CONNECT WITH US  

ಕೊಟ್ಟ ಕೆಲಸ ಮುಗಿಸುವವರೆಗೆ ವಿಶ್ರಾಂತಿಯಿಲ್ಲ...

ವಾಜಪೇಯಿಯವರು 27 ಮೇ, 1996ರಂದು ತಮ್ಮ 13 ದಿನದ ಸರ್ಕಾರವನ್ನು ಕೊನೆಗೊಳಿಸುವಾಗ ಮಾಡಿದ ಭಾಷಣದ ಅಕ್ಷರ ರೂಪವಿದು...

ಸನ್ಮಾನ್ಯ ಅಧ್ಯಕ್ಷರೇ, ಈ ವಿಶ್ವಾಸಮತ ಯಾಚನೆಯ ಪ್ರಸ್ತಾಪದ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದ ಸಮರ್ಪಿಸುತ್ತಿದ್ದೇನೆ. ಕೋಲಾಹಲದ ಬಳಿಕ ನನ್ನ ಮಾತುಗಳನ್ನು ಕೇಳಲು ಸಿದ್ಧರಾದ ಎಲ್ಲರಿಗೂ ಧನ್ಯವಾದ. ಈ ಸದನ ಸಂಯಮದ, ಶಾಂತಿಯುತ ಚರ್ಚೆಗಾಗಿಯೇ ಇದೆ. ಸಂಸತ್‌ನಲ್ಲಿ ನಾನು 40 ವರ್ಷ ಕಳೆದಿದ್ದೇನೆ. ಇಂಥ ಕ್ಲಿಷ್ಟ ಕ್ಷಣಗಳು ಇಲ್ಲಿ ಆಗಾಗ ಬಂದಿವೆ. ಸರ್ಕಾರಗಳು ರಚನೆಯಾಗಿವೆ, ಪತನಗೊಂಡಿವೆ. ಇಂಥ ಕಠಿಣ ಪರಿಸ್ಥಿತಿಯಿಂದಾಗಿಯೇ ನಮ್ಮ ದೇಶದ ಪ್ರಜಾತಂತ್ರ ವ್ಯವಸ್ಥೆ ಬಲಶಾಲಿಯಾಗಿದೆ. ಅದು ಮತ್ತಷ್ಟು ಬಲಶಾಲಿಯಾಗಲಿದೆ ಎಂಬ ವಿಶ್ವಾಸವಿದೆ. ನಿಂದಕರನ್ನು ಪಕ್ಕದಲ್ಲಿಯೇ ಇರಿಸಿಕೊಳ್ಳಬೇಕು ಎಂಬ ಮಾತು ಮರಾಠಿಯಲ್ಲಿದೆ. ಪ್ರಸ್ತಾಪವನ್ನು ಬೆಂಬಲಿಸಿದವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.
 
ನನಗೆ ಅಧಿಕಾರದ ಆಸೆಯಿದೆ ಎಂದು ನನ್ನ ವಿರುದ್ಧ ಆರೋಪ ಮಾಡಲಾಗಿತ್ತು. ಇದರಿಂದ ನನಗೆ ತೀವ್ರ ನೋವಾಗಿದೆ. ಕಳೆದ ಹತ್ತು ದಿನಗಳಿಂದ ಏನು ಕ್ರಮ ಕೈಗೊಂಡಿದ್ದೇನೋ ಅದು ಅಧಿಕಾರಕ್ಕಾಗಿ ಎಂದು ಬಿಂಬಿಸಲಾಗುತ್ತಿದೆ. ಆಗಲೇ ನಾನು ಹೇಳಿದಂತೆ ಈ ಸದನದಲ್ಲಿ 40 ವರ್ಷಗಳಿಂದ ಇದ್ದೇನೆ. ಈ ಸದನದಲ್ಲಿರುವ ಸದಸ್ಯರು, ಸಾರ್ವಜನಿಕರು ನನ್ನ ನಡೆ- ನುಡಿಯನ್ನು ಗಮನಿಸಿದ್ದಾರೆ. ಜನತಾ ದಳದ ಸದಸ್ಯರ ಜತೆಗೆ ರಚನೆ ಮಾಡಲಾಗಿದ್ದ ಸರ್ಕಾರದಲ್ಲಿ ನಾನು ಸಚಿವನೂ ಆಗಿದ್ದೆ. 

ವಾಜಪೇಯಿ ಒಳ್ಳೆಯವರು, ಆದರೆ ಅವರು ಇರುವ ಪಕ್ಷ ಸರಿಯಾಗಿಲ್ಲ ಎಂಬ ವಾದ ಪದೇ ಪದೆ ಕೇಳಿ ಬರುತ್ತಾ ಇದೆ. ಅಧ್ಯಕ್ಷರೇ ಅಧಿಕಾರಕ್ಕಾಗಿ ಪಕ್ಷವನ್ನೇ ಒಡೆದವರು ಇದ್ದಾರೆ. ಈ ಬಗ್ಗೆ ಹೆಸರು ಪ್ರಸ್ತಾಪ ಮಾಡಲು ಬಯಸುವುದಿಲ್ಲ. ಒಂದು ವೇಳೆ ನನಗೆ ಅಂಥ ಪ್ರಯತ್ನದಿಂದ ಅಧಿಕಾರ ಬರುತ್ತಿದ್ದರೆ ದೂರದಿಂದಲೇ ತಿರಸ್ಕರಿಸುತ್ತಿದ್ದೆ.  "ಮೃತ್ಯುವಿಗೆ ನಾನು ಹೆದರುವುದಿಲ್ಲ. ಆದರೆ ಲೋಕಾಪವಾದಕ್ಕೆ ಹೆದರುತ್ತೇನೆ' ಎಂದು ಭಗವಾನ್‌ ಶ್ರೀರಾಮ ಹೇಳಿದ್ದಾನೆ. ನಾಲ್ಕು ದಶಕಗಳ ನನ್ನ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ. ಜನರೇ ನಮ್ಮ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ. ಅವರ ಆದೇಶವನ್ನು ತಿರಸ್ಕರಿಸಬೇಕೇ? ರಾಷ್ಟ್ರಪತಿಗಳು ಸರ್ಕಾರ ರಚನೆಗೆ ಆಹ್ವಾನ ನೀಡಿ, "ನಾಳೆ ನಿಮ್ಮ ನೇತೃತ್ವದಲ್ಲಿ ಮಂತ್ರಿ ಮಂಡಲ ರಚನೆಯಾಗಬೇಕು' ಎಂದು ಸೂಚಿಸಿದ್ದರು. 31ರ ಒಳಗಾಗಿ ಬಹುಮತ ಸಾಬೀತು ಮಾಡಲು ಹೇಳಿದ್ದಾರೆ. ಜನರು ನಮ್ಮ ಪಕ್ಷದ ಪರವಾಗಿ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ. ಬಹುಮತ ಇಲ್ಲವೆಂದು ರಾಷ್ಟ್ರಪತಿಯವರ ಸೂಚನೆಯನ್ನು ಧಿಕ್ಕರಿಸಲೇ?

ನಾನು ಇತರ ಪಕ್ಷಗಳ ಜತೆಗೆ ಮಾತುಕತೆ ನಡೆಸಿ ಬಹುಮತ ಸಾಬೀತು ಮಾಡಲು ಮುಂದಾಗುತ್ತಿದ್ದೇನೆ ಎಂದು ಹೇಳಿದ್ದ. ಇದರಲ್ಲಿ ತಪ್ಪೇನಿದೆ ಹೇಳಿ? ಇದು ಅಧಿಕಾರಕ್ಕಾಗಿನ ಆಶೆಯೇ? ನಾವೇನು ರಾಷ್ಟ್ರಪತಿ ಭವನದಲ್ಲಿ ಸರ್ಕಾರದ ಬಹುಮತ ಸಾಬೀತು ಮಾಡಬೇಕೆಂದು ಒತ್ತಾಯ ಮಾಡಿರಲಿಲ್ಲ. ಅದಕ್ಕಾಗಿ ಸದನ ಸಮಾವೇಶಗೊಳಿಸಬೇಕಾಗಿತ್ತು. 

ನಮ್ಮ ನಿಷ್ಠೆಯ ಮೇಲೆ ಯಾವುದೇ ಸಂಶಯ ಬೇಡ. ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಷ್ಟೇ. ನಾವು ವೆಸ್ಟ್‌ಮಿನಿಸ್ಟರ್‌ನಲ್ಲಿ ಅನುಸರಿಸುವ ಶೇಕಡಾವಾರು ಮತಗಳ ಪದ್ಧತಿಯನ್ನು ಅನುಸರಿಸುತ್ತಿಲ್ಲ. ಕೆಲವೊಂದು ಬಾರಿ ಹೆಚ್ಚಿನ ಸ್ಥಾನ ಪಡೆದರೂ ಶೇಕಡಾವಾರು ಮತಗಳು ಕಡಿಮೆ ಬಂದಿರಬಹುದು. ಕಡಿಮೆ ಸ್ಥಾನ ಬಂದಿರುವ ಪಕ್ಷಕ್ಕೆ ಶೇಕಡವಾರು ಹೆಚ್ಚು ಮತಗಳು ಬಂದಿರಬಹುದು. ಜನಾದೇಶ ಕಾಂಗ್ರೆಸ್‌ನ ವಿರುದ್ಧವಾಗಿದೆ. ದೇಶದ ವಿವಿಧ ಭಾಗಗಳಲ್ಲಿನ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಕ್ಷಗಳು ಒಟ್ಟಾಗಿ ಕಾಂಗ್ರೆಸ್‌ನ ಬೆಂಬಲ ಕೇಳುತ್ತಿವೆ. ಬೆಂಬಲ ನೀಡಲೂ ಸಿದ್ಧವಾಗಿದೆ.

ಎಲ್ಲರೂ ಒಟ್ಟಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು, ಅದನ್ನು ಟೀಕಿಸಬೇಕು ಎಂಬ ಧೋರಣೆ ಹೊಂದಿದ್ದೀರಿ ಎಂದಾದರೆ ನಾನು ನಿಮಗೆ ಎಚ್ಚರಿಕೆ ನೀಡಲು ಬಯಸುತ್ತೇನೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯದಲ್ಲ. ನಾನು ರಾಜಕೀಯ ಕ್ಷೇತ್ರಕ್ಕೆ ಬಂದಾಗ ಸಂಸತ್‌ ಸದಸ್ಯನಾಗುತ್ತೇನೆ ಎಂಬ ಯೋಚನೆ ಯನ್ನೂ ಮಾಡಿರಲಿಲ್ಲ. ನಾನು ಮೊದಲು ಪತ್ರಕರ್ತನಾಗಿದ್ದೆ. ನನಗೆ ಇಂಥ ರಾಜನೀತಿ ಮಾಡಲು ಮನಸ್ಸಿಲ್ಲ. ಇದನ್ನೆಲ್ಲ ತೊರೆಯಬೇಕು ಎಂದು ಮನಸ್ಸು ಮಾಡುತ್ತೇನೆ. ಆದರೆ ಅದು ನನ್ನನ್ನು ಬಿಡಲು ತಯಾರಿಲ್ಲ. 

ಪ್ರಧಾನ ಮಂತ್ರಿಯಾಗಿ ಕೆಲವೇ ಹೊತ್ತಿನ ಕಾಲ ಮಾತ್ರ ಇರಲಿದ್ದೇನೆ. ನಮ್ಮ ಮೇಲೆ ಆರೋಪಗಳ ಮೇಲೆ ಆರೋಪ ಮಾಡಲಾಗುತ್ತಿದೆ. ರಾಷ್ಟ್ರಪತಿಗಳ ಭಾಷಣದಲ್ಲಿ  ರಾಮ ಮಂದಿರ, ಸ್ವದೇಶಿ ವಿಚಾರಗಳ ಪ್ರಸ್ತಾಪ ಇರಲಿಲ್ಲ. ನಮ್ಮಲ್ಲಿ ಬಹುಮತ ಇಲ್ಲದೇ ಇರುವುದರಿಂದ ನಾವು ಅದನ್ನು ಪ್ರಸ್ತಾಪ ಮಾಡುವುದಿಲ್ಲ.
   
ನಮ್ಮ ಬಗ್ಗೆ ಕೌ ಬೆಲ್ಟ್ ಎಂದು ಲೇವಡಿ ಮಾಡಲಾಗುತ್ತದೆ. ಹರ್ಯಾಣ ಮತ್ತು ಕರ್ನಾಟಕದಲ್ಲಿ ನಾವು ಜಯ ಗಳಿಸಿದ್ದೇವೆ. ಕೇರಳ ಮತ್ತು ತಮಿಳುನಾಡಿನಲ್ಲಿ ನಮ್ಮ ಪಕ್ಷ ಶಕ್ತಿಶಾಲಿಯಾಗಿಲ್ಲ ಎನ್ನುವುದು ನಿಜ. ಆದರೆ ಅಲ್ಲಿ ನಮ್ಮ ಸಂಘಟನೆ ಇದೆ. ಪಶ್ಚಿಮ ಬಂಗಾಳದಲ್ಲಿಯೂ ನಮಗೆ ಶೇ.10ಕ್ಕಿಂತ ಕಡಿಮೆ ಮತಗಳು ಬಂದಿದೆ. ಈ ಸದನದಲ್ಲಿ ಒಬ್ಬ ವ್ಯಕ್ತಿ ಸದಸ್ಯನಾಗಿರುವ ಪಕ್ಷವೂ ಇದೆ. ಅವರೆಲ್ಲ ನಮ್ಮ ವಿರುದ್ಧ ಒಟ್ಟಾಗಿ ಕೈ ಜೋಡಿಸಿದ್ದಾರೆ. ಅದರ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಏಕೆಂದರೆ ಅವರಿಗೆ ಆ ಅಧಿಕಾರವಿದೆ. ತಮ್ಮ ತಮ್ಮ ಕ್ಷೇತ್ರದಿಂದ ಏಕಾಂಗಿಯಾಗಿ ನವದೆಹಲಿ ಬಂದು, ಬಿಜೆಪಿ ವಿರುದ್ಧ ಒಗ್ಗಟ್ಟಾಗುವುದು. ಹೀಗೆ ಒಟ್ಟಾಗುವುದು ದೇಶಕ್ಕಾಗಿ ಎಂದಾದರೆ ಸ್ವಾಗತವಿದೆ. ನಾವೂ ಕೂಡ ದೇಶಕ್ಕಾಗಿಯೇ ಕೆಲಸ ಮಾಡಿದ್ದೇವೆ. ನಾವು 40 ವರ್ಷಗಳ ಕಾಲ ದೇಶಕ್ಕಾಗಿ ದುಡಿದ್ದೇವೆ. ಹೀಗಾಗಿ ಇಷ್ಟು ಸಂಖ್ಯೆಯ ಸ್ಥಾನ ಸಿಕ್ಕಿದ್ದರಲ್ಲಿ ಯಾವುದೇ ಚಮತ್ಕಾರವಿಲ್ಲ. ನಾವು ಹಲವು ಹಂತಗಳಲ್ಲಿ ಸಂಘರ್ಷ, ಹೋರಾಟ ನಡೆಸಿದ್ದೇವೆ. ಏಕೇವಲ ಚುನಾವಣೆ ಸಂದರ್ಭದಲ್ಲಿ ಏಕಾಏಕಿ ಹುಟ್ಟಿಕೊಳ್ಳುವ ಪಕ್ಷ ನಮ್ಮದಲ್ಲ. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಹುಮತದಲ್ಲಿ ಅಧಿಕಾರ ಪಡೆದುಕೊಳ್ಳಬೇಕಾಗಿತ್ತು. ಅದು ನಮ್ಮ ಹಿನ್ನಡೆ ಎಂದು ಒಪ್ಪಿಕೊಳ್ಳುತ್ತೇನೆ. ನಾವು ಇಲ್ಲಿ ಅಧಿಕಾರ ನಡೆಸಲೇಬಾರದು ಎಂದರೆ ಹೇಗೆ? 

ಚುನಾವಣೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ನಮಗೆ ಬಹುಮತ ಸಾಬೀತು ಮಾಡುವ ಅವಕಾಶವನ್ನು ಗೌರವಾನ್ವಿತ ರಾಷ್ಟ್ರಪತಿಗಳು ನೀಡಿದ್ದಾರೆ. ಅದಕ್ಕಾಗಿ ಪ್ರಯತ್ನಪಟ್ಟೆವಾದರೂ, ಯಶಸ್ವಿಯಾಗಲಿಲ್ಲ. ಒಂದು ವೇಳೆ ನಮಗೆ ಬಹುಮತ ಸಿಗಲಿಲ್ಲ ಎಂದಾದರೆ ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಸಿದ್ಧರಿದ್ದೇವೆ. ನೀವು ನಮ್ಮತ್ತ ಕೈಚಾಚಿ ಸಹಕಾರ ಮನೋಭಾವದಿಂದ ಸದನ ನಡೆಸಬೇಕಾಗುತ್ತದೆ ಎಂಬ ವಿಚಾರ ನೆನಪಿರಲಿ. ಆದರೆ ನಿಮ್ಮ ನೇತೃತ್ವದ ಸರ್ಕಾರ ಯಾವ ಕಾರ್ಯಕ್ರಮದ ಆಧಾರದ ಮೇಲೆ ಹೇಗೆ ನಡೆಯುತ್ತದೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಆದರೆ ನಾವು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತೆವು ಎಂದಾದರೆ ನಮ್ಮ ಸಹಕಾರ ಸಿಗುತ್ತದೆ ಎಂಬ ಮಾತನ್ನು ಖಾತರಿಯಾಗಿ ಹೇಳುತ್ತೇನೆ. ಇನ್ನು ದಲಿತರ ವಿಚಾರ ಬಂದಾಗ ಎಸ್‌ಸಿ ಸಮುದಾಯದ ಸಂಸದರ ವಿಚಾರ ಬಂದಾಗ ಈ ಸದನದಲ್ಲಿ ಒಟ್ಟು ಸದಸ್ಯರ ಸಂಖ್ಯೆ 77. ಅವರ ಪೈಕಿ 29 ಸದಸ್ಯರು ಬಿಜೆಪಿಯವರೇ ಆಗಿದ್ದಾರೆ. ಸಿಪಿಎಂ 5, ಸಿಪಿಐ 1, ಕಾಂಗ್ರೆಸ್‌ 15, ಜನತಾದಳದಲ್ಲಿ 7 ಸದಸ್ಯರಿದ್ದಾರೆ. ಈ ಪೈಕಿ ಬಿಜೆಪಿಯಲ್ಲಿಯೇ ಹೆಚ್ಚಿನ ಸದಸ್ಯರಿದ್ದಾರೆ. ಎಸ್‌ಟಿ ಸಮುದಾಯದಲ್ಲಿ ಕೂಡ ಒಟ್ಟು ಸಂಸದರ ಸಂಖ್ಯೆ 47. ಈ ಪೈಕಿ ಬಿಜೆಪಿ ಸಂಸದರ ಸಂಖ್ಯೆ 11. ನಮಗೆ ಜನರ ಬೆಂಬಲ ಇಲ್ಲ. ಹೆಚ್ಚಿನ ಪ್ರದೇಶದಲ್ಲಿ ಪಕ್ಷ ವ್ಯಾಪಿಸಿಲ್ಲ ಎನ್ನುವುದು ಸರಿಯೇ.  ಜನನದ ಬಳಿಕ ಜೀವಿಸುವುದಕ್ಕೇ ಕಷ್ಟವಾಗುತ್ತಿದೆ ಎಂಬ ಪರಿಸ್ಥಿತಿ ಇದೆ. 

ಆಂತರಿಕವಾಗಿ ಹಲವು ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಈ ಸರ್ಕಾರದಿಂದ ದೇಶಕ್ಕೆಷ್ಟು ಲಾಭವಾದೀತು ಎನ್ನುವುದೇ ಪ್ರಶ್ನಾರ್ಹ ವಿಚಾರ. ಸರ್ಕಾರ ರಚನೆಗೆ ಕಾಂಗ್ರೆಸ್‌ ಬೆಂಬಲ ಕೋರಿರುವ ನಿಮಗೆ ಪ್ರತಿಯೊಂದು  ವಿಚಾರಕ್ಕೂ ಅವರ ಬಳಿಗೆ ಧಾವಿಸಿ ಅನುಮತಿ ಕೇಳಿಕೊಳ್ಳಬೇಕಾದ ಸ್ಥಿತಿ ಬಂದೀತು. ಅದಕ್ಕೇನಾದರೂ ಷರತ್ತುಗಳನ್ನು ನೀಡಲಾಗಿದೆಯೋ ಗೊತ್ತಿಲ್ಲ. ನಂತರ ಅದರ ಬಗ್ಗೆ ಸಮನ್ವಯ ಸಮಿತಿ ರಚನೆ ಬಗ್ಗೆ ನಿರ್ಧರಿಸಲಾಗಿದೆಯೋ ಏನೋ. ಸದನದಲ್ಲಿ ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಲೇಬೇಕು. ಏಕೆಂದರೆ ಇಲ್ಲಿನ ಕಲಾಪ ನಡೆಸಲು ಸಾಧ್ಯವಾಗುವುದಿಲ್ಲವಲ್ಲ. 

ನೀವು ಇಡೀ ದೇಶದ ನೇತೃತ್ವ ವಹಿಸಲು ಮುಂದಾಗಿದ್ದೀರಿ. ಒಳ್ಳೆಯದಾಗಲಿ. ನಿಮಗೆ ನಮ್ಮ ಶುಭ ಹಾರೈಕೆಗಳು. ನಾವು ದೇಶ ಸೇವೆಯ ಕಾರ್ಯ ಮುಂದುವರಿಸಲಿದ್ದೇವೆ. ನಾವು ಸಂಖ್ಯಾಬಲದ ಮುಂದೆ ಸೋತಿದ್ದೇವೆ. ನಮಗೆ ಒಪ್ಪಿಸಿರುವ ಕೆಲಸವನ್ನು ಮುಕ್ತಾಯಗೊಳಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ. ಸನ್ಮಾನ್ಯ ಸ್ಪೀಕರ್‌ ಅವರೇ ನನ್ನ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುವುದಕ್ಕಾಗಿ ತೆರಳುತ್ತಿದ್ದೇನೆ.

Trending videos

Back to Top