CONNECT WITH US  

​ಸಿಯಾಚಿನ್‌ ಭಾರತದ ವಶವಾಗಿದ್ದು ಹೇಗೆ? "ಆಪರೇಷನ್‌ ಮೇಘದೂತ್‌'

ಸಿಯಾಚಿನ್‌ನಲ್ಲಿ ಹಿಮಪಾತದಿಂದ ಭಾರತೀಯ ಸೇನಾಪಡೆಯ 10 ಮಂದಿ ವೀರಯೋಧರು
ಹುತಾತ್ಮರಾಗುವುದರೊಂದಿಗೆ ಮತ್ತೆ ಸಿಯಾಚಿನ್‌ ವಿಚಾರ ಚರ್ಚೆಗೆ ಬಂದಿದೆ. ಸಿಯಾಚಿನ್‌ ಪ್ರದೇಶದಲ್ಲಿ ಭಾರತ ಕೋಟ್ಯಂತರ ರೂ. ಖರ್ಚು ಮಾಡುತ್ತ ಸೇನಾ ಪಹರೆಯನ್ನು ಇಟ್ಟುಕೊಂಡಿದೆ. ಕಾಶ್ಮೀರದ ರಕ್ಷಣೆ ವಿಷಯದಲ್ಲಿ ಈ ಪ್ರದೇಶ ಅತ್ಯಂತ ಮಹತ್ವದ್ದು ಎಂದು ಹೇಳಲಾಗುತ್ತಿದೆ. ಸಿಯಾಚಿನ್‌ ಮೇಲೆ ಅಧಿಪತ್ಯ ಸ್ಥಾಪಿಸುವಲ್ಲಿ ಈ ಹಿಂದೆ ಭಾರತ ಪಾಕಿಸ್ತಾನಕ್ಕೆ ತನ್ನ ಚಾಣಾಕ್ಷತೆ ತೋರಿದೆ. ಈ ಹಿನ್ನೆಲೆಯಲ್ಲಿ ಸಿಯಾಚಿನ್‌ ಅನ್ನು ಭಾರತ ವಶಪಡಿಸಿಕೊಂಡಿದ್ದು ಹೇಗೆ, ಅದರ ಹಿಂದಿನ ಕಥೆ ಏನು? ಎಂಬ ಕುರಿತ ವಿವರಗಳು ಇಲ್ಲಿವೆ. 

ಸಿಯಾಚಿನ್‌ ಬಗ್ಗೆ ತಿಳಿದುಕೊಳ್ಳುವ ಮೊದಲು..
ಸಿಯಾಚಿನ್‌ ಅನ್ನು ಭಾರತ ಹೇಗೆ ವಶಪಡಿಸಿಕೊಂಡಿತು ಎಂಬುದನ್ನು ತಿಳಿದುಕೊಳ್ಳುವ ಮೊದಲು ತಿಳಿದು ಕೊಳ್ಳಲೇ ಬೇಕಾದ್ದು ಜಮ್ಮು ಕಾಶ್ಮೀರ ಮೂರು ಭಾಗವಾಗಿ ಹಂಚಿಹೋಗಿದೆ ಎಂಬ ಬಗ್ಗೆ. (ಮ್ಯಾಪ್‌ ನೋಡಿ) ಇದರಲ್ಲಿ ಆಜಾದ್‌ ಕಾಶ್ಮೀರ ಎಂಬ ಭಾಗ ಸ್ವಾಯತ್ತ ಸ್ಥಾನಮಾನ ಹೊಂದಿದ್ದು ಪಾಕಿಸ್ತಾನದ ಅಧಿಪತ್ಯದಲ್ಲೇ ಇದೆ. ಇನ್ನು ಉತ್ತರ ಕಾಶ್ಮೀರದ ಪ್ರದೇಶ, (ಕಾರಂಕೋರಂ ವಲಯ)ವೂ ಪಾಕಿಸ್ತಾನದ ಕೈಲಿದೆ. ಇತ್ತ ಲಡಾಖ್‌ ಗೆ ತಾಗಿಕೊಂಡಂತಿರುವ ಅಕ್ಸಾಯ್‌ ಚಿನ್‌ ಪ್ರಾಂತ್ಯವನ್ನು ಚೀನಾ ಹಿಂದೆ ವಶಪಡಿಸಿಕೊಂಡಿದ್ದು, ಅಕ್ಸಾಯ್‌ ಚಿನ್‌ ಮತ್ತು ಡೆಮ್‌ಚೊಕ್‌ ಪ್ರದೇಶದ ಭಾಗಗಳು ಅದರ ಪ್ರದೇಶದಲ್ಲಿದೆ. ಸಿಯಾಚಿನ್‌ ಪ್ರದೇಶ ದಟ್ಟ ಹಿಮಾವೃತ ಮತ್ತು ನೀರ್ಗಲ್ಲ ಪ್ರದೇಶವಾಗಿದ್ದು, ಸದ್ಯ ನಿಯಂತ್ರಣ ರೇಖೆಗೆ ತಾಗಿಕೊಂಡಂತೆ, ಕಾರಕೋರಂ ವಲಯದ ಗಡಿ ಮತ್ತು ಚೀನಾದ ವಶದಲ್ಲಿರುವ ಅಕ್ಸಾಯ್‌ ಚಿನ್‌ ಮತ್ತು ಶಾಕ್ಸಮ್‌ ಕಣಿವೆ ಪ್ರದೇಶದ ನಡುವೆ ಇದೆ. ಸಿಯಾಚಿನ್‌ ಕಾರಂಕೋರಂ ವಲಯದಲ್ಲಿರುವ ಅತ್ಯಂತ ಎತ್ತರದ (21 ಸಾವಿರ ಅಡಿ) ಪ್ರದೇಶವಾಗಿದ್ದು, ಭಾರತದ ಭೂಭಾಗಕ್ಕೆ
ಒಂದು ರಕ್ಷಣಾತ್ಮಕ ಪ್ರದೇಶದ ರೀತಿ ಇದೆ. 

ಸಿಯಾಚಿನ್‌ ಪ್ರದೇಶ..
ಸಿಯಾಚಿನ್‌ ಕಾಡಿನ ಹೂಗಳ ಪ್ರದೇಶ ಎಂಬ ಅರ್ಥ. ಕಾಶ್ಮೀರದ ಬಾಲ್ಟಿ ಭಾಷೆಯಲ್ಲಿ "ಸಿಯಾ' ಎಂದರೆ
ಕಾಡಿನ ಒಂದು ವರ್ಗದ ಹೂವಿನ ಜಾತಿ. "ಚಿನ್‌' ಎಂದರೆ ಪ್ರದೇಶ ಎಂದು ಅರ್ಥ. ಹಿಮ ಪ್ರದೇಶದಲ್ಲಿ ಬೆಳೆವ ಈ ಹೂಗಳಿಂದಾಗಿ ಈ ಹೆಸರು ಬಂತು. ಸಿಯಾಚಿನ್‌ ನೀರ್ಗಲ್ಲುಗಳು ನೂಬ್ರಾ ನದಿಯ ಮೂಲ. ಈ ನೂಬ್ರಾನದಿ ಶಿಯೊಕ್‌ ನದಿಯನ್ನು ಸೇರುತ್ತದೆ. ಶಿಯೋಕ್‌ ಸಿಂಧೂನದಿಯ ಉಪನದಿಯಾಗಿದೆ. 1984ರಿಂದ ಲಾಗಾಯ್ತು ಸಿಯಾಚಿನ್‌ನ ಅಧಿಪತ್ಯದ ವಿಚಾರದ ಪಾಕ್‌-ಭಾರತದ ಮಧ್ಯೆ ಕಲಹಕ್ಕೆ ಕಾರಣವಾಗಿದೆ. ಸಿಯಾಚಿನ್‌ ಪ್ರದೇಶವನ್ನು ಎನ್‌ಜೆ9842 ಎಂದು ಗುರುತಿಸಲಾಗಿದೆ. 1949ರ ಕರಾಚಿ
ಒಪ್ಪಂದ ಮತ್ತು 1972ರ ಶಿಮ್ಲಾ ಒಪ್ಪಂದದಲ್ಲಿ ಗಡಿ ನಿಯಂತ್ರಣ ರೇಖೆಯ ಬಗ್ಗೆ ಹೇಳಲಾಗಿದ್ದರೂ,
ಈ ಬಗ್ಗೆ ಎರಡೂ ದೇಶಗಳ ಒಪ್ಪಿಕೊಂಡಿರಲಿಲ್ಲ (ಸದ್ಯ ಇರುವ ನಿಯಂತ್ರಣ ರೇಖೆ) 1984ರ ಮೊದಲು ಈ ಪ್ರದೇಶಕ್ಕೆ ಯಾವುದೇ ದೇಶದ ಅಧಿಪತ್ಯವೂ ಇರಲಿಲ್ಲ. ಅಲ್ಲದೇ ಅಂದಿನ ಒಪ್ಪಂದದಲ್ಲಿ ಸಿಯಾಚಿನ್‌ ವಾಸಯೋಗ್ಯವಲ್ಲ ಎಂದು ಒಪ್ಪಿಕೊಳ್ಳಲಾಗಿತ್ತು. ಆದರೆ ಕಾರಕೋರಂ ಪೂರ್ವ (ಸಿಯಾಚಿನ್‌)ವರೆಗೆ ನಮ್ಮದೇ ಎಂದು ಪಾಕ್‌ ಹೇಳುತ್ತ ಬಂದಿತ್ತು. ಇದಕ್ಕೆ ಪೂರಕವಾಗಿ ಅದು ಪರ್ವತಾರೋಹಿಗಳಿಗೆ ಸಿಯಾಚಿನ್‌ ನೀರ್ಗಲ್ಲು ವಲಯಕ್ಕೆ ಅನುಮತಿಯನ್ನೂ ನೀಡಿತ್ತು. 

ವಿವಾದದ ಆರಂಭ..
1970-80ರ ಹೊತ್ತಿಗೆ ಪಾಕ್‌ ತಾನು ಆಕ್ರಮಿಸಿಕೊಂಡ ಕಾಶ್ಮೀರ ಬದಿಯಿಂದ ಸಿಯಾಚಿನ್‌ ಏರಲು
ಪರ್ವತಾರೋಹಿಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಅದಾಗಿ 1978ರ ವೇಳೆ ಭಾರತೀಯ ಭೂಸೇನೆ ಪರ್ವತಾರೋಹಿಗಳು ಲೆ.ಕ.ಕುಮಾರ್‌ ಅವರ ನೇತೃತ್ವದಲ್ಲಿ ನಡೆಸಲಾಗಿತ್ತು. ಈ ವೇಳೆ ವಾಯುಪಡೆ ಪೂರಕವಾಗಿ ರೇಷನ್‌ ಇತ್ಯಾದಿಗಳನ್ನು ಪೂರೈಸಿತ್ತು. ಅದೇ ಸಂದರ್ಭ ವಾಯುಪಡೆ ಹೆಲಿಕಾಪ್ಟರ್‌ ಅನ್ನು ಸಿಯಾಚಿನ್‌ ತುದಿಯಲ್ಲಿ ಇಳಿಸಿಯೂ ಇತ್ತು. ನಂತರದಲ್ಲಿ ಪಾಕಿಸ್ತಾನ ಜಪಾನ್‌ ತಂಡವೊಂದಕ್ಕೆ ಸಿಯಾಚಿನ್‌ ಹತ್ತಲು ಅನುಮತಿ ನೀಡಿದ್ದು, ಮತ್ತು ಪದೇ ಪದೇ  ಪರ್ವತಾರೋಹಿಗಳನ್ನು ಕಳಿಸಲು ಅನುಮತಿ ನೀಡುತ್ತಿರುವುದು ಭಾರತಕ್ಕೆ ಸಂಶಯಕ್ಕೆ ಕಾರಣವಾಗಿತ್ತು. ಕ್ರಮೇಣ ಪ್ರದೇಶ ತನ್ನದೇ ಎಂದು ಹೇಳುವ ಇರಾದೆ ಇರಬಹುದು ಎಂಬ ಸಂಶಯ ತೀವ್ರವಾಗಿತ್ತು. 

ಸಂಶಯ ನಿಜವಾಯ್ತು!
1983ರಲ್ಲಿ ಭಾರತದ ಸಂಶಯ ನಿಜವಾಯ್ತು.. ಸಿಯಾಚಿನ್‌ ಪ್ರದೇಶ ಎಲ್ಲ ನಮ್ಮದೇ ಎಂದು ಪಾಕ್‌ ಸೇನಾ ಜನರಲ್‌ ಅಲ್ಲಿ ಸೇನೆ ನಿಯೋಜನೆಗೆ ನಿರ್ಧರಿಸಿದ್ದರು. ಇದಕ್ಕೆ ಕಾರಣ ಭಾರತದ ಭೂಸೇನೆ ಪರ್ವತಾರೋಹಿಗಳ ಗುಂಪು ಸಿಯಾಚಿನ್‌ಗೆ ಭೇಟಿ ನೀಡಿದ್ದು ಮತ್ತು ಪ್ರಮುಖ ಪ್ರದೇಶಗಳು, ಮಾರ್ಗಗಳನ್ನು ವಶಪಡಿಸಕೊಳ್ಳಬಹುದು ಎಂದಾಗಿತ್ತು ಎಂಬುದು ಅವರ ವಾದವಾಗಿತ್ತು. ಸಿಯಾಚಿನ್‌ ನಿಯೋಜನೆಗೆ ಪಾಕ್‌ ಸರ್ಕಾರ ಲಂಡನ್‌ ಮೂಲದ ವಿತರಕರೊಬ್ಬರಿಂದ ಆರ್ಕ್‌ಟಿಕ್‌ ವಲಯಕ್ಕೆ ಬೇಕಾದ ರೀತಿಯ ಹಿಮದ ಉಡುಗೆಗಳನ್ನು ತರಿಸಿಕೊಂಡಿತ್ತು. ಭಾರತವೂ ಇದೇ ವಿತರಕರಿಂದ ತರಿಸಿಕೊಳ್ಳುತ್ತಿದ್ದು, ಇದು ಪಾಕ್‌ ಸಿಯಾಚಿನ್‌ ವಶಕ್ಕೆ ಶುರುಮಾಡುತ್ತದೆ ಎಂಬ ಸಂಶಯ ಬಲಪಡಿಸಿತ್ತು. 

ಪಾಕ್‌ ಪ್ಲಾನ್‌ ಫ್ಲಾಪ್‌!
ಪಾಕ್‌ ತನ್ನ ಸೈನಿಕರನ್ನು ಕಳಿಸಿ ಸಿಯಾಚಿನ್‌ ನೆತ್ತಿಗೆ ಎತ್ತುವ ಮುನ್ನ ಅಲ್ಲಿ ಭಾರತೀಯ ಸೈನಿಕರಿದ್ದರು! ಇದಕ್ಕೆ ಕಾರಣವಾಗಿದ್ದು ಭೂಸೇನೆಯ "ಆಪರೇಷನ್‌ ಮೇಘದೂತ್‌'. ಗುಪ್ತಚರ ಮಾಹಿತಿ ದೊರೆಯುತ್ತಿದ್ದಂತೆ ಲಡಾಖ್‌ ಪ್ರಾಂತ್ಯದಲ್ಲಿ ಸೇನೆ ತುಕಡಿ ನಿಯೋಜನೆಯಾಗಿತ್ತು. ಆರ್ಕ್‌ಟಿಕ್‌ ವಲಯದಲ್ಲಿ ತರಬೇತಾದ ಸಮರ್ಥ ಪರ್ವತಾರೋಹಿಗಳಿದ್ದ ಸೈನಿಕರನ್ನು ನಿಯೋಜಿಸಲು ಪ್ಲಾನ್‌ ಮಾಡಲಾಗಿತ್ತು. 1984 ಏ.17ರಂದು ಸಿಯಾಚಿನ್‌ ತುದಿಯಲ್ಲಿ ಅಧಿಪತ್ಯಕ್ಕೆ ಪಾಕ್‌ ನಿರ್ಧರಿಸಿದ್ದರೆ, 1984 ಏ.13ರಂದು ತಲುಪಲು ಭಾರತೀಯ ಸೇನೆ ನಿರ್ಧರಿಸಿತ್ತು. ಮಾರ್ಚ್‌ನಿಂದ ಆಪರೇಷನ್‌ ತೊಡಗಿದ್ದು, ಲಡಾಖ್‌ ನಿಂದ ಜೋಜಿಲಾ ಪಾಸ್‌ವರೆಗೆ ಭೂಸೇನೆ ತನ್ನ ಅಧಿಪತ್ಯ ಸ್ಥಾಪಿಸಿತು. ಬಳಿಕ ಸುಮಾರು 300 ಜನರಿದ್ದ ಭೂಸೇನೆ ಸಿಯಾಚಿನ್‌ ಪ್ರದೇಶದ ಆಯಕಟಟ್ಟಿನ ಪ್ರದೇಶಗಳಾದ ಸಿಯಾ ಲಾ, ಬಿಲಾಫೋಂಡ್‌ ಲಾಗಳಲ್ಲಿ ತನ್ನ ಇರುವಿಕೆ ಸ್ಥಾಪಿಸಿತು. ಪಾಕ್‌ ಸೇನೆ ಸಿಯಾಚಿನ್‌ ತುದಿ ತಲುಪುವಷ್ಟರಲ್ಲಿ ಭಾರತದ ಸೈನಿಕರು ಅವರನ್ನು ಎದುರುಗೊಂಡಿದ್ದರು. ಪರಿಣಾಮ ಪಾಕ್‌ ಆಕ್ರಮಿತ ಕಾಶ್ಮೀರ ಬದಿಯ ಸಲ್ತಾರೋ ರಿಡ್ಜ್ ಎಂಬ ಪ್ರದೇಶ ಮಾತ್ರ ಪಾಕ್‌ಗೆ ದಕ್ಕಿತು. ಭಾರತ ಸಿಯಾಚಿನ್‌ ಬಹುಭಾಗಕ್ಕೆ ಸೇನೆಯನ್ನು ವಿಮಾನದ ಮೂಲಕ ಇಳಿಸಿದ್ದು ಮತ್ತು ಹೆಚ್ಚಿನ ಪ್ಲಾನ್‌ ಮಾಡಿದ್ದರಿಂದ ಇದು ಸಾಧ್ಯವಾಗಿತ್ತು. 

ಸದ್ಯದ ಪರಿಸ್ಥಿತಿ
ಸದ್ಯ ಸುಮಾರು 74 ಕಿ.ಮೀ. ವಿಸ್ತಾರದ ಆಯಕಟ್ಟಿನ ಪ್ರದೇಶ ಭಾರತದ ಬಳಿ ಇದೆ. ಆದ್ದರಿಂದ ಚೀನಾದ ಬಳಿ ಇರುವ ಅಕ್ಸಾಯ್‌ ಚಿನ್‌ ಪ್ರಾಂತ್ಯ ಮತ್ತು ಪಾಕಿಸ್ತಾನದ ಬಳಿ ಇರುವ ಕಾರಕೋರಂ ಪ್ರದೇಶವನ್ನು ಸಂಪರ್ಕಿಸುವುದನ್ನು ತಪ್ಪಿಸಿದೆ. ಒಂದು ವೇಳೆ ಇದು ಪಾಕ್‌ ವಶಕ್ಕೆ ಹೋಗಿದ್ದಲ್ಲಿ, ಲಡಾಖ್‌ ಪ್ರಾಂತ್ಯಕ್ಕೆ ಎರಡೂ ದೇಶಗಳು ಬರುವುದು ಸಾಧ್ಯವಾಗುತ್ತಿತ್ತು ಎಂಬ ಭೀತಿ ಇದೆ. ಸದ್ಯ ಸಿಯಾಚಿನ್‌ ಸಿಯಾಚಿನ್‌ ಮೇಲ್ಭಾಗ ಮತ್ತು ಪೂರ್ವ, ಉತ್ತರ ವಲಯಗಳು ಭಾರತ ವಶದಲ್ಲಿದೆ. 

Trending videos

Back to Top