CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗೂಟದ ಕಾರಿಗೆ ರೆಡ್‌ಲೈಟ್‌: ಸುಪ್ರೀಂ ತೀರ್ಪಿನಲ್ಲಿ ಹೇಳಿದ್ದೇನು?

ವಿಐಪಿ ಸಂಸ್ಕೃತಿ ತೋರಿಸುವ ಕೆಂಪು ದೀಪಗಳಿಗೆ ಕೇಂದ್ರ ಸರ್ಕಾರ ಇದೀಗ ಸಂಪೂರ್ಣ ಬ್ರೇಕ್‌ ಹಾಕುವ ಯತ್ನ ಮಾಡಿದೆ. ದೇಶದಲ್ಲಿ ತುರ್ತು ಸೇವೆಯ ವಾಹನಗಳಿಗೆ ಮಾತ್ರ ಕೆಂಪುದೀಪ ಬಳಕೆಗೆ ಅವಕಾಶ ಮಾಡಿಕೊಡಲಾಗಿದ್ದು, ಮತ್ತಿನ್ಯಾರೂ ಬಳಸುವಂತಿಲ್ಲ ಎಂದು ಆದೇಶಿಸಿದೆ. ಮೇ.1ರಿಂದ ಇದು ಜಾರಿಗೆ ಬರಲಿದೆ. ಕೆಂಪು ದೀಪದ ಸಂಸ್ಕೃತಿ ದೇಶದಲ್ಲಿ ಹಿಂದಿನಿಂದಲೇ ಇದ್ದು, ಇತ್ತೀಚಿನ ವರ್ಷಗಳಲ್ಲಿ ಅದನ್ನು ತೆಗೆದು ಹಾಕಬೇಕೆನ್ನುವ ಬಗ್ಗೆ ಕೂಗುಗಳೆದ್ದಿದ್ದವು. ಕೆಲವು ರಾಜ್ಯ ಸರ್ಕಾರಗಳೂ ಈ ನಿಟ್ಟಿನಲ್ಲಿ ಮುಂದುವರಿದಿದ್ದವು. ಈ ಹಿನ್ನೆಲೆಯಲ್ಲಿ ಕೆಂಪು ಗೂಟದ ವ್ಯವಸ್ಥೆ, ಬೇರೆ ಬೇರೆ ರಾಜ್ಯಗಳಲ್ಲಿ ಕೈಗೊಂಡಿದ್ದ ಕ್ರಮಗಳೇನು? ಎಂಬುದರ ಕುರಿತ ವಿವರಗಳು ಇಲ್ಲಿವೆ. 

ಕೆಂಪು ಗೂಟದ ಕಾರು ಯಾಕಾಗಿ?
ಸಾಂವಿಧಾನಿಕ ಸ್ಥಾನ ಹೊಂದಿದವರು, ನ್ಯಾಯಾಧೀಶರು, ಮಂತ್ರಿಗಳು, ಕಾನೂನು ಸುವ್ಯವಸ್ಥೆ ಅಧಿಕಾರಿಗಳು, ತುರ್ತು ಸೇವೆಯ ದಳಗಳು ಇತ್ಯಾದಿಗಳನ್ನು ಗುರುತಿಸುವ ಹಿನ್ನೆಲೆಯಲ್ಲಿ ಮೊದಲು ಕೆಂಪು ದೀಪ ಬಳಸಲು ಅವಕಾಶ ನೀಡಲಾಗಿತ್ತು. 1989ರ ಮೋಟಾರು ವಾಹನ ಕಾಯ್ದೆಯ 108ನೇ ನಿಯಮದ 3ನೇ ಷರತ್ತಿನಡಿ, ಕೆಂಪುದ ದೀಪವನ್ನು ಯಾರೆಲ್ಲ ತಮ್ಮ ವಾಹನಗಳಲ್ಲಿ ಬಳಸಬಹುದು ಎಂದು ಹೇಳಲಾಗಿತ್ತು. ಇದರಲ್ಲಿ ಕೆಂಪನೆಯ ಮತ್ತು ನೀಲಿ ಬಣ್ಣದ ಮಿನುಗುವ ದೀಪ/ ಮಿನುಗದ ದೀಪ ಅಳವಡಿಕೆಯ ವರ್ಗಗಳೆಂದು ಪ್ರತ್ಯೇಕಿಸಲಾಗಿತ್ತು. 2002ರಲ್ಲಿ ಕೇಂದ್ರ ಸಾರಿಗೆ ಸಚಿವಾಲಯ ಈ ಬಗ್ಗೆ ಪಟ್ಟಿಯೊಂದನ್ನೂ ಹೊರತಂದಿತ್ತು. ಭಾರತದಲ್ಲಿ ಹಿಂದಿನಿಂದಲೇ ವಾಹನಗಳಲ್ಲಿ ವಿಐಪಿಗಳು ಕೆಂಪು ದೀಪದ ಬಳಕೆ ಚಾಲ್ತಿಯಲ್ಲಿತ್ತು. 

ವಿಐಪಿ ಸಂಸ್ಕೃತಿಗೆ ವಿರೋಧ 
ಕೆಂಪು ದೀಪದ ವಾಹನವುಳ್ಳವರು, ವಿಐಪಿ ಸಂಸ್ಕೃತಿ ತೋರಿಸುತ್ತಾರೆ ಮತ್ತು ಜನಸಾಮಾನ್ಯರಿಗೆ ಇದರಿಂದ ಹೆಚ್ಚಿನ ಕಿರಿಕಿರಿಯಾಗಿದೆ. ವಾಹನ ತಡೆ, ಟ್ರಾಫಿಕ್‌ ಸಂಚಾರಕ್ಕೆ‌ ತಡೆ, ತುರ್ತು ವಾಹನಗಳಿಗೆ ಅವಕಾಶ ನೀಡದ ಕಾರಣಕ್ಕೆ ಕಳೆದೊಂದು ದಶಕದಿಂದ ಕೆಂಪು ಗೂಟದ ವಾಹನಗಳ ಭರಾಟೆ ವಿರುದ್ಧ ದೇಶಾದ್ಯಂತ ಒಂದು ರೀತಿಯ ಆಕ್ರೋಶ ವ್ಯಕ್ತವಾಗುತ್ತಿತ್ತು. ಇದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿದ್ದು, 2013ರಲ್ಲಿ ಸುಪ್ರೀಂ ಕೋರ್ಟ್‌ ಈ ಬಗ್ಗೆ ಹೊಸ ಮಾರ್ಗದರ್ಶಿ ಸೂತ್ರವುಳ್ಳ ತೀರ್ಪನ್ನು ನೀಡಿತ್ತು. 

ಸುಪ್ರೀಂ ಕೋರ್ಟ್‌ ತೋರಿದ ಹಾದಿ
ವಿಐಪಿ ವಾಹನಗಳಲ್ಲಿ ಕೆಂಪು ದೀಪ ಅಳವಡಿಕೆ ಬಗ್ಗೆ ಸುಪ್ರೀಂ ಕೋರ್ಟ್‌ನ ನ್ಯಾ.ಜಿ.ಎಸ್‌.ಸಿಂಘವೀ  ಅವರ ನೇತೃತ್ವದ ನ್ಯಾಯಪೀಠ ವಿಸ್ತೃತ ತೀರ್ಪನ್ನು ನೀಡಿತ್ತು.ತೀರ್ಪಿನಲ್ಲಿ ಸಾಂವಿಧಾನಿಕ ಸ್ಥಾನ ಹೊಂದಿದವರು ಬಳಸಲು ಮಾತ್ರ ಅನುಮತಿ ನೀಡಿತ್ತು. ಅಲ್ಲದೇ ಈ ಬಗ್ಗೆ ಮೋಟಾರು ವಾಹನ ಕಾಯ್ದೆಯಲ್ಲಿ ಬದಲು ಮಾಡುವಂತೆ ಕೇಂದ್ರಕ್ಕೆ ಸೂಚನೆ ನೀಡಿತ್ತು. ಜೊತೆಗೆ ತೀರ್ಪಿನಲ್ಲಿ ಕೋರ್ಟ್‌ ಹೇಳಿದ್ದಿಷ್ಟು...

 ಸಾಂವಿಧಾನಿಕವಾಗಿ ಉನ್ನತ ಹುದ್ದೆಯಲ್ಲಿದ್ದವರಿಗೆ ಮಾತ್ರ ಬಳಕೆಗೆ ಅವಕಾಶ. ಈ ಬಗ್ಗೆ ಅವಕಾಶ ಎಂದು 1989ರ ಮೋಟಾರು ವಾಹನ ಕಾಯ್ದೆಯನ್ನು ವಿಶ್ಲೇಷಿಸಿತು.

ಸಾಂವಿಧಾನಿಕ ಹುದ್ದೆ, ಅತ್ಯುನ್ನತ ಹುದ್ದೆಯಲ್ಲಿದ್ದವರು ವಾಹನದಲ್ಲಿದ್ದಾಗ ಮಾತ್ರ ಕೆಂಪು ದೀಪ ಬಳಕೆಗೆ ಅವಕಾಶ.

 ಸಾಂವಿಧಾನಿಕ ಹುದ್ದೆ, ಕೆಂಪು ದೀಪ ಬಳಸಬಹುದಾದವರ ಬಗ್ಗೆ ಕಾಯ್ದೆಯಲ್ಲಿ ಬದಲು ಮಾಡಲು ಸೂಚನೆ

ಸಮವಸ್ತ್ರ ಧರಿಸಿದ, ವಿವಿಧ ಭದ್ರತಾ ಪಡೆಗಳ ಉನ್ನತ ವ್ಯಕ್ತಿಗಳು, ತುರ್ತು ಸೇವಾ ವಾಹನಗಳಿಗೆ ಕೆಂಪು ದೀಪದ ಬದಲಿಗೆ ಇತರ ದೀಪದ ಬಳಕೆಗೆ ಅವಕಾಶ.

 1989ರ ಕಾಯ್ದೆಯ 119(3)ನೇ ನಿಯಮದಲ್ಲಿ ಹೇಳಿದ್ದಕ್ಕಿಂತ ಹೊರತಾಗಿ, ವಿವಿಧ ಶಬ್ದಗಳನ್ನು ಮಾಡುವ ಎಚ್ಚರಿಕೆ ವ್ಯವಸ್ಥೆ ಅಳವಡಿಸಲು ರಾಜ್ಯಗಳು ಕಾನೂನು ಮಾರ್ಪಾಡು ಮಾಡುವಂತೆ ಇಲ್ಲ. ನಿರ್ದಿಷ್ಟ ವಾಹನಗಳನ್ನು ಹೊರತು ಪಡಿಸಿ ಕೂಡಲೇ ವಿವಿಧ ಶಬ್ದಗಳನ್ನು ಹೊರಸೂಸುವ ವ್ಯವಸ್ಥೆಯನ್ನು ತೆಗೆಯಬೇಕು. 

ಕೆಂಪು ದೀಪ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ವಿವಿಧ ರಾಜ್ಯಗಳು ನಿಯಮಗಳನ್ನು ಬದಲಾವಣೆ ಮಾಡಿದ್ದವು. ಇಂತಹ ರಾಜ್ಯಗಳ ಪಟ್ಟಿ ಇಲ್ಲಿದೆ. 

ದೆಹಲಿ
ದೇಶದಲ್ಲೇ ಮೊದಲ ಬಾರಿಗೆ ದೆಹಲಿಯ ಸಿಎಂ ಅರವಿಂದ ಕೇಜ್ರಿವಾಲ್‌ ಸಂಪುಟದ ಸಚಿವರು ಕೆಂಪು ದೀಪ ಬಳಸದೇ ಇರುವ ನಿರ್ಧಾರ ಕೈಗೊಂಡಿದ್ದರು. 2014ರಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಲೆ.ಗವರ್ನರ್‌, ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರು, ಇತರ ನ್ಯಾಯಾಧೀಶರಿಗೆ ಮಾತ್ರ ಮಿನುಗುವ ಕೆಂಪು ದೀಪ ಹೊಂದುವ ಅವಕಾಶವಿತ್ತು. ಜೊತೆಗೆ ಸೇನೆಯ ದೆಹಲಿ ಪ್ರದೇಶದ ಮುಖ್ಯಸ್ಥರಿಗೆ, ಕೇಂದ್ರದ ಉನ್ನತರಿಗೆ, ಭದ್ರತಾ ಪಡೆಯ ಮುಖ್ಯಸ್ಥರಿಗೆ ಅವಕಾಶ ನೀಡಲಾಗಿತ್ತು.

ಅಸ್ಸಾಂ
ಸಾಂವಿಧಾನಿಕ ಸ್ಥಾನ ಹೊಂದಿದವರು,ಉನ್ನತಾಧಿಕಾರಿಗಳಿಗೆ ಅಸ್ಸಾಂನಲ್ಲಿ ಕೆಂಪು ದೀಪ ವಾಹನಗಳಿಗೆ ಅಳವಡಿಸಲು ಅವಕಾಶವಿತ್ತು. ಆದರೆ, ವಾಹನಗಳಲ್ಲಿ ಅವರು ಪ್ರಯಾಣಿಸದೇ ಇದ್ದ ವೇಳೆ ಅದರ ಮೇಲೆ ಕಪ್ಪು ಕವರ್‌ ಹಾಕಬೇಕಾಗಿತ್ತು. 

ಪಶ್ಚಿಮ ಬಂಗಾಳ
ಕೆಂಪು ದೀಪದ ಬದಲಿಗೆ ನೀಲಿ ಬಣ್ಣದ ಮಿನುಗುವ ದೀಪಗಳನ್ನು ಬಳಸಲು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಅವಕಾಶ ನೀಡಿತ್ತು. ಇದು ಸರ್ಕಾರದ ಉನ್ನತಾಧಿಕಾರಿಗಳು, ಉನ್ನತ ಪೊಲೀಸ್‌ ಅಧಿಕಾರಿಗಳು, ತುರ್ತು ಸೇವಾ ವಾಹನಗಳಿಗೆ ಮಾತ್ರ ಅನ್ವಯವಾಗಿತ್ತು. ಉಳಿದಂತೆ ರಾಜ್ಯ ಮಾನವ ಹಕ್ಕುಗಳ ಮುಖ್ಯಸ್ಥದರು, ವಿಶ್ವವಿದ್ಯಾಲಯದ ಉಪಕುಲಪತಿಗಳು ಮುಂತಾದವರಿಗೆ ಮಿನುಗದ ನೀಲಿ ಬಣ್ಣದ ದೀಪ ಬಳಕೆಗೆ ಅವಕಾಶ ನೀಡಲಾಗಿತ್ತು. ಆದರೆ ಸ್ವತಃ ಮಮತಾ ಬ್ಯಾನರ್ಜಿ ಅವರ ಸಂಪುಟದ ವಿವಿಧ ಸಚಿವರು, ಯಾವುದೇ ಗೂಟದ ಕಾರುಗಳನ್ನು ಬಳಸುತ್ತಿರಲಿಲ್ಲ.

ಕರ್ನಾಟಕ
ಸಾಂವಿಧಾನಿಕ ಸ್ಥಾನ ಹೊಂದಿದವರು, ಸಚಿವರು, ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಮಾತ್ರ ಕೆಂಪು ದೀಪ ಅಳವಡಿಸಲು ಅವಕಾಶ ನೀಡುವ ಬಗ್ಗೆ ರಾಜ್ಯ ಸರ್ಕಾರ ಕ್ರಮಕೈಗೊಂಡಿತ್ತು. ಇನ್ನು ಪೊಲೀಸ್‌ ಉನ್ನತಾಧಿಕಾರಿಗಳಿಗೆ, ವಿವಿಧ ಆಡಳಿತಾಧಿಕಾರಿಗಳಿಗೆ ನೀಲಿ ಬಣ್ಣದ ದೀಪಗಳನ್ನು ಬಳಸಲು ಅನುಮತಿಸಲಾಗಿತ್ತು.

ಇಂದು ಹೆಚ್ಚು ಓದಿದ್ದು

ಷಷ್ಠಿ ಮಹೋತ್ಸವದ ಅಂಗವಾಗಿ ನೂತನ ಸಭಾ ವೇದಿಕೆಯನ್ನು ಉದ್ಘಾಟಿಸಲಾಯಿತು.

Nov 24, 2017 02:46pm
Back to Top