CONNECT WITH US  

ಎಪ್ಪತ್ತರ ಕಿಂಡಿಯಲಿ ಕಂಡೆಯಾ, ಇಂಡಿಯಾ..!

ಜಗವೆಲ್ಲ ಮಧ್ಯರಾತ್ರಿ ಎಂದು ಮಲಗಿದ್ದಾಗ, ಭಾರತದಲ್ಲೊಂದು ಸ್ವಾತಂತ್ರ್ಯದ ಸೂರ್ಯ ಉದಯಿಸಿದ ಕ್ಷಣಕ್ಕೆ ಈಗ ಎಪ್ಪತ್ತರ ಸಂಭ್ರಮ. ದೇಶ ಸಾಗಿ ಬಂದ ಹಾದಿಯಲ್ಲಿ ಅರಳಿದ ಹೂವುಗಳು ಇಂದಿಗೂ ಬಾಡದಂತೆ ತಾಜಾ ಎನಿಸುತ್ತಿವೆ. ಅಲ್ಲಿ ನೆಟ್ಟಿದ್ದೆಲ್ಲ ಮೈಲುಗಲ್ಲು, ಅಲ್ಲಿ ಜೀಕಿದ್ದು ಕೋಟಿ ಕೋಟಿ ಸಂಭ್ರಮಗಳ ಮುಗಳು, ಆ ನಡುವೆ ಮೂಡಿದ ನೋವಿನ ಗೆರೆ, ಅದನ್ನೆಲ್ಲ ಅಳಿಸಿ ಹಾಕಿ, ಮುನ್ನಡೆವ ದೇಶವಾಸಿಗಳ ಉಮೇದುಗಳು, ಕಣ್ಮುಂದೆ ರೀಲು ಸುತ್ತಿಕೊಳ್ಳುವಾಗ "ಅಬ್ಟಾ! ಸ್ವಾತಂತ್ರ್ಯಕ್ಕೆ ಇಂಥ ಸಾಮರ್ಥ್ಯವೇ?' ಅಂತನ್ನಿಸಿ ಬೆರಗು ಮೂಡದೇ ಇರದು.ಈ ಎಪ್ಪತ್ತು ವರುಷಗಳಲ್ಲಿ ದೇಶದ ಚರಿತ್ರೆಯಲ್ಲಿ ಅಚ್ಚಾಗಿ ಕುಳಿತ ಸಾಧನೆ, ಸಂಭ್ರಮ, ವಿಷಾದ, ವಿಚಿತ್ರಗಳನ್ನು ಅಕ್ಷರಗಳಲ್ಲಿ ಎದ್ದು ಕೂರಿಸುವ ಪುಟ್ಟ ಪ್ರಯತ್ನ ಇಲ್ಲಿದೆ. ದೇಶವನ್ನು ಪರಿವರ್ತನೆಯ ಹಾದಿಗೆ ಕೊಂಡೊಯ್ದ, ಮೈಲುಗಲ್ಲುಗಳಾಗಿ ಪ್ರೇರೇಪಿಸಿದ, ವಿವಾದ- ವಿಷಾದದ ಗಂಟುಗಳಾಗಿ ಉಳಿದ ಪ್ರಮುಖ ಸಂಗತಿಗಳೂ ಇಲ್ಲಿ ಜತೆಯಾಗಿವೆ. ಸ್ವಾತಂತ್ರ್ಯೋತ್ಸವ ಎಂಬ ನೆಪದಲ್ಲಿ ಒಂದು ಅರ್ಥಪೂರ್ಣ ಓದು ನಿಮ್ಮ ಮುಂದೆ...

1947: ಪಾಕ್‌ಗೆ ಮೊದಲ ಮಂಗಳಾರತಿ
ಭಾರತ- ಪಾಕ್‌, ಸ್ವಾತಂತ್ರ್ಯ ಸಿಕ್ಕ ಕೂಡಲೇ ಕಾಶ್ಮೀರದ ವಿಚಾರಕ್ಕಾಗಿ ದಾಯಾದಿಗಳೇ ಆಗಿಬಿಟ್ಟವು. ಪಾಕ್‌ನ ಆಕ್ರಮಣಕ್ಕೆ ಕಾಶ್ಮೀರದ ಮಹಾರಾಜ ಹರಿಸಿಂಗ್‌ ತಲ್ಲಣಿಸಿಬಿಟ್ಟರು. ತನ್ನ ಪೂರ್ವಜರು ಬ್ರಿಟಿಷರಿಂದ 75 ದಶಲಕ್ಷ ರೂ.ಗೆ ಪಡೆದಿದ್ದ ಕಾಶ್ಮೀರವನ್ನು ಉಳಿಸಿಕೊಳ್ಳಲು ಹರಿಸಿಂಗ್‌ ವಿಫ‌ಲರಾಗಿ, ಭಾರತದ ನೆರವು ಬೇಡಿದರು. ಅತ್ತ ಲಷ್ಕರ್‌ ಬುಡಕಟ್ಟು ಜನರನ್ನು ಮುನ್ನುಗ್ಗಿಸಿ, ಶ್ರೀನಗರ ಕಬಳಿಸಲು ಸಂಚು ರೂಪಿಸಿದ್ದ ಪಾಕ್‌ಗೆ ನಮ್ಮ ವಾಯುಪಡೆ ತಕ್ಕಪಾಠ ಕಲಿಸಿ, ಹಿಮ್ಮೆಟ್ಟಿಸಿದವು.  ಸೈನಿಕರನ್ನೊಳಗೊಂಡಂತೆ ಭಾರತ- 1,500, ಪಾಕ್‌- 6,000 ಮಂದಿಯನ್ನು ಕಳಕೊಂಡಿತ್ತು. ಗೆಲುವೇನೋ ದಕ್ಕಿತು. ಆದರೆ, ಕಾಶ್ಮೀರದ ಹಿಮದಡಿಯಲ್ಲಿ ಪಾಕ್‌ ಅಭಿಮಾನದ "ಪ್ರತ್ಯೇಕ' ಕಾವೊಂದು ಈಗಲೂ ಜೀವಂತವಿದ್ದು ಕಾಡುತ್ತಲೇ ಇದೆ.

1950: ಗಣತಂತ್ರದ ಯುಗಾರಂಭ
1950, ಜನವರಿ 26 ಎರಡನೇ ಮಹತ್ವದ ಘಟ್ಟ. ಸ್ವತಂತ್ರ ಭಾರತವನ್ನು ಒಂದೇ ಸೂತ್ರದಡಿ ಹಿಡಿದಿಡಲು, ಸಂವಿಧಾನ ಜಾರಿಗೆ ಬಂತು. 
ಡಾ| ಅಂಬೇಡ್ಕರ್‌ ನೇತೃತ್ವದಲ್ಲಿ ಕಾನೂನಿನ ಚೌಕಟ್ಟು ರೂಪುಗೊಂಡಿತು. ಪ್ರಜಾಪ್ರಭುತ್ವ ಸರಕಾರ ರಚನೆ, ಅಧಿಕಾರ ಹಂಚಿಕೆ ನೀತಿಗಳಿಗೆ ಸ್ಪಷ್ಟ ಆಕಾರ ಸಿಕ್ಕಿತು. 1947, ನವೆಂಬರ್‌ 4ರಂದು ಶಾಸನಸಭೆಯಲ್ಲಿ ಮಂಡಿಸಲ್ಪಟ್ಟ ಕರಡು ಮಸೂದೆ, ಸಾಕಷ್ಟು ತಿದ್ದುಪಡಿಗೊಂಡು, ಕೊನೆಗೆ ಶಾಸನಸಭೆಯ 308 ಸದಸ್ಯರ ಒಪ್ಪಿಗೆ ಪಡೆಯಿತು. 2 ವರ್ಷ 11 ತಿಂಗಳು 18 ದಿನಗಳ ಸುದೀರ್ಘ‌ ಅವಧಿಯಲ್ಲಿ ರಚನೆಗೊಂಡ, ಹಿಂದಿ- ಇಂಗ್ಲಿಷಿನಲ್ಲಿರುವ ಈ ಸಂವಿಧಾನಕ್ಕೆ ವಿಶ್ವದಲ್ಲೇ ಬೃಹತ್‌ ಎಂಬ ಖ್ಯಾತಿಯಿದೆ.

1951: ಮೊದಲ ವೋಟಿನ ಸಂಭ್ರಮ
97 ವರ್ಷದ ಶ್ಯಾಮ್‌ ಶರಣ್‌ ನೇಗಿ ಮತ ಚಲಾಯಿಸಿದ ಮೊದಲ ಭಾರತೀಯ. 1951ರ ಪ್ರಥಮ ಸಂಸತ್‌ ಚುನಾವಣೆಗೆ 36 ಕೋಟಿ ದೇಶವಾಸಿಗಳ ಪೈಕಿ 17.32 ಕೋಟಿ ಮಂದಿಗಷ್ಟೇ ಮತ ಚಲಾಯಿಸುವ ಹಕ್ಕು ಲಭಿಸಿತ್ತು. 1874 ಹುರಿಯಾಳುಗಳು, 53 ಪಕ್ಷಗಳಿಂದ ಕಣದಲ್ಲಿದ್ದರು. 489 ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) 364 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಕಂಡಿತ್ತು. 16 ಸೀಟುಗಳನ್ನು ಗೆದ್ದ ಸಿಪಿಐಗೆ ಎರಡನೇ ಅತಿದೊಡ್ಡ ಪಕ್ಷದ ಗರಿ. ಶೇ.45.7 ಮತದಾನ ನಡೆದ ಆ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದವರ ಬೆರಳಿಗೆ ಶಾಯಿ ಹಾಕಿರಲಿಲ್ಲ!

1952: ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ 
ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ವೈಯಕ್ತಿಕವಾಗಿ ಮೊದಲ ಪದಕ ನೋಡಿದ್ದು 1952ರಲ್ಲಿ. ಹೆಲ್ಸಿಂಕಿಯಲ್ಲಿ ನಡೆದ ಆ ಒಲಿಂಪಿಕ್ಸ್‌ನಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಖಾಶಬಾ ಜಾಧವ್‌ ಕಂಚಿನ ಪದಕ ಗೆದ್ದರು. ಮೆಕ್ಸಿಕೋ, ಕೆನಡಾ, ಜರ್ಮನಿಯ ಘಟಾನುಘಟಿ ಎದುರಾಳಿಗಳನ್ನು ಮಣಿಸಿ ಅವರು ಈ ಮಹೋನ್ನತ ಸಾಧನೆಗೆ ಕಾರಣವಾಗಿದ್ದರು.

1955: ವಿಶ್ವ ಸಿನಿಪರದೆಯಲ್ಲಿ ಮೊದಲ ಸಿನಿಮಾ
ಸಿನಿಮಾ ಅಂದ್ರೆ ಮೇಕಪ್‌ ಎನ್ನುವ ಭ್ರಮೆಯಲ್ಲಿದ್ದ ಜಗತ್ತಿಗೆ, ಸತ್ಯಜಿತ್‌ ರೇ "ಪಥೇರ್‌ ಪಾಂಚಾಲಿ'ಯನ್ನು ತೋರಿಸಿ, ವಿಶಿಷ್ಟ ಸಂದೇಶ ರವಾನಿಸಿದರು. ನೈಜವೆನಿಸಿದ ವಾತಾವರಣದಲ್ಲಿ ಚಿತ್ರೀಕರಿಸಿ, ಸಹಜ ಮುಖಗಳನ್ನೇ ತೋರಿಸಿ, ಕ್ಲಾಸಿಕ್‌ ಸಿನಿಮಾ ಕೊಟ್ಟರು. ಬಂಗಾಳಿ ಹಳ್ಳಿಯ ಸಂಜೆಯ ನೀರವತೆಯಲ್ಲಿ ಹರಿಹರ್‌ ರಾಯ್‌ ಕುಟುಂಬದ ಕಾಡುವ ಕತೆಯನ್ನು ವಿಶ್ವ ಪ್ರೇಕ್ಷಕನ ಮುಂದಿಟ್ಟರು. ಈ ಚಿತ್ರ ವಿದೇಶದಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿತು. ಕೇನ್ಸ್‌, ಬರ್ಲಿನ್‌, ಸ್ಯಾನ್‌ಫ್ರಾನ್ಸಿಸ್ಕೋದ ಪರದೆಗಳಲ್ಲಿ ಭಾರತೀಯನೊಬ್ಬನ ಅಸಾಮಾನ್ಯ ಸಿನಿಮಾ ಬುದ್ಧಿವಂತಿಕೆಗೆ ನಿಬ್ಬೆರಗಾಯಿತು ಜಗತ್ತು.

1960: ಹಸಿರು ಕ್ರಾಂತಿಯ  ಹೊನಲು ಚೆಲ್ಲಿತು
1950ರ ದಶಕದಲ್ಲಿ ಭಾರತದಲ್ಲಿ ಆಹಾರದ ಅಭದ್ರತೆ ಸೃಷ್ಟಿಯಾಗಿತ್ತು. 1960ರಲ್ಲಿ ಕೃಷಿ ಕೇತ್ರದಲ್ಲಿ ಸಾಂಪ್ರದಾಯಿಕ ನೀತಿಗಳನ್ನು ಕೈಬಿಟ್ಟು ತಂತ್ರಜ್ಞಾನ ಹಾಗೂ ಹೊಸ ನೀತಿ ಅಳವಡಿಸಿಕೊಂಡ ಪರಿಣಾಮ ಮೂರರಿಂದ ನಾಲ್ಕು ಪಟ್ಟು ಆಹಾರ ಉತ್ಪಾದನೆ ಹೆಚ್ಚಾಯಿತು. ಜೊತೆಗೆ ಗ್ರಾಮಿಣ ಪ್ರದೇಶಗಳಲ್ಲಿ ಕೋಟ್ಯಂತರ ಮಂದಿಗೆ ಉದ್ಯೋಗ ಸೃಷ್ಟಿಯಾಯಿತು. ಇದನ್ನು ಹಸಿರು ಕ್ರಾಂತಿ ಎಂದು ಬಣ್ಣಿಸಲಾಗಿದೆ. ಹೊಲದಲ್ಲಿ ಫ‌ಸಲು ಬೆಳೆದು, ಅಗ್ಗದ ದರಕ್ಕೆ ಮಾರುತ್ತಿದ್ದ ರೈತನಿಗೆ, ತನ್ನ ಕಸುಬಿನಿಂದ ಸಂಸಾರದ ನೊಗವನ್ನೂ ಎಳೆಯಬಹುದೆಂಬ ಆತ್ಮವಿಶ್ವಾಸ ಮೂಡಿದ ಈ ಕ್ಷಣಕ್ಕೆ ಒಂದು ಧನ್ಯವಾದ.

1966: ರೀಟಾ ಫ‌ರಿಯಾಗೆ ವಿಶ್ವಸುಂದರಿ ಕಿರೀಟ
ಹೆಣ್ಣು ಅಡುಗೆ ಮನೆಗೆ ಸೀಮಿತ ಎನ್ನುವ ಕಾಲದಲ್ಲಿ 
ವಿಶ್ವ ಸುಂದರಿ ಕಿರೀಟ ತೊಟ್ಟು ಸ್ಮೈಲ್‌ ಕೊಟ್ಟಾಕೆ ರೀಟಾ ಫ‌ರಿಯಾ. ಸುಂದರಿ ಪಟ್ಟಕ್ಕೇರುತ್ತಿದ್ದಂತೆ, ಬಾಲಿವುಡ್‌- ಹಾಲಿವುಡ್‌ ಕೂಡ ರೀಟಾ ಕಡೆ ನೋಡಿತ್ತು. ತಾರೆಗಳೂ ತಮ್ಮ ಚಿತ್ರದಲ್ಲಿ ನಟಿಸುವಂತೆ ಮನೆ ತನಕ ಬಂದರೂ ರೀಟಾ ಒಪ್ಪಿಕೊಳ್ಳದೆ, "ಎಂಬಿಬಿಎಸ್‌ ಮುಗಿಸಿ, ವೈದ್ಯೆ ಆಗುವುದೇ ನನ್ನ ಗುರಿ' ಎಂದುಬಿಟ್ಟರು. ಕೊನೆಗೂ ಹೇಳಿದಂತೆಯೇ ನಡೆದರು. ಮುಂಬಯಿ ಮೂಲದ ರೀಟಾ ಹಾಗೆ ಕಿರೀಟ ಗೆದ್ದು 5 ವರ್ಷವಷ್ಟೇ ಭಾರತದಲ್ಲಿದ್ದರು. ಈಗವರು ಐರ್ಲೆಂಡ್‌ನ‌ ಡಬ್ಲಿನ್‌ನ ವಾಸಿ. ಒಂದರ್ಥದಲ್ಲಿ ಗೃಹಬಂಧನದಲ್ಲಿದ್ದ ಭಾರತೀಯ ನಾರಿಗೆ, ಸೌಂದರ್ಯದ ಮೂಲಕ ಹೊರಜಗತ್ತಿನ ದಾರಿ ತೋರಿಸಿದ ಹೆಣ್ಣು ಇವರು.  

1969: ಬ್ಯಾಂಕ್‌ಗಳ ರಾಷ್ಟ್ರೀಕರಣ
1969ರಲ್ಲಿ ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ದೇಶದ ಪ್ರಮುಖ 14 ವಾಣಿಜ್ಯ ಬಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದರು. ದೇಶದ ಶೇ.70 ಠೇವಣಿ ಹಣ ಹೊಂದಿದ್ದ ಈ ಬ್ಯಾಂಕ್‌ಗಳು ಕೇವಲ ದೊಡ್ಡ ಕೈಗಾರಿಕೆ ಹಾಗೂ ಶ್ರೀಮಂತ ಉದ್ಯಮಿಗಳಿಗೆ ಮಾತ್ರ ಸೀಮಿತವಾಗಿದ್ದವು. ರಾಷ್ಟ್ರೀಕರಣದ ಮೂಲಕ ಈ ಬ್ಯಾಂಕ್‌ಗಳು, ಗ್ರಾಮೀಣ ಪ್ರದೇಶದ ಜನರನ್ನು ತಲುಪಿದವು. ಜೊತೆಗೆ ಕೃಷಿ ಕ್ಷೇತ್ರ, ಸಣ್ಣ ಸಣ್ಣ ಉದ್ದಿಮೆ, ವ್ಯಾಪಾರಿಗಳಿಗೆ ಬ್ಯಾಂಕ್‌ ಸೇವೆ ನೀಡುವ ಮೂಲಕ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲಾಯಿತು.

1971: ಬಾಂಗ್ಲಾ ಉದಯಕ್ಕೆ ಮಿಡಿದ ಸೇನೆ ಹೃದಯ
ಪಾಕ್‌ ವಿರುದ್ಧ ಭಾರತ ಮತ್ತೆ ತೊಡೆ ತಟ್ಟಲು ಕಾರಣ, 1971ರ ಬಾಂಗ್ಲಾ ವಿಮೋಚನೆ. ಪೂರ್ವಪಾಕಿಸ್ಥಾನದ (ಬಾಂಗ್ಲಾದೇಶ) ಮೇಲೆ ಅಧಿಕಾರ ಸಾಧಿಸಲು ಹೊರಟಪಾಕಿಸ್ಥಾನ, ಬಾಂಗ್ಲಾದಲ್ಲಿ ಸರಳ ಬಹುಮತದಲ್ಲಿ ಪಡೆದಿದ್ದ ಅವಾಮಿ ಲೀಗ್‌ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿತು. ಇದೇ ಯುದ್ಧಕ್ಕೆ ಹಚ್ಚಿದ ಮೊದಲ ಕಿಡಿ. ಬಾಂಗ್ಲಾ ಸೈನಿಕರನ್ನು, ಪೊಲೀಸರನ್ನು ನಿಶ್ಶಸ್ತ್ರೀಕರಿಸುವ ಪಾಕ್‌ ಸೇನೆಯ ಪ್ರಯತ್ನಕ್ಕೆ ತಡೆಯಾಗಿದ್ದು ಭಾರತೀಯ ಸೇನೆ. ಆಗಿನ ಇಂದಿರಾಗಾಂಧಿ ಸರಕಾರ ಬಾಂಗ್ಲಾ ವಿಮೋಚನೆಗೆ ಸಂಪೂರ್ಣ ಬೆಂಬಲ ಘೋಷಿಸಿತು. ಭಾರತವು ಬಾಂಗ್ಲಾದ ಮುಕ್ತಿವಾಹಿನಿ ಜತೆ ಸೇರಿ ಮಿತ್ರವಾಹಿನಿ ರಚಿಸಿ, ಪಾಕ್‌ ಸೇನೆಯನ್ನು ಹಿಮ್ಮಟ್ಟಿಸಿತು. ಆಗಪಾಕಿಸ್ಥಾನದ 99000 ಯೋಧರು ಭಾರತಕ್ಕೆ ಶರಣಾಗಿದ್ದು ನಮ್ಮ ಅದ್ಭುತ ಕ್ಷಣಗಳಲ್ಲೊಂದು.

1974: ಬುದ್ಧ ನಕ್ಕ  ಆ ದಿನ...
ಚೀನ ವಿರುದ್ಧ ಸೋತ ಭಾರತಕ್ಕೆ ಸೇನಾ ಬಲವರ್ಧನೆ ಅನಿವಾರ್ಯ ಆಗಿತ್ತು. ಆಗ ನಡೆದ ಪರಮಾಣು ಪರೀಕ್ಷೆಯೇ "ಸ್ಮೈಲಿಂಗ್‌ ಬುದ್ಧ'. 75 ಪರಮಾಣು ವಿಜ್ಞಾನಿಗಳು 1967ರಿಂದ 7 ವರ್ಷ ಅತ್ಯಂತ ಗುಪ್ತವಾಗಿ, ಪರಮಾಣು ಬಾಂಬ್‌ ಅನ್ನು ತಯಾರಿಸಿದ್ದರು. ಇಂದಿರಾ ಆ ವೇಳೆ ಪ್ರಧಾನಿಯಾಗಿದ್ದರೂ, ಪರೀಕ್ಷೆ ವೇಳೆ ಅವರು ಹಾಜರಿರಲಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯದ ಹೊರತಾದ ರಾಷ್ಟ್ರವೊಂದು ಪರಮಾಣು ಬಾಂಬ್‌ ಪರೀಕ್ಷೆ ನಡೆಸಿ ವಿಶ್ವದ ಗಮನ ಸೆಳೆಯಿತು. ನಂತರ 1998ರಲ್ಲಿ ವಾಜಪೇಯಿ ಅವಧಿಯಲ್ಲೂ, ಭಾರತ ಪರಮಾಣು ಪರೀಕ್ಷೆ ನಡೆಸಿ, ಅಮೆರಿಕದಂಥ ಪ್ರಮುಖ ರಾಷ್ಟ್ರಗಳ ದಿಗ್ಬಂಧನಕ್ಕೆ ದಿಟ್ಟ ಉತ್ತರ ನೀಡಿತ್ತು.

1975: ಜಗತ್ತಿನ ನೋಟ ಸೆಳೆದ ಆರ್ಯಭಟ 
ಭಾರತವು ಬಾಹ್ಯಾಕಾಶ ಲೋಕದ ನಕಾಶೆಯಲ್ಲಿ ಬಲಿಷ್ಠವಾಗಿ ತನ್ನ ಧ್ವಜ ನೆಟ್ಟಿದ್ದು 1975ರಲ್ಲಿ-ಆರ್ಯಭಟ ಉಪಗ್ರಹ ಉಡಾವಣೆಯ ಮೂಲಕ. ವಿಶೇಷವೆಂದರೆ ದೇಶೀಯವಾಗಿ ರೂಪಪಡೆದ ಈ ಉಪಗ್ರಹ ಕಾರ್ಯಕ್ರಮದ ನೇತೃತ್ವ ವಹಿಸಿದ್ದವರು ಇತ್ತೀಚೆಗಷ್ಟೇ ನಿಧನರಾದ, ಕನ್ನಡಿಗ ಯು.ಆರ್‌. ರಾವ್‌. ಈ ಉಡಾವಣೆಯ ಮುಖ್ಯ ಉದ್ದೇಶ ಭಾರತದ ಉಡಾವಣಾ ಸಾಮರ್ಥ್ಯವನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವುದು ಮತ್ತು ಮುಂದಿನ ಯೋಜನೆಗಳಿಗೆ ಬುನಾದಿ ಹಾಕುವುದಾಗಿತ್ತು. ಕೆಲವೇ ತಿಂಗಳು ಭೂಕಕ್ಷೆಯನ್ನು ಸುತ್ತುಹೊಡೆದರೂ ಆರ್ಯಭಟ ಉಪಗ್ರಹ ಭಾರತದ ಕೀರ್ತಿಯನ್ನು ಎತ್ತರಿಸುವಲ್ಲಿ ಯಶಸ್ವಿಯಾಗಿಬಿಟ್ಟಿತು. 

1975: ಹಾಕಿ ವಿಶ್ವಕಪ್‌ ವಿಜಯ
 ಹಾಕಿಯಲ್ಲಿ ಭಾರತ ತಂಡ ಅದ್ಭುತ ಇತಿಹಾಸದ ನಿರ್ಮಾತೃ. ಅದರ ಅಂಗ 1975ರಲ್ಲಿ ನಡೆದ 3ನೇ ಹಾಕಿ ವಿಶ್ವಕಪ್‌ ಗೆದ್ದಿದ್ದು. ಅಜಿತ್‌ ಪಾಲ್‌ ನೇತೃತ್ವದ ತಂಡ ಮಲೇಷ್ಯಾದ ಕೌಲಾಲಂಪುರ ದಲ್ಲಿ ನಡೆದ ಕೂಟದಲ್ಲಿ ಎದುರಾಳಿಪಾಕಿಸ್ಥಾನವನ್ನು 2-1ರಿಂದ ಸೋಲಿಸಿ ಮೆರೆಯಿತು. ಅದಾದ ನಂತರ ಭಾರತ ಮತ್ತೂಂದು ವಿಶ್ವಕಪ್‌ ಗೆದ್ದಿಲ್ಲವೆನ್ನುವುದು ವಿಪರ್ಯಾಸ.

1978: ಮೊದಲ ಪ್ರನಾಳ ಶಿಶು ದುರ್ಗಾ
ಮಕ್ಕಳಿಲ್ಲದ ದಂಪತಿಗಳೀಗ ಹಿಂದಿನವರಂತೆ ತಲೆ ಕೆಡಿಸಿಕೊಂಡು ಕುಳಿತುಕೊಳ್ಳುವುದಿಲ್ಲ. ದೇಶದ ವೈದ್ಯಕೀಯ ವಿಜ್ಞಾನ ಅವರ ಒಡಲು ತುಂಬುವಷ್ಟು ಬಲಿಷ್ಠವಾಗಿ ಬೆಳೆದಿದೆ. ಆದರೆ ಇಂಥ ಗುಣಾತ್ಮಕ ವೈದ್ಯ ವಿಜ್ಞಾನಕ್ಕೆ ಭಾರತದಲ್ಲಿ ಬುನಾದಿ ಹಾಕಿದವರೆಂದರೆ ಪಶ್ಚಿಮ ಬಂಗಾಳದ ಸುಭಾಷ್‌ ಮುಖ್ಯೋಪಾಧ್ಯಾಯ ಅವರು. ಪ್ರನಾಳ ಶಿಶು ತಂತ್ರಜ್ಞಾನದ ಮೂಲಕ ಮಹಿಳೆಯೊಬ್ಬರು ಗರ್ಭಧರಿಸುವಂತೆ ಮಾಡಿ, "ಬೇಬಿ ದುರ್ಗಾ' ಹುಟ್ಟಿಗೆ ಕಾರಣವಾದರು ಸುಭಾಷ್‌. ಭಾರತದ ಮೊದಲ ಮತ್ತು ಪ್ರಪಂಚದ ಎರಡನೆಯ ಪ್ರನಾಳ ಶಿಶು ದುರ್ಗಾ ಎನ್ನುವುದು ವಿಶೇಷ. ದುರ್ಗಾ ಜನನ ಜಗತ್ತಿನ ಮಾಧ್ಯಮಗಳಲ್ಲಿ ಬಹುವಾಗಿ ಸುದ್ದಿಯಾಗಿತ್ತು. 

1983: ಕ್ರಿಕೆಟ್‌ ವಿಶ್ವಕಪ್‌ ಜಯಭೇರಿ
ಹಾಕಿಯಂತೆ ಕ್ರಿಕೆಟ್‌ನಲ್ಲೂ ಒಂದು ವಿಶೇಷವಿದೆ. ಇಲ್ಲೂ ಭಾರತ ಮೂರನೇ ವಿಶ್ವಕಪ್‌ ಅನ್ನೇ ಜಯಿಸಿತು. 1983ರಲ್ಲಿ ಲಂಡನ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತ ಆಗಿನ ದೈತ್ಯ ತಂಡ ವೆಸ್ಟ್‌ ಇಂಡೀಸನ್ನು 43 ರನ್‌ಗಳಿಂದ ಸೋಲಿಸಿದಾಗ ಜಗತ್ತು ನಿಬ್ಬೆರಗಾಗಿತ್ತು. ನಾಯಕ ಕಪಿಲ್‌ದೇವ್‌ ಕಪ್‌ ಹಿಡಿದಿದ್ದು ಈಗಲೂ ಅದ್ಭುತ ಚಿತ್ರಗಳಲ್ಲೊಂದು.

1990: ಉಸಿರಾಗಿ ಬಂದ ಉದಾರೀಕರಣ
1990ರಲ್ಲಿ ವಿತೀಯ ಹಾಗೂ ವಿದೇಶಿ ಮೀಸಲು ವಿನಿಮಯ ಕೊರತೆ ಉಂಟಾಗಿ ಭಾರತ ತೀವ್ರ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿತ್ತು. ವಿದೇಶಿ ವಿನಿಮಯ 3 ವಾರಗಳಿಗೆ ಮಾತ್ರ ಸೀಮಿತವಾಗಿತ್ತು. ಈ ವೇಳೆ ಭಾರತವನ್ನು ದಿವಾಳಿ ಎಂದು ಘೋಷಿಸುವ ಹಂತಕ್ಕೆ ಬಂದಿತ್ತು. ಅಂದಿನ ಪ್ರಧಾನಿ ನರಸಿಂಹರಾವ್‌ ಸರಕಾರವು, ರಾಷ್ಟ್ರೀಯ ಚಿನ್ನದ ಮೀಸಲನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ವಿಮಾನದ ಮೂಲಕ ಸಾಗಿಸಿ ತುರ್ತು ಉಪಶಮನ ಕ್ರಮ ಕೈಗೊಂಡಿದ್ದರು. ಬಳಿಕ 1991ರಲ್ಲಿ ಅಂದು ವಿತ್ತ ಸಚಿವರಾಗಿದ್ದ ಮನಮೋಹನ್‌ಸಿಂಗ್‌ ಹಾಗೂ ನರಸಿಂಹರಾವ್‌ ಕೈಗೊಂಡ ಮುಕ್ತ ವ್ಯಾಪಾರ ನೀತಿ ಸೇರಿದಂತೆ ವಿವಿಧ ಸುಧಾರಣಾ ಕ್ರಮಗಳು ದೇಶದ ಆರ್ಥಿಕತೆಯನ್ನೇ ಬದಲಾಯಿಸಿದವು.

1991: ಲೈಸೆನ್ಸ್‌ ರಾಜ್‌ ರದ್ದು
ಹಿಂದೆ ಕೈಗಾರಿಕೆ ಸ್ಥಾಪನೆಗೆ ಇದ್ದ ಅಡೆತಡೆ ನಿವಾರಿಸಲು ಲೈಸನ್ಸ್‌ ರಾಜ್‌ ನೀತಿಯನ್ನು ರದ್ದು ಪಡಿಸಲಾಯಿತು. ಬಂಡವಾಳ ಹೂಡಿಕೆಗೆ ಸಾಕಷ್ಟು ಪ್ರೋತ್ಸಾಹ ನೀಡಲಾಯಿತು.  ವಿದೇಶ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಅವಕಾಶ ಕಲ್ಪಿಸಲಾಯಿತು. ಇದನ್ನು ವಿತ್ತ ವಿಶ್ಲೇಷಕರು ಮತ್ತು ಆರ್ಥಿಕ ತಜ್ಞರು ಬೋಲ್ಡ್‌ ನಡೆ ಎಂದು ಕೊಂಡಾಡುತ್ತಾರೆ. ಲೈಸೆನ್ಸ್‌ ರಾಜ್‌ ಕೊನೆಗೊಂಡ ನಂತರದಿಂದ ದೇಶದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಯಿತು. ನಮ್ಮ ಈಗಿನ ವಿತ್ತ ಸಾಧನೆಯಲ್ಲಿ ದೇಶ ಅಂದು ತೆಗೆದುಕೊಂಡ ಈ  ತೀರ್ಮಾನದ್ದೂ ಪ್ರಮುಖ ಪಾತ್ರವಿದೆ. 

1991: ನಮ್ಮದೂ ಒಂದು ಸೂಪರ್‌ ಕಂಪ್ಯೂಟರ್‌
ಸೂಪರ್‌ ಕಂಪ್ಯೂಟರ್‌ ತಯಾರಿ ತಮ್ಮಿಂದ ಮಾತ್ರ ಸಾಧ್ಯ ಎಂದು ಅಮೆರಿಕ, ಚೀನ ಬೀಗುತ್ತಿದ್ದ ವೇಳೆಯಲ್ಲಿ ಅವುಗಳನ್ನು ಅಚ್ಚರಿಗೆ ಕೆಡವಿತು ಭಾರತದ ಪರಂ800. ಹೆಸರಿಗೆ ತಕ್ಕಂತೆಯೇ ಪಾರಮ್ಯ ಮೆರೆಯುವ ಸಾಮರ್ಥ್ಯವಿರುವ ಪರಂ ಅನ್ನು ಕೇಂದ್ರದ ಅಡ್ವಾನ್ಸ್‌ ಕಂಪ್ಯೂಟಿಂಗ್‌ ಸಂಸ್ಥೆ ದೇಶೀಯವಾಗಿಯೇ ನಿರ್ಮಿಸಿದ್ದು ಅತಿದೊಡ್ಡ ಸಾಧನೆ. ಪರಂ ಸೂಪರ್‌ ಕಂಪ್ಯೂಟರ್‌ ಅಭಿವೃದ್ಧಿಯಿಂದಾಗಿ ಸೂಪರ್‌ ಕಂಪ್ಯೂಟಿಂಗ್‌ ಕ್ಷೇತ್ರದಲ್ಲಿ ಚೀನ, ರಷ್ಯಾ, ಅಮೆರಿಕ, ಜಪಾನ್‌ಗೆ ಭಾರತವೂ ಹೆಗಲುಕೊಟ್ಟು ನಿಲ್ಲುವಂತಾಯಿತು. 

1999: ಕಾರ್ಗಿಲ್‌ ಕದನದ ದಿಗ್ವಿಜಯ
ಪ್ರಪಂಚದಲ್ಲಿ ತೀರಾ ಇತ್ತೀಚೆಗಿನ ನೇರ ಭೂ ಯುದ್ಧಗಳ ಪೈಕಿ ಕಾರ್ಗಿಲ್‌ ಯುದ್ಧ ಪ್ರಮುಖ. ಕಾಶ್ಮೀರದ ಕಾರ್ಗಿಲ್‌ ಜಿಲ್ಲೆಯಲ್ಲಿ ಪಾಕ್‌ ಸೇನೆಯ ಪುಂಡಾಟ, ಉಗ್ರರ ನುಸುಳುವಿ ಕೆಗೆ ಭಾರತೀಯ ಸೇನೆ 1999ರಲ್ಲಿ ತಕ್ಕ ಉತ್ತರ ನೀಡಿತ್ತು. "ಆಪರೇಷನ್‌ ವಿಜಯ್‌' ಹೆಸರಿನಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಭಾರತ ಈ 1947ರ ಯುದ್ಧದಲ್ಲಿ ಕಳೆದುಕೊಂಡ ಕೆಲವು ಪ್ರದೇಶಗಳನ್ನೂ ವಶಪಡಿಸಿಕೊಂಡಿತು.  ಸೈನಿಕರನ್ನೂ ಒಳಗೊಂಡಂತೆ ಭಾರತ 527 ಮಂದಿಯನ್ನು ಕಳಕೊಂಡರೆ, ಪಾಕ್‌ನ ಸಾವಿನ ಪಟ್ಟಿ 700ಕ್ಕೂ ದಾಟಿತು. 

2007: ಮೊದಲ ಟಿ20 ವಿಶ್ವಕಪ್‌ ಸಂಭ್ರಮ
2007ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ಪನ್ನು ಭಾರತ ತಂಡ ಜಯಿಸಿತು. ಹಾಗೆ ನೋಡಿದರೆ ಆ ಹಂತದಲ್ಲಿ ದುರ್ಬಲ ಎನಿಸಿಕೊಂಡಿತ್ತು ಭಾರತ. ಆದರೆ ಅನಿರೀಕ್ಷಿತವೆಂಬಂತೆ ಧೋನಿ ನೇತೃತ್ವದಲ್ಲಿ ಸಿಡಿದುಪಾಕಿಸ್ಥಾನವನ್ನು ಕೊನೆಯ ಓವರ್‌ನಲ್ಲಿ ಸೋಲಿಸಿತು. ಇದೇ ಕೂಟದಲ್ಲಿ ಯುವರಾಜ್‌ ಸಿಂಗ್‌ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್‌ ಸಿಡಿಸಿದ್ದು ವಿಶ್ವದಾಖಲೆ. ಈ ಗೆಲುವು ದೇಶದಲ್ಲಿ ಧೋನಿ ಮೇನಿಯಾ ವೇಗಪಡೆಯಲು ಕಾರಣವಾದದ್ದು ಸುಳ್ಳಲ್ಲ. 

2008: ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನ
2008ರಲ್ಲಿ ಚೀನದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ ಭಾರತೀಯರ ಮಟ್ಟಿಗೆ ಯಾವತ್ತಿಗೂ ನೆನಪಿರುತ್ತದೆ. ಕಾರಣ ಆ ಒಲಿಂಪಿಕ್ಸ್‌ ಮೂಲಕ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ಲಭಿಸಿತು. 10 ಮೀ. ಏರ್‌ ರೈಫ‌ಲ್‌ನಲ್ಲಿ ಅಭಿನವ್‌ ಬಿಂದ್ರಾ ಚಿನ್ನಕ್ಕೆ ಗುರಿಯಿಟ್ಟರು. 

2008: ಚಂದಮಾಮನ ಅಂಗಳದಲ್ಲಿ
ಚಂದ್ರನ ಕಕ್ಷೆಯನ್ನು ತಲುಪುವ ಭಾರತದ ಕನಸು ಸಾಕಾರಗೊಂಡಿತು. ಭಾರತೀಯ ಬಾಹ್ಯಾಕಾಶ ಸಂಸ್ಥೆ ಯಶಸ್ವಿಯಾಗಿ ಉಡ್ಡಯಿಸಿದ ಚಂದ್ರಯಾನ್‌-1 ಉಪಗ್ರಹ ಚಂದ್ರನ ಕಕ್ಷೆಯನ್ನು ಸೇರಿತು. ಈ ಯಶಸ್ಸು ಭಾರತವನ್ನು ಜಾಗತಿಕ ಬಾಹ್ಯಾಕಾಶ ಸಂಶೋಧನಾ ರಂಗದಲ್ಲಿ ಮೇಲ್ದರ್ಜೆಗೇರಿಸಿ, ನಾಸಾ ಮತ್ತು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ಹುಬ್ಬೇರುವಂತೆ ಮಾಡಿತು. ಚಂದ್ರನ ಮಣ್ಣಿನಲ್ಲಿ ನೀರಿನ ಅಣುಗಳನ್ನು ಮೊದಲು ಪತ್ತೆ ಹಚ್ಚಿದ್ದೇ ಭಾರತ. 

2012: ಒಲಿಂಪಿಕ್ಸ್‌ನಲ್ಲೇ ಗರಿಷ್ಠ 6 ಪದಕ
ಭಾರತದ ಕ್ರೀಡಾ ಇತಿಹಾಸದಲ್ಲಿ 2012ರ ಲಂಡನ್‌ ಒಲಿಂಪಿಕ್ಸ್‌ ಮರೆಯಲಾಗದ ಕೂಟ. ತನ್ನ ಒಲಿಂಪಿಕ್ಸ್‌ ಇತಿಹಾಸದಲ್ಲೇ ಗರಿಷ್ಠ 6 ಪದಕ ಗೆದ್ದ ಸಂದರ್ಭ ಇದು. ವಿಜಯ್‌ ಕುಮಾರ್‌ (ಶೂಟಿಂಗ್‌), ಸುಶೀಲ್‌ಕುಮಾರ್‌ (ಕುಸ್ತಿ) ಬೆಳ್ಳಿ ಗೆದ್ದರೆ, ಸೈನಾ ನೆಹ್ವಾಲ್‌ (ಬ್ಯಾಡ್ಮಿಂಟನ್‌), ಮೇರಿಕೋಮ್‌ (ಬಾಕ್ಸಿಂಗ್‌), ಗಗನ್‌ ನಾರಂಗ್‌ (ಶೂಟಿಂಗ್‌), ಯೋಗೇಶ್ವರ್‌ ದತ್‌ (ಕುಸ್ತಿ) ಕಂಚಿನ ಪದಕ ಗೆದ್ದರು.

2012: ಅಣ್ಣಾ ಹಜಾರೆ ಹೋರಾಟ
ಲಂಚಗುಳಿತನದ ಬಂಧನದಿಂದ ಭಾರತವನ್ನು ಮುಕ್ತಗೊಳಿಸಲು ಒಬ್ಬರು ಹೋರಾಟಗಾರ ಎದ್ದುಬಂದರು. ಅವರೇ ಅಣ್ಣಾ ಹಜಾರೆ. ಒಂದು ಕಾಲದಲ್ಲಿ ಸೇನೆಯಲ್ಲಿ ಟ್ರಕ್‌ ಡ್ರೈವರ್‌ ಆಗಿದ್ದ ಹಜಾರೆ, ತಮ್ಮ ಊರು ರಾಲೇಗಾಂವ್‌ ಸಿದ್ಧಿಯಲ್ಲಿ ತಂಬಾಕು, ಮದ್ಯಸೇವನೆಯನ್ನು ತೊಡೆದು ಹಾಕಿ ಕ್ರಾಂತಿ ಎಬ್ಬಿಸಿದರು. ಗಾಂಧಿ ತತ್ವಗಳ ಪ್ರವಾದಿಯಂತೆ ಕಾಣುವ ಹಜಾರೆ ನಂತರ 2012ರಲ್ಲಿ ಭ್ರಷ್ಟಾಚಾರದ ವಿರುದ್ಧ ಬೃಹತ್‌ ಸತ್ಯಾಗ್ರಹ ಹಮ್ಮಿಕೊಂಡು, ಇಡೀ ಭಾರತವನ್ನು ನಿದ್ದೆಯಿಂದ ಎಬ್ಬಿಸಿದರು. ಇದು ಸ್ವಾತಂತ್ರ್ಯ ನಂತರ ಭಾರತದ ದೊಡ್ಡ ಚಳವಳಿ. ಹಜಾರೆ ಅವರು ಲೋಕಪಾಲ್‌ ಮಸೂದೆಗೆ ಪಟ್ಟು ಹಿಡಿದರೂ, ಅದನ್ನು ಜಾರಿ ತರುವಲ್ಲಿ ಸರಕಾರಗಳು ಈಗಲೂ ಮೀನಮೇಷ ಎಣಿಸುತ್ತಲೇ ಇವೆ.

2014: ಮಧುರ ಮಧುರವೀ ಮಂಗಳಯಾನ
ಇಸ್ರೋದ ಅತಿ ಮಹತ್ವಾಕಾಂಕ್ಷಿ ಮಂಗಳಯಾನ ಯೋಜನೆ ಭಾರತದ ಪಾಲಿಗೆ ಮಂಗಳಕರವಾಗಿ ಬದಲಾಗಿದ್ದು ಸುಳ್ಳಲ್ಲ. 2013ರ ನವೆಂಬರ್‌ 5ರಂದು ಇಸ್ರೋ ಉಡ್ಡಯಿಸಿದ ಮಂಗಳಯಾನ ನೌಕೆ ಯಶಸ್ವಿಯಾಗಿ 2014ರ ಸೆಪ್ಟಂಬರ್‌ 24ರಂದು ಮಂಗಳನ ಅಂಗಳ ಸೇರಿತು. ಕೇವಲ 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಕಾರ್ಯಕ್ರಮ ಭಾರತದ "ಜುಗಾಡ್‌' ಗುಣವನ್ನು ಜಗತ್ತಿಗೆ ಸಾರಿತು. ವಿಶೇಷವೆಂದರೆ ಅಮೆರಿಕ ಸಂಸ್ಥಾನ, ಸೋವಿಯತ್‌ ಒಕ್ಕೂಟ, ಯುರೋಪಿ ಯನ್‌ ಸ್ಪೇಸ್‌ ಏಜೆನ್ಸಿ ನಂತರ ಮಂಗಳ ಕಕ್ಷೆಗೆ ತಲುಪಿದ ಸಾಧನೆ ಮಾಡಿದೆ ಭಾರತ. ಅಲ್ಲದೆ ಭಾರತವನ್ನು ಬಿಟ್ಟು ಬೇರಾವ ರಾಷ್ಟ್ರಕ್ಕೂ ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲು ಪಲು ಸಾಧ್ಯವಾಗಿಲ್ಲ! 2011ರಲ್ಲಿ ಚೀನ ಮಾರ್ಸ್‌ ಮಿಷನ್‌ ಆರಂಭಿಸಿತಾದರೂ ಆ ಪ್ರಯತ್ನದಲ್ಲಿ ವಿಫ‌ಲವಾಯಿತು. 

2014: ನಮೋ  ಎಂದ ಭಾರತ
16ನೇ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಗೆಲುವು ಇತಿಹಾಸದ ಪುಟದಲ್ಲಿ ದಾಖಲಾಗುವಂಥದ್ದು. ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ಸೇತರ ಪಕ್ಷವೊಂದು ಅಭೂತಪೂರ್ವ ವಿಜಯ ಸಾಧಿಸಿದ್ದು ಇದೇ ಮೊದಲು. 543 ಸೀಟುಗಳ ಪೈಕಿ ಬಿಜೆಪಿ 282 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ದೇಶದ ರಾಜಕೀಯದ ದಿಕ್ಕನ್ನೇ ಬದಲಿಸಿದ ಪ್ರಮುಖಾಂಶ. ಬಿಜೆಪಿ ಸಾರಥಿ ನರೇಂದ್ರ ಮೋದಿ ಅವರ ಕಾಂಗ್ರೆಸ್‌ ಮುಕ್ತ ಭಾರತ ಘೋಷಣೆ ಫ‌ಲಕಾರಿಯೂ ಆಯಿತು. ಈ ಬೃಹತ್‌ ಮೋದಿ ಅಲೆ ಸಂಸತ್‌ ಚುನಾವಣೆ ಅನಂತರವೂ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ಫ‌ಲಿತಾಂಶವನ್ನೇ ಬದಲಿಸಿತು.

2016: ಭ್ರಷ್ಟಾಚಾರಕ್ಕೆ ನೋಟಿನೇಟು
 2016ರ ನವೆಂಬರ್‌ 8 ರಂದು ಪ್ರಧಾನಿ ಮೋದಿ ಸರಕಾರ, ಹಳೆಯ 500 ಹಾಗೂ 1000 ರೂ.  ಮುಖಬೆಲೆಯ ನೋಟುಗಳನ್ನು ರದ್ದು ಪಡಿಸುವ ದಿಟ್ಟ ನಿರ್ಧಾರ ಕೈಗೊಂಡಿತು. ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಅವಕಾಶ ನೀಡುವ ಮೂಲಕ ಕಾಳಧನಿಕರು ಹಾಗೂ ಭಯೋತ್ಪಾದನೆ ವಿರುದ್ಧ ಸಮರ ಸಾರಲಾಯಿತು. ಡಿಮಾನಿಟೈಸೇಷನ್‌ ಯಶಸ್ವಿಯಾಯಿತೋ ಇಲ್ಲವೋ ಎನ್ನುವುದು ಇಂದಿಗೂ ನಿಚ್ಚಳವಾಗಿಲ್ಲವಾದರೂ ಇದು ದಿಟ್ಟ ನಡೆಯೆಂದು ಸಾಬೀತಾಗಿದ್ದು ನಿಜ. 

2017: ಸರಕು, ಸೇವಾ  ತೆರಿಗೆ (ಜಿಎಸ್‌ಟಿ)
ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಆರ್ಥಿಕ ಸುಧಾರಣೆ ಯಾವುದು ಎನ್ನುವ ಪ್ರಶ್ನೆಯೇನಾದರೂ ಎದುರಾದರೆ, ಎದುರಾಗುವ ಉತ್ತರಗಳಲ್ಲಿ ಪ್ರಮುಖ ಸ್ಥಾನ ಪಡೆದಿರುತ್ತದೆ ಜಿಎಸ್‌ಟಿ. ಸರಕು ಸೇವಾ ತೆರಿಗೆಯನ್ನು ಜುಲೈ 1ರಂದು ಜಾರಿಗೊಳಿಸುವ ಮೂಲಕ ದೇಶಾದ್ಯಂತ ಏಕರೂಪದ ತೆರಿಗೆ ಅನ್ವಯವಾಗುವಂತೆ ಮಾಡಲಾಯಿತು. ದೇಶದ ರಾಜ್ಯಗಳು ಪ್ರತ್ಯೇಕವಾಗಿ (ತಮಗನುಗುಣವಾಗಿ) ವಿಧಿಸುತ್ತಿದ್ದ ವಿವಿಧ ತೆರಿಗೆಗಳನ್ನು ರದ್ದು ಪಡಿಸಿ ಜಿಎಸ್‌ಟಿಯನ್ನು ಅಳವಡಿಸಿಕೊಂಡವು. 

ಅಂದಿನ ಭಾರತಕ್ಕೂ ಇಂದಿನಕ್ಕೂ...
ಆರ್ಥಿಕತೆ
ಅಂದು: 2.7 ಲಕ್ಷ ಕೋಟಿ
ಇಂದು: 57 ಲಕ್ಷ ಕೋಟಿ

ಆಮದು
ಅಂದು: 1,292 ದಶಲಕ್ಷ ಡಾಲರ್‌
ಇಂದು: 450,054 ದಶಲಕ್ಷ ಡಾಲರ್‌

ಆರ್ಥಿಕ ವಾರ್ಷಿಕ ಸರಾಸರಿ    
ಅಂದು: 2.3% 
4.7%

ರಫ್ತು
ಅಂದು: 1,016 ದಶಲಕ್ಷ ಡಾಲರ್‌
ಇಂದು: 3,12,610 ದಶಲಕ್ಷ ಡಾಲರ್‌

ಆಹಾರ ಉತ್ಪಾದನೆ
ಅಂದು: 5.83 ದಶಲಕ್ಷ ಟನ್‌
265 ದಶಲಕ್ಷ ಟನ್‌

10 ಗ್ರಾಂ ಚಿನ್ನದ ಬೆಲೆ
ಅಂದು: 88.62 ರೂ
ಇಂದು: 30,000ರೂ

ರಸ್ತೆಯ ಒಟ್ಟಾರೆ ಉದ್ದ
ಅಂದು: 399 ಸಾವಿರ ಕಿ.ಮೀ.
ಇಂದು: 4,865 ಸಾವಿರ ಕಿ.ಮೀ.

ದೇಶದ ಜನಸಂಖ್ಯೆ
ಅಂದು: 44.95 ಕೋಟಿ
ಇಂದು: 132.4 ಕೋಟಿ

ವಿದೇಶಿ ವಿನಿಮಯ
ಅಂದು: 2,161 ದಶಲಕ್ಷ ಡಾಲರ್‌
ಇಂದು: 3,04,224 ದಶಲಕ್ಷ ಡಾಲರ್‌


Trending videos

Back to Top