ ಅಧಿಕಾರಿಗಳ ವಾದದ ಹೊರತಾಗಿಯೂ, ಸಂವಿಧಾನದ ಮೂರನೇ ಭಾಗದಲ್ಲಿರುವ ಬಿಲ್‌ ಆಫ್ ರೈಟ್ಸ್‌ನ ಪ್ರಸ್ತಾವಗಳು, ವಿಧಿಗಳಾದ 19 ಮತ್ತು 21 ಕೊಡಮಾಡುವ ಹಕ್ಕುಗಳು ಖಾಸಗಿತನ ಮೂಲಭೂತ ಹಕ್ಕು ಎನ್ನುತ್ತವೆ ಎಂದು ಕೋರ್ಟ್‌ ಹೇಳಿತು.
ವಾಟ್ಸ್‌ಆ್ಯಪ್‌-ಫೇಸ್‌ಬುಕ್‌ ಮಾಹಿತಿ ವರ್ಗಾವಣೆ ಪ್ರಕರಣದ ವಿಚಾರಣೆ ವೇಳೆ, ಖಾಸಗಿ ಕ್ಷೇತ್ರದಲ್ಲಿ ದತ್ತಾಂಶ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರ ತನ್ನ ನಿಲುವು ಪ್ರಕಟಿಸಬೇಕು ಎಂದು ಕೋರ್ಟ್‌ ಹೇಳಿತ್ತು. ಆಗ ಸರ್ಕಾರಿ ವಕೀಲರು ಈ ಸಂಬಂಧ ತಜ್ಞರ ಸಮಿತಿಯೊಂದನ್ನು ರಚಿಸುವುದಾಗಿ ಹೇಳಿದ್ದರು. ಸರ್ಕಾರ ಸಮಿತಿಯನ್ನು ರಚಿಸಿದ ಮೂರು ತಿಂಗಳ ಬಳಿಕ, ಕಳೆದ ಡಿಸೆಂಬರ್‌ನಲ್ಲಿ ಸರ್ಕಾರ ಹೊರಡಿಸಿದ ಶ್ವೇತಪತ್ರದಲ್ಲಿ ನ್ಯಾ. ಪುಟ್ಟಸ್ವಾಮಿ ಪ್ರಕರಣದ ತೀರ್ಪನ್ನು ಉಲ್ಲೇಖೀಸಿದ್ದಲ್ಲದೆ, ದತ್ತಾಂಶ ರಕ್ಷಣೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಶಾಸನಗಳ ತುಲನಾತ್ಮಕ ಪುನರ್‌ವಿಮ ರ್ಶೆಯನ್ನೂ ಹಂಚಿಕೊಂಡಿತ್ತು. ಆದರೆ, 2010ರಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಖಾಸಗಿತನ ಕುರಿತ ಶಾಸನ  ಹಾಗೂ 2012-14ರಲ್ಲಿ ಇಲಾಖೆ ಕರಡು ಮಸೂದೆಯನ್ನು ಹೊರಡಿಸಿತ್ತು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಈ ಕರಡು ಪಠ್ಯ ಸೋರಿಕೆಯಾಗಿತ್ತು.

ಈಗ ಇರುವುದೇನು?
ನ್ಯಾ.ಪುಟ್ಟಸ್ವಾಮಿ ಪ್ರಕರಣದ ತೀರ್ಪಿನಿಂದ ಖಾಸಗಿತನ ಎನ್ನುವುದು ಮೂಲಭೂತ ಹಕ್ಕು ಎಂದು ಖಾತ್ರಿಯಾಗಿದೆ. ಆದರೆ, ಖಾಸಗಿತನ-ದತ್ತಾಂಶ ಕುರಿತ ನಿಯಮಗಳು ಪ್ರಸ್ತುತ ಕಾನೂನುಗಳಲ್ಲದೆ ಸಂಸತ್‌ ಭವಿಷ್ಯದಲ್ಲಿ ಅಂಗೀಕರಿಸುವ ತಿದ್ದುಪಡಿಗಳಿಗೆ ಅನ್ವಯಿಸುತ್ತದೆ. ಈಗ ಬೇಕಿರುವುದು: ಮೆಟಾ ಡೇಟಾ-ಕೃತಕ ಬುದ್ಧಿಮತ್ತೆ ಕೈ ಮೇಲಾಗಿರುವ ಜಗತ್ತಿನಲ್ಲಿ ಖಾಸಗಿತನ-ದತ್ತಾಂಶ ರಕ್ಷಣೆ ಎದುರಿಸುವ ಸವಾಲುಗಳು ಹಾಗೂ ಅಪಾಯಗಳನ್ನು ಎದುರಿಸಬಲ್ಲ ಬಲಿಷ್ಠ ಹಾಗೂ ಸಮಗ್ರ ಕಾನೂನು. ಜತೆಗೆ, ಪ್ರಭುತ್ವ ಜನರ ಚಟುವಟಿಕೆಗಳ ಮೇಲೆ ಕಣ್ಗಾವಲು ಇರಿಸುವುದನ್ನು ತಡೆಯಬೇಕಿದೆ.ಭಾರತದ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಅನಗತ್ಯವಾಗಿ ಮಾಹಿತಿ ಸಂಗ್ರಹ, ದುರ್ಬಳಕೆ ಹಾಗೂ ಸೋರುವಿಕೆ ಸಾಮಾನ್ಯ ಆಗಿಬಿಟ್ಟಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿಧಿ 43ಎ ನಿರುಪಯುಕ್ತವಾಗಿದ್ದು, ಬ್ಯಾಂಕಿಂಗ್‌ ಮತ್ತು ಟೆಲಿಕಾಂ ಕ್ಷೇತ್ರದಲ್ಲಿನ ಬಿಗಿ ನಿಯಂತ್ರಣಗಳು ಕೂಡ ಅಕ್ರಮ ತಡೆಯುವಲ್ಲಿ ನಿರುಪಯುಕ್ತವಾಗಿವೆ. ದೇಶದಲ್ಲಿ ಖಾಸಗಿತನ ಮತ್ತು ದತ್ತಾಂಶ ರಕ್ಷಣೆಗೆ ಸ್ಪಷ್ಟವಾದ, ಜಾರಿಗೊಳಿಸಬಹುದಾದ ಶಾಸನಾತ್ಮಕ ವ್ಯವಸ್ಥೆ ಮತ್ತು ಅನುಷ್ಠಾನಗೊಳಿಸಬಲ್ಲ ಸಂಸ್ಥೆಯೊಂದು ಇಲ್ಲ.
ನೆಟ್‌ ನ್ಯೂಟ್ರಾಲಿಟಿಯಂತೆ ಖಾಸಗಿತನದ ರಕ್ಷಣೆ ಕೂಡ ಅಗತ್ಯ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ, ಅದನ್ನು ಹಕ್ಕು ಎಂದು ಪರಿಗಣಿಸಿ ರಕ್ಷಿಸುವಲ್ಲಿ ಕಾನೂನು ಹಾಗೂ ಸಾರ್ವಜನಿಕ ಸಂಸ್ಥೆಗಳ ಪಾತ್ರ ಕುರಿತು ವಿವಾದವಿದೆ. ಎಲ್ಲರೂ ತಾವು ಖಾಸಗಿತನದ ರಕ್ಷಣೆ ಪರ ಎನ್ನುತ್ತಾರೆಯೇ ಹೊರತು, ಅದನ್ನು ಶಾಸನದ ಮೂಲಕ ಖಾತ್ರಿಗೊಳಿಸುವುದು ಹೇಗೆ ಎಂದು ಹೇಳುವುದಿಲ್ಲ.

ಜಿಡಿಪಿಆರ್‌ ತೋರಿದ ದಾರಿ
ಕಳೆದ ನವೆಂಬರ್‌ನಲ್ಲಿ ದಶಕದ ಪ್ರಮುಖ ಕಣ್ಗಾವಲು ಪ್ರಕರಣ ಎನ್ನಲಾದ ಕಾಪೆìಂಟರ್‌ ವಿರುದ್ಧ ಯುನೈಟೆಡ್‌ ಸ್ಟೇಟ್ಸ್‌ ಪ್ರಕರಣದ ವಿಚಾರಣೆ ವೇಳೆ ,ಮೂರನೇ ಕಕ್ಷಿ ಸಿದ್ಧಾಂತ, ಎಂದರೆ, ವ್ಯಕ್ತಿ ಯೊಬ್ಬ ಬ್ಯಾಂಕ್‌/ವೆಬ್‌ಸೈಟ್‌ ಇತ್ಯಾದಿಗೆ ತನ್ನ ದತ್ತಾಂಶ ನೀಡಿದ ಬಳಿಕ ಆತನ ಖಾಸಗಿತನ ಎನ್ನುವುದು ಅಂತ್ಯವಾಗುತ್ತದೆ. ಇದನ್ನು ಕಂಪನಿ-ಸರ್ಕಾರಗಳು ಬಳಸಿಕೊಳ್ಳಬಹುದು ಎಂದು ಅಮೆರಿಕದ ಸುಪ್ರೀಂ ಕೋರ್ಟ್‌ ಹೇಳಿತ್ತು. ಆದರೆ, ಕೆನರಾ ಬ್ಯಾಂಕ್‌ ವಿರುದ್ಧ ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್‌ ಪ್ರಕರಣದಲ್ಲಿ ಭಾರತದ ಸುಪ್ರೀಂ ಕೋರ್ಟ್‌, ಖಾಸಗಿತನ ಎನ್ನುವುದು ಅಂತಿಮವಾಗಿ ವ್ಯಕ್ತಿಯಲ್ಲೇ ಉಳಿದುಕೊಳ್ಳುತ್ತದೆ ಎಂದಿತ್ತು.ಎಡ್ವರ್ಡ್‌ ಸ್ನೋಡೆನ್‌ ಕಣ್ಗಾವಲು ಕುರಿತು ಬಹಿರಂಗಗೊಳಿಸಿದ ಮಾಹಿತಿಗಳು ಜಗತ್ತನ್ನೇ ಬೆಚ್ಚಿಬೀಳಿಸಿದವು. ವಿಕಿಲೀಕ್ಸ್‌ ಸರ್ಕಾರಗಳ ಕರಾಮತ್ತುಗಳನ್ನು ಬಹಿರಂಗಗೊಳಿಸಿತು. ಕೇಂಬ್ರಿಜ್‌ ಅನಲಿಟಿಕಾ ವಿವಾದದ ಬಳಿಕ ತಂತ್ರಜ್ಞಾನ ಕಂಪನಿ-ಸರ್ಕಾರಗಳ ಅನಗತ್ಯ ಮೂಗು ತೂರಿಸುವಿಕೆ ಬಗೆಗೆ ಜನ ಆತಂಕಗೊಂಡಿದ್ದಾರೆ. ದತ್ತಾಂಶ ರಕ್ಷಣೆ ಹಾಗೂ ಕಣ್ಗಾವಲು ಪ್ರತ್ಯೇಕ ವಿಷಯ ಎನ್ನಿಸಿ ದರೂ, ಅವು ವ್ಯಕ್ತಿಗತವಾದ್ದರಿಂದ, ಸರ್ಕಾರದ ಕಣ್ಗಾವಲಿನಿಂದ ಆತನ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಸ್ನೋಡೆನ್‌ ಪ್ರಕರಣಕ್ಕೆ ಮುನ್ನವೇ ಅಮೆರಿಕದಲ್ಲಿ ಅಸ್ತಿತ್ವದಲ್ಲಿದ್ದ ಫಾರಿನ್‌ ಇಂಟೆಲಿಜೆನ್ಸ್‌ ಸರ್ವೇಲನ್ಸ್‌ ಕೋರ್ಟ್‌ಗೆ ಮಾತ್ರ ಹಸ್ತಕ್ಷೇಪ-ತಡೆ ಆದೇಶ ನೀಡುವ ಅಧಿಕಾರ ಇತ್ತು. ಭಾರತದಲ್ಲಿ ಇಂಥ ನ್ಯಾಯಾಲಯ ಇಲ್ಲ ಹಾಗೂ ಹಸ್ತಕ್ಷೇಪ-ತಡೆಗೆ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ.,ಜಿಡಿಪಿಆರ್‌ ಒಂದು ಆಧುನಿಕ-ಪ್ರಗತಿಶೀಲ ಕಾನೂನು. ನ್ಯಾ. ಪುಟ್ಟಸ್ವಾಮಿ ಅವರ ಪ್ರಕರಣದಲ್ಲಿ ಖಾಸಗಿತನ ಕುರಿತ ಸುಪ್ರೀಂ ಕೋರ್ಟ್‌ ಆದೇಶ ಸಂವಿಧಾನದ ಆಶಯಗಳಿಗೆ ಪೂರಕವಾಗಿದೆ. ಆದರೆ, ಅದರ ಯಥಾವತ್‌ ನಕಲು ಸಮ್ಮತವಲ್ಲ. ಜಿಡಿಪಿಆರ್‌ ಕುರಿತು ಐಟಿ ಉದ್ಯಮದ ಎರಡು ಆಕ್ಷೇಪವಿದೆ. ಮೊದಲಿಗೆ, ದತ್ತಾಂಶ ರಕ್ಷಣೆಗೆ ತೆರಿಗೆ ವಿಧಿಸಬೇಕಾದ್ದರಿಂದ ಕಂಪನಿಗಳ ವೆಚ್ಚ ಹೆಚ್ಚು ತ್ತದೆ. ಇದು ಸಮಂಜಸವಲ್ಲದ ವಾದ. ದತ್ತಾಂಶಕ್ಕೆ ರಕ್ಷಣೆಯಿಲ್ಲದಿದ್ದಲ್ಲಿ ಜನ ತಂತ್ರಜ್ಞಾನದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಎರಡನೆಯದಾಗಿ, ನಿಯಂತ್ರಣದಿಂದಾಗಿ ಜಾಗತಿಕವಾಗಿ ಸ್ಪರ್ಧಿಸಲು ಆಗುವುದಿಲ್ಲ ಎನ್ನುವುದು ದೇಶಿ ಐಟಿ ಕಂಪನಿಗಳ ದೂರು. ಇದಕ್ಕೆ ಯಾವುದೇ ಆಧಾರವಿಲ್ಲ. ಭವಿಷ್ಯದಲ್ಲಿ ಅನ್ವೇಷಣೆಗಳು ಖಾಸಗಿತನ ಹಾಗೂ ದತ್ತಾಂಶ ರಕ್ಷಣೆಯನ್ನು ಒಳಗೊಂಡೇ ಇರುವುದು ಅನಿವಾರ್ಯ. ಮುಂದಿನ ಪೀಳಿಗೆಯ ಆನ್‌ಲೈನ್‌ ಉತ್ಪನ್ನಗಳು ಹಾಗೂ ಸೇವೆಗಳಿಗೆ ದತ್ತಾಂಶ ರಕ್ಷಣೆ ಚಿಮ್ಮುಹಲಗೆಯಾಗಿ ಪರಿಣಮಿಸಲಿದೆ. 
ಐಡಿಪಿಆರ್‌ನಡಿ ದತ್ತಾಂಶ ನಿಯಂತ್ರಕರು(ಉದಾಹರಣೆಗೆ, ಸರ್ಕಾರಗಳು ಹಾಗೂ ಖಾಸಗಿ ವೆಬ್‌ಸೈಟ್‌ಗಳು) ಹಾಗೂ ದತ್ತಾಂಶ ಸಂಸ್ಕರಣೆದಾರರು(ಅಂದರೆ, ನಿಯಂತ್ರಕರ ಪರವಾಗಿ ದತ್ತಾಂಶವನ್ನು ಸಂಸ್ಕರಿಸುವವರು. ಉದಾ: ಯುರೋಪಿಯನ್‌ ಕಂಪನಿಗಳಿಂದ ದತ್ತಾಂಶಗಳ ಸಂಸ್ಕರಣೆ ಹೊರಗುತ್ತಿಗೆ ಪಡೆದ ಭಾರತೀಯ ಐಟಿ ಕಂಪನಿಗಳು) ವ್ಯಕ್ತಿಯ ಅನುಮತಿ ಪಡೆದೇ ದತ್ತಾಂಶ ಸಂಗ್ರಹಿಸಬೇಕು. ಕೆಲ ಸಂದರ್ಭಗಳಲ್ಲಿ ವ್ಯಕ್ತಿಗೆ ವೈಯಕ್ತಿಕ ದತ್ತಾಂಶವನ್ನು ಅಳಿಸಿಹಾಕುವ ಹಕ್ಕು ಕೂಡ ಇದೆ. ಮಾಹಿತಿ ಸೋರಿಕೆಯಾದಲ್ಲಿ 72 ಗಂಟೆಗಳೊಳಗೆ ವರದಿ ಮಾಡಬೇಕು

ಇಲ್ಲವಾದಲ್ಲಿ ದಂಡ ತೆರಬೇಕಾಗುತ್ತದೆ.
ಜಿಡಿಪಿಆರ್‌ ಯುರೋಪಿನ 28 ದೇಶಗಳಲ್ಲಿ ಜಾರಿಯಾಗಿದೆ. ಈ ದೇಶಗಳು ಭಾರತದ ಅತ್ಯಂತ ದೊಡ್ಡ ವಹಿವಾಟು ಪಾಲುದಾರರು. ಸೇವಾಕ್ಷೇತ್ರದಲ್ಲಿ ದ್ವಿಪಕ್ಷೀಯ ವಹಿವಾಟು 2.2 ಲಕ್ಷ ಕೋಟಿ ಡಾಲರ್‌ ಇದೆ. ಒಂದು ವೇಳೆ ದೇಶಿ ಐಟಿ ಕಂಪನಿಗಳು ಜಿಡಿಪಿಆರ್‌ಗೆ ಹೊಂದಿಕೆ ಮಾಡಿಕೊಳ್ಳದಿದ್ದಲ್ಲಿ ದಂಡ ತೆರಬೇಕಾಗುತ್ತದೆ, ವ್ಯಾಪಾರ ಹಾಗೂ ಅವಕಾಶವನ್ನು ಕಳೆದುಕೊಳ್ಳಲಿವೆ.ಆದರೆ, ಇಲ್ಲೊಂದು ಎಚ್ಚರ ಅಗತ್ಯವಿದೆ. ನಾವು ಅಭಿವ್ಯಕ್ತಿ ಸ್ವಾತಂತ್ರÂ ಮತ್ತು ಮಾಹಿತಿ ಹಕ್ಕು ಕಾಯಿದೆ ದುರ್ಬಲಗೊಳ್ಳದಂತೆ ನೋಡಿಕೊಳ್ಳಬೇಕಾಗುತ್ತದೆ. ಡಿಜಿಟಲ್‌ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲೆಕ್ಟ್ರಾನಿಕ್‌ ಫ್ರಾಂಟಿಯರ್‌ ಫೌಂಡೇಷನ್‌ ಪ್ರಕಾರ, "ಜಿಡಿಪಿಆರ್‌ ಆನ್‌ಲೈನ್‌ನಲ್ಲಿ ಮುಕ್ತ ಅಭಿವ್ಯಕ್ತಿಯನ್ನು ಹತ್ತಿಕ್ಕಲು ಬಳಕೆ ಯಾಗುವ ಸಾಧ್ಯತೆ ಇದೆ', ಖಾಸಗಿತನದ ಹಕ್ಕಿನ  ರಕ್ಷಣೆಯ ಹೆಸರಿನಲ್ಲಿ ಪಾರದರ್ಶಕತೆಯನ್ನು ಬುಡಮೇಲು ಮಾಡಬಹುದು. ಗಿರೀಶ್‌ ದೇಶಪಾಂಡೆ ವಿರುದ್ಧ ಕೇಂದ್ರ ಮಾಹಿತಿ ಆಯುಕ್ತ ಪ್ರಕರಣದಲ್ಲಿ ಜನ ಪ್ರತಿನಿಧಿಯೊಬ್ಬನ ಆದಾಯ ತೆರಿಗೆ ಸಲ್ಲಿಕೆ ದಾಖಲೆಗಳನ್ನು ನೀಡಲು ಆಯೋಗ ನಿರಾಕರಿಸಿದ್ದನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ದತ್ತಾಂಶ ರಕ್ಷಣೆ ಹೆಸರಿನಲ್ಲಿ ಸರ್ಕಾರಗಳು ಅಪಾರದರ್ಶಕ ಆಡಳಿತ ಹಾಗೂ ಉತ್ತರದಾಯಿತ್ವ ಇಲ್ಲದಂತೆ ವರ್ತಿಸುವ ಸಾಧ್ಯತೆ ಇದೆ.

ಸಲಹೆ ಏನು? 
ದತ್ತಾಂಶ-ಖಾಸಗಿತನ ರಕ್ಷಣೆಗೆ ಸಂಬಂಧಿಸಿದ ಸೂಕ್ತ ಕಾನೂನು ತರಲು ಇದು ಸಕಾಲ. ನ್ಯಾ. ಬಿ ಎನ್‌ ಶ್ರೀಕೃಷ್ಣ ಸಮಿತಿಯು ಯುರೋಪಿಯನ್‌ ದೇಶಗಳ ಹಕ್ಕುಗಳನ್ನು ಆಧರಿಸಿದ ನೀತಿ, ಸಂಶೋಧನೆಗೆ ಉತ್ತೇಜನ ನೀಡುವ ಅಮೆರಿಕದ ನೀತಿ ಹಾಗೂ ಖಾಸಗಿತನ ಮೂಲಭೂತ ಹಕ್ಕು ಎಂದಿರುವ ಸುಪ್ರೀಂ ಕೋರ್ಟ್‌ನ ತೀರ್ಪು ಒಳಗೊಂಡ ಹೈಬ್ರಿಡ್‌ ನೀತಿಯನ್ನು ಅನುಸರಿಸಲು ಸೂಚಿಸಿದೆ. ಸಮಿತಿಯ ಪ್ರಸ್ತಾವನೆಗಳನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ ಅಂಗೀಕರಿಸಿ, ಸಂಸತ್ತಿನಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಬೇಕಿದೆ. ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ನೇತೃತ್ವದ ಸ್ಥಾಯಿ ಸಮಿತಿ ಈ ಬಗ್ಗೆ ಚರ್ಚೆಗೆ ಚಾಲನೆ ನೀಡಿದ್ದು, ಹಲವು ಸದಸ್ಯರು ಖಾಸಗಿ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಈ ಬಗ್ಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಚರ್ಚೆಯಾಗಬೇಕಿದೆ. 
ದೇಶದ ಸುಧಾರಣೆಗೆ ಅಗತ್ಯವಾದ ಕಾನೂನುಗಳ ರಚನೆ ಅಧಿಕಾರಿ ಗಳು, ಪರಿಣತ ಸಮಿತಿಗಳು, ಜನಪ್ರತಿನಿಧಿಗಳ ಗುತ್ತಿಗೆಯೇನೂ ಅಲ್ಲ. ಇವರೆಲ್ಲರೂ ಸಂವಿಧಾನದ ಅಡಿ ಕೆಲಸ ಮಾಡುವ ಸಾರ್ವಜನಿಕ ಸೇವಕರು. ಸಂವಿಧಾನದ ಆಶಯ ಮತ್ತು ಕಾಳಜಿಗಳನ್ನು ಮುಂದಿನ ಪೀಳಿಗೆಗೆ ಅರ್ಥ ಮಾಡಿಸಬೇಕಿದೆ. 2019ರ ಲೋಕಸಭೆ ಚುನಾವಣೆ ನಾಗಾಲೋಟದಲ್ಲಿ ಆಗಮಿಸುತ್ತಿದ್ದು, ಸರ್ಕಾರಕ್ಕೆ ಹೆಚ್ಚು ಸಮಯ ಉಳಿದಿಲ್ಲ. ಆದ್ದರಿಂದ ಎರಡು ಸರ್ಕಾರಗಳು ಎಂಟು ವರ್ಷದಿಂದ ಉಳಿಸಿಕೊಂಡಿರುವ ಈ ಕಾನೂನನ್ನು ಆದಷ್ಟು ಬೇಗ ರೂಪಿಸಿ, ಅಳವಡಿಸಿಕೊಳ್ಳಬೇಕಿದೆ.

 ಮಾಧವ ಐತಾಳ್‌


Trending videos

Back to Top