CONNECT WITH US  

ಒಂದು ಹೆಜ್ಜೆ ಮುಂದಿದ್ದ ಯುಗದ ನಾಯಕ

ನಾವು ಅವರ ಕನಸಿನ ನವ ಭಾರತವನ್ನು ನಿರ್ಮಿಸುತ್ತೇವೆ 

ಇಡೀ ರಾಷ್ಟ್ರವೇ ಹೆಮ್ಮೆಪಟ್ಟ ಆ ಕ್ಷಣದಲ್ಲಿ ಅಟಲ್‌ ಬಿಹಾರಿ ವಾಜಪೇಯಿಯವರ ಧ್ವನಿ ಸಂಯಮ ಮತ್ತು ಜವಾಬ್ದಾರಿಗಳಿಂದ ಕೂಡಿತ್ತು. ಶಾಂತಿಯ ಈ ಮಹಾಪುರುಷನ ಸಂದೇಶವನ್ನು ವಿಶ್ವವೇ ಆಲಿಸಿತು. ಅಷ್ಟೇ ಮುಖ್ಯವಾದುದ್ದೆಂದರೆ, ನವ ವಾಸ್ತವಗಳಿಗೆ ಜಾಗತಿಕ ಅಂಗೀಕಾರವನ್ನು ಪಡೆಯಲು ಅವರು ತಮ್ಮ ಜಾಗತಿಕ ವ್ಯವಹಾರಗಳ ಅಸಾಧಾರಣ ತಿಳಿವಳಿಕೆ ಮತ್ತು ಅದ್ಭುತ ರಾಜತಾಂತ್ರಿಕ ಕೌಶಲ್ಯಗಳನ್ನು ಬಳಸಿಕೊಂಡು ಕಾರ್ಯರೂಪಕ್ಕೆ ತಂದರು.

ಪ್ರಕ್ಷುಬ್ಧತೆ ಮತ್ತು ಅಡ್ಡಿ ಆತಂಕದ ಸಮಯದಲ್ಲಿ, ತನ್ನ ಜನರಿಗೆ ದಾರಿತೋರಬಲ್ಲ, ಏಕತೆ ಮೂಡಿಸಬಲ್ಲ, ಮುನ್ನೋಟ ನೀಡಬಲ್ಲ, ತನ್ನ ನೈತಿಕ ದೃಷ್ಟಿಕೋನದಿಂದ ಮಾರ್ಗದರ್ಶನದ ಸ್ಫೂರ್ತಿಯಾಗಬಲ್ಲಂಥ‌ ನಾಯಕನನ್ನು ಪಡೆಯಲು ಯಾವುದೇ ದೇಶ ನಿಜಕ್ಕೂ ಹರಸಲ್ಪಟ್ಟಿರುತ್ತದೆ. ಶತಮಾನದ ತಿರುವಿನಲ್ಲಿ, ಅಂತಹ ಒಂದು ಸನ್ನಿವೇಶದಲ್ಲಿ ಆತ್ಮ, ಹೃದಯ ಮತ್ತು ಮನಸ್ಸಿನಲ್ಲಿ ಪ್ರತಿಭಾನ್ವಿತರಾದ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಭಾರತ ಪಡೆಯಿತು.

ನಮ್ಮಲ್ಲಿ ಅವರ ಬಗ್ಗೆ ತಿಳಿದವರಿಗೆ, ಅವರು ತಮ್ಮನ್ನು ಭೇಟಿ ಮಾಡಿದ ಪ್ರತಿಯೊಬ್ಬರ ಹೃದಯ ತಟ್ಟಿದ ಮತ್ತು ಸ್ಫೂರ್ತಿ ನೀಡಿದ ಅಪರೂಪದ ವ್ಯಕ್ತಿ. ಅವರು ಸಹಾನುಭೂತಿಯಲ್ಲಿ, ಉದಾರತೆಯ ಸ್ಫೂರ್ತಿಯಲ್ಲಿ, ಅಳತೆಗೆ ಸಿಲುಕದ ಆಪ್ತತೆಯಲ್ಲಿ, ದಯಾಪರತೆಯಲ್ಲಿ ಸರಿಸಾಟಿ ಇಲ್ಲದವರಾಗಿದ್ದರು. ಅಪಾರ ಗೌರವಕ್ಕೆ ಪಾತ್ರರಾಗಿದ್ದ ವಾಜಪೇಯಿಯವರು, ಅಪರೂಪದ ಹಾಸ್ಯ ಪ್ರವೃತ್ತಿಯನ್ನೂ ಹೊಂದಿದವರಾಗಿದ್ದರು. 

ಅಪ್ರತಿಮ ವಾಗ್ಮಿಗಳಾಗಿದ್ದ ಅವರು, ಜನರೊಂದಿಗೆ ಸ್ವಾಭಾವಿಕವಾಗಿ ಬೆರೆಯಬಲ್ಲವರಾಗಿ ನಿರಾಶೆಗೊಳಗಾದವರನ್ನೂ ಉದಾತ್ತ ದೃಷ್ಟಿಕೋನದತ್ತ ಕರೆದೊಯ್ದು ಅವರಲ್ಲಿ ಉನ್ನತ ಆದರ್ಶ ಮೂಡಿಸಬಲ್ಲ ಅಪರೂಪದ ವ್ಯಕ್ತಿಯಾಗಿದ್ದರು. ಶೀಘ್ರಗ್ರಾಹಿಯಾಗಿ, ಅವರು ಸಂಕೀರ್ಣ ಸಮಸ್ಯೆಗಳನ್ನು ಕೂಡ ಒಂದು ಪ್ರಶ್ನೆ ಅಥವಾ ವಾಕ್ಯದಲ್ಲಿ ಮನನ ಮಾಡಿಕೊಳ್ಳಬಲ್ಲವರಾಗಿದ್ದರು. ಮಧ್ಯಪ್ರದೇಶದ ಪುಟ್ಟ ನಗರದಲ್ಲಿನ ಸಾಧಾರಣ ಕುಟುಂಬದಲ್ಲಿ ಜನಿಸಿದರು ಅಟಲ್‌ಜೀ. ಸ್ವಾತಂತ್ರ್ಯ ಸಂಗ್ರಾಮ ಗರಿಗೆದರುತ್ತಿದ್ದ ಸಂದರ್ಭದಲ್ಲಿ ಅವರ ಯೌವನವು ಶೈಕ್ಷಣಿಕ ಔನ್ನತ್ಯ ಮತ್ತು ಸಾಮಾಜಿಕ ಸೇವೆಯ ತುಡಿತವನ್ನೊಳಗೊಂಡಿತ್ತು. ಆರಂಭದಲ್ಲಿ ಜನಸಂಘದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದ ಅವರು, ಸ್ವತಂತ್ರ ಭಾರತದಲ್ಲಿ ರಚನೆಯಾದ ಏಕೈಕ ನೈಜ ರಾಷ್ಟ್ರ ಮಟ್ಟದ - ಬಿಜೆಪಿ- ಪಕ್ಷವನ್ನು ಸಂಘಟಿಸಿದರು ಮತ್ತು ಶ್ರೀ ಶ್ಯಾಮಾ ಪ್ರಸಾದ್‌ ಮುಖರ್ಜಿ ಮತ್ತು ಪಂಡಿತ್‌ ದೀನದಯಾಳ್‌ ಉಪಾಧ್ಯಾಯರ ನಂತರ ಅದರ ಸಂಘಟನೆಯ ಕಾರ್ಯವನ್ನು ಕೈಗೆತ್ತಿಕೊಂಡರು.

ಸಂಸತ್ತಿನಲ್ಲಿ ನಾಲ್ಕು ದಶಕಗಳ ನಾಯಕತ್ವ, ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟ (ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಅವಿಸ್ಮರಣೀಯ ರ್ಯಾಲಿಯಲ್ಲಿ ಅವರು ಮಾಡಿದ ಭಾಷಣ ದೇಶಾದ್ಯಂತ ಸದ್ದು ಮಾಡಿದ್ದನ್ನು ಯಾರು ತಾನೆ ಮರೆಯಲು ಸಾಧ್ಯ?), ಸದಾ ರಾಷ್ಟ್ರದ ಬಗ್ಗೆ ಮಾತನಾಡುತ್ತಲೇ ತಮ್ಮ ಪಕ್ಷವನ್ನು ಉತ್ಸಾಹದಿಂದ ಪ್ರತಿನಿಧಿಸುತ್ತಿದ್ದ ಅವರು ಭಾರತದ ಪ್ರಜಾಪ್ರಭುತ್ವದ ಸ್ಫೂರ್ತಿಯನ್ನು ವ್ಯಾಖ್ಯಾನಿಸಿದ್ದರು. ತಮ್ಮ ರಾಜಕೀಯ ನಂಬಿಕೆಗಳ ವಿಚಾರದಲ್ಲಿ ದೃಢತೆ ಹೊಂದಿದ್ದ ಅಟಲ್‌ಜೀ, ಇತರರ ವಿಚಾರಗಳಿಗೂ ಮನ್ನಣೆ ನೀಡುತ್ತಿದ್ದರು, ಅವರು ಸಂಸತ್ತಿನಲ್ಲಿ ಚರ್ಚೆಗಳಿಗೆ ಒಂದು ಮಾನದಂಡವನ್ನೇ ರೂಪಿಸಿದ್ದರು. ಸರಳತೆ ಮತ್ತು ಸಮಗ್ರತೆಯಿಂದ, ಆತ್ಮಾಭಿಮಾನ ಮತ್ತು ತಾದಾತ್ಮಾನುಭೂತಿಯಿಂದ ಮತ್ತು ಕುರ್ಚಿಗೆ ಅಂಟಿಕೊಳ್ಳದ ನಿಲುವಿನಿಂದ ಅವರು ರಾಷ್ಟ್ರದ ಯುವಜನರಿಗೆ ಆದರ್ಶವಾಗಿದ್ದರು. 

ದೇಶದಲ್ಲಿ ರಾಜಕೀಯ ಅಸ್ಥಿರತೆ ಇದ್ದ ಮತ್ತು ಜಾಗತಿಕ ಅನಿಶ್ಚಿತ ವಾತಾವರಣದಿಂದ ಆರ್ಥಿಕ ಸುಧಾರಣಾ ಪ್ರಕ್ರಿಯೆ ಹಾಳಾಗಬಹುದೆಂಬ ಬೆದರಿಕೆ ಎದುರಾಗಿದ್ದ 1990ರ ಮಧ್ಯಭಾಗದಲ್ಲಿ ಅವರು ಆರ್ಥಿಕತೆಯನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ನಾವು ಕಳೆದ ಎರಡು ದಶಕಗಳಿಂದ ಅನುಭವಿಸುತ್ತಿರುವ ಆರ್ಥಿಕ ಯಶಸ್ಸಿನ ಬೀಜವನ್ನು ಅವರು ಅಂದು ಬಿತ್ತಿದ್ದರು. ಅವರ ದೃಷ್ಟಿಯಲ್ಲಿ ಪ್ರಗತಿ ಎನ್ನುವುದು ಅತಿ ದುರ್ಬಲರ ಸಬಲೀಕರಣ ಮತ್ತು ವಂಚಿತರನ್ನು ಮುಖ್ಯವಾಹಿನಿಗೆ ತರುವುದಾಗಿತ್ತು. ಅದು ನಮ್ಮ ಸರ್ಕಾರದ ನೀತಿಯನ್ನು ಮುಂದುವರೆಸುತ್ತಿರುವ ದೃಷ್ಟಿಕೋನವಾಗಿದೆ.

21 ನೇ ಶತಮಾನದಲ್ಲಿ ಜಾಗತಿಕ ನಾಯಕತ್ವವನ್ನು ವಹಿಸಿಕೊಳ್ಳಲು ಸಿದ್ಧವಾಗುವಂಥ ಭಾರತಕ್ಕೆ ಅಟಲ್‌ಜೀ ಬುನಾದಿ ಹಾಕಿಕೊಟ್ಟಿದ್ದರು. ಅವರ ಸರಕಾರದ ದೂರದರ್ಶಿತ್ವದ ಆರ್ಥಿಕ ನೀತಿಗಳು ಮತ್ತು ಸುಧಾರಣೆಗಳು ಹಲವಾರು ಭಾರತೀಯರಿಗೆ ಸಮೃದ್ಧಿಯನ್ನು ಒದಗಿಸಿವೆ. ಮುಂದಿನ ಪೀಳಿಗೆಯ ಮೂಲಭೂತ ಸೌಕರ್ಯಗಳ ಮೇಲೆ ಅದರಲ್ಲೂ ವಿಶೇಷವಾಗಿ ರಸ್ತೆಗಳು ಮತ್ತು ಟೆಲಿಕಾಂಗೆ ಅವರು ನೀಡಿದ ಒತ್ತು, ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಕೊಡುಗೆ ನೀಡಿದೆ.

ಅಟಲ್‌ ಜೀ ಅವರು ವಿಶ್ವದಲ್ಲಿ ಬದಲಾಯಿಸಲಾಗದ ರೀತಿಯಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸಿದರು. ಭಾರತವನ್ನು ಪರಮಾಣು ಶಸ್ತ್ರ ಶಕ್ತ ರಾಷ್ಟ್ರವನ್ನಾಗಿ ಮಾಡುವಲ್ಲಿ, ನಮ್ಮ ರಾಷ್ಟ್ರದ ಬಗ್ಗೆ ಇದ್ದ ಹಿಂಜರಿಕೆ, ವಿಶ್ವದ ಪ್ರತಿರೋಧವನ್ನು ಅವರು ಮೆಟ್ಟಿನಿಂತರು. ಅದು ಅವರು ಲಘುವಾಗಿ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ, ಬದಲಾಗಿ, ಭಾರತದ ಭದ್ರತೆಗೆ ಎದುರಾಗಿದ್ದ ಸವಾಲುಗಳನ್ನು ಎದುರಿಸುವಲ್ಲಿ ಅವರು ತಳೆದಿದ್ದ ಒಂದು ಮಹತ್ವದ ನಿರ್ಣಯವಾಗಿತ್ತು. 

ಇಡೀ ರಾಷ್ಟ್ರವೇ ಹೆಮ್ಮೆಪಟ್ಟ ಆ ಕ್ಷಣದಲ್ಲಿ, ಅವರ ಧ್ವನಿ ಸಂಯಮ ಮತ್ತು ಜವಾಬ್ದಾರಿಗಳಿಂದ ಕೂಡಿತ್ತು. ಶಾಂತಿಯ ಈ ಮಹಾಪುರುಷನ ಸಂದೇಶವನ್ನು ವಿಶ್ವ ಆಲಿಸಿತು. ಅಷ್ಟೇ ಮುಖ್ಯವಾದು¨ªೆಂದರೆ, ನವ ವಾಸ್ತವಗಳಿಗೆ ಜಾಗತಿಕ ಅಂಗೀಕಾರವನ್ನು ಪಡೆಯಲು ಅವರು ತಮ್ಮ ಜಾಗತಿಕ ವ್ಯವಹಾರಗಳ ಅಸಾಧಾರಣ ತಿಳಿವಳಿಕೆ ಮತ್ತು ಅದ್ಭುತ ರಾಜತಾಂತ್ರಿಕ ಕೌಶಲ್ಯಗಳನ್ನು ಕಾರ್ಯರೂಪಕ್ಕೆ ತಂದರು. ವಾಸ್ತವವಾಗಿ, ಇದು ವಿಶ್ವಾದ್ಯಂತ ಇಂದು ದೇಶ ಪಡೆಯುತ್ತಿರುವ ಗೌರವವು ಅಂದು ಅವರು ರೂಪಿಸಿದ ರಾಜತಾಂತ್ರಿಕತೆಯ ಸಂಯೋಜನೆಯ ಫ‌ಲವಾಗಿದೆ.

ಅಮೆರಿಕದ ಜೊತೆ ಐದು ದಶಕಗಳ ಕಾಲ ಇದ್ದ ದೂರವನ್ನು ಅವರು ಐದು ವರ್ಷಗಳ ಅವಧಿಯಲ್ಲಿ ನಿರಂತರವಾದ ವ್ಯೂಹಾತ್ಮಕ ಪಾಲುದಾರಿಕೆಯಾಗಿ ಪರಿವರ್ತಿಸಿದರು. 2000ನೇ ಇಸವಿಯಲ್ಲಿ ಅವರು ರಷ್ಯಾದೊಂದಿಗೆ ಆಳವಾದ ಸ್ನೇಹಸಂಬಂಧಕ್ಕಾಗಿ ಭಾರತವನ್ನು ಮುನ್ನಡೆಸಿದರು. ನವೆಂಬರ್‌ 2001ರಲ್ಲಿ ಅವರೊಂದಿಗೆ ರಷ್ಯಾಗೆ ಭೇಟಿ ನೀಡುವ ಸೌಭಾಗ್ಯ ನನಗೆ ದೊರೆತಿತ್ತು, ಆಗ ನಾವು ಗುಜರಾತ್‌ ಮತ್ತು ಆಸ್ಟ್ರಾಖಾನ್‌ನೊಂದಿಗೆ ಸಿಸ್ಟರ್‌ ಪ್ರಾವಿ®Õ… ಒಪ್ಪಂದವನ್ನು ಆಖೈರುಗೊಳಿಸಿದೆವು.

ಚೀನಾದೊಂದಿಗೆ ಗಡಿ ಮಾತುಕತೆಗಾಗಿ ವಿಶೇಷ ಪ್ರತಿನಿಧಿಗಳ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಹಿಂದಿನ ಕಠಿಣ ಸಮಸ್ಯೆಗಳನ್ನು ಗೆಲ್ಲಲು ಅವರು ದೃಢವಾದ ಶಾಂತಿಯುತ ಪ್ರಯತ್ನವನ್ನು ಮಾಡಿದರು. ಈ ಎರಡು ಪುರಾತನ ನಾಗರಿಕತೆಗಳು-ಬೆಳೆಯುತ್ತಿರುವ ಶಕ್ತಿಗಳಾಗಿದ್ದು-ಒಗ್ಗೂಡಿ ಶ್ರಮಿಸಿದರೆ ಜಾಗತಿಕ ಭವಿಷ್ಯವನ್ನು ರೂಪಿಸಬಹುದು ಎಂಬ ಅಟಲ್‌ಜೀ ಅವರ ನಿರ್ಣಯ ಇಂದಿಗೂ ನನ್ನ ಚಿಂತನೆಗೆ ಮಾರ್ಗದರ್ಶಿಯಾಗಿದೆ.

ಬೇರುಮಟ್ಟದಿಂದ ಬಂದ ಅವರಿಗೆ ನಮ್ಮ ನೆರೆಹೊರೆಯವರು ಆದ್ಯತೆಯಾಗಿದ್ದರು. ಹಲವು ಮಾರ್ಗದಲ್ಲಿ ಅವರು ಸ್ಫೂರ್ತಿಯಾಗಿದ್ದರು ಮತ್ತು ನಮ್ಮ ನೆರೆಹೊರೆಯ ಪ್ರಥಮ ನೀತಿಯ ಅಗ್ರೇಸರರಾಗಿದ್ದರು. ಬಾಂಗ್ಲಾದೇಶದ ವಿಮೋಚನೆಗೆ ವಿರೋಧ ಪಕ್ಷದ ಮುಖಂಡರಾಗಿ ಅವರು ತಮ್ಮ ಅಚ‌ಲ ಬೆಂಬಲ ವ್ಯಕ್ತಪಡಿಸಿದ್ದರು. ಅವರು ಶಾಂತಿ ಅರಸಿ ಲಾಹೋರ್‌ಗೆ ಹೋಗಿದ್ದರು. ಸ್ಥಿರ ಮತ್ತು ಆಶಾವಾದಿ ಸ್ವಭಾವದವರಾಗಿದ್ದ ಅಟಲ್‌ಜೀ, ಶಾಂತಿಯನ್ನು ಹುಡುಕುತ್ತಾ ಜಮ್ಮು ಮತ್ತು ಕಾಶ್ಮೀರದಲ್ಲಿನ ಸಮಸ್ಯೆಯ ಪರಿಹಾರಕ್ಕೆ ಯತ್ನಿಸಿದರು. ಆದಾಗ್ಯೂ ಕಾರ್ಗಿಲ್‌ ಯುದ್ಧ ಗೆಲ್ಲುವ ವಿಚಾರದಲ್ಲಿ ಅವರು ದೃಢವಾಗಿದ್ದರು. ನಮ್ಮ ಸಂಸತ್ತಿನ ಮೇಲೆ ದಾಳಿಯಾದಾಗ ಭಾರತದ ಮೇಲೆ ಗಡಿಯಾಚೆಗಿನ ಭಯೋತ್ಪಾದನೆಯ ಮೂಲ ಮತ್ತು ಸ್ವರೂಪವನ್ನು ವಿಶ್ವಕ್ಕೆ ಮನವರಿಕೆ ಮಾಡಿಸಿದರು.

ವೈಯಕ್ತಿಕವಾಗಿ, ಅಟಲ್‌ ಜೀ ಅವರು ನನಗೆ ಮಾದರಿ. ಗುರುವಾಗಿ, ಅವರು ನನಗೆ ಸ್ಫೂರ್ತಿ ನೀಡಿ¨ªಾರೆ. ನನಗೆ ಗುಜರಾತ್‌ನಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಜವಾಬ್ದಾರಿಯನ್ನು ನೀಡಿದ್ದರು. ಅವರು 2001ರ ಅಕ್ಟೋಬರ್‌ನ ಒಂದು ಸಂಜೆ ನನ್ನನ್ನು ಕರೆಸಿಕೊಂಡು, "ಗುಜರಾತ್‌ನ ಮುಖ್ಯಮಂತ್ರಿಯಾಗಿ ಹೋಗು' ಎಂದು ಹೇಳಿದರು. ಆಗ ಅವರಿಗೆ "ನಾನು ಸದಾ ಸಂಘಟನೆಯಲ್ಲಷ್ಟೇ ಕೆಲಸ ಮಾಡಿದವನು' ಎಂದೆ.  

ಕೂಡಲೇ ಅಟಲ್‌ಜೀ "ನೀನು ಜನರ ನಿರೀಕ್ಷೆಗಳನ್ನು ಪೂರ್ಣಗೊಳಿಸುತ್ತಿ ಎಂಬ ವಿಶ್ವಾಸ ನಮಗಿದೆ' ಎಂದು ಹೇಳಿದರು. ಅವರು ನನ್ನ ಬಗ್ಗೆ ಇಟ್ಟಿದ್ದ ನಂಬಿಕೆ ಅದಮ್ಯವಾದದ್ದು. ಇಂದು, ನಮ್ಮ ಯುವ ಶಕ್ತಿ ಮತ್ತು ಜನರ ಸಂಕಲ್ಪದಿಂದ, ಬದಲಾವಣೆಗಾಗಿ ತುಡಿಯುತ್ತಿರುವ ಮತ್ತು ಅದನ್ನು ಸಾಧಿಸುವ ವಿಶ್ವಾಸ ಹೊಂದಿರುವ ರಾಷ್ಟ್ರವಾಗಿದ್ದೇವೆ ನಾವು. ಅಲ್ಲದೇ ಎಲ್ಲಾ ಭಾರತೀಯರಿಗೆ ಅವಕಾಶ ಮತ್ತು ಸಮಗ್ರತೆಯ ಭವಿಷ್ಯ ರೂಪಿಸುವ ವಿಶ್ವಾಸಾರ್ಹ ರಾಷ್ಟ್ರ ನಮ್ಮದಾಗಿದೆ. ನಾವು ವಿಶ್ವದಲ್ಲಿ ಸಮಾನವಾಗಿ ಮತ್ತು ಶಾಂತಿಯಿಂದ ಹೆಜ್ಜೆಹಾಕಲು ಇಚ್ಛಿಸುತ್ತೇವೆ. ಅಟಲ್‌ಜೀ ಅವರು ನಮ್ಮನ್ನು ಕರೆದೊಯ್ಯಲು ಇಚ್ಛಿಸಿದ್ದ ಮಾರ್ಗದಲ್ಲೇ ಇಂದು ನಾವಿದ್ದೇವೆ. ಅವರು ತಮ್ಮ ಕಾಲಕ್ಕಿಂತ ಸದಾ ಒಂದು ಹೆಜ್ಜೆ ಮುಂದಿದ್ದರು, ಅವರಿಗೆ ಇತಿಹಾಸದ ಬಗ್ಗೆ ಆಳವಾದ ಅರಿವಿತ್ತು. ನಮ್ಮ ನಾಗರಿಕ ತತ್ವಗಳ ಗ್ರಹಿಕೆಯಿಂದ ಭಾರತದ ಆತ್ಮವನ್ನು ಶ್ರೀಮಂತಗೊಳಿಸಬಲ್ಲವರಾಗಿದ್ದರು.

ಜೀವದ ಜ್ಯೋತಿ ಆರಿ ಹೋದಾಗ ಹೊರಹೊಮ್ಮುವ ದುಃಖದ ವ್ಯಾಪ್ತಿಯಿಂದ ಮಾತ್ರವೇ ಒಂದು ಜೀವವನ್ನು ಅಳೆಯಲು ಸಾಧ್ಯವಿಲ್ಲ. ಅದನ್ನು ಕಾಲಘಟ್ಟದಲ್ಲಿ ಜನ ಜೀವನದ ಮೇಲೆ ಬೀರಿದ ಶಾಶ್ವತವಾದ ಪ್ರಭಾವದಿಂದ ಅಳೆಯಬೇಕಾಗುತ್ತದೆ. ಆ ಕಾರಣಕ್ಕಾಗಿ, ಅಟಲ್‌ ಜೀ ನಿಜವಾದ ಭಾರತದ ರತ್ನ. ನಾವು ಅವರ ಕನಸಿನಂತೆ ನವ ಭಾರತವನ್ನು ನಿರ್ಮಿಸುತ್ತಿದ್ದು, ಅವರ ಆತ್ಮ ನಮಗೆ ಸದಾ ಮಾರ್ಗದರ್ಶಿಯಾಗಿರುತ್ತದೆ.

ನರೇಂದ್ರ ಮೋದಿ


Trending videos

Back to Top