ಅವಳಲ್ಲಿ ಋಣಮುಕ್ತಳಾದ ತೃಪ್ತಿಯಿತ್ತೇ?


Team Udayavani, Sep 22, 2018, 12:30 AM IST

c-2.jpg

ಎರಡು ವರ್ಷಗಳ ಹಿಂದೆ ಒಂದು ಅಮಾವಾಸ್ಯೆಯ ದಿನ. ರೋಗಿಗಳನ್ನು ನೋಡುವುದು ಬೇಗ ಮುಗಿದಿತ್ತು. ಅಮಾವಾಸ್ಯೆ, ಹುಣ್ಣಿಮೆ, “ಕರಿ’ ಮತ್ತು ಹಬ್ಬಗಳಂದು ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಎಲ್ಲರೂ ಆರೋಗ್ಯದಿಂದ ಇರಲು ದಿನವೂ ಹಬ್ಬಗಳಿರುವುದು ಒಳ್ಳೆಯದೇನೋ ಎಂದು ಹಲವು ಬಾರಿ ಯೋಚಿಸಿದ್ದೇನೆ…!  ನಾನು ಚೇಂಬರ್‌ನಿಂದ ಇನ್ನೇನು ಹೊರಡಬೇಕು, ಆಗ ಸುಮಾರು ನಲವತ್ತು ವರ್ಷ ವಯಸ್ಸಿನ ಒಬ್ಬ ಹೆಂಗಸು ಬಂದಳು. ಹಣೆಯಲ್ಲಿ ಕುಂಕುಮವಿಲ್ಲ. ಕೃಶ ಶರೀರ. ಕಣ್ಣಲ್ಲಿ ಕಾಂತಿಯೇನೋ ಇದೆ, ಆದರೆ, ಕಣ್ಣುಗಳು ಒಳಸೇರಿವೆ. ಮುಖದಲ್ಲಿ ಚಿಂತೆ, ಆತಂಕ, ನೋವು ತುಂಬಿದೆ. ಸಣ್ಣಗೆ ಬೆವರುತ್ತಿದ್ದಾಳೆ. ಸ್ವಲ್ಪ ಉಬ್ಬಸವೂ ಇದೆ. ಹಲವು ದಶಕ ವೈದ್ಯಕೀಯದಲ್ಲಿದ್ದ ನನಗೆ, ಅವಳು ತುಂಬ ಕಷ್ಟ ಅನುಭವಿಸುತ್ತಿದ್ದಾಳೆ ಎಂದು ತಿಳಿದುಕೊಳ್ಳಲು ತಡವಾಗಲಿಲ್ಲ. ಅವಳನ್ನು ಈ ಮೊದಲು ನೋಡಿದ್ದೇನೆ ಎನಿಸತೊಡಗಿತ್ತು. ಚೇಂಬರ್‌ ಒಳಗೆ ಬರುತ್ತಲೇ ಎರಡೂ ಕೈ ಮುಗಿದು “ನಮಸ್ಕಾರ್ರೀ ಸಾಹೇಬ್ರ. ಗುರ್ತ ಸಿಕ್ಕಿತೆನ್ರೀ?’ ಅಂದಳು. ದಿನಾಲೂ ನೂರಾರು ಪೇಶಂಟ್‌ಗಳನ್ನು ನೋಡುತ್ತಿದ್ದರೂ ಬಹುತೇಕ ಜನ ನನಗೆ ನೆನಪಿರುತ್ತಾರೆ. ಅದೇಕೋ ಇವಳ ಬಗೆಗೆ ನೆನಪಾಗಲಿಲ್ಲ. ಆದರೂ ಅವಳು ಅಷ್ಟೊಂದು ಆಸೆ, ಭರವಸೆಯಿಂದ ಕೇಳುತ್ತಿರುವಾಗ “ನೆನೆಪಿಲ್ಲ’ ಎಂದರೆ ಅವಳಿಗೆ ಬೇಸರವಾದೀತೆಂದು, ಕುಳಿತುಕೊಳ್ಳಲು ತಿಳಿಸಿ, ಸುಮ್ಮನೆ: “ನಿನ್ನ ನೆನಪ ಐತೆವಾ..ಹ್ಯಾಂಗ ಮರೀತೀನಿ..’ ಅಂದೆ.

“ಅದ್ರ ಸಾಹೇಬ್ರ… ಅಷ್ಟ ದೊಡ್ಡ ಬಿಲ್‌ ಕೊಡಲಾರದ ಹೋದವನ ಹೇಣಿ¤ ನಾನು. ನನ್ನ ಹ್ಯಾಂಗ ಮರೀತೀರಿ ಬಿಡ್ರೀ…’ ಅಂದಳವಳು. ನನ್ನ ದಿಗಿಲು ಈಗ ಹೆಚ್ಚಾಯಿತು. ಯಾವಾಗ ಯಾರು ನನ್ನ ಬಿಲ್ಲು ಕೊಡದೆ ಹೋದರು ಎನ್ನುವುದು ನೆನಪಾಗುತ್ತಿಲ್ಲ. ಯಾಕೆಂದರೆ, ಬರೆಯುವ ಪ್ರತಿಯೊಂದು ಪುಟಕ್ಕೂ “ಮಾರ್ಜಿನ್‌’ ಇರುವ ಹಾಗೆ ನನ್ನ ಆಸ್ಪತ್ರೆಯ ಬಿಲ್ಲಿನಲ್ಲೂ “ರಿಯಾಯತಿ’ಯ ಮಾರ್ಜಿನ್‌ ಇಟ್ಟಿರುತ್ತೇನೆ. ಹಲವು ಬಾರಿ ಬರೆಯುವ ಸ್ಥಳಕ್ಕಿಂತ “ಮಾರ್ಜಿನ್‌’ ದೊಡ್ಡದಾಗಿಬಿಡುತ್ತದೆ! ಇನ್ನೂ ಕೆಲವೊಮ್ಮೆ ಬಡ ರೋಗಿಗಳಿದ್ದಾಗಲೋ ಅಥವಾ “ನಮಗ ಬಿಲ್‌ ಕೊಡಾಕ ಆಗೂದಿಲ್ಲ ನೋಡ..ಏನ್‌ ಮಾಡ್ತೀರಿ?’ ಅನ್ನುವಂಥ “ಭೀಕರ’ ಜನ ಇದ್ದಾಗಲೋ, ಇಡೀ ಪುಟವೇ “ಮಾರ್ಜಿನ್‌’ ಆದ ಘಟನೆಗಳೂ ಇವೆ! ಹೀಗೆ ಅನೇಕ ಘಟನೆಗಳಿದ್ದದ್ದರಿಂದ ಇವಳ ಗಂಡನ ನೆನಪು ನನಗೆ ಸರಿಯಾಗಿ ಆಗಲಿಲ್ಲ. ಆದರೂ ಸಾವರಿಸಿಕೊಂಡು, “ನನಗ ಪಕ್ಕಾ ನೆನಪಾಗೊಲ್ಲದು. ಹೋಗ್ಲಿ ಬಿಡವಾ ಅದನ್ನೇನ್‌ ಮಾಡೂದು. ನಿನ್ನ ತ್ರಾಸ ಏನು ಹೇಳು…?’ ಅಂದೆ. ಅದಕ್ಕವಳು ಹಠ ಹಿಡಿದಂತೆ.. “ಇಲ್ರಿ ಸಾಹೇಬ್ರ, ಅದನ್ನ ನಿಮಗ ನೆನಪ ಮಾಡಿಕೊಟ್ಟ ಮ್ಯಾಲನss ನನ್ನ ತೋರಸ್ಬೇಕಂತ ಬಂದೀನ್ರಿ..’ ಎಂದು ಹೇಳಿ ತನ್ನ ಕಥೆ ಪ್ರಾರಂಭಿಸಿದಳು. 

“ಸಾಹೇಬ್ರ, ಎಂಟ ವರ್ಷದ ಹಿಂದ ನನ್ನ ಗಂಡಗ ಕಿಡ್ನಿ ಫೇಲ್‌ ಆಗಿ ಮೈಯೆಲ್ಲಾ ಬಾತು, ನಿಮ್ಮಲ್ಲಿ ಅಡ್ಮಿಟ್‌ ಮಾಡಿದ್ದಿವ್ರಿ…’ ಅವಳು ಹೇಳಲು ಪ್ರಾರಂಭಿಸುವುದರೊಳಗೆ ನನಗೆಲ್ಲ ನೆನಪಾಗಿ ಹೋಯಿತು. ಹೌದು, ಇನ್ನೇನು ಸಾಯಲಿರುವ ತನ್ನ ಗಂಡನನ್ನು ಇವಳು ಕರೆತಂದು ಅಡ್ಮಿಟ್‌ ಮಾಡಿದ್ದಳು. ಸುಮಾರು 35 ವಯಸ್ಸಿನವನಾದ ಅವನಿಗೆ ಯಾವುದೋ ಕಾರಣದಿಂದ ಮೂತ್ರ ಪಿಂಡಗಳು ನಿಷ್ಕ್ರಿಯವಾಗಿ, ಎಲ್ಲಾ ಆಸ್ಪತ್ರೆಗಳಲ್ಲೂ ತೋರಿಸಿ, ಇನ್ನೇನು ಬದುಕುವುದಿಲ್ಲವೆಂದಾದ ಮೇಲೆ ಕೊನೆಯ ದಿನಗಳನ್ನು ಆಸ್ಪತ್ರೆಯಲ್ಲಿ ಕಳೆಯಲೆಂದು ಊರಿಗೆ ಸಮೀಪದಲ್ಲಿದ್ದ ನನ್ನ ಆಸ್ಪತ್ರೆಗೆ ಬಂದಿದ್ದರು.  ಅನೇಕ ಸಲ ಹೀಗಾಗುತ್ತದೆ. ಎಲ್ಲ “ಸ್ಪೆಷಾಲಿಟಿ’, “ಸುಪರ್‌ ಸ್ಪೆಷಾಲಿಟಿ’ ಆಸ್ಪತ್ರೆಗಳನ್ನು ಮುಗಿಸಿ, ಇನ್ನೇನು ಬದುಕುವುದಿಲ್ಲ ಎನಿಸತೊಡಗಿದಾಗ ತಾಲೂಕಾ ಮಟ್ಟದ ಆಸ್ಪತ್ರೆಗಳಲ್ಲಿ ಅವರನ್ನು ತಂದು ಅಡ್ಮಿಟ್‌ ಮಾಡುತ್ತಾರೆ, ಮನೆಯಲ್ಲಿ ಸಾಯಬಾರದೆಂದು ಹಾಗೂ ಜನ ನಿಮಿತ್ಯಕ್ಕೆ ಹೆದರಿ. ನಾವೂ ನಮ್ಮ ಆಸ್ಪತ್ರೆಯಲ್ಲಿ ಸಾಧ್ಯವಿರುವ ಆರೈಕೆ ಮಾಡಿ “ಬೀಳ್ಕೊಡುತ್ತೇವೆ’. ಅಂತಹ ಕೊನೆ ದಿನಗಳ ಕೇಸುಗಳಲ್ಲಿ ಇವಳ ಪತಿಯದೂ ಒಂದು. ಗಂಡನ ಜೊತೆಗೆ ಇವಳೊಬ್ಬಳೆ. ಜೊತೆಗೆ ಹತ್ತು ವರ್ಷದ ಒಬ್ಬ ಮಗ. ಇವಳಿಗೆ ತಂದೆ ತಾಯಿಯರಿಲ್ಲ. ಅವನ ತಂದೆ ತಾಯಿಯರು ಬರುವುದಿಲ್ಲ. ಯಾಕೆಂದರೆ ಇವರದು ಪಾಲಕರನ್ನು ಧಿಕ್ಕರಿಸಿ ಆದ ಪ್ರೇಮ ವಿವಾಹ. ಇವಳೊಬ್ಬಳೇ ಹಗಲು ರಾತ್ರಿಯೆನ್ನದೆ ಅವನನ್ನು ಉಪಚರಿಸಿದ್ದಳು, ಸಾಯುತ್ತಾನೆ ಎನ್ನುವುದನ್ನು ದಿನವೂ ನೆನೆಯುತ್ತ. ಅವಳ ಹಾಗೂ ಅವನ ಕಷ್ಟ ನನಗೆ ನೋಡಲಾ ಗುತ್ತಿರಲಿಲ್ಲ. “ಇನ್ನು ಕೆಲವು ದಿನಗಳಲ್ಲಿ ಸಾವು ಖಂಡಿತ’ ಎಂದು ಗೊತ್ತಿರುವವರ ಮನಸ್ಥಿತಿ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಅವನಿಗೆ ಹೆಚ್ಚಿನದೇನನ್ನೂ ಮಾಡಲು ಸಾಧ್ಯವಾಗದೆ ವೈದ್ಯರಾದ ನಮಗೂ ಕೂಡ ಕೆಲವೊಮ್ಮೆ ಖನ್ನತೆ ಕಾಡುತ್ತದೆ. ಅವಳಂತೂ ನಿರ್ಲಿಪ್ತಳಾಗಿ ಅವನ ಸೇವೆ ಮಾಡಿಕೊಂಡಿದ್ದಳು. “ಮೂತ್ರಪಿಂಡ ಕಸಿ ಮಾಡಿದರೆ ಅವನು ಬದುಕುಳಿಯುವ ಸಂಭವ ಇದೆ, ಪ್ರಯತ್ನಿಸಬಾರದೇಕೆ?’ ಎಂದು ಕೇಳಿದಾಗ ಆರ್ತಳಾಗಿ ನನ್ನೆಡೆ ನೋಡಿದ್ದಳು. “ಖರ್ಚು ಮಾಡುವವರು, ಮೂತ್ರಪಿಂಡ ದಾನ ಕೊಡುವವರು ಯಾರಿದ್ದಾರೆ?’ ಎಂಬರ್ಥದಲ್ಲಿ. 

ಹಾಗೆಯೇ ಹಗಲಿರುಳಿನ ಸೇವೆ ಸ್ವೀಕರಿಸಿದ ಅವನು ಹದಿನೈದು ದಿನ ನಮ್ಮ ಆಸ್ಪತ್ರೆಯಲ್ಲಿದ್ದು ಕೊನೆಯುಸಿರೆಳೆದ. ಅವಳು ಶಾಂತಳಾಗಿದ್ದಳು, ಅಳುವ ಮಗನನ್ನು ಎದೆಗಪ್ಪಿಕೊಂಡು ಶೂನ್ಯ ನೋಡುತ್ತಾ. ಅಂತಹ ದುಃಖದಲ್ಲೂ “ಆಸ್ಪತ್ರೆಯ ಬಿಲ್‌ ಎಷ್ಟಾಯಿತು’ ಎಂದು ಕೇಳಿ, ಇನ್ನೇನು ಕೊಡಬೇಕು, ಅಷ್ಟರಲ್ಲಿ ಅವಳ ಗಂಡನ ತಂದೆ ತಾಯಿ ಬಂದು ತಮ್ಮ ಮಗನ ದೇಹವನ್ನು ತಮಗೊಪ್ಪಿಸಬೇಕೆಂದು ಬೇಡಿಕೆಯಿಟ್ಟರು. ವಿಚಿತ್ರವೆಂದರೆ ಅವನು ಸಾಯುವುದು ಗೊತ್ತಿದ್ದೂ ಈ ಮೊದಲು ಯಾರೂ ಆಸ್ಪತ್ರೆಯ ಕಡೆಗೆ ಹಣಿಕಿಯೂ ನೋಡಿರಲಿಲ್ಲ. ಪ್ರೇಮ ವಿವಾಹದ ಒಂದು ಸಣ್ಣ ತಪ್ಪಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಶಿಕ್ಷೆಯೇ? ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನ ಶವವನ್ನು ಕೊಡಲು ಇವಳು ಸುತಾರಾಂ ಒಪ್ಪಲಿಲ್ಲ. ಆದರೆ ಅವರು ಊರಿನ ಹಿರಿಯರನ್ನೆಲ್ಲ ಕೂಡಿಸಿ ರಂಪಾಟ ಮಾಡಿ, ಇವಳನ್ನು ಗದರಿ, ದೇಹವನ್ನು ತಾವೇ ತೆಗೆದುಕೊಂಡು ಹೋದರು. ಇ¨ªಾಗ ಮಗನೆಡೆಗೆ ಸುಳಿಯದ, ಅವನ ಆರೈಕೆಗೆ ದುಡ್ಡು ಕೊಡದ ಈ ಜನ ಸತ್ತಾಗ ತಮ್ಮ ಹಕ್ಕು ಸಾಧಿಸಲು ಬಂದಿದ್ದರು. ಆ ಗದ್ದಲದಲ್ಲಿ ಇವಳು ತನ್ನ ಮಗನನ್ನು ಕರೆದುಕೊಂಡು ಹೊರಟುಬಿಟ್ಟಿದ್ದಳು. ನಮ್ಮ ಹುಡುಗರು, ಕೂಡಿದ ಜನರೆದುರು ಆಸ್ಪತ್ರೆಯ ಬಿಲ್ಲಿನ ಪ್ರಸ್ತಾಪ ಇಟ್ಟಾಗ, ತಾವು ಅಡ್ಮಿಟ್‌ ಮಾಡಿಲ್ಲವೆಂದೂ, ಮಾಡಿದವರನ್ನೇ ಕೇಳಿರೆಂದೂ ಹೇಳಿ ದೇಹವನ್ನು ತೆಗೆದುಕೊಂಡು ಹೊರಟು ಹೋಗಿದ್ದರು. ಇದೂ ಕೂಡ ಇಡೀ ಪುಟವೆಲ್ಲ “ಮಾರ್ಜಿನ್‌’ ಆದ ಲಿಸ್ಟಿಗೆ ಸೇರಿಕೊಂಡುಬಿಟ್ಟಿತ್ತು. ಮುಂದೆ ಅವಳು ನಿವೇದಿಸಿದ ಕತೆ ಮಾತ್ರ ಕರುಳು ಕಿವುಚುವಂಥದ್ದು. ಗಂಡ ಸತ್ತ ಮೇಲೆ ಅವನದೇ ಆಫೀಸಿನಲ್ಲಿ ಸಿಕ್ಕ ಒಂದು ಕೆಲಸದಿಂದ ತನ್ನ ಹೊಟ್ಟೆ ಬಟ್ಟೆ ಮತ್ತು ಇದ್ದ ಒಬ್ಬ ಮಗನ ಶಿಕ್ಷಣವನ್ನು ಹೇಗೋ ನಿಭಾಯಿಸುತ್ತಿರುವಾಗಲೇ, ಮುಂದಿನ ಒಂದೇ ವರ್ಷಕ್ಕೆ ಇವಳಿಗೆ ಸ್ತನದ ಕ್ಯಾನ್ಸರ್‌. ಪ್ರೀತಿಸಿದ ಗಂಡನಿಲ್ಲದ ಬದುಕು ದುಸ್ತರವೆನಿಸಿದರೂ ಮಗನ ಮುಖ ನೋಡುತ್ತ ಅವನ ಭವಿಷ್ಯ ಚಿಂತಿಸುತ್ತಾ ಕಾಲ ಕಳೆಯುತ್ತಿದ್ದ ಇವಳಿಗೆ ಕ್ಯಾನ್ಸರ್‌ ಎಂದು ಗೊತ್ತಾದಾಗ ದಿಕ್ಕು ತೋಚದಂತಾಗಿತ್ತು. ಗಂಡನ ಇನ್ಸುರನ್ಸ್ ನಿಂದ ಬಂದ ಹಣವೆಲ್ಲ ಇವಳ ಆಪರೇಶನ್‌ಗೆ, ಆಪರೇಶನ್‌ ನಂತರದ ಕೀಮೋಥೆರಪಿ, ರೇಡಿಯೇಶನ್‌ ಥೆರಪಿಗೆ ಖರ್ಚಾಗಿಬಿಟ್ಟಿತು. ಇಷ್ಟೆಲ್ಲಾ ಆಗಿಯೂ ಎಷ್ಟು ದಿನ ಬದುಕುತ್ತಾಳೆನ್ನುವ ಭರವಸೆ ಇಲ್ಲ. ಒಂದು ವರ್ಷ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಳು. ಇವಳಿಗೆ ಮಗನದೇ ಆರೈಕೆ. ಅವನಿಗೆ ಇವಳ ಪ್ರೀತಿ. ಅವನೂ ತನ್ನ ಶಾಲೆಯ ಜೊತೆಗೆ ಸಣ್ಣ ಸಣ್ಣ ಕೆಲಸಗಳನ್ನು ಮಾಡಿ ಇವಳನ್ನು ಸಾಕಿದ.

ಹೀಗೆಯೇ ಕಷ್ಟಪಟ್ಟು ಒಂದು ವರ್ಷ ಕಳೆಯುವುದರೊಳಗೆ ಇವಳ ಆರೋಗ್ಯದಲ್ಲಿ ಒಂದಿಷ್ಟು ಸುಧಾರಣೆ. ಮತ್ತೆ ದುಡಿತ. ನಾಲ್ಕು ವರ್ಷ ಆತಂಕವಿಲ್ಲದ ಬದುಕು. ತಾಯಿ ಮಗನ ವಾತ್ಸಲ್ಯಮಯ ದಿನಗಳು, ಹೊತ್ತು ಹೋದದ್ದೇ ಗೊತ್ತಾಗದಂತೆ. ಐದನೇ ವರ್ಷಕ್ಕೆ ಕೆಟ್ಟ ಕಾಲ ಮತ್ತೆ ವಕ್ಕರಿಸಿಬಿಟ್ಟಿತ್ತು. ಇವಳಿಗೆ ಬೆನ್ನಲ್ಲೇನೋ ನೋವು, ತಲೆಯಲ್ಲಿ ಸಣ್ಣದೊಂದು ಗಂಟು, ನಡೆದರೆ ಆಯಾಸ. ಆಪರೇಶನ್‌ ಮಾಡಿದ ವೈದ್ಯರ ಹತ್ತಿರ ಹೋಗಿ ತಪಾಸಣೆ ಮಾಡಿಸಿದರೆ ಎದೆಯ ಕ್ಯಾನ್ಸರ್‌ ಎಲ್ಲ ಕಡೆ “ಬೀಜ’ಬಿತ್ತಿ ಹೋಗಿತ್ತು. ಅವೆಲ್ಲ ಈಗ ಬೆಳೆದು ದೊಡ್ಡವಾಗಿ ಇವಳಿಗೆ ಮರಣ ಶಾಸನ ಬರೆದು ಸಿದ್ಧಪಡಿಸಿದ್ದವು. ನೋವು ಕಡಿಮೆ ಮಾಡಲು ಮತ್ತೆ ಕೀಮೋಥೆರಪಿ, ರೇಡಿಯೇಶನ್‌ ಕೊಟ್ಟರೂ ಪ್ರಯೋಜನವಾಗಲಿಲ್ಲ. ಕೂದಲು ಉದುರಿದುವೇ ಹೊರತು ಗಂಟು ಕಡಿಮೆಯಾಗಲಿಲ್ಲ. ಅವಳ ಕೊನೆಗಾಲ ಸಮೀಪಿಸಿದಾಗ ತನ್ನ ಗಂಡನ ನೆನಪಾಗಿಯೋ ಏನೋ ನಮ್ಮ ಆಸ್ಪತ್ರೆಗೆ ಬಂದಿದ್ದಳು. ತನ್ನ ಗಂಡನ ಕೊನೆಯಾದ ಸ್ಥಳದಲ್ಲಿಯೇ ತಾನೂ ಕೊನೆಯಾದರೆ ಪ್ರೀತಿಸಿದ ಗಂಡನನ್ನು ಕೂಡುವ ಭರವಸೆ ಇತ್ತೇನೋ. ಹೀಗೆಲ್ಲ ನಾನು ಯೋಚಿಸುತ್ತಿರುವಾಗಲೇ ಅವಳು ಹೇಳಿದ ಮಾತು…

“ಸಾಹೇಬ್ರ, ನನ್ನ ಗಂಡನ ಬಿಲ್‌ ಅವರ ಅವ್ವ ಅಪ್ಪ ಕೊಡಲಿಲ್ಲ, ಅಂತ ನನಗ ಆಮ್ಯಾಲ ಗೊತ್ತಾಯಿ. ನನ್ನ ಕ್ಷಮಾ ಮಾಡ್ರಿ. ನಾನ ಇನ್ನೊಮ್ಮಿ ಬಂದು ನಿಮ್ಮ ಕಡೆ ವಿಚಾರ ಮಾಡಬೇಕಾಗಿತ್ತು. ಈಗ ಆ ರೊಕ್ಕಾನೂ ತಗೊಳ್ರಿ. ನಾ ಇನ್ನ ಭಾಳ ದಿನ ಉಳೆಂಗಿಲ್ಲ ಅಂತ ನನಗ ಗೊತೈತ್ರಿ. ನಾ ಸಾಯೋತನಕ ಇಲ್ಲೇ ನಿಮ್ಮ ದವಾಖಾನಿಯೊಳಗ ಇರತೀನ್ರೀ. ಅದಕ್ಕ ನನ್ನ ಬಿಲ್ಲನೂ ಅಡ್ವಾನ್ಸ್ ತಗೊಂಡ ಬಿಡ್ರೀ. ನಾನು ಯಾರ ರಿಣದಾಗೂ(ಋಣದಲ್ಲೂ) ಇರಬಾರದ್ರೀ…’

ನಾನು ಅವಾಕ್ಕಾಗಿ ಹೋದೆ. ಸಂಕಟವೂ ಆಯಿತು. ಇನ್ನು ಕೆಲ ದಿನಗಳಿಗೆ ಸಾಯುತ್ತೇನೆಂದು ಗೊತ್ತಿದ್ದೂ ಅವಳು ತೋರುತ್ತಿದ್ದ ಧೈರ್ಯ, ಋಣ ಮುಕ್ತಳಾಗಬೇಕೆಂಬ ಹಂಬಲ ನನ್ನನ್ನು ಮೂಕನನ್ನಾಗಿಸಿತು. ಮನೆತನಕ ಹೋದರೂ ಬಿಲ್‌ ಕೊಡದೆ ತಿರುಗಿ ಕಳಿಸುವ ಜನರಿರುವಾಗ, ಕೊನೆಗಾಲದಲ್ಲಿ ಹಳೆಯ ಬಾಕಿಯನ್ನಲ್ಲದೆ ಇನ್ನು ಮುಂದೆ ಆಗಬಹುದಾದ ಶುಲ್ಕವನ್ನೂ ತೆಗೆದುಕೊಳ್ಳಿರಿ, ಎಂದು ಹೇಳಿದ ಅವಳ ವ್ಯಕ್ತಿತ್ವದ ಬಗೆಗೆ ಗೌರವ ಮೂಡಿತು. ನನಗೆ ಮಾತು ಹೊರಡಲಿಲ್ಲ. ಇಂಥ ಜನರೂ ಇರುವರಲ್ಲ, ಅನ್ನಿಸಿತು. ಅವಳನ್ನು ಸಮಾಧಾನ ಮಾಡಲು “ನಾ ಆಮ್ಯಾಲ ರೊಕ್ಕ ತಗೋತೀನಿ. ಅದನ್ನ ನಿನ್ನ ಮಗನ ಕಡೆ ಕೊಡು..’ ಎಂದು ಹೇಳಿ, ವಾರ್ಡ್‌ ಬಾಯ್‌ನನ್ನು ಕರೆದು ಅವಳನ್ನು ಅಡ್ಮಿಟ್‌ ಮಾಡಬೇಕೆಂದು ತಿಳಿಸಿ, ಅವಳಿಗೆ ಅಗತ್ಯವಿರುವ ಔಷಧೋಪಚಾರ ಪ್ರಾರಂಭಿಸಿದೆ. ಆ ದಿನ ಪೂರ್ತಿ ಅವಳದೆ ಮುಖ ನನ್ನ ಕಣ್ಣ ಮುಂದೆ. ಅಂದಿನ ಊಟ ಸೇರಲಿಲ್ಲ..

ಮುಂದೆ ಅವಳು ಬದುಕಿದ ಸುಮಾರು ಹತ್ತು ಹನ್ನೆರಡು ದಿನ ನನ್ನ ಮನಸ್ಸನ್ನೆಲ್ಲ ಆವರಿಸಿಕೊಂಡುಬಿಟ್ಟಳು. ನನ್ನೆದುರಿಗೆ ಅವಳು ಕೊನೆಯುಸಿರೆಳೆಯುವಾಗ ಮತ್ತೂಮ್ಮೆ ತನ್ನ ಋಣದ ಬಗೆಗೆಯೇ ಮಾತಾಡಿದಳು. ತನ್ನ ಮಗನೆಡೆಗೆ ನೋಡುತ್ತಾ ಪ್ರಾಣ ಬಿಟ್ಟಳು. ಅವಳ ಕಷ್ಟಗಳೆಲ್ಲ ಕೊನೆ ಆದುವಲ್ಲ ಎಂದು ನನಗೆ ಸಮಾಧಾನವಾದರೂ ಇಂಥವಳು ಇನ್ನೂ ಬದುಕಿರಬೇಕಿತ್ತು, ಸಮಾಜಕ್ಕೆ ಒಂದು ಮಾದರಿಯಾಗಿ ಅನಿಸಿತು. ಮಗ ಅಳುತ್ತಿದ್ದ. ಅವನಿಂದ ಏನೂ ದುಡ್ಡು ತೆಗೆದುಕೊಳ್ಳಕೂಡದೆಂದೂ, ಅವನ ತಾಯಿಯ ಶವ ಮನೆಗೆ ಸಾಗಿಸಲು ಸಹಾಯ ಮಾಡಿರೆಂದೂ ನಮ್ಮ ಸಿಬ್ಬಂದಿಗೆ ತಿಳಿಸಿ ಹೊರ ನಡೆದೆ.

ಹೊರ ಹೋಗುವ ಮೊದಲು ಅವಳೆಡೆ ನೋಡಿದರೆ, ಅವಳ ಮುಖದಲ್ಲಿ ತೃಪ್ತಿಯ ಕಳೆಯಿತ್ತು. ತನ್ನ ಪ್ರೀತಿಯ ಗಂಡನನ್ನು ಸೇರುತ್ತೇನೆಂಬ ಭಾವವೋ, ಋಣಮುಕ್ತಳಾದೆನೆಂಬ ತೃಪ್ತಿಯೋ ಗೊತ್ತಾಗಲಿಲ್ಲ… 

ಡಾ. ಶಿವಾನಂದ ಕುಬಸದ

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.