CONNECT WITH US  

ಮರುಬಳಕೆಯ ರಾಕೆಟ್‌: ಇಸ್ರೋ ಪ್ಲಾನ್‌ ಏನು?

ಮರುಬಳಕೆಯ ಬಾಹ್ಯಾಕಾಶ ನೌಕೆ (ಆರ್‌ಎಲ್‌ವಿ-ಟಿಡಿ)ಯ ಆರಂಭಿಕ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದರ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಹೊಸ ದಾಖಲೆ ಬರೆದಿದೆ. ವಿಶ್ವಾದ್ಯಂತ ಉಪಗ್ರಹ ಉಡಾವಣೆ, ಬಾಹ್ಯಾಕಾಶ ಕಾರ್ಯಕ್ರಮಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಮರುಬಳಕೆ ರಾಕೆಟ್‌/ಬಾಹ್ಯಾಕಾಶ ನೌಕೆಯ ಆವಿಷ್ಕಾರದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೋದ ಪ್ರಯತ್ನ ವಿನೂತನವಾಗಿದ್ದು, ಅಗ್ರಪಂಕ್ತಿಯ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ನಿಲ್ಲುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಸ್ರೋದ ಭವಿಷ್ಯದ ಮರುಬಳಕೆಯ ರಾಕೆಟ್‌/ವ್ಯೋಮ ನೌಕೆಗಳ ಯೋಜನೆ ಏನು? ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಸಾಧನೆ ಏನು ಎಂಬ ಕುರಿತ ವಿವರಗಳು ಇಲ್ಲಿವೆ. 

ಮರುಬಳಕೆಯ ರಾಕೆಟ್‌,ವ್ಯೋಮ ನೌಕೆ ಅಗತ್ಯವೇನು?
ಸದ್ಯ ಹಲವು ದೇಶಗಳು ಉಪಗ್ರಹ ಉಡ್ಡಯನ, ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಒಂದೇ ಬಾರಿ ಬಳಸಬಹುದಾದ ರಾಕೆಟ್‌ ಗಳನ್ನೇ ಬಳಸುತ್ತಿವೆ. ಒಂದಕ್ಕಿಂತ ಹೆಚ್ಚು ಅಥವಾ ಹಲವು ಬಾರಿ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಬಳಸಬಹುದಾದ ರಾಕೆಟ್‌/ವ್ಯೋಮ ನೌಕೆಗಳಿಗೆ ಸ್ಥೂಲವಾಗಿ ಮರುಬಳಕೆ ಉಡ್ಡಯನ ವ್ಯವಸ್ಥೆ(Reusable launch system -ಆರ್‌ಎಲ್‌ವಿ) ಎಂದು ಕರೆಯುತ್ತಾರೆ. ಸಾಮಾನ್ಯ ರಾಕೆಟ್‌ಗಳು ಒಂದೇ ಬಾರಿ ಬಳಕೆ ಮಾಡುವಂಥಾದ್ದು, ಉಡ್ಡಯನದ ವೇಳೆ ಅವುಗಳ ದಹಿಸಿ ಹೋಗುತ್ತವೆ. ಅಥವಾ ಅವುಗಳ ಭಾಗಗಳು ಚೂರು ಚೂರಾಗಿ ಪತನವಾಗುತ್ತವೆ. ಆದರೆ, ಮರುಬಳಕೆಯ ರಾಕೆಟ್‌/ ವ್ಯೋಮ ನೌಕೆಗಳು ಹಾಗಲ್ಲ. ಅವುಗಳು ಉದ್ದೇಶಿತ ಕಾರ್ಯದ ಬಳಿಕ ಮತ್ತೆ ಭೂಮಿಗೆ ವಾಪಸ್‌ ಬರುತ್ತವೆ. ಇದರ ತಂತ್ರಜ್ಞಾನವೂ ತೀವ್ರ ಭಿನ್ನವಾಗಿದ್ದು, ಹೆಚ್ಚಿನ ಸಂಶೋಧನೆಯಲ್ಲಿ ವಿವಿಧ ರಾಷ್ಟ್ರಗಳು ತೊಡಗಿಕೊಂಡಿವೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅಗ್ರಗಣ್ಯ ರಾಷ್ಟ್ರವಾಗಿರುವ ಅಮೆರಿಕದ ಖಾಸಗಿ ಬಾಹ್ಯಾಕಾಶ ಕಂಪನಿ "ಸ್ಪೇಸ್‌ ಎಕ್ಸ್‌'ಈಗಾಗಲೇ ಮರುಬಳಕೆಯ ರಾಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಮಿತ ವ್ಯಯದ ಉಪಾಯ 
ಅಮೆರಿಕ, ರಷ್ಯಾ ಸೇರಿದಂತೆ ವಿವಿಧ ದೇಶಗಳ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಮರುಬಳಕೆಯ ರಾಕೆಟ್‌ ಬಳಕೆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿವೆ. ಒಂದು ವರ್ಷಕ್ಕೆ ಸುಮಾರು 400/500 ಉಪಗ್ರಹ ಉಡ್ಡಯನಗಳು ವಿಶ್ವಾದ್ಯಂತ ನಡೆಯುತ್ತಿವೆ. ಇದಕ್ಕೆ ಪ್ರತಿ ಬಾರಿಯೂ ರಾಕೆಟ್‌ ಬಳಸುವುದು ತೀರ ವೆಚ್ಚದಾಯಕ. ಭಾರತ ಬಳಸುವ 1 ಪಿಎಸ್‌ಎಲ್‌ವಿ ರಾಕೆಟ್‌ ವೆಚ್ಚ 100 ಕೋಟಿ ರೂ. ಇದು ಒಂದು ಉಡ್ಡಯನಕ್ಕೆ ಸೀಮಿತ. ಪ್ರತಿ ಬಾರಿ ಇಂತಹ ರಾಕೆಟ್‌ಗಳನ್ನು ತಯಾರು ಮಾಡುತ್ತಲೇ ಇರಬೇಕು. ಇದರ ಬದಲಿಗೆ ಮರುಬಳಕೆಯ ರಾಕೆಟ್‌/ವ್ಯೋಮ ನೌಕೆಯಾದರೆ ವೆಚ್ಚ ಇಷ್ಟೇ ಅದರೂ ಮತ್ತೆ ಮತ್ತೆ ಬಳಕೆ ಮಾಡಬಹುದು. ಇದು ಉಪಗ್ರಹ ಉಡ್ಡಯನ ಮಾಡುವ ಸಂಸ್ಥೆಗೆ/ಸರ್ಕಾರಕ್ಕೆ ಕಡಿಮೆ ವೆಚ್ಚ ತರುತ್ತದೆ. ಪ್ರತಿ ಉಪಗ್ರಹ ಉಡ್ಡಯನ ವೆಚ್ಚ ರಾಕೆಟ್‌ಗಳ ಮೇಲೆ, ಉಪಗ್ರಹದ ಭಾರದ ಮೇಲೆ ಮತ್ತು ಕಟ್ಟಬೇಕಾದ ವಿಮೆ ಕಂತಿನ ಮೇಲೆ ನಿರ್ಧಾರವಾಗುತ್ತದೆ. ಅದರಂತೆ ಭಾರತದ ಪಿಎಸ್‌ಎಲ್‌ವಿ ರಾಕೆಟ್‌ ವಿಚಾರಕ್ಕೆ ಬಂದರೆ ಒಂದು ಕೆ.ಜಿ.ಗೆ ಸುಮಾರು 13 ಲಕ್ಷ ರೂ.ಗಳಷ್ಟು ವೆಚ್ಚವಾಗುತ್ತದೆ. (ಅಮೆರಿಕದ ಸ್ಪೇಸ್‌ ಎಕ್ಸ್‌ ಕಂಪನಿ ಫಾಲ್ಕನ್‌ ಹೆವಿ ರಾಕೆಟ್‌ ಉಡ್ಡಯನಕ್ಕೆ ಕೆ.ಜಿ.ಗೆ 14.96 ಲಕ್ಷ ರೂ. ವಿಧಿಸುತ್ತದೆ) ಈ ವೆಚ್ಚವನ್ನು ಅರ್ಧಕ್ಕಿಳಿಸಲು ಉಪಾಯ ಎಂದರೆ ಮರುಬಳಕೆಯ ರಾಕೆಟ್‌ಗಳೇ. ಈ ಮೂಲಕ ಕೆ.ಜಿ. ಒಂದರ ವೆಚ್ಚ 3.4 ಲಕ್ಷ ರೂ.ಗಳಿಗೆ ಇಳಿಸಬಹುದು ಎಂಬ ಸ್ಥೂಲ ಲೆಕ್ಕಾಚಾರವಿದೆ. 

ಮರುಬಳಕೆಯ ರಾಕೆಟ್‌ ತಂತ್ರಜ್ಞಾನ ಸುಲಭವೇನಲ್ಲ!
ಮರುಬಳಕೆಯ ರಾಕೆಟ್‌/ವ್ಯೋಮ ನೌಕೆ ತಯಾರಿಸುವುದು ಸುಲಭದ ಕೆಲಸವೇನಲ್ಲ. ಸಾಮಾನ್ಯ ರಾಕೆಟ್‌ ತಯಾರಿಕೆಗಿಂತಲೂ ಹೆಚ್ಚಿನ ತಂತ್ರಜ್ಞಾನ ಅದರಲ್ಲಿರುತ್ತದೆ. ರಾಕೆಟ್‌ ತಂತ್ರಜ್ಞಾನವೇ ಕ್ಲಿಷ್ಟವಾಗಿರುವ ವೇಳೆ ಮರುಬಳಕೆಯ ರಾಕೆಟ್‌ ತಂತ್ರಜ್ಞಾನ ಇನ್ನೂ ಕಷ್ಟದ್ದು. ಭಾರತದ ಇದರಲ್ಲಿ ವ್ಯಾಪಕ ಸಂಶೋಧನೆಗೆ ತೊಡಗಿದೆ. ಆದಾಗ್ಯೂ ಮರುಬಳಕೆ ವಾಹನದಲ್ಲಿ ಯಶಸ್ವಿಯಾಗಲು 15 ವರ್ಷಗಳೇ ಬೇಕು ಎನ್ನಲಾಗಿದೆ. „ ಮತ್ತೆ ಚಾಲನೆಯಾಗಬಲ್ಲ ವ್ಯವಸ್ಥೆ: ಅಂತರಿಕ್ಷಕ್ಕೆ ತಲುಪಿದ ಬಳಿಕ ಭೂಮಿಗೆ ವಾಪಸ್ಸಾಗಲು ಬೂಸ್ಟರ್‌ ಗಳನ್ನು ಚಾಲನೆಗೊಳಿಸುವ ತಂತ್ರಜ್ಞಾನ

„ ಭೂಮಿಗೆ ಮರಳುವಾಗ ನೌಕೆ ನಿಯಂತ್ರಣ:ಅಂತರಿಕ್ಷದಿಂದ ಭೂಮಿಗೆ ಮರಳುವಾಗ, ನಿಯಂತ್ರಣ ಹೊಂದುವ ವ್ಯವಸ್ಥೆ, ಏರೋಡೈನಾಮಿಕ್‌ ತಂತ್ರಜ್ಞಾನ „ ಥರ್ಮಲ್‌ ಸುರಕ್ಷತೆ: ಭೂಮಿಗೆ ಮರಳುವ ವೇಳೆ ಅತಿ ತಾಪದ ಒತ್ತಡ ಸಹಿಸಿಕೊಳ್ಳುವ ವಿನ್ಯಾಸ ಮತ್ತು ಕವಚ 

„ ಲ್ಯಾಂಡಿಂಗ್‌ ಗಿಯರ್‌: ಭೂಮಿಯ ಮೇಲೆ ಇಳಿಸಬೇಕಾದರೆ ವಿಮಾನದ ರೀತಿ ಸ್ವಯಂಚಾಲಿತವಾಗಿ ತೆರೆದುಕೊಳ್ಳುವ ಲ್ಯಾಂಡಿಂಗ್‌ ಗಿಯರ್‌ ತಂತ್ರಜ್ಞಾನ „ ಸಾಫ್ಟವೇರ್‌ ತಂತ್ರಜ್ಞಾನ: ಇಡೀ ಮರುಬಳಕೆ ವಾಹನ ನಿಯಂತ್ರಿಸುವ ಸಾಫ್ಟವೇರ್‌, ಸ್ವನಿಯಂತ್ರಣದ ಮಾದರಿಗಳು ಇತ್ಯಾದಿ

ಅಮೆರಿಕದ ಪಾರಮ್ಯ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಮರುಬಳಕೆಯ ವ್ಯೋಮ ನೌಕೆಯಲ್ಲಿ ಪ್ರಪಂಚದಲ್ಲೇ ಅಗ್ರಗಣ್ಯ. 1981ರಲ್ಲಿ ನಾಸಾ ಮೊದಲ ಸ್ಪೇಸ್‌ಷಟಲ್‌ (ವಿಮಾನ ಮಾದರಿ ವ್ಯೋಮ ನೌಕೆ)ಯನ್ನು ಯಶಸ್ವಿಯಾಗಿ ಪ್ರಯೋಗಿಸಿತ್ತು.

2011ರಲ್ಲಿ ಇದರ ಬಳಕೆಯನ್ನು ಅಮೆರಿಕ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದೀಗ ರಷ್ಯಾ ಮರುಬಳಕೆಯ ಕ್ಯಾಪ್ಸೂಲ್‌ ಗಳನ್ನು ಗಗನ ಯಾನಿಗಳ ಪ್ರಯಾಣಕಕ್ಕೆ ಬಳಸುತ್ತಿದೆ. ಇದು ಹೊರತಾಗಿ ಅಮೆರಿಕದ ಖಾಸಗಿ ಬಾಹ್ಯಾಕಾಶ ಉಡ್ಡಯನ ಕಂಪನಿ ಸ್ಪೇಸ್‌ ಎಕ್ಸ್‌ ಮರುಬಳಕೆಯ ರಾಕೆಟ್‌/ವ್ಯೋಮ ನೌಕೆಗಳಲ್ಲಿ ಪಾರಮ್ಯ ಸಾಧಿಸಿದೆ. 2015 ಡಿಸೆಂಬರ್‌ ವೇಳೆ ಸತತ ಪ್ರಯೋಗಗಳ ಬಳಿಕ ಸ್ಪೇಸ್‌ ಎಕ್ಸ್‌ ಫಾಲ್ಕನ್‌ 9 ಹೆಸರಿನ ಮರುಬಳಕೆಯ ರಾಕೆಟ್‌ ಅನ್ನು ಲಂಬವಾಗಿ ಭೂಮಿ ಮೇಲೆ ಇಳಿಸಿದೆ. 

ಇಸ್ರೋ ಐಡಿಯಾ ಏನು?
ಇಸ್ರೋ ಮರುಬಳಕೆಯ ರಾಕೆಟ್‌/ ವ್ಯೋಮ ನೌಕೆ ಪರೀಕ್ಷೆಗೆ ಉದ್ದೇಶಿಸಿದ ಹಿಂದೆ ವಿವಿಧ ಕಾರಣಗಳಿವೆ. 

„ ಭಾರತದ ಭವಿಷ್ಯದ ಉಡಾವಣೆಯ ವೆಚ್ಚ ವಿಪರೀತವಾಗಿ ತಗ್ಗಿಸುವುದು

„ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆ ಬೆಲೆಗೆ ಉಪಗ್ರಹ ಉಡ್ಡಯನಗಳ ಗುತ್ತಿಗೆ ಪಡೆಯುವುದು 

„ ಒಂದು ಬಾರಿ ಮರುಬಳಕೆ ರಾಕೆಟ್‌/ನೌಕೆ ವಿನ್ಯಾಸ ತಂತ್ರಜ್ಞಾನ ಒಲಿದರೆ, ರಾಕೆಟ್‌ ಗಳಿಗಿಂತ ಶೇ.80ರಷ್ಟು ಕಡಿಮೆ ವೆಚ್ಚದಲ್ಲಿ ನಿರ್ಮಾಣ

„ ಒಂದು ಮರುಬಳಕೆ ರಾಕೆಟ್‌/ನೌಕೆ ಹಲವು ಬಾರಿ ಬಳಸುವುದರಿಂದ ಕಿರು ಅವಧಿಯಲ್ಲಿ ಹೆಚ್ಚಿನ ಉಡ್ಡಯನ

„ ಪ್ರತಿ ಬಾರಿ ರಾಕೆಟ್‌ ತಯಾರಿಕೆಗೆ ಬೇಕಾದ ಭಾರೀ ಮಾನವ ಸಂಪನ್ಮೂಲ ಉಳಿಕೆ

Trending videos

Back to Top