CONNECT WITH US  

ಸವಾಲಿನ ಕಾಲದಲ್ಲಿ ಅಧಿಕಾರ ಹಿಡಿಯುವ ರಾಹುಲ್‌

ಬಹುಕಾಲದ ನಿರೀಕ್ಷೆ ನಿಜವಾಗಿದೆ. ಈವರೆಗೆ ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಈ ಮೂಲಕ, ಈವರೆಗೆ 131 ವರ್ಷಗಳ ಇತಿಹಾಸವಿರುವ ಪಕ್ಷವೊಂದರ ಆಡಳಿತ ಚುಕ್ಕಾಣಿ ಹಿಡಿ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು ತಮ್ಮ ಮೇಲಿದ್ದ ಹೊರೆಯನ್ನು ಪುತ್ರನ ಹೆಗಲ ಮೇಲಿರಿಸಿ, ಪಕ್ಕಕ್ಕೆ ಸರಿಯುತ್ತಿದ್ದಾರೆ.

ಪಪ್ಪು, ಕಾಂಗ್ರೆಸ್ಸಿನ ಯುವರಾಜ ಎಂದು ಕರೆಯಿಸಿಕೊಳ್ಳುವ, ಕೆಲವಾರು ಅಪ್ರಬುದ್ಧ ಹೇಳಿಕೆ ನೀಡಿ ವಿರೋಧಿಗಳ ನಗೆಪಾಟಲಿಗೆ ಗುರಿಯಾಗುವ, ಇನ್ನೂ ಕೆಲವೊಮ್ಮೆ ಪಕ್ಷೀಯರಿಂದಲೇ "ಇನ್ನೂ ಎಳಸು' ಎಂಬ ಕುಚೋದ್ಯಗಳನ್ನೂ ಕೇಳಿರುವ ರಾಹುಲ್‌ ಅವರ ರಾಜಕೀಯ ಜೀವನದ ಅಸಲಿ ಸವಾಲು ಈಗ ಶುರುವಾಗಿದೆ. ಐದನೇ ತಲೆಮಾರಿನ ಹಿರಿಮೆ: ನೆಹರೂ ಮನೆತನದ ದೃಷ್ಟಿಯಿಂದ ಹೇಳುವುದಾದರೆ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿದ ಐದನೇ ತಲೆಮಾರಿನ ವ್ಯಕ್ತಿ. ಅವರ ಮುತ್ತಾತನ ತಂದೆ ಮೋತಿಲಾಲ್‌ ನೆಹರೂ 1928ರಲ್ಲಿ ಆ ಪಕ್ಷದ ಅಧ್ಯಕ್ಷರಾಗಿದ್ದರು.

ಆನಂತರ, ಅವರ ಪುತ್ರ ಜವಾಹರಲಾಲ್‌ ನೆಹರೂ 1929-30,1936-37, 1951-52, 1953, 1954ರಲ್ಲಿ, ಜವಾಹರರ ಪುತ್ರಿ ಇಂದಿರಾ ಗಾಂಧಿ 1959, 1978-83, 1983-84ರಲ್ಲಿ, ಆನಂತರ ಅವರ ಪುತ್ರ ರಾಜೀವ್‌ ಗಾಂಧಿ 1985ರಿಂದ 91, ರಾಜೀವ್‌ ಪತ್ನಿ ಸೋನಿಯಾ ಗಾಂಧಿ 1998ರಿಂದ 2017ರವರೆಗೆ ಅಧ್ಯಕ್ಷಗಾದಿಯನ್ನು ಅಲಂಕರಿಸಿದ್ದಾರೆ.

ಆ ಐದೂ ತಲೆಮಾರಿನವರ ಚಾಣಾಕ್ಷತೆ, ಬುದ್ಧಿಮತ್ತೆ, ರಾಜಕೀಯ ಚತುರತೆಗಳಿಗೆ ಹೋಲಿಸಿದರೆ, ರಾಹುಲ್‌ ಗಾಂಧಿ ಅಂಥಾ ನಿಪುಣರೇನಲ್ಲ ಎಂಬ ಟೀಕೆಗಳೂ ಅವರ ಬೆನ್ನಿಗಿರುವುದರಿಂದ ಅವರು ಈ ಸವಾಲನ್ನು ಹೇಗೆ ಮೆಟ್ಟುತ್ತಾರೆಂಬುದರ ಮೇಲೆ ಅವರ ರಾಜಕೀಯ ಜೀವನದ ಯಶಸ್ಸು ನಿರ್ಧಾರವಾಗಲಿದೆ.

ಅದು ಹಾಗಿರಲಿ. ಆದರೆ, ತಲೆಮಾರುಗಳವರೆಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದ ಮನೆಯ ಮಗನಾಗಿ, ಒಂದು ವಿಶೇಷ ಜೀವನವನ್ನು ನೋಡಿದ್ದ ರಾಹುಲ್‌ ಗಾಂಧಿ ಹದಿಹರೆಯದವರಾಗಿದ್ದಾಗ ಹೀಗೆ ಮುಂದೊಂದು ದಿನ ತಾವು ನೂರಾರು ವರ್ಷಗಳ ಇತಿಹಾಸವುಳ್ಳ ರಾಜಕೀಯ ಪಕ್ಷವೊಂದರ ಅಧ್ಯಕ್ಷನಾಗುತ್ತೇನೆಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಕ್ಕಿಲ್ಲ. ಬಾಲ್ಯದಲ್ಲಿ ಅಜ್ಜಿಯ (ಇಂದಿರಾ ಗಾಂಧಿ) ರಾಜಕೀಯವನ್ನು ಒಂದು ನಿರ್ದಿಷ್ಟ ದೂರದಲ್ಲೇ ನಿಂತು ನೋಡಿದ್ದವರೇ ಹೊರತು, ಅದರೊಳಗೆ ಪ್ರವೇಶಿಸಿದವರಲ್ಲ.

ಹಾಗೆ ನೋಡುವುದಾದರೆ, ರಾಹುಲ್‌ ಗಾಂಧಿ ಮಾತ್ರವಲ್ಲ, ಅವರ ತಾಯಿ ಸೋನಿಯಾ ಗಾಂಧಿಯಾಗಲೀ, ತಂದೆ ರಾಜೀವ್‌ ಗಾಂಧಿ ಸಹ ರಾಜಕೀಯ ಜೀವನದಲ್ಲಿ ಇದ್ದವರಲ್ಲ. ಆದರೆ, 1984ರಲ್ಲಿ ನಡೆದ ಇಂದಿರಾ ಗಾಂಧಿಯವರ ಹತ್ಯೆ ಆ ಕುಟುಂಬ ಸಾಗುತ್ತಿದ್ದ ವಿಮಾನದ ದಿಕ್ಕನ್ನೇ ಬದಲಿಸಿದ್ದು ಮಾತ್ರ ಅಚ್ಚರಿಯ ಸಂಗತಿ. ಇಂದಿರಾ ಗಾಂಧಿಯವರ ಹತ್ಯೆಯಾದ ನಂತರವೇ ರಾಹುಲ್‌ ಜೀವನ ತಿರುವು ಪಡೆಯಲಾರಂಭಿಸಿದ್ದು. ಇಂದಿರಾ ಹತ್ಯೆ ನಂತರ ಅನಿವಾರ್ಯವಾಗಿ ರಾಜಕೀಯಕ್ಕೆ ಬಂದ ರಾಜೀವ್‌ ಗಾಂಧಿ, ದೇಶದ ಪ್ರಧಾನಿಯಾದರು. ಹಾಗಾಗಿ, ಭದ್ರತಾ ದೃಷ್ಟಿಯಿಂದ ನಿಸರ್ಗದ ಮಡಿಲಲ್ಲಿದ್ದ ರಾಹುಲ್‌ ಅವರನ್ನು ದೆಹಲಿಯ ಶಾಲೆಯೊಂದಕ್ಕೆ ವರ್ಗಾಯಿಸಲಾಯಿತು. ಅಲ್ಲಿಂದಲೇ ನಿರ್ದಿಷ್ಟ ಬೇಲಿಯೊಳಗಿನ ಜೀವನ ಶುರುವಾಗಿದ್ದು.ಆನಂತರ, ಉನ್ನತ ವ್ಯಾಸಂಗಕ್ಕಾಗಿ ದೇಶ ಬಿಟ್ಟರೂ, "ವಿವಿಐಪಿ'ಬೇಲಿ ಮಾತ್ರ ಅವರ ಬೆನ್ನುಬಿಡಲಿಲ್ಲ. ಇದರ ನಡುವೆಯೇ ಅವರು, ಅಮೆರಿಕದ ಫ್ಲೋರಿಡಾದ ರೋಲಿನ್ಸ್‌ ಕಾಲೇಜಿನಲ್ಲಿ ಬಿ.ಎ ಪದವಿ (1994), ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜಿನಲ್ಲಿ ಎಂ.ಫಿಲ್‌ ಪದವಿ (1995) ಪಡೆದರು.

ಮಹಾ ಸವಾಲು
ಅವರ ರಾಜಕೀಯ ಜೀವನದಲ್ಲಿ ಅತ್ಯಂತ ಕಠಿಣ ಸವಾಲು ಎದುರಿಸಿದ್ದು 2014ರ ಚುನಾವಣೆಯಲ್ಲಿ. ದೇಶದೆಲ್ಲೆಡೆ ಬಿಜೆಪಿಯ ಅಲೆ ಸುನಾಮಿಯಂತೆ ಎದ್ದಿದ್ದಾಗ, ಕಾಂಗ್ರೆಸ್‌ ಭದ್ರಕೋಟೆಯಾದ ಅಮೇಥಿಯ ಕೈವಶಕ್ಕೆ ಮುಂದಾಗಿದ್ದ ಬಿಜೆಪಿ, ಸ್ಮತಿ ಇರಾನಿ ಅವರನ್ನು ರಾಹುಲ್‌ ವಿರುದ್ಧ ಕಣಕ್ಕಿಳಿಸಿತ್ತು. ಹಾಗಾಗಿ, ರಾಹುಲ್‌ಗೆ ಆವರೆಗೆ ಸಿಕ್ಕಿರದಂಥ ಪ್ರಬಲ ಪೈಪೋಟಿ ಏರ್ಪಟಿತ್ತು. ಆದರೂ, ಆ ಚುನಾವಣೆಯಲ್ಲಿ ಅವರು ಗೆದ್ದು ಸಂಸದರಾಗಿದ್ದು ಅಮೇಥಿಯಲ್ಲಿ ಕಾಂಗ್ರೆಸ್‌ನ ಹಿಡಿತ ಸಾಬೀತುಪಡಿಸಿತ್ತು.

ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ
 ಹಲವಾರು ಚಿಂತನ- ಮಂಥನಗಳ ತರುವಾಯ, ಸೋನಿಯಾ ಗಾಂಧಿ ಹಾಗೂ ಅವರ ಆಪ್ತ ವಲಯ, 2013ರ ಜನವರಿಯಲ್ಲಿ ರಾಹುಲ್‌ ಗಾಂಧಿಯವರನ್ನು ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿತು.ಅದೇನೇ ಇರಲಿ. ತಮ್ಮ ರಾಜಕೀಯ ಜೀವನದಲ್ಲಿ ಆರಂಭದಿಂದ ಇಲ್ಲಿಯವರೆಗೆ ರಾಹುಲ್‌ ಗಾಂಧಿ ಪಡೆದಿದ್ದು ಸಿಹಿಗಿಂತ ಕಹಿಯೇ ಹೆಚ್ಚು. ಮೋದಿ ಅಲೆಯನ್ನು ಪ್ರಬಲವಾಗಿ ಎದುರಿಸುವಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿರುವುದು, ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೇ (ಯುಪಿಎ-2 ಅವಧಿ) ಮಿತಿಮೀರಿದ ಭ್ರಷ್ಟಾಚಾರದಿಂದ ಕಾಂಗ್ರೆಸ್‌ ಕಳಾಹೀನವಾಗಿದ್ದು, ಇದೆಲ್ಲವೂ ರಾಹುಲ್‌ ಅವರ ವರ್ಚಸ್ಸನ್ನೂ ಕೆಲವೊಮ್ಮೆ
ನಗೆಪಾಟಲನ್ನಾಗಿಸಿದ್ದಿದೆ.

ಇದರ ಜತೆಗೇ, 2012ರ ಉತ್ತರ ಪ್ರದೇಶ ಚುನಾವಣೆ, 2014ರ ಲೋಕಸಭಾ ಚುನಾವಣೆ, 2015ರ ಪಂಚ ರಾಜ್ಯಗಳ
ಚುನಾವಣೆಯಂಥ ಪ್ರಮುಖ ಘಟ್ಟಗಳಲ್ಲಿ ರಾಹುಲ್‌ಅವರಿಗೆ ನಿರೀಕ್ಷಿತ ಯಶಸ್ಸು ಲಭಿಸಿಲ್ಲ. ಸದ್ಯದ ಮಟ್ಟಿಗೆ ಮೋದಿ ಅಲೆಗೆ ಸಡ್ಡು ಹೊಡೆಯುವಂಥ ಪರ್ಯಾಯ ಅಲೆ ಮತ್ತೂಂದಿಲ್ಲ. ಇದರ ನಡುವೆ ತಮ್ಮ ಆಡಳಿತದ ಅಂಕುಶದಲ್ಲಿರುವ ಕೆಲವೇ ಕೆಲವು ರಾಜ್ಯಗಳನ್ನು ಕಾಂಗ್ರೆಸ್‌ ಉಳಿಸಿಕೊಳ್ಳಬೇಕಿದೆ. ಇದೇ ರಾಹುಲ್‌ ಮುಂದಿರುವ ಬಹುದೊಡ್ಡ ಸವಾಲು. 

ಉದ್ಯೋಗಿಯಾಗಿ ಆರಂಭಿಕ ವೃತ್ತಿಜೀವನ
ರಾಯಲ್‌ ಫ್ಯಾಮಿಲಿಯಂಥಾ ಕುಟುಂಬ ಎಂಬ ಮಾತ್ರಕ್ಕೆ ರಾಹುಲ್‌ಗೆ ಲೋಕಾನುಭವ ಇಲ್ಲವೆಂದೇನಿಲ್ಲ. ಎಂ.ಫಿಲ್‌ ಪದವಿ ಪಡೆದ ನಂತರ, ಜೀವನಾನುಭವಕ್ಕಾಗಿ ಒಂದೆರಡು ಕಂಪನಿಗಳಲ್ಲಿ ಉದ್ಯೋಗಿಯಾಗಿ ಸೇವೆಯನ್ನೂ ಸಲ್ಲಿಸಿದ್ದಾರೆ. ಲಂಡನ್‌ನಲ್ಲಿನ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯಾದ ಮಾನಿಟರ್‌ ಗ್ರೂಪ್‌ನಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಅವರು, 2002ರಲ್ಲಿ ಮುಂಬೈ ಮೂಲದ ಬ್ಯಾಕ್ರಾಪ್ಸ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ನಿರ್ದೇಶಕ ಮಂಡಳಿಯ ಸದಸ್ಯರಾಗಿ ನೇಮಕಗೊಂಡರು. 

ಅಮೇಥಿಯಲ್ಲಿ ರಾಜಕೀಯಕ್ಕೆ ಪ್ರವೇಶ
ರಾಜಕೀಯಕ್ಕೆ ಅವರು ಪೂರ್ಣ ಪ್ರಮಾಣದಲ್ಲಿ ಕಾಲಿಸಿದ ವರ್ಷ 2004. ಆ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರು ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸಿ ತಮ್ಮ ಸಮೀಪದ ಅಭ್ಯರ್ಥಿ ಬಿಎಸ್‌ಪಿಯ ಚಂದ್ರ ಪ್ರಕಾಶ್‌ ಮಿಶ್ರಾ ಮತಿಯಾರಿ ವಿರುದ್ಧ 30 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಸಾಧಿಸಿ, ಮೊದಲ ಬಾರಿಗೆ ಸಂಸತ್ತಿಗೆ ಕಾಲಿಟ್ಟರು. ಆನಂತರ, 2004ರ ಮಹಾ ಚುನಾವಣೆ ನಂತರ, ಯುವ ನಾಯಕನೆಂಬ ಇಮೇಜ್‌ ಗಳಿಸಿದ್ದು, 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಟಾರ್‌ ಕ್ಯಾಂಪೇನರ್‌ ಆಗಿ ಗುರುತಿಸಿಕೊಂಡಿದ್ದು ಈಗ ಇತಿಹಾಸ. 

ಒ ಆರ್‌ ಚೇತನ್‌

Trending videos

Back to Top