CONNECT WITH US  

ಒಂದು ಕ್ಷಣ ನಮ್ಮ ಗುರುವನ್ನು ನೆನೆಯೋಣ

""ಅಜ್ಞಾನ ತಿಮಿರಾಂಧಸ್ಯ ಜ್ಞಾನಂಜನ ಶಲಾಕಯಾ
ಚಕ್ಷರುನ್ಮಿ ಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ
''
ಅಜ್ಞಾನದ ಕತ್ತಲಿನಿಂದ ಕುರುಡಾಗಿದ್ದವನ ಕಣ್ಣನ್ನು ಜ್ಞಾನವೆಂಬ ದೀಪದಿಂದ ತೆರೆಸಿದ ಗುರುವಿಗೆ ಪ್ರಣಾಮಗಳು. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವನ್ನು ನೀಡಲಾಗಿದೆ.

ಗುರುಬ್ರಹ್ಮ ಗುರುವಿಷ್ಣುಮ…
ಗುರುದೇವೋ ಮಹೇಶ್ವರ
ಗುರುಸಾಕ್ಷಾತ್‌ ಪರಬ್ರಹ್ಮ
ತಸ್ಮೈಶ್ರೀ ಗುರವೇ ನಮಃ

ಗುರುವು ಬ್ರಷ್ಮ ವಿಷ್ಣು ಮಹೇಶ್ವರನ ರೂಪಿಯಾಗಿದ್ದು ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ವವೇ ಅವನಾಗಿದ್ದಾನೆ.

ಇಂದು ಗುರು ಪೂರ್ಣಿಮೆ. ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಆಷಾಡ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ "ಗು' ಎಂದರೆ ಅಂಧಕಾರ, "ರು'ಎಂದರೆ ದೂರ ಮಾಡುವವರು ಎಂದರ್ಥ. ಅದಕ್ಕೆ ಗುರು ಎಂದರೆ ಅಜ್ಞಾನವೆಂಬ ಅಂಧಕಾರವನ್ನು ದೂರಮಾಡುವವನು ಎಂದಾಗುತ್ತದೆ.

ಮನೆಯೇ ಮೊದಲ ಪಾಠಶಾಲೆ
ಜನನಿ ತಾನೇ ಮೊದಲ ಗುರು

ಎಂಬಂತೆ ತಾಯಿಯೇ ಎಲ್ಲರ ಮೊದಲ ಗುರುವಾಗಿರುತ್ತಾಳೆ.ಆಕೆಯ ಜವಾಬ್ದಾರಿಯು ಗುರುತರದ್ದಾಗಿರುತ್ತದೆ. ವ್ಯಕ್ತಿಯೊಬ್ಬನ ಬಾಲ್ಯದಿಂದ ವೃದ್ಧಾಪ್ಯವರೆಗಿನ ಜೀವಿತಾವಧಿಯನ್ನು ಗಣನೆಗೆ ತೆಗೆದುಕೊಂಡರೆ ತಾಯಿ,ತಂದೆ, ಅಣ್ಣ, ತಮ್ಮ, ಅಕ್ಕ,ತಂಗಿ, ಗೆಳೆಯ, ಗೆಳತಿ ಹೀಗೆ ಪ್ರತಿಯೊಬ್ಬರು ಗುರುವಿನ ಸ್ಥಾನವನ್ನು ಪಡೆದು ಕೊಂಡಿರಬಹುದು. ಗುರು ಎಂದರೆ ಕೇವಲ ಶಾಲೆಯಲ್ಲೋ, ಕಾಲೇಜಿನಲ್ಲೋ ಪಾಠ ಮಾಡಿದ ಶಿಕ್ಷಕರೇ ಆಗಬೇಕಿಂದಿಲ್ಲ.ಜೀವನ ಪಾಠ ಕಲಿಸುವ ಅನುಭವಗಳು ಕೂಡಾ ಗುರುವೇ ಆಗಿರು ತ್ತವೆ.ಪ್ರಕೃತಿಯನ್ನು ಗುರುವೆಂದರೂ ತಪ್ಪಾಗುವುದಿಲ್ಲ.

ಪ್ರತಿಯೊಬ್ಬರ ಜೀವನ ಸಾಧನೆಯ ಹಿಂದೆ ಒಬ್ಬ ಗುರು ಇದ್ದೇ ಇರುತ್ತಾನೆ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ಯಾವುದೇ ವಿದ್ಯೆಯನ್ನು ಕರಗತ ಮಾಡಿಕೊಳ್ಳುವುದರಲ್ಲಿ ಗುರುವಿನ ಪಾತ್ರ ಬಹಳ ಮುಖ್ಯ. ಅದಕ್ಕೆ ತಾನೇ ಪುರಂದರದಾಸರು ಹೇಳಿರುವುದು ಗುರುವಿನ ಗುಲಾಮನಾಗುವ ತನಕ ದೊರೆಯಾದಣ್ಣ ಮುಕುತಿ ಎಂದು. ಏಕಲವ್ಯನ ಗುರುಭಕ್ತಿಯ ಕಥೆಯನ್ನು ನಾವೆಲ್ಲರೂ ಕೇಳಿರು ತ್ತೇವೆ. ಕೇವಲ ಗುರುವನ್ನು ಮನಸ್ಸಿನಲ್ಲಿ ಟ್ಟುಕೊಂಡು ಅಭ್ಯಾಸ ಮಾಡಿ ಆತನು ಧನುರ್ವಿದ್ಯೆಯಲ್ಲಿ ಪರಿಣಿತಿಯನ್ನು ಸಾಧಿಸಿ ರಬೇಕಾದರೆ ಇನ್ನು ಗುರುಮುಖೇನ ಕಲಿತಿದ್ದರೆ ಮತ್ತೆಷ್ಟು ಸಾಧಿಸುತ್ತಿದ್ದಿರಬಹುದು? ಈಗಲೂ ನಮ್ಮಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯಕಲೆ ಮುಂತಾದವುಗಳಲ್ಲಿ ಗುರು - ಶಿಷ್ಯ ಸಂಬಂಧಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಗುರುವಂದನೆ ಸಲ್ಲಿಸಿಯೇ ಅಲ್ಲಿ ಕಾರ್ಯ ಕ್ರಮ ಆರಂಭ ವಾಗುವುದು. ಆದರೆ ನಮ್ಮ ಈಗಿನ ಶಿಕ್ಷಣ ಪದ್ಧತಿಯಲ್ಲಿ ಗುರು-ಶಿಷ್ಯ ಸಂಬಂಧ ಸೊರಗುತ್ತಿದೆ ಎಂದೆನಿಸುತ್ತಿದೆ. ಕೇವಲ ಅಂಕಗಳಿಕೆಗಾಗಿ ಮಾಡುವ ವಿದ್ಯಾಭ್ಯಾಸ, ಸಿಲೆಬಸ್‌ ಮುಗಿಸುವ ಧಾವಂತ, ಫ‌ಲಿತಾಂಶ ಹೆಚ್ಚಿಸುವ ಭರಾಟೆ, ಇವೆಲ್ಲದರ ನಡುವೆ ಭಾರತೀಯ ಸಂಸ್ಕೃತಿಯ ಅತಿ ಸುಂದರ ಸಂಬಂಧ ಕಳೆದುಹೋಗುತ್ತಿದೆ.

ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಶಾಲಾ ಪಾಠವೇ ಬೇರೆ, ನೈತಿಕ ಶಿಕ್ಷಣವೇ ಬೇರೆ ಎಂದಿರಲಿಲ್ಲ. ಅವೆರಡೂ ಒಂದರೊಳಗೊಂದು ಬೆರೆತುಕೊಂಡಿತ್ತು. ಗುರುಭಕ್ತಿ ಅದರ ಅವಿಭಾಜ್ಯ ಅಂಗವಾಗಿತ್ತು. ಆದರೆ ಇಂದು ಗುರುವಿಗೆ ಗೌರವ ಕೊಡುವುದನ್ನು ಬೇರೆಯೇ ಒಂದು ಪಾಠದಂತೆ ನೈತಿಕ ಶಿಕ್ಷಣದಡಿ ಕಲಿಸಿಕೊಡಬೇಕಾದ ಸ್ಥಿತಿ ಬಂದಿದೆ. ಶಿಷ್ಯನ ಏಳಿಗೆ ಕಂಡು ಸಂತೋಷಪಡದೆ ಇರುವ ಗುರುಗಳೇ ಇಲ್ಲ. ಪಾಠದ ವಿಷಯ ಮಾತ್ರವಲ್ಲದೆ ಉನ್ನತ ಶಿಕ್ಷಣ,ಉದ್ಯೋಗ ಇನ್ನಿತರ ವಿಚಾರಗಳಲ್ಲೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ರುವುದು ಗುರು ವೃಂದವೇ. ಶಿಷ್ಯಂದಿರ ಸಾಧನೆಯನ್ನು ಕಂಡು ಅತಿ ಹೆಚ್ಚು ಸಂಭ್ರಮಿಸುವವರು ಅವರೆ.

ಸಮರ್ಥ ರಾಮದಾಸ- ಶಿವಾಜಿ, ರಾಮಕೃಷ್ಣ ಪರಮಹಂಸ - ಸ್ವಾಮಿ ವಿವೇಕಾನಂದ, ಚಾಣಕ್ಯ- ಚಂದ್ರಗುಪ್ತ ಇವರೆಲ್ಲಾ ನಮ್ಮ ಗುರುಶಿಷ್ಯ ಪರಂಪರೆಯ ಪಟ್ಟಿಯ ಆದಿಯಲ್ಲಿ ಸಿಗುತ್ತಾರೆ.  ಒಬ್ಬ ಉತ್ತಮ ಗುರುವು ತನ್ನಲ್ಲಿರುವ ವಿದ್ಯೆಯನ್ನೆಲ್ಲ ಶಿಷ್ಯನಿಗೆ ಧಾರೆಯೆರೆದು, ಆ ಶಿಷ್ಯನು ತನಗಿಂತ ಹೆಚ್ಚಿನ ಸಾಧನೆ ಮಾಡಿ ತನ್ನನ್ನೇ ಸೋಲಿಸುವುದನ್ನು ಇಷ್ಟ ಪಡುತ್ತಾನಂತೆ. ಮೌಲ್ಯಗಳು ನಶಿಸಿಹೋಗುತ್ತಿರುವ ಈ ಕಾಲದಲ್ಲಿ ಉಳಿದಿರುವ ನಿಸ್ವಾರ್ಥ ಸಂಬಂಧವೆಂದರೆ ಅದು ಗುರುಶಿಷ್ಯ ಸಂಬಂಧವೆಂದು ಹೇಳ ಬಹುದು. ದೇಶಕ್ಕೆ ಉತ್ತಮ ನಾಗರಿಕರನ್ನು ನೀಡುವಲ್ಲಿ ಗುರುಗಳ ಪಾತ್ರ ಅತಿ ದೊಡ್ಡದು. ಹುಡುಗನೊಬ್ಬ ದುಷ್ಟರ ಸಂಗ ಮಾಡಿದರೆ ಅಥವಾ ಕೆಟ್ಟದಾರಿ ತುಳಿದರೆ ಆತನ ನಿಕಟ ಸಂಬಂಧಿಗಳೇ ನಮಗೇಕೆ ಬೇರೆಯವರ ಉಸಾಬರಿ ಎಂದು ಸುಮ್ಮನಿರಬಹುದು.ಆದರೆ ಗುರುವು ಹಾಗಲ್ಲ. ಆತ ಬಯಸಿಯೂ ಸುಮ್ಮನಿರಲಾರ. ಆ ಹುಡುಗನಿಗೆ ಆತನ ತಪ್ಪನ್ನು ಮನವರಿಕೆ ಮಾಡಿಕೊಟ್ಟು ಆತನನ್ನು ಸರಿದಾರಿಗೆ ತರುವುದು ಗುರುವಿಗೆ ಮುಖ್ಯವಾಗಿರುತ್ತದೆ. 

ಹಿಂದೆಲ್ಲ ಗುರುವಿಗೆ ಗುರುದಕ್ಷಿಣೆ ಸಲ್ಲಿಸುವ ಪರಿಪಾಠವಿತ್ತು. ಈಗ ಆ ಪದ್ಧತಿ ಕಣ್ಮರೆಯಾಗಿದೆ.ಆದರೆ ವರ್ಷಕ್ಕೊಮ್ಮೆಯಾದರೂ ಗುರುಗಳನ್ನು ಭಕ್ತಿಯಿಂದ ನೆನೆಸಿಕೊಳ್ಳಬಹುದಲ್ಲವೇ? ಒಮ್ಮೆ ಬಿಡುವು ಮಾಡಿಕೊಂಡು ನಮ್ಮ ಶಾಲೆಯ ಅಥವಾ ಕಾಲೇಜಿನ ಗುರುಗಳನ್ನು ಅಥವಾ ಗುರುಸ್ಥಾನದಲ್ಲಿರುವ ಹಿರಿಯ ರನ್ನು ಭೇಟಿ ಯಾಗಿ ಮಾತಾಡಿಸೋಣ, ಅವರ ಆಶೀರ್ವಾದ ಪಡೆಯೋಣ, ಅವರ ಮಾರ್ಗದರ್ಶನವನ್ನು ನೆನೆಯೋಣ.
ಇದು ಕೂಡ ಒಂದು ರೀತಿಯ ಗುರುದಕ್ಷಿಣೆಯೇ ಅಲ್ಲವೇ?

ಶಾಂತಲಾ ಎನ್‌ ಹೆಗ್ಡೆ


Trending videos

Back to Top