CONNECT WITH US  

ಭಕ್ತರ ಸ್ವಾಗತಕ್ಕೆ ಸಜ್ಜಾಗಿದೆ ಧರ್ಮಸ್ಥಳ

ಬಾಹುಬಲಿಯ ಉನ್ನತ ತತ್ವಾದರ್ಶಗಳ ಪ್ರತೀಕ ಅವನ ಬೃಹನ್ಮೂರ್ತಿಗಳು

ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕಾಗಿ ಶ್ರೀ ಧರ್ಮಸ್ಥಳ ಸಿದ್ಧಗೊಂಡಿದೆ. ಲಕ್ಷಾಂತರ ಭಕ್ತರ, ಗಣ್ಯರ ಸ್ವಾಗತಕ್ಕೆ ನವವಧುವಿನಂತೆ ಸಿಂಗಾರಗೊಂಡು ನಿಂತಿದೆ. ಶ್ರೀಕ್ಷೇತ್ರದ ಎಲ್ಲ ಕಾರ್ಯಕ್ರಮಗಳ ಹಿಂದಿರುವ ಶಕ್ತಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು. ಶ್ರೀ ಬಾಹುಬಲಿಯ ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು ಇದುವರೆಗಿನ ಮೂರು ಮಸ್ತಕಾಭಿಷೇಕಗಳನ್ನು ಅವರು ನ ಭೂತೋ ನ ಭವಿಷ್ಯತಿ ಎಂಬಂತೆ ಸಮರ್ಥವಾಗಿ ನಿಭಾಯಿಸಿದ್ದಾರೆ. ಈಗಿನದು ತ್ಯಾಗಮೂರ್ತಿಗೆ ಚತುರ್ಥ ಮಹಾಮಸ್ತಕಾಭಿಷೇಕ.  "ಉದಯವಾಣಿ' ನಡೆಸಿರುವ ಈ ವಿಶೇಷ ಸಂದರ್ಶನದಲ್ಲಿ ಡಾ| ಹೆಗ್ಗಡೆಯವರು ಮಹಾಮಸ್ತಕಾಭಿಷೇಕಗಳ ಸಿದ್ಧತೆಗಳ ಜತೆಗೆ ಹಲವು ತಾತ್ವಿಕ ವಿಚಾರಗಳ ಬಗೆಗೂ ಮಾತನಾಡಿದ್ದಾರೆ.

ಬಾಹುಬಲಿ ಎಂದರೆ ಬೃಹನ್ಮೂರ್ತಿಯ ಕಲ್ಪನೆ ಕಣ್ಣೆದುರು ಬರುತ್ತದೆ? ಅದೇಕೆ?
ಸಾಮಾನ್ಯವಾಗಿ ಬಾಹುಬಲಿಯ ಸಣ್ಣಪುಟ್ಟ ಮೂರ್ತಿಗಳು ಜೈನ ಗೃಹಸ್ಥರ ಮನೆಗಳಲ್ಲಿ ಇದ್ದೇ ಇರುತ್ತವೆ. ಯುವರಾಜನಾಗಿದ್ದು, ಚಕ್ರವರ್ತಿಯಾಗಿ ತನ್ನನ್ನು ಎದುರಿಸಿದ ಅಣ್ಣ ಭರತನನ್ನು ಗೆದ್ದ ಬಳಿಕವೂ ಎಲ್ಲವನ್ನೂ ತ್ಯಾಗ ಮಾಡಿ ತಪೋರಾಜ್ಯದೆಡೆಗೆ ನಡೆದ ಬಾಹುಬಳಿಕ ತತ್ವಾದರ್ಶಗಳು ಉನ್ನತವಲ್ಲವೆ! ಅವುಗಳ ಹಿರಿಮೆಯನ್ನು ಅತಿ ಹೆಚ್ಚು ಜನರಿಗೆ, ಜೈನರು ಮಾತ್ರವಲ್ಲದೆ ವಿಶ್ವಕ್ಕೂ ತಿಳಿಸುವುದಕ್ಕಾಗಿಯೇ ಬಾಹುಬಲಿಯ ಬೃಹತ್‌ ಮೂರ್ತಿಗಳನ್ನು ನಿರ್ಮಿಸಲಾಗಿದೆ. 

ದಿಗಂಬರ ಮುನಿಗಳು ನೀಡುವ ಸಂದೇಶ ಏನು? 
ತೀರ್ಥಂಕರರು ನೀಡಿದಂತಹ ತತ್ವ-ಉಪದೇಶಗಳನ್ನು ಪಾಲನೆ ಮಾಡಿ ಎಂದು ದಿಗಂಬರ ಮುನಿಗಳು ಸಂದೇಶವನ್ನು ನೀಡುತ್ತಾರೆ. ತ್ಯಾಗ-ಶಾಂತಿಯ ಮಹತ್ವವನ್ನು ತಿಳಿಸುತ್ತಾರೆ. ದಿಗಂಬರತ್ವ, ಆಹಾರ ಸೇವನೆ, ನಿದ್ದೆ, ಕೇಶಲೋಚನ- ಹೀಗೆ ಅವರ ಕಠಿಣ ವ್ರತಸ್ಥ ಮುನಿಜೀವನವೇ ಸಮಗ್ರವಾಗಿ ಒಂದು ಸಂದೇಶವಾಗಿದೆ. 

ದಿಗಂಬರ ಮುನಿಗಳ ಆಹಾರ ಸೇವನೆಯ ಕ್ರಮಗಳ ಬಗ್ಗೆ ವಿವರಿಸುವಿರಾ?
ಮಹಾಮಸ್ತಕಾಭಿಷೇಕದ ಸಂದರ್ಭ ಜೈನ ಶ್ರಾವಕರು ಭಗವಾನ್‌ ಬಾಹುಬಲಿಗೆ ಅಭಿಷೇಕ ಮಾಡುತ್ತಾರೆ. ಇದನ್ನು ಯಾರು ಮಾಡಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮ್ಮ ಜೈನ ದಿಗಂಬರ ಮುನಿಗಳ ದರ್ಶನ ಮಾಡುವಾಗ, ಅವರಿಗೆ ಆಹಾರ ದಾನ ಮಾಡುವ ಸಂದರ್ಭದಲ್ಲಿ ನಾವು ಅವರ ಮುಂದೆ ಒಂದು ಮಾತನ್ನು ಹೇಳುವ ಕ್ರಮವಿದೆ. ಅದು ನಮ್ಮ ಆಂತರಿಕ ಮತ್ತು ಬಾಹ್ಯ ಶುದ್ಧಿಯನ್ನು ನಿವೇದಿಸಿಕೊಂಡು ಮುನಿಗಳಿಗೆ ಆಹಾರ ದಾನ ಮಾಡಲು ಯೋಗ್ಯರು ಎಂದು ನಿವೇದಿಸಿಕೊಳ್ಳುವ ಕ್ರಮ. ನಾನು ನಿಮಗೆ ಆಹಾರ ನೀಡಲು ಬಂದಿದ್ದೇನೆ, ನನ್ನ ಮನಸ್ಸು, ವಚನ ಮತ್ತು ಕಾಯ ಶುದ್ಧಿ ಇದೆ. ಆಹಾರ ಶುದ್ಧಿ, ಜಲ ಶುದ್ಧಿ ಇದೆ ಎಂದು ನಾವು ಅವರಿಗೆ ವಚನ ಕೊಡಬೇಕು.

ದಿಗಂಬರ ಮುನಿಗಳು ಜೈನ ಧರ್ಮ ಪಾಲನೆ ಮಾಡುವವರಲ್ಲಿ ಮಾತ್ರ ಆಹಾರ ಸ್ವೀಕಾರ ಮಾಡುತ್ತಾರೆ. ಅವರ ವ್ರತ- ನಿಯಮಗಳು ಎಷ್ಟು ಕಟ್ಟುನಿಟ್ಟಾಗಿರುತ್ತವೆ ಎಂದರೆ, ಮುನಿಗಳು ಹೋಟೆಲ್‌ಗ‌ಳಲ್ಲಿ, ಸಮಾರಂಭಗಳಲ್ಲಿ ಆಹಾರ ಸೇವೆ ಮಾಡುವವರಿಂದಲೂ ಆಹಾರವನ್ನು ದಾನವಾಗಿ ಸ್ವೀಕರಿಸುವುದಿಲ್ಲ. ಬಾವಿಯ ನೀರನ್ನೇ ಬಳಸಬೇಕು ಎಂಬ ನಿಯಮವಿದೆ. ನೀರಿನ ಶೋಧನೆಯ ಕುರಿತು ಕೂಡ ಕ್ರಮಗಳಿವೆ. ಜೈನರಲ್ಲಿ ಕತ್ತಲಾಗುವುದರ ಒಳಗೆ ಆಹಾರ ಸ್ವೀಕರಿಸಬೇಕು ಎಂಬ ನಿಯಮವಿದೆ. ಇದಕ್ಕೆ ಅಹಿಂಸಾತತ್ವವೇ ಮೂಲ. ಕತ್ತಲಾದಂತೆ ಕ್ರಿಮಿಕೀಟಗಳ ಚಟುವಟಿಕೆ ಆರಂಭವಾಗುತ್ತವೆ. ಅವು ಎಲ್ಲಿ ಇರುತ್ತವೆ, ಹೇಗಿರುತ್ತವೆ ಎಂದು ಗೊತ್ತಾಗುವುದಿಲ್ಲ. ಅವು ಆಹಾರದಲ್ಲಿ ಬಿದ್ದರೆ ಅಹಿಂಸಾತತ್ವಕ್ಕೆ ಭಂಗ ಬರಬಹುದು ಎಂಬ ಹಿನ್ನೆಲೆಯಲ್ಲಿ ಜೈನರಲ್ಲಿ ರಾತ್ರಿ ಹೊತ್ತಿನಲ್ಲಿ ಆಹಾರ ಸೇವನೆಗೆ ನಿಷೇಧವಿದೆ. ಈ ಎಲ್ಲ ನಿಯಮಗಳನ್ನು ಪಾಲಿಸುವವರ ಬಳಿಯಷ್ಟೇ ಜೈನ ಮುನಿಗಳು ಆಹಾರವನ್ನು ಸ್ವೀಕರಿಸುತ್ತಾರೆ.

ಪ್ರಾಚೀನ ಮತ್ತು ಆಧುನಿಕ ಸಾಹಿತ್ಯದಲ್ಲಿ ಬಾಹುಬಲಿಯ ವರ್ಣನೆ ಮತ್ತು ಸಂದೇಶವೇನಿದೆ?
ಪ್ರಾಚೀನ ಮತ್ತು ಆಧುನಿಕ ಸಾಹಿತ್ಯದಲ್ಲಿ ಬಾಹುಬಲಿಯ ಸಂದೇಶವು ವಿವಿಧ ರೀತಿಯಲ್ಲಿ ಅಭಿವ್ಯಕ್ತವಾಗಿದ್ದರೂ ಎಲ್ಲವೂ ಬಾಹುಬಲಿಯ ತತ್ವಾದರ್ಶಗಳನ್ನು ವ್ಯಕ್ತಪಡಿಸುವುದೇ ಆಗಿದೆ. ಜೈನ ಧರ್ಮದ ಉನ್ನತ ತತ್ವಾದರ್ಶಗಳನ್ನು ದೈನಂದಿನ ಬದುಕಿನಲ್ಲಿ ಆಚರಣೆಯ ಮೂಲಕ ಪಾಲಿಸಬೇಕು ಹಾಗೂ ಬದುಕಿನ ಉನ್ನತ ಲಕ್ಷÂವಾದ ಮೋಕ್ಷ ಮಾರ್ಗದ ಕಡೆಗೆ ಮುನ್ನಡೆಯುವಂತಾಗಬೇಕು.

ಜೈನ ಶ್ರಾವಕರ ಧರ್ಮವೇನು? 
ಜೈನ ಧರ್ಮದಲ್ಲಿರುವ ರತ್ನತ್ರಯಗಳು ಹಾಗೂ ಪಂಚ ಅಣುವ್ರತಗಳಾದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಸಂಗ್ರಹ ಇವುಗಳ ಪಾಲನೆಯೇ ಜೈನ ಶ್ರಾವಕರ ಧರ್ಮ (ಕರ್ತವ್ಯ)ವಾಗಿದೆ. 

ಅಭಿಷೇಕದಲ್ಲಿ ದ್ರವ್ಯಗಳ ಬಳಕೆಯ ಉದ್ದೇಶ?
ಪೂಜೆ- ಗೌರವದ ಸಂಕೇತವಾಗಿ ಪೂಜಾ ದ್ರವ್ಯಗಳನ್ನು ಬಳಕೆ ಮಾಡುತ್ತಾರೆ. ಅದಲ್ಲದೆ ಧಾರ್ಮಿಕ ವಿ ಧಿ-ವಿಧಾನಗಳ ಬಗೆಗೂ ಜನರಿಗೆ ಅರಿವು ಉಂಟಾಗುತ್ತದೆ. 

ತರುಣ ಜನಾಂಗದವರು ಮಹಾಮಸ್ತಕಾಭಿಷೇಕದ ಪ್ರಕ್ರಿಯೆಗಳಲ್ಲಿ ಹೇಗೆ ತೊಡಗಿದ್ದಾರೆ?
ತರುಣ ಸಮಾಜ ಎಲ್ಲ ರೀತಿಗಳಲ್ಲೂ ಭಾಗವಹಿಸುತ್ತಾರೆ. ಆದರೆ ಅವರು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹೆಚ್ಚು ಉತ್ಸುಕರಾಗಿರುತ್ತಾರೆ. ಸ್ವಯಂಸೇವಕರಾಗಿ, ಅಡುಗೆ, ಊಟದ ವ್ಯವಸ್ಥೆಯಲ್ಲಿ, ಭಕ್ತರ ಸೇವೆ ಮಾಡುವಲ್ಲಿ, ಮುನಿ ಸೇವೆ ಮಾಡುವಲ್ಲಿ, ಸಾಂಸ್ಕೃತಿಕ ಮತ್ತು ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ಅವರು ತೊಡಗಿಕೊಳ್ಳುತ್ತಾರೆ. ಅದು ಅವರ ವಯೋಧರ್ಮಕ್ಕೆ ಸಹಜ. ವೃದ್ಧರು, ಮಧ್ಯ ವಯಸ್ಸಿನವರು ಆಧ್ಯಾತ್ಮಿಕವಾದ ಪೂಜಾ ಕ್ರಿಯಾಭಾಗದಲ್ಲಿ ತೊಡಗಿದರೆ, ಯುವಕರು ವ್ಯವಸ್ಥಾ ಭಾಗದಲ್ಲಿ ತೊಡಗುತ್ತಾರೆ. ಈ ಬಾರಿಯೂ ನಮ್ಮಲ್ಲಿ ಸಾವಿರಾರು ಮಂದಿ ಸ್ವಯಂಸೇವಕರಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.

ಮಹಾಮಸ್ತಕಾಭಿಷೇಕಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಹೇಗೆ ಸಿದ್ಧವಾಗಿದೆ?
ನಗರ ಅಲಂಕಾರದ ವಿಚಾರದಲ್ಲಿ ಕ್ಷೇತ್ರದಲ್ಲಿ ಯಾವಾಗಲೂ ಹೊಸತನವನ್ನು ಕಾಣಲು ನಾನು ಇಚ್ಛೆ ಪಡುತ್ತೇನೆ. ಉತ್ಸವ, ಸಮಾರಂಭಗಳು ಮೋಜು ಮಸ್ತಿ ಮಾಡುವ, ಉಂಡು ತಿಂದು ಹೋಗುವ ಕಾರ್ಯಕ್ರಮಗಳೆಂಬ ಸಾಮಾನ್ಯ ಕಲ್ಪನೆ ಇದೆ. ಆದರೆ ನಾವು ಒಂದು ಸುಂದರವಾದ ದೃಶ್ಯವನ್ನು, ಸ್ವತ್ಛ ಪರಿಸರವನ್ನು, ಸೊಬಗಿನ ಕಲೆಯನ್ನು ವೀಕ್ಷಿಸಿದಾಗ ಅಂತರಂಗದಲ್ಲಿ ಅದು ಚಿರಸ್ಥಾಯಿಯಾಗಿ ದಾಖಲಾಗುತ್ತದೆ.

ಮುಂದೆ ಯಾವುದೇ ಸಂದರ್ಭದಲ್ಲಿ ಅದು ನಮ್ಮ ನೆನಪಿಗೆ ಬಂದಾಗ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ಜತೆಗೆ ಉತ್ಸಾಹವನ್ನು ಒದಗಿಸುತ್ತದೆ. ಹಾಗಾಗಿ ನಾವು ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ನಿರ್ವಹಿಸುವಾಗ ಅಲಂಕಾರಕ್ಕೆ ಹೆಚ್ಚಿನ ಪ್ರಾಶಸ್ತÂವನ್ನು ಕೊಡುತ್ತೇವೆ. ಅದೃಷ್ಟವಶಾತ್‌ ಈ ಸಂದರ್ಭದ ವ್ಯವಸ್ಥೆಗೆ ಸಹಕಾರ ನೀಡುವ, ಉತ್ಸಾಹದಿಂದ ಕೆಲಸ ನಿರ್ವಹಿಸುವ ಕಾರ್ಯಕರ್ತರು ನಮಗೆ ದೊರಕಿರುವುದು ನಮ್ಮ ಪುಣ್ಯ. ಹಾಗಾಗಿ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಹೊಸತಾದ ವಿನ್ಯಾಸಗಳು, ವಸ್ತುಗಳ ಬಳಕೆ, ಅವುಗಳನ್ನು ಪ್ರಕಟಿಸುವ ರೀತಿ, ವಿದ್ಯುತ್‌ ಅಲಂಕಾರಗಳನ್ನು ಜೋಡಿಸಿ ಇನ್ನೂ ಸುಂದರಗೊಳಿಸುವ ರೀತಿ ನಮ್ಮ ವೈಶಿಷ್ಟÂ.
ಇದರ ಹಿಂದೆ ಒಂದು ಭಾವ ಇದೆ. ಮಂಜುನಾಥ ಸ್ವಾಮಿಯ ದರ್ಶನ, ಬಾಹುಬಲಿಯ ಮಸ್ತಕಾಭಿಷೇಕಕ್ಕೆ ಬರುವಾಗ ಭಕ್ತರನ್ನು ಇಡೀ ನಗರವೇ ಸ್ವಾಗತಿಸುತ್ತದೆ. ಪುರಾಣದ ಕಥೆಗಳಲ್ಲಿ ರಾಮನ ವಿವಾಹ, ಪಾಂಡವರ ಕಾಲದ ನಗರಾಲಂಕಾರಗಳ ವರ್ಣನೆಗಳಿವೆ. ಅದು ಸಮೃದ್ಧಿಯ ಸಂಕೇತ. ಬರೇ ಓದಿದ್ದಾದರೂ ಜನರು ಅದನ್ನು ನೂರ್ಕಾಲ ನೆನಪಿನಲ್ಲಿ ಇರಿಸಿಕೊಳ್ಳುತ್ತಾರೆ. ಅಂತೆಯೇ ಕ್ಷೇತ್ರಕ್ಕೆ ಬಂದವರು ನೋಡಲೇಬೇಕಾದ, ನೋಡಿ ಆನಂದಿಸಬೇಕಾದ ವಾತಾವರಣವನ್ನು ನಿರ್ಮಾಣ ಮಾಡಿದ್ದೇವೆ.

ಮಸ್ತಕಾಭಿಷೇಕದ ಜನಮಂಗಲ ಕಾರ್ಯಕ್ರಮದಲ್ಲಿ ಅಶಕ್ತರಿಗೆ ನೆರವಿನ ಬಗ್ಗೆ?
ಜನಮಂಗಲ ಕಾರ್ಯಕ್ರಮದ ಭಾಗವಾಗಿ ಈ ಬಾರಿ ಅಶಕ್ತರಿಗೆ ನೆರವು ನೀಡುವ ಉದ್ದೇಶದಿಂದ 8,450 ಮಂದಿಗೆ ಮಾಸಾಶನ ನೀಡಲು ಉದ್ದೇಶಿಸಲಾಗಿದೆ. 1,200 ಅಂಗವಿಕಲರು, 2,250 ಮಂದಿ ಅನಾರೋಗ್ಯ ಪೀಡಿತರು, 5,000 ಮಂದಿ ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತದೆ. ಜತೆಗೆ 600 ಮಂದಿಗೆ ವೀಲ್‌ಚೇರ್‌, 2,500 ಮಂದಿಗೆ ವಾಟರ್‌ ಬೆಡ್‌, ಸಾವಿರ ಮಂದಿಗೆ ಇತರ ಸಲಕರಣೆಗಳನ್ನು ನೀಡಲಾಗುತ್ತದೆ. ಕ್ಷೇತ್ರದಿಂದ ಈ ತನಕ ಒಟ್ಟು 24.67 ಕೋ.ರೂ.ಗಳ ಮಾಸಾಶನ ನೀಡಲಾಗಿದೆ.

ಕಿರಣ್‌ ಸರಪಾಡಿ 


Trending videos

Back to Top