CONNECT WITH US  

ಅಜ್ಜಿಯ ಪಕೋಡಾ ಅಸೆ ಮತ್ತು ಮಾನವೀಯತೆಯ ಭಾಷೆ

ಮನೆಯ ಹಿರಿಯರು ಮಕ್ಕಳಿದ್ದಂತೆ, ಅವರ ತಪ್ಪುಗಳನ್ನೆಲ್ಲ ಕ್ಷಮಿಸಿ ಬಿಡಬೇಕು

ನಮಗೆ ಅಚ್ಚರಿಯಾಯಿತು. ಏಕೆಂದರೆ ನಮ್ಮನ್ನು ಯಾರಾದರೂ ನೋಡಿದ್ದೇ "ಓಹ್‌ ಸಾರ್‌ ನೀವಾ' ಅಂತ ಉತ್ಸಾಹದಿಂದ ಮಾತನಾಡಲಾರಂಭಿಸುತ್ತಾರೆ. ಆದರೆ ಆ ಅರ್ಚಕರು ಮಾತ್ರ ನಮ್ಮನ್ನು ಗುರುತಿಸಿದರೂ, ಮಾತನಾಡಲಿಲ್ಲ. ನಾನು-ಬ್ರಹ್ಮಾನಂದಂ ಮುಖಮುಖ ನೋಡಿಕೊಂಡೆವು. 

ಬಹಳ ಸಂಪ್ರದಾಯಸ್ಥ ಕುಟುಂಬದಿಂದ ಬಂದವನು ನಾನು. ನಾವು ಚಿಕ್ಕವರಿದ್ದಾಗ ಮನೆಯಲ್ಲಿ ಮಡಿ-ಮೈಲಿಗೆ ಆಚರಣೆಗಳನ್ನು ಬಹಳಷ್ಟು ನೋಡಿದ್ದೇವೆ. ಆಗೆಲ್ಲ ನನ್ನ ಅಜ್ಜಿಯ ವಯಸ್ಸಿನವರು (ವಿಧವೆಯರು) ಸೊಸೆ-ಮಕ್ಕಳು ಮಾಡಿದ ಅಡುಗೆಯನ್ನೂ ಸೇವಿಸುತ್ತಿರಲಿಲ್ಲ, ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. 80-90 ವರ್ಷ ದಾಟಿ, ತೀರಾ ದುರ್ಬಲವಾದವರು ಮಾತ್ರ ಇನ್ನೊಬ್ಬರು ಮಾಡಿದ ಅಡುಗೆಯನ್ನು ಊಟ ಮಾಡುತ್ತಿದ್ದರು. 

ನಾನು ಗಮನಿಸಿದ್ದೇನೆಂದರೆ ಆ ವಯಸ್ಸಲ್ಲಿ ವ್ಯಕ್ತಿಗೆ ಹೊಸ ಬಾಲ್ಯ ಆರಂಭವಾಗಿಬಿಡುತ್ತದೆ. ಆ ವಯಸ್ಸಲ್ಲಿ ಹಿರಿಯರು ಮಕ್ಕಳಂತಾಗಿ ಬಿಡುತ್ತಾರೆ. ಮಕ್ಕಳಂತೆಯೇ ಅವರಿಗೂ ಚಾಪಲ್ಯ ಶುರುವಾಗಿ ಬಿಡುತ್ತದೆ. ಏನಾದರೂ ರುಚಿ ಯಾ ದದ್ದನ್ನು ತಿನ್ನಬೇಕು ಎನ್ನುವ ಆಸೆ ಇರುತ್ತದೆ. ನನ್ನ ಅಜ್ಜಿಗೂ ಹಾಗೆಯೇ ಆಗುತ್ತಿತ್ತು. ಆಕೆಗೆ ಆಗಾಗ ಪಕೋಡಾ ತಿನ್ನಬೇಕು ಅನಿಸುತ್ತಿತ್ತು. ಆದರೆ ಹೊರಗಿಂದ ತರಿಸುವುದು ಹೇಗೆ? ಹೀಗಾಗಿ ಮೆಲ್ಲಗೆ ನನ್ನನ್ನು ಕರೆದು ಪಾವಲಿ ಕೊಟ್ಟು ಕಳುಹಿಸುತ್ತಿದ್ದಳು. ಪಾವಲಿಗೆ ಆಗೆಲ್ಲ ಬೊಗಸೆ ತುಂಬಾ ಪಕೋಡಾ ಬರುತ್ತಿದ್ದವು. ನಾನು ಯಾರಿಗೂ ತಿಳಿಯದಂತೆ ರಹಸ್ಯವಾಗಿ ಆಕೆಗೆ ತಂದು ಕೊಡುತ್ತಿದ್ದೆ. ತಟಕ್ಕನೆ ಆಕೆ ಪಕೋಡಾ ಸೆರಗಲ್ಲಿ ಬಚ್ಚಿಟ್ಟುಕೊಂಡು ಅತ್ತಿತ್ತ ನೋಡುತ್ತಾ ಮೆಲ್ಲಗೆ ಒಂದೊಂದೇ ಬಾಯಿಗೆ ಹಾಕಿಕೊಳ್ಳುತ್ತಿದ್ದಳು, ನನಗೂ ಒಂದಿಷ್ಟು ಕೊಡುತ್ತಿದ್ದಳು. ಪಕೋಡಾ ಇಲ್ಲದಿದ್ದರೆ ನಿಧಾನಕ್ಕೆ ಯಾರಿಗೂ ಕಾಣದಂತೆ ಹಿಡಿಯಲ್ಲಿ ಮಾವಿನಕಾಯಿ ಉಪ್ಪಿನಕಾಯಿ ತುಂಬಿಕೊಂಡು ತಿನ್ನುತ್ತಿದ್ದಳು. 

ನಾವು ಏಳು ಜನ ಅಣ್ಣತಮ್ಮಂದಿರು. ಹೀಗಾಗಿ ಮನೆಯಲ್ಲಿ ಒಬ್ಬರಲ್ಲ ಒಬ್ಬರು ಇದ್ದೇ ಇರುತ್ತಿದ್ದೆವು. ಆಕೆ ಉಪ್ಪಿನಕಾಯಿ ತೆಗೆದು ಕೊಂಡದ್ದೇ ಕೈಯಿಂದ ಎಣ್ಣೆ ಸೋರಿಬಿಟ್ಟಿರುತ್ತಿತ್ತು. ಹಿಂದಿನಿಂದ ಇದನ್ನು ನೋಡಿ ಯಾವನೋ ಒಬ್ಬ "ಅಯ್ಯೋ, ಅಜ್ಜಿ ಮಾವಿನ ಕಾಯಿ ಕದ್ದಿದಾಳೆ' ಅಂತ ಕೂಗಿಬಿಡುತ್ತಿದ್ದ. 
ತಾನು ಹೀಗೆ ಕದ್ದುಮುಚ್ಚಿ ತಿನ್ನುವುದು ಯಾರಿಗಾದರೂ ಗೊತ್ತಾಗುವುದು ಅಜ್ಜಿಗೆ ಬಹಳ ಅವಮಾನದ ವಿಷಯವಾಗಿತ್ತು. ಪಾಪ, ಎಂಥ ಪರಿಸ್ಥಿತಿ ನೋಡಿ ಆ ಹಿರಿಯ ಜೀವದ್ದು...ಆ ಸಮಯದಲ್ಲಿ 90 ವರ್ಷದ ಮುದುಕಿ ಅಲ್ಲಿ ಅಪರಾಧಿಯಾಗಿ ನಿಂತುಬಿಡುತ್ತಿದ್ದಳು! ಸತ್ಯವೇನೆಂದರೆ, ಇದನ್ನೆಲ್ಲ ನೋಡಿ ಆಕೆಗೆ ಯಾರೂ ಏನೂ ಅನ್ನುತ್ತಿರಲಿಲ್ಲ. ಆದರೂ ಆಕೆಗೆ ಪಾಪಪ್ರಜ್ಞೆ. 

"ಅದು ಮುಟ್ಟಬೇಡ ಇದು ಮುಟ್ಟಬೇಡ ಎಂದು ಆಜ್ಞೆ ಮಾಡುತ್ತಿದ್ದ ತಾನು ಈಗ ಸ್ನಾನ ಕೂಡ ಮಾಡದೇ ಹೀಗೆ ಉಪ್ಪಿನಕಾಯಿ ತಿನ್ನುವುದು ಸರಿಯೇ?' ಎಂದು ಯಾರಾದರೂ ಪ್ರಶ್ನಿಸಿಬಿಟ್ಟರೆ ಎಂಬ ಭಯ. ನಾನು ಆ ಸಮಯದಲ್ಲೇ ನಿರ್ಧರಿಸಿಬಿಟ್ಟೆ. 70-80 ವರ್ಷ ತಲುಪಿದವರ ತಪ್ಪುಗಳೆಲ್ಲವನ್ನೂ ಮಾಫಿ ಮಾಡಿಬಿಡಬೇಕು! ಆ ವಯಸ್ಸಲ್ಲಿ ಯಾರೂ ಉದ್ದೇಶಪೂರ್ವಕವಾಗಿ ತಪ್ಪು ಮಾಡುವು ದಿಲ್ಲ. ನೀವು ಯಾರಾದರೂ ಆಗಿರಿ, ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳು ತಪ್ಪು ಮಾಡಿದರೆ ಹೇಗೆ ಅವರನ್ನು ಕ್ಷಮಿಸಿಬಿಡುತ್ತೀರೋ, ಅದೇ ರೀತಿ ಮನೆಯ ಹಿರಿಯರ ತಪ್ಪುಗಳನ್ನೆಲ್ಲ ಕ್ಷಮಿಸಿಬಿಡಬೇಕು. 

ವೃದ್ಧಾಶ್ರಮಗಳು ಮತ್ತು ಬದುಕು 
ಒಮ್ಮೆ ವೃದ್ಧಾಶ್ರಮವೊಂದಕ್ಕೆ/ಅನಾಥಾಶ್ರಮಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲು ಕೆಲವರು ಬಂದರು. ನಾನಾಗ ಅವರಿಗೆ ""ಅಲ್ಲಿ ಬಂದು ನಾನು ಏನು ಮಾತನಾಡಲಿ? ವೃದ್ಧಾಶ್ರಮಗಳು ಅಭಿವೃದ್ಧಿಯಾಗಲಿ, ಹೆಚ್ಚು ವೃದ್ಧಾಶ್ರಮಗಳು ಸೃಷ್ಟಿಯಾಗಲಿ ಎನ್ನಬೇಕಾ? ಯಾವಾಗ ನೀವು ವೃದ್ಧಾಶ್ರಮವನ್ನು ಮುಚ್ಚುತ್ತೀರೋ ಆಗ ಬರುತ್ತೇನೆ ಹೋಗಿ'' ಅಂದೆ. ನಿಜ, ವೃದ್ಧಾಶ್ರಮಗಳಿಂದ ಕೆಲವರಿಗೆ ಅನುಕೂಲವಾಗಿವೆ ಎನ್ನು ವುದನ್ನು ಒಪ್ಪುತ್ತೇನೆ. ಮಕ್ಕಳನ್ನು ಕಳೆದುಕೊಂಡ ದುರದೃಷ್ಟವಂತರ ವಿಷಯದಲ್ಲಿ ವೃದ್ಧಾಶ್ರಮಗಳು ಬಹಳ ಸಹಾಯಕಾರಿ, ಆದರೆ ಮಕ್ಕಳು ಇರುವವರೂ ಕೂಡ ವೃದ್ಧಾಶ್ರಮಕ್ಕೆ ಸೇರಬೇಕಾದ ಕರ್ಮವೇನು? ಒಂದು ಸಭೆಯಲ್ಲಿ ಈ ವಿಷಯದ ಬಗ್ಗೆ ಮಾತನಾಡುತ್ತಾ ನಾನು, "ಈ ಕಾಲದಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ, ಈಗಿನ ವರು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿದ್ದಾರೆ...ಎಂಥ ತಲೆಮಾರು ನಿಮ್ಮದು?' ಎಂದು ಪ್ರಶ್ನಿಸಿದೆ. ಆಗ ಒಬ್ಬ ಯುವಕ ಕೈ ಮೇಲೆತ್ತಿ, "ಸಾರ್‌, ನಾನು ನಿಮಗೊಂದು ಪ್ರಶ್ನೆ ಕೇಳಲಾ?' ಅಂದ. "ಕೇಳಿ' ಅಂದೆ. 

"ನೀವು ಹೀಗೆಲ್ಲ ಹೇಳ್ತಿದ್ದೀರಲ್ಲ...ನಮ್ಮನ್ನೆಲ್ಲ ಇವರು ಚಿಕ್ಕ ವಯಸ್ಸಲ್ಲೇ ಹಾಸ್ಟೆಲ್‌ಗ‌ಳಿಗೆ ತಳ್ಳುತ್ತಿದ್ದಾರೆ, ಅದಕ್ಕೇನಂತೀರಿ? ಮಕ್ಕಳಿಗೆ ಗಾಳಿಪಟ ಹಾರಿಸಬೇಕು ಎಂದರೆ ಅವಕಾಶ ಸಿಗದಂತಾಗಿದೆ, ಒಂದು ಮಿರ್ಚಿ ಭಜಿ ತಿನ್ನಬೇಕು ಎಂದರೆ ಆಗದು...ಗೋಲಿ ಆಡುತ್ತೇವೆ ಎಂದರೆ ಅವಕಾಶವಿಲ್ಲ. ನಮ್ಮನ್ನು ಈ ಪೋಷಕರು 1ನೇ ತರಗತಿಯಿಂದಲೇ 14-15 ವರ್ಷ ಎಲ್ಲೋ ಹಾಸ್ಟೆಲ್‌ಗ‌ಳಿಗೆ ತಳ್ಳುತ್ತಾರೆ, ಹೀಗಿರುವಾಗ ನಾವು ಅವರನ್ನು ವೃದ್ಧಾಶ್ರಮಕ್ಕೆ ಹಾಕಿ ಋಣ ತೀರಿಸಿಕೊಂಡರೆ ತಪ್ಪಾ ಸರ್‌?' ಎಂಬ ಪ್ರಶ್ನೆ ಎದುರಿಟ್ಟ. ಅವನ ಮಾತು ನಿಜವೆನಿಸಿತು. ಬಹುತೇಕ ಪೋಷಕರು ಈ ವಾದವನ್ನು ಒಪ್ಪುವುದಿಲ್ಲ. ನಾವು ಮಕ್ಕಳಿಗೆ ಒಳ್ಳೇ ಮಾರ್ಕ್ಸ್ ಬರಲಿ ಅಂತ ಇದೆಲ್ಲ ಮಾಡುತ್ತೇವೆ ಅನ್ನುತ್ತಾರೆ. 

ಹೀಗೆ ಹೇಳುವವರಿಗೆ ನನ್ನ ಪ್ರಶ್ನೆಯಿಷ್ಟೆ: ನಿಮಗೆಲ್ಲ ಮಕ್ಕಳೆಂದರೆ ಮನುಷ್ಯರಾ ಅಥವಾ ಮಾರ್ಕುಗಳನ್ನು ತಯ್ನಾರಿಸುವ ಮಷೀನ್‌ಗಳಾ? 2-3 ವರ್ಷದ ಮಕ್ಕಳನ್ನೂ ಒಯ್ದು ಪ್ರೀಸ್ಕೂಲ್‌ಗ‌ಳಲ್ಲಿ ಎಸೆಯುತ್ತಿದ್ದೀರಿ. ಈಗ ನೀವು ಆ ಮಗುವಿನ ಬಾಲ್ಯವ‌ನ್ನು ಸಾಯಿಸುತ್ತಿದ್ದೀರಿ. ಮುಂದೆ ಆ ಮಗು ನಿಮ್ಮ ವೃದ್ಧಾಪ್ಯವನ್ನು ಸಾಯಿಸುತ್ತದೆ. ಮಾರ್ಕ್ಸ್ಗಾಗಿ ನೀವು ನಿಮ್ಮ ಮಗಳಿಗೆ/ ಮಗನಿಗೆ ಕೊಡುತ್ತಿರುವ ಕಾಟಕ್ಕೆ ನೀವೆಲ್ಲ ಮುಂದೆ ಪಶ್ಚಾತ್ತಾಪ ಪಡಲೇಬೇಕು. ಇದರಲ್ಲಿ ದೂಸ್ರಾ ಮಾತೇ ಇಲ್ಲ, ನೀವು ಅನುಭವಿಸಲೇಬೇಕು. 

ಬರೆದಿಟ್ಟುಕೊಳ್ಳಿ, ಮುಂದಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ. ಮಕ್ಕಳನ್ನು ಹಾಸ್ಟೆಲ್‌ಗ‌ಳಿಗೆ ಹಾಕಿದರೆ ಅವರು ಹಾಳಾಗುತ್ತಾರೆ ಎಂಬ ವಾದವನ್ನೂ ನಾನು ಒಪ್ಪುವುದಿಲ್ಲ. ನಾವ್ಯಾರೂ ಹಾಸ್ಟೆಲ್‌ಗ‌ಳಲ್ಲಿ ಓದಿಲ್ಲ, ಹಾಗಿದ್ದರೆ ನಾವು ಹಾಳಾಗಿದ್ದೀವಾ? ಹಾಳಾಗು ವವನು ಎಲ್ಲಿದ್ದರೂ ಹಾಳಾಗುತ್ತಾನೆ. ಅವನಿಗೆ ಹಾಸ್ಟೆಲ್‌ ಅಂದರೆ ಹಾಳಾಗುವುದಕ್ಕೆ ಇನ್ನಷ್ಟು ಸ್ವಾತಂತ್ರ್ಯ ಸಿಗುತ್ತದೆ ಅಷ್ಟೆ. 

ನೀವು ಮಕ್ಕಳಿಗೆ ಪ್ರೇಮಾಭಿಮಾನಗಳನ್ನು ಬೋಧಿಸದೇ, ಮುಂದೆ ಅವರಿಂದ ಈ ಗುಣಗಳನ್ನು ನಿರೀಕ್ಷಿಸಿದರೆ ಪ್ರಯೋಜನ ವೇನು? ಎಕ್ಸ್‌ಟ್ರಾ ಕ್ಲಾಸಸ್‌ಗಳಿಗೆ ಸೇರಿಕೋ, ತುಂಬಾ ಚೆನ್ನಾಗಿ ಓದು...ಎಂದು ಜೀವ ತಿಂದು ಓದಿಸುತ್ತೀರಿ. ಅವನು ಓದಿ ಒಳ್ಳೇ ನೌಕರಿ ಗಿಟ್ಟಿಸಿ ಅಮೆರಿಕಕ್ಕೆ ಹೋಗುತ್ತಾನೆ. ಅಲ್ಲಿಂದ ಡಾಲರ್‌ಗಳನ್ನು ನಿಮ್ಮತ್ತ ಎಸೆಯುತ್ತಾನೆ. ಇಷ್ಟೇ ನಿಮ್ಮ ಭವಿಷ್ಯತ್ತು. ಖತಂ! ಮಕ್ಕಳ ಬಾಲ್ಯವನ್ನೇ ಕಸಿದುಕೊಳ್ಳುತ್ತಾ ಹೊರಟಿದೆಯಲ್ಲ ಈ ಜಗತ್ತು...ಇದಕ್ಕಿಂತ ದೊಡ್ಡ ಅನ್ಯಾಯ ಏನಿದೆ? 

ಅಂದು ನಮ್ಮ ಅಹಂಕಾರವೆಲ್ಲ ಮುರಿದುಬಿದ್ದಿತ್ತು 
ಹಾಸ್ಯ ನಟ ಬ್ರಹ್ಮಾನಂದಂ ಮತ್ತು ನಾನು ಬಹಳ ವರ್ಷಗಳಿಂದಲೂ ತುಂಬಾ ಆಪ್ತರು. ಅವನು ತೆಲುಗು ಸಾಹಿತ್ಯವನ್ನು ತುಂಬಾ ಓದಿಕೊಂಡವನು. ನಾನು ಏನೇ ಬರೆದರೂ ಅವನಿಗೆ ತೋರಿಸುತ್ತೇನೆ. ಈಗಲೂ ನಿತ್ಯವೂ ಏನಾದರೊಂದು ವಿಷಯ ಕ್ಕಾಗಿ ಫೋನಿನಲ್ಲಿ ಮಾತನಾಡುತ್ತಲೇ ಇರುತ್ತೇವೆ. ನನ್ನ ಮತ್ತು ಅವನ ನಡುವಿನ ಅತಿದೊಡ್ಡ ವ್ಯತ್ಯಾಸವೆಂದರೆ ನಾನು ಶಿವಭಕ್ತ, ಬ್ರಹ್ಮಾನಂದಂ ವಿಷ್ಣುಭಕ್ತ ಅನ್ನುವುದಷ್ಟೆ! 

ಒಮ್ಮೆ ನಾನು ಮತ್ತು ಅವನು ಶೂಟಿಂಗ್‌ ನಿಮಿತ್ತ ಕುಗ್ರಾಮ ವೊಂದಕ್ಕೆ ಹೋಗಿದ್ದೆವು. ಅಲ್ಲೊಂದು ಚಿಕ್ಕ ಗುಡಿಯಿತ್ತು. ಇಬ್ಬರೂ ಗುಡಿ ಪ್ರವೇಶಿಸಿದೆವು. ಅರ್ಚಕರು ಒಮ್ಮೆ ನಮ್ಮತ್ತ ತಿರುಗಿ ನೋಡಿ, ಮತ್ತೆ ಕೆಲಸದಲ್ಲಿ ಮಗ್ನರಾದರು. ನಮಗೆ ಅಚ್ಚರಿಯಾಯಿತು. ಏಕೆಂದರೆ, ಸಿನೆಮಾ ನಟರಾದ ನಮ್ಮನ್ನು ಯಾರಾದರೂ ನೋಡಿದ್ದೇ "ಓಹ್‌ ಸಾರ್‌ ನೀವಾ' ಅಂತ ಉತ್ಸಾಹದಿಂದ ಮಾತ ನಾಡಲಾ ರಂಭಿಸುತ್ತಾರೆ. ಆದರೆ ಈ ಅರ್ಚಕರು ಮಾತ್ರ ನಮ್ಮನ್ನು ಗುರುತಿಸಿದರೂ, ಮಾತನಾಡಲಿಲ್ಲ. ನಾನು ಬ್ರಹ್ಮಾನಂದಂ ಮುಖಮುಖ ನೋಡಿಕೊಂಡೆವು. 

"ಸ್ವಾಮಿ, ಅಭಿಷೇಕ ಮಾಡಿಸಬೇಕಿತ್ತು' ಅಂದೆ. "ಪೂಜೆ ಮುಗಿಯಿತು. ಈಗ ಆಗಲ್ಲ' ಅಂದರು ಅರ್ಚಕರು. "ಇಲ್ಲಿಯವರೆಗೂ ಬಂದಿದ್ದೇವೆ ಮಾಡಿಬಿಡಿ' ಅಂದರು ಬ್ರಹ್ಮಾನಂದಂ.""ಅಭಿಷೇಕ ಮಾಡಿಸಬೇಕು ಅಂದರೆ ನಾಳೆ ಬೆಳಗ್ಗೆ 7 ಗಂಟೆಗೆ ಬನ್ನಿ. ಬ್ರಹ್ಮಾನಂದಂ ಅವರೇ... ನೀವು ತಿಳಿದವರು.. ಓದಿಕೊಂಡ ವರು. ಮತ್ತೆ ಮತ್ತೆ ಹೇಳಲ್ಲ ನಾನು. ನಾಳೆ ಬನ್ನಿ ಆರಾಮಾಗಿ' ಅಂದ ಅರ್ಚಕರು ಎದ್ದುಹೊರಟರು. ಮರುದಿನ ನಿಗದಿತ ಸಮಯಕ್ಕಿಂತ ತುಸು ಮುನ್ನವೇ ನಾವಿಬ್ಬರೂ ಗುಡಿಗೆ ಬಂದೆವು. ಅರ್ಚಕರು ಬಹಳ ಶ್ರದ್ಧೆಯಿಂದ ಪೂಜೆ ಮಾಡಿಸಿದರು. ಅಭಿಷೇಕ ಮುಗಿದ ನಂತರ ನಾವು ಅವರಿಗೆ ಹಣ ಕೊಡಲು ಮುಂದಾದೆವು. ಆದರೆ ಅವರು ಹಣತೆಗೆದುಕೊಳ್ಳಲು ನಿರಾಕರಿಸುತ್ತಾ ಹುಂಡಿಯತ್ತ ಕೈ ತೋರಿಸಿ ಅದರಲ್ಲಿ ಹಾಕಿ ಎಂದು ಸನ್ನೆ ಮಾಡಿದರು. 

ಹಣ ಹಾಕಿ ಶೂಟಿಂಗ್‌ ಸ್ಪಾಟ್‌ಗೆ ಹೊರಟೆವು. ಸೆಟ್‌ನಲ್ಲಿ ಟಿಫ‌ನ್‌ ರೆಡಿಯಾಗಿತ್ತು. ಅದೇ ಸಮಯದಲ್ಲೇ ಆ ಅರ್ಚಕರು ನಮ್ಮ ಕಣ್ಣಿಗೆ ಬಿದ್ದರು. ಮಾಸಿ ಹೋಗಿದ್ದ ಚಿಕ್ಕ ಪಂಚೆ, ಒಂದು ಸಾದಾ ರುದ್ರಾಕ್ಷಿ ಹಾರವಷ್ಟೇ ಅವರ ಕೊರಳಲ್ಲಿತ್ತು. "ಸ್ವಾಮಿ, ಏನಾದರೂ ತೊಗೊಳ್ತೀರಾ?' ಎಂದು ಕೇಳಿದೆ. 
"ಬೇಡ ಸರ್‌' ಅಂದರು ಬಹಳ ಮುಜುಗರದಿಂದ. "ಕಾಫಿ ಅಥವಾ ಟೀ ತೊಗೊಳ್ಳಿ ಸ್ವಾಮಿ' ಅಂದೆ. ಅದನ್ನೂ ನಿರಾಕರಿಸಿದರು. 

"ಕನಿಷ್ಠ ಒಂದು ಗ್ಲಾಸು ಹಾಲಾದರೂ ಕುಡಿಯಿರಿ' ಅಂದೆವು. ಅದಕ್ಕೂ ಬೇಡ ಎಂದು ತಲೆಯಾಡಿಸಿಬಿಟ್ಟರು. ನಮಗೆ ಅಚ್ಚರಿಯಾಯಿತು. "ಅದೇನ್ರೀ... ಎಲ್ಲಾ ಬೇಡ ಅಂತೀರಾ ನೀವು. ಆಗ ನೋಡಿದರೆ ದಕ್ಷಿಣೆ ಬೇಡ ಅಂತ ಹುಂಡಿಯಲ್ಲಿ ಹಾಕಿಸಿದಿರಿ..' ಅಂದೆವು. ಅದಕ್ಕೆ ಆ ಅರ್ಚಕರು ವಿನಮ್ರವಾಗಿ ಹೇಳಿದರು, ""ಸರ್‌, ನನ್ನ ಹತ್ತಿರ ಒಂದು ಎಕರೆ ಹೊಲ ಇದೆ. ಒಂದು ಹಸು ಇದೆ. ಒಬ್ಬ ಶಿವನಿದ್ದಾನೆ... ಇನ್ನೇನು ಬೇಕು ನನಗೆ?'' ಹೀಗೆ ಹೇಳಿದ್ದೇ ಕೈಮುಗಿದು ನಡೆದೇಬಿಟ್ಟರು.ಆ ಕ್ಷಣದಲ್ಲಿ ನಮ್ಮೊಳಗಿದ್ದ ಅಹಂಕಾರವೆಲ್ಲ ಕುಸಿದು ಕುಪ್ಪೆ ಯಾಗಿಬಿಟ್ಟಿತು. ಏನನ್ನೂ ಆಸೆಪಡದಿದ್ದರೆ ಇಷ್ಟು ಶ್ರೀಮಂತವಾಗಿ ಬದುಕಬಹುದಾ ಎಂದು ನಾವು ಅಚ್ಚರಿಗೊಂಡೆವು. ನಿಜಕ್ಕೂ ಶ್ರೀಮಂತರೆಂದರೆ ಆ ಅರ್ಚಕರೇ ಅನ್ನಿಸಿಬಿಟ್ಟಿತು...

(ಕೃಪೆ: ಐ ಡ್ರೀಂ ತೆಲುಗು ಮೂವೀಸ್‌ ಯೂಟ್ಯೂಬ್‌ ಚಾನೆಲ್‌)

ತನಿಕೆಳ್ಲ ಭರಣಿ 
ತೆಲುಗು ನಟ, ಸಾಹಿತಿ


Trending videos

Back to Top