CONNECT WITH US  

ಜಗತ್ತಿಗೆ ಭಾರತದ ಶಕ್ತಿ ತಿಳಿಸಿದ ಸಂತ; ಮರಣದ ಹಿಂದಿನ ನಿಗೂಢತೆ!

ಅದು ಕೋಲ್ಕತಾದ ಬೇಲೂರು ಆಶ್ರಮ. ಅದೊಂದು ಮಧ್ಯರಾತ್ರಿ ಅಲ್ಲಿ ಮಲಗಿದ್ದ ತರುಣ ಸನ್ಯಾಸಿಯೋರ್ವ ಧುತ್ತೆಂದು ಎದ್ದು ಹೊರಗೋಡಿ ಬರುತ್ತಾನೆ. ವೇದನೆಯಿಂದ ಮನದಲ್ಲೇ ಚಡಪಡಿಸುತ್ತಾ ಅತ್ತಿಂದಿತ್ತಾ ಅಲೆದಾಡುತ್ತಿರುತ್ತಾನೆ. ಇದನ್ನು ಕಂಡ ಸಹವರ್ತಿಯೋರ್ವ ನಿದ್ದೆಯಿಂದ ಎದ್ದು ಆ ತರುಣ ಸನ್ಯಾಸಿಯ ಬಳಿಗೆ ಬಂದು ಏನಾಯಿತು? ಹುಷಾರಿಲ್ಲವೇ? ನಿದ್ದೆ ಬಂದಿಲ್ಲವೇ ಎಂದು ಕೇಳಲು... ಇಲ್ಲಾ, ದೂರದ ಆಗ್ನೇಯದ ಕಡೆ ನೂರಾರು ಮಂದಿ ನರಳುವ ಧ್ವನಿ ಕೇಳುತ್ತಿದೆ, ಸಾವು ಬದುಕಿನ ನಡುವೆ ಹೋರಾಡುತ್ತಿರುವ ಚಿತ್ರಣ ಕಾಣುತ್ತಿದೆ, ನಿದ್ದೆ ಮಾಡಲಿ ಎಂದುತ್ತರಿಸುತ್ತಾನೆ! ಈ ಉತ್ತರಕ್ಕೆ ಗಲಿಬಿಲಿಗೊಂಡ ಸಹವರ್ತಿ ಅದೇನೋ ಕನಸು ಕಂಡಿರಬೇಕೆಂದು ಅರ್ಥೈಸಿ ಸುಮ್ಮನೆ ಮಲಗಿಬಿಟ್ಟರೆ ಮರುದಿನ, ಹಿಂದಿನ ರಾತ್ರಿ ದೂರದ ಫಿಜಿ ದೇಶದಲ್ಲಿ ಭೂಕಂಪನವಾಗಿದೆ, ನೂರಾರು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಮನೆಮಠಗಳನ್ನು ಕಳೆದುಕೊಂಡಿದ್ದಾರೆ ಎಂದು ಸುದ್ದಿಯಾಗಿರುತ್ತದೆ! ಇದು ಕತೆಯೆಂದೆನ್ನಿಸಬಹುದು. ಆದರೆ ಕತೆಯಂತಿರುವ ಈ ಪವಾಡ ನಿಜವಾಗಿಯೂ ನಡೆದಂತದ್ದೇ. ಆ ದುರ್ಘ‌ಟನೆಯನ್ನು ತನ್ನ ದಿವ್ಯ ದೃಷ್ಟಿಯಿಂದಲೇ ಗ್ರಹಿಸಿಕೊಂಡಿದ್ದ ಆ ಅದ್ಭುತ ತರುಣ ಸನ್ಯಾಸಿ ಬೇರಾರು ಅಲ್ಲ... ಹಿಂದೂ ಧರ್ಮದ ಭೋರ್ಗರೆವ ಸಮುದ್ರದಂತಿದ್ದ ಸ್ವಾಮಿ ವಿವೇಕಾನಂದ!

ಕೀರ್ತಿ ಪತಾಕೆ ಹಾರಿಸಿದ ಸಂತ;
ಹೌದು, ಸ್ವಾಮಿ ವಿವೇಕಾನಂದರೆಂದರೆ ನಮಗೆ ನೆನಪಾಗುವುದು ಚಿಕಾಗೋ ಕಾನ್ಫೆರೆನ್ಸ್‌!, 'ಸಹೋದರ ಸಹೋದರಿಯರೇ' ಎಂಬ ಭಾಷಣದ ಪ್ರಾರಂಭಿಕ ಸಾಲುಗಳು! ಆದರೆ ಪರಮಹಂಸರೆಂಬ ದೇವಮಾನವನ ಗರಡಿಯಲ್ಲಿ ಪಳಗಿದ ಸ್ವಾಮಿ ವಿವೇಕಾನಂದ ಎನ್ನುವ ಸಂತ ಅದರಾಚೆಗೆ ಬೆಳೆದು ಯೋಗಿಯೇ ಆಗಿದ್ದ. ಹಿಂದೂ ಧರ್ಮದ ಉನ್ನತೀಕರಣದ ಹಿಂದೆ ಸಂತರು ಋಷಿಮುನಿಗಳ ಪಾತ್ರ ಕಾಣಬಹುದು. ಆದರೆ ಆದರೆ ಸನಾತನ ಧರ್ಮದ ಕೀರ್ತಿ ಪತಾಕೆಯನ್ನು ಪಶ್ಚಿಮದ ಕಡಲಾಚೆಗೂ ಪಸರಿಸಿದ ವ್ಯಕ್ತಿ ಯಾರು ಎಂದು ಕೇಳಿದರೆ ಅದು ಸ್ವಾಮಿ ವಿವೇವಾಕನಂದ! ಹಿಂದೂ ಸಮಾಜದಲ್ಲಿ ಸಮುದ್ರ ಪಯಣವೇ ನಿಷೇಧವಾಗಿದ್ದ ಆ ಕಾಲಘಟ್ಟದಲ್ಲಿ ಧರ್ಮದ ಕಂಪನ್ನು ಇಡೀ ವಿಶ್ವಕ್ಕೆ ಹಬ್ಬಿಸಬೇಕು, ಆ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಬೇಕು ಎಂಬ ಏಕೈಕ ದೃಷ್ಟಿಯಿಂದ ಹಡಗನ್ನು ಏರಿ ಪಶ್ಚಿಮ ರಾಷ್ಟ್ರಗಳಿಗೆ ತೆರಳಿ ಎಳೆಎಳೆಯಾಗಿ ಹಿಂದೂ ಧರ್ಮದ ನೈಜ ಸಾರಂಶವನ್ನು ಬಿಡಿಸಿಟ್ಟ ವಿವೇಕಾನಂದರ ಎದೆಗಾರಿಕೆಯನ್ನು ಭಾರತ ಎಂದಿಗೂ ಮರೆಯಬಾರದು. ಕೇವಲ ಭಾರತೀಯತೆಗಾಗಿಯೇ ಬದುಕಿದ ಇವರ ಜೀವನ ಒಂದು ಅದ್ಭುತವೇ ಸರಿ.

ಅಂದು ಚಿಕಾಗೋದಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲಿ ಹತ್ತು ಹಲವಾರು ಪ್ರಖರ ಪಂಡಿತರು ಬಂದಿದ್ದರು. ಎತ್ತರದ ವೇದಿಕೆಯ ಒಂದು ಬದಿಯಲ್ಲಿ ಬೇರೆ ಬೇರೆ ಧರ್ಮದ ಗ್ರಂಥಗಳನ್ನ ಕೂಡ ಒಂದರ ಮೇಲೊಂದರಂತೆ ಜೋಡಿಸಿದ್ದರು. ಆದರೆ ಪವಿತ್ರ ಭಗವದ್ಗೀತೆಗೆ ಯಾವುದೇ ಸ್ಥಾನಮಾನ ನೀಡದೆ ಪುಸ್ತಕದ ರಾಶಿಯೊಂದರ ತಳಭಾಗದಲ್ಲಿಟ್ಟಿದ್ದರು. ಎಲ್ಲ ಗಣ್ಯರ ಭಾಷಣದ ಬಳಿಕ  ವೇದಿಕೆ ಏರಿದ ವಿವೇಕಾನಂದರು ಮಾಡಿದ್ದೇನು ಗೊತ್ತೆ? ಪುಸ್ತಕದ ರಾಶಿಗಳ ಅಡಿಯಲ್ಲಿ ಬಿದ್ದಿದ್ದ ಭಗವದ್ಗೀತೆಯನ್ನು ಹಿಡಿದೆಳೆದದ್ದು! ನೋಡು ನೋಡುತ್ತಿದ್ದಂತೆ ಪುಸ್ತಕಗಳ ರಾಶಿ ವೇದಿಕೆ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿಧ್ದೋಯಿತು! ಅನಾಗರಿಕ ದೇಶದ ವ್ಯಕ್ತಿಯೋರ್ವನಿಂದ ಅನುಚಿತ ವರ್ತನೆ ಎಂದು ಸಭಿಕರು ಅಂದುಕೊಂಡರೆ, ಅಲ್ಲಿಂದಲೇ ಮಾತಿಗೆ ನಿಂತ ವಿವೇಕಾನಂದರು ನೋಡಿ ಸನಾತನ ಧರ್ಮದ ಶ್ರೇಷ್ಠತೆಯೇ ಇದು. ಸನಾತನ ಧರ್ಮವು ಎಲ್ಲಾ ಧರ್ಮಗಳಿಗೂ ಆಧಾರ ಸ್ತಂಭದಂತಿದೆ. ಇದೀಗ ನೀವೇ ನೋಡಿದಂತೆ ಯಾವಾಗ ಸನಾತನ ಧರ್ಮ ಅಲುಗಾಡುತ್ತದೋ ಅಂದೇ ಮಿಕ್ಕೆಲ್ಲಾ ಧರ್ಮಗಳು, ಧರ್ಮಗ್ರಂಥಗಳು ತರಗೆಲೆಗಳ ಹಾಗೆ ಉದುರಿ ಹೋಗಲಿದೆ ಎಂದು ಮಾರ್ಮಿಕವಾಗಿ ನುಡಿದು ಸಭೆಯನ್ನು ಮತ್ತಷ್ಟು ತಬ್ಬಿಬ್ಬುಗೊಳಿಸಿದರು! ಅಂದು ಭಾಷಣದುದ್ದಕ್ಕೂ ಅವರು ಎತ್ತಿಹಿಡಿದದ್ದು ಸನಾತನ ಧರ್ಮ ಹೇಗೆ ಭಿನ್ನ? ಅದರ ಸನಾತನ ವಿಚಾರಗಳೇನು ಎಂಬ ಬಗ್ಗೆ. ಅವರ ವಾಗ್ಝರಿಗೆ ಅದೆಷ್ಟು ಮನಸೋತಿದ್ದರೆಂದರೆ ನಡೆದ ಅಷ್ಟೂ ದಿನಗಳ ಕಾರ್ಯಕ್ರಮದಲ್ಲಿ ಜನ ಕೇವಲ ಸ್ವಾಮಿ ವಿವೇಕಾನಂದರ ಮಾತು ಕೇಳಲೆಂದೇ ಬರುವ ಹಾಗಾಗಿತ್ತು! ಭಾರತದ ಫ‌ಕೀರನೋರ್ವನ ಸುದ್ದಿ ಅಮೆರಿಕಾದ ಪತ್ರಿಕೆಗಳ ಮುಖಪುಟಗಳಲ್ಲೂ ರಾರಾಜಿಸುವಂತಾಗಿತ್ತು. ಒಟ್ಟಿನಲ್ಲಿ ಸರ್ವಶ್ರೇಷ್ಠವಾದ ಧರ್ಮವೊಂದು ಭಾರತದಲ್ಲಿ ಸುಪ್ತವಾಗಿದೆ ಎಂಬುದು ಪಶ್ಚಿಮದ ನಾಡಿಗಳಲ್ಲೂ ಮಿಡಿವಂತಾದದ್ದು ಅಂದಿನ ವಿಶೇಷ. ವಿವೇಕಾನಂದರು ಬೀರಿದ ಪ್ರಭಾವ ಅದೆಷ್ಟಿತ್ತೆಂದರೆ ಅಮೇರಿಕಾದ ದ ನ್ಯೂಯಾರ್ಕ್‌ ಹೆರಾಲ್ಡ್‌ ಎಂಬ ಪ್ರಸಿದ್ಧ ದಿನ ಪತ್ರಿಕೆವಿವೇಕಾನಂದರ ಮಾತುಗಳನ್ನು ಕೇಳಿದರೆ ಭಾರತದಂತಹ ಬೌದ್ಧಿಕ ಶ್ರೀಮಂತಿಕೆಯ ನಾಡಿಗೆ ಕ್ರೈಸ್ತ ಮಿಷನರಿಗಳನ್ನು ಕಳುಹಿಸುತ್ತಿರುವ ನಾವೇ ಮೂರ್ಖರುಗಳು ಎಂದು ಬರೆದುಕೊಂಡಿತ್ತು.

ಬೃಹತ್‌ ಗ್ರಂಥವಾದರೂ ಒಂದೇ ಬಾರಿಗೆ ಅರಗಿಸುವ ತಾಕತ್ತು!
ವಿವೇಕಾನಂದರೊಬ್ಬರು ಅದ್ಭುತ ವ್ಯಕ್ತಿ ಎಂಬುದು ನಿಸ್ಸಂಶಯ. ಬಾಲಕನಾಗಿದ್ದಾಗಲೇ ಅಧ್ಯಾತ್ಮದತ್ತ ಸಾಗಿದ್ದ ಇವರು, ಜೀವನದುದ್ದಕ್ಕೂ ಹುಡುಕಾಡಿದ್ದು ಸತ್ಯದ ದಾರಿಯನ್ನು. ನೀಡಿದ್ದು ನಿಸ್ವಾರ್ಥ ಸೇವೆಯನ್ನು. ದೇವರನ್ನು ಕಂಡಿದ್ದೀರಾ ಎಂಬ ತನ್ನ ಬಾಲ್ಯದ ಪ್ರಶ್ನೆಗೆ ತೃಪ್ತಿದಾಯಕ ಉತ್ತರ ನೀಡಿದ ಶ್ರೀ ಪರಮಹಂಸರನ್ನು ಜೀವನ ಮಾರ್ಗದ ಪರಮ ಗುರುವಾಗಿ ಸ್ವೀಕರಿಸಿಕೊಂಡ ಇವರು ಬಳಿಕ ಇಟ್ಟ ಹೆಜ್ಜೆಗಳೆಲ್ಲಾ ಮೈಲುಗಲ್ಲುಗಳೇ. ಇವರ ಬೌದ್ಧಿಕ ತಾಕತ್ತು ಅದೆಷ್ಟಿತ್ತು, ಇವರ ಸನಾತನ ಪ್ರೇಮ ಅದೆಷ್ಟಿತ್ತು ಎಂಬುದನ್ನು ಅರಿಯಬೇಕಾದರೆ ಇವರ ಒಂದೆರಡು ಭಾಷಣಗಳನ್ನೋ ಇಲ್ಲವೇ ವೈಚಾರಿಕ ಲೇಖನಗಳನ್ನು ಓದಲೇ ಬೇಕು. ಬ್ರಹ್ಮಚರ್ಯವನ್ನು ಪರಿಶುದ್ಧ ಮನಸಿನಿಂದ ಯಾರು ಒಪ್ಪಿ ಅನುಸರಿಸುತ್ತಾರೊ ಅದರಿಂದ ಪರಿಪಕ್ವ ಮನಸ್ಸು ಹಾಗೂ ಪ್ರಬಲ ಜಾnಪಕ ಶಕ್ತಿ ಖಂಡಿತಾ ಹೊಂದಬಹುದು ಎಂಬುದು ಇವರು ಸಾರಿದ ಮತ್ತೂಂದು ನಿಗೂಢ ಸತ್ಯ. 

ಒಮ್ಮೆ ಎನ್ಸೆ„ಕ್ಲೋಪೀಡಿಯಾ ಬ್ರಿಟಾನಿಕಾದ ಹತ್ತು ಸಂಪುಟಗಳನ್ನು ಬೇಲೂರು ಆಶ್ರಮಕ್ಕೆ ತರಲಾಗಿತ್ತು. ಮತ್ತೂಂದರೆಡು ದಿನ ಬಿಟ್ಟು ಹನ್ನೊಂದನೇ ಸಂಪುಟವನ್ನು ಕೂಡ ತರಿಸಿಕೊಂಡರು! ಇದನ್ನು ಕಂಡ ಆಶ್ರಮದ ಸನ್ಯಾಸಿಗಳು ಇಷ್ಟೊಂದು ಗಾತ್ರದ ಈ ಸಂಪುಟಗಳನ್ನು  ಓದಿ ಮುಗಿಸಲು ಒಂದು ಜೀವನ ಸಾಕಾದೀತೇ ಎಂದು ಉದ್ಗರಿಸಿದಾಗ ವಿವೇಕಾನಂದರು ಅದ್ಯಾಕೆ ಹಾಗೆ ಹೇಳುತ್ತೀರಾ...? ನಾನು ಅದಾಗಲೇ ಹತ್ತು ಸಂಪುಟಗಳನ್ನು ಓದಿ ಮುಗಿಸಿದ್ದೇನೆ. ಇದೀಗ ಹನ್ನೊಂದನೇ ಸಂಪುಟಕ್ಕೆ ಕೈಯಿಟ್ಟಿದ್ದೇನೆ ಎನ್ನುತ್ತಾರೆ! ನಂಬದ ಅವರು ಅನುಯಾಯಿಗಳು ಪರೀಕ್ಷಿಸುವ ಸಲುವಾಗಿ ಹತ್ತು ಸಂಪುಟಗಳ ಒಂದೊಂದು ಪುಸ್ತಕಗಳಿಂದ ಬಲು ಕ್ಲಿಷ್ಟಕರವಾಗಿರುವ ವಿಚಾರವನ್ನೇ ಎತ್ತಿ ಪ್ರಶ್ನಿಸಲು ವಿವೇಕಾನಂದರು ಸಲೀಸಾಗಿಯೇ ಉತ್ತರಿಸಿದರಲ್ಲದೆ ಅದು ಯಾವ ಪುಸ್ತಕದ ಎಷ್ಟನೇ ಪುಟದಲ್ಲಿದೆ ಎಂಬುದನ್ನೂ ಹೇಳಿ ಆಶ್ಚರ್ಯಗೊಳಿಸಿದ್ದರು. ಮತ್ತೂಂದು ಬಾರಿ ಬಾರಿ ವಿವೇಕಾನಂದರು ಮೇರಠ್ ನಲ್ಲಿ ತನ್ನ ಜತೆಗಾರ ಹಾಗೂ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾದ ಸ್ವಾಮಿ ಅಖಂಡಾನಂದರಲ್ಲಿ ಹತ್ತಿರದ ಗ್ರಂಥಾಲಯದಿಂದ ಸರ್‌ ಜಾನ್‌ ಲಬೋಕ್‌ ಬರೆದಿರುವ ಗ್ರಂಥಗಳನ್ನು ತರುವಂತೆ ಹೇಳುತ್ತಾರೆ. ಸ್ವಾಮಿ ಅಖಂಡಾನಂದರು
ಪ್ರತಿ ದಿನವೂ ಸರ್‌ಜಾನ್‌ ಲಬೋಕ್‌ರ ಒಂದೊಂದು ಪುಸ್ತಕಗಳನ್ನು ತಂದೊಪ್ಪಿಸುತ್ತಾರೆ. ದಿನವೊಂದಕ್ಕೆ ಒಂದು ದೊಡ್ಡ ಪುಸ್ತಕವನ್ನು ಓದಿ ಮುಗಿಸಿ ವಾಪಾಸು ನೀಡುತ್ತಿದ್ದುದನ್ನು ಗಮನಿಸಿದ ಆ ಗ್ರಂಥಾಲಯದ ಮುಖ್ಯಸ್ಥನೊಬ್ಬ ಪುಸ್ತಕವನ್ನೇಕೆ ಶೋಕಿಗೆ ಕೊಂಡೊಯ್ಯುತ್ತಿದ್ದೀರಾ ಎಂದು ವ್ಯಂಗ್ಯವಾಗಿ ಕೇಳಲು ಸ್ವತಃ ವಿವೇಕಾನಂದರೇ ಗ್ರಂಥಾಲಯಕ್ಕೆ ತೆರಳಿ ಆ ಮುಖ್ಯಸ್ಥನಲ್ಲಿ ನಾನು ಒಂದೇ ಬಾರಿಗೆ ಒಂದು ಪುಸ್ತಕವನ್ನ ಓದಿ ಅರ್ಥೈಸಬಲ್ಲೆ. ನಿಮಗೆ ಆ ಬಗ್ಗೆ ಸಂಶಯವಿದ್ದರೆ ಕೊಂಡೋದ ಅದ್ಯಾವುದೇ ಪುಸ್ತಕದ ಅದ್ಯಾವುದೇ ಪುಟದ ಪ್ರಶ್ನೆಯನ್ನು ಬೇಕಾದರೂ ಕೇಳಿ ನೋಡಿ ಎನ್ನುತ್ತಾರೆ. ತಬ್ಬಿಬ್ಟಾದ ಮುಖ್ಯಸ್ಥ ಹಾಗೇ ಮಾಡಲು ವಿವೇಕಾನಂದರಿಂದ ಕೇವಲ ಉತ್ತರ ಮಾತ್ರವೇ ಅಲ್ಲದೆ ಅದಕ್ಕೆ ಬೇಕಾದ ಟಿಪ್ಪಣಿ, ವಿವರಣೆಗಳೆಲ್ಲಾ ದೊರೆಯುತ್ತದೆ! ಒಬ್ಬ ಸಾಮಾನ್ಯ ಮನುಷ್ಯನಿಂದ ಇದೆಲ್ಲಾ ಸಾಧ್ಯವೇ? ಖಂಡಿತ ಇದಕ್ಕೆ ದೈವೀಕತೆ ಬೇಕು. ಇದು ನಿಮ್ಮಿಂದ ಹೇಗೆ ಸಾಧ್ಯ ಎಂದು ಕೇಳಲು, ನಾನು ಪುಸ್ತಕವನ್ನು ಶಬ್ದ ಶಬ್ದಗಳಿಂದ ಓದಲಾರೆ ಬದಲಾಗಿ ವಾಕ್ಯಗಳಿಂದ ಓದುತ್ತೇನೆ, ಕೆಲವೊಂದು ಬಾರಿ ಪ್ಯಾರಾ ಪ್ಯಾರಾಗಳಿಂದಲೇ ಓದುತ್ತೇನೆ ಎಂದುತ್ತುರಿಸುತ್ತಾರೆ. ಶುದ್ಧ ಬ್ರಹ್ಮಚರ್ಯವೇ ಇದರ ಹಿಂದಿರುವ ರಹಸ್ಯ ಎನ್ನುತ್ತಾರವರು.

ಮರಣದ ಹಿಂದಿನ ನಿಗೂಢತೆ!
ಇನ್ನು ಇವರ ಮರಣದ ವಿಚಾರ ಮತ್ತಷ್ಟು ನಿಗೂಢವಾಗಿರುವಂತಹುದು. ಸರಿಸಮಾರು 1896ರಲ್ಲಿ ತನ್ನ ಸಹವರ್ತಿ ಸನ್ಯಾಸಿ ಸ್ವಾಮಿ ಅಭೇದಾನಂದರೊಡನೆ ಮಾತನಾಡುತ್ತಾ ನನ್ನ ಆತ್ಮ ನಿರಂತರ ಬೆಳೆಯುತ್ತಿದೆ ಆದ್ದರಿಂದ ಯಾವುದೇ ಕಾರಣಕ್ಕೂ 40ವರ್ಷದ ಆಚೆಗೆ ನನ್ನ ಆತ್ಮ ದೇಹಧಾರಿಯಾಗಿರದು ಎಂದು ಹೇಳುತ್ತಾರೆ. ಅದೇ ರೀತಿ ಮುಂದೆ 1902ರ ಜು. 4ರಂದು ಸಂಜೆ ಏಳು ಗಂಟೆಗೆ ತನ್ನ ಜತೆಗಾರನನ್ನು ಕರೆದು ನಾನು ಕರೆಯುವವರೆಗೆ ಯಾರೂ ಕೂಡ ನನ್ನ ಕೊಠಡಿಗೆ ಬರಬಾರದು ಎಂದು ಹೇಳಿ ಕೊಠಡಿಗೆ ತೆರಳಿ ಸರಿಸುಮಾರು ಒಂದು ಗಂಟೆಗಳ ಕಾಲ ಧ್ಯಾನದ ಮೂಲಕ ದಿವ್ಯ ಸಮಾಧಿಗೆ ಹೋಗುತ್ತಾರೆ. ಬಳಿಕ ತನ್ನ ಸಹವರ್ತಿ ಸನ್ಯಾಸಿಗಳನ್ನು ಕರೆದು ಕೊಠಡಿಯ ಎಲ್ಲಾ ದ್ವಾರಗಳನ್ನು ತೆರೆಯುವಂತೆ ಹೇಳಿ ಅಲ್ಲೇ ಹಾಸಿಗೆ ಮೇಲೆ ಮಲಗಿ ಸಮಾಧೀ ಸ್ಥಿತಿಗೆ ತೆರಳುತ್ತಾರೆ. ದಿವ್ಯ ಚೇತನದಂತೆ ಕಂಡು ಬರುತ್ತಿದ್ದ ಸ್ವಾಮಿಯ ಮಂದಸ್ಮಿತ ಮುಖದಲ್ಲಿ ಮೂಗಿನ ಹೊಳ್ಳೆಗಳಿಂದ ಹಾಗೂ ಕಣ್ಣುಗಳಿಂದ ರಕ್ತ ಜಿನುಗಲು ಪ್ರಾರಂಭವಾಗುತ್ತದೆ! ಹೆದರಿದ ಸನ್ಯಾಸಿಗಳು ವಿವೇಕಾನಂದರನ್ನು ಕರೆದರೆ ಅವರು ಅದಾಗಲೇ ಪಂಚಭೂತಗಳಲ್ಲಿ ಅಂತರ್ಗತವಾಗಿರುತ್ತಾರೆ! ಒಟ್ಟಿನಲ್ಲಿ ಮೊದಲೇ ಹೇಳಿದಂತೆ ಅವರು ತನ್ನ 39ನೇ ವಯಸ್ಸಿನಲ್ಲಿ ದೇಹವನ್ನು ಸ್ವ ಇಚ್ಛೆಯಿಂದಲೇ ತ್ಯಜಿಸಿದ್ದರು. ವೈಜ್ಞಾನಿಕ ಪರಿಭಾಷೆಯಲ್ಲಿ ಇದು ಹೃದಯಘಾತವಾಗಿದ್ದರೂ ಅದು ಹೇಗೆ ತನ್ನ ಇಚ್ಛೆಯಂತೆ ಹೃದಯಘಾತಗೊಳಿಸಿದ್ದರು ಎಂಬುದೇ ಇಲ್ಲಿ ಕಾಡುವ ಪ್ರಶ್ನೆ! ಇಡೀ ಜಗತ್ತನ್ನೇ ಅರಿತಿದ್ದ ಸ್ವಾಮಿ ವಿವೇಕಾನಂದರನ್ನು ಈ ಜಗತ್ತು ಅರಿತಿರುವುದು ಅಲ್ಪ! ಅವರ ಗಾಂಭೀರ್ಯದ ಮಾತುಗಳು, ವೇದ-ವೇದಾಂತಗಳ ಮೇಲೆ ಅವರು ಹೊಂದಿದ್ದ ಹಿಡಿತ ಎಲ್ಲಕ್ಕಿಂತ ಹೆಚ್ಚಾಗಿ ಸನಾತನ ಧರ್ಮವು ಶೇಷ್ಠವಾದದ್ದು ಎಂಬ ಅವರ ಬಲವಾದ ನಂಬುಗೆಗಳೆಲ್ಲವೂ ಇಂದು ನಮಗೆ ಮಸುಕುಮಸುಕಾಗಿಯೇ ಗೋಚರಿಸುತ್ತಿದೆ! ಭಾರತವೆಂದರೆ ಹಾವಾಡಿಗರ ನಾಡು, ಭಿಕ್ಷುಕರ ಭೂಮಿ ಎಂದರಿತಿದ್ದ ಪಾಶ್ಚಾತ್ಯ ಜಗತ್ತಿಗೆ ಭಾರತವೆಂದರೆ ಬೌದ್ಧಿಕ ಧೀಮಂತಿಕೆಯ ಶ್ರೇಷ್ಠ ನಾಡು, ಜಗದ್ಗುರುವಿನ ಸ್ಥಾನದಲ್ಲಿರುವ ಪವಿತ್ರ ಭೂಮಿ ಎಂಬುದನ್ನು ಸಾರಿದವರು ಈ ನಮ್ಮ ವಿವೇಕಾನಂದರು!

- ಪ್ರಸಾದ್‌ ಕುಮಾರ್‌, ಮಾರ್ನಬೈಲ್‌


Trending videos

Back to Top