CONNECT WITH US  

ಪ್ರೇಯಸಿಯ ಕೊಂದು ಶವ ಅಡಗಿಸಿಟ್ಟು ಬೇರೆ ಮದುವೆಯಾದ ಬಾಯ್‌ ಫ್ರೆಂಡ್‌

ಹೊಸದಿಲ್ಲಿ : ಅತ್ಯಂತ ಆಘಾತಕಾರಿ ಪ್ರಣಯ ಪ್ರಸಂಗವೊಂದರಲ್ಲಿ 21ರ ಹರೆಯದ ದಿಲ್ಲಿ ವಿಶ್ವವಿದ್ಯಾಲಯದ ಯುವತಿಯನ್ನು ಆಕೆಯ ಯುವ ಪ್ರೇಮಿಯೇ ಕೊಂದು ಮೃತ ದೇಹವನ್ನು ಐದು ದಿನಗಳ ಕಾಲ ತನ್ನ ಮನೆಯಲ್ಲಿ ಅವಿತಿರಿಸಿದ್ದಲ್ಲದೆ ಈ ಅವಧಿಯಲ್ಲಿ ಆತ ಬೇರೊಂದು ಹುಡುಗಿಯನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ.

ಕೊಲೆ ಕೃತ್ಯ ಎಸಗಿದ ಬಾಯ್‌ ಫ್ರೆಂಡ್‌ ಹೆಸರು ನವೀನ್‌ ಖಾತ್ರಿ. ಕೊಲೆಗೀಡಾದ ಆತನ ಗರ್ಲ್ ಫ್ರೆಂಡ್‌ ಹೆಸರು ಆರ್ಜ್ಹೂ ಸಿಂಗ್‌ ಚೌಹಾಣ್‌. ಈಕೆಯ ಶವವು ವಾಯವ್ಯ ದಿಲ್ಲಿಯ ಮಾಡೆಲ್‌ ಟೌನನಲ್ಲಿರುವ ನವೀನ್‌ ನ ನಿವಾಸದಲ್ಲಿನ ವಾತಾಯನದ ಕೊಳವೆಯಲ್ಲಿ ಭಾನುವಾರ ಪತ್ತೆಯಾಯಿತು.

ಕಳೆದ ಫೆ.2ರಂದೇ ಗೆಳತಿ ಆರ್ಜ್ಹೂ ವನ್ನು ಕೊಂದು ಆಕೆಯ ಶವವನ್ನು ತನ್ನ ಮನೆಯಲ್ಲಿ ಅಡಗಿಸಿಟ್ಟಿದ್ದ 23ರ ಹರೆಯದ ನವೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಫೆ.4 ರಂದು ಬೇರೊಂದು ಹುಡುಗಿಯನ್ನು ಮದುವೆಯಾಗಿದ್ದ. 

ಆರ್ಜ್ಹೂ  ತನ್ನ ಮನೆಗೆ ಮರಳಿ ಬಾರದಿದ್ದಾಗ ಆಕೆಯ ಹೆತ್ತವರು ಕಳೆದ ಮಂಗಳವಾರ ಸಂಜೆ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರದಂದು ಆರ್ಜ್ಹೂ  ಅಪಹರಣದ ಕೇಸನ್ನು ದಾಖಲಿಸಲಾಗಿತ್ತು.

ಆರ್ಜ್ಹೂ  ನಾಪತ್ತೆ, ಅಪಹರಣ ಕುರಿತಾಗಿ ಪ್ರಾಥಮಿಕ ತನಿಖೆಗಳು ನಡೆದ ಸಂದರ್ಭದಲ್ಲಿ ಆಕೆಯ ಹೆತ್ತವರು ಆರ್ಜ್ಹೂ  ವಿನ ಪ್ರಿಯಕರ ನವೀನ್‌ ಬಗ್ಗೆ ತೀವ್ರ ಶಂಕೆ ವ್ಯಕ್ತಪಡಿಸಿದ್ದರು. ಅಂತೆಯೇ ಪೊಲೀಸರು ನವೀನ್‌ ನನ್ನು ವಶಕ್ಕೆ ತೆಗೆದುಕೊಂಡು ತೀವ್ರವಾಗಿ ಪ್ರಶ್ನಿಸಿದಾಗ ಆತ ತಾನು ಗೈದಿದ್ದ ಕೊಲೆ ಕೃತ್ಯವನ್ನು ಒಪ್ಪಿಕೊಂಡು ಇಡಿಯ ಪ್ರಹಸನವನ್ನು ಬಹಿರಂಗಪಡಿಸಿದ.

ಈ ನಡುವೆ ನವೀನ್‌ ನ ಮನೆ ಇರುವ ಮಾಡೆಲ್‌ ಟೌನ್‌ ಪರಿಸರದ ಜನರು ನವೀನ್‌ ಮನೆಯಿಂದ ತೀವ್ರತಮ ದುರ್ವಾಸನೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಅಂತೆಯೇ ಕಾರ್ಯಾಚರಿಸಿದ ಪೊಲೀಸರಿಗೆ ನವೀನ್‌ನ ಮನೆಯಲ್ಲಿ ಅಡಗಿಸಿಡಲಾಗಿದ್ದ, ಆರ್ಜ್ಹೂ ವಿನ ಕೊಳೆತ ಶವವು ವಾತಾಯನ ಕೊಳೆವೆಯಲ್ಲಿ ಪತ್ತೆಯಾಯಿತು. 

ಆರ್ಜ್ಹೂ  ದಿಲ್ಲಿ ವಿವಿಗೆ ಒಳಪಡುವ ಲಕ್ಷ್ಮೀಬಾಯಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ. ನವೀನ್‌ಗೆ ಮನೆ ಬಾಡಿಗೆ ಬಿಟ್ಟರೆ ಬೇರೆ ಯಾವುದೇ ಆದಾಯ ಮೂಲವಿಲ್ಲ. 

ಆರ್ಜ್ಹೂ  ವಿನ ಕೊಲೆ ಕೃತ್ಯದಲ್ಲಿ ನವೀನ್‌ ನ ತಂದೆಯೂ ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಶಂಕೆ ಇದೆ. ನವೀನ್‌ ಬೇರೆಯೇ ಹುಡುಗಿಯನ್ನು ಮದುವೆಯಾಗುವುದಕ್ಕೆ ಅವರೇ ಕಾರಣರೆಂದು ಗೊತ್ತಾಗಿದೆ. 

Trending videos

Back to Top