ಅಸಾಮಾನ್ಯ ಸಾಧಕನೊಬ್ಬನ ಅನಿರೀಕ್ಷಿತ ಅಂತ್ಯ…


Team Udayavani, Dec 14, 2018, 12:30 AM IST

34.jpg

ಆರೋಗ್ಯ ಪರೀಕ್ಷೆ ಎಂಬ ಸರ್ವಿಸಿಂಗ್‌, ಶರೀರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಆರೋಗ್ಯಕ್ಕಾಗಿ ಒಂದಿಷ್ಟು ಖರ್ಚು ಮಾಡುವುದು, ಆರೋಗ್ಯ ವಿಮೆ ಮಾಡಿಸುವುದು ಮುಂತಾದವು ಗಳ ಬಗ್ಗೆ ನಾವು ತೋರುವ ಅಸಡ್ಡೆಯನ್ನು ಗಮನಿಸಿದರೆ ನಮ್ಮ ಸ್ವಂತಕ್ಕಿಂತಲೂ ನಾವು ಹೊಂದಿದ “ಆಸ್ತಿ’ಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ವಿಪರ್ಯಾಸ ತಿಳಿಯುತ್ತದೆ. 

ಆತ ವಯಸ್ಸಿನಲ್ಲಿ ನನಗಿಂತ ಒಂದು ವರ್ಷ ಸಣ್ಣವನು. ಎತ್ತರದಲ್ಲಿ ನನಗಿಂತ ಆರಿಂಚು ಹೆಚ್ಚು. ಸಾಧನೆಯಲ್ಲಿ ನನಗೆ ನಿಲುಕಲಾರದಷ್ಟು ಎತ್ತರ. ಸ್ಪುರದ್ರೂಪಿ, ಅಜಾನುಬಾಹು…ಟೈ ಧರಿಸಿಕೊಂಡು ಎದುರಿಗೆ ಬಂದು ನಿಂತನೆಂದರೆ ಸಿನಿಮಾ ನಟನಂತೆ ಕಂಗೊಳಿಸುತ್ತಿದ್ದ. ಮುಖದಲ್ಲಿ ಮಾಸದ ಮುಗುಳ್ನಗೆ. ಇದೆಲ್ಲದರ ಮೇಲೆ ಅವನೊಬ್ಬ ಅದ್ಭುತ ಸರ್ಜನ್‌. ಶಸ್ತ್ರಚಿಕಿತ್ಸೆಯ ಉಪಕರಣಗಳನ್ನು ಕೈಯಲ್ಲಿ ಹಿಡಿದನೆಂದರೆ ತಪಸ್ವಿಯಾಗಿ ಮಾರ್ಪಾಟಾಗುತ್ತಿದ್ದ. ಆತನ ಕೈಬೆರಳುಗಳು ಚಾಕಚಕ್ಯತೆಯಿಂದ ಹರಿದಾಡಿ ರೋಗಗ್ರಸ್ತ ಭಾಗವನ್ನು ಸರಾಗವಾಗಿ ಕತ್ತರಿಸಿ ತೆಗೆಯುವುದನ್ನು ನೋಡುವುದೇ ಒಂದು ರೋಮಾಂಚಕಾರಿ ಅನುಭವ. ಸರ್ಜನ್‌ ಆದ ನನ್ನನ್ನೇ ಇಷ್ಟೊಂದು ಆವರಿಸಿದ್ದನೆಂದರೆ ಆತನ ಕೌಶಲ್ಯ ಹೇಗಿರಬೇಡ?

ನನಗೂ ನಮ್ಮ ಸಿಬ್ಬಂದಿಗೂ ಆತನ ಜೊತೆಗೂಡಿ ಆಪರೇಶನ್‌ ಮಾಡುವುದೆಂದರೆ ಒಂದು ಸಂಭ್ರಮ. ಆಪರೇಶನ್‌ ಮಾಡುವಾಗ ಕಟ್ಟು ನಿಟ್ಟು. ಹೇಗಿರಬೇಕೆಂದರೆ ಹಾಗೇ ಇರಬೇಕು. ನೂರೈವತ್ತು ಕಿಲೋಮೀಟರ್‌ ದೂರದ ನಗರದಿಂದ ನಮ್ಮಲ್ಲಿಗೆ ಶಸ್ತ್ರಚಿಕಿತ್ಸೆಗೆ ಬರುತ್ತಿದ್ದರೂ ಹೇಳಿದ ವೇಳೆಗಿಂತ ಒಂದು ನಿಮಿಷ ಕೂಡ ತಡಮಾಡುತ್ತಿರಲಿಲ್ಲ. ಬಂದವನೇ ಒಂದು ದೊಡ್ಡ ಮುಗುಳ್ನಗೆ ಯೊಂದಿಗೆ ಶಸ್ತ್ರಚಿಕಿತ್ಸಾ ಕೋಣೆ ಹೊಕ್ಕನೆಂದರೆ ಮುಗಿಯಿತು, ಅದೊಂದು “ಮಂದಿರ’ವಾಗಿ ಪರಿವರ್ತನೆಗೊಳ್ಳುತ್ತಿತ್ತು. ಶಸ್ತ್ರಚಿಕಿತ್ಸೆ ಎಂಬ ಪೂಜೆ ಸಾಗುತ್ತಿತ್ತು. ಮುಂದಿನ ಒಂದೆರಡು ಗಂಟೆ ನಮ್ಮ ಅಸಿಸ್ಟಂಟ್‌ಗಳಿಗೆ ಕೆಲಸವೋ ಕೆಲಸ. ನನಗೋ ಅವನ ನೈಪುಣ್ಯ ನೋಡುವ ಸಡಗರ. ಲೈಟ್‌ ಇಲ್ಲಿ ಬೇಕು, ಅಲ್ಲಿ ಬೇಕು. ಫ್ಯಾನ್‌ ಈ ಕಡೆ ಇರಲಿ. ಕಾಟರಿಯ (ಆಪರೇಶನ್‌ ಮಾಡುವಾಗ ಡಿಸೆಕ್ಷನ್‌ ಮಾಡಲು ಬಳಸುವ ವಿದ್ಯುತ್‌ ಉಪಕರಣ) ಪವರ್‌ ಸರಿಯಾಗಿ ಹೊಂದಿಸು, ಇತ್ಯಾದಿ’ ಬೇಕುಗಳ ಸುರಿಮಳೆ. “ನೀನು ಇಷ್ಟೇಕೆ ಡಿಮ್ಯಾಂಡಿಂಗ್‌ ಇದ್ದೀ, ಮಾರಾಯಾ’ ಎಂದು ಕೇಳಿದರೆ ಆತ ಕೊಡುವ ಉತ್ತರ, ಅಳುವ ಮಗುವಿಗೆ ಮಾತ್ರ ಬೇಗ ಹಾಲು ದೊರೆಯುತ್ತದೆ!

ಆತನೊಂದಿಗಿನ ಏಳು ವರ್ಷಗಳ ನನ್ನ ಗೆಳೆತನ ಹಾಗೂ ಒಡನಾಟದಿಂದ ನಾನು ಕಲಿತದ್ದು ಬಹಳ. ರೋಗಿಗಳೊಂದಿಗೆ ವ್ಯವಹರಿಸುವ ರೀತಿಯಿಂದ ಹಿಡಿದು, ಹಣಕಾಸು ನಿರ್ವಹಣೆ, ಜನರೊಂದಿಗೆ ಚರ್ಚೆ ಮಾಡುವ ರೀತಿ, ಇತ್ಯಾದಿಗಳ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಿದ್ದ. ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಶಕ್ತಿ ಇತ್ತು, ಅವನಲ್ಲಿ. ಆವಾಗಲೆಲ್ಲ ನಾನು ಅವನೆದುರು ತದೇಕಚಿತ್ತನಾಗಿ ಕುಳಿತುಬಿಡುತ್ತಿದ್ದೆ, ಅವನ ಅಗಾಧ ಮೇಧಾವಿತನವನ್ನು ಮೆಚ್ಚಿಕೊಳ್ಳುತ್ತ. ಆತ ಯಾವ ವ್ಯಕಿತ್ವ ವಿಕಸನ ಗುರುವಿಗೂ ಕಡಿಮೆ ಇರಲಿಲ್ಲ.

ಅಂದು ಬೆಳಿಗ್ಗೆ ಒಬ್ಬ ಪೇಶಂಟ್‌ ಬಗ್ಗೆ ವಿಚಾರಿಸಲು ನಾನು ಅವನಿಗೆ ಫೋನ್‌ ಮಾಡಿದ್ದೆ. ಹದಿನೈದಿಪ್ಪತ್ತು ನಿಮಿಷ ಮಾತಾಡಿದೆವು. ಅವನೊಡನೆ ಯಾವಾಗ ಮಾತಾಡಿದರೂ ಹಾಗೇನೆ. ಕನಿಷ್ಠ ಅರ್ಧ ಗಂಟೆಯ ಸಮಯವಿದ್ದರಷ್ಟೇ ಅವನಿಗೆ ಫೋನ್‌ ಮಾಡಬೇಕು. ನಮ್ಮ ಮಾತುಗಳು ಬರೀ ಪೇಶಂಟ್‌ಗೆ ಮಾತ್ರ ಸೀಮಿತವಿರಲಿಲ್ಲ. ಆದರೆ ಅಲ್ಲಿ ಕಾಡು ಹರಟೆ ಎಂದಿಗೂ ಇರುತ್ತಿರಲಿಲ್ಲ. ಏನಿದ್ದರೂ ಅಭಿವೃದ್ಧಿಯ ಮಾತುಗಳೇ. ತನ್ನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುತ್ತಿರುವ ಬಗ್ಗೆ, ಇನ್ನೆರಡು ದಿನಗಳಲ್ಲಿ ಮುಂಬೈಗೆ ಹೋಗುತ್ತಿರುವ ಬಗ್ಗೆ, ಅಲ್ಲಿಯ ಒಂದು ಹೈಟೆಕ್‌ ಆಸ್ಪತ್ರೆಯಲ್ಲಿರುವ ಹೊಸ ಉಪಕರಣಗಳನ್ನು ನೋಡಿ ಬರುತ್ತಿರುವ ಬಗ್ಗೆ ಮಾತಾಡಿದ. ತನ್ನ ಆಸ್ಪತ್ರೆಯ ಸಿಬ್ಬಂದಿಯನ್ನೂ ಜೊತೆಯಲ್ಲಿ ಕರೆದುಕೊಂಡು ಅವರಿಗೂ ತರಬೇತಿ ಕೊಡಿಸುವುದಾಗಿ ಹೇಳಿದ. ಮುಂದೆ ಗೋವಾ, ವಿಜಾಪುರ, ಬಾಗಲಕೋಟೆಗಳಲ್ಲಿ ಆಸ್ಪತ್ರೆಗಳನ್ನು ತೆರೆಯುವ ವಿಚಾರ ಇಟ್ಟಿದ್ದ. ಮುಗಿಯದ ಕನಸುಗಳ ಒಡೆಯನಾತ. ವೈದ್ಯಕೀಯದ ಸೌಲಭ್ಯಗಳು ಸಣ್ಣ ಪಟ್ಟಣಗಳಲ್ಲೂ ದೊರೆಯಬೇಕೆಂದು ಚಿಂತಿಸುತ್ತಿದ್ದ. ಒಬ್ಬನೇ ವ್ಯಕ್ತಿ ಇಷ್ಟೆÇÉಾ ಮಾಡುತ್ತಿದ್ದನೆಂದರೆ ಆತನ ಕಾರ್ಯಕ್ಷಮತೆ, ದಕ್ಷತೆ, ಧೈರ್ಯ ಹೇಗಿದ್ದೀತು?

ಆತ ಇದ್ದದ್ದೇ ಹಾಗೆ. ಜೀವನದ ಪ್ರತಿ ನಿಮಿಷವನ್ನೂ ತೀವ್ರವಾಗಿ, ಉತ್ಕಟವಾಗಿ  ಬದುಕಿದವ. ಪ್ರತಿ ದಿನವನ್ನೂ ಅಭಿವೃದ್ಧಿಗಾಗಿ, ಆಸ್ಪತ್ರೆಯನ್ನು ಸುಧಾರಿಸುವುದಕ್ಕಾಗಿ, ರೋಗಿಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ವಿನಿಯೋಗಿಸಿದವ. ಹಾಗೆಂದೇ ಯಾರೂ ಕನಸು ಕಾಣಲೂ ಸಾಧ್ಯವಾಗದ ಅದ್ಭುತ ಆಸ್ಪತ್ರೆಯೊಂದನ್ನು ಕಟ್ಟಿ ನಿಲ್ಲಿಸಿಬಿಟ್ಟ. ಎಂತೆಂಥ ಸಂಸ್ಥೆಗಳು ಮಾಡಲು ಸಾಧ್ಯವಾಗದ್ದನ್ನು ಒಬ್ಬನೇ ಮಾಡಿ ತೋರಿಸಿಬಿಟ್ಟ. ಉದ್ದೇಶ ಸ್ಪಷ್ಟ. ನಮ್ಮ ಭಾಗದ ರೋಗಿಗಳು ವೈದ್ಯಕೀಯ ಸೌಲಭ್ಯಗಳಿಲ್ಲದೆ ಕೊರಗಬಾರದು ಎಂಬುದು. ಇಂಥವುಗಳನ್ನೇ ನಾವು ಫೋನಿನಲ್ಲಿ ವಾರಕ್ಕೊಮ್ಮೆಯಾದರೂ ಮಾತಾಡುತ್ತಿ¨ªೆವು. ಆತನೊಡನೆ ಮಾತಾಡುವುದೆಂದರೆ ಒಂದು ಪಾಠ ಹೇಳಿಸಿಕೊಂಡಂತೆ. ಹೊಸ ಜಗತ್ತಿಗೆ ತೆರೆದುಕೊಂಡಂತೆ.ಹಾಗೇ ಮಾತಾಡುತ್ತ “ನಾನು ಬಾತ್‌ ರೂಂಗೆ ಹೊರಟಿದ್ದೇನೆ. ಆಮೇಲೆ ಆಸ್ಪತ್ರೆಗೆ ಹೋಗಿ ನಿನ್ನ ಪೇಶಂಟ್‌ ನೋಡಿ ಹನ್ನೊಂದು ಗಂಟೆಗೆ ಮತ್ತೆ ಮಾತಾಡುವೆ’ ಎಂದ.

ಹನ್ನೊಂದುವರೆಗೆ ಅವನ ಡ್ರೈವರ್‌ ಫೋನ್‌ ಮಾಡಿದ…
“ನಾನು ಡಾಕ್ಟರ್‌ ಅವರ ಡ್ರೈವರ್‌’ ಎಂದ. ನನ್ನ ಪೇಶಂಟ್‌ ಬಗೆಗೆ ಮಾತಾಡಲು ಫೋನ್‌ ಮಾಡಿರಬಹುದೆಂದು ತಿಳಿದು, “ಹೌದಾ…ಅವರ ಕಡೆ ಕೊಡು ಮಾತಾಡುವೆ’  ಎಂದೆ.
ಅವನು ಒಂದು ನಿಮಿಷ ಸುಮ್ಮನಾದ. ಆಮೇಲೆ ಒಮ್ಮೆಲೇ ಗದ್ಗದಿತನಾಗಿ
“ಇಲ್ಲ ಸರ್‌..ಡಾಕ್ಟರ್‌ ತೀರಿಹೋದರು…’ ಎಂದ.
ನನಗೆ ನಂಬಲಾಗಲಿಲ್ಲ. ಬರೀ ಒಂದು ಗಂಟೆಯ ಹಿಂದೆ ನನ್ನೊಡನೆ ಮಾತಾಡಿದ ಗೆಳೆಯ ಇನ್ನಿಲ್ಲವೆಂದರೆ ಹೇಗೆ ನಂಬಲಿ? ಅದೂ ಅದೇ ತಾನೇ ಜಿಮ್‌ ಮುಗಿಸಿ, ವಾಕಿಂಗ್‌ ಮುಗಿಸಿ ಚಹಾ ಕುಡಿಯುತ್ತ ಮಾತಾಡಿದ್ದ. ಅವನು ಮಾತಾಡುವಾಗ ಒಂದಿಷ್ಟೂ ಅವನ ಆರೋಗ್ಯ ಏರುಪೇರಾದ ಲಕ್ಷಣಗಳಿರಲಿಲ್ಲ. ಅದೇ ತಾನೇ ವಾಕಿಂಗ್‌ ಮುಗಿಸಿ ಚೈತನ್ಯದ ಚಿಲುಮೆಯಾಗಿ ಮಾತಾಡಿದ್ದ. ಅನೇಕ ಬಾರಿ ನನ್ನ ಆರೋಗ್ಯದ ಬಗೆಗೆ ಎಚ್ಚರವಹಿಸಲು ನನಗೇ ತಿಳಿಹೇಳಿದ್ದ. ಯಾವ ಖಾದ್ಯಗಳಲ್ಲಿ ಏನೇನು ಸತ್ವಗಳಿವೆ ಎಂಬುದನ್ನು ನಿಖರವಾಗಿ ಹೇಳಬಲ್ಲವನಾಗಿದ್ದ. ಅಂಥವನಿಗೆ ಹೀಗಾಯಿತೇ, ಎನಿಸಿತು.

ಬಾತೂಮ್‌ಗೆ ಹೋದವನು ಬಹಳ ಹೊತ್ತು ಬರಲಿಲ್ಲವಾದ್ದರಿಂದ ಅವರ ಮನೆಯವರು ಬಾಗಿಲು ಬಡಿದಿ¨ªಾರೆ. ತೆರೆದಿಲ್ಲ. ಬಾಗಿಲು ಮುರಿದು ನೋಡಿದರೆ ಅವನು ಇಹಲೋಕ ತ್ಯಜಿಸಿ ಬಹಳ ಹೊತ್ತಾಗಿತ್ತು. ಹಾಗಾದರೆ, ನನ್ನೊಡನೆ ಮಾತಾಡಿದ್ದೇ ಕೊನೆಯದೇನೋ…! ನಮ್ಮ ಕುಟುಂಬದ ಸದಸ್ಯನಂತೆಯೇ ಇದ್ದವನನ್ನು ಕಳೆದುಕೊಂಡ ದುಃಖ ಮನೆಯನ್ನೆಲ್ಲ ಆವರಿಸಿತು.  ನಾನು, ನನ್ನ ಮಗ, ನನ್ನ ಹೆಂಡತಿ ಬೆಳಗಾವಿಗೆ ದೌಡಾಯಿಸಿದೆವು.  ಹಾಲ್‌ನ ತುಂಬ ಮಲಗಿದ್ದವನನ್ನು ನೋಡಿ ಕರುಳು ಕಿವುಚಿದಂತಾಯ್ತು. ಮುಖದಲ್ಲಿ ಎಂದಿನ ಶಾಂತ ಭಾವ.  ನಿದ್ರೆ ಮಾಡುತ್ತಿದ್ದಾನೇನೋ ಎನ್ನುವಂಥ ನೋಟ. ನೂರು ವರ್ಷಗಳಲ್ಲಿ ಮಾಡಲಾಗದ್ದನ್ನು 54 ವರ್ಷಗಳಲ್ಲಿ ಸಾಧಿಸಿದೆನೆನ್ನುವ ತೃಪ್ತ ಭಾವ. ತುಟಿಯ ಕೊನೆಯಲ್ಲಿ ಒಂದು ಸಣ್ಣನೆಯ ಮುಗುಳ್ನಗು ಇತ್ತೇ…?

ನನಗೆ, ಹೆಂಡತಿಗೆ, ಮಗನಿಗೆ ದುಃಖ ತಡೆಯಲಾಗಲಿಲ್ಲ…ನಮ್ಮ ಮನೆಗೆ ಬಂದನೆಂದರೆ ಸೀದಾ ಡೈನಿಂಗ್‌ ಹಾಲ್‌ಗೆ ಬಂದು ನೀಡಿದ್ದನ್ನು ಖುಷಿಯಿದ ಉಂಡು, ಇಲ್ಲವೇ ತನಗೆ ಬೇಕೆನಿಸಿದ್ದನ್ನು ಮಾಡಿಸಿ, ರುಚಿ ನೋಡಿ “ನಿಮ್ಮ ಅಡುಗೆ ಮನೆಯಲ್ಲೇನೋ ಜಾದೂ ಇದೆ. ನಿಮ್ಮ ಮನೆಯಲ್ಲಿನ ಅಡುಗೆ ಎಷ್ಟು ರುಚಿ..’ ಎಂದು ಹೊಗಳಿ ಹೊಟ್ಟೆ ತುಂಬ ಉಂಡು, ಮನ ಮೆಚ್ಚುವಂತೆ ಮಾತಾಡುವ ಸ್ನೇಹಜೀವಿ ಇನ್ನಿಲ್ಲವಾದನೆಂಬ ವ್ಯಥೆ. ಆತನದು ಖಂಡಿತ ಸಾಯುವ ವಯಸ್ಸಲ್ಲ. ಯಾವುದೇ ರೋಗಗಳಿರಲಿಲ್ಲ, ದಿನಾಲೂ ಜಿಮ್‌ ಮಾಡುತ್ತಿದ್ದ…ಹಾಗಾದರೆ ಸತ್ತಿದ್ದೇಕೆ? ಗೊತ್ತಿಲ್ಲ! ಮತ್ತೂಮ್ಮೆ….Death is never predictable ಎನ್ನುವುದು ಮತ್ತೂಮ್ಮೆ ಸಿದ್ಧವಾಯಿತು, ಅಷ್ಟೇ. ಈ ಸಾವು ನ್ಯಾಯವೇ?

ಕೊನೆಯ ಮಾತು: ಅನೇಕ ವೈದ್ಯರು, ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದವರು, ಅಹರ್ನಿಶಿ ದುಡಿದು ಮುಂದೆ ಬಂದವರು, ಸೊನ್ನೆಯಿಂದ ಕೋಟಿ ಮುಟ್ಟಿದವರು, ಸಮಾಜಕ್ಕಾಗಿ ಜೀವ ತೇಯ್ದವರು ಈ ರೀತಿ ಅಕಾಲ ಮರಣ ಹೊಂದಿದ್ದನ್ನು ಹಲವು ಬಾರಿ ನಾವು ಕೇಳುತ್ತೇವೆ. ಅಂಥದರಲ್ಲಿ ಈ ಸಾವು ಕೂಡ ಹೊಸದೇನೂ ಅಲ್ಲ. ಆದರೆ  “ವೈದ್ಯಕೀಯದಲ್ಲಿದ್ದೂ ತಮ್ಮ ಸ್ವಂತ ಆರೋಗ್ಯ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಂಡಿರಲಿಲ್ಲವೇ..?’ ಎನ್ನುವುದೊಂದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಂತಹ ಘಟನೆಯ ಸುದ್ದಿಗಳನ್ನು ಕೇಳಿದಾಗಲಾದರೂ ಪರೀಕ್ಷೆ ಮಾಡಿಸಿಕೊಳ್ಳಬೇಕು, ಎಂದು ಇನ್ನುಳಿದವರು ಅಂದುಕೊಳ್ಳುವುದಿಲ್ಲ. ತಮ್ಮ ಒಳ್ಳೆಯದಕ್ಕಾಗಿ ಜನರೂ ಕೂಡ ಸ್ವಲ್ಪ ಬದ್ಧತೆಯನ್ನು, ಬಾಧ್ಯತೆಯನ್ನೂ ಹೊಂದಿದ್ದರೆ ಒಳ್ಳೆಯದು. ನಮ್ಮ ಕಾರುಗಳ ಸರ್ವಿಸಿಂಗ್‌ ದಿನಾಂಕ ನಮಗೆ ನೆನಪಿರುತ್ತದೆ. ಪ್ರತಿದಿನ ಬೆಳಿಗ್ಗೆ ತಪ್ಪದೆ ಅದನ್ನು ಒರೆಸಿ ಅದು ಇನ್ನೊಮ್ಮೆ ಹೊಲ ಸಾಗುವುದೇ ಇಲ್ಲವೇನೋ ಎಂಬಂತೆ ಅದನ್ನು ಸ್ವತ್ಛಗೊಳಿಸಿ ತೃಪ್ತಿಯಿಂದ ದಿಟ್ಟಿಸುತ್ತೇವೆ, ಸಂತೃಪ್ತಿಯಿಂದ ನೋಡುತ್ತೇವೆ. ಅದನ್ನು ಕೊಳ್ಳಲು ಬ್ಯಾಂಕಿನಲ್ಲಿ ಮಾಡಿದ ಸಾಲದ ಕಂತನ್ನು ತಪ್ಪದೇ ತುಂಬುತ್ತೇವೆ. ವರ್ಷದ ಕೊನೆಗೆ ಅದರ ಇನ್ಶೂರೆನ್ಸ್ ನವೀಕರಿಸುತ್ತೇವೆ. ಒಂದು ಕ್ಷಣ ಇವೇ ವಿಷಯಗಳನ್ನು ನಮ್ಮ ಸ್ವಂತ ಶರೀರಕ್ಕೆ, ತನ್ಮೂಲಕ ನಮ್ಮ ಆರೋಗ್ಯಕ್ಕೆ ಹೋಲಿಕೆ ಮಾಡಿ ನೋಡಿದರೆ ನಾವು ನಮ್ಮ ಸ್ವಂತಕ್ಕಿಂತಲೂ ನಮ್ಮ ಕಾರಿಗೆ ಕೊಡುವ ಪ್ರಾಮುಖ್ಯತೆ ಕಂಡು ಬರುತ್ತದೆ. ಆರೋಗ್ಯ ಪರೀಕ್ಷೆ ಎಂಬ ಸರ್ವಿಸಿಂಗ್‌, ಶರೀರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಆರೋಗ್ಯಕ್ಕಾಗಿ ಒಂದಿಷ್ಟು ಖರ್ಚು ಮಾಡುವುದು, ಆರೋಗ್ಯ ವಿಮೆ ಮಾಡಿಸುವುದು ಮುಂತಾದವು ಗಳ ಬಗ್ಗೆ ನಾವು ತೋರುವ ಅಸಡ್ಡೆಯನ್ನು ಗಮನಿಸಿದರೆ ನಮ್ಮ ಸ್ವಂತಕ್ಕಿಂತಲೂ ನಾವು ಹೊಂದಿದ “ಆಸ್ತಿ’ಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ವಿಪರ್ಯಾಸ ತಿಳಿಯುತ್ತದೆ. ನಮ್ಮ ಆರೋಗ್ಯ ನಮ್ಮ ಆದ್ಯತೆಗಳಲ್ಲಿ ಒಂದಾಗಬೇಕು. ಅದಕ್ಕಾಗಿ ಒಂದಿಷ್ಟು “ಟಿಪ್ಸ್’

ನಿಮಗೆ ಒಳ್ಳೆಯವನೆನಿಸಿದ ಒಬ್ಬ ವೈದ್ಯನನ್ನು ಆಯ್ದುಕೊಂಡು ಅವನ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸಿ. ವೈದ್ಯಕೀಯ ಉದ್ಯಮವಾಗುತ್ತಿರುವ ಈ ದಿನಗಳಲ್ಲೂ ಕೂಡ ಬಹುತೇಕ ವೈದ್ಯರು ಒಳ್ಳೆಯವರೇ. ಯಾಕೆಂದರೆ ತಮ್ಮನ್ನು ನಂಬಿ ಬಂದ ರೋಗಿಗೆ ಗುಣವಾಗಲಿ ಎಂದೇ ಎಲ್ಲ ವೈದ್ಯರೂ ಹಾರೈಸುವುದು. ಅದರಲ್ಲೂ ನೀವು ಅವರ ಖಾಯಂ ರೋಗಿ ಎಂದಾದರೆ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ಬಹುಪಾಲು ವೈದ್ಯರು ವೈದ್ಯಕೀಯ ವಿದ್ಯಾಲಯ ಸೇರುವಾಗ, ಜನಸೇವೆ ಮಾಡುವ ಗುರಿ ಹೊಂದಿಯೇ ಸೇರಿರುತ್ತಾರೆ. ಆದರೆ ಹೊರಬಂದೊಡನೆ ಸುತ್ತಲಿನ ಪರಿಸರ, ಸಾಮಾಜಿಕ ಅಭದ್ರತೆ, ನೂರೆಂಟು ವೆಚ್ಚಗಳು ಅವರನ್ನು ಅಧೀರರ‌ನ್ನಾಗಿಸುತ್ತವೆ. ನಿಮ್ಮ ಬೆಂಬಲ ಅವರನ್ನು ಸಮಾಜಮುಖೀಗಳನ್ನಾಗಿಸಬಹುದು.

ಕಾಲ ಕಾಲಕ್ಕೆ, ನಿಮ್ಮ ವಯಸ್ಸಿಗನುಗುಣವಾಗಿ ನಿಮ್ಮ ವೈದ್ಯರು ತಿಳಿಸಿದ ತಪಾಸಣೆಗಳನ್ನು ಮಾಡಿಸಿಕೊಳ್ಳಿ. ಅಂತಹ ಪರೀಕ್ಷೆಗ ಳಿಂದ ಅನೇಕ ಅವಘಡಗಳನ್ನು, ನಿಮ್ಮ ಕುಟುಂಬಕ್ಕೆ ಅನಿರೀಕ್ಷಿತ ಆಘಾತವನ್ನೂ ತಪ್ಪಿಸಬಹುದು.

ನಿಮ್ಮದಷ್ಟೇ ಅಲ್ಲ, ನಿಮ್ಮ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ಪರೀಕ್ಷೆಗಳೂ ಮುಖ್ಯ. ಯಾವುದೂ “ಸರಪ್ರೈಜ್‌’ ಆಗಿ ಬಂದಿರಬಾರದು. 

ನಿಮಗೆ ಸಂಶಯ ಕಂಡಾಗಲೆಲ್ಲ ಇನ್ನೊಬ್ಬ “ಪರಿಣಿತ’ ವೈದ್ಯರ ಅಭಿಪ್ರಾಯ ಪಡೆಯುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದೇ ಒಂದು ಚಟವಾಗಬಾರದು.

ಸಾಧ್ಯವಾದಷ್ಟೂ ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಆರೋಗ್ಯ ವಿಮೆ ಮಾಡಿಸಿ. ಮಾಡಿಸುವಾಗ ಬಹಳ ವೆಚ್ಚದ್ದು ಅನಿಸಿದರೂ ದೊಡ್ಡ ಖರ್ಚುಗಳು ಬಂದಾಗ ಉಪಯೋಗವಾಗುತ್ತದೆ.

ನಿಮ್ಮ ನೆರೆಯವರೊಂದಿಗೆ ಕೂಡಿ ಒಂದು ಸಣ್ಣ ಆರೋಗ್ಯ ಗುಂಪು ಮಾಡಿಕೊಳ್ಳಿ. ಒಬ್ಬರು ಇನ್ನೊಬ್ಬರ ಆರೋಗ್ಯದ ಬಗ್ಗೆ ವಿಚಾರಿಸಿ. ಹಾಳು ಹರಟೆಗಳನ್ನು ಕಡಿಮೆ ಮಾಡಿ ಆರೋಗ್ಯದ ಬಗ್ಗೆ ಮಾತಾಡಿ. ಅವಶ್ಯವಿ¨ªಾಗಲೆಲ್ಲ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ಆರೋಗ್ಯದ ವಿಷಯದ ಬಗ್ಗೆ ಚರ್ಚಿಸಲು ಯಾವ ವೈದ್ಯರೂ ನಿರಾಕರಿಸಲಾರರು.

ವೈದ್ಯರನ್ನು ನಿಮ್ಮ ಗುಂಪಿನ ಸದಸ್ಯರನ್ನಾಗಿಸಿಕೊಳ್ಳಿ. ಅವರೂ ನಿಮ್ಮ ಜೊತೆ ಬೆರೆಯಲು ಇಷ್ಟ ಉಳ್ಳವರಾಗಿರುತ್ತಾರೆ.

ಬೇರೆಯವರ ವಾಹನಗಳಿಗಷ್ಟೇ ಅಪಘಾತಗಳಾಗುತ್ತವೆ, ತಮ್ಮದಕ್ಕೆ ಆಗುವುದಿಲ್ಲ ಎಂಬ ಧೋರಣೆ ಹೇಗೆಯೋ, ಹಾಗೆಯೇ ಇದು ಕೂಡ. ವಯಸ್ಸು ನಲವತ್ತಾದೊಡನೆ ಒಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಏನೂ ಕೊರತೆಗಳಿಲ್ಲದಿದ್ದರೆ ಮತ್ತೆ ಇಮ್ಮಡಿ ಉತ್ಸಾಹದಿಂದ ದುಡಿಯಲು ಹೊರಡಿ. ಸಣ್ಣ ಕೊರತೆಗಳಿದ್ದರೆ ನಿವಾರಿಸಿಕೊಳ್ಳಿ. ದೊಡªವಿದ್ದರೆ ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸಿ ನಿಗಾ ವಹಿಸಿ. ಸಾವು ಯಾರನ್ನೂ ಬಿಟ್ಟಿಲ್ಲ. ಆದರೆ ಈ ಅಕಾಲಿಕ ಸಾವು ಎಂಬ ಅನಿಷ್ಟವನ್ನು ಹಲವು ಬಾರಿ ತಪ್ಪಿಸಬಹುದು. ತನ್ಮೂಲಕ ಮನೆಯವರಿಗೂ, ನಂಬಿದವರಿಗೂ ಕೊಡುವ ಶಾಕ್‌ ತಪ್ಪಿಸಬಹುದು!

ಹಾಗೆ ವಿಚಾರಿಸಿದರೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ, ಹೆತ್ತವರಿಗೆ ಮಕ್ಕಳು ಅವರವರ ಜನ್ಮದಿನಗಳಂದು ಕೊಡುವ ಕೊಡುಗೆಗಳಾಗಬೇಕು, ಈ ಆರೋಗ್ಯ ಪರೀಕ್ಷೆಗಳು.

ಅದೆಲ್ಲ ಬಿಟ್ಟು ಹೀಗೆ ಕುಳಿತವರು ಹಾಗೆ ಎದ್ದು ಹೋಗಿಬಿಟ್ಟರೆ ಹೇಗೆ? ಹೋದವರೇನೋ ಹೋಗಿಬಿಡುತ್ತಾರೆ, ಶಾಂತವಾಗಿ, ಇನ್ನಿಲ್ಲದ ಹಾಗೆ. ಎಂದಾದರೊಂದು ದಿನ ಹೋಗಲೇಬೇಕಲ್ಲ. ಆದರೆ ಹಾಗಾಗುವುದರಿಂದ ಇದ್ದವರಿಗೆ ಬಿಟ್ಟುಹೋಗುವ ದುಃಖ ಮತ್ತು ಹೊರೆ? ಅದಕ್ಕಿಂತ ಮುಖ್ಯವೆಂದರೆ, ಇನ್ನೊಂದಿಷ್ಟು ವರ್ಷ ಸುಖದಿಂದ ಬದುಕಬಹುದಲ್ಲ, ಸುಂದರವಾದ ಈ ಪ್ರಪಂಚದಲ್ಲಿ!

ಡಾ. ಶಿವಾನಂದ ಕುಬಸದ

ಟಾಪ್ ನ್ಯೂಸ್

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

5-mng

Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.