CONNECT WITH US  

ಈಗ ನನ್ನ ವರದಿಗಾರರೇ ಬೇರೆ, ಬ್ರೇಕಿಂಗ್ ಸುದ್ದಿಗಳೇ ಬೇರೆ!

ನಾನು ಮತ್ತೂಮ್ಮೆ ಖಾತ್ರಿ ಪಡಿಸಿಕೊಳ್ಳಲು ಕೇಳಿದೆ- "ಸಾರಾ, ಲಾಸ್ಟ್‌ ಟೈಮ್‌ ನೀನು ಪಾರ್ಕಿಗೆ ಬಂದಿರ್ಲಿಲ್ವಾ?'

"ಕ್ಲೀಷೆ ಮಾತಾಡ್ಬೇಡ ಬರ್ನೆ..
ನಮ್ಮ ಮೇಲೆ ನಮಗೆ ಹಿಡಿತವಿದ್ದರೆ ಸಾಕು...ಅಂತರ್ಜಾಲದ ಅಡಿಕ್ಷನ್‌ಗೂ, ಕೊಕೇನ್‌ ಅಡಿಕ್ಷನ್‌ಗೂ ಡಿಫ‌ರೆನ್ಸ್‌ ಇದೆ' ಎಂದೆ. ನಮ್ಮ ವಾದ-ಪ್ರತಿವಾದ ಯಾವ ಮಟ್ಟಕ್ಕೆ ಬೆಳೆಯಿತೆಂದರೆ, ಕೊನೆಗೆ ಬರ್ನೆ "ಹಾಗಿದ್ದರೆ 7 ದಿನ ಮೊಬೈಲ್‌ ಇಲ್ಲದೇ, ಇಂಟರ್ನೆಟ್‌ ಇಲ್ಲದೇ(ಇ-ಮೇಲ್‌ ಅಷ್ಟೇ ಚೆಕ್‌ ಮಾಡಬ ಹುದಿತ್ತು) ಬದುಕಿ ತೋರಿಸಪ್ಪ' ಎಂದು ಚಾಲೆಂಜ್‌ ಹಾಕಿದ. 

ಕೆಲ ದಿನಗಳ ಹಿಂದೆ ನನ್ನ 7 ವರ್ಷದ ಮಗಳು ಸಾರಾಳನ್ನು ಸ್ಯಾನ್‌ಫ್ರಾನ್ಸಿಸ್ಕೋದ ಗೋಲ್ಡನ್‌ ಗೇಟ್‌ ಪಾರ್ಕಿಗೆ ಕರೆದೊಯ್ದೆ. ಒಂದು ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣದ ಈ ಪಾರ್ಕಿನಲ್ಲಿ ಆಟದ ಮೈದಾನಗಳು, ಹೂದೋಟಗಳು, ಸುಂದರ ಕೆರೆಗಳು, ಗಾಲ್ಫ್ ಮೈದಾನಗಳು, ಪುರಾತನ ವೃಕ್ಷಗಳು, ಪಕ್ಷಿಗಳು ಯಾವ ಪ್ರಮಾಣ ದಲ್ಲಿವೆಯೋ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರೂ ಇರುತ್ತಾರೆ. ಗೋಲ್ಡನ್‌ ಗೇಟ್‌ ಪಾರ್ಕಿಗೆ ನಾನು ಕಳೆದ 1 ವರ್ಷದಲ್ಲಿ ಹಲವು ಬಾರಿ ಬಂದಿದ್ದೆ. ಬೇಸಿಗೆಯ ರಜೆಗೆಂದು ಅಣ್ಣನ ಮಕ್ಕಳು ಮನೆಗೆ ಬಂದಾಗ ಅವರನ್ನು ಕರೆದೊಯ್ದಿದ್ದೇನೆ, ಸಹೋದ್ಯೋಗಿಗಳೊಂದಿಗೆ, ಸ್ನೇಹಿತರೊಂದಿಗೆ, ಮಡದಿಯೊಂದಿಗೂ ಬಂದಿದ್ದೇನೆ. ಒಟ್ಟು ಎಷ್ಟು ಬಾರಿ ಬಂದಿರಬಹುದು ಎಂದು ಲೆಕ್ಕ ಹಾಕಲು ಪ್ರಯತ್ನಿಸಿದೆ. ಊಹೂಂ ಎಷ್ಟು ನೆನಪು ಮಾಡಿಕೊಂಡರೂ, ತಲೆಕೆರೆದುಕೊಂಡರೂ ಲೆಕ್ಕವೇ ಸಿಗುತ್ತಿಲ್ಲ...

1...2....3...4 ಎಂದು ನಾನು ಎಣಿಸುತ್ತಿರುವಾಗಲೇ ಸಾರಾ ಕೈ ಜಗ್ಗಿ "ಅಪ್ಪಾ ಡಕ್ಸ್‌ ನೋಡೋಣ ಬಾ' ಅನ್ನುತ್ತಾ ನನ್ನನ್ನು "ಸ್ಟೋ ಲೇಕ್‌' ಕೆರೆಯಂಚಿನತ್ತ ಕರೆದೊಯ್ದಳು. "ಅದೇನು ನೋಡ್ತೀಯ ಪುಟ್ಟು...ಲಾಸ್ಟ್‌ ಟೈಮ್‌ ನೋಡಿದ್ಯಲ್ಲ..' ಅಂದೆ. ಮಗಳ ಉತ್ತರ ಕೇಳಿ ನನಗೆ ಅಚ್ಚರಿಯಾಯಿತು... "ಅಪ್ಪಾ ನಾನು ಈ ಪಾರ್ಕಿಗೆ ಬರ್ತಿರೋದು ಫ‌ಸ್ಟ್‌ ಟೈಮ್‌' ಅಂದುಬಿಟ್ಟಳು ಸಾರಾ! ಕೆರೆಯ ಬದುವಿನಲ್ಲಿ ಹಾಕಿದ್ದ ಬೆಂಚಿನ ಮೇಲೆ ನಾವಿಬ್ಬರೂ ಕುಳಿತೆವು. ವೇಗವಾಗಿ ಹಾರಿ ಬಂದ ಮಲಾರ್ಡ್‌ ಡಕ್‌ಗಳು (ಹಾರುವ ಬಾತುಕೋಳಿಗಳು) ನೀರಿನ ಮೇಲೆ ನಾಜೂಕಾಗಿ ವಿಮಾನದಂತೆ ಲ್ಯಾಂಡಿಂಗ್‌ ಮಾಡಿದವು, ಮೀನುಗಳನ್ನು ಹಿಡಿಯಲು ಮುಳುಗೇಳ ತೊಡಗಿದವು. ನಾನು ಮತ್ತೂಮ್ಮೆ ಖಾತ್ರಿ ಪಡಿಸಿಕೊಳ್ಳಲು ಕೇಳಿದೆ "ಸಾರಾ, ಲಾಸ್ಟ್‌ ಟೈಮ್‌ ನೀನು ಇಲ್ಲಿ ಬಂದಿರ್ಲಿಲ್ವಾ? "ಇಲ್ಲ ಡ್ಯಾಡಿ, ಲಾಸ್ಟ್‌ ಟೈಮ್‌ ಶಿರ್ಲೆ ಬಂದಿದು'' ಅಂದಳು ಸಾರಾ. (ಶಿರ್ಲೆ ಅಂದರೆ ನನ್ನ ಹಿರಿಯ ಮಗಳು. ಈಗವಳಿಗೆ 12 ವರ್ಷ)
***
ಇದನ್ನೆಲ್ಲ ಕೇಳಿ ನನಗೆ ಮರೆವಿನ ರೋಗ ಶುರುವಾಗಿರಬಹುದು ಎಂದು ನಿಮಗೆ ಅನ್ನಿಸಬಹುದು. ರೋಗವೇನೋ ಬಂದಿತ್ತು ನಿಜ, ಆದರೆ ಮರೆವಿನ ರೋಗವಲ್ಲ, ಅದಕ್ಕಿಂತಲೂ ಭಯಾನಕವಾದ ಮೊಬೈಲ್‌ ರೋಗ!  ನಾನು ನನ್ನ ಮೊಬೈಲ್‌ನಲ್ಲಿ ಎಷ್ಟು ಮುಳುಗಿಹೋಗಿರುತ್ತಿದ್ದೆ ಎಂದರೆ ಈ ಪಾರ್ಕಿಗೆ ನಾನು ದೈಹಿಕವಾಗಿ ಪ್ರವೇಶಿಸಿದರೂ, ಮಾನಸಿಕವಾಗಿ ಮೊಬೈಲ್‌ನಲ್ಲೇ ವಿಹರಿಸುತ್ತಿದ್ದೆ. 
ಟಾಯ್ಲೆಟ್‌ ಸೀಟಿನ ಮೇಲಿದ್ದಾಗ, ಆಫೀಸಿಗೆ ಬಸ್‌ನಲ್ಲಿ ಪ್ರಯಾಣಿಸುವಾಗ, ಕಚೇರಿಯಲ್ಲಿ ಊಟ ಮಾಡುವಾಗ, ಕುಟುಂಬದವರೊಂದಿಗೆ-ಸ್ನೇಹಿತರೊಂದಿಗೆ ಕುಳಿತಾಗ, ರಾತ್ರಿ ಮಲಗುವ ಮುನ್ನ, ಬೆಳಗ್ಗೆ ಎದ್ದ ತಕ್ಷಣ...ಒಟ್ಟಿನಲ್ಲಿ ಒಂದು ಪರಾವಲಂಬಿ ಜೀವಿಯಂತೆ ಮೊಬೈಲ್‌ ನನ್ನ ಮೈಗಂಟಿಕೊಂಡುಬಿಟ್ಟಿತ್ತು ಅಥವಾ ನಾನೇ ಪರಾವಲಂಬಿಯಾಗಿ ಅದಕ್ಕೆ ಅಂಟಿಕೊಂಡಿದ್ದೆನೇನೋ?  ಆದರೆ ಸುದೈವವಶಾತ್‌ ಈ ರೋಗದಿಂದೀಗ ನಾನು ಮುಕ್ತ ನಾಗಿದ್ದೇನೆ. ""ಅಂತರ್ಜಾಲದ ಅಡಿಕ್ಷನ್‌ನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ'' ಎಂದು ನನ್ನ ಗೆಳೆಯ ಎರಿಕ್‌ ಬರ್ನೆ  ಒಮ್ಮೆ ಕಚೇರಿಯ ಕ್ಯಾಂಟೀನಿನಲ್ಲಿ ಊಟಕ್ಕೆ ಕುಳಿತಾಗ ತಮಾಷೆ ಮಾಡಿದ್ದ. ಇದನ್ನು ಕೇಳಿದ್ದೇ ನಾನು "ಕ್ಲೀಷೆ ಮಾತಾಡ್ಬೇಡ ಬರ್ನೆ..ನಮ್ಮ ಮೇಲೆ ನಮಗೆ ಹಿಡಿತವಿದ್ದರೆ ಸಾಕು...ಅಂತರ್ಜಾ ಲದ ಅಡಿಕ್ಷನ್‌ಗೂ, ಕೊಕೇನ್‌ ಅಡಿಕ್ಷನ್‌ಗೂ ಡಿಫ‌ರೆನ್ಸ್‌ ಇದೆ' ಎಂದೆ. ನಮ್ಮ ವಾದ-ಪ್ರತಿವಾದ ಯಾವ ಮಟ್ಟಕ್ಕೆ ಬೆಳೆಯಿತೆಂದರೆ, ಕೊನೆಗೆ ಬರ್ನೆ "ಹಾಗಿದ್ದರೆ 7 ದಿನ ಮೊಬೈಲ್‌ ಇಲ್ಲದೇ, ಇಂಟರ್ನೆಟ್‌ ಇಲ್ಲದೇ(ಇ-ಮೇಲ್‌ ಅಷ್ಟೇ ಚೆಕ್‌ ಮಾಡಬ ಹುದಿತ್ತು) ಬದುಕಿ ತೋರಿಸಪ್ಪ' ಎಂದು ಚಾಲೆಂಜ್‌ ಹಾಕಿದ.  ಬೆಟ್ಟಿಂಗ್‌ನಲ್ಲಿ ಸೋತರೆ ಆ ವಾರ‌ ಸೋತವರು ನಮ್ಮ ಟೀಂನ "ಬಿಯರ್‌ ಬಿಲ್‌' ಕಟ್ಟಬೇಕಿತ್ತು. ಸರಿ ಎಂದು ಚಾಲೆಂಜ್‌ಗೆ ಒಪ್ಪಿಕೊಂಡೆ. 
***
ನಾನು ವಾಸ್ತವ ಲೋಕದಿಂದ ಎಷ್ಟು ದೂರಕ್ಕೆ ಬಂದುಬಿಟ್ಟಿದ್ದೇನೆ ಎನ್ನುವುದು ಮರುದಿನ ಬೆಳಗ್ಗೆಯೇ ನನಗರ್ಥವಾಗಿ ಹೋಯಿತು. ಹಾಸಿಗೆಯ ಮುಂದಿನ ಲ್ಯಾಂಪ್‌ ಟೇಬಲ್‌ನ ಮೇಲೆಯೇ ಮಲಗಿದ್ದ ನನ್ನ ಫೋನು ಕೃಷ್ಣ ಗಹ್ವರದಂತೆ (ಬ್ಲ್ಯಾಕ್‌ ಹೋಲ್‌ನಂತೆ) ತನ್ನತ್ತ ಎಳೆದುಕೊಳ್ಳಲಾರಂಭಿಸಿತು. ಇನ್ನೇನು ನಾನು ಅದರಲ್ಲಿ ಲೀನವಾಗಬೇಕು...ಅಷ್ಟರಲ್ಲೇ ಹಿಂದಿನ ದಿನದ ಚಾಲೆಂಜ್‌ ನೆನಪಾಗಿ, ಮನಸ್ಸನ್ನು ಕಂಟ್ರೋಲ್‌ ಮಾಡಿ ಮೊಬೈಲ್‌ ಅನ್ನು ಅದರ ಪಾಡಿಗೇ ಬಿಟ್ಟು ಬಾತ್‌ರೂಮಿಗೆ ಹೋದೆ. ಕಮೋಡ್‌ ಮೇಲೆ ಕುಳಿತಿದ್ದೇನೆ...ಹೊರಗೆ ನನ್ನ ಮೊಬೈಲ್‌ನಲ್ಲಿ ನೋಟಿಫಿಕೇಷನ್‌ಗಳ ಕೂಗಿ ಕರೆಯಲಾರಂಭಿಸಿದವು. ಯಾರಾದ್ರೂ ವಾಟ್ಸಾಪ್‌ ಮೆಸೇಜ್‌ ಮಾಡಿದ್ರಾ? ಇಂಪಾ ರ್ಟೆಂಟ್‌ ಸಂದೇಶ ಇರಬಹುದಾ? ಬಹುಶಃ ಸ್ಯಾಂಟರೆಲ್ಲಿಯ (ಅವಳಾರೆಂದು ಕೇಳಬೇಡಿ) ತುಂಟ ಸಂದೇಶವಿರಬಹುದೇನೋ..ಅಥವಾ ನ್ಯೂಯಾರ್ಕ್‌ ಟೈಮ್ಸ್‌ ನ ಬ್ರೇಕಿಂಗ್‌ ನ್ಯೂಸ್‌ ಇರಬಹುದಾ? ಯಾವುದಾದರೂ ದೊಡ್ಡ ಸುದ್ದಿಯನ್ನು ನಾನು ಮಿಸ್‌ ಮಾಡಿಕೊಳ್ಳುತ್ತಿದ್ದೇನಾ? ಅದು ಹೇಗೋ ತೀವ್ರವಾಗುತ್ತಿದ್ದ ಕುತೂಹಲವನ್ನು ತಡೆಹಿಡಿದು, ಸ್ನಾನ ಮುಗಿಸಿ ರೆಡಿಯಾದೆ.  
ಆ ದಿನ ಬ್ರೇಕ್‌ ಫಾಸ್ಟ್‌ ತೀರಾ ಸಪ್ಪೆಯೆನಿಸಿತು. ಬಾಯಲ್ಲಿಬ್ರೆಡ್‌ ಇದ್ದರೂ ಮನಸ್ಸೆಲ್ಲ ಮೊಬೈಲ್‌ ನೋಟಿಫಿಕೇಷನ್‌ಗಳನ್ನು ಡಿಕೋಡ್‌ ಮಾಡುವುದರಲ್ಲೇ ವ್ಯಸ್ತವಾಗಿತ್ತು... ನಿಜ ಹೇಳುತ್ತೇನೆ, ಪ್ರತಿ ನಿತ್ಯ ಎದ್ದಾಕ್ಷಣ ನಾನು ಮೊದಲು ನೋಡುವುದೇ ಮೊಬೈಲನ್ನು. ಜಾಗತಿಕ ಸುದ್ದಿ ಓದದೇ ನನ್ನ ದಿನ ಆರಂಭವಾಗದು. ಸುದ್ದಿ ಓದಿ ಮುಗಿಸುವಷ್ಟರಲ್ಲಿ ಯಾರೋ ವಾಟ್ಸಾಪ್‌ನಲ್ಲಿ ಕಳುಹಿಸಿದ ತಮಾಷೆ ವೀಡಿಯೋ ನೋಡುವುದನ್ನೋ, ಫೇಸ್‌ಬುಕ್‌ನಲ್ಲಿ ಇನ್ಯಾರೋ ಹಾಕಿದ ಹಾಲಿಡೇ ಫೋಟೋಗಳನ್ನು ನೋಡಿ ಕರುಬುವುದನ್ನೋ ಅಥವಾ ಇನ್‌ಸ್ಟಾಗ್ರಾಂನಲ್ಲಿ ಕದ್ದುಮುಚ್ಚಿ(ಹೆಂಡತಿಗೆ ತಿಳಿಯದಂತೆ) ಮಾಡಲ್‌ಗ‌ಳ ಬೋಲ್ಡ್‌ ಪೋಸುಗಳನ್ನು ನೋಡಿ ಪುಳಕಗೊಳ್ಳುವುದನ್ನೋ ರೂಢಿಸಿಕೊಂಡಿದ್ದ ನನಗೆ ಇವ್ಯಾವೂ ಇಲ್ಲದ ದಿನಾರಂಭ ನೀರಸವಾಗಿ ಕಾಣಲಾರಂಭಿಸಿತು. 
"ಸುದ್ದಿ ತಿಳಿದುಕೊಳ್ಳದಿದ್ದರೆ ಬದುಕುವುದು ಹೇಗೆ? ನೀನು ದಡ್ಡನಾಗಿಬಿಡುತ್ತೀಯಾ...ಎಲ್ಲರೂ ನಿನಗಿಂತ ಹೆಚ್ಚು ತಿಳಿದು ಕೊಂಡುಬಿಡುತ್ತಾರೆ, ಎಲ್ಲರೂ ಅಪ್ಡೆಟ್‌ ಆಗಿಬಿಡುತ್ತಾರೆ...ಬೇಗ ತೊಗೋ ಮೊಬೈಲ್‌..ಹೋದರೆ ಹೋಯಿತು ನಾಲ್ಕು ಬಿಯರ್‌' ಎಂದಿತು ನನ್ನ ಮನಸ್ಸು. ಆದರೂ ಚಾಲೆಂಜ್‌ ಗೆಲ್ಲಲೇಬೇಕೆಂಬ ಛಲದಲ್ಲಿ ಮನದ ಮಾತು ಕೇಳದೆ ಫ್ರಿಜ್‌ನತ್ತ ಹೆಜ್ಜೆಹಾಕಿದೆ. ಆಗ ಫ್ರಿಜ್‌ನ ಮೇಲೆ ಅಂಟಿಸಿದ್ದ ಚಿತ್ರವೊಂದು ಕಣ್ಣಿಗೆ ಬಿತ್ತು. ಮಗಳು ಸಾರಾ ಬಿಡಿಸಿದ್ದ ಚಿತ್ರವದು. ವಿಕಾರವಾದ-ವಿಚಿತ್ರವಾದ ಎರಡು ಗಂಡು ಹೆಣ್ಣಿನ ರೂಪಗಳನ್ನು ಇಳಿಸಿದ್ದ ಅವಳು (ಒಂದು ನಾನು, ಇನ್ನೊಂದು ನನ್ನ ಮಡದಿ!) ಕೆಳಗೆ "ಐ ಲವ್‌ ಮಾಮ್‌ ಆಂಡ್  ಡ್ಯಾಡ್‌' ಎಂದು ಬರೆದಿದ್ದಳು. ಆ ಕ್ಷಣವೇ ನನಗರ್ಥವಾಗಿ ಹೋಯಿತು...ನಾನು ಇಂಟರ್ನೆಟ್‌ಗೆ ಅಡಿಕ್ಟ್ ಆಗಿ ಬಿಟ್ಟಿದ್ದೇನೆ! ಭ್ರಮಾಲೋಕದಲ್ಲಿ ಬದುಕುತ್ತಿದ್ದೇನೆ ಎಂದು. ಏಕೆಂದರೆ ಅವಳು ಆ ಚಿತ್ರ ಬಿಡಿಸಿ ತೋರಿಸಿದ್ದಾಗ ನಾನು ಅದನ್ನು ಸರಿಯಾಗಿ ನೋಡಿರಲೇ ಇಲ್ಲ, ಬದಲಾಗಿ ಕೂಡಲೇ ಅದರ ಫೋಟೋ ತೆಗೆದು ನನ್ನ ಫೇಸ್‌ಬುಕ್‌ನಲ್ಲಿ ಅಪ್ಲೋಡ್‌ ಮಾಡಿದ್ದೆ, ಅದೇ ಚಿತ್ರವನ್ನೂ ನನ್ನ ಮಡದಿಯೂ ಷೇರ್‌ ಮಾಡಿದ್ದಳು. ಗೆಳೆಯರು-ಬಂಧುಗಳಿಂದ "ಹೌ ಕ್ಯೂಟ್‌' "ಸಚ್‌ ಎ ವಂಡರ್‌ಫ‌ುಲ್‌ ಫ್ಯಾಮಿಲಿ' ಎಂಬ ಮೆಚ್ಚುಗೆಗಳೂ ಬಂದವು...ನಾವೂ ಬಹಳ ಖುಷಿ ಪಟ್ಟೆವು. ಆದರೆ ಒಂದೇ ಒಂದು ಬಾರಿಯೂ ನಾನು ಮಗಳಿಗೆ "ತುಂಬಾ ಚೆನ್ನಾಗಿ ಚಿತ್ರ ಬಿಡಿಸಿದ್ದೀಯ...ಥ್ಯಾಂಕ್ಯೂ' ಎಂದಿರಲೇ ಇಲ್ಲ. ಪಾಪ ಅವಳು ನಮ್ಮನ್ನು ಮೆಚ್ಚಿಸುವುದಕ್ಕೆ ಆ ಚಿತ್ರ ಬಿಡಿಸಿದ್ದರೆ, ನಾವು ಜಗತ್ತಿನಿಂದ ಮೆಚ್ಚುಗೆಪಡೆಯಲು ಅವಳ‌ ಚಿತ್ರವನ್ನು ಮಿಸ್‌ಯೂಸ್‌ ಮಾಡಿಕೊಂಡೆವು. "ಚಿತ್ರಕಾರಳಿಗೆ ಡ್ನೂ ಕ್ರೆಡಿಟ್‌' ಕೂಡ ಕೊಟ್ಟಿರಲಿಲ್ಲ.
***
ಕೂಡಲೇ ಸಾರಾಳನ್ನು ಕರೆದು ಆ ಚಿತ್ರ ತೋರಿಸುತ್ತಾ "ಇಟ್ಸ್‌ ಬ್ಯೂಟಿಫ‌ುಲ್‌' ಎಂದೆ...ಅವಳ ಕಣ್ಣರಳಿಬಿಟ್ಟವು. ನಾಚಿಕೆಯಿಂದ ಕೆನ್ನೆ ಕೆಂಪಾಗಿಸಿಕೊಂಡು ತನ್ನ ರೂಮಿನತ್ತ ಓಡಿದಳು..ನೀವು ಈಗಲೇ ಊಹಿಸಿರಬಹುದು...ಯಸ್‌, ನಾನು ಬರ್ನೆ ಹಾಕಿದ ಚಾಲೆಂಜ್‌ ಗೆದ್ದು ಬಿಟ್ಟೆ. 7 ದಿನ ಅಲ್ಲ, ಎರಡು ತಿಂಗಳಿಗೂ ಹೆಚ್ಚು ಕಾಲವಾಯಿತು ನಾನು  ಸ್ಮಾರ್ಟ್‌ಫೋನ್‌ನ ಸಂಗ ತೊರೆದಿ ದ್ದೇನೆ. ಈಗ ಬರೀ ಬೇಸಿಕ್‌ ಮೊಬೈಲ್‌ ಸೆಟ್‌ ಬಳಸುತ್ತಿದ್ದೇನಷ್ಟೆ. ಜಗತ್ತಿನ ಬ್ರೇಕಿಂಗ್‌ ನ್ಯೂಸ್‌ಗಳಾವುವೂ ನನಗೀಗ ಗೊತ್ತಿಲ್ಲ.... ಯಾವ ಸೆಲೆಬ್ರಿಟಿ ಯಾರಿಗೆ ಡಿವೋರ್ಸ್‌ ಕೊಟ್ಟ, ಯಾವ ಫೀಮೇಲ್‌ ಸ್ಟಾರ್‌ ಕಾಸ್ಮೆಟಿಕ್  ಸರ್ಜರಿ ಮಾಡಿಸಿಕೊಂಡಳು, ಟ್ರಂಪ್‌ ಏನು ಟ್ವೀಟ್‌ ಮಾಡಿದ್ದಾರೆ, ಕಿಮ್‌ ಜಾಂಗ್‌ ಉನ್‌ ಏನು ಮಾಡುತ್ತಿದ್ದಾನೆ... ಯಾವ ದೇಶದಲ್ಲಿ ಏನಾಯಿತು... ಏನಾಗ ಬಹುದು... ಊಹೂಂ ಒಂದು ಚೂರೂ ಮಾಹಿತಿ ಇಲ್ಲ. ಹಾಗಿದ್ದರೆ ನಾನು ದಡ್ಡನಾಗಿಬಿಟ್ಟೆನಾ? ಲೋಕದ ಕಣ್ಣಿಗೆ ನಾನು ಹಾಗೆಯೇ ಕಾಣಿಸಬಹುದು. ಆದರೆ ನನ್ನ ದೃಷ್ಟಿಯಲ್ಲಿ ನಾನು ಬುದ್ಧಿವಂತನಾಗಿದ್ದೇನೆ.
ಅಂದಹಾಗೆ ನಾನು ಜಗತ್ತಿನ ಬಗ್ಗೆಯೂ ನಿರಂತರ ಅಪ್ಡೆಟ್‌ ಆಗುತ್ತಿದ್ದೇನೆ... ಅಂತರ್ಜಾಲದಲ್ಲಿ, ಟಿವಿಗಳಲ್ಲಿ ಕಾಣಿಸುವ ಜಗ ತ್ತಲ್ಲ, ನನ್ನ ಕಣ್ಣೆದುರು ಇರುವ ಜಗತ್ತಿನ ಬಗ್ಗೆ. ಈಗ ನನ್ನ ಸುತ್ತಲಿರುವ ವ್ಯಕ್ತಿಗಳು, ವಸ್ತುಗಳು, ಪ್ರಾಣಿಪಕ್ಷಿಗಳೇ ನನ್ನ ವರದಿಗಾರರು. ನನ್ನ ಮನೆಯ ಪಕ್ಕದ ಗಾರ್ಡನ್‌ನಲ್ಲಿ ಓಡಾಡುವ ಗೋಲ್ಡನ್‌ ರಿಟ್ರೀವರ್‌ ನಾಯಿಗೆ ಬ್ರೆಡ್‌ಟೋಸ್ಟ್‌ ಎಂದರೆ ಎಲ್ಲಿಲ್ಲದ ಆಸೆ ಎಂಬ ಬ್ರೇಕಿಂಗ್‌ ನ್ಯೂಸ್‌ ನನಗೀಗ ಗೊತ್ತಾಗಿದೆ, ನನ್ನ ಹಿರಿಯ ಮಗಳಿಗೆ ಶಾಲೆಯ ಮುಂದಿನ ಅಂಗಡಿಯಲ್ಲಿ ಸಿಗುವ ಪ್ಯಾನ್‌ಕೇಕ್‌ಗಳೆಂದರೆ ಬಲು ಪ್ರೀತಿಯೆಂಬ ಮತ್ತೂಂದು ಬ್ರೇಕಿಂಗ್‌ ನ್ಯೂಸ್‌ ಇತ್ತೀಚೆಗಷ್ಟೇ ತಿಳಿಯಿತು, ನಾನು ನಿತ್ಯ ಎದ್ದು ಜಾಗಿಂಗ್‌ ಮಾಡುವಾಗ ತುಂಬಾ ಸೆಕ್ಸಿಯಾಗಿ ಕಾಣುತ್ತೇನೆ ಎಂಬ ಅಮೋಘ "ಬ್ರೇಕಿಂಗ್‌ ನ್ಯೂಸ್‌' ಅನ್ನು ಮಡದಿ ಕೊಟ್ಟಳು...ಒಟ್ಟಲ್ಲಿ ಅದ್ಯಾವುದೋ ಜಗತ್ತಿನ ಬಗ್ಗೆ ಅಪ್ಡೆಟ್‌ ಆಗುತ್ತಾ ಆಗುತ್ತಾ, ನನ್ನ ಜಗತ್ತನ್ನೇ ನಾನು ಮರೆತುಬಿಟ್ಟಿದ್ದೆ...  
***
""ಅಪ್ಪ ಅಲ್ನೋಡು'' ಎಂದು ಕೈ ಒತ್ತಿದಳು ಸಾರಾ...ಕೆರೆಯಲ್ಲಿನ ಬಾತುಕೋಳಿಯೊಂದು ಒಂದೇ ಏಟಿಗೆ ಅದ್ಹೇಗೋ ಎರಡು ಮೀನನ್ನು ಹಿಡಿದು ರೆಕ್ಕೆ ಬೀಸುತ್ತಾ ಹಾರಿಹೋಯಿತು.""ಅಯ್ಯಯ್ಯೋ ಬಾತುಕೋಳಿ ಮೀನನ್ನ ಎತ್ಕೊಂಡು ಹೋಯ್ತು' ಎಂದು ಕೇಕೆ ಹಾಕಿ ನಕ್ಕಳು ಸಾರಾ.  ಅವಳ ಮುಗ್ಧ ಸಂತೋಷವನ್ನು ನೋಡಿ ಮನಸ್ಸಿಗೆ ವಿಪರೀತ ಹಿತವೆನಿಸಿಬಿಟ್ಟಿತು. ತಲೆಯೆತ್ತಿ ಹಾರುತ್ತಾ ಹೊರಟ ಆ ಪಕ್ಷಿ ಮಿತ್ರರನ್ನು ನೋಡಿದೆ. ಈ ಹಕ್ಕಿಗಳೆಲ್ಲ ತಮ್ಮ ತಂಡ ಕಟ್ಟಿಕೊಂಡು ಬಂದು ಗೋಲ್ಡನ್‌ ಗೇಟ್‌ ಪಾರ್ಕಿನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವ, ತಮ್ಮ ಫೋಟೋಗಳನ್ನು ಫೇಸ್‌ಬುಕ್‌ಗೆ ಅಪ್ಡೆàಟ್‌ ಮಾಡುತ್ತಿರು ವವರ ಮೊಬೈಲ್‌ ಎತ್ತಿಕೊಂಡು ಹೋಗಬಾರದೆ ಎಂದೆನಿಸಿತು...

*ಅಲೆನ್‌ ಪರೆಲ್‌
 (ಬುಕ್‌ ಆಫ್ ಥಾಟ್ಸ್‌ನಿಂದ)

Trending videos

Back to Top