CONNECT WITH US  

ರೈತನಿಗೆ ನವನೀತಿಯ ರೂಪಿಸಲಿ ಸರಕಾರ

ಸಾಲಮನ್ನಾ ಮಾಡಿಯೂ, ಏನೆಲ್ಲಾ ಸೌಲಭ್ಯ ನೀಡಿಯೂ ರೈತರ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಹಲವು ಕಾರಣಗಳಿಗಾಗಿ ಭೂಮಿ ಕಳೆದುಕೊಂಡಿರುವ ಶೇ. 56ರಷ್ಟು ರೈತರು 0.15 ಹೆಕ್ಟೇರ್‌ಗಳಷ್ಟು ಚಿಕ್ಕ ವಿಸ್ತೀರ್ಣದ ಭೂಮಿಯನ್ನು ಜೀವನೋಪಾಯಕ್ಕೆ ನಂಬಿದ್ದಾರೆ. ಇಂಥಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಬೆಳೆ ತೆಗೆಯುವುದು ಸುಲಭವಲ್ಲ. 

ಕುಮಾರಸ್ವಾಮಿಯವರು ತಾವು ಮುಖ್ಯಮಂತ್ರಿಯಾದ ಕೂಡಲೇ ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದರು. ತಮ್ಮದೇ ಪೂರ್ಣ ಪ್ರಮಾಣದ ಸರ್ಕಾರ ಅಲ್ಲದ ಕಾರಣ ಕಾಂಗ್ರೆಸ್‌ ಹಂಗಿನಲ್ಲಿ ಸಾಲ ಮನ್ನಾ ನಿರ್ಧಾರ ಕೈಗೊಳ್ಳ ಬೇಕಾಗಿತ್ತು. ಇತ್ತ ದೋಸ್ತಿಯನ್ನು ನಿಷೂuರ ಮಾಡಿ ಕೊಳ್ಳಲಾಗದೆ, ಅತ್ತ ರೈತರ ವಿಶ್ವಾಸ ಕಳೆದುಕೊಳ್ಳಲಾಗದೆ ಅಡಕತ್ತರಿಯಲ್ಲಿ ಸಿಲುಕಿ ಸಾಲ ಮನ್ನಾಗಾಗಿ ಇನ್ನಿಲ್ಲದ ಕಸರತ್ತು ಮಾಡಿ ಈಗ ಸುಮಾರು 49 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಆದೇಶ ಹೊರಡಿಸಿದ್ದಾರೆ.

ನಿಜ! ಈ ದೇಶದಲ್ಲಿ ರೈತರ ಸಾಲ ಮನ್ನಾ ಆಗಲು ಚುನಾವಣೆ ಯೆಂಬ ಪ್ರಜಾಪ್ರಭುತ್ವದ ಕಾಲಶ್ರಾದ್ಧಕ್ಕಾಗಿ ರೈತ ಕಾಯುತ್ತಾ ಕೂರಬೇಕು. ರೈತರು ಸಾಲ ಮನ್ನಾಗೆ ಆಗ್ರಹಿಸುವುದೇ ದೊಡ್ಡ ಅಪರಾಧ ಎಂದು ದೂರಲಾಗುತ್ತದೆ. ಯಾವುದೇ ಸಾಲ ಮನ್ನಾ ದೇಶದ ಆರ್ಥಿಕತೆ ಮತ್ತು ಜಿಡಿಪಿ ಮೇಲೆ ಬೀಳುವ ದೊಡ್ಡ ಹೊಡೆತವೇ ಸರಿ. ಅದನ್ನು ಸ್ವಾಭಿಮಾನವಿರುವ ಯಾವುದೇ ರೈತ ಸಹ ವಿರೋಧಿಸುತ್ತಾನೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಕ್ರಮವಾಗಿ 36,359 ಕೋಟಿ ಮತ್ತು 30,000 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. ಈಚೆಗೆ ರಾಜಸ್ಥಾನದಲ್ಲೂ ರೈತರ ಸಾಲ ಮನ್ನಾ ಮಾಡಲಾಗಿದೆ. ಪಂಜಾಬ್‌, ಮಧ್ಯಪ್ರದೇಶ್‌, ಗುಜರಾತ್‌, ಹರ್ಯಾಣ ರಾಜ್ಯಗಳಿಂದಲೂ 188 ಸಾವಿರ ಕೋಟಿಗಳಷ್ಟು ಸಾಲ ಮನ್ನಾ ಮಾಡಲು ಒತ್ತಡವಿದೆ. ಕರ್ನಾಟಕದಲ್ಲಿ ಸಹ 5.9 ಮಿಲಿಯನ್‌ ರೈತರ 52500 ಕೋಟಿ ರೂಗಳಷ್ಟು ಸಾಲ ಬಾಕಿ ಇದೆ. 

2016ರ ಆರ್ಥಿಕ ಸಮೀಕ್ಷೆ ಪ್ರಕಾರ ರೈತ ಕುಟುಂಬಗಳ ತಲಾ ವಾರ್ಷಿಕ ಆದಾಯ ರೂ.20 ಸಾವಿರ ಮಾತ್ರ. ರೈತರನ್ನು ಉದ್ದೇಶ ಪೂರ್ವಕವಾಗಿಯೇ ಬಡತನದಲ್ಲಿ ಇರಿಸಲಾಗಿದೆ. ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಅವರು ಸಾಲ ಗಾರರಾಗಿಯೇ ಉಳಿದಿದ್ದಾರೆ ಎಂಬುದನ್ನು ರೈತರನ್ನು ದೂರು ವವರೆಲ್ಲ ಜ್ಞಾಪಕ ಇಟ್ಟುಕೊಳ್ಳಬೇಕು. ದೇಶದ ಒಟ್ಟು ರೈತರ ಸಾಲ ಮನ್ನಾ ಮಾಡಲು 3.1ಲಕ್ಷ ಕೋಟಿ ಹಣ ಬೇಕಾಗುತ್ತದೆ. ಇದು ಭಾರತದ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ವೆಚ್ಚವಾಗುವ 16 ಪಟ್ಟು, ಸುಮಾರು 4,43000 ಗೋದಾಮುಗಳನ್ನು ಕಟ್ಟುವಷ್ಟು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಆದರೆ ರಸ್ತೆ, ಗೋದಾಮು ನಿರ್ಮಾಣಕ್ಕೆ ಶೇಕಡಾ ಎಷ್ಟು ಹಣ ಕಮಿಶನ್‌, ಲಂಚವಾಗಿ ಹೋಗು ತ್ತದೆ ಎಂದು ಹೇಳಿಲ್ಲ. ಹೀಗೆ ಕಾಂಕ್ರೀಟೀಕರಣದ ಅಭಿವೃದ್ಧಿಯ ಮಾನದಂಡಗಳ ಜೊತೆ ರೈತರ ಬವಣೆಯನ್ನು ಥಳುಕು ಹಾಕು ವುದು ಮೂರ್ಖತನವಾಗುತ್ತದೆ. ಏಕೆಂದರೆ ಬ್ಯಾಂಕುಗಳು ಉದ್ದಿಮೆ ದಾರರಿಗೆ ಸಾವಿರಾರು ಕೋಟಿ ಸಾಲ ಕೊಟ್ಟಿವೆ. ಇವುಗಳ ಒಟ್ಟಾರೆ ಪ್ರಮಾಣ ಸುಮಾರು 6.84ಲಕ್ಷ ಕೋಟಿ ರೂಪಾಯಿ. ಅಂದರೆ ರೈತರ ಸಾಲ ಮನ್ನಾ ಬೇಡಿಕೆಯ ಎರಡರಷ್ಟು! ಬ್ಯಾಂಕುಗಳ ಎನ್‌ಪಿಎ ಕಳೆದ ಸಾಲಿನಲ್ಲಿ ಶೇ.147ರಷ್ಟು ಹೆಚ್ಚಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು 2016ನೇ ಸಾಲಿನಲ್ಲಿ ಕೇವಲ 19,757 ಕೋಟಿ ಮಾತ್ರ ಸಾಲ ವಸೂಲಿ ಮಾಡಿವೆ. ಔದ್ಯಮಿಕ ರಂಗ ಬಾಕಿ ಉಳಿಸಿಕೊಂಡ ಹಣ ರೈತರ ಸಾಲವನ್ನೂ ಮೀರಿಸಿದೆ. ಉದಾಹರಣೆಗೆ ಇಡೀ ಪಂಜಾಬ್‌ ರೈತರ ಸಾಲ ಮನ್ನಾಗೆ ಬೇಕಾದ ಹಣ ರೂ.36 ಸಾವಿರ ಕೋಟಿ. ಭೂಷಣ್‌ ಪವರ್‌ ಅಂಡ್‌ ಸ್ಟೀಲ್‌ ಕಂಪನಿ ಒಂದೇ 48 ಸಾವಿರ ಕೋಟಿ ಸಾಲ ಮಾಡಿ ಪಾಪರ್‌ ಚೀಟಿ ಕೈಲಿ ಹಿಡಿದು ನಿಂತಿದೆ. ಮಲ್ಯ ಭಾರತದ ಬ್ಯಾಂಕ್‌ಗಳಿಗೆ ಹಾಕಿ ಹೋಗಿರುವ ನಾಮದ 
ಪ್ರಮಾಣ 9 ಸಾವಿರ ಕೋಟಿ. 2008-09ನೇ ಸಾಲಿನಲ್ಲಿ ಕೈಗಾರಿಕಾಕ್ಷೇತ್ರಕ್ಕೆ ಸುಮಾರು 3 ಲಕ್ಷ ಕೋಟಿ ರೂಗಳ ಪ್ಯಾಕೇಜ್‌ ನೀಡಲಾಯಿತು. ಅದೇ ರೀತಿ ಈಗ ರೈತರ ಸಾಲ ಯಾಕೆ ಮನ್ನಾ ಮಾಡಬಾರದು ಎಂದು ಕೃಷಿ ನೀತಿ ವಿಶ್ಲೇಷಕ ದೇವಿಂದರ್‌ ಶರ್ಮ ಕೇಳುವುದರಲ್ಲಿ ತಪ್ಪೇನಿಲ್ಲ ಎನಿಸುತ್ತದೆ.

ಆದರೆ ಇನ್ನು ಮುಂದೆ ನಾವು ಸಲೀಸಾಗಿ ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಆರ್ಥಿಕ ಸಹಾಯ ಹಾಗೂ ರೈತರ ಸಾಲ ಮನ್ನಾ ಎರ
ಡನ್ನೂ ಹೋಲಿಸಿ ಮಾತಾಡುವಂತಿಲ್ಲ. ಕೈಗಾರಿಕಾ ಕ್ಷೇತ್ರ ಹಾಗೂ ಬ್ಯಾಂಕಿಂಗ್‌ ಕ್ಷೇತ್ರದ ಹುಳುಕುಗಳನ್ನು ಮುಂದಿಟ್ಟುಕೊಂಡು ರೈತರ ಸಾಲ ಮನ್ನಾವನ್ನು ಸಮರ್ಥಿಸುವಂತಿಲ್ಲ. ಏಕೆಂದರೆ ಕಳೆದ ಫೆಬ್ರವರಿಯಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳ ಅನುತ್ಪಾದಕ ಆಸ್ತಿಯ (ಎನ್‌ಪಿಎ) ಪ್ರಮಾಣವನ್ನು ನಿಯಂತ್ರಿಸಲು ಮಹತ್ವದ ನೀತಿಯನ್ನು ಜಾರಿಗೆ ತಂದಿದೆ. ಸುಸ್ತಿಯಾದ ಸಾಲವನ್ನು ಗುರುತಿಸಲು ಮತ್ತು ಅವುಗಳಿಂದ ಉಂಟಾಗಬಹುದಾದ ನಷ್ಟಕ್ಕೆ ಪರಿಹಾರ ಕಂಡು ಹಿಡಿಯಲು ಹೊಸ ಮಾರ್ಗೋಪಾಯಗಳನ್ನು ರೂಪಿಸಿದೆ. 

ರೂ. 500 ಕೋಟಿ ಮತ್ತು ರೂ.2000 ಕೋಟಿ ರೂಪಾಯಿ
ಗಳಿಗೆ ಮೀರಿದ ಸಾಲಗಳಿಗೆ ವಿಶೇಷ ನಿಯಮಗಳನ್ನು ಜಾರಿಗೆ ತಂದಿದೆ. ಬ್ಯಾಂಕುಗಳು ಸತತ 60-90 ದಿನಗಳವರೆಗೆ ಪಾವತಿ ಕಾಣದ ಖಾತೆಗಳನ್ನು ಸ್ಪೆಶಲ್‌ ಮೆಂಶನ್‌x ಅಕೌಂಟ್ಸ್‌(ಎಸ್‌ಎಮ್‌ಎ 2) ಎಂದು ಗುರುತಿಸಬೇಕಾಗುತ್ತದೆ. ಎನ್‌ಪಿಎ ಕಡೆಗೆ ಜಾರಬಹು ದಾದ ಇಂತಹ ಖಾತೆಗಳಲ್ಲಿನ ಸಾಲ ಮರುಪಾವತಿಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹಾಗೇ ಒಂದು ಬ್ಯಾಂಕ್‌ ಒಬ್ಬ ವ್ಯಕ್ತಿ /ಸಂಸ್ಥೆಯ ಸಾಲವನ್ನು ಅನುತ್ಪಾದಕ ಎಂದು ಪರಿಗಣಿಸಿದರೆ ಮಿಕ್ಕ ಬ್ಯಾಂಕುಗಳೂ ಸದರಿ ವ್ಯಕ್ತಿ/ಸಂಸ್ಥೆಯ ಸಾಲದ ಖಾತೆಯನ್ನು ಎನ್‌ಪಿಎ ಎಂದೇ ಪರಿಗಣಿಸಿ ಆಯ ವ್ಯಯದಲ್ಲಿ ಸೂಕ್ತ ಹೊಂದಾಣಿಕೆ ಮಾಡಬೇಕಾಗುತ್ತದೆ.

ಈಚೆಗೆ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜ್ಯಗಳು ರೈತರ ಸಾಲಮನ್ನಾ ಮಾಡುವುದರಿಂದ ಬ್ಯಾಂಕುಗಳ ಆರ್ಥಿಕ ಸ್ಥಿತಿಗಳ ಮೇಲೇನೂ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯಗಳು ತಮ್ಮ ಬಜೆಟ್‌ನಲ್ಲಿ ಸಾಲಮನ್ನಾಗಾಗಿ ಪ್ರತ್ಯೇಕ ಹಣ ಮೀಸಲಿಡುವುದರಿಂದ ಅದು ಬ್ಯಾಂಕುಗಳ ಅನುತ್ಪಾದಕ ಆಸ್ತಿಯ ಪ್ರಮಾಣದ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಐದು ದೊಡ್ಡ ರಾಜ್ಯಗಳ ಸಾಲಮನ್ನಾದಿಂದ ಒಟ್ಟಾರೆ ರೂ.1,07,000 ಕೋಟಿ ವಿತ್ತೀಯ ಕೊರತೆ ಉಂಟಾಗಲಿದೆ. ಇದು ಪ್ರಸ್ತುತ ಜಿಡಿಪಿಯ ಶೇ.0.65ರಷ್ಟು ಪ್ರಮಾಣ ಎಂದು ಲೆಕ್ಕ ಹಾಕಲಾಗಿದೆ. ಆದರೆ ಅವರು ಎಲ್ಲಾ ರೈತರ ಸಾಲ ಮನ್ನಾ ಮಾಡುವ ಬದಲು ಸಣ್ಣ ಮತ್ತು ಅತಿಸಣ್ಣ ರೈತರ ಸಾಲಮನ್ನಾಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಉತ್ತರಪ್ರದೇಶ ಮತ್ತು ಮಹಾ ರಾಷ್ಟ್ರದಲ್ಲಿ ಇದೇ ಕ್ರಮವನ್ನು ಅನುಸರಿಸಲಾಗಿದೆ. ಆದಾಗ್ಯೂ ಸಾಲಮನ್ನಾ ಮಾಡಿಯೂ, ಏನೆಲ್ಲಾ ಸೌಲಭ್ಯ ನೀಡಿಯೂ ರೈತರ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಹಲವು ಕಾರಣಗಳಿಗಾಗಿ ಭೂಮಿ ಕಳೆದುಕೊಂಡಿರುವ ಶೇ. 56ರಷ್ಟು ರೈತರು 0.15 ಹೆಕ್ಟೇರ್‌ಗಳಷ್ಟು ಚಿಕ್ಕ ವಿಸ್ತೀರ್ಣದ ಭೂಮಿಯನ್ನು ತಮ್ಮ ಜೀವನೋಪಾಯಕ್ಕೆ ನಂಬಿದ್ದಾರೆ. ಇಂತಹ ಚಿಕ್ಕ ಹೊಲಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಬೆಳೆ ತೆಗೆಯಲು ಸಾಧ್ಯವಿಲ್ಲ, ಹಾಗಾಗಿ ಅವರು ದುಬಾರಿ ಎನಿಸುವ ಸಾಂಪ್ರದಾಯಿಕ ವಿಧಾನಗಳನ್ನೇ ಅನುಸರಿಸಬೇಕಾಗುತ್ತದೆ ಮತ್ತು ಈ ರೈತರಿಗೆ ಬ್ಯಾಂಕ್‌ ಸಾಲ ಸಿಗದ ಕಾರಣ ಇವರು ಖಾಸಗಿ ಲೇವಾದೇವಿಗಾರರನ್ನು ಆಶ್ರಯಿಸಬೇಕಾಗುತ್ತದೆ. 

ಹೀಗಾಗಿ 8 ರಾಜ್ಯಗಳ 32.8 ಮಿಲಿಯನ್‌ ರೈತರ ಸಾಲದಲ್ಲಿ ಕೇವಲ 10.6 ಮಿಲಿಯನ್‌ ರೈತರಷ್ಟೇ ಸಾಲ ಮನ್ನಾದ ಸೌಲಭ್ಯ ಪಡೆಯುತ್ತಾರೆ. ಉಳಿದ 22.1 ಮಿಲಿಯನ್‌ ರೈತರು ಈ ಸಾಲ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ನೀತಿ ಆಯೋಗದ ರಮೇಶ್‌ ಚಂದ್‌ ಮತ್ತು ಶ್ರೀವಾತ್ಸವ್‌ ಅಂಕಿ ಅಂಶ ನೀಡುತ್ತಾರೆ. ಎಡಿಡಬ್ಲ್ಯುಡಿಆರ್‌( ಕೃಷಿ ಸಾಲ ಮನ್ನಾ ಮತ್ತು ಸಾಲ ಪರಿಹಾರ ಯೋಜನೆ)ಯ ಕುರಿತು ಸಿಎಜಿ ನೀಡಿದ ವರದಿ ಪ್ರಕಾರ ಸಾಲ ಮನ್ನಾಗೆ ಅರ್ಹವಾಗಿದ್ದ ಶೇ.13.46ರಷ್ಟು ರೈತರನ್ನು ಬ್ಯಾಂಕುಗಳು ಪಟ್ಟಿ ಮಾಡಿರಲೇ ಇಲ್ಲ. ಸಾಲಮನ್ನಾಗೆ ಅನರ್ಹರಾದ ಶೇ.8.5 ರೈತರೆಂದು ಹಣೆಪಟ್ಟಿ ಅಂಟಿಸಿಕೊಂಡವರಿಗೆ ಸಾಲ ಮನ್ನಾ ಭಾಗ್ಯ ಸಿಕ್ಕಿತ್ತು. 

ಸುಮಾರು ಶೇ.35 ಜನರಿಗೆ ಋಣ ತೀರಿದ ಪತ್ರ ನೀಡಿರದ ಕಾರಣ ಅವರು ಹೊಸ ಕೃಷಿ ಸಾಲ ಪಡೆಯಲಾಗಲಿಲ್ಲ. ಹೀಗಾದರೆ ಎಷ್ಟು ಸಾಲ ಮನ್ನಾ ಮಾಡಿ ಏನು ಪ್ರಯೋಜನ? ಕೈಗಾರಿಕೆಗಳ ನಷ್ಟದಿಂದ ಕೋಟ್ಯಂತರ ರೂಪಾಯಿ ಹೊಡೆತ ತಿಂದಿದ್ದ ಬ್ಯಾಂಕುಗಳು ಸುಧಾರಿಸಿ ಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸರಕಾರಗಳೂ ಸಾಲಮನ್ನಾ ಕುರಿತು ಹೊಸ ನೀತಿಗಳನ್ನು ರೂಪಿಸಬೇಕಿದೆ.

ತುರುವೇಕೆರೆ ಪ್ರಸಾದ್‌

Trending videos

Back to Top