CONNECT WITH US  

ವಾಜಪೇಯಿ ಒಳ್ಳೆಯ ವ್ಯಕ್ತಿಯಾಗಿದ್ದ ಎಂದು ನೆನೆದರೆ ಸಾಕು

ಸಂದರ್ಶನ ಅಟಲ್‌ ಅವರು ವಿವಿಧ ಪತ್ರಿಕೆಗಳಿಗೆ ಮತ್ತು ಟಿ.ವಿ. ಚಾನೆಲ್‌ಗ‌ಳಿಗೆ ನೀಡಿದ್ದ ಸಂದರ್ಶನದ  ಆಯ್ದ ಭಾಗ

"ಅಟಲ್‌ ಬಿಹಾರಿ ವಾಜಪೇಯಿಯವರ ಮೈನಸ್‌ ಪಾಯಿಂಟ್‌ ಎಂದರೆ ವ್ಯಕ್ತಿಯೇನೋ ಒಳ್ಳೆಯವರು, ಆದರೆ ಅವರು ಕೆಟ್ಟ ಪಕ್ಷದಲ್ಲಿದ್ದಾರೆ! ಎಂದು ಖುಷವಂತ್‌ ಸಿಂಗ್‌ ಅವರು ತಮ್ಮ ಲೇಖನವೊಂದರಲ್ಲಿ ಬರೆದಿದ್ದಾರೆ..ಏನಂತೀರಿ?
       ಸರ್ದಾರ್ಜಿ(ಖುಷ್‌ವಂತ್‌) ಬಗ್ಗೆ ನನಗೆ ಬಹಳ ಗೌರವವಿದೆ. ಅವರ ಲೇಖನಗಳನ್ನೆಲ್ಲ ನಾನು ತಪ್ಪದೇ ಓದುತ್ತೇನೆ. ಆದರೆ ಈ ಮಾತನ್ನು ಮಾತ್ರ ಒಪ್ಪೋದಿಲ್ಲ. ನಾನು ನಿಜಕ್ಕೂ ಒಳ್ಳೆಯ ವ್ಯಕಿಯಾಗಿದ್ದರೆ ಕೆಟ್ಟ ಪಕ್ಷದಲ್ಲಿ ಇರಲು ಹೇಗೆ ಸಾಧ್ಯ? ಒಂದು ವೇಳೆ ಕೆಟ್ಟ ಪಕ್ಷದಲ್ಲಿ ಇದ್ದೇನೆ ಎಂದರೆ ನಾನು ಒಳ್ಳೆಯವನಾಗಲು ಹೇಗೆ ಸಾಧ್ಯ? ಹಣ್ಣು ಚೆನ್ನಾಗಿದೆಯೆಂದರೆ ಮರವೂ ಚೆನ್ನಾಗಿರಲೇಬೇಕಲ್ಲವೇ?  ಕೆಟ್ಟ ಮರದಲ್ಲಿ ಒಳ್ಳೆಯ ಹಣ್ಣು ಹೇಗೆ ತಾನೇ ಬೆಳೆದೀತು?
 
"ಭಾರತೀಯ ಜನತಾ ಪಾರ್ಟಿ ನಮ್ಮ ವಿಚಾರಧಾರೆಯನ್ನು ಕದಿಯುತ್ತಿದೆ, ನಮ್ಮ ನೇತಾರರಾದ ಸುಭಾಷ್‌ ಚಂದ್ರ ಬೋಸ್‌ ಮತ್ತು ಮಹಾತ್ಮಾ ಗಾಂಧಿಯವರನ್ನು ಕದ್ದುಬಿಟ್ಟಿದೆ, ಈಗ ನಮ್ಮ ಸಂಸದರನ್ನೂ ಅಪಹರಿಸುತ್ತಿದೆ' ಎಂದು ಕಾಂಗ್ರೆಸ್‌ನ ನಾಯಕರೊಬ್ಬರು ಆರೋಪಿಸಿ­ದ್ದಾರಲ್ಲ...
   (ನಗುತ್ತಾ) ಕಾಂಗ್ರೆಸ್‌ ಒಂದು ವೇಳೆ ಇದೇ ರೀತಿಯಲ್ಲಿ ಮೈಮರೆತು ಕುಳಿತರೆ, ವಾಸ್ತವವನ್ನು ಎದುರಿಸಲು ಸಜ್ಜಾಗದಿದ್ದರೆ ನಿಧಾನವಾಗಿ ಎಲ್ಲವನ್ನೂ ಕಳೆದುಕೊಂಡು ಖಾಲಿ ಕೈಯಲ್ಲಿ ಉಳಿದುಬಿಡಲಿದೆ...
 
ವಾಜಪೇಯಿಯವರೇ, ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅದರ ಪ್ರಧಾನಿ ಕೇವಲ 13 ದಿನ ಅಧಿಕಾರದಲ್ಲಿರೋಲ್ಲ ತಾನೆ?(1996ರಲ್ಲಿ ಅಟಲ್‌ ಕೇವಲ 13 ದಿನ ಪ್ರಧಾನಿಯಾಗಿದ್ದರು.)
   ಈಗ ಗಣಿತ ಬದಲಾಗಿದೆ. ದೇಶದ ಗಾಳಿಯಲ್ಲಿ ಪರಿವರ್ತನೆಯ ಪರಿಮಳ ಸೇರಿಕೊಂಡಿದೆ. ಮತ್ತೆ ಆ ಇತಿಹಾಸ ಪುನರಾವರ್ತನೆಯಾಗಬಾರದೆಂದು ದೇಶದ ಜನತೆ ನಿರ್ಧರಿಸಿಬಿಟ್ಟಿದ್ದಾರೆ. ಮುಂದಿನ ಪ್ರಧಾನಿ 5 ವರ್ಷ ಅಧಿಕಾರ ನಡೆಸಲಿದ್ದಾರೆ(1999ರ ಚುನಾವಣೆಯಲ್ಲಿ ವಾಜ­ಪೇಯಿ ಅಧಿಕಾರಕ್ಕೆ ಬಂದು 5 ವರ್ಷ ಆಡಳಿತ ನಡೆಸಿದರು)

ನೀವು ರಾಜಕೀಯಕ್ಕೆ ಬಂದದ್ದು ಹೇಗೆ?
ನಾನು ದೆಹಲಿಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೆ. ಅದೇ ವೇಳೆಯಲ್ಲೇ ಶ್ರೀ ಶ್ಯಾಮಪ್ರಸಾದ್‌ ಮುಖರ್ಜಿ ಜಮ್ಮು ಕಾಶ್ಮೀರದ ಆಂದೋಲನದ ವಿಷಯವಾಗಿ ಪರ್ಮಿಟ್‌ ವ್ಯವಸ್ಥೆಯನ್ನು ಉಲ್ಲಂ ಸಿ ಶ್ರೀನಗರಕ್ಕೆ ಹೋಗಿದ್ದರು. ನಾನು ವರದಿಗಾರ ನಾಗಿ ಅವರ ಜೊತೆಗೆ ಹೋಗಿದ್ದೆ. ಅವರನ್ನು ಅರೆಸ್ಟ್‌ ಮಾಡಲಾಯಿತು. ನಾವೆಲ್ಲ ಹಿಂದಿರುಗಿ ದೆಹಲಿಗೆ ಬಂದೆವು. ಜೈಲಿಗೆ ಹೋಗುವ ಮುನ್ನ ಡಾ. ಮುಖರ್ಜಿಯವರು, "ವಾಜಪೇಯಿ, ಹೋಗು. ಈ ಮುಖರ್ಜಿ ಅನುಮತಿಯಿಲ್ಲದೆಯೇ ಕಾಶ್ಮೀರಕ್ಕೆ ಬಂದಿದ್ದಾನೆ ಎಂದು ಜಗತ್ತಿಗೆ ತಿಳಿಸು'! ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿ ಡಾ.ಮುಖರ್ಜಿ ಸಾವನ್ನಪ್ಪಿ­ದರು. ಈ ಘಟನೆ ನನ್ನಲ್ಲಿ ತೀವ್ರ ತಳಮಳ ಹುಟ್ಟುಹಾಕಿತು. ಅವರ ಕೆಲಸವನ್ನು ಮುಂದುವರಿಸಬೇಕು ಎಂದು ನನಗೆ ಬಲವಾಗಿ ಅನ್ನಿಸತೊಡಗಿತು. ಈ ಕಾರಣಕ್ಕಾಗಿಯೇ ನಾನು ರಾಜಕಾರಣಕ್ಕೆ ಬಂದೆ.

ಅಧಿಕಾರದ ಮರುಭೂಮಿಯಲ್ಲಿ ಸಿಲುಕಿ ನನ್ನ ಕವಿತೆಯ ಒರತೆ ಬತ್ತಿ ಹೋಗಿದೆ ಎಂದು ಬಹಳಷ್ಟು ಬಾರಿ ಹೇಳಿದ್ದೀರಿ
      ನಿಜ, ಕವಿತಾ ಶಕ್ತಿ ಅಜಮಾಸು ಬತ್ತಿ ಹೋಗಿದೆ. ಕವಿತೆ ಏಕಾಂತವನ್ನು ಬಯಸುತ್ತದೆ. ಕವಿತೆ ತನ್ನದೇ ವಾತಾವರಣವನ್ನು ಬಯಸುತ್ತದೆ. ಆದರೆ ದಿನವೂ ಭಾಷಣ ಮಾಡುವ ಭರದಲ್ಲಿರುವಾಗ ಕವಿತೆ ಹುಟ್ಟುವುದೇ ಇಲ್ಲ. ಒಳಗಿನಿಂದ ಕುದ್ದು ಹೊರಗೆ ಉಕ್ಕಬೇಕು ಕವಿತೆ.

ಹಾಗಿದ್ದರೆ ನೀವು ಕವಿತೆಗಳನ್ನು ಬರೆಯೋದು ಯಾವ ಸಮಯದಲ್ಲಿ?
    ಬರೆಯಲೇಬೇಕು ಎಂಬ ಒತ್ತಡ ಮೂಡಿದಾಗ ಮಾತ್ರ ಲೇಖನಿ ಹಿಡಿದು ಕೂಡುತ್ತೇನೆ.
 
ಏಕಾಂಗಿತನ ಕಾಡುತ್ತದೆಂದು ನೀವು ಬರೆಯುತ್ತೀರಾ?
    ಹಾಂ. ಹೌದು. ಒಬ್ಬಂಟಿಯಾಗಿದ್ದಾಗ ಮಾತ್ರವಲ್ಲ, ನನ್ನ ಸುತ್ತ ಜನರಿದ್ದಾಗಲೂ ಏಕಾಂಗಿತನ ನನ್ನನ್ನು ಕಾಡುತ್ತಿರುತ್ತದೆ.
 
ನೀವೇಕೆ ಒಂಟಿಯಾಗಿ ಉಳಿದುಬಿಟ್ಟಿರಿ?  ಮದುವೆ ಏಕಾಗಲಿಲ್ಲ?
    ರಾಜಕೀಯ ಚಕ್ರದಲ್ಲಿ ಎಷ್ಟು ಸಿಲುಕಿಬಿಟ್ಟೆ­ನೆಂದರೆ, ಅದು ಉರುಳುತ್ತಲೇ ಹೋಯಿತು. ಮದುವೆಯ ಬಗ್ಗೆ ಯೋಚಿಸಲು ಸಮಯವೇ ಸಿಗಲಿಲ್ಲ. ವಿವಾಹದ ಮುಹೂರ್ತ ನಿಗದಿಯಾಗಲೇ ಇಲ್ಲ!
 
ಜೀವನದಲ್ಲಿ ಅಫೇರ್‌ಗಳು ಆಗಿಲ್ಲವಾ?
   (ನಗುತ್ತಾ) ಸಾರ್ವಜನಿಕವಾಗಿ ಅಫೇರ್‌ಗಳ ಬಗ್ಗೆ ಮಾತನಾಡಬಾರದು!
 
ಕವಿತೆಯನ್ನು ಬಿಟ್ಟು ಮತ್ಯಾವ ವಿಷಯಗಳಲ್ಲಿ ನಿಮಗೆ ಆಸಕ್ತಿಯಿದೆ?
    ನನಗೆ ತಿರುಗಾಡುವ ಹುಚ್ಚು ಬಹಳ ಇದೆ. ಸಾಗರ ತೀರದಲ್ಲಿ ತಿರುಗಬೇಕು, ಹಿಮಾಲ ಯದ ತಪ್ಪಲಲ್ಲಿ ನಿಲ್ಲಬೇಕು ಎಂದು ಮನಸ್ಸು ತುಡಿಯುತ್ತಿರುತ್ತದೆೆ. ಅಡುಗೆ ಮಾಡು ವುದಕ್ಕೂ ನನಗೆ ತುಂಬಾ ಇಷ್ಟ. ತುಂಬಾ ಚೆನ್ನಾಗಿ ಕಿಚಡಿ, ಹಲ್ವಾ ಮತ್ತು ಖೀರು ಮಾಡು ತ್ತೇನೆ. ಇನ್ನು ಹಾಡು ಕೇಳ್ಳೋದು ನನಗಿಷ್ಟ. ಸಿನೆಮಾ ಹಾಡುಗಳನ್ನೂ ಕೇಳುತ್ತೇನೆ. ಹೆಚ್ಚಾಗಿ ನೋವು ತುಂಬಿರುವ ಹಾಡುಗಳು ನನಗಿಷ್ಟ. ಮೀರಾಳ ಪದ್ಯಗಳಲ್ಲಿ ಬಹಳ ನೋವಿರುತ್ತದೆ. ಹಾಗಾಗಿ ಮೀರಾಳ ಪದ್ಯಗಳನ್ನು ಆಲಿಸುತ್ತಿರುತ್ತೇನೆ.

ನೀವು ನಿಮ್ಮ ಕವನ ಸಂಗ್ರಹವನ್ನು ಪಿ.ವಿ. ನರಸಿಂಹರಾವ್‌ ಕೈಯಲ್ಲಿ ಬಿಡುಗಡೆ ಮಾಡಿಸಿದಿರಿ. ನರಸಿಂಹರಾವ್‌ ಜೊತೆಗೆ ಆಪ್ತ ಸ್ನೇಹ ಬೆಳೆಸಿದ್ದೀರಿ ಅನ್ನೋ ವಿಷಯ ಬಿಜೆಪಿಯಲ್ಲಿ ಬಹಳಷ್ಟು ಮಂದಿಗೆ ಇಷ್ಟವಾಗುತ್ತಿಲ್ಲ
     ನಾನು ಪಕ್ಷವನ್ನು ಕೇಳಿ ಸ್ನೇಹ ಬೆಳೆಸೋ ವ್ಯಕ್ತಿಯಲ್ಲ. ಬಿಜೆಪಿ ಈ ವಿಷಯದಲ್ಲಿ ತಲೆಕೆಡಿಸಿಕೊಳ್ಳಲೂ­ಬಾರದು. 

ರಾಜಕೀಯಕ್ಕೆ ಬರದಿದ್ದರೆ ಏನಾಗಿರುತ್ತಿದ್ದಿರಿ?
ನಾನು ಬಹುಶಃ ಹೆಚ್ಚು ಓದುತ್ತಾ,  ಕವಿತೆಗಳನ್ನು ಬರೆಯುತ್ತಾ ಕಾಲ ಕಳೆಯುತ್ತಿದ್ದೆ, ಶಾಲಾ ಮಾಸ್ತರನಾಗುತ್ತಿದ್ದೆ ಅಥವಾ ಅಧ್ಯಾಪಕನಾಗುತ್ತಿದ್ದೆ. ಇಲ್ಲವೇ ಪತ್ರಕರ್ತನಾಗಿ ನನ್ನ ಜೀವನವನ್ನು ಸವೆಸುತ್ತಿದ್ದೆ.  ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ ನನಗಿರಲಿಲ್ಲ. ಆದರೆ ರಾಜಕಾರಣವನ್ನು ಪ್ರವೇಶಿಸಿ ಇದರಲ್ಲಿ ಸಿಕ್ಕಿಬಿದ್ದ ಮೇಲೆ ನನಗೆ ಒಂದು ಇಚ್ಛೆ ಆರಂಭವಾಯಿತು. ಅದು ಈಗಲೂ ಇದೆ. ಇಲ್ಲಿಂದ ನಾನು ಒಂದು ಕಪ್ಪು ಚುಕ್ಕೆಯೂ ಇಲ್ಲದೆ ಹೊರಬೀಳಬೇಕು. ವಾಜಪೇಯಿ ಒಳ್ಳೆಯ ವ್ಯಕ್ತಿಯಾಗಿದ್ದ. ದೇಶವನ್ನು ಸುಧಾರಿಸಲು ಪ್ರಯತ್ನ ಮಾಡುತ್ತಿದ್ದ ಎಂದು ಜನ ನನ್ನನ್ನು ನೆನೆಸಿಕೊಂಡರೆ ಸಾಕು.  

Trending videos

Back to Top