ಬದುಕಲು ಕಲಿಸಿದ ಜಗದಾತ್ಮಾನಂದ


Team Udayavani, Nov 17, 2018, 2:49 AM IST

20.jpg

ಸ್ವಾಮಿ ಶ್ರೀ ಜಗದಾತ್ಮಾನಂದರಲ್ಲಿ ಕಷ್ಟದಲ್ಲಿರುವ ಯುವಕರು/ಯುವತಿಯರು ತಮ್ಮ ದುಃಖಗಳನ್ನು ತೋಡಿಕೊಂಡು “ಬದುಕು ಬರಡಾಯಿತು’ ಎಂದರೆ, ಅವರು ಲೋಕದಲ್ಲಿ ಕಷ್ಟ ಅನುಭವಿಸುತ್ತಿರುವವರನ್ನು ಕಣ್ಣಾರೆ ಕಂಡು ಬರಲು ಹೇಳುತ್ತಿದ್ದರು. ಅನಂತರ “ನಿನ್ನ ಕಷ್ಟ ಮತ್ತು ಲೋಕದಲ್ಲಿರುವವರ ಕಷ್ಟಗಳನ್ನು ತುಲನೆ ಮಾಡು. ನಿನ್ನ ಕಷ್ಟ ಬೇರೆಯವರ ಕಷ್ಟದಷ್ಟು ದೊಡ್ಡದೆ? ಸಮಸ್ಯೆಗಳನ್ನು ಎದುರಿಸುವುದೇ ಜೀವನದ ಮುಖ್ಯ ಗುರಿಯಾಗಬೇಕು’ ಎಂದು ಕಿವಿಮಾತು ಹೇಳಿ ಅವರಿಗೆ ಮಾರ್ಗದರ್ಶನ ಕೊಡುತ್ತಿದ್ದರು. “ಬದುಕಲು ಕಲಿಯಿರಿ’ ಪುಸ್ತಕದ ಮೂಲಕ ಮತ್ತು ವೈಯಕ್ತಿಕವಾಗಿ ಲಕ್ಷಾಂತರ ಜನರಿಗೆ ಬದುಕಲು ಪ್ರೇರಕರಾದ ಜಗದಾತ್ಮಾನಂದರಿಗಿದು ನುಡಿನಮನ…

1980ರವರೆಗೆ ಕರಾವಳಿಯೇ ಏಕೆ ಎಲ್ಲೆಡೆ ಕಡುಬಡತನದ ಬೇಗೆ ತಾಂಡವವಾಡುತ್ತಿತ್ತು. ಇದು ಆರ್ಥಿಕ ಬಡತನ. 1980-90ರ ಬಳಿಕ ಆರ್ಥಿಕ ಬಡತನ ಹೋಗಿ ಮಾನಸಿಕ ಬಡತನ ತಾಂಡವವಾಡುತ್ತಿದೆ ಎನ್ನುವುದು ಬೇರೆ ಮಾತು. 

ಆಸ್ಪತ್ರೆ ನೋಡಲು ಹೇಳಿದರು! 
1980ರ ವೇಳೆ ಕರಾವಳಿಯ ಒಬ್ಬ ಯುವಕ ಮೈಸೂರು ವಿ.ವಿ.ಯಲ್ಲಿ ಎಂಎಸ್ಸಿ ಕಲಿಯಲು ತೆರಳಿದ್ದ. ಆದರೇನು ಊಟಕ್ಕಿದ್ದರೆ, ಶುಲ್ಕ ಕಟ್ಟಲು ದುಡ್ಡಿಲ್ಲ, ಶುಲ್ಕ ಕಟ್ಟಿದರೆ ಬಟ್ಟೆ ತೆಗೆದುಕೊಳ್ಳುವಂತಿಲ್ಲ ಹೀಗೆ ಜೀವನದ ಬದುಕು ದುಸ್ತರವಾಗುತ್ತ ಎಂಎಸ್ಸಿಯನ್ನು ಅರ್ಧದಲ್ಲಿಯೇ ಕೈಬಿಡಬೇಕೆನಿಸಿತು. ಆಗೊಬ್ಬ ಸ್ನೇಹಿತ “ಇಲ್ಲಿ ಒಬ್ಬರು ಸ್ವಾಮೀಜಿ ಇದ್ದಾರೆ. ಅವರನ್ನು ಕಂಡು ಮಾತನಾಡೋಣ’. “ಏನು ಸ್ವಾಮೀಜಿಯಪ್ಪ? ನಮ್ಮ ಕಷ್ಟವನ್ನು ಅವರೇನು ಪರಿಹರಿಸುತ್ತಾರೆ?’ ಎಂದು ಗೊಣಗಿದ ವಿದ್ಯಾರ್ಥಿ ಕೊನೆಗೆ ಸ್ನೇಹಿತನ ಒತ್ತಾಯಕ್ಕೆ ಕಟ್ಟುಬಿದ್ದು ಸ್ವಾಮಿಗಳಲ್ಲಿಗೆ ತೆರಳಿದ. “ಏನು ಕಲಿಯುತ್ತಿದ್ದೀ? ಯಾವ ಊರು?’ ಹೀಗೆ ಉಭಯ ಕುಶಲೋಪರಿ, ಸುಮಾರು ಒಂದು ಗಂಟೆ ಮಾತನಾಡಿದ ಸ್ವಾಮೀಜಿ, “ನಾಳೆ ಮೈಸೂರು ವೈದ್ಯಕೀಯ ಕಾಲೇಜಿಗೆ ಭೇಟಿ ಕೊಡು. ಎಲ್ಲ ವಿಭಾಗಗಳನ್ನು ಕಂಡ ಬಳಿಕ ಮಕ್ಕಳ ವಿಭಾಗಕ್ಕೂ ಭೇಟಿ ಕೊಡು. ಅನಂತರ ನನ್ನಲ್ಲಿಗೆ ಬಾ’ ಎಂದರು. 

ವಿದ್ಯಾರ್ಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ಕೊಟ್ಟ. ಕೊನೆಯ ಸರದಿ ಮಕ್ಕಳ ವಿಭಾಗ. ಅಲ್ಲಿ ಒಂದೆಡೆ ಮಕ್ಕಳ ಆಕ್ರಂದನ, ಇನ್ನೊಂದೆಡೆ ತಾಯಂದಿರ ಗೋಳು, ಕೈಕಾಲು ಇಲ್ಲದ ಮಕ್ಕಳು… ಹೀಗೆ ಒಂದೇ ಎರಡೇ ನಾನಾ ತರಹದ ಸಮಸ್ಯೆಗಳ ಸರಮಾಲೆ ಕಂಡು ವಿದ್ಯಾರ್ಥಿ ದಿಕ್ಕು ಕಾಣದಾದ. ಸೀದಾ ಬಂದು ಸ್ವಾಮೀಜಿಯವರ ಪಾದಗಳಿಗೆ ಎರಗಿದ. “ಆಸ್ಪತ್ರೆಗೆ ಭೇಟಿ ಕೊಟ್ಟೆಯಾ? ಏನೇನು ಕಂಡೆ’ ಎಂದರು ಸ್ವಾಮೀಜಿ. ಕಂಡದ್ದನ್ನೆಲ್ಲ ಹೇಳಿದ ವಿದ್ಯಾರ್ಥಿ. “ಹಾಗಾದರೆ ನಿನ್ನ ಕಷ್ಟ ಏನು ಮಹಾ?  ಚಿಕ್ಕ ಚಿಕ್ಕ ಮಕ್ಕಳು ಎಷ್ಟೊಂದು ಕಷ್ಟ ಪಡುತ್ತಿದ್ದಾರೆ ನೋಡಿದೆಯಾ? ಆ ಮಕ್ಕಳೆಲ್ಲ ನಿನಗಿಂತ ಸಾವಿರ ಪಟ್ಟು ಕಷ್ಟ ಪಡುತ್ತಿದ್ದಾರಲ್ಲವೆ? ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟಗಳು ಬರುವುದು ಸಹಜ.  ನಾವು ಅದನ್ನು ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ. ನೀನೀಗ ಓದಲು ಬಂದವ. ಈ ಹಂತದಲ್ಲಿ ಯಾವ ಕಷ್ಟಗಳು ಬಂದಿದೆಯೋ ಒಂದೊಂದಾಗಿ ಪರಿಹರಿಸಿಕೊಳ್ಳಲು ಯತ್ನಿಸು. ನಿನಗೆ ಶೈಕ್ಷಣಿಕ ಸಾಲ ಸಿಕ್ಕಿದೆ, ಊಟ ಸಿಕ್ಕಿದೆ. ಬಹಳ ಸಮಸ್ಯೆಗಳು ಬಂದಾಗ ನನ್ನ ಬಳಿ ಬಾ. ಈಗ ನೀನು ಕಷ್ಟವನ್ನು ಸಹಿಸಿಕೊಂಡು ಓದಿದರೆ ಮುಂದೆ ದುಡಿದು ನಿನ್ನ ಮನೆಯ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳಲು ಸಾಧ್ಯ’ ಎಂದು ಹಿತವಚನ ನೀಡಿದರು.

ಸಮಸ್ಯೆಗಳಿಗೆ ಪರಿಹಾರ ಅಲ್ಲೇ ಇರುತ್ತದೆ
“ಸಂಧ್ಯಾವಂದನೆ ಮಾಡುತ್ತಿಯಾ? ಏನು ಮಂತ್ರಗಳು ಬರತ್ತೆ?’ ಎಂದಾಗ “ಸಂಧ್ಯಾವಂದನೆ ಮಾಡುತ್ತೇನೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡುತ್ತೇನೆ’ ಎಂದು ವಿದ್ಯಾರ್ಥಿ ಹೇಳಿದ. “ವಿಷ್ಣು ಸಹಸ್ರನಾಮ ಪಾರಾಯಣ ಏಕೆ ಮಾಡುತ್ತಿ?’ ಎಂದು ಮರು ಪ್ರಶ್ನೆ ಹಾಕಿದರು. “ಭಯಕೃದ್‌ ಭಯನಾಶನಃ ಎಂದಿದೆ. ಇದನ್ನು ಓದಿದರೆ ಭಯ ನಿವಾರಣೆಯಾಗತ್ತೆ ಎಂದು ಮನೆಯವರು ಹೇಳಿದ್ದರು. ಆದ್ದರಿಂದ ಪಾರಾಯಣ ಮಾಡುತ್ತೇನೆ’ ಎಂದ ವಿದ್ಯಾರ್ಥಿ. “ನಿನ್ನ ಸಮಸ್ಯೆಗೆ ಪರಿಹಾರ ಎಲ್ಲಿದೆ ಎಂದು ನಿನಗೇ ಗೊತ್ತು. ನೀನಿನ್ನು ಹೆದರುವ ಅಗತ್ಯವಿಲ್ಲ’ ಎಂಬ ಅಭಯವನ್ನೂ ಸ್ವಾಮೀಜಿ ನೀಡಿದರು. 

ವಿದ್ಯಾರ್ಥಿ ಓದನ್ನು ಅರ್ಧದಲ್ಲಿ ಮೊಟುಕುಗೊಳಿಸುವ ನಿರ್ಧಾರ ಕೈಬಿಟ್ಟ. ತಾನುಳಿದುಕೊಂಡಿದ್ದ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವಕ್ಕೂ ಅದೇ ಸ್ವಾಮೀಜಿಯವರನ್ನು ಅತಿಥಿಯಾಗಿ ಕರೆದ. ಓದನ್ನೂ ಯಶಸ್ವಿಯಾಗಿ ಮುಗಿಸಿದ. ಈ ವಿದ್ಯಾರ್ಥಿ ಈಗ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|ಸೂರಾಲು ಅನಂತಪದ್ಮನಾಭಭಟ್‌. ಆ ಸ್ವಾಮೀಜಿಯವರು ಗುರುವಾರ ಅಸ್ತಂಗತರಾದ ಪೊನ್ನಂಪೇಟೆ ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ಶ್ರೀಜಗದಾತ್ಮಾನಂದಜೀ (89). ಡಾ|ಭಟ್‌ ಅವರಂತಹ ಸಾವಿರಾರು ಯುವಕರನ್ನು ಖನ್ನತೆ, ದುಃಖದಿಂದ ಪಾರು ಮಾಡಿ ಸನ್ಮಾರ್ಗವನ್ನು ತೋರಿದವರು ಜಗದಾತ್ಮಾನಂದರು. 

ಜಗದಾತ್ಮಾನಂದರು ಮೂಲತಃ ಉಡುಪಿ ತಾಲೂಕು ಹಂಗಾರಕಟ್ಟೆ ಬಾಳೆಕುದ್ರು ಗ್ರಾಮದವರು. ಇವರ ಪೂರ್ವಾಶ್ರಮದ ಹೆಸರು ಲಕ್ಷ್ಮೀನಾರಾಯಣ. ಹೆಸರಾಂತ ಸಂಸ್ಕೃತ ವಿದ್ವಾಂಸ, ಬಾಳೆಕುದ್ರು ಮಠದ ಆಸ್ಥಾನ ವಿದ್ವಾಂಸರಾಗಿದ್ದ ಶ್ರೀನಿವಾಸ ಕೆದ್ಲಾಯ ಮತ್ತು ಶ್ರೀದೇವಿಯವರ ಜ್ಯೇಷ್ಠ ಪುತ್ರನಾಗಿ 1930ರಲ್ಲಿ ಜನಿಸಿದ ಲಕ್ಷ್ಮೀನಾರಾಯಣ ಅವರು ಆರಂಭದಿಂದಲೂ ಆಧ್ಯಾತ್ಮಿಕ ಒಲವು ಹೊಂದಿದ್ದರು. ಮನೆಯ ಸಂಸ್ಕಾರದಿಂದ ಲಕ್ಷ್ಮೀನಾರಾಯಣನಿಗೆ ಸಂಸ್ಕೃತದ ಸಹವಾಸ ಸಹಜವಾಗಿ ಆಯಿತು. ತಾಯಿ ಚಿಕ್ಕಪ್ರಾಯದಲ್ಲಿ ನಿಧನ ಹೊಂದಿದರು. ಶ್ರೀನಿವಾಸ ಕೆದ್ಲಾಯರಿಗೆ ಒಟ್ಟು ಆರು ಮಂದಿ ಮಕ್ಕಳು. ಬಡತನದ ಬೇಗೆ ಇಲ್ಲಿಯೂ ಕಾಡಿತ್ತು. “ಇದನ್ನೇ ಮುಖ್ಯ ಕಾರಣವೆನ್ನುವಂತಿಲ್ಲ. ಸಹಜವಾಗಿ ವೈರಾಗ್ಯಪ್ರಿಯರಾದ ಲಕ್ಷ್ಮೀನಾರಾಯಣರಿಗೆ ಸನ್ಯಾಸಿಯಾಗಲು ಸಾಂಸಾರಿಕ ಸಮಸ್ಯೆಗಳೂ ಕಾರಣವಾದವು’ ಎನ್ನುತ್ತಾರೆ ಅವರ ತಮ್ಮ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಎಲೈಸಿ ನಿವೃತ್ತ ಅಧಿಕಾರಿ, ಸಾಹಿತಿ ಬಿ.ವಿ.ಕೆದ್ಲಾಯ. 

ವೈರಾಗ್ಯ-ಸಂಸಾರದ ನಡುವಿನ ರೇಖೆ
ಲಕ್ಷ್ಮೀನಾರಾಯಣರು ಸಹಜ ವೈರಾಗ್ಯ ಸಂಪನ್ನರಾದರೂ ಮನೆಯ ಜವಾಬ್ದಾರಿಯನ್ನು ಸಕಾಲದಲ್ಲಿ ಹೊತ್ತಿದ್ದರು. ತಾಯಿ ನಿಧನರಾದ ಬಳಿಕ ಹಂಗಾರಕಟ್ಟೆ ಬಾಳೆಕುದ್ರು ಸರಕಾರಿ ಶಾಲೆಯಲ್ಲಿ ಏಳೆಂಟು ವರ್ಷ ಶಿಕ್ಷಕರಾಗಿ ನಿರ್ವಹಿಸಿದ್ದರು. ತಮ್ಮಂದಿರು ಬೆಳೆದು ಮನೆಯ ಜವಾಬ್ದಾರಿ ತೆಗೆದುಕೊಳ್ಳುವ ತನಕ ತಂದೆ, ತಮ್ಮಂದಿರು, ತಂಗಿಯರಿಗೆ ಬೆಂಬಲ ರೂಪವಾಗಿ ಮನೆಯ ಈ ಹೊಣೆಗಾರಿಕೆಯನ್ನು ಜಗದಾತ್ಮಾನಂದರು ವಹಿಸಿದ್ದು ಸಂಸಾರ, ವೈರಾಗ್ಯದ ನಡುವಿನ ಅತಿ ಸೂಕ್ಷ್ಮರೇಖೆಯನ್ನು ಸೂಚಿಸುತ್ತದೆ. 

ಯಶಸ್ವೀ ಜವಾಬ್ದಾರಿಗಳು 
1960ರಲ್ಲಿ ಶ್ರೀರಾಮಕೃಷ್ಣಾಶ್ರಮದ ಸ್ವಾಮೀಜಿಯವರಾಗಿ ಬೆಂಗಳೂರಿನಲ್ಲಿ ಸ್ವಾಮಿ ಶ್ರೀಯತೀಶ್ವರಾನಂದರಿಂದ ದೀಕ್ಷೆ ಪಡೆದ ಬಳಿಕ ಬೆಂಗಳೂರು, ಮೈಸೂರು, ಪೊನ್ನಂಪೇಟೆ, ಮಂಗಳೂರು, ಶಿಲ್ಲಾಂಗ್‌, ಸಿಂಗಾಪುರ, ಕೋಲ್ಕತ್ತದ ಬೇಲೂರು ಮಠ, ನ್ಯೂಜಿಲ್ಯಾಂಡ್‌ ಮೊದಲಾದೆಡೆ ರಾಮಕೃಷ್ಣಾಶ್ರಮದ ಮುಖ್ಯಸ್ಥರಾಗಿ ಕಟ್ಟಿ ಬೆಳೆಸಿದವರು. ಹೋದಲ್ಲೆಲ್ಲ ಆಸುಪಾಸಿನ ಬುಡಕಟ್ಟು ಜನಾಂಗದವರೂ ಸೇರಿದಂತೆ ಉಳ್ಳವರು, ಇಲ್ಲದವರ ಸೇವೆಯನ್ನು ಮಾಡಿ ಬದುಕನ್ನು ಕಟ್ಟಿಕೊಟ್ಟವರು.  

ಹತ್ತನೆಯ ತರಗತಿ ಓದಿದ್ದರೂ…
ಶೈಕ್ಷಣಿಕವಾಗಿ ಹತ್ತನೆಯ ತರಗತಿಯನ್ನಷ್ಟೇ ಓದಿದ್ದರೂ ಸ್ವಾಧ್ಯಾಯದಿಂದ ಓದಿದ್ದು ಅಧಿಕ ಎನ್ನುವುದು ಈಗಿನ ಶಿಕ್ಷಣ ಕ್ರಮದ ವಿಚಿತ್ರ ಧಾವಂತವನ್ನು ಅಣಕವಾಡಿಸುತ್ತದೆ. ರಾಮಕೃಷ್ಣಾಶ್ರಮದ ಕೇಂದ್ರ ಸ್ಥಾನವಾದ ಕೋಲ್ಕತ್ತದ ಬೇಲೂರು ಮಠದಲ್ಲಿರುವ ವೇದಾಂತ ಮಹಾವಿದ್ಯಾಲಯದಲ್ಲಿ ಸುಮಾರು 12 ವರ್ಷ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದು ಅವರ ವಿದ್ವತ್ತು, ವಾಗ್ಮಿತ್ವದ ಜತೆಗೆ ಆಧ್ಯಾತ್ಮಿಕ ಅನುಭೂತಿಯನ್ನು ತೋರಿಸುತ್ತದೆ.  ಇವು ಮೂರೂ ಒಬ್ಬರಲ್ಲಿ ಇರುವುದು ಅಪರೂಪ. ಈ ಮೂರು ಅವರಲ್ಲಿದ್ದ ಕಾರಣವೇ ಅವರಿಗೆ ಎಲ್ಲೆಡೆ ಗೌರವ ಸಲ್ಲುತ್ತಿತ್ತು. 

ಬದುಕಲು ಕಲಿಸಿದ ಸಂತ
ಜಗದಾತ್ಮಾನಂದರ ಹೆಸರನ್ನು ಚಿರಸ್ಥಾಯಿಗೊಳಿಸುವುದು ಅವರು ಬರೆದ “ಬದುಕಲು ಕಲಿಯಿರಿ’ ಎಂಬ ಗ್ರಂಥ. ಇದು ಸಾವಿರಾರು ಯುವಕ/ಯುವತಿಯರಿಗೆ ದಾರಿದೀಪವಾದ ಕೃತಿಯಾಗಿದೆ. ತಮಿಳು, ತೆಲುಗು, ಮರಾಠಿ, ಗುಜರಾತಿ, ಇಂಗ್ಲಿಷ್‌ ಮೊದಲಾದ ಹತ್ತು ಭಾಷೆಗಳಲ್ಲಿ ಮುದ್ರಣ ಕಂಡ ಈ ಕೃತಿ ಖನ್ನತೆಯಿಂದ ಬಳಲುವ ಹದಿಹರೆಯದವರು, ಯುವಕ/ ಯುವತಿಯರಿಗೆ ಬದುಕಿನಲ್ಲಿ ಧೈರ್ಯ, ಸ್ಥೈರ್ಯವನ್ನು ತುಂಬಿಸುತ್ತದೆ. ಸುಮಾರು ಮೂರು ಲಕ್ಷ ಪ್ರತಿಗಳು ಮಾರಾಟವಾದ ದಾಖಲೆ ಈ ಗ್ರಂಥಕ್ಕೆ ಇರುವುದು ಇದರ ಉತ್ಕೃಷ್ಟತೆಯನ್ನು ಸಾರುತ್ತದೆ. 

ಒಪ್ಪದ ಭಟ್ಟಂಗಿತನ
ಯಾರಾದರೂ ಅವರ ಪುಸ್ತಕವನ್ನು ಹೊಗಳಿದರೆ ಕೃತಿಕಾರ ಕೃತಿ ಬರೆದ ಅನಂತರ ಮರೆತು ಬಿಡಬೇಕು. ಓದುಗರಿಗೆ ತೃಪ್ತಿ ಕೊಟ್ಟರೆ ಅದೇ ಸಂತೋಷ ಎನ್ನುತ್ತಿದ್ದರು. ಇದರರ್ಥ ಅವರು ಹೊಗಳು ಭಟ್ಟಂಗಿತನವನ್ನು ಒಪ್ಪುತ್ತಿರಲಿಲ್ಲ. ಆದರೆ ಅವರು ಒಡನಾಟಕ್ಕೆ ಬಂದವರಲ್ಲಿ ತೋರುತ್ತಿದ್ದ ಜೀವನಪ್ರೀತಿ ಅಸಾಧಾರಣವಾದುದು. ಹೀಗಾಗಿಯೇ ಅವರನ್ನು ನಾಡಿನೆಲ್ಲೆಡೆ ವಿಶೇಷವಾಗಿ ಶಾಲಾ ಕಾಲೇಜುಗಳಿಗೆ ಕರೆಯುತ್ತಿದ್ದರು. ಅವರ ಒಂದು ಗಂಟೆಯ ಉಪನ್ಯಾಸವನ್ನು ಕೇಳಿದರೆ ನಕಾರಾತ್ಮಕವಾಗಿ ಚಿಂತನೆ ಮಾಡುವವ ಸಕಾರಾತ್ಮಕವಾಗಿ ಬದಲಾಗುತ್ತಿದ್ದ. ಈ ಮೂಲಕವೂ ಅವರು ಲಕ್ಷಾಂತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬಿದ್ದರು. 

ಲೋಕವೆಂದರೆ ಶೇ.100 ಪರಿಪೂರ್ಣ ಎಂದು ಹೇಳುವಂತಿಲ್ಲ. ಜಗದಾತ್ಮಾನಂದರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡವರೂ ಇದ್ದಾರೆ. ಇಂತಹವರಿಂದ ನೋವುಗಳನ್ನೂ ಜಗದಾತ್ಮಾನಂದರು ಅನುಭವಿಸಿದ್ದರು. ನೇತ್ಯಾತ್ಮಕ ಚಿಂತನೆ ಹೊಂದಿರುವವರನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎನ್ನುವುದು ಸಾರ್ವಕಾಲಿಕ ಸತ್ಯ. ಇಂತಹವರ ನಡುವೆಯೂ ಜಗದಾತ್ಮಾನಂದರು ಎಲ್ಲರಿಗೆ ಜೀವನಪ್ರೀತಿಯನ್ನು ಧಾರೆ ಎರೆಯುತ್ತ ಹೋದದ್ದು ಆದರ್ಶಪ್ರಾಯ ಜೀವನ ಪಾಲಿಸುವವರಿಗೆ ಪ್ರೇರಣಾದಾಯಿ. 

ಮಟಪಾಡಿ ಕುಮಾರಸ್ವಾಮಿ 

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.