CONNECT WITH US  

ಬ್ಯಾಂಕುಗಳೇಕೆ ಸಾಲದ ಸುಳಿಯಲ್ಲಿವೆ? 

ಪ್ರತಿ ವರ್ಷ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಪ್ರಮಾಣ ಏರಿಕೆಯಾಗುತ್ತಿದ್ದು , ಅದು ವರ್ಷಾಂತ್ಯಕ್ಕೆ ಸುಮಾರು ಹತ್ತು ಲಕ್ಷ ಕೋಟಿ ಮುಟ್ಟುವ ಅಂದಾಜಿದೆ. ಸಾರ್ವಜನಿಕ ಬ್ಯಾಂಕುಗಳು ಕೋಟಿಗಟ್ಟಲೆ ಲಾಭ ಮಾಡಿದರೂ ಕೆಟ್ಟ ಸಾಲಗಳಿಗೆ ಪ್ರತ್ಯೇಕ ಲಾಭ ತೆಗೆದಿಡುವ ಲೆಕ್ಕಾಚಾರದಿಂದಾಗಿ ಹೆಚ್ಚಿನ ಬ್ಯಾಂಕುಗಳು ನಷ್ಟದ ಕೆಂಪು ನಿಶಾನೆ ತೋರಿಸಿರುವುದು ಕಳವಳಕಾರಿ ವಿಷಯ. ಇದರಲ್ಲಿ ಒಂಬತ್ತು ಸಾರ್ವಜನಿಕ ಬ್ಯಾಂಕುಗಳೇ ಇವೆ.

ನೂರಾರು, ಸಾವಿರಾರು ಕೋಟಿ ಲಾಭ ತೋರಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ ಸಾರ್ವಜನಿಕ ಹಾಗೂ ನವಯುಗ ಬ್ಯಾಂಕುಗಳು ಇಂದು ಸಾಲ ಕೊಟ್ಟು ಕೈಸುಟ್ಟುಕೊಂಡಿವೆ. ವಿತ್ತ ವರ್ಷ ಮುಕ್ತಾಯವಾಗುವ ಹೊತ್ತಿಗೆ ಒಂದು ಅಂದಾಜಿನಂತೆ ಸುಮಾರು ಹತ್ತು ಲಕ್ಷ ಕೋಟಿ ಸುಸ್ತಿ ಸಾಲಗಳ ಸುಳಿಯಲ್ಲಿ ಭಾರತೀಯ ಬ್ಯಾಂಕುಗಳು ಬೀಳಲಿವೆ ಎಂದು ಅಂದಾಜಿಸಲಾಗಿದೆ. ಒಂದು ಕಾಲದಲ್ಲಿ ಸುಸ್ತಿ ಸಾಲ ಒಟ್ಟು ಸಾಲದ ಶೇಕಡ 3ಕ್ಕಿಂತ ಮಿಗಿಲಾದರೆ ಅಲ್ಲೋಲಕಲ್ಲೋಲ ಎಬ್ಬಿಸುತ್ತಿದ್ದ ಬ್ಯಾಂಕ್‌ ಆಡಳಿತ ವರ್ಗ ಸಾವಿರಾರು ಕೋಟಿ ಪಂಗನಾಮ ಹಾಕಿ, ವಿದೇಶಕ್ಕೆ ಓಡಿ ಹೋದವರ ಬೆನ್ನ ಹಿಂದೆ ಬೀಳುವ ಪರಿಸ್ಥಿತಿಯಿಂದಾಗಿ ಗುಟ್ಟಾಗಿ ಅರ್ಥ ಮಂತ್ರಿಗಳೆ ಪರಿಸ್ಥಿತಿ ಅವಲೋಕಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ತೆಗೆದರೆ ಬೂದಿ, ಕೆದಕಿದರೆ ಕೆಂಡ ಎಂಬಂತಾಗಿದೆ ಬ್ಯಾಂಕುಗಳ ಪರಿಸ್ಥಿತಿ. ಕೋಟಿಗಟ್ಟಲೆ ಗೋಟಾಲೆಯ ದುರವಸ್ಥೆಗಳಿಗೆ ಯಾರು ಕಾರಣರು? ಯಾರಿಗೆ ಶಿಕ್ಷೆ ನೀಡಬೇಕು ಎಂಬ ಪ್ರಶ್ನೆಗೆ ಎಲ್ಲಿಯೂ ಉತ್ತರ ಸಿಗಲಾರದು. ಸ್ವತಹ ವಿತ್ತ ಸಚಿವಾಲಯ ಮೌನವಾಗಿದೆ. ಇದಲ್ಲದೆ ಸುಮಾರು 3.2ಲಕ್ಷ ಕೋಟಿ ವಸೂಲಿ ಕಷ್ಟಕರ ಸಾಲಗಳು (Stressed Loans) ಬೇರೆ ಇದು,ª 24 ಬ್ಯಾಂಕುಗಳು ಇದನ್ನು ತಗ್ಗಿಸಲು ಅಂತರ 
ಬ್ಯಾಂಕ್‌ ಒಡಂಬಡಿಕೆ ಕೂಡಾ ಮಾಡಿಕೊಂಡಿವೆ ಎನ್ನುವುದು ಗಮನಾರ್ಹ ಸಂಗೆ. 

ಕೆಟ್ಟ ಸಾಲಗಳು ಹೇಗಾಯ್ತು?
ಬ್ಯಾಂಕುಗಳಲ್ಲಿ ಕೆಟ್ಟ ಸಾಲ ಹೆಚ್ಚಾಗಲು ಸರಕಾರದ ಸಾಮಾಜಿಕ ಕಾರ್ಯಕ್ರಮಗಳನ್ನು ಬಲವಂತವಾಗಿ ಬ್ಯಾಂಕುಗಳ ಮೇಲೆ ಹೇರಿರುವುದೇ ಒಂದು ಪ್ರಮುಖ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೆಲವು ಕಲ್ಯಾಣ ಯೋಜನೆಗಳ ಫ‌ಲಾನುಭವಿಗಳು ಅದರ ಸಬ್ಸಿಡಿ ಆಸೆಗಾಗಿ ಅರ್ಜಿ ಹಾಕುತ್ತಾರೆ ವಿನಹ ಸ್ವಂತ ಉದ್ದಿಮೆ, ವ್ಯಾಪಾರ ಮಾಡಿ ಬ್ಯಾಂಕ್‌ ನೆರವು ಸದುಪಯೋಗಪಡಿಸಿಕೊಂಡು ಬದುಕಿನಲ್ಲಿ ಮುಂದೆ ಬರಬೇಕೆಂಬ ಇಚ್ಚೆ ಹೊಂದಿರುವುದಿಲ್ಲ. ಆದುದರಿಂದಲೆ ಹೆಚ್ಚಿನವರು ಸಮಾಜ ಕಲ್ಯಾಣ ಅಭಿವೃದ್ಧಿ ಸಾಲಗಳನ್ನು ತೆಗೆದು ಸ್ಟಾರ್ಟ್‌ಅಪ್‌ಗ್ಳನ್ನು ಪ್ರಾರಂಭಿಸುತ್ತಾರೆ. ಕೆಲವೇ ತಿಂಗಳಲ್ಲಿ ಇವುಗಳು ಬಾಗಿಲೆಳೆದು ಅವರು ಪಡೆದುಕೊಂಡ ಸಾಲಸುಸ್ತಿ ಸಾಲವಾಗಿ ಬದಲಾಗುತ್ತದೆ. ಜೊತೆಗೆ ಯಾವ ಖಾತರಿಯೂ ಇಲ್ಲದೆ ಕೊಟ್ಟ ಸಾಲಗಳಾಗಿರುವುದರಿಂದ ಸಾಲ ವಸೂಲಿಗೆ ಹೋದರೆ ಸಾಲಗಾರ ಸಿಗುವುದಿಲ್ಲ. 

ಇದು ಒಂದು ರೀತಿಯಾದರೆ ಇನ್ನೂ ದೊಡ್ಡ ಸಾಲಗಳ ಕತೆ ಬೇರೆಯದ್ದೇ ಕತೆ. ನಾಲ್ಕೈದು ಬ್ಯಾಂಕುಗಳ ಗುಂಪುಗಳಿಂದ (consortium banks) ಕೋಟಿಗಟ್ಟಲೆ ಸಾಲ ಪಡೆದು ಮತ್ತೆ ಆ ಹಣ ವ್ಯಾಪಾರ, ವಹಿವಾಟಿಗೆ ಸರಿಯಾಗಿ ಉಪಯೋಗಿಸಿಕೊಳ್ಳದೆ ದುರ್ಬಳಕೆ ಮಾಡಿ, ಕೊನೆಗೆ ವ್ಯಾಪಾರ ನಷ್ಟ ಅಂತ ಬ್ಯಾಂಕಿಗೆ ಕೈ ಎತ್ತುವ ಉದ್ದಿಮೆದಾರರು, ಕಾರ್ಪೊರೇಟ್‌ ಕಂಪೆನಿಗಳು ಅನೇಕ. ಬ್ಯಾಂಕ್‌ ಸಾಲ ಏನು ಕುತ್ತಿಗೆ ಒತ್ತುವುದಿಲ್ಲವಲ್ಲ, ನಿಧಾನವಾಗಿ ಕೊಟ್ಟರಾಯಿತು ಎಂಬ ಮನೋಭಾವನೆ ಹಲವು ಸಾಲ ಪಡೆದವರಲ್ಲಿದೆ. ಅದರ ಫ‌ಲವೆ ಇಂದು ವಿಜಯ ಮಲ್ಯ, ನೀರವ್‌ ಮೋದಿ, ಮಹೇಶ್‌ ಜೋಕ್ಸಿ, ಭೂಷಣ್‌ ಸ್ಟೀಲ್‌, ಅಲ್ಟ್ರಾ ಸ್ಟೀಲ್‌ನಂತಹ ದೊಡ್ಡ 
ದೊಡ್ಡ ಉದ್ದಿಮೆದಾರರು ಪಂಗನಾಮ ಹಾಕಿಯೂ ಆರಾಮವಾಗಿದ್ದಾರೆ. ಮೊದ ಮೊದಲು ಒಳ್ಳೆಯ ಸಾಲಗಾರರು ಅಂತ ಬ್ಯಾಂಕುಗಳೇ ತಾ ಮುಂದೆ, ತಾ ಮುಂದೆ ಅಂತ ಸಾಲ ಕೊಡಲು ಪೈಪೋಟಿ ನಡೆಸಿ, ಈಗ ಸಾವಿರಾರು ಕೋಟಿ ಕೆಟ್ಟ ಸಾಲಗಳ ಹೊಂಡದಲ್ಲಿ ಬಿದ್ದು ಪರಿತಪಿಸುತ್ತಿವೆ. 

ಕೃಷಿ ವಲಯದಲ್ಲೂ ಎಲ್ಲಾ ಸಾಚಾ ಅಲ್ಲ 
ಕೃಷಿ ಸಾಲ ಹಳ್ಳಿಯ ಬ್ಯಾಂಕುಗಳಲ್ಲಿ ಹೆಚ್ಚು. ಇತ್ತೀಚೆಗೆ ಈ ವಲಯದಲ್ಲಿ ಎನ್‌ಪಿಎ ಹೆಚ್ಚಾಗಲು ಆರಂಭವಾಗಿದೆ. ಇದಕ್ಕೆ ರಾಜಕೀಯ ಕಾರಣಗಳು ಸೇರಿವೆ. ಸಾಲ ಮನ್ನಾ ಬೇಡಿಕೆ ಮುಂದಿಟ್ಟುಕೊಂಡು, ಸಾಲ ಸಕಾಲದಲ್ಲಿ ಕಟ್ಟದಿರುವುದರಿಂದ, ಆದ್ಯತಾ ರಂಗಕ್ಕೆ ಕೊಟ್ಟ ಇಂತಹ ಸಾಲಗಳು ಇತ್ತೀಚೆಗಿನ ದಿನಗಳಲ್ಲಿ ಕೆಟ್ಟ ಸಾಲಗಳಾಗುತ್ತಿರುವುದು ವಿಪರ್ಯಾಸ. ಎಷ್ಟೋ ರೈತರಿಗೆ ಕಟ್ಟುವ ತಾಕತ್ತಿದ್ದರೂ ಮನ್ನಾ ಆಗುವ ನಿರೀಕ್ಷೆಯಲ್ಲಿ ಕಟ್ಟದೆ ಉದ್ದೇಶಪೂರ್ವಕ ಸುಸ್ತಿದಾರರಿದ್ದಾರೆ. 

ಬ್ಯಾಂಕ್‌ ಮೋಸದ ಪ್ರಕರಣಗಳು 
ರಿಸರ್ವ್‌ ಬ್ಯಾಂಕಿನ ಇತ್ತೀಚೆಗಿನ ವರದಿಯಂತೆ, ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್‌ ಫ್ರಾಡ್‌ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿದೆಯಂತೆ. ಇದರಲ್ಲಿ ಸಿಂಹಪಾಲು ರಾಷ್ಟ್ರೀಕೃತ ಬ್ಯಾಂಕು ಗಳದ್ದೆ. ಸುಮಾರು 32,048 ಕೋಟಿಯಷ್ಟು ಮೋಸದ ಪ್ರಕರಣ ಗಳು ಬ್ಯಾಂಕಿಂಗ್‌ ವಲಯದಲ್ಲಿ ನಡೆದಿದ್ದು, ಇದರಲ್ಲಿ ಚಿನ್ನ, ವಜ್ರ, ಕೈಗಾರಿಕಾ ವಲಯ, ಸುದ್ದಿ ಸಂಸ್ಥೆ, ವಿಮಾನಯಾನ ಮತ್ತು ಸರ್ವಿಸ್‌ ಸಂಸ್ಥೆ ಮತ್ತು ಚೆಕ್‌ ಬೌನ್ಸ್‌ ಪ್ರಕರಣಗಳದ್ದೇ ಸಿಂಹಪಾಲು. ಇದರಲ್ಲಿ ಬ್ಯಾಂಕ್‌ ಸಿಬ್ಬಂದಿಗಳು ಶಾಮೀಲಾಗಿರುವ ಪ್ರಕರಣಗಳೂ ಇವೆ. ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾ ಮೋಸದ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ. 

ಅನುತ್ಪಾದಕ ಸಾಲಗಳ ಹೆಚ್ಚಳಕ್ಕೆ ಅಡಿಯಿಂದ ಮುಡಿಯವರೆಗೆ ಬ್ಯಾಂಕುಗಳ ತಪ್ಪುಗಳು ಇವೆ. ಶಾಖಾ ವಲಯದಿಂದ ಹಿಡಿದು ಆಡಳಿತ ಮಟ್ಟದವರೆಗೆ ಇಟ್ಟ ತಪ್ಪು ಹೆಜ್ಜೆಗಳನ್ನು ಅಲ್ಲಗಳೆ ಯುವಂತಿಲ್ಲ. ಇತ್ತೀಚೆಗೆ ಭಾಷೆ ಬರದಿದ್ದವರು, ಸ್ಥಳೀಯವಾಗಿ ಉತ್ತಮ ಗ್ರಾಹಕ ಸಂಬಂಧವೇ ಇಲ್ಲದವರನ್ನು ನೇಮಕ ಮಾಡಿ ಕಾರ್ಯ ನಿರ್ವಹಿಸಲು ಕಳುಹಿಸುತ್ತಿರುವುದರಿಂದ ಸಾಲ ಕೊಡಬೇಕೆಂಬ ಟಾರ್ಗೆಟ್‌ಗೆ ಬಿದ್ದು, ಸಾಲಗಾರರ ಆಯ್ಕೆಯಲ್ಲಿ ಲೆಕ್ಕಾಚಾರ ತಪ್ಪಿ ಅವು ಮುಂದೆ ಕೆಟ್ಟ ಸಾಲಗಳಾದ ಪ್ರಕರಣಗಳು ಒಂದು ಕಾರಣವಾದರೆ ಇನ್ನು ಕೆಲವು ಮೇಲ್ಮಟ್ಟದ ಶಿಫಾರಸು, ಒತ್ತಡಕ್ಕೆ ಮಣಿದು ಕೊಟ್ಟಂಥವುಗಳು ಕೆಟ್ಟ ಸಾಲಗಳಾಗಿವೆ. ಬಡವರ ಸಾಲಕ್ಕೆ ಹತ್ತು ಸಲ ಅಲೆದಾಡಿಸುವ ಬ್ಯಾಂಕುಗಳು ಅದೇ ಕಾರ್ಪೊರೇಟ್‌ ಸಾಲವನ್ನು ಮನೆ ಬಾಗಿಲಿಗೆ ಒಯ್ದು ನೀಡುತ್ತಿರುವುದೇ ಇಂದಿನ ದುರ್ಗತಿಗೆ ಕಾರಣ.

ಹಾಗೆಯೇ ಮೇಲ್ಮಟ್ಟದಲ್ಲಿ ಬ್ಯಾಂಕುಗಳ ತಪ್ಪು ನಿರ್ಣಯಗಳು ಇವೆ. ಹಿಂದೆ ಕಂಪೆನಿಗಳಿಗೆ ವರ್ಕಿಂಗ್‌ ಕ್ಯಾಪಿಟಲ್‌ ರೂಪದಲ್ಲಿ ಸಾಲ ಕೊಡುತ್ತಿದ್ದ ಬ್ಯಾಂಕುಗಳು, ಇತ್ತೀಚೆಗೆ ಠೇವಣಿ ಶೇಖರಣೆ ಹೆಚ್ಚಾಗಿ ಲಾಭ ಹೆಚ್ಚು ಮಾಡಲು ಯೋಜನೆಗಳಿಗೆ ಸಾಲ ಕೊಡಲು ಸುರು ಮಾಡಿದ್ದೇ ಬ್ಯಾಂಕುಗಳ ಕೆಟ್ಟ ಸಾಲಗಳ ದುರವಸ್ಥೆಗೆ ಕಾರಣ ಎಂದು ಸ್ವತಃ ರಿಸರ್ವ್‌ ಬ್ಯಾಂಕ್‌ ಹೇಳಿದೆ. ಈ ಹಂತದಲ್ಲಿ ಖಾಸಗಿ ಬ್ಯಾಂಕುಗಳು ನಿಧಾನ ಹೆಜ್ಜೆ ಇಟ್ಟಿರುವುದರಿಂದ ಮೋಸದ ಪ್ರಕರಣಗಳು ಕಡಿಮೆ ಇವೆ. 

ಮರುಪಾವತಿ ಇಚ್ಛೆಯ ಕೊರತೆ 
ಅನುತ್ಪಾದಕ ಸಾಲ ಹೆಚ್ಚಾಗಲು ಸಾಲ ಹಿಂದಿರುಗಿಸಬೇಕೆಂಬ ಇಚ್ಛೆಯ ಕೊರತೆಯೂ ಕಾರಣ. ಕೆಲವರಲ್ಲಿ ಬೇಕಾದಷ್ಟು ಭೂಮಿ, ಆದಾಯವಿದ್ದರೂ ಸಾಲ ಕಟ್ಟಬೇಕೆಂಬ ಬುದ್ಧಿ ಇಲ್ಲ. ಇವರನ್ನು ಬ್ಯಾಂಕಿಂಗ್‌ ಭಾಷೆಯಲ್ಲಿ "ಉದ್ದೇಶಿತ ಸುಸ್ತಿದಾರರು' (wilful defaulties) ಎಂದು ಕರೆಯುತ್ತಾರೆ. ಸಾಲ ಬಾಕಿ ಇದ್ದರೆ ಕೆಲವು ನಾಗರಿಕ ಸೌಲಭ್ಯ ಸಿಗುವುದಿಲ್ಲ ಎಂಬ ಕಠಿನ ಕಾನೂನು ತಂದರೆ ತಾನಾಗಿಯೇ ಇಂತಹ ಸುಸ್ತಿ ಸಾಲಗಳು ಕಮ್ಮಿಯಾಗುತ್ತವೆ. 

ಸಿಬ್ಬಂದಿ ಕೊರತೆ 
ಬ್ಯಾಂಕಿಂಗ್‌ ವಲಯದಲ್ಲಿ ಅದರಲ್ಲೂ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಸಾಲ ವಸೂಲಾತಿ ಮತ್ತು ಗ್ರಾಹಕ ಸಂಪರ್ಕ ಅಭಿವೃದ್ಧಿ ಪಡಿಸಲು ಸಿಬ್ಬಂದಿ ಕೊರತೆ ಇದೆ. ಒಂದೊಂದು ಶಾಖೆಯಲ್ಲಿ 100-500 ಕೋಟಿ ವ್ಯವಹಾರ ಇದ್ದರೂ ಬೆರಳೆಣಿಕೆಯ, ಭಾಷೆ ಗೊತ್ತಿಲ್ಲದ ಸಿಬ್ಬಂದಿಯನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಈಗಲೂ ಇದೆ. ಬ್ಯಾಂಕ್‌ ಮ್ಯಾನೇಜರ್‌ ಕ್ಯಾಬಿನ್‌ನಲ್ಲಿ ಕುಳಿತು ಕೆಲಸ ಮಾಡುವುದಾದರೆ ಕೆಟ್ಟ ಸಾಲದ ವಸೂಲಿಯನ್ನು ಬೆನ್ನುಹತ್ತುವುದು ಹೇಗೆ ಸಾಧ್ಯ? ಕಂಪ್ಯೂಟರುಗಳು ಇದ್ದರೂ ಅದರಲ್ಲಿ ಕೆಲಸ ಮಾಡಲು ನುರಿತ ಸಿಬ್ಬಂದಿಗಳು ಬೇಕಲ್ಲವೆ? ಸಿಬ್ಬಂದಿ ನೇಮಕ ಅತ್ಯಗತ್ಯ ಎಂದು ಎಲ್ಲಾ ಬ್ಯಾಂಕುಗಳು ಅರ್ಥ ಮಾಡಿಕೊಳ್ಳಬೇಕು. ಸ್ಥಳೀಯ ಭಾಷೆಯ ಜ್ಞಾನ ಗ್ರಾಹಕ ಸೇವೆಗೆ ಬೇಕು. ಎಫ್ಆರ್‌ಡಿಎ ಮಸೂದೆಯನ್ನು ಸರಕಾರ ಕೈಬಿಟ್ಟಿದೆ. ಇಲ್ಲವಾದರೆ ಈ ರೀತಿ ಲಕ್ಷಗಟ್ಟಲೆ ಕೆಟ್ಟ ಸಾಲ ತೋರಿಸಿದರೆ, ಜನರು ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಹೆದರುವ ಸಾಧ್ಯತೆಯಿತ್ತು. ಕೇಂದ್ರ ಸರಕಾರ ಎಷ್ಟೆಂದು ಬಂಡವಾಳ ಭರಪೂರಣ ಮಾಡಲು ಸಾಧ್ಯ? ಬ್ಯಾಂಕುಗಳೇ ಯೋಚಿಸಬೇಕಾಗಿದೆ.

- ನಾಗ ಶಿರೂರು


Trending videos

Back to Top