CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸೈಬರ್‌ ಸುಲಿಗೆ ರಾನ್ಸಂವೇರ್‌

ಅಮೆರಿಕದ ರಾಷ್ಟ್ರೀಯ ಭದ್ರತಾ (ಎನ್‌ಎಸ್‌ಎ) ಸಂಸ್ಥೆ ಅಭಿವೃದ್ಧಿಪಡಿಸಿದ ಕೋಡ್‌ ಅನ್ನು ಬಳಸಿಕೊಂಡು ಸೈಬರ್‌ ದಾಳಿಕೋರರು ನೆಟ್‌ ವರ್ಕ್‌ಗಳನ್ನು ಕಬ್ಜಾ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಆರೋಪವನ್ನು ಎನ್‌ಎಸ್‌ಎ ನಿರಾಕರಿಸುತ್ತಿದೆಯಾದರೂ, ಸೈಬರ್‌ ಸೆಕ್ಯುರಿಟಿ ಏಜೆನ್ಸಿಗಳು ಮಾತ್ರ ಅಮೆರಿಕನ್‌
ಸರ್ಕಾರದತ್ತಲೇ ಬೆರಳು ಮಾಡಿ ತೋರಿಸುತ್ತಿವೆ. 

2,500 ರಾನ್ಸಂವೇರ್‌ ಸಂಬಂಧಿ ಪ್ರಕರಣಗಳ ವಿರುದ್ಧದ ದೂರು ಗಳ ಸಂಖ್ಯೆ

 150 ಕೋಟಿ ರೂಪಾಯಿ ಸಂದಾಯ

2,700 ಕೋಟಿ ರೂಪಾಯಿ ಒಂದು ಮಾಲ್‌ವೇರ್‌ ನಿಂದ ಸುಲಿಗೆ

ರಾನ್ಸಂವೇರ್‌ ಎಂಬ ಮಾಲ್‌ವೇರ್‌ನ ಮೂಲಕ ಸುಮಾರು 100ಕ್ಕೂ ಹೆಚ್ಚು ರಾಷ್ಟ್ರಗಳ, ಅಜಮಾಸು 1 ಲಕ್ಷ ಐವತ್ತು ಸಾವಿರ ಕಂಪ್ಯೂಟರ್‌ಗಳ ದಾಖಲೆಗಳನ್ನು ಒತ್ತೆಯಿಟ್ಟುಕೊಂಡಿರುವ ಸೈಬರ್‌ ಲೋಕದ ಅಗೋಚರ ಅಪರಾಧಿಗಳು ಎರಡೇ ದಿನದಲ್ಲಿ ಜಗತ್ತಿನ ಬೆವರಿಳಿಸಿದ್ದಾರೆ. ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವಾ ವಲಯದಲ್ಲಿ ಬರುವ ಆಸ್ಪತ್ರೆಗಳು, ರಷ್ಯಾದ ಆಂತರಿಕ ಸಚಿವಾಲಯ-ಮೊಬೈಲ್‌ ಆಪರೇಟರ್‌, ಅಮೆರಿಕದ ಫೆಡ್‌ಎಕ್ಸ್‌ ಕಂಪೆನಿ ಸೇರಿದಂತೆ ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳು, ಶಾಲೆಗಳು, ಪೋಲೀಸ್‌ ಠಾಣೆಗಳ ನೆಟ್‌ವರ್ಕ್‌ಗಳ ಮೇಲೂ ದಾಳಿ ಮಾಡುತ್ತಿದ್ದಾರೆ. ಕಂಪ್ಯೂಟರ್‌ನಲ್ಲಿನ ದಾಖಲೆಗಳನ್ನೆಲ್ಲ ಹಿಡಿದಿಟ್ಟುಕೊಂಡು "ಹಣ ಕೊಡದಿದ್ದರೆ ಇವನ್ನೆಲ್ಲ ಅಳಿಸಿ ಹಾಕುತ್ತೇವೆ' ಎಂದು ಬೆದರಿಸುತ್ತಿದ್ದಾರೆ. (ವಿಶೇಷವೆಂದರೆ,ಈ ಮಾಲ್‌ವೇರ್‌ ನಿರ್ದಿಷ್ಟ ಸಿಸ್ಟಮ್‌ ಅಷ್ಟೇ ಅಲ್ಲದೆ, ಅದಕ್ಕೆ ಬೆಸೆದಿರುವ ನೆಟ್‌ವರ್ಕ್‌ನ ಮೂಲಕ ಹರಡುತ್ತಾ ಹೋಗುತ್ತದೆ)ಇಂದು ಜಗತ್ತಿನ ಬಹುತೇಕ ಕೆಲಸಗಳು ಕಂಪ್ಯೂಟರ್‌ನಲ್ಲೇ ಆಗುವುದರಿಂದ-(ಉದಾಹರಣೆಗೆ, ಆಸ್ಪತ್ರೆಯೊಂದು ತನ್ನ ರೋಗಿಯ ವಿವರಗಳನ್ನು, ಫೆಡ್‌ಎಕ್ಸ್‌ನಂಥ ಕಂಪನಿಗಳು ತಮ್ಮ ಗ್ರಾಹಕರ ಬೇಡಿಕೆಗಳನ್ನು ದಾಖಲಿಸಿಕೊಂಡಿರುತ್ತವೆ)-ಹಠಾತ್ತಾಗಿ ಅವೆಲ್ಲ ನಾಶವಾದರೆ ಏನು ಮಾಡುವುದು? ಹೀಗಾಗಿ ವಾನಕ್ರೈರ್ಯಾನ್ಸಂವೇರ್‌ಗೆ ತುತ್ತಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮುಂದೆ ಈಗ ಯಾವ ದಾರಿಯೂ ತೋಚುತ್ತಿಲ್ಲ. ಬಿಟ್‌ಕಾಯಿನ್‌ ರೂಪದಲ್ಲಿ ಸಾವಿರಾರು ರೂಪಾಯಿ ಹಣ ತೆತ್ತರೂ, ಸೈಬರ್‌ ದಾಳಿಕೋರರು ದಾಖಲೆಗಳನ್ನು ಅಳಿಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಎನ್ನುವ ಪ್ರಶ್ನೆಯೂ ಅವರನ್ನು ಕಾಡುತ್ತಿದೆ. ಆದರೆ ಗಡಿಯಾರದ ಮುಳ್ಳು ಮುಂದುವರಿಯುತ್ತಲೇ ಇದೆ. ಇವತ್ತಿಗೆ ಸುಮಾರು 19 ಸಾವಿರ ರೂಪಾಯಿ ಕಟ್ಟದಿದ್ದರೆ, ಈ ಮೊತ್ತವನ್ನು ದ್ವಿಗುಣಗೊಳಿಸುವ ಧಮಕಿ ಹಾಕುತ್ತಿದ್ದಾರೆ ದಾಳಿಕೋರರು!

ಬೆಚ್ಚಿಬಿದ್ದ ಆಸ್ಪತ್ರೆಗಳು
ರ್ಯಾನ್ಸಂವೇರ್‌ನಿಂದ ಅತಿ ಹೆಚ್ಚು ತೊಂದರೆಗೊಳಗಾಗಿರುವುದು ಬ್ರಿಟನ್‌ನ ಆಸ್ಪತ್ರೆಗಳು. ಶುಕ್ರವಾರ ಸುಮಾರು 37 ಆಸ್ಪತ್ರೆಗಳ (ಕ್ಯಾನ್ಸರ್‌ ಮತ್ತು ಹೃದ್ರೋಗ ಆಸ್ಪತ್ರೆಗಳನ್ನೂ ಒಳಗೊಂಡು) ಕಂಪ್ಯೂಟರ್‌ಗಳು ಒಂದಾದನಂತರ ಒಂದರಂತೆ ಸ್ಥಗಿತಗೊಳ್ಳುತ್ತಾ ಹೋದವು. ರೋಗಿಗಳ ದಾಖಲೆಗಳಿಗೆ ಆ್ಯಕ್ಸೆಸ್‌ ಸಿಗದ ಕಾರಣ ಅವರಿಗೆ ಚಿಕಿತ್ಸೆ ನೀಡುವುದಕ್ಕೂ ವೈದ್ಯರಿಗೆ ಸಾಧ್ಯವಾಗಲಿಲ್ಲ. ಅಲ್ಲದೇ ಕಂಪ್ಯೂಟರ್‌ನ ಮೂಲಕ ನಿಯಂತ್ರಿಸಲಾಗುವ ವೈದ್ಯಕೀಯ ಉಪಕರಣಗಳನ್ನು ನಿಲ್ಲಿಸಬೇಕಾಯಿತು. ಹೀಗಾಗಿ, ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮುಂದೂಡುತ್ತಿದ್ದಾರೆ, ಇಲ್ಲವೇ ರ್ಯಾನ್ಸಂವೇರ್‌ ದಾಳಿಗೆ ಸಿಲುಕದ ಆಸ್ಪತ್ರೆಗಳಿಗೆ ರೋಗಿಗಳನ್ನು ಸ್ಥಳಾಂತರಿಸುತ್ತಿದ್ದಾರೆ!

ಭವಿಷ್ಯ ನುಡಿದಿದ್ದ ಡಾಕ್ಟರ್‌ ಕೃಷ್ಣ
ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ(ಎನ್‌ಎಚ್‌ಎಸ್‌) ವಲಯದ ಮೇಲೆ ಸೈಬರ್‌ ದಾಳಿ ನಡೆಯಲಿದೆ ಎಂದು ಭಾರತೀಯ ಮೂಲದ ವೈದ್ಯ ಡಾ. ಕೃಷ್ಣ ಚಿಂತಾಪಲ್ಲಿ ಎಚ್ಚರಿಸಿದ್ದರು. ಅದೂ ಬ್ರಿಟನ್‌ನ ಆಸ್ಪತ್ರೆಗಳ ಮೇಲೆ ರ್ಯಾನ್ಸಂವೇರ್‌ ದಾಳಿ ನಡೆಯುವುದಕ್ಕಿಂತ ಎರಡು ದಿನದ ಹಿಂದೆಯೇ! ಲಂಡನ್‌ನ "ನ್ಯಾಷನಲ್‌ ಹಾಸ್ಪಿಟಲ್‌ ಫಾರ್‌ ನ್ಯೂರಾಲಜಿ'ಯಲ್ಲಿ ನರವಿಜ್ಞಾನ ತಜ್ಞರಾಗಿರುವ ಡಾ. ಕೃಷ್ಣ ""ಎನ್‌ಎಚ್‌ಎಸ್‌ನ ನೆಟ್‌ವರ್ಕ್‌ ದುರ್ಬಲವಾಗಿದ್ದು, ಇದರ ಮೇಲೆ ರ್ಯಾನ್ಸಂವೇರ್‌ ದಾಳಿಯಾಗಬಹುದು'' ಎಂದು ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ ಗೆ ಬುಧವಾರ ಲೇಖನ ಬರೆದಿದ್ದರು. ಕೆಲ ವಾರಗಳ ಹಿಂದೆ ಕೇಂಬ್ರಿಜ್‌ನ ಆಸ್ಪತ್ರೆಯೊಂದರ ನರ್ಸ್‌ ಒಬ್ಬಳು ದೋಷಪೂರಿತ ಇಮೇಲ್‌ ತೆರೆದಿದ್ದರಿಂದಾಗಿ ಹೇಗೆ ಆ ಆಸ್ಪತ್ರೆಯ ಸಿಸ್ಟಮ್‌ಗಳು ದಾಳಿಗೀಡಾಗಿದ್ದವು ಎನ್ನುವುದನ್ನು ಉಲ್ಲೇಖೀಸುತ್ತಾ ಅವರು ಈ ಎಚ್ಚರಿಕೆ ನೀಡಿದ್ದರು. ಆದರೆ ಡಾ. ಕೃಷ್ಣ ಅವರ ಮಾತನ್ನು ಯಾರೂ ಕೇಳಿಸಿಕೊಳ್ಳಲಿಲ್ಲ, ಈಗ ಎಲ್ಲರ ಬಾಯಲ್ಲೂ ಕೃಷ್ಣರ ಹೆಸರೇ!

ಅಮೆರಿಕವೇ ಕಾರಣವಾಯಿತೇ?
ಅಮೆರಿಕದ ರಾಷ್ಟ್ರೀಯ ಭದ್ರತಾ(ಎನ್‌ಎಸ್‌ಎ) ಸಂಸ್ಥೆ ಅಭಿವೃದ್ಧಿಪಡಿಸಿದ ಕೋಡ್‌ ಅನ್ನು ಬಳಸಿಕೊಂಡು ಸೈಬರ್‌ ದಾಳಿಕೋರರು ನೆಟ್‌ವರ್ಕ್‌ಗಳನ್ನು ಕಬಾj ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಆರೋಪವನ್ನು ಎನ್‌ ಎಸ್‌ಎ ನಿರಾಕರಿಸುತ್ತಿದೆಯಾದರೂ, ಸೈಬರ್‌ ಸೆಕ್ಯುರಿಟಿ ಏಜೆನ್ಸಿಗಳು ಮಾತ್ರ ಅಮೆರಿಕನ್‌ ಸರ್ಕಾರದತ್ತಲೇ ಬೆರಳು ಮಾಡಿ ತೋರಿಸುತ್ತಿವೆ. ಮೊದಲಿನಿಂದಲೂ ಜಗತ್ತಿನ ಮುಂದುವರಿದ ರಾಷ್ಟ್ರಗಳು(ಅದರಲ್ಲೂ ಅಮೆರಿಕ) ಇತರ ರಾಷ್ಟ್ರಗಳ ಮೇಲೆ ಸೈಬರ್‌ ದಾಳಿ ನಡೆಸಲು, ಖಾಸಗಿ ಮಾಹಿತಿಯನ್ನು ಕದಿಯಲು ಸಾಫ್ಟ್ವೇರ್‌ಗಳಲ್ಲಿನ ಹುಳುಕುಗಳನ್ನು ಹುಡುಕುತ್ತಲೇ ಇರುತ್ತವೆ, ಜೊತೆಗೆ ಹೊಸ ಮಾಲ್‌ವೇರ್‌ ಗಳನ್ನು ಅಭಿವೃದ್ಧಿಪಡಿಸಿ ಶೇಖರಿಸಿಟ್ಟುಕೊಳ್ಳುತ್ತವೆ (ಶಸ್ತ್ರಾಗಾರದಲ್ಲಿ ಆಯುಧಗಳನ್ನಿಟ್ಟಂತೆ!). ಇದೇ ರೀತಿಯಲ್ಲೇ ಮೈಕ್ರೋಸಾಫ್ಟ್ನ ವಿಂಡೋಸ್‌ ಎಕ್ಸ್‌ಪಿ ತಂತ್ರಾಂಶದಲ್ಲಿರುವ ದೌರ್ಬಲ್ಯವೊಂದನ್ನು ಎನ್‌ಎಸ್‌ಎ ಪತ್ತೆಹಚ್ಚಿತ್ತು. ದುರಾದೃಷ್ಟವೆಂದರೆ ಎನ್‌ಎಸ್‌ಎ ಬತ್ತಳಿಕೆಯಲ್ಲಿದ್ದ ಈ ಟೂಲ್‌ ಅನ್ನು "ಶಾಡೋಬ್ರೋಕರ್ಸ್‌' ಎಂಬ ಹೆಸರಿನ ಹ್ಯಾಕರ್‌ಗಳ ಗುಂಪೊಂದು ಕದ್ದುಬಿಟ್ಟಿತ್ತು. ಕಳೆದ ತಿಂಗಳಷ್ಟೇ ಈ ಕೋಡ್‌ ಅನ್ನು ಅದು ಅಂತರ್ಜಾಲದಲ್ಲಿ ಹರಿಬಿಟ್ಟಿತ್ತು! ಈ ಕೋಡ್‌ ಅನ್ನು ಬಳಸಿಕೊಂಡಿರುವ ಮತ್ತೂಂದು ಗುಂಪು, ಅದರ ಸಹಾಯದಿಂದ ಈಗ ರಾನ್ಸಂವೇರ್‌ ಅನ್ನು ಹರಿಬಿಟ್ಟಿದೆ ಎನ್ನಲಾಗುತ್ತಿದೆ. ಆದಾಗ್ಯೂ ಮೈಕ್ರೋಸಾಫ್ಟ್ ಸಂಸ್ಥೆ ಮಾರ್ಚ್‌ ತಿಂಗಳಲ್ಲೇ ತಂತ್ರಾಶದಲ್ಲಿರುವ ತಪ್ಪನ್ನು ಸರಿಪಡಿಸುವಂಥ ಪ್ಯಾಚಸ್‌ ಅನ್ನು ಬಿಡುಗಡೆ ಮಾಡಿದೆಯಾದರೂ, ಬಹಳಷ್ಟು ಸಂಸ್ಥೆಗಳು ಹೊಸ ಅಪ್ಡೆàಟ್‌ ಅನ್ನು ಅಳವಡಿಸಿಕೊಂಡಿಲ್ಲ. ಇನ್ನು, ವಿಂಡೋಸ್‌ ಎಕ್ಸ್‌ಪಿ ತಂತ್ರಾಂಶವನ್ನು ಮೈಕ್ರೋಸಾಫ್ಟ್ ಸಂಸ್ಥೆ ಕೈಬಿಟ್ಟಿದೆಯಾದ್ದರಿಂದ, ಅದರ ಬಳಕೆದಾರರೇ ಈಗ ದಾಳಿಗೆ ತುತ್ತಾದವರು. ಈಗ ತುರ್ತು ಸನ್ನಿವೇಶ ಎದುರಾಗಿರುವುದರಿಂದ ಮೈಕ್ರೋಸಾಫ್ಟ್ ಸಂಸ್ಥೆ ಎಕ್ಸ್‌ಪಿ ಮತ್ತು ಸರ್ವರ್‌ 2003 ಬಳಕೆದಾರರಿಗಾಗಿಯೇ ತಾತ್ಕಾಲಿಕ ಸೆಕ್ಯುರಿಟಿ ಪ್ಯಾಚಸ್‌ಗಳನ್ನು ಬಿಡುಗಡೆ ಮಾಡಿದೆ. ಆದರೆ ದಾಳಿಗೊಳಗಾಗುವ ಮುನ್ನವೇ ಇವನ್ನು ಬಳಸಿಕೊಳ್ಳಬೇಕು. ಒಮ್ಮೆ ರ್ಯಾನ್ಸಂವೇರ್‌ ತಗುಲಿತೆಂದರೆ ದಾಖಲೆ ಅಥವಾ ಹಣ ಕಳೆದುಕೊಳ್ಳದೇ ಬೇರೆ ವಿಧಿಯಿಲ್ಲ!

ಇಂಥ ದಾಳಿಗಳಿಂದ ಬಚಾವಾಗುವುದು ಹೇಗೆ?
1  ನಿಮ್ಮ ಎಲ್ಲಾ ಫೈಲ್‌ಗ‌ಳಿಗೆ ಬ್ಯಾಕ್‌ಅಪ್‌ ಇಟ್ಟುಕೊಳ್ಳುವುದು(ಇನ್ನೊಂದು ಸಿಸ್ಟಮ್‌ನಲ್ಲಿ) ಒಳ್ಳೆಯದು. ಆಗ ಒಂದರಲ್ಲಿ ದಾಖಲೆ ಕಾಣೆಯಾದರೂ, ಇನ್ನೊಂದರಲ್ಲಿ ಇರುತ್ತದೆ.

2  ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಸಿಸ್ಟಂ ಅನ್ನು ಅಪ್ಡೆàಟ್‌ ಮಾಡುವುದು ಉತ್ತಮ. ನೀವು ಎಕ್ಸ್‌ಪಿ ಬಳಕೆದಾರರಾಗಿದ್ದೀರಿ ಎಂದರೆ ಕೂಡಲೇ ಆಪರೇಟಿಂಗ್‌ ಸಿಸ್ಟಮ್‌ ಅನ್ನು ಅಪ್ಡೆàಟ್‌ ಮಾಡಿಕೊಳ್ಳಿ, ಜೊತೆಗೆ ಹೊಸ ಆ್ಯಂಟಿ ವೈರಸ್‌ ಆವೃತ್ತಿಯನ್ನೂ ಅಳವಡಿಸಿಕೊಳ್ಳಿ.

3  ಇಂಥ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿ ಬರುವುದು ಇಮೇಲ್‌ ಹಾಗೂ ವೆಬ್‌ಸೈಟ್‌ಗಳ ಮೂಲಕ. ಹೀಗಾಗಿ ನಿಮಗೆ ಬರುವ ಇಮೇಲ್‌ಗ‌ಳ ಬಗ್ಗೆ ಎಚ್ಚರಿಕೆಯಿರಲಿ. ಈಗ ಜಗತ್ತನ್ನು ಆಕ್ರಮಿಸುತ್ತಿರುವ ವಾನಕ್ರೈ ರ್ಯಾನ್ಸಂವೇರ್‌ ಕೂಡ ಇಂಥ ಇಮೇಲ್‌ ಗಳ ಮೂಲಕವೇ ಹರಡಿರುವುದು. ಇಮೇಲ್‌ ನಲ್ಲಿ ಬರುವ ಲಿಂಕ್‌ ಅನ್ನು ಓಪನ್‌ ಮಾಡಿದ್ದೇ ಇದು ಸಿಸ್ಟಮ್‌ ಅನ್ನು ಆಕ್ರಮಿಸಿಕೊಳ್ಳುತ್ತದೆ.ಇನ್ನು ಹುಸಿ ಜಾಹೀರಾತುಗಳು, ಆ್ಯಪ್‌ಗ್ಳ ರೂಪದಲ್ಲೂ ನಿಮ್ಮನ್ನು ಮಾಲ್‌ವೇರ್‌ ದಾಳಿಗೆ ಸಿಲುಕಿಸುವ ಸಂಚು ನಡೆಯುತ್ತಲೇ ಇರುತ್ತದೆ.

ನಾಶ ತಪ್ಪಿಸಿದ ಆ 686 ರೂ!
ಕೇವಲ 686 ರೂ. ವೆಚ್ಚ ಮಾಡಿ ಭಾರಿ ನಾಶ ತಪ್ಪಿಸಿದ್ದು ಒಬ್ಬ ಸೈಬರ್‌ ತಜ್ಞ. ವಾನಕ್ರೈ ರ್ಯಾನ್ಸಂವೇರ್‌ ಅನ್ನು ಹರಡಿಸುವ ಸಲುವಾಗಿ ಕಿಲ್‌ ಸ್ವಿಚ್‌ ಎಂಬ ಇನ್ನೊಂದು ಸೈಟ್‌ ಅನ್ನು ಹ್ಯಾಕರ್ಸ್‌ ಓಪನ್‌ ಮಾಡಿದ್ದರು. ಇದನ್ನು ನೋಂದಣಿ ಮಾಡಿಸಲು ಮರೆತಿದ್ದರು. ಆದರೆ ಸೈಬರ್‌ ತಜ್ಞರೊಬ್ಬರು ಆಕಸ್ಮಿಕವಾಗಿ ಕಿಲ್‌ ಸ್ವಿಚ್‌ ಅನ್ನು ತಮ್ಮ ಹೆಸರಿಗೆ 686 ರೂ. ಕೊಟ್ಟು ನೋಂದಣಿ ಮಾಡಿಸಿಕೊಂಡರು. ಇದು ಅವರ ಹೆಸರಿಗೆ ಹೋದ ಮೇಲೆ ವಾನಕ್ರೈ ಮಾಲ್‌ವೇರ್‌ ಹರಡುವ ವೇಗ ಕಡಿಮೆಯಾಯಿತು.

ದಾಳಿಕೋರರಿಗೆ ಹಣದ ಹೊಳೆ 
ರ್ಯಾನ್ಸಂವೇರ್‌ಗಳ ಮೂಲಕ ಸುಲಿಗೆ ಮಾಡುವ ಪ್ರಕರಣ ಇದೇ ಮೊದಲೇನೂ ಅಲ್ಲ. ಅಮೆರಿಕದ ಸೈಬರ್‌ ಸೆಕ್ಯೂರಿಟಿ ಕಂಪನಿ ಬಿಟ್‌ಡಿಫೆಂಡರ್‌ ಪ್ರಕಾರ ಕಳೆದ ಒಂದು ವರ್ಷದಲ್ಲಿ ಅಮೆರಿಕವೊಂದರಲ್ಲೇ 2,500 ರ್ಯಾನ್ಸಂವೇರ್‌ ಸಂಬಂಧಿ ಪ್ರಕರಣಗಳ ವಿರುದ್ಧ ದೂರು ದಾಖಲಾಗಿದೆ. ಎಫ್ಬಿಐ ಅಂದಾಜಿನ ಪ್ರಕಾರ ಆ ವರ್ಷ ಅನಾಮಿಕ ಸಂತ್ರಸ್ತರು ದಾಳಿಕೋರರಿಗೆ ಬಿಟ್‌ಕಾಯಿನ್‌ ರೂಪದಲ್ಲಿ 150 ಕೋಟಿ ರೂಪಾಯಿ ಸಂದಾಯ ಮಾಡಿದ್ದಾರೆ! ಕಳೆದ ವರ್ಷ ಸದ್ದು ಮಾಡಿದ್ದ ಇದೇ ರೀತಿಯ ಮಾಲ್‌ ವೇರ್‌ ಒಂದರಿಂದ ಅಪರಾಧಿಗಳು ಜಾಗತಿಕವಾಗಿ ಸುಮಾರು 2,700 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾರೆ. ಈ ಪ್ರಮಾಣದ ಹಣದಿಂದ ಅವರು ಹೆಚ್ಚು ಸಕ್ಷಮ ಮಾಲ್‌ವೇರ್‌ಗಳನ್ನು ರೂಪಿಸಲು ಯಶಸ್ವಿಯಾಗುತ್ತಿದ್ದಾರೆ ಎನ್ನುತ್ತದೆ ಬಿಟ್‌ಡಿಫೆಂಡರ್‌. 

ಟಾಪ್‌ ಐದರಲ್ಲಿ ಭಾರತ!
ಎರಡು ವರ್ಷಗಳಿಂದ ರ್ಯಾನ್ಸಂವೇರ್‌ ಗಳ ದಾಳಿಯಿಂದ ತತ್ತರಿಸಿರುವ ಟಾಪ್‌ 5 ದೇಶಗಳಲ್ಲಿ ಭಾರತವೂ ಒಂದು. ಕ್ಯಾಸ್ಪಸ್‌ ìಕೀ ಲ್ಯಾಬ್‌ ಕಳೆದ ವರ್ಷ ಎದುರಿಟ್ಟಿದ್ದ ಅಂಕಿ ಅಂಶಗಳು ಇದನ್ನು ದೃಢಪಡಿಸುತ್ತಿವೆ. 2016ರ ಮಾರ್ಚ್‌-ಮೇ ತಿಂಗಳಲ್ಲಿ ಜಗತ್ತಿನಾದ್ಯಂತ ಹರಿದಾಡಿದ್ದ "ಟೆಸ್ಲಾಕ್ರಿಪ್ಟ್ ರ್ಯಾನ್ಸಂವೇರ್‌' ಎಂಬ ಮಾಲ್‌ವೇರ್‌ ಹೆಚ್ಚು ದಾಳಿ ಮಾಡಿದ್ದು ಭಾರತದಲ್ಲಿಯೇ! ಇನ್ನು ಅದೇ ಅವಧಿಯಲ್ಲಿ ಲಾಕಿರ್ಯಾನ್ಸಂವೇರ್‌ನಿಂದ ದಾಳಿಗೊಳಗಾದ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿತ್ತು. ಆ ವರ್ಷ ಟೆಸ್ಲಾಕ್ರಿಪ್ಟ್ನಿಂದಾಗಿ ಭಾರತದ 11,674 ಬಳಕೆದಾರರು ಮತ್ತು ಲಾಕಿಯಿಂದಾಗಿ 564 ಬಳಕೆದಾರರು ಪೆಟ್ಟು ತಿಂದಿದ್ದರು!

ಆರ್‌ಬಿಐ, ಷೇರು ಮಾರುಕಟ್ಟೆಗೆ ಎಚ್ಚರಿಕೆ
ರ್ಯಾನ್ಸಂವೇರ್‌ ದಾಳಿಯ ಅಪಾಯದ ಹಿನ್ನೆಲೆಯಲ್ಲಿ ಭಾರತದ ಸೈಬರ್‌ ಭದ್ರತಾ ಪಡೆಯ "ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ' ತಂಡವು ಆರ್‌ಬಿಐ, ಷೇರುಮಾರುಕಟ್ಟೆ ಮತ್ತು ಎನ್‌ಪಿಸಿಐ(ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ) ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳಿಗೆ ಎಚ್ಚರಿಗೆ ನೀಡಿದೆ. ಅಪಾಯದಿಂದ ಪಾರಾಗಲು ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಪಟ್ಟಿಯನ್ನು ಕಳುಹಿಸಿರುವ ಈ ತಂಡ ""ಡೇಟಾ ಹಾನಿಯಿಂದ ಪಾರಾಗಲು ಕೂಡಲೇ ಸಂಬಂಧಿತ "ಪ್ಯಾಚ್‌'ಗಳನ್ನು ಅಳವಡಿಸಿಕೊಳ್ಳಿ'' ಎಂದೂ ಈ ಸಂಸ್ಥೆಗಳಿಗೆ ಸಲಹೆ ನೀಡಿದೆ. "ಸದ್ಯಕ್ಕಂತೂ ನಮ್ಮ ಬಳಿ ದೇಶದ ಯಾವುದೇ ಸಂಸ್ಥೆಯಿಂದಲೂ ಬೃಹತ್‌ ಸೈಬರ್‌ ದಾಳಿಯಾದ ಬಗ್ಗೆ ದೂರು ಬಂದಿಲ್ಲ'' ಎನ್ನುತ್ತಾರೆ ಎಮರ್ಜೆನ್ಸಿ ರೆಸ್ಪಾನ್ಸ್‌ ತಂಡದ ಅಧಿಕಾರಿಗಳು.

ಇಂದು ಹೆಚ್ಚು ಓದಿದ್ದು

Back to Top