CONNECT WITH US  

ಹೆಲಿಕಾಪ್ಟರ್‌ನಂತೆ ಇಳಿವ ಹೊಸ ವಿಮಾನ

ವಿಮಾನ ಎಲ್ಲಿಯಾದರೂ ಹೆಲಿಕಾಪ್ಟರ್‌ನಂತೆ ಇಳಿಯುವುದನ್ನು ಕೇಳಿದ್ದೀರಾ? ನೋಡಿದ್ದೀರಾ? ಅಂತಹ ವಿಮಾನಗಳು ಇವೆ. ಆದರೆ ಅದು ಅತ್ಯಾಧುನಿಕ ಯುದ್ಧ ವಿಮಾನಗಳು ಮಾತ್ರ. ಆದರೆ ನಾಗರಿಕ ಬಳಕೆಗೆ ಇಂತಹದ್ದೊಂದು ವಿಮಾನ ನಿರ್ಮಿಸುವ ಪ್ರಯತ್ನ ಇದೀಗ ಆಗಿದೆ.

ಎಲ್ಯಟ್ರೋನ್‌ ಏರೋಸ್ಪೇಸ್‌ ವಿಮಾನ ತಯಾರಿಕಾ ಕಂಪನಿ ಎಲ್ಯಟ್ರೋನ್‌ 2ಎಸ್‌ ಹೆಸರಿನ ಅತ್ತ ವಿಮಾನವೂ ಅಲ್ಲದ, ಇತ್ತ ಹೆಲಿಕಾಪ್ಟರ್‌ ರೀತಿಯೂ ಅಲ್ಲದ ವಿಮಾನವನ್ನು ಆವಿಷ್ಕರಿಸಿದೆ. ಇದರ ವಿಶೇಷತೆ ಅಂದರೆ ಇದಕ್ಕೆ ರನ್‌ವೇ ಬೇಡ. ಹಾಗೆಂದು ಹೆಲಿಕಾಪ್ಟರ್‌ನ ದುಪ್ಪಟ್ಟು ವೇಗದಲ್ಲಿ ಇದು ಕ್ರಮಿಸುತ್ತದೆ. ಅಮೆರಿಕದ ಈ ಕಂಪನಿ ಸದ್ಯ ನಾಸಾದೊಂದಿಗೆ ಕೆಲಸ ಮಾಡುತ್ತಿದ್ದು, ಸುಧಾರಿತ ಆವೃತ್ತಿಯನ್ನು 2017ರಲ್ಲಿ ಬಿಡುಗಡೆ ಮಾಡುವ ಇರಾದೆ ಹೊಂದಿದೆ. ನಾಲ್ಕು ಸೀಟುಗಳ ವಿಮಾನವನ್ನು ಕಂಪನಿ ಆವಿಷ್ಕರಿಸಿದ್ದು, ಇದು ಗಂಟೆಗೆ 627 ಕಿ.ಮೀ.ವೇಗದಲ್ಲಿ ಸಂಚರಿಸಬಲ್ಲದು. ಇದರೊಂದಿಗೆ 6 ಸೀಟುಗಳ ವಿಮಾನವನ್ನೂ ಅದು ಉತ್ಪಾದಿಸುವಲ್ಲಿ ತೊಡಗಿಸಿಕೊಂಡಿದೆ. ಇದು ಗಂಟೆಗೆ 666 ಕಿ.ಮೀ.ವೇಗವನ್ನು ತಲುಪುತ್ತದೆ. ಇದೇ ರೀತಿ 10 ಸೀಟುಗಳ ವಿಮಾನವನ್ನೂ ತಯಾರಿಸುವ ಇರಾದೆಯನ್ನು ಅದು ಹೊಂದಿದೆ.

ಇದರ ರೆಕ್ಕೆಗಳಲ್ಲಿ ತಿರುಗುವ ಅಲಗುಗಳಿದ್ದು, ವಿಮಾನ ಮೇಲಕ್ಕೇರುವಾಗ, ಇಳಿವ ವೇಳೆ ಹೆಲಿಕಾಪ್ಟರ್‌ನಂತೆ ಕೆಲಸಮಾಡುತ್ತದೆ. ಒಂದು ಬಾರಿ ಟೇಕಾಫ್ ಆದ ಬಳಿಕ ವಿಮಾನದ ಎಂಜಿನ್‌ ರೀತಿ ಕೆಲಸ ಮಾಡುವುದು ಇದರ ಪ್ಲಸ್‌ ಪಾಯಿಂಟ್‌ ಇದು. ಲಘು ವಿಮಾನವಾದ್ದರಿಂದ ಇದರ ನಿರ್ವಹಣೆ, ಓಡಾಟದ ಖರ್ಚೂ ಕಡಿಮೆ ಎಂದು ಕಂಪನಿ ಹೇಳಿಕೊಂಡಿದೆ. ಏರ್‌ಟ್ಯಾಕ್ಸಿ, ಆಂಬ್ಯುಲೆನ್ಸ್‌, ವಿವಿಧ ರೀತಿಯ ಶೋಧ ಕಾರ್ಯಾಚರಣೆಗಳಿಗೆ ಈ ವಿಮಾನ ಪೂರಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೇ ಹೆಚ್ಚಿನ ಮಾರುಕಟ್ಟೆಯ ನಿರೀಕ್ಷೆಯನ್ನೂ ಹೊಂದಿದೆ. 

Trending videos

Back to Top