CONNECT WITH US  

ಪರಿಪೂರ್ಣ ನಾಯಕ 

ದೇಶ ಕಂಡ ಕೆಲವೇ ಅತ್ಯುತ್ತಮ ಪ್ರಧಾನಿಗಳಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಒಬ್ಬರು. ಮುತ್ಸದ್ದಿ ಎಂಬ ಉಪಾಧಿಗೆ ಅನ್ವರ್ಥಕವಾಗಿದ್ದವರು. ಅಸ್ಖಲಿತ ವಾಗ್ಮಿ, ಕವಿ ಹೃದಯಿ, ದೃಷ್ಟಾರ ಹೀಗೆ ಸಕಲ ಅಭಿದಾನಗಳಿಗೆ ಪಾತ್ರರಾಗಿದ್ದ ಅಪರೂಪದ ವ್ಯಕ್ತಿತ್ವ ಅವರದ್ದು. 

ಆರೂವರೆ ವರ್ಷ ಮಾತ್ರ ಪ್ರಧಾನಿಯಾಗಿದ್ದರೂ ಆ ಹುದ್ದೆಯ ಘನತೆಯನ್ನು ಎತ್ತರಿಸಿದ್ದಲ್ಲದೆ ತನ್ನದೇ ಛಾಪನ್ನು ಮೂಡಿಸಿದ್ದರು. ರಾಜಕೀಯ ವಲಯದಲ್ಲಿ ಆಜಾತ ಶತ್ರು ಎಂದು ಗುರುತಿಸಿಕೊಂಡಿದ್ದ ಅಟಲ್‌ಜಿ ರಾಜಕೀಯ ವಿರೋಧಿಗಳಿರಬಹುದೇ ಹೊರತು ರಾಜಕೀಯ ವೈರಿಗಳು ಇರುವುದಿಲ್ಲ ಎಂದು ಪ್ರತಿಪಾದಿಸುತ್ತಿದ್ದರು, ಅದರಂತೆಯೇ ಬದುಕಿದವರು. ಓರ್ವ ಪರಿಪೂರ್ಣ ನಾಯಕ ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ನಿಲ್ಲುವವರು ವಾಜಪೇಯಿ. ಐದು ವರ್ಷ ಅಧಿಕಾರ ಪೂರೈಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆ ಅವರಿಗಿತ್ತು. ಆದರೆ ಅದೊಂದೆ ಅವರ ಸಾಧನೆಯಲ್ಲ. 

ಆರ್ಥಿಕತೆ, ಮೂಲಸೌಕರ್ಯ, ವಿದೇಶಾಂಗ , ಸಾಮಾಜಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಸುಧಾರಣೆಯ ಹರಿಕಾರನಾಗಿದ್ದರು. 1991ರಲ್ಲಿ ಪಿ. ವಿ. ನರಸಿಂಹರಾವ್‌ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳನ್ನು ದಿಟ್ಟತನದಿಂದ ಮುಂದುವರಿಸಿದ ಕೀರ್ತಿ ವಾಜಪೇಯಿಗೆ ಸಲ್ಲಬೇಕು. 2004ರಲ್ಲಿ ಡಾ| ಮನಮೋಹನ ಸಿಂಗ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವಾಗ ದೇಶದ ಆರ್ಥಿಕತೆ ಸದೃಢವಾಗಿತ್ತು. ಜಿಡಿಪಿ ದರ ಶೇ. 8ರ ಮೇಲಿತ್ತು, ಹಣದುಬ್ಬರ ಶೇ. 4ರಿಂದ ಕೆಳಗಿತ್ತು. ವಿದೇಶಿ ವಿನಿಮಯ ತುಂಬಿ ತುಳುಕುವಷ್ಟಿತ್ತು. ಅಧಿಕಾರ ಕೈ ಬದಲಾಯಿಸುವಾಗ ಹೀಗೆ ಸುಸ್ಥಿರ ಆರ್ಥಿಕ ಸ್ಥಿತಿ ಬಳುವಳಿಯಾಗಿ ಸಿಗುವುದು ಬಹಳ ಅಪರೂಪದ ಸಂಗತಿ. ಅನಂತರದ ಹತ್ತು ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆ ಯಾವ ಸ್ಥಿತಿಗೆ ತಲುಪಿತು ಎನ್ನುವುದನ್ನು ದೇಶ ಕಂಡಿದೆ. ಒಂದು ವೇಳೆ ವಾಜಪೇಯಿಗೆ ಇನ್ನೊಂದು ಅವಧಿಗೆ ಪ್ರಧಾನಿಯಾಗುವ ಅವಕಾಶ ಸಿಕ್ಕಿದ್ದರೆ ಖಂಡಿತ ದೇಶ ಇನ್ನೊಂದಷ್ಟು ಬದಲಾಗುತ್ತಿತ್ತು ಎನ್ನುವುದರಲ್ಲಂತೂ ಅನುಮಾನವಿಲ್ಲ. 

ಸುವರ್ಣ ಪಥ, ಗ್ರಾಮ್‌ ಸಡಕ್‌ ಯೋಜನೆ ಹೀಗೆ ರಸ್ತೆ ಜಾಲ ಅಭಿವೃದ್ಧಿಗೊಳಿಸಲು ವಾಜಪೇಯಿ ಪ್ರಾರಂಭಿಸಿದ ಯೋಜನೆಗಳ ಫ‌ಲವನ್ನು ಈಗ ದೇಶ ಉಣ್ಣುತ್ತಿದೆ. ತೀರಾ ಗ್ರಾಮೀಣ ಭಾಗಗಳಲ್ಲೂ ಟಾರು, ಕಾಂಕ್ರೀಟು ರಸ್ತೆ ನಿರ್ಮಾಣವಾಗಿದ್ದರೆ ಅದು ಪ್ರಧಾನ ಮಂತ್ರಿ ಗ್ರಾಮ್‌ ಸಡಕ್‌ ಯೋಜನೆಯ ಫ‌ಲ. ಉದ್ದಿಮೆಗಳಲ್ಲಿರುವ ಸರಕಾರಿ ಬಂಡವಾಳವನ್ನು ಹಿಂದೆಗೆಯಲು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದ್ದು ವಾಜಪೇಯಿಯವರ ದೂರದೃಷ್ಟಿಗೊಂದು ಉದಾಹರಣೆ. ವ್ಯಾಪಾರ ಮಾಡುವುದು ಸರಕಾರದ ಕೆಲಸವಲ್ಲ ಎನ್ನುವುದು ಅವರ ನಿಲುವಾಗಿತ್ತು. ಇದೇ ನೀತಿಯನ್ನು ಪ್ರಸ್ತುತ ಸರಕಾರ ಮುಂದುವರಿಸುತ್ತಿದೆ. 

ವಾಜಪೇಯಿ ಸರಕಾರ ಅನಾವರಣಗೊಳಿಸಿದ ಹೊಸ ಟೆಲಿಕಾಂ ನೀತಿಯೇ ದೇಶದಲ್ಲಿ ಟೆಲಿಕಾಂ ಕ್ರಾಂತಿಗೆ ಕಾರಣವಾಯಿತು. ಭಾರತ್‌ ಸಂಚಾರ್‌ ನಿಗಮ್‌ ಸ್ಥಾಪನೆಯ ಮೂಲಕ ದೂರವಾಣಿ ಸಂಪರ್ಕ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದ ಶ್ರೇಯಸ್ಸು ವಾಜಪೇಯಿಗೆ ಸಲ್ಲಬೇಕು. ಅಂತೆಯೇ ಅಂತರಾಷ್ಟ್ರೀಯ ದೂರವಾಣಿ ಸೇವೆಯಲ್ಲಿ ವಿದೇಶ್‌ ಸಂಚಾರ್‌ ನಿಗಮ ಹೊಂದಿದ್ದ ಏಕಸ್ವಾಮ್ಯವನ್ನು ಮುರಿದದ್ದು ವಾಜಪೇಯಿ ಸರಕಾರ. 6ರಿಂದ 14 ವರ್ಷ ನಡುವಿನ ಮಕ್ಕಳಿಗೆ ಕಡ್ಡಾಯವಾಗಿ ವಿದ್ಯಾಭ್ಯಾಸ ಕೊಡಿಸುವ ಸರ್ವ ಶಿಕ್ಷಾ ಅಭಿಯಾನ ವಾಜಪೇಯಿಯವರ ಇನ್ನೊಂದು ಮಹತ್ವದ ಕಾರ್ಯಕ್ರಮ. ಇದುವೇ ಮುಂದೆ ಶಿಕ್ಷಣ ಹಕ್ಕು ಕಾಯಿದೆಗೆ ಬುನಾದಿಯಾಯಿತು. 

ಪಾಕಿಸ್ಥಾನ ಜತೆಗಿನ ಸಂಬಂಧ ಸುಧಾರಣೆಗೆ ಅವರು ಮಾಡಿದ ಪ್ರಯತ್ನ ಭಾರತ ಮಾತ್ರವಲ್ಲದೆ ಜಗತ್ತಿಗೆ ಮೇಲ್ಪಂಕ್ತಿಯಾಗುವಂತಿದೆ. ಹೂವಿನಂಥ ಮನಸ್ಸಿನವರಾಗಿದ್ದರೂ ಅಗತ್ಯ ಬಂದರೆ ವಜ್ರದಷ್ಟೇ ಕಠಿನ ನಿರ್ಧಾರ ಕೈಗೊಳ್ಳಬಲ್ಲೆ ಎನ್ನುವುದನ್ನು ಪರಮಾಣು ಪರೀಕ್ಷೆ, ಕಾರ್ಗಿಲ್‌ ಯುದ್ಧದಂಥ ನಿರ್ಣಾಯಕ ಸಂದರ್ಭಗಳಲ್ಲಿ ತೋರಿಸಿಕೊಟ್ಟರು. 20ರಷ್ಟು ಪಕ್ಷಗಳಿದ್ದ ಸಮ್ಮಿಶ್ರ ಸರಕಾರವನ್ನು ಯಶಸ್ವಿಯಾಗಿ ಮುನ್ನಡೆಸಿ ಮುಂದೆ ಬಂದ ಸಮ್ಮಿಶ್ರ ಸರಕಾರಗಳಿಗೆ ಮಾದರಿಯಾದರು. ಆಧುನಿಕ ರಾಜಕೀಯಕ್ಕೆ ರಾಜ ಧರ್ಮದ ಮೇಲ್ಪಂಕ್ತಿ ಹಾಕಿಕೊಟ್ಟ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಮೈತ್ರಿ ಧರ್ಮ ಎನ್ನುವ ಪದಗುಚ್ಚ ಅವರದ್ದೇ ಸೃಷ್ಟಿಯಾಗಿತ್ತು. ಈಶಾನ್ಯದ ರಾಜ್ಯಗಳಿಗೆ ದೇಶದ ಮುಖ್ಯವಾಹಿನಿಯಲ್ಲಿ ಪ್ರಾಮುಖ್ಯತೆ ಸಿಕ್ಕಿದ್ದು ವಾಜಪೇಯಿ ಕಾಲದಲ್ಲೇ. ಜನಮನಗೆದ್ದಿದ್ದ ವಾಜಪೇಯಿಗೆ ವಿಪಕ್ಷಗಳಲ್ಲೂ ಅಭಿಮಾನಿಗಳಿದ್ದರು ಎನ್ನುವುದೇ ವಿಶೇಷ. ಆಧುನಿಕ ಭಾರತದ ರಾಜಕೀಯ ಭೀಷ್ಮ ಎಂದು ಯಾರನ್ನಾದರೂ ಕರೆಯುವುದಾದರೆ ಅದು ವಾಜಪೇಯಿ.


Trending videos

Back to Top