CONNECT WITH US  

ಅಪ್ಪ ಕನಸಿಗೆ ಬಂದಾಗ ನನ್ನನ್ನೂ ಎಬ್ಬಿಸಮ್ಮಾ...

ವೀರಯೋಧನ ಪತ್ನಿಯಾಗಲು ನಾನು, ಅಂಥ ತಂದೆಯನ್ನು ಪಡೆಯಲು ಮಕ್ಕಳೂ ಪುಣ್ಯ ಮಾಡಿದ್ವಿ

ವಿಶೇಷ ವಿಮಾನದಲ್ಲಿ ಶಫೀಕ್‌ ಅವರ ದೇಹವನ್ನು ತಂದ ದಿನವೇ ಅಚ್ಚರಿಯೊಂದು ನಡೆಯಿತು. ನೆರೆದಿದ್ದವರೆಲ್ಲ ಶಫೀಕ್‌ರ ಗುಣಗಾನ ಮಾಡುತ್ತಿದ್ದಾಗಲೇ "ಪೋಸ್ಟ್‌' ಎಂದುಕೊಂಡು ಅಂಚೆಯವನು ಬಂದುಬಿಟ್ಟ. ಹಾಗೆ ಬಂದದ್ದು, ನಾಲ್ಕು ದಿನಗಳ ಹಿಂದೆ ಶಫೀಕ್‌ ಬರೆದ ಪತ್ರವಾಗಿತ್ತು! 

ಇಸವಿ 2001ರಲ್ಲಿ, ದೇಶದ ಗಡಿಭಾಗದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯೇ "ಆಪರೇಷನ್‌ ರಕ್ಷಕ್‌'. ಈ ಕಾರ್ಯಾಚರಣೆಯಲ್ಲಿ ಹುತಾತ್ಮರಾದವರ ಪೈಕಿ, ಯೋಧ ಶಫೀಕ್‌ ಅವರೂ ಇದ್ದರು. ಅವರೊಂದಿಗಿನ ಒಡನಾಟ, ಅವರನ್ನು ಕಳೆದುಕೊಂಡ ನಂತರ ಜೊತೆಯಾದ ತಲ್ಲಣದ ಕ್ಷಣಗಳನ್ನು ಶಫೀಕ್‌ರ ಪತ್ನಿ ಸಲ್ಮಾ ಇಲ್ಲಿ ಹಂಚಿಕೊಂಡಿದ್ದಾರೆ...

"ಅವರ ಪೂರ್ತಿ ಹೆಸರು ಶಫೀಕ್‌ ಮೊಹಮ್ಮದ್‌ ಖಾನ್‌. ಮೈಸೂರು ಮೂಲದ ಅವರು, ನಮ್ಮ ತಂದೆ ಕಡೆಯ ಸಂಬಂಧಿ. ಅವರು, ಭಾರತೀಯ ಸೇನೆಯಲ್ಲಿ ಯೋಧರಾಗಿದ್ದರು. ರಜೆಗೆಂದು ಊರಿಗೆ ಬಂದಾಗ, ಆಗೊಮ್ಮೆ ಈಗೊಮ್ಮೆ ಬೆಂಗಳೂರಿನ ಆರ್‌.ಟಿ.ನಗರದ ನಮ್ಮ ಮನೆಗೆ ಬರುತ್ತಿದ್ದರು. ಅವತ್ತೂಂದು ದಿನ, ಮನೆಯಲ್ಲಿ ನಾನೊಬ್ಬಳೇ ಇದ್ದೆ. ಆಗಲೇ ಅನಿರೀಕ್ಷಿತವಾಗಿ ಮನೆಗೆ ಬಂದರು ಶಫೀಕ್‌. ಮನೆಮಂದಿಯೆಲ್ಲ ಇನ್ನೇನು ಬಂದುಬಿಡ್ತಾರೆ ಎಂಬ ನಿರೀಕ್ಷೆಯಲ್ಲಿಯೇ ನಾವಿಬ್ಬರೂ ಅರ್ಧದಿನ ಮಾತಾಡಿದ್ವಿ. ಅವತ್ತು ಸಂಜೆ "ಬೈ' ಹೇಳಿ ಶಫೀಕ್‌ ಹೋಗಿಬಿಟ್ಟರು. ಮರುದಿನ ಅವರ ತಾಯ್ತಂದೆಯೇ ಬಂದು- "ನಮ್ಮ ಮಗ ನಿಮ್ಮ ಮಗಳನ್ನು ಮೆಚ್ಚಿಕೊಂಡಿದಾನೆ. ಹೆಣ್ಣು ನೋಡಿಕೊಂಡು, ಮದುವೆಗೆ ಒಪ್ಪಿಗೆ ಪಡೆಯಲೆಂದೇ ಬಂದಿದೀವಿ' ಅಂದರು. ನನ್ನ ಹೆತ್ತವರಿಗೂ ಈ ಸಂಬಂಧ ಇಷ್ಟವಾಯ್ತು. ನಂತರದ ಕೆಲವೇ ದಿನಗಳಲ್ಲಿ ನಾನು ಶಫೀಕ್‌ರ ಮಡದಿಯಾದೆ. 

ನಮ್ಮ ಮದುವೆಯಾದದ್ದು 1991ರ ಜುಲೈ 11ರಂದು. ಆಗಿನ್ನೂ ನನಗೆ 19 ವರ್ಷ. ಮದುವೆಯಾಗಿ 15 ದಿನ ಕಳೆದಿಲ್ಲ; ಇವರಿಗೆ ಕರ್ತವ್ಯದ ಕರೆ ಬಂತು. ಗಂಡ ಮಿಲಿಟರಿಯಲ್ಲಿದ್ದಾನೆ. ಅವರೊಂದಿಗೆ ನಾನೂ ದೇಶಾದ್ಯಂತ, ಅದೂ ಗಡಿ ಪ್ರದೇಶಕ್ಕೆಲ್ಲ ಹೋಗಬಹುದು ಎಂದೆಲ್ಲಾ ಯೋಚಿಸಿ ನಾನು ಥ್ರಿಲ್‌ ಆಗಿದ್ದೆ, ಆದರೆ, ನಾನು ಅಂದುಕೊಂಡಂತೆ ಯಾವುದೂ ಇರಲಿಲ್ಲ. ಪಂಜಾಬ್‌ನ ಮಿಲಿಟರಿ ಕ್ವಾಟ್ರಸ್‌ಗಳಲ್ಲಿ ಯೋಧರ ಕುಟುಂಬವರ್ಗ ಇರುತ್ತಿತ್ತು. ಯೋಧರೆಲ್ಲ ಡ್ನೂಟಿಗೆ ಹೋಗುತ್ತಿದ್ದರು. ಒಮ್ಮೆ ಮನೆಯಿಂದ ಹೊರಬಿದ್ದರೆ ಮತ್ತೆ ಮನೆಗೆ ಬರಲು 2-3-6-8... ಹೀಗೆ ಎಷ್ಟು ದಿನ ಬೇಕಾದರೂ ಆಗಬಹುದಿತ್ತು.

ಅದುವರೆಗೂ, ಬೆಂಗಳೂರು-ಮೈಸೂರು ಬಿಟ್ಟರೆ, ಬೇರ್ಯಾವ ಸಿಟಿಯನ್ನೂ ನೋಡಿರಲಿಲ್ಲ. ಅಂಥವಳು ಏಕಾಏಕಿ ಪಂಜಾಬ್‌ಗ ಹೋಗಿಬಿಟ್ಟಿದ್ದೆ. ಇದು 1991ರ ಮಾತು ಅಂದೆನಲ್ಲವೆ? ಆಗೆಲ್ಲ ಮೊಬೈಲ್‌ ಇರಲಿಲ್ಲ. ಎಸ್‌ಟಿಡಿ ಮೂಲಕವೇ ಊರಿನವರೊಂದಿಗೆ ಮಾತಾಡಬೇಕಿತ್ತು. ಅತ್ತೆಮನೆ ಹಾಗೂ ತವರುಮನೆಯವರು ಸಹಜವಾಗಿಯೇ- "ಶಫೀಕ್‌ ಏನು ಮಾಡ್ತಿದಾರೆ? ಹೇಗಿದ್ದಾರೆ' ಎಂದು ಕೇಳುತ್ತಿದ್ದರು. ನಾನು- "ಅವರು ಬಾರ್ಡರ್‌ಗೆ ಡ್ನೂಟಿಗೆ ಹೋಗಿದಾರೆ. ಆಗ್ಲೆà ಮೂರು ದಿನ ಆಯ್ತು. ಇನ್ನೂ ಬಂದಿಲ್ಲ' ಎಂದೆಲ್ಲಾ ಗಟ್ಟಿಯಾಗಿ ಹೇಳಿಬಿಡುತ್ತಿದ್ದೆ. ಆಗ, ನಮ್ಮ ಜೊತೆಯಲ್ಲೇ ಇದ್ದ ಮಾವನವರು, ನನ್ನನ್ನು ಕರೆದು ಹೇಳಿದರು: "ಇದು ಬಹಳ ಸೂಕ್ಷ್ಮ ಪ್ರದೇಶ. ಉಗ್ರಗಾಮಿಗಳು ಮಾರುವೇಷದಲ್ಲಿ ಓಡಾಡುವ ಜಾಗ ಇದು. ಅವರು ನಿನ್ನ ಮಾತು ಕೇಳಿಸಿಕೊಂಡು, ಸೇನಾ ಶಿಬಿರದ ಮೇಲೆ ದಾಳಿ ಮಾಡಬಹುದು. ಹಾಗಾಗಿ ಸುತ್ತಮುತ್ತ ನೋಡಿಕೊಂಡು ಮೆತ್ತಗಿನ ದನಿಯಲ್ಲಿ ಮಾತಾಡು...'

ಮುಂದೆ ನಮ್ಮ ಬದುಕಿಗೆ ಮಗಳೂ, ಆನಂತರ ಮಗನೂ ಬಂದರು. ಮಕ್ಕಳ ಲಾಲನೆಪಾಲನೆಯ ಕಾರಣದಿಂದ ನಾನು ಬೆಂಗಳೂರಿನ ಮಿಲಿಟರಿ ಕ್ವಾಟ್ರಸ್‌ನಲ್ಲಿ ಉಳಿದೆ. "ಕರ್ತವ್ಯದ ನಿಮಿತ್ತ ನಾನು ಹೆಚ್ಚಾಗಿ ಬಂಕರ್‌ನಲ್ಲಿರ್ತೇನೆ. ಎಲ್ಲೇ ಇದ್ರೂ ಸದಾ ನಿಮ್ಮ ಒಳಿತಿಗಾಗಿ ಪ್ರಾರ್ಥಿಸ್ತಾ ಇರ್ತೇನೆ. ನೀನು ವೀರಯೋಧನ ಪತ್ನಿ, ಎಂಥಾ ಸಂದರ್ಭದಲ್ಲೂ ಹೆದರಬಾರದು. ಒಂದು ವೇಳೆ ನಾನಿಲ್ಲ ಅಂದರೂ ಕುಟುಂಬವನ್ನು, ಮಕ್ಕಳನ್ನು ಸಲಹಬೇಕು' ಎಂದೆಲ್ಲಾ ಪದೇಪದೆ ಹೇಳುತ್ತಿದ್ದರು ಶಫೀಕ್‌. ಯಾಕೆ ಹೀಗೆಲ್ಲಾ ಹೇಳ್ತೀರ ಅಂದರೆ- "ಸುಮ್ನೆà ಹೇಳ್ತಿದೀನಿ' ಅಂದು ಮಾತು ತೇಲಿಸುತ್ತಿದ್ದರು.

ನನ್ನ ಗಂಡನ ಮನಸ್ಸು ಅದೆಷ್ಟು ಒಳ್ಳೆಯದಿತ್ತು ಗೊತ್ತ? ಪ್ರತೀ ಎರಡು ದಿನಕ್ಕೆ ಒಂದು ಪತ್ರ ಬರೀತಿದ್ದರು. ಬೆಳಗಿನಿಂದ ಸಂಜೆಯವರೆಗೆ ಏನೇನಾಯ್ತು ಎಂಬ ವಿವರವೆಲ್ಲ ಪತ್ರದಲ್ಲಿ ಇರಿ¤ತ್ತು. ರಜೆಗೆಂದು ಬೆಂಗಳೂರಿಗೆ ಬಂದವರು, ನಮಗ್ಯಾರಿಗೂ ಗೊತ್ತಾಗದಂತೆ ಇಲ್ಲಿಂದ ರಾಶಿರಾಶಿ ಗ್ರೀಟಿಂಗ್‌ ಕಾರ್ಡ್ಸ್‌ ತಗೊಂಡು ಹೋಗ್ತಿದ್ರು. ಇಂಡಿಪೆಂಡೆನ್ಸ್‌ ಡೇ, ಗಣಪತಿ ಹಬ್ಬ, ಕೃಷ್ಣ ಜನ್ಮಾಷ್ಟಮಿ, ರಂಜಾನ್‌, ವೆಡ್ಡಿಂಗ್‌ ಆ್ಯನಿವರ್ಸರಿ, ಬರ್ತ್‌ಡೇ, ಫ್ರೆಂಡ್‌ಶಿಪ್‌ ಡೇ... ಹೀಗೆ ಪ್ರತಿ ಸಂದರ್ಭಕ್ಕೂ ಅವರಿಂದ ಗ್ರೀಟಿಂಗ್‌ ಕಾರ್ಡ್‌ ಬರುತ್ತಿತ್ತು. ರಜೆಗೆ ಬಂದಾಗಲಂತೂ ಇಡೀ ದಿನ ಮಕ್ಕಳೊಂದಿಗೆ ಆಟವಾಡುತ್ತಾ ಕೂತುಬಿಡುತ್ತಿದ್ದರು. ಫೋನ್‌ ಮಾಡಿದಾಗಲೂ ಅಷ್ಟೆ: ಮಕ್ಕಳು ಬೈ ಪಪ್ಪಾ$... ಅನ್ನುವವರೆಗೂ ಅವರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು.

ಅವತ್ತು 2001ರ ಭಾನುವಾರ. ನಾನವತ್ತು ಅಮ್ಮನ ಮನೆಗೆ ಹೋಗಿದ್ದೆ. ಬೆಳಗಿನಿಂದ, ಮೇಲಿಂದ ಮೇಲೆ ನಿದ್ರೆ ಬರತೊಡಗಿತ್ತು. ತಿಂಡಿ, ಕಾಫಿ, ಊಟ- ಈ ಯಾವುದರ ಪರಿವೆಯೂ ಇರಲಿಲ್ಲ. ಮರುದಿನದಿಂದ ಮಕ್ಕಳಿಗೆ ಸ್ಕೂಲ್‌ ಶುರುವಾಗುವುದಿತ್ತು. ಅವರ ಬಟ್ಟೆ, ಬ್ಯಾಗು, ಶೂ, ಬುಕ್ಸ್‌ ಎಲ್ಲವನ್ನೂ ರೆಡಿ ಮಾಡಬೇಕು ಅಂದ್ಕೊಂಡು ಸಂಜೆ ಮನೆಗೆ ಬಂದೆ. ಸೋಫಾದ ಮೇಲೆ ಕೂರುತ್ತಿದ್ದಂತೆಯೇ ಬಲಗಣ್ಣು ಪಟಪಟನೆ ಹೊಡೆದು ಕೊಳ್ಳತೊಡಗಿತು. ಬ್ಲಾಂಕ್‌ ಮೈಂಡ್‌ ಅಂತೀವಲ್ಲ; ಹಾಗೆ ಆಗ್ತಿತ್ತು. ಬೆಳಗಿನಿಂದ ಇದೇ ಥರ ಆಗ್ತಿದೆಯಲ್ಲ, ಯಾಕೆ ಅಂದುಕೊಂಡೆ. ಆಗಲೇ ಐದಾರು ಮಂದಿ ಆರ್ಮಿ ಆಫೀಸರ್‌ಗಳು ನಮ್ಮ ಮನೆಗೆ ಬಂದರು. ಆರ್ಮಿ ಮುಖ್ಯಸ್ಥರು, ನನ್ನ ಭುಜವನ್ನು ಗಟ್ಟಿಯಾಗಿ ಹಿಡ್ಕೊಂಡು ಹೇಳಿದರು: "ಬಾರ್ಡರ್‌ನಲ್ಲಿ ಆಪರೇಷನ್‌ ರಕ್ಷಕ್‌ ಹೆಸರಿನ ಕಾರ್ಯಾಚರಣೆ ನಡೀತು. ಅದರಲ್ಲಿ ನಾಲ್ಕು ಮಂದಿ ಉಗ್ರರನ್ನು ಹೊಡೆದುಹಾಕಿದ ಶಫೀಕ್‌ ಕಡೆಗೆ ತಾನೂ ಉಗ್ರರ ಗುಂಡಿಗೆ ಬಲಿಯಾಗಿಬಿಟ್ಟಿದ್ದಾರೆ. ಸಮಾಧಾನ ಮಾಡ್ಕೊà ಮಗಳೇ...'

ಅಷ್ಟೆ: ನಿಂತ ನೆಲವೇ ಕುಸಿದಂತಾಯಿತು. "ಅಮ್ಮಾ' ಎಂದು ಚೀರುತ್ತಾ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟೆ. ಎಚ್ಚರವಾದಾಗ, ಸುತ್ತಲೂ ಅಧಿಕಾರಿಗಳು, ಬಂಧುಗಳು ಇದ್ದರು. ಎಲ್ಲರೂ ಸಮಾಧಾನ ಹೇಳುತ್ತಿದ್ದರು. ಶುಕ್ರವಾರ ಸಂಜೆಯಷ್ಟೇ ಫೋನ್‌ ಮಾಡಿ ಮಾತಾಡಿದ್ದ ಶಫೀಕ್‌, ಭಾನುವಾರದ ಹೊತ್ತಿಗೆ ಇಲ್ಲ ಅಂದರೆ ನಂಬುವುದಾದರೂ ಹೇಗೆ? 

ವಿಶೇಷ ವಿಮಾನದಲ್ಲಿ ಶಫೀಕ್‌ ಅವರ ದೇಹವನ್ನು ತಂದ ದಿನವೇ ಅಚ್ಚರಿಯ ಸಂಗತಿಯೊಂದು ನಡೆಯಿತು, ನೆರೆದಿದ್ದವರೆಲ್ಲ ಶಫೀಕ್‌ರ ಗುಣಗಾನ ಮಾಡುತ್ತಿದ್ದಾಗಲೇ "ಪೋಸ್ಟ್‌' ಎಂದುಕೊಂಡು ಅಂಚೆಯವನು ಬಂದುಬಿಟ್ಟ. ಹಾಗೆ ಬಂದದ್ದು, ನಾಲ್ಕು ದಿನಗಳ ಹಿಂದೆ ಶಫೀಕ್‌ ಬರೆದ ಪತ್ರವಾಗಿತ್ತು! ವಿಪರ್ಯಾಸ ನೋಡಿ: ಪತ್ರದೊಳಗೆ ಪಿಸುಮಾತುಗಳಿದ್ದವು. ಆದರೆ, ಪತ್ರ ಬರೆದವನು ಶಾಶ್ವತವಾಗಿ ಮಾತು ನಿಲ್ಲಿಸಿ, ದಿಗಂತದಾಚೆಗೆ ಹೋಗಿಬಿಟ್ಟಿದ್ದ.

ಮಕ್ಕಳಿಬ್ಬರೂ ಅಪ್ಪನನ್ನು ವಿಪರೀತ ಹಚ್ಚಿಕೊಂಡಿದ್ದರು. ಚಿಕ್ಕವಯಸ್ಸಲ್ಲವೆ? ಮೊದಲಿಗೆ, ನಡೆದಿದ್ದೇನು ಎಂದು ಅವರಿಗೆ ಅರ್ಥವಾಗಲಿಲ್ಲ. "ಅಪ್ಪನಿಗೆ ರಜೆ ಇಲ್ಲ. ಅವರು ಡ್ನೂಟೀಲಿ ಇದಾರೆ' ಎಂದೇ ನಾವೂ ಸುಳ್ಳು ಹೇಳಿದ್ದೆವು. ಕೆಲದಿನಗಳ ನಂತರ ಮಗ ಕೇಳಿಬಿಟ್ಟ: "ಅಮ್ಮಾ, ಮೊದಲೆಲ್ಲಾ ಅಪ್ಪ ವಾರಕ್ಕೊಮ್ಮೆ ಫೋನ್‌ ಮಾಡ್ತಿದ್ರಲ್ವ? ಈಗ ಯಾಕೆ ಮಾಡಲ್ಲ?' 

"ಅಪ್ಪನಿಗೆ, ಫೋನ್‌ ಮಾಡುವಷ್ಟು ಪುರುಸೊತ್ತು ಇಲ್ಲ ಮಗನೇ. ಹಾಗಂತ ಅವರು ನಮ್ಮನ್ನು ಮರೆತಿಲ್ಲ, ನನ್ನ ಕನಸಿಗೆ ಬಂದು ಮಾತಾಡ್ತಾರೆ' ಎಂದು ಮತ್ತೂಂದು ಸುಳ್ಳು ಹೇಳಿದೆ. ಮಗ ಮರುಕ್ಷಣವೇ- "ಅಮ್ಮ ಅಮ್ಮ, ಒಂದ್‌ ಕೆಲ್ಸ ಮಾಡು, ಅಪ್ಪ ಕನಸಿಗೆ ಬರ್ತಾರಲ್ಲ, ಆಗ ನನ್ನನ್ನ ಎಬ್ಬಿಸಿಬಿಡು, ನಾನೂ ಸ್ವಲ್ಪ ಮಾತಾಡ್ತೀನಿ. ಇಲ್ಲಾಂದ್ರೆ ನನ್ನ ಕನಸಿಗೂ ಬರೋಕೆ ಹೇಳು' ಅಂದುಬಿಟ್ಟ.

ಮುಂದಿನ ಕೆಲವೇ ದಿನಗಳಲ್ಲಿ ನಡೆದಿರುವುದೇನೆಂದು ಮಗಳಿಗೆ ಅರ್ಥವಾಯಿತು. ಆದರೆ, ಆಗಿನ್ನೂ ಎಲ್ಕೇಜಿಯಲ್ಲಿದ್ದ ಮಗ ನನ್ನ ಮಾತುಗಳನ್ನೇ ನಂಬಿದ್ದ. ಪೇರೆಂಟ್‌-ಟೀಚರ್‌ ಮೀಟಿಂಗಿಗೆ, ಶಾಲೆಯ ಇತರೆ ಕಾರ್ಯಕ್ರಮಗಳಿಗೆ, ಉಳಿದೆಲ್ಲ ಮಕ್ಕಳೂ ಅಪ್ಪಂದಿರೊಂದಿಗೆ ಬರುತ್ತಿದ್ದರು. ಆಗೆಲ್ಲಾ ನನ್ನ ಮಗ, "ಅಪ್ಪನನ್ನು ನೋಡಬೇಕು, ಅವರ ಕೈಬೆರಳು ಹಿಡಿದು ನಡೀಬೇಕು. ಒಂದ್ಸಲ ಅವರನ್ನು ತಬ್ಬಿಕೊಳ್ಳಬೇಕು ಅಂತೆಲ್ಲಾ ಆಸೆ ಆಗುತ್ತಮ್ಮಾ. ನನ್ನ ಫ್ರೆಂಡ್ಸೆಲ್ಲಾ ಅಪ್ಪಂದಿರ ಜೊತೆ ಬರ್ತಾರೆ. ನಾನು ಮಾತ್ರ ಒಂಟಿ ಹೋಗಬೇಕು. ಪ್ಲೀಸ್‌, ಈ ಸಲ ಅಪ್ಪ ಕನಸಿಗೆ ಬಂದಾಗ ಇದನ್ನೆಲ್ಲ ಹೇಳು. ಲೀವ್‌ ತಗೊಂಡು ಬನ್ನಿ ಅಂತ ರಿಕ್ವೆಸ್ಟ್‌ ಮಾಡಮ್ಮಾ' ಅನ್ನುತ್ತಿದ್ದ. ಕೆಲವೊಮ್ಮೆ, ನಿದ್ರೆಯಲ್ಲೂ-ಪಪ್ಪ, ನನ್ನ ಕನಸಿಗೂ ಬನ್ನಿ. ಒಂದ್ಸಲ ನಿಮ್ಮನ್ನ ಹಗ್‌ ಮಾಡ್ಬೇಕು. ನಿಮ್ಮ ಹೊಟ್ಟೆಮೇಲೆ ಕಾಲು ಹಾಕ್ಕೊಂಡು ಮಲಗಬೇಕು ಅನ್ನುತ್ತಿದ್ದ. ಆಗೆಲ್ಲಾ ದುಃಖ ಉಮ್ಮಳಿಸಿ ಬರಿ¤ತ್ತು. ಸಮಾಧಾನ ಆಗುವಷ್ಟು ಅತ್ತು ಹಗುರಾಗ್ತಿದ್ದೆ.

ಸತ್ಯವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ? ಕಡೆಗೊಮ್ಮೆ, ಮನಸ್ಸು ಗಟ್ಟಿ ಮಾಡಿಕೊಂಡು ಮಗನಿಗೆ, ವಾಸ್ತವ ಸಂಗತಿ ಹೇಳಿ ಬಿಟ್ಟೆ: "ಬಾರ್ಡರ್‌ನಲ್ಲಿ ಕೆಲಸ ಮಾಡ್ತಾರಲ್ಲ; ಆಗ ನಡೆಯುವ ಗುಂಡಿನ ಕಾಳಗದಲ್ಲಿ ಎಷ್ಟೋ ಯೋಧರ ದೇಹವೇ ಸಿಗೋದಿಲ್ಲ. ಕೆಲವೊಮ್ಮೆ ಸಿಕ್ಕಿದರೂ, ಅದು ಗುರುತು ಹಿಡಿಯಲು ಆಗದಷ್ಟು ವಿಕಾರವಾಗಿರ್ತದೆ. ಆದ್ರೆ ನಮಗೆ ಹಾಗೇನೂ ಆಗಿಲ್ಲ. ಮುಖ್ಯವಾಗಿ, ನಿಮ್ಮ ತಂದೆಯ ಬೆನ್ನಿಗೆ ಗುಂಡು ಬಿದ್ದಿಲ್ಲ. ಅದರರ್ಥ: ಅವರು ಯಾವ ಕ್ಷಣದಲ್ಲೂ ಶತ್ರುಗಳಿಗೆ ಬೆನ್ನು ತಿರುಗಿಸಿ ನಿಂತಿಲ್ಲ. ಅವರು ದೇಶಕ್ಕಾಗಿ ಹೋರಾಡಿ, ವೀರಸ್ವರ್ಗ ಸೇರಿದ್ದಾರೆ. ನಿಮ್ಮ ತಂದೆ ಒಬ್ಬ ಸ್ಟಾರ್‌. ಅಂಥವರ ಮಕ್ಕಳು ಅಂತ ಹೇಳಿಕೊಳ್ಳಲು ನೀವೂ, ಆ ಧೀರಯೋಧನ ಹೆಂಡತಿಯಾಗಲು ನಾನೂ ಪುಣ್ಯ ಮಾಡಿದ್ವಿ....'

ಶಫೀಕ್‌ ಅವರೊಂದಿಗೆ ಹತ್ತು ವರ್ಷ ಸಂಸಾರ ಮಾಡಿದೆ. ಅದರಲ್ಲಿ ಐದು ವರ್ಷ ಅವರ ಜೊತೆಗಿದ್ದೆ. ಅವರ ಮಾತು, ಮುನಿಸು, ಮೌನ, ನಗೆ, ಹೆಜ್ಜೆಸಪ್ಪಳ ಎಲ್ಲವೂ ನನಗೆ ಅಂಗೈನ ಗೆರೆಯಷ್ಟು ಚಿರಪರಿಚಿತ. ಈ ಕಾರಣದಿಂದಲೇ, ಅವರು ಜೊತೆಗಿಲ್ಲ ಎಂದು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಯೋಧರು ಹುತಾತ್ಮರಾದರೆ, ಅವರ ಯೂನಿಫಾರ್ಮ್ನ ಯೋಧನ ಪತ್ನಿಗೆ/ಕುಟುಂಬಕ್ಕೆ ಕೊಡಲಾಗುತ್ತೆ. ಆ ಬಟ್ಟೆಯಲ್ಲಿ ಗಂಡನ ಮೈಬೆವರ ವಾಸನೆ ಇದೆ. ಧರಿಸಿದ ಬಟ್ಟೆಗಳಲ್ಲಿ ಅವರ ಫೀಲಿಂಗ್ಸ್‌ ಕೂಡ ಇರುತ್ತೆ ಎಂಬ ಸೆಂಟಿಮೆಂಟ್‌ನಿಂದ ಎಂಟು ವರ್ಷಗಳಷ್ಟು ಸುದೀರ್ಘ‌ ಕಾಲದವರೆಗೆ ಯೂನಿಫಾರ್ಮ್ ಮತ್ತು ಅಂತ್ಯಸಂಸ್ಕಾರದ ವೇಳೆ ಶಫೀಕ್‌ ಅವರಿಗೆ ಹೊದಿಸಿದ್ದ ಬಟ್ಟೆಯನ್ನು ನಾನು ಒಗೆಯಲೇ ಇಲ್ಲ. ಹಾಗೇ ಉಳಿಸಿಕೊಂಡಿದ್ದೆ. ಎಷ್ಟೋ ಬಾರಿ ದುಃಖವಾದಾಗ, ನೆನಪು ಕಾಡಿದಾಗ, ಸಂಭ್ರಮದ ಕ್ಷಣವೊಂದು ಜೊತೆಯಾದಾಗ, ಯೂನಿಫಾರ್ಮ್ನ ಎದುರಿಗೆ ನಿಂತು- "ಹೀಗೆಲ್ಲಾ ಆಗಿದೆ ಕಣಿÅ' ಎಂದು ಮನಸಿನ ಮಾತುಗಳನ್ನು ಹೇಳಿಕೊಳ್ತಿದ್ದೆ.

ಗಂಡನನ್ನು ಕಳೆದುಕೊಂಡ ಮೇಲೆ ಬದುಕುವುದಕ್ಕೆ ಬಹಳ ಕಷ್ಟ ಆಯ್ತು. ಆಗೆಲ್ಲಾ, ಮಾವನ ಮನೆಯವರು ನನಗೆ ಸಮಾಧಾನ ಮಾಡಿದ್ರು. ಧೈರ್ಯ ಹೇಳಿದ್ರು. ಸ್ವಂತ ಮಗಳಿಗಿಂತ ಹೆಚ್ಚಿನ ಅಕ್ಕರೆಯಿಂದ ನೋಡಿಕೊಂಡರು. ಈಗಲೂ ಅಷ್ಟೆ: ನನ್ನನ್ನು ಬಿಟ್ಟು ಅವರು ಯಾವುದೇ ಕಾರ್ಯಕ್ರಮವನ್ನೂ ಮಾಡಲ್ಲ. ನನ್ನ ಮಗಳೀಗ ಎಂಬಿಎ ಮುಗಿಸಿ ಕೆಲಸಕ್ಕೆ ಹೋಗ್ತಿದಾಳೆ. ಮಗ, ಕ್ರೆ„ಸ್ಟ್‌ ಕಾಲೇಜಿನಲ್ಲಿ ಕಡೆಯ ವರ್ಷದ ಲಾ ಓದುತ್ತಿದ್ದಾನೆ. ಮಕ್ಕಳಿಗೆ ನಾನು ಏನೇ ಪ್ರೀತಿ ಕೊಟ್ಟಿರಬಹುದು, ಅವರಿಗಾಗಿ ಏನೇ ತ್ಯಾಗ ಮಾಡಿರಬಹುದು. ಆದರೆ ಅಪ್ಪ ಜೊತೆಗಿದ್ದಾರೆ ಎಂಬ ಫೀಲ್‌ ಅಥವಾ ಭರವಸೇನ ಕೊಡಲಿಕ್ಕೆ ನನ್ನಿಂದ ಸಾಧ್ಯವಾಗಿಲ್ಲ. ಅದೊಂದು ಕೊರಗು ನನ್ನೊಳಗೆ ಶಾಶ್ವತವಾಗಿ ಉಳಿದುಬಿಟ್ಟಿದೆ.

"ಜೈಹಿಂದ್‌' ಎಂಬ ಘೋಷಣೆಯೇ ಶಫೀಕ್‌ ಅವರ ಕಡೆಯ ಮಾತು. ಅಂಥಾ ಮಹಾನ್‌ ದೇಶಭಕ್ತ ಅವರು'- ಈ ಮಾತು ಹೇಳಿದ್ದು ಮಿಲಿಟರಿ ಆಫೀಸರ್‌. ಅವರು ನಕ್ಷತ್ರ ಆಗಿಬಿಟ್ಟರಲ್ಲ; ಅವತ್ತಿಂದಲೂ, "ಜೈ ಹಿಂದ್‌' ಎಂಬ ಘೋಷಣೆಯೊಂದಿಗೆ ನನ್ನ ಬೆಳಗು ಆರಂಭವಾಗುತ್ತದೆ. ಮರುಕ್ಷಣವೇ, ಮತ್ತೂಂದು ಮೂಲೆಯಿಂದ, ಜೈಹಿಂದ್‌ ಎಂದು ನನ್ನ ಶಫೀಕ್‌ ಕೂಡ ಹೇಳಿದಂತೆ ಭಾಸವಾಗುತ್ತದೆ. ಅಷ್ಟೆ: ಖುಷಿಯೂ, ಕಣ್ಣೀರೂ ಒಟ್ಟಿಗೇ ಜೊತೆಯಾಗುತ್ತವೆ. ದಿನಗಳು ಹೀಗೇ ಸಾಗುತ್ತಿವೆ...'

ಎ.ಆರ್‌. ಮಣಿಕಾಂತ್‌


Trending videos

Back to Top